ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮಾಬಾಯಿ: 79 ವರ್ಷ ವಯಸ್ಸಿನ ಅದಮ್ಯ ಚೈತನ್ಯ!

ಸಕ್ಕರೆ ನಾಡಿನ ಮಕ್ಕಳ ಮನಸ್ಸಿನಲ್ಲಿ ಸುಸ್ವರ ಸಿಹಿ ಹಂಚಿದ ವಿದುಷಿ
Last Updated 30 ಜೂನ್ 2018, 12:39 IST
ಅಕ್ಷರ ಗಾತ್ರ

ಮಂಡ್ಯ: ಅದಮ್ಯ ಉತ್ಸಾಹದ ಚಿಲುಮೆಯಾಗಿರುವ ವಿದುಷಿ ಬಿ.ವಿ.ರಮಾಬಾಯಿ ಅವರು 79 ವರ್ಷ ವಯಸ್ಸಿನಲ್ಲೂ ಸಪ್ತಸ್ವರಗಳಿಗೆ ಜೀವ ತುಂಬುತ್ತಾರೆ. ಕಳೆದ 50 ವರ್ಷಗಳಿಂದ ನಗರದಲ್ಲಿ ಶಾಸ್ತ್ರೀಯ ಸಂಗೀತ ಪಾಠ ಮಾಡುತ್ತಿರುವ ಅವರು ಮಕ್ಕಳ ಪಾಲಿನ ಸಂಗೀತ ಶಾರದೆಯಾಗಿದ್ದಾರೆ.

ಶಾಸ್ತ್ರೀಯ ಸಂಗೀತ ಕಲಿಯಲು ಮೈಸೂರಿಗೆ ತೆರಳಬೇಕಾಗಿದ್ದ ಕಾಲದಲ್ಲಿ ಮಂಡ್ಯದ ಮಕ್ಕಳಿಗೆ, ಸಂಗೀತಪ್ರಿಯರಿಗೆ ಅಪರೂಪದ ಗುರುವೊಬ್ಬರು ಸಿಕ್ಕರು. ಮೈಸೂರಿನಿಂದ ಬಂದು ನಗರದಲ್ಲಿ ನೆಲೆಸಿದ್ದ ರಮಾಬಾಯಿ ಅವರು ತಮ್ಮ ಗಾನಸುಧೆ ಮೂಲಕ ಸಕ್ಕರೆ ನಗರಿಯ ಜನರಲ್ಲಿ ಸ್ವರಾಸಕ್ತಿ ಮೂಡಿಸಿದರು. ದೇವರನಾಮ, ಭಜನೆಯ ಮೂಲಕ ಸುಸ್ವರಗಳ ಸಿಹಿ ತುಂಬಿದರು. 50 ವರ್ಷಗಳಿಂದ ನೂರಾರು ಮಕ್ಕಳಿಗೆ, ಗೃಹಿಣಿಯರಿಗೆ ಸಂಗೀತ ಕಲಿಸಿರುವ ಅವರು ಜೂನಿಯರ್‌, ಸೀನಿಯರ್‌ ಪರೀಕ್ಷೆ ಕಟ್ಟಿಸಿದ್ದಾರೆ. ಸರಳತೆಯ ಸಂಗೀತ ಮೂರುತಿಯಾಗಿರುವ ಅವರು ಮಕ್ಕಳಿಗೆ ಸಂಗೀತದ ಜೊತೆಗೆ ಪ್ರೀತಿಯನ್ನೂ ಕೊಟ್ಟು ಆಶೀರ್ವದಿಸಿದ್ದಾರೆ.

ಮೈಸೂರು ಅರಮನೆಯಲ್ಲಿ ನೌಕರಿಯಲ್ಲಿದ್ದ ಬಿ.ವಿ.ವೆಂಕಟರಾವ್‌ ಮತ್ತು ರಾಧಮ್ಮ ದಂಪತಿಯ ಪುತ್ರಿ ಬಿ.ವಿ.ರಮಾಬಾಯಿ. ಅ.13, 1940ರಂದು ಜನಿಸಿದ ಅವರು ಚಿಕ್ಕಂದಿನಿಂದಲೇ ಸಂಗೀತಾಸಕ್ತಿ ಬೆಳೆಸಿಕೊಂಡಿದ್ದರು. ಮಗಳು ಸಂಗೀತ ಕಲಿಯಬೇಕೆಂಬುದು ತಂದೆಯ ಒತ್ತಾಸೆಯಾಗಿತ್ತು. ಮೈಸೂರು ವಾಸುದೇವಚಾರ್ಯರ ಶಿಷ್ಯರು, ಆಸ್ಥಾನ ವಿದ್ವಾನ್‌ ಆಗಿದ್ದ ಬಿ.ಕೆ.ಪದ್ಮನಾಭರಾಯರ ಬಳಿ 15 ವರ್ಷ ಸಂಗೀತ ಕಲಿತಿರುವ ಅವರು ಗುರುವಿನ ನೆಚ್ಚಿನ ಶಿಷ್ಯೆಯಾಗಿದ್ದರು. ದಿವಂಗತ ವಿದ್ವಾಂಸ ಆರ್‌.ಕೆ.ಶ್ರೀಕಂಠನ್‌ ಅವರ ಪರಿಚಯದ ಮೂಲಕ ಪದ್ಮನಾಭರಾಯರ ಬಳಿ ಸಂಗೀತಾಭ್ಯಾಸ ಮಾಡುವ ಅವಕಾಶ ಪಡೆದರು.

ತಂದೆ ತೀರಿಕೊಂಡ ನಂತರ ಅವರು ಶಾಲಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು. ಪಾಂಡವಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 10 ವರ್ಷ, ಶ್ರೀರಂಗಪಟ್ಟಣ ಸರ್ಕಾರಿ ಶಾಲೆಯಲ್ಲಿ 2 ವರ್ಷ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಖ್ಯಾತ ಶಿಕ್ಷಕರಾಗಿದ್ದ ಬಿ.ಎನ್‌.ವೆಂಕೋಬರಾವ್ ಅವರ ಸಹೋದರಿಯೂ ಆದ ಅವರು ಶಿಕ್ಷಣ ಮತ್ತು ಸಂಗೀತದಲ್ಲಿ ಮೆಚ್ಚುಗೆ ಗಳಿಸಿದ್ದರು. ಸಿ.ಕೆ.ಗೋಪಿನಾಥ್‌ ಅವರ ಕೈ ಹಿಡಿದು ಅವರು ಮಂಡ್ಯಕ್ಕೆ ಬಂದರು. ಮನಸೂರೆಗೊಳ್ಳುವ ಧ್ವನಿ, ಆಳ ಜ್ಞಾನ ಹಾಗೂ ಮಗುವಿನಂತಹ ಮನಸ್ಸಿನಿಂದ ಮಂಡ್ಯ ಜನರ ಮನಸ್ಸಿನಲ್ಲಿ ಮನೆ ಮಾಡಿಕೊಂಡರು.

1983ರಲ್ಲಿ ಪತಿ ತೀರಿಕೊಂಡ ನಂತರ ಬಿ.ಇಡಿ ವ್ಯಾಸಂಗ ಪೂರೈಸಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ 14 ವರ್ಷ ಪ್ರೌಢಶಾಲೆ ಶಿಕ್ಷಕಿಯಾಗಿ ಕೆಲಸ ಮಾಡಿದರು. ಜೊತೆಗೆ ಸಂಗೀತ ಪಾಠವನ್ನೂ ಆರಂಭಿಸಿದರು. ಆರಂಭದಲ್ಲಿ ಜಿಲ್ಲಾ ಕ್ರೀಡಾಂಗಣದ ಬಳಿ ಕೆಲಕಾಲ ಸಂಗೀತ ಹೇಳಿಕೊಡುತ್ತಿದ್ದರು.

ದೇವಾಲಯ ನಿರ್ಮಾಣ:
1998ರಲ್ಲಿ ನಿವೃತ್ತರಾದ ನಂತರ ನಗರದ ಕಾವೇರಿ ನಗರದಲ್ಲಿ ತಮ್ಮ ಸ್ವಂತ ಹಣದಿಂದ ಕೃಷ್ಣ ಆಂಜನೇಯ ಗಣಪತಿ ರಾಯರ ಬೃಂದಾವನ ಪ್ರತಿಷ್ಠಾಪಿಸಿದರು. ದೇವಾಲಯದಲ್ಲೇ ಸಣ್ಣ ಕೊಠಡಿಯೊಂದರಲ್ಲಿ ನೆಲೆಸಿದ್ದ ಅಲ್ಲೇ ಸಂಗೀತ ಪಾಠ ಮಾಡಿದರು. ನಂತರ 2000 ಇಸವಿಯಲ್ಲಿ ಮೋಹನ ಕೃಷ್ಣ ಸಂಗೀತ ಶಾಲೆ ಸ್ಥಾಪಿಸಿ ಸಂಗೀತ ಸೇವೆ ಮುಂದುವರಿಸಿದರು. ಸದ್ಯ ಅಶೋಕ್‌ನಗರ 2ನೇ ಕ್ರಾಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಸಂಗೀತ ಪಾಠ ಮುಂದುವರಿಸಿದ್ದಾರೆ.

ಸದ್ಯ ಅವರ ಬಳಿ 60ಕ್ಕೂ ಹೆಚ್ಚಿನ ಮಕ್ಕಳು ಸಂಗೀತಾಭ್ಯಾಸ ಮಾಡುತ್ತಿದ್ದಾರೆ. 79 ವರ್ಷ ವಯಸ್ಸಾಗಿದ್ದರೂ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಾ ಚೈತನ್ಯದ ಚಿಲುಮೆಯಾಗಿದ್ದಾರೆ. ಮಕ್ಕಳ ಜೊತೆ ಮಕ್ಕಳಾಗಿ ಸಂಗೀತ ಹೇಳಿಕೊಡುವ ಅವರು ಚಿಣ್ಣರ ಮನಸ್ಸಿನಲ್ಲಿ ಪ್ರೇರಕ ಶಕ್ತಿಯಾಗಿದ್ದಾರೆ. ಅವರ ಹಲವು ವಿದ್ಯಾರ್ಥಿಗಳು ಸಂಗೀತ ಶಿಕ್ಷಕರಾಗಿ ಕಾರ್ಯಕ್ರಮ ನೀಡುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT