–ನಂದಿನಿ ಹೆದ್ದುರ್ಗ
ನಾನು ಹೀಗೇ ಇರುವವಳು
ಮಾತುಮಾತಿಗೂ ರಚ್ಚೆ
ಎಂತದೋ ಕಿಚ್ಚು
ಹೊರಲೋಕದ ಭರ್ತಿ ಮಾತಾಗುತ್ತವಂತೆ
ಒಣಕಾಷ್ಟ ಒರಟು
ಬರೀ ಕಿರಿಕಿರಿ
ಹೊಂದಿಕೊಂಡದ್ದು ಕಂಡೇ ಇಲ್ಲ
ಪ್ರೀತಿ ವಿಳಾಸ ಗೊತ್ತೂ ಇಲ್ಲ
ಹಿಂದೆ ಬಂದರೆ ಒದೆಯುವ
ಮುಂದೆ ಬಂದರೆ ಹಾಯುವ
ಒರಟು ಜೀವ
ಹೂವ ಮರ ಕಡಿದು ಏಣಿಯಾಗಿಸಿ
ಏರಿದ ಏಣಿ ಒದ್ದು ಬೀಳಿಸಿ...
ಅಂತೆಕಂತೆಗಳು
ಕಿವಿ ತಲುಪಿದಾಗೆಲ್ಲಾ
ನಾನೆಷ್ಟು
ಮೆತ್ತಗಿನ ಜೀವವೆಂದು
ಎಸೆದ ಭರ್ಜಿಗಳಿಗೆ ಎದೆಯೊಡ್ಡಿ
ತೊಗಲಷ್ಟೆ ಕಠಿಣವೆಂದು
ನನ್ನ ತೊಡೆಯ ಮೇಲೆ ನದಿಗಳು
ಹರಿಯುತ್ತವೆಂದು
ನನ್ನ ಬೊಗಸೆಯೊಳಗೆ
ಕವಿತೆ ಪ್ರಸವಿಸುವುದು ನಿಜವೆಂದು
ಹಿಡಿ ಮಣ್ಣುನನಗೆ ದೇವರೆಂದು
ಹಕ್ಕಿ ಚಿಟ್ಟೆ ಮಣ್ಣುಹುಳ
ನನ್ನ ಜೀವದ ಗೆಳೆಯರೆಂದು
ಸಿಕ್ಕ
ನೋವನ್ನು ಮೆತ್ತನೆ ಮಸ್ಲಿನು ಬಟ್ಟೆಯೊಳಗೆ
ಕಟ್ಟಿಟ್ಟಿರುವೆನೆಂದು
ಮೆಜೆಂತ ಕೆಂಪಿನ ಹೂಗಿಡಕ್ಕಾಗಿ
ಊರೂರು ಅಲೆವೆನೆಂದು
ನಾನು ಬಿತ್ತಿದ ಬೀಜ ತನ್ನ ಎಳಸಿಗೆ
ನನ್ನ ಬೆರಳಿನ ನವುರು ಕಡ ಪಡೆಯುತ್ತದೆಂದು
ಹೂವಿಗೆ ನನ್ನ ಒಳ್ಳೆಯತನದಿಂದ
ಪ್ರಭೆ ಕೊಡುವೆನೆಂದು
ಕೂಗಿ ಹೇಳಬೇಕೆನಿಸುತ್ತದೆ
ಮಣ್ಣಿಗಿಳಿಯುತ್ತಿರುವ ಹೂವು
ಈಗಷ್ಟೇ ಕೆಂಪು
ಪಡೆಯುತ್ತಿರುವ ಚಿಗುರೂ
ಹೊಸ ಹಾಡು ಕಲಿತು
ಮುಸುಮುಸು
ಮಾಡುತ್ತಿರುವ ಈ ಹಕ್ಕಿಯೂ
ಬೆಳಕನ್ನೂ ಬಯಕೆಯನ್ನು
ಮಡಿಲಿಗಿಡಲು ಹಾತೊರೆವ ಇವನೂ
ಸಂತೈಸುತ್ತಾರೆ.
ಆ ಹೊತ್ತಿಗೆ ಚುಕ್ಕಿಯೊಂದು ಜಾರಿ
ಹೇಳಬೇಕೆಂದಿದ್ದನ್ನು ಎತ್ತಿ ಅನಂತದಲ್ಲಿ
ಅಡಗಿಕೊಳ್ಳುತ್ತದೆ.
ಏನೋ ಮರೆತ ನಾನು
ಮತ್ತೆ ರಚ್ಚೆ ಹಿಡಿಯುತ್ತೇನೆ
ತುಸು ಹೆಚ್ಚೇ ಸಿಟ್ಟು
ಮಾಡುತ್ತೇನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.