ಲವ್ವು ನವ್ವು ಎರಡೂ ಒಂದೇ ನಾಣ್ಯದ ಎರಡು ಮುಖಗಳು ಅಂತಾರೆ ಅನುಭವಿಸಿದ ಅನುಭಾವಿಗಳು. ಪ್ರೇಮ ಹುಟ್ಟಿದ ಮೇಲೆ ನೋವು ಹುಟ್ಟತೋ, ನೋವು ಹೆಪ್ಪುಗಟ್ಟಿ ಪ್ರೇಮ ಪಲ್ಲವಿಸಿತೋ ಇದೊಂತರಾ ಬೀಜವೃಕ್ಷ ನ್ಯಾಯದಂತೆ. ಭಾಸ್ಕರನಂತೂ ನನ್ನನ್ನು ವಿಪರೀತ ಹಚ್ಚಿಕೊಂಡಿದ್ದಾನೆಂಬ ಗುಮಾನಿ ಇತ್ತೀಚೆಗೆ ಮನವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಎಂತದೋ ಕಳವಳ ಆತಂಕ ಅವ್ಯಕ್ತ ಭಯ ಒಂತರಾ ಟೆನ್ಷನ್. ಇವೆಲ್ಲ ದೇಹ ಮನಸ್ಸು ಹಾಗೂ ದಿನಚರಿಯನ್ನಾವವರಿಸಿಕೊಂಡು ಕಂಗೆಡಿಸಿದರೂ ಅವನ ಒಡನಾಟವನ್ನು ಕಳೆದುಕೊಳ್ಳಲಾರದ ಮನವೇಕೋ ಜಿದ್ದಿಗೆ ಬಿದ್ದಿದೆ. ಅವನು ನನ್ನ ಮೇಲಿಟ್ಟರುವುದು ಅಗಾಧವಾದ ಪ್ರೀತಿಯಲ್ಲದೆ ಮತ್ತೇನು ಅನ್ನಲು ಹಲವು ನಿದರ್ಶನಗಳನ್ನು ಕೊಡಬಲ್ಲೆ. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ವಿಂಗ್ಗೆ ಅವನೇ ಬಾಸ್. ಅವನಿಗೆ ಪ್ರತ್ಯೇಕ ಚೇಂಬರ್ ವ್ಯವಸ್ಥೆ ಇದೆ. ಬಿಗ್ಬಾಸ್ ಅಂತೂ ಅವನು ಹಾಕಿದ ಗೆರೆ ದಾಟನು. ಅಂತಹ ಬ್ರಿಲಿಯಂಟ್ ಅವನು ಅನ್ನುವಷ್ಟು ಗಾಸಿಪ್ ಸಹ ಹಬ್ಬಿದೆ. ಈತ ಹೈದರಾಬಾದ್ನಿಂದ ಪ್ರಮೋಶನ್ ಮೇಲೆ ಇಲ್ಲಿಗೆ ಇಳಿದ ಕನ್ನಡಿಗ.

ಮೊದಲಿದ್ದ ಮುದಿಯ ಮಹಾಕಿರಿಕ್ ಪಾರ್ಟಿ. ಇಂವಾ ಹಾಗಲ್ಲ, ಬೇಕೆಂದಾಗ ತನ್ನ ಚೇಂಬರ್ಗೆ ನಮ್ಮನ್ನು ಕರೆಸಿಕೊಳ್ಳಬಹುದಾದ ಪವರ್ ಇದ್ದರೂ ತುರ್ತುಕೆಲಸಗಳಿದ್ದಾಗ ತಾನೇ ನಾವಿದ್ದಲಿಗೇ ಬಂದು ಡಿಸ್ಕಶನ್ ಮಾಡುವಷ್ಟು, ನಮ್ಮ ತಪ್ಪನ್ನು ತಿದ್ದಿ ಸರಿಪಡಿಸುವಷ್ಟು ಉದಾರಿ.

ಸಿಡುಕುವುದು ಮೇಲಿರಿಮೆ ತೋರೋದು ನಿಕೃಷ್ಟವಾಗಿ ಕಾಣುವಂತಹ ‘ನಕರಾ’ಗಳನ್ನು ಮಾಡದ ಜಂಟಲ್ಮೆನ್. ಇದು ನನ್ನ ಅಭಿಪ್ರಾಯ ಮಾತ್ರವಲ್ಲ, ನಮ್ಮ ವಿಂಗ್ನಲ್ಲಿ ದುಡಿವ ಮೂವತ್ತು ಮಂದಿಯದ್ದೂ ಸಹ. ನನ್ನೊಂದಿಗೆ ಕೆಲಸ ಮಾಡುವ ಹುಡುಗಿಯರೆಲ್ಲಾ ಅವನಿಗಾಗಿ ಸಾಯುತ್ತಾರೆಂಬ ಡೌಟು ನಂಗುಂಟು. ಅಷ್ಟೆ ಏಕೆ ನಮ್ಮ ವಿಂಗ್ನಲ್ಲಿರೋ ಸೀನಿಯರ್, ವಿವಾಹಿತೆ, ಎರಡು ಮಕ್ಕಳ ತಾಯಿ ರಶ್ಮಿಯು ಅವನೊಡನೆ ಎಷ್ಟು ಕ್ಲೋಸ್ ಆಗಿ ವರ್ತಿಸುತ್ತಾಳೆಂದರೆ ಅವರಿಬ್ಬರ ನಡುವೆ ಅಫೇರ್ ಇದೆಯೆಂಬ ಗಾಸಿಪ್ ಕೂಡ ಉಂಟು. ನಾನದನ್ನು ನಂಬುವುದಿಲ್ಲ. ಏಕೆಂದರೆ ಅವನು ನನ್ನನ್ನು ಬರಿ ಪ್ರೀತಿಸುತ್ತಿಲ್ಲ ಆರಾಧಿಸುತ್ತಾನೆಂಬ ಗಾಢ ಸುವಾಸನೆ ಅವನ ದೇಹದ ತುಂಬಾ ವ್ಯಾಪಿಸಿದೆಯೆಂಬ ಖಾತರಿ ನನಗಿದೆ. ಆದರೂ ಯಾರ ಕಾಕದೃಷ್ಟಿಯೂ ನಮ್ಮ ಮೇಲೆ ಬಿದ್ದಿಲ್ಲದಿರುವುದು ದೇವರ ದಯೆ ಅಂದುಕೊಳ್ಳುತ್ತೇನೆ.

ಪೇಪರ್ಸ್ ಸಿಗ್ನೇಚರ್ಗೆಂದು ಅವನ ಚೇಂಬರ್ಗೆ ಹೋದಾಗ ನನ್ನ ಮುಖ ಒಂದಿಷ್ಟು ಬಾಡಿದ್ದರೂ ತಟ್ಟನೆ ಗುರುತಿಸುವಷ್ಟು ಸೆನ್ಸಿಟಿವ್. ‘ಏಕೆ ಲಾವಣ್ಯ ಹುಷಾರಿಲ್ವೇನ್ರಿ?’ ಅಂತ ನನ್ನ ಮೈ ಮುಖದ ತುಂಬಾ ಕಣ್ಣಾಡಿಸಿ ಬಿಡುತ್ತಾನೆ. ‘ಇಲ್ಲಪ್ಪಾ ... ನನಗೇನಾಗಿದೆ. ಐ ಆಮ್ ಫೈನ್ ಅಂದರೂ ಅಷ್ಟಕ್ಕೇ ಬಿಡದವನು ಮಾರಾಯ. ‘ಮನೆಯಲ್ಲಿ ಎಲ್ಲರೂ ಆರಾಮ್ ತಾನೆ ಎಂದು ಪಿರಿಪಿರಿ ಮಾಡುವ ಅವನ ಕಾಳಜಿ ಅನೇಕ ಸಲ ನನ್ನಲ್ಲಿ ಮುಜಗರವನ್ನುಂಟು ಮಾಡಿದೆ.

ಈ ಕಾರಣವಾಗಿ ಮನೆಯಲ್ಲೇನೆ ಮನಸ್ತಾಪಗಳಾದರೂ, ಭಿನ್ನಾಭಿಪ್ರಾಯಗಳಿದ್ದರೂ ಚೇಂಬರ್ಗೆ ಎಂಟ್ರಿ ಆದೊಡನೆ, ದೇಹದಲ್ಲಿ ಲವಲವಿಕೆ ತುಟಿಗಳ ಮೇಲೆ ನಗೆ ಬರೆಸಿ ಕೊಳ್ಳುವುದುಂಟು. ಅವನು ಅನೇಕ ಸಲ ‘ಯು ಆರ್ ಗುಡ್ ಲುಕ್ಕಿಂಗ್ ಟುಡೇ’ ಅಂದಾಗ ಮೈ ಉರಿದರೂ ತೋರಗೊಡದೆ ‘ನನ್ನ ಲುಕ್ ತಗೊಂಡು ನೀವೇನ್ ಮಾಡೀರಾ ಬಿಡಿಸರ್, ಪೇಪರ್ಸ್ ಸರಿಯಾಗಿದೆಯೆ ಒಮ್ಮೆ ನೋಡಿರತ್ತ’ ಅಂತ ಟಾಂಟ್ಕೊಡುತ್ತೇನೆ. “ನೊನೊನೊ... ನಿಮ್ಮ ವರ್ಕ್ಸ್ ನಿಮ್ಮ ಹಾಗೆ ನೀಟ್ ಅಂಡ್ ಫೈನ್ ಬಿಡಿ” ಎಂದು ಓಲೈಸುತ್ತಾನೆ. ನಾನಿನ್ನೇನು ಹರ್ಟ್ ಆಗಿ ಸಿಡುಕಲು ಮುಂದಾದಾಗಲೇ ಸಾರಿ ಲಾವಣ್ಯ. ಪಾಪ ನೀವೆಲ್ಲಾ ಸ್ಟಾಫ್ನವರು ದಿನವೆಲ್ಲಾ ಕಂಪ್ಯೂಟರ್ ಮುಂದೆ ಕೂತು ಅದರಲ್ಲೇ ಕಣ್ಣು, ಮನಸ್ಸು ನೆಟ್ಟು, ಎಸಿಹಾಲ್ನಲ್ಲೂ ಬ್ರೇನ್ ಬಿಸಿ ಮಾಡ್ಕೊಂಡು ಇರ್ತಿರಾ ಅಲ್ವಾ? ಅಂತಹ ನಿಮ್ಮಗಳನ್ನು ಒಂಚೂರು ಖುಷಿಪಡಿಸಲು ಹಾಗೂ ಎನ್ಕರೇಜ್ ಪಾಯಿಂಟ್ ಆಫ್ ವ್ಯೂ ಆಲ್ಸೋ ನಗನಗ್ತಾ ನಾಲ್ಕು ಒಳ್ಳೆಯ ಮಾತಾಡ್ತೀನಷ್ಟೆ. ಅದರ ಹಿಂದೆ ನಿಮ್ಮಿಂದ ಹೆಚ್ಚಿನ ಕೆಲಸ ಪಡೆಯಬಹುದೆಂಬ ಸೆಲ್ಫಿಶ್ ನಾನು. ಡೋಂಟ್ಮಿಸ್ಟೇಕ್ಮಿ ಪ್ಲೀಸ್’ ಅಂದು ತಿಪ್ಪೆ ಸಾರಿಸಿ ಬಿಡುತ್ತಾನೆ. ಬಂದ ಕೋಪವೆಲ್ಲಾ ಕರಗಿ ಒಂತರಾ ನಿರುತ್ಸಾಹ, ನಿರಾಶೆ ಆವರಿಸಿಕೊಳ್ಳುತ್ತದೆ.

ಗುರುತಿಸಿ ಬಿಡುತ್ತಾನೆ ಮಾರಾಯ. ‘ವಾಟ್ ಹ್ಯಾಪನ್... ಡಲ್ ಆಗಿಬಿಟ್ರಿ? ನಾನು ಇನ್ನು ಮೇಲೆ ಮಾತೇ ಆಡೋದಿಲ್ಲ ಬಿಡಿ... ಓಕೆನಾ ?’ ಎಂದವನು ತನ್ನ ಕೈ ಬೆರಳುಗಳಿಂದ ಎರಡೂ ಕಿವಿಗಳನ್ನು ಹಿಡಿದು ಕ್ಷಮೆಯ ನಾಟಕವಾಡುವಾಗ ನನಗೇ ಅರಿವಿಲ್ಲದ ನಗೆ ಮೂಡಿತೇನೋ. ‘ಓಹ್! ಸಿಂಪ್ಲಿ ಬ್ಯೂಟಿಪುಲ್... ಹೀಗೆ ನಗ್ನಗ್ತಾ ಇರಬೇಕೂರಿ... ದಟ್ಸ ಐ ವಾಂಟ್’ ಜೊತೆಗೂಡಿ ಅವನೂ ನಗುವಾಗ ನಾನೇಕೆ ಅವನ ಹುಚ್ಚಾಟಕ್ಕೆ ನಕ್ಕೆನಪ್ಪಾ ಎಂದು ಖಿನ್ನಳಾಗುವೆ.

ಅವನ ಪ್ರಶಂಸೆ ನನ್ನ ಬಿಗುಮಾನ, ಅದಕ್ಕವನ ಸಮಜಾಯಿಷಿ ನಂತರ ಚಿಮ್ಮುವ ಸಂತಸದ ಕ್ಷಣಗಳು ದಿನಗಳೆದಂತೆ ಖಿನ್ನತೆಯನ್ನುಂಟು ಮಾಡುತ್ತವೆ, ಇವನು ನನ್ನೊಡನೆ ಮಾತ್ರ ಹೀಗೇನಾ? ಎಲ್ಲರೊಡನೆ ಫ್ಲರ್ಟ್ ಮಾಡುತ್ತಾನಾ” ಇದೇ ಇವನ ಸ್ಟೈಲಾ? ಇಂಥವನ ಬಲೆಗೆ ಬೀಳಬಾರದೆಂದು ಒಳಗೇ ಸ್ಟ್ರಾಂಗ್ ಆಗುತ್ತೇನೆ. ಅವನ ಚೇಂಬರ್ಗೆ ಲೀಲಾ, ಮಾಲಾ, ಅದರಲ್ಲೂ ಮಿಡ್ಲ್ಏಜ್ಡ್ ವುಮನ್ ರಶ್ಮಿ ಹೋದಾಗಲಂತೂ ಅಬ್ಬರದ ನಗೆಯೋ ನಗೆ. ನನ್ನ ಹೊಟ್ಟೆಯಲ್ಲಿ ಕತ್ತರಿ ಆಡಿಸಿದಷ್ಟೂ ಯಾತನೆ. ಬೇಗ ಹೊರಬಂದರೆ ನಿಟ್ಟುಸಿರು ಬಿಡುವ ನಾನು, ನಾನೇಕೆ ಹೀಗಾದೆ ಎಂದು ಚಿಂತೆಗೆ ಬೀಳುತ್ತೇನೆ. ಅವರ ನಗು ಕೇಳುತ್ತಿದ್ದರೆ ಕೀ ಬೋರ್ಡ್ ಮೇಲೆ ಬೆರಳುಗಳೇ ಆಡವು! ಮೈಯೆಲ್ಲಾ ಬಿಸಿ. ಅಸೂಯೆ ಕೂಡ ಬೆಂಕಿ ಇದ್ದಂತೆ ಅಂತ ಎಲ್ಲೋ ಕೇಳಿದ್ದೀಗ ಸ್ವಾನುಭವ. ಜವಾರಿ ಭಾಷೆಯಲ್ಲಿ ಹೇಳೊದಾದ್ರೆ ಹೊಟ್ಟೆಕಿಚ್ಚು. ಇಂತಹ ಕಿಚ್ಚು ಹಚ್ಚಿದ ಅವನಿಂದ ಮಾತ್ರವೆ ತಣ್ಣಗೆ ಮಾಡಲು ಸಾಧ್ಯ. ಒಂದು ದಿನ ಮಂದಹಾಸ ಮತ್ತೊಂದು ದಿನ ಮಂಕು ಮಗದೊಂದು ದಿನ ಕೊಂಕು. ದಿನಗಳೀಗ ಹೊಸ ಹೊಳಪು ಉತ್ಸಾಹ ಉನ್ಮಾದಗಳ ಗರಿಗೆದರಿಕೊಳ್ಳುತ್ತವೆ. ನಾನಂತೂ ಅವನ ಕೈನಲ್ಲಿನ ಮೌಸ್. ಯೌವನ ನನ್ನಿಂದ ಹಿಂದೆ ಸರಿಯುತ್ತಿದೆಯಾದರೂ ನವಯುವತಿಯಂತಾಡುತ್ತಿದ್ದೇನಲ್ಲವೆಂಬ ಅಪರಾಧಿಭಾವ ದುರ್ಬಲಗೊಳಿಸಿಬಿಡುತ್ತದೆ.

ಮರೆಯದೆ ತುಟಿಗಳಲ್ಲಿ ನಗು ತುಳುಕಿಸುತ್ತಲೇ ಅವನ ಚೇಂಬರ್ಗೆ ಅಡಿಯಿಡುತ್ತೇನೆ. ಮೌನವಾಗಿ ನನ್ನನ್ನು ಅವಲೋಕಿಸಿ ಪೇಪರ್ಗಳಿಗೆ ಚಕಚಕನೆ ಸಹಿ ಮಾಡುತ್ತಾನೆ. ಫೈಲ್ ಎತ್ತಿಕೊಂಡು ಹೊರಡುವೆ. ‘ಒಂದ್ನಿಮಿಷ...’ ಎಂದು ತಡೆಯುತ್ತಾನೆ. ಸಂಕೋಚದಿಂದ ಹಿಡಿಯಷ್ಟಾಗುತ್ತೇನೆ. ‘ಆರ್ ಯು ಆಲ್ರೈಟ್?’ ಕಣ್ಣಲ್ಲಿ ಕಣ್ಣಿಡುತ್ತಾನೆ. ‘ನನಗೇನಾಗಿದೆ ಸಾರ್, ಐ ಆಮ್ ಆಲ್ರೈಟ್’ ಸಿಡುಕುತ್ತೇನೆ. ಅವನು ಚೇರ್ ಬಿಟ್ಟೆದ್ದು ಬಳಿ ಬರುತ್ತಾನೆ. ಎಲ್ಲಿಯ ಗ್ರಹಚಾರವಪ್ಪಾ ಎಂದು ತಟ್ಟನೆ ಮೈ ತುಂಬಾ ಸೆರಗುಹೊದ್ದು ‘ಸ್ವಲ್ಪ ಹೆಡ್ಏಕ್ ಅಷ್ಟೆ’ ಅಂತ ಗೊಣಗುತ್ತೇನೆ. ‘ನೋಡಿದ್ರಾ, ನನ್ನ ಗೆಸ್ಸು ಯಾವತ್ತೂ ಮಿಸ್ ಹೊಡೆಯೋದಿಲ್ಲಾರೀ ... ಇಲ್ಲಿ ಹೆವಿಡ್ಯೂಟಿ ಅಲ್ವಾ?’ ಸಂತೈಸುತ್ತಾನೆ. ನಾನು ಮೌನಿಯಾಗುವೆ. ‘ಪಾಪ, ನೀವು ಹೆಣ್ಣುಮಕ್ಳು ಮನೇಲೂ ದುಡಿಬೇಕು, ಹೊರಗೂ ದುಡಿಬೇಕು. ಐ ಕೆನ್ ಅಂಡರ್ಸ್ಟಾಂಡ್ ದಿ ಫ್ಯಾಮಿಲಿ ಸಿಚುಯೇಶನ್ಸ್’ ಎಂದವನೇ ಡ್ರಾ ಎಳೆದು ಅಮೃತಾಂಜನದ ಡಬ್ಬಿ ತೆಗೆದಿಡುತ್ತಾನೆ. ಎಲ್ಲಿ ತಾನೇ ಮೆತ್ತಿಬಿಡುತ್ತಾನೋ ಎಂಬ ಭಯದಲ್ಲಿ, ‘ಇದೆಲ್ಲಾ ಏಕೆ ಸಾರ್, ಒಂದು ಡೋಸ್ ಕಾಫಿ ಬಿದ್ದರೆ ತಾನಾಗಿಯೇ ಸರಿ ಹೋಗುತ್ತೆ ಬಿಡಿ ಅನ್ನುವೆ. ‘ತರಿಸೋಣ ಬಿಡ್ರಿ, ಮೊದಲು ಕುತ್ಕೊಳಿ...ಪ್ಲೀಸ್. ಇದನ್ನ ತಗೊಂಡು ಹಚ್ಕೊಳಿ’ ಡಬ್ಬಿ ಹಿಡಿಯುತ್ತಾನೆ. ಅನ್ಯ ಮನಸ್ಕಳಾಗಿ ಲೇಪಿಸಿಕೊಳ್ಳುತ್ತೇನೆ. ‘ನೊನೊನೊ... ಹಾಗಲ್ಲಾರೀ...’ ಎಂದು ಬಂದು ತಾನೇ ಹಣೆಯ ಮೇಲೆ ಸವರಿ ಮಸಾಜ್ ಮಾಡುವಾಗ ಅವನ ಕೈ ಹಿಡಿದು ಬಿಸಾಡುತ್ತೇನೆ. ‘ಇಟ್ ಈಸ್ ಟೂ ಮಚ್ ಸಾರ್... ಐ ಕಾಂಟ್’ ಒರಟಾಗಿ ಅಂದು ಬಿಡುತ್ತೇನೆ. ‘ಸಾರಿರೀ’ ಎಂದು ಹಿಂದೆ ಸರಿದು ತಲೆ ತಗ್ಗಿಸಿ ಬಿಡುತ್ತಾನೆ. ‘ದಿನಾ ಹೀಗೆ ಎಷ್ಟು ಜನಕ್ಕೆ ಮಸಾಜ್ ಮಾಡ್ತಿರಾ? ಗಂಡಸರ ಬುದ್ಧಿ ನಂಗೊತ್ತಿಲ್ವಾ?’ ನನಗೇ ತಿಳಿಯದೆ ನನ್ನಲ್ಲಿದ್ದ ಅಸೂಯೆ ಹೆಡೆ ಎತ್ತಿರುತ್ತದೆ. ತಲೆ ಎತ್ತದ ಅವನು, ‘ನನ್ನನ್ನು ಅಷ್ಟೊಂದು ಚೀಪ್ ಆಗಿ ತಿಳಿಬೇಡಿ ಲಾವಣ್ಯ.....’ ಎಂದು ತನ್ನೊಡನೆ ತಾನೇ ಮಾತನಾಡಿಕೊಂಡಂತೆ ಪಿಸುಗುವಾಗ ಕಮರಿಯಲ್ಲಿ ಬಿದ್ದವರ ಸ್ವರದಂತೆ ಕ್ಷೀಣಿಸಿರುತ್ತದೆ. ಮೌನವಾಗಿ ಡಬ್ಬಿ ಬಿಸಾಡಿ ಹೊರ ಬಂದು ಬಿಡುತ್ತೇನೆ.

ಕ್ಯಾಂಟಿನ್ಗೆ ಊಟಕ್ಕೆ ಬಂದಾಗ ಅವನ ಮೋರೆ ಒಣಗಿದ ಸಿಪ್ಪೆಯಂತಿರುತ್ತದೆ. ‘ಯಾಕೆ ಸಾರ್ ಹೀಗಿದ್ದೀರಿ?’ ರಶ್ಮಿ ಅವನ ಟೇಬಲ್ಗೇ ಹೋಗಿ ಮಸ್ಕಾ ಹೊಡೆಯುತ್ತಾಳೆ. ಅವಳಿಗಂತೂ ನಾಚಿಗೆಯೆಲ್ಲಾ ಊರಿಂದಾಚ್ಗೆ. ಉಳಿದವರೂ ವಿನಾಕಾರಣ ನಗುತ್ತಾರೆ. ಅವನೇನಂದನೋ ಕೇಳಿಸುವುದಿಲ್ಲ. ಕುಣಿಯುತ್ತಾ ಹೋದವಳು ಹ್ಯಾಪ್ ಮೋರೆ ಹಾಕಿ ಬರುತ್ತಾಳೆ. ನನ್ನ ಮೇಲಿನ ಕೋಪ ಅವಳ ಮೇಲೆ ತೀರಿಸಿಕೊಂಡಿರಬಹುದೆ ಎಂದು ಅಂದಾಜಿಸಿ ಒಳಗೇ ಅರಳುತ್ತೇನೆ. ಅದೇನೆ ಇರಲಿ ಅವನು ತನ್ನ ಸ್ಟಾಫ್ನವರೊಡನೆ ಎಷ್ಟೇ ಸಲಿಗೆಯಿಂದಿದ್ದರೂ ಕೆಲಸ ತೆಗೆದುಕೊಳ್ಳುವಲ್ಲಿ ನಿರ್ದಾಕ್ಷಣ್ಯ ಅಂತೆಯೇ ಡಿಸ್ಟೆನ್ಸ್ ಕಾಪಾಡಿಕೊಂಡವ. ಅವನು ಅದೆಷ್ಟೇ ಸಲಿಗೆಯಿಂದಿದ್ದರೂ ಯಾರೂ ಅವನ ಟೇಬಲ್ಗೆ ಹೋಗಿ ಕೂರುವಷ್ಟು ಸದರ ತೋರಿದವನಲ್ಲಿವೆಂದು ಆಲೋಚಿಸುವಾಗ ಅದೇಕೋ ಮನಸ್ಸೆಂಬ ಮೊಗ್ಗು ಅರಳಿದ ಭಾವ. ಅವನೊಬ್ಬ ‘ಬಿಂದಾಸ್’ ಎಂಬ ತೀರ್ಮಾನಕ್ಕೆ ಬರುತ್ತೇನೆ.

ಮರುದಿನ ಸಿಗ್ನೇಚರ್ಗೆಂದು ಚೇಂಬರ್ಗೆ ಹೋದರೆ ಒಂದೆರಡು ದಿನ ನನ್ನತ್ತ ಅವನ ನೋಟವು ಇಲ್ಲ. ಮಾತೂ ಇಲ್ಲ. ಅವನನ್ನು ಸೋಲಿಸಿದೆನೆಂಬ ಅಹಂಭಾವ ಮೂಡಿದರೂ ಸೋಲಿಸಿದೆನೋ, ಸೋತೆನೋ ಎಂಬ ಕೀಟ ತಲೆಯನ್ನು ಕೊರೆವಾಗ ಮನೆಯಲ್ಲಿನ ಅಮೃತಾಂಜನದ ಫುಲ್ಬಾಟಲ್ ಖಾಲಿಯಾದರೂ ತಲೆನೋವು ಮಾತ್ರ ಮುಷ್ಕರ ಹೂಡುತ್ತದೆ. ಅವನು ಇನ್ನೂ ಎರಡು ದಿನ ಮಾತನಾಡಿಸದೆ ಮೊದಲಿನಂತೆ ಚಾಟ್ ಮಾಡದೆ ಕಾಡಿಸಿದರೆ ನನ್ನ ತಲೆ ಸಿಡಿದು ಸಹಸ್ರ ಹೋಳಾದೀತೆಂಬ ಭಯ ಕಾಡುತ್ತದೆ. ಅವನೇನೋ ನನ್ನನ್ನು ಕರೆಸಿಕೊಳ್ಳದೆ ಪೀವನ್ನಿಂದ ಪೇಪರ್ ಚೇಂಬರ್ಗೆ ತರಸಿಕೊಂಡು ಸಹಿ ಹಾಕಿ ಕಳುಹಿಸುವಾಗ ಡಿಪ್ರೆಶನ್ಗೆ ಒಳಗಾಗುತ್ತೇನೆ. ಒಮ್ಮೆ ಎಲ್ಲರ ಟೇಬಲ್ಗೆ ಬಂದು ಚೆಕ್ ಮಾಡಿದರೂ ನನ್ನತ್ತ ತಿರುಗಿಯೂ ನೋಡನು. ‘ನಮ್ಮ ಸರ್ಗೆ ಒಂದಿಷ್ಟೂ ಈಗೋ ಇಲ್ಲ್ರ. ಇಂತಹ ಬಾಸ್ ಸಿಕ್ಕಿದ್ದು ನಮ್ಮ ಪುಣ್ಯ ಅಲ್ವೇನ್ರೆ?’ ರಶ್ಮಿಯಂತೂ ಅವನಿಗೆ ಕೇಳಲೆಂದೇ ದನಿ ಏರಿಸಿ ಪ್ರಶಂಸಿಸಿ ಕುಲುಕುಲು ನಗುವಾಗ ಉಗಿಯಬೇಕೆನಿಸುತ್ತದೆ. ಅವಳತ್ತ ತಿರುಗಿಯೂ ನೋಡದೆ ಅವನು ದುರ್ರನೆ ನಡೆದುಹೋದಾಗ ಅದೇಕೋ ಮಾತಿಗೆ ಸಿಲುಕದ ನೆಮ್ಮದಿಯಪ್ಪ. ಮನೆಯಲ್ಲಿ ಸಿಗದ ನೆಮ್ಮದಿ, ಒಂಚೂರು ಹಿಗ್ಗು ಅದೇನೋ ಕಂಪನಿಗೆ ಬಂದಾಗ ಅವನಿಂದ ಆಗಾಗ ‘ಕಡ’ ಪಡೆದು ಜಡವಾಗಿದ್ದ ದೇಹದಲ್ಲಿ ಇಂಧನದಂತೆ ತುಂಬಿಸಿಕೊಂಡು ಚಾರ್ಜ್ ಆಗುತ್ತಿದ್ದ ನಾನೀಗ ಚಾರ್ಜ್ಗಿಡದ ಮೊಬೈಲ್. ದಿನಗಳು ಯುಗಗಳ ಲೆಕ್ಕದಲ್ಲಿ ಉರುಳುತ್ತವೆ. ಅವನೊಡನೆ ಮಾತನಾಡದಿದ್ದರೆ ಅಥವಾ ಅವನೇ ಮಾತನಾಡಿಸದೆ ಕಡೆಗಣಿಸಿದರೆ ನಾನು ನಾನಾಗಿರುವುದಿಲ್ಲವೆಂಬ ಟೆನ್ಶನ್ಗೆ ಈಡಾಗುತ್ತೇನೆ. ಮನೆಯಲ್ಲಿ ನಾನು ಜ್ವರ ಬಂದು ನರಳುತ್ತಾ ಬಿದ್ದಿದ್ದರೂ ಕೇಳುವವರಿಲ್ಲ. ಅವರವರ ಕೆಲಸ ಅವರಿಗೆ. ಕೇಳಿದರೂ ತಾತ್ಸಾರಭಾವ. ಅಂಥದ್ದರಲ್ಲಿ ನನ್ನ ಬಗ್ಗೆ ಬೆಟ್ಟದಷ್ಟು ಕಾಳಜಿ ತೋರುತ್ತಿದ್ದ ಅವನನ್ನು ಕಡೆಗಣಿಸಿದ್ದು ಸರಿಯಲ್ಲವೇನೋ ಎಂಬ ತೀರ್ಮಾನಕ್ಕೆ ಬಂದಾಗ ಎದೆಬಡಿತ ಕಂಟ್ರೋಲ್ ತಪ್ಪುತ್ತದೆ.

ಹೃದಯಘಾತದಿಂದ ತಪ್ಪಿಸಿಕೊಳ್ಳಬೇಕೆಂಬ ಗಾಬರಿಯಲ್ಲಿ ನಾನೇ ಫೈಲ್ ಎತ್ತಿಕೊಂಡು ಕರೆಯದಿದ್ದರೂ ಬಳಿ ಹೋಗುತ್ತೇನೆ. ‘ಸಾರ್ ಇವು ನೋಡಿ ಇಂಪಾರ್ಟೆಂಟ್ ಫೈಲ್ಸ್ ಒಮ್ಮೆ ಚೆಕ್ ಮಾಡ್ತೀರಾ?’ ಎಂದವನ ಎದುರು ನಿಂತು ದೇವರ ಮುಂದೆ ನಿಂತ ಭಕ್ತಳಾಗುತ್ತೇನೆ. ‘ಹುಂ.... ಅಲ್ಲಿಟ್ಟು ಹೋಗಿ,’ ಅನ್ನತ್ತಾನೆ ತಲೆ ಎತ್ತದೆ. ನಾನೆಲ್ಲಿ ಕುಸಿದುಬಿಡುವೆನೋ ಎಂದು ಟೇಬಲ್ ಆಸರೆಗೆ ಹಿಡಿದು ಉಗುಳು ನುಂಗುತ್ತೇನೆ. ಕತ್ತಿನ ನರಗಳು ಉಬ್ಬುತ್ತವೆ. ಮಾತುಗಳು ಉಗ್ಗುತ್ತವೆ. ‘ಸ...ಸ... ಸಾರಿ ಸರ್’ ಅನ್ನುತ್ತೇನೆ. ‘ವೈವೈವೈ? ಏಕೆ ಸಾರಿ ಕೇಳ್ತಿದ್ದೀರಿ? ತಲೆಎತ್ತದೆ ಫೈಲ್ ಮೇಲೆ ಕಣ್ಣಾಡಿಸುತ್ತಾನೆ. ‘ನೀವು...ನೀವು ಮೊದಲಿನಂತೆ ನನ್ನ ಜೊತೆ...’ ಗದ್ಗದಿತಳಾಗಿ ಮಾತನ್ನು ತುಂಡರಿಸುತ್ತೇನೆ. ತಲೆ ಎತ್ತಿ ಸಣ್ಣಗೆ ಮುಗುಳ್ನಗುವ. ಕಳೆದುಕೊಂಡ ಅಮೂಲ್ಯ ನಿಧಿ ಸಿಕ್ಕ ಭಾವ ನರನರಗಳಲ್ಲಿ ಚಿಗುರೊಡದಂತೆ ಭಾಸ. ‘ಓಕೆ.....ನನ್ನ ಜೊತೆ ಮಧ್ಯಾಹ್ನ ಲಂಚ್ಗೆ ಬರ್ತಿರಾ? ನನಗೂ ಬೇಸರವಾಗಿದೆ ಕಣ್ರಿ. ಹೊರಗಡೆ ಹೋಗೋಣ್ವೆ?’ ಅವನ ಬಿಂದಾಸ್ ಮೋರೆಯಲ್ಲೂ ವಿಷಾದದ ನಗೆ ಮೂಡಿದೆ. ಸಂದಿಗ್ಧತೆಗೆ ಸಿಲುಕುವೆ. ‘ ಆಫೀಸ್ ಟೈಮ್ಗೆ ಸರಿಯಾಗಿ ಬಂದು ಬಿಡೋಣಾರೀ. ನಾನೂ ಯಾವತ್ತೂ ರೂಲ್ಸ್ ಉಲ್ಲಂಘಿಸುವನಲ್ಲ... ಗೊತ್ತಲ್ಲ ನಿಮಗೆ’ ಅವನ ಮಾತಿನಲ್ಲೀಗ ಗಂಭೀರತೆ. ಯಾರೇನೆಂದುಕೊಳ್ಳುವರೋ ಎಂಬ ಎದೆಗುದಿಯಲ್ಲೂ ನಿರಾಕರಿಸುವ ಶಕ್ತಿ ಉಡುಗಿ ತಲೆಯಾಡಿಸುವೆ.

ಮಧ್ಯಾಹ್ನ ಬ್ಯಾಗ್ ಹೆಗಲಿಗೇರಿಸಿ ಹೊರಟಾಗ ಎಲ್ಲರ ಚಿತ್ತ ನನ್ನತ್ತ. ‘ಯುಸೀ ಇಲ್ಲೆ ಹತ್ತಿರದಲ್ಲೇ ನನ್ನ ಫ್ರೆಂಡ್ಮನೆ ಇದೆ. ಮಗಳ ನಾಮಕರಣವಂತೆ. ಹೋಗಿ ಬರ್ತೆನೆ’ ಎಂದ ಗೊಣಗಿದವಳೆ ಯಾರ ಉತ್ತರಕ್ಕೂ ಕಾಯದೆ ಈಚೆ ಬಂದು ಮೆಟ್ಟಲುಗಳನ್ನಿಳಿಯುತ್ತೇನೆ. ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿರುವ ಭಾಸ್ಕರ್ ಕಾಣುತ್ತಾನೆ. ಮುಜುಗರದಲ್ಲೂ ಸೀರೆಯ ನೆರಿಗೆಗಳು ಚಿಮ್ಮುತ್ತವೆ. ನನಗೋ ಫೈವ್ಸ್ಟಾರ್ ಹೋಟೆಲ್ನ ಮೊದಲ ಎಂಟ್ರಿ! ಊಟ ನೋಟ ಅಂಜಿಕೆಗಳ ನಡುವೆಯೂ ಮನದಲ್ಲಿ ಜಿಗಿತ! ‘ಏನಾದ್ರೂ ಮಾತಾಡಿ ಲಾವಣ್ಯ... ಬೋರ್ ಹೊಡಿಸ್ಬೇಡಿ’ ಮಾತಿಗಿಳಿಯುತ್ತಾನೆ ಭಾಸ್ಕರ್. ‘ಕಣ್ಣುಗಳ ಭಾಷೆ ನಿಮಗೆ ತಿಳಿಯದೆ... ಮಾತೇ ಬೇಕೆ?’ ಅನ್ನತ್ತಾ ಮುಗುಳ್ನಗುವೆ. ಮನವೋ ಗರಿಗೆದರಿದ ನವಿಲು. ‘ಓಹ್ ಐ ಸೀ...’ ಅಂದವನೆ ನನ್ನ ಕಣ್ಣುಗಳ ಆಳಕ್ಕಿಳಿಯುತ್ತಾನೆ. ‘ಕಣ್ಣುಗಳಲ್ಲಿ ಪ್ರೀತಿ ತುಂಬಿ ತುಳುಕುತ್ತಿದೆ... ಆಮ್ ಐ ಕರೆಕ್ಟ್?’ ನಗುತ್ತಾನೆ. ಅವಳು ನಗದೆ ಅವನ ನಗೆಗೆ ನಗು ಬೆರಸುತ್ತಾಳೆ. ‘ರೀಯಲಿ, ಐ ಆಮ್ ಲಕಿ’ ಅವನ ಪಕ್ಕೆಗಳಲ್ಲೀಗ ರೆಕ್ಕೆ ಮೂಡುತ್ತವೆ. ‘ಊಟ ಹಿಡಿಸಿತಾ ನಿಮಗೆ?’ ಕೇಳುವನು. ‘ಸ್ಟಾರ್ ಹೋಟೆಲ್ ಬೇರೆ, ಎದುರಿನಲ್ಲಿ ಸ್ಟಾರ್ ಕೂಡ ಇರೋವಾಗ’ ಮೋಹಕನಗೆ ಚೆಲ್ಲಿದೆನೇನೋ. ಅವನದೇಕೋ ನಾಚಿ ನೀರಾದ. ಹೀಗೆ ಜೊತೆಗೂಡುವ ಅವಕಾಶಗಳು ತಿಂಗಳಲ್ಲೊಮ್ಮೆ ಅಗೀಗ ಸಿಗುತ್ತವೆ. ‘ನಾವಿಬ್ಬರೂ ಪೇಮಿಸುತ್ತೇವಾ?’ ಎಂದವನು ಅಂಜುತ್ತಲೇ ಕೇಳಿ ಹಿಂದೆಯೇ ‘ಕೋಪಿಸ್ಕೋಬೇಡಿ ಮತ್ತೆ... ನೀವು ಯಸ್ ಅಂದ್ರೂ ನೊ ಅಂದ್ರೂ’ ನಾನಂತೂ ನಿಮ್ಮನ್ನು ದೂರ ಮಾಡಿಕೊಳ್ಳಲಾರದಷ್ಟು ಸೋತು ಹೋಗಿದ್ದೇನೆ ಕಣ್ರಿ’ ಅವನು ಉದ್ವೇಗಕ್ಕೊಳಗಾಗುವನು. ನಾನು ಕುಲುಕುಲು ನಕ್ಕು, ‘ಪ್ರೇಮಾನಾ? ಏನೋ ಅಪ್ಪಾ! ನಂಗಂತೂ ಗೊತ್ತಾಗ್ತಾ ಇಲ್ಲ’ ಅಂತ ಒಮ್ಮೆಲೆ ಸಿಡುಕಿದರೂ ತುಟಿಗಳಲ್ಲಿ ನಿಂತ ನಗೆ ಅವನನ್ನು ತೀರಾ ನಿರಾಶೆಗೊಳಿಸುವುದಿಲ್ಲ. ಇದರಿಂದಾಗಿ ಸ್ಫೂರ್ತಿಗೊಂಡವನಂತೆ ಮಾತಿಗಿಳಿಯುತ್ತಾನೆ.

‘ನೋಡಿ, ನಮಗೇ ಗೊತ್ತಿಲ್ಲದೆ ಆಗಮಿಸಿ ಪುಟ್ಟ ಹೃದಯದಲ್ಲಿ ಸೆಟ್ಲ್ ಆಗಿಬಿಡುವ ಆಗುಂತಕ ಕಣ್ರಿ ಈ ಪ್ರೇಮ.... ಫಾರ್ ಎಗ್ಸಾಂಪಲ್ ಕತ್ತಲೆ ಕಳೆದು ಬೆಳಕು ಹರಿಯೋದು, ನೀರು ಕುದ್ದು ಆವಿಯಾಗೋದು, ನೆಲದಲ್ಲಿ ಬಿದ್ದ ಬೀಜ ಮೊಳಕೆಯೊಡೆಯೋದು. ಮೊಗ್ಗು ಅರಳಿ ಹೂವಾಗೋದು, ಹೃದಯದಲ್ಲಿ ಪ್ರೇಮ ಪಲ್ಲವಿಸೋದು ಯಾರ ಕಣ್ಣಿಗೂ ಕಾಣದಂತಹ ಸೂಕ್ಷ್ಮ ಸಂವೇದನೆಯೇನೋ...’ ಎಂದವ ಅನಲೈಸ್ಗಿಳಿಯುತ್ತಾನೆ.

ಕಣ್ಣುಗಳಲ್ಲಿ ಕಣ್ಣಿಟ್ಟು ನನ್ನ ಹಸ್ತಗಳ ಹಿಡಿದು ಮೆದುವಾಗಿ ಅಮುಕುತ್ತಾನೆ. ನಯವಾಗಿ ಬಿಡಿಸಿಕೊಳ್ಳುತ್ತೇನೆ. ಇಂತಹ ಮೋಜಿನ ಊಟ ಮಾತು ಉಡುಗೊರೆಗಳಿಂದಾಗಿ ಅದೆಂದೋ ಬತ್ತಿ ಹೋಗಿದ್ದ ನನ್ನ ಜೀವನದಲ್ಲಿ ಸಂತಸದ ಝರಿ ಮರುಹುಟ್ಟು ಪಡೆಯುತ್ತದೆ. ಇದೇ ಚೈತ್ರದ ದಿನಗಳಲ್ಲಿ ರಶ್ಮಿ ಬಡ್ತಿಪಡೆದು ಬೇರೆ ಬ್ರಾಂಚಿಗೆ ಜಿಗಿಯುತ್ತಾಳೆ. ಒಮ್ಮೆ ಪೇಪರ್ಸ್ಗೆ ಸಹಿ ಮಾಡುವಾಗ ಭಾಸ್ಕರ್, ‘ನಾವೇ ಅವಳನ್ನ ಇಲ್ಲಿಂದ ಎತ್ತಂಗಡಿ ಮಾಡಿಸಿದ್ದೂರೀ. ನಮ್ಮಿಬ್ಬರ ಮೇಲೆ ಅವಳ ಕಣ್ಗಾವಲಿತ್ತು’ ಅನ್ನುವನು ಬಿಂದಾಸ್ ಆಗಿ, ‘ಸೊ. ಈ ಅಪರಾಧಕ್ಕಾಗಿ ನೀವು ನೀಡಿದ ಶಿಕ್ಷೆ ಪ್ರಮೋಶನ್ನಾ! ಸೊ ವಂಡರ್ಫುಲ್’ ಜೋಕ್ನಂತೆ ಹರಿದ ನನ್ನ ಮಾತಿನಲ್ಲಿ ಅಸೂಯೆಯ ಹರಿತ. ಅದನ್ನರಿತ ಅವನು ಹಾರ್ಟ್ಲಿ ಜಿಗಿತ. ಅಸೂಯೆ ಅತೃಪ್ತಿ ಅಸಹಿಷ್ಣತೆ, ವಿನಾಕಾರಣ ಕೋಪತಾಪ ಅರೋಗ್ಯಕರ ಪ್ರೇಮದ ಲಕ್ಷಣವೆಂಬುದವನ ಅನಾಲಿಸಸ್. ಅವನ ಪ್ರೇಮದ ಬಲೆಗೆ ಬಿದ್ದ ಮೀನಂತೆ ಅಧೀರತೆ ಕಾಡುವಾಗ ವಿಹ್ವಲಳಾಗುವೆ.

ಮನೆಗೆ ಬಂದರೂ ವಿಕ್ಷಿಪ್ತತೆ. ಅಡಿಗೆಯ ಉಪ್ಪುಖಾರದ ಪ್ರಮಾಣದಲ್ಲಿ ಏರುಪೇರು. ಮಾಡುವ ಕೆಲಸದಲ್ಲಿ ಅನಾಸಕ್ತಿ. ‘ನೆಟ್ಟಗೆ ಜ್ಞಾನ ಇಟ್ಕೊಂಡು ಕೆಲಸಮಾಡೇ’ ಮನೆಯವರ ಆಕ್ಷೇಪಣೆ. ಭಾಸ್ಕರನಿಗೆ ನನ್ನ ಬದುಕಿನ ನಿಜಾಂಶಗಳ ಅರಿವಿದೆಯೆ? ಅರಿವಿದ್ದೂ ನನ್ನನ್ನು ಆವರಿಸಿಕೊಳ್ಳುತ್ತಿದ್ದಾನೆಯೇ? ನಾನಾಗಿಯೆ ಹೇಳಿದರೆ ಅವನ ರಿಯಾಕ್ಷನ್ ಹೇಗಿದ್ದೀತೆಂಬ ಹಪಹಪಿಕೆ. ತಿಳಿದ ನಂತರ ಅವನು ದೂರ ಸರಿದರೆ ಎಂಬ ಹಳಹಳಿಕೆ. ತಿಳಿದ ಮೇಲೂ ಇನ್ನೂ ಹತ್ತಿರವಾದರೆ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಮನೆಯವರ ಮುದ್ರೆ ಬಿದ್ದೀತೆ ಎಂದಾಲೋಚಿಸುವಾಗ ಮನವೋ ಕೆಸರಲ್ಲಿ ಹೂತ ಕಂಬ. ನನ್ನ ಬಗ್ಗೆ ನನಗೇ ಅಸಹ್ಯ. ಮನಬಗ್ಗಡ. ಇಂತಹ ಅಯೋಮಯ ದಿನಗಳಲ್ಲೇ ಲಂಚ್ಗೆ ಆಹ್ವಾನಿಸುತ್ತಾನೆ ಭಾಸ್ಕರ್. ಅಳೆದು ತೂಗಿ ಒಪ್ಪಿಕೊಳ್ಳುತ್ತೇನೆ. ನೈತಿಕತೆಯು ನನ್ನನ್ನು ಈಗೀಗ ನಿತ್ರಾಣಗೊಳಿಸುವಾಗ ಒಳಗೇ ಗಟ್ಟಿಯಾಗುವೆ. ತಾನಾಗಿಯೇ ಒಳ್ಳೆಯ ಅವಕಾಶ ಬಂದಾಗ ನಾನು ನೈತಿಕತೆ ಪ್ರಾಮಾಣಿಕತೆ ಪಾವಿತ್ರತೆ ಎಂದೆಲ್ಲಾ ಪುರಾಣಕಾಲದ ಸ್ತ್ರೀಯರಂತೆ ಹಿಂಜರಿಯುವುದಕ್ಕಿಂತ ಆಧುನಿಕ ಜಗತ್ತಿನ ಜೊತೆ ಹೆಜ್ಜೆ ಮುಂದಡಿಯಿಡುವುದು ಲೇಸಲ್ಲವೆ. ಅವನಾಗಿ ಮುಂದೆ ಬಂದರೆ ಹಿಂಜರಿಯುವುದೇಕೆ ಎಂದು ಮುಂದಾಲೋಚಿಸುತ್ತೇನೆ.

ಎಂದಿನಂತೆ ಅವನು ಲಂಚ್ಗೆ ಕರೆದಾಗ ಉತ್ಸಾಹದಿಂದಲೆ ಹೊರಡುತ್ತೇನೆ. ನಾರ್ಥ್ ಸ್ಟೈಲ್ ಊಟಕ್ಕೆ ಹೇಳಿ ನಿಧಾನವಾಗಿ ಟೊಮೊಟೋ ಸೂಪ್ ಸವಿಯುವಾಗ ನಾನು ತುಂಬಾ ಸೆಖೆಯೆಂದು ನಟಿಸುತ್ತಾ ರವಿಕೆಯ ಒಳಗೆ ಹುದುಗಿದ್ದ ಮಾಂಗಲ್ಯವನ್ನು ಬೇಕೆಂದೇ ಈಚೆತೆಗೆದು ಹೊರಗೆ ಕಾಣುವಂತೆ ಹಾಕಿಕೊಳ್ಳುತ್ತೇನೆ. ಅವನು ಶಾಕ್ಗೆ ಒಳಗಾಗುತ್ತಾನೆಂದು ಭಾವಿಸಿ ಅವನತ್ತಲೇ ವಾರೆನೋಟವನ್ನು ಬೀರುತ್ತೇನೆ. ಅವನದ್ದು ಅದೇ ಟಿಪಿಕಲ್ನಗೆ! ‘ಎಸಿ ರೂಮಲ್ಲಿ ಎಂಥ ಸೆಖೆರೀ... ಯು ಸೀ ಬೇಸಿಗೆಯಲ್ಲಿ ಬಿಗಿಯಾಗಿ ಸೀರೆಉಟ್ಟು ಟೈಟಾದ ರವಿಕೆ ತೊಡುವ ಬದ್ಲು ಲೂಸಾದ ಚೂಡಿದಾರ್ ಬೆಸ್ಟ್ ಕಣ್ರಿ’ ಉಪದೇಶ ಮಾಡುತ್ತಾನೆ. ನನ್ನ ನಾಲಿಗೆಯೆಲ್ಲಾ ಕಹಿ ಕಹಿ. ನೇರವಾಗಿಯೇ ಪ್ರಶ್ನಿಸಿಬಿಡುವೆ. ‘ನನಗೆ ಮದುವೆಯಾಗಿರೋದು ಗೊತ್ತಾ ನಿಮ್ಗೆ?’ ‘ಯಸ್. ಡಿವೋರ್ಸ್ ಆಗಿರೋದು ಗೊತ್ತು ನನ್ಗೆ’ ಹುಳ್ಳಗೆ ನಗುತ್ತಾನೆ. ನನಗೀಗ ದೊಡ್ಡಶಾಕ್. ‘ವಾಟ್ ಈಸ್ ದೇರ್? ಈಗ ಇದೆಲ್ಲಾ ಕಾಮನ್ ಕಣ್ರಿ. ಯಾವ ಕಾಲದಲ್ಲಿದೀರಾ ನೀವು? ಫ್ರೆಂಡ್ಸ್ ಹೆಂಡತಿರ್ನು ಶೇರ್ ಮಾಡಿಕೊಳ್ಳೊದು, ವಿಥೌಟ್ ಮ್ಯಾರೇಜ್ ಲಿವ್ ಇನ್ ಟುಗೆದರ್, ಹೋಮೋ ಸೆಕ್ಸುಯಲ್ ಇನ್ನೂ ಏನೇನೋ ಸೊಸೈಟಿನಲ್ಲಿ ನಡೀತಿದೆ ಲಾವಣ್ಯ ಮೇಡಮ್. ಇನ್ ಮೈ ವ್ಯೂ ಸೆಕ್ಸ್ ಅಪಚಾರವೂ ಅಲ್ಲ ಅಪರಾಧವೂ ಅಲ್ಲ. ಅವರವರ ಲೈಕಿಂಗ್, ಚಾಯ್ಸ್ ಎಟ್ಸೆಟ್ರಾ ಎಟ್ಸೆಟ್ರಾ’ ಎಂದು ಹುಬ್ಬು ಕುಣಿಸುತ್ತಾ ಕಣ್ಣು ಮಿಟುಕಿಸುವ. ನನ್ನ ಮೈಯಲ್ಲಿ ದಿಗ್ಗನೆ ಕಿಚ್ಚು ಹತ್ತಿಕೊಂಡಂತೆ ಭಾಸವಾಗುತ್ತದೆ. ‘ಓಹೋ! ನಿಮ್ಮದು ಯಾವ ಟೈಪು ಲವ್ವೋ?’ ಸುಟ್ಟುಬಿಡುವ ಪರಿ ನೋಡುವೆ.

‘ಥುತ್.......ಲವ್ವುಗಿವ್ವು ಮಣ್ಣಾಂಗಟ್ಟಿ ಬಿಟ್ಟಾಕ್ರಿ ದಾಹ ಉಂಟಾದಾಗ ಯಾವ ಕೆರೆ ನೀರಾದ್ರೇನ್ರಿ?’ ನನಗೆ ನೀವು ಬೇಕು ಅಷ್ಟೆ.! ಯುಸೀ ನನ್ನ ಜೊತೆಗಿನ ಒಂದೇ ಒಂದು ಡಿನ್ನರ್ಗೆ ಬೆಡ್ ಹಂಚಿಕೊಂಡವರುಂಟು ಯು ನೊ. ಕರೆದಾಕ್ಷಣ ಬಂದು ಮೈಮೇಲೆ ಬೀಳರೋಗಿಂತ ನಿಮ್ಮಂತಹ ಮೊಂಡ ಹುಡ್ಗೀರೇ ನಂಗಿಷ್ಟ’ ಗುಳುಗಳು ನಗುತ್ತಾನೆ ಭಾಸ್ಕರ್. ‘ನಾನು ಹುಡುಗಿಯಲ್ಲ ಒಂದು ಮಗುವಿನ ತಾಯಿ’ ಗದರುತ್ತೇನೆ. ‘ನಿಜ ಹೇಳಬೇಕಂದ್ರೆ ಆಂಟಿಯರೇ ನಂಗೆ ತುಂಬಾ ತುಂಬಾ ಇಷ್ಟ’ ಎಂದವನೇ ನನ್ನ ಹಸ್ತಗಳನ್ನು ಹಿಡಿದು ಹಣೆಗೆ ಒತ್ತಿಕೊಂಡು ಚುಂಬಿಸುತ್ತಾನೆ. ‘ಇಷ್ಟೆಲ್ಲಾ ಗೊತ್ತಿದ್ದೂ ನನ್ನ ಜೊತೆ ಲವ್ ನಾಟ್ಕ ಮಾಡಿದ್ರಾ?’ ಬುಸುಗುಟ್ಟುವೆ. ‘ನಾನು ಬಿಂದಾಸ್ ಒಂಥರಾ ಫ್ಲರ್ಟ್ ಬಿಡಿ. ಮದುವೆಯಾದ ಪತಿವ್ರತೆ ನೀವು. ನೀವೇಕೆ ಇಂತಹ ಡ್ರಾಮಾ ಮಾಡಿದ್ರಿ?’ ವ್ಯಂಗ್ಯವಾಗಂದು ನಗೆಯಲ್ಲೇ ಹಿರಿಯುತ್ತಾನೆ.

‘ಎಲ್ಲಾ ಇದ್ದೂ ಇಲ್ಲದವಳು ನಾನು........ ಡಿವೋರ್ಸಿ. ಹೊಸಬಾಳು ಹೊಸ ಪ್ರೀತಿಗಾಗಿ ಹಂಬಲಿಸುತ್ತಿದ್ದವಳು ನಾನು. ನೀವು ನನಗಾಗಿ ಹಂಬಲಿಸೋದನ್ನ ನೋಡಿ ಅಂಜುತ್ತಲೇ ನಿಮ್ಮ ಗಾಳಕ್ಕೆ ಬಿದ್ದೆ. ನೀವಿಲ್ಲದೆ ಬದುಕಲಾರೆ ಎಂಬಷ್ಟು ಡಿಸ್ಟರ್ಬ್ ಆದೆ. ಈಗಲೂ ನೀವು ಒಪ್ಪೋದಾದ್ರೆ ಮದುವೆ ಆಗೋಣ. ನಿಮ್ಮ ಮನೆಯವರನ್ನು ಕೇಳಿ ನೋಡಿ ಸಾರ್’ ದೀನಳಾಗುತ್ತೇನೆ. ‘ಸ್ಟುಪಿಡ್... ಇದಕ್ಕೆಲ್ಲಾ ರಿಸ್ಕ್ ಯಾಕ್ರಿ? ಐದು ಮಿನೀಟಿನ ಸುಖಕ್ಕೆ? ದೇಹಗಳು ನಮ್ಮವು. ಸುಖ ನಮ್ಮದು... ಅಷ್ಟೆ. ನೊ ಪ್ರಾಬ್ಲಮ್’ ಕೈ ಹಿಡಿದು ಮೆದುವಾಗಿ ಅಮುಕುತ್ತಾನೆ. ‘ಶಟ್ಅಪ್, ಹೆಂಗಸರ ಬಗ್ಗೆ ಇಷ್ಟೊಂದು ಚೀಪ್ ಮೆಂಟಾಲಿಟಿನಾ ನಿನ್ಗೆ? ಯು ಎಜ್ಯುಕೇಟೆಡ್ ಬ್ರೂಟ್’ ಅನ್ನುವೆ. ಸರಕ್ಕನೆ ಮೇಲೇಳುವೆ. ‘ಕೂಗಾಡಬೇಡ ಸ್ವೀಟಿ. ಇಲ್ಲಿ ವಿವಿಐಪಿಗಳು ಮಾತ್ರ ಇರ್ತಾರೆ... ಬರ್ತಾರೆ’ ಎಂದವನು ಕೊಕ್ಕನೆ ನಗುವನು. ದೊಡ್ಡ ದೊಡ್ಡ ತಟ್ಟೆಗಳು. ತರಾವರಿ ಬಟ್ಟಲುಗಳಲ್ಲಿ ಅಲಂಕೃತ ಖಾದ್ಯಗಳು ಬಂದು ಕೂರುತ್ತವೆ. ‘ಮೈ ಫೂಟ್’ ಎಂದು ಕುರ್ಚಿತಳ್ಳಿ ಹೊರಡುವೆ. ‘ಡೋಂಟ್ ಬಿ ರಬ್ಬಿಶ್, ಇಷ್ಟವಿಲ್ಲದಿದ್ದರೆ ಇಲ್ಲ ಅನ್ನು. ಕೂಲಾಗಿ ಕೂತು ಊಟಮಾಡ್ಕೊಂಡು ಹೋಗ್ತಿರು ಅಷ್ಟೆ...’ ಏನೂ ನಡದೇ ಇಲ್ಲವೇನೋ ಎಂಬಂತಹ ಉದಾಸೀನತೆ. ನಾನು ಹೊರಟಾಗ ಮೇಲೆದ್ದು ಮುಖಗಂಟಿಕ್ಕಿ ಹಿಂದೆಯೇ ಬರುತ್ತಾನೆ. ‘ಒಂದ್ನಿಮಿಷ ಪ್ಲೀಸ್... ನನ್ನನ್ನು ಎದುರುಹಾಕ್ಕೊಂಡು ನೀನು ಕಂಪನಿನಲ್ಲಿ ಕೆಲಸ ಮಾಡೊಕೆ ಸಾಧ್ಯನಾ? ಥಿಂಕ್ ಬಿಫೋರ್ ದಿ ಸ್ಟೆಪ್’ ಎಂದು ದುರುಗುಟ್ಟುತ್ತಾನೆ. ‘ಹೋಗಲೋ... ಇದಲ್ಲದಿದ್ದರೆ ಇನ್ನೊಂದು ಕಂಪನಿ. ನಾಯಿ ತರಾ ಹಿಂದೆರಗಬೇಡ ಗೆಟ್ಲಾಸ್ಟ್’ ಗದರಿದವಳೆ ಹೆಜ್ಜೆಗಳಲ್ಲಿ ಕಸವು ತುಂಬಿಕೊಳ್ಳುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.