ಲೋಕೇಶ ಬೆಕ್ಕಳಲೆ
***
ಕ್ಷಮಿಸಿ ಬಿಡು
ಮನುಷ್ಯನಾಗಿ ಹುಟ್ಟಿದಕ್ಕೆ
ಜಾತಿಯ ಅಮಲೇರಿದ
ಮನುಷ್ಯ ಮೃಗಗಳು
ಬೆತ್ತಲೆಗೊಳಿಸಿ ನಿನ್ನ
ದೇಹವ ಮುಕ್ಕುತ್ತಿದ್ದರೆ
ಮನುಷ್ಯನೆಂದು ಹೇಳಿಕೊಳ್ಳಲು
ನಾಚಿಕೆಯಾಗದಕ್ಕೆ
ಕ್ಷಮಿಸಿ ಬಿಡು
ಪುರುಷನಾಗಿ ಜನಿಸಿದಕ್ಕೆ
ಅಂದು ದ್ರೌಪದಿಯ ಆಕ್ರಂದನ
ದ್ವಾರಕಾದ ಕೃಷ್ಣನಿಗೆ ಕೇಳಿಸಿತು
ಇಂದು ನಿನ್ನ ಆರ್ತನಾದ ಇಲ್ಲಿ
ಯಾರಿಗೂ? ಕೇಳಿಸಲೇ ಇಲ್ಲ!
ಕ್ಷಮಿಸಿ ಬಿಡು ನಮ್ಮ
ಕಿವುಡುತನವ! ಕುರುಡುತನವ!
ಮೆರವಣಿಗೆ ಹೊರಟಾಗ
ನಿನ್ನೊಳಗೆ ಮೂಡಿದ
ಭಾವನೆಗಳು ಅದೆಷ್ಟೋ!?
ಅವುಗಳಿಗೆ ದನಿಯಾಗದೆ
ಮೂಕರಾಗಿ ನಿಂತು
ಸಾಕ್ಷಿಯಾಗಿದಕ್ಕೆ
ಕ್ಷಮಿಸಿ ಬಿಡು ನಮ್ಮೊಳಗಿನ
ಅಸಂವೇದನೆಯ
ನಿನ್ನ ದೇಹದ ಮೇಲೆ
ಮೂಡಿದ ಗಾಯದ ಗುರುತು
ಮನುಷ್ಯನೊಳಗಿನ ವಿಕೃತಿಯ
ಹೆಗ್ಗುರುತು ಅಣಕಿಸುತ್ತಿವೆ
ಭಾರತ ಮಾತೆಯ
ಕ್ಷಮಿಸಿ ಬಿಡು ಗಾಂಧಿಯ
ಕನಸು ಕನಸಾಗೇ ಇರುವುದಕ್ಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.