ಚಾರ್ಲಿಯ ಅಜ್ಜಿಗೆ ಹುಚ್ಚು ಹಿಡಿದಿರಬಹುದು ಎಂಬ ಸುದ್ದಿ ವಠಾರದ ತುಂಬ ಹರಡಲು ಹೆಚ್ಚು ಸಮಯಬೇಕಾಗಲಿಲ್ಲ. ಬಾಯಿಂದ ಬಾಯಿಗೆ ಈ ಸುದ್ದಿ ಹರಡುತ್ತಾ ಎಲ್ಲರ ದೃಷ್ಟಿಯಲ್ಲಿ ಚಾರ್ಲಿಯ ಅಜ್ಜಿ ಹುಚ್ಚಿಯೇ ಆಗಿದ್ದಳು. ಆಕೆ ಹಾಗೆ ವರ್ತಿಸಲು ಒಂದು ಬಲವಾದ ಕಾರಣವೂ ಇತ್ತು. ವಠಾರದ ಬಹುತೇಕ ಹುಡುಗರು ಸಂಜೆಯಾಗುತ್ತಲೇ ಒಂದಿಷ್ಟು ಕುಡಿದು ಏನೇನೋ ಮಾತನಾಡುತ್ತ ಹರಟುತ್ತಿದ್ದುದು ಮಾತ್ರ ಚಾರ್ಲಿಯ ಅಜ್ಜಿಗೆ ನುಂಗಲಾರದ ತುತ್ತಾಗಿತ್ತು. ತನ್ನ ಕಣ್ಣ ಮುಂದೇ ಹುಟ್ಟಿ ಬೆಳೆದ ಹುಡುಗರು ಈ ರೀತಿ ಅನ್ಯಾಯವಾಗಿ ಹಾಳಾಗುತ್ತಿರುವುದನ್ನು ಕಂಡಾಗಲೆಲ್ಲ ಆಕೆಯ ಹೊಟ್ಟೆಗೆ ಬೆಂಕಿ ಹಾಕಿದ ಹಾಗಾಗುತ್ತಾ ಇತ್ತು. ಪಡ್ಡೆ ಹುಡುಗರು ಅಜ್ಜಿಯನ್ನು ಕಂಡಾಗಲೆಲ್ಲ ಮತ್ತಷ್ಟು ಮಾತು ಜಾಸ್ತಿಮಾಡಿ ಬೀಡಿ ಸೇದುತ್ತಾ ಅಜ್ಜಿಯ ಮುಖಕ್ಕೆ ಹೊಗೆ ಬಿಡುವುದನ್ನು ಕಂಡಾಗಲೆಲ್ಲ ಚಾರ್ಲಿಗೆ ಬೇಸರವಾದರೂ ಈಗಿನ ಕಾಲದ ಹುಡುಗರೇ ಹೀಗೆ ಅಂದುಕೊಂಡು ಸುಮ್ಮನಾಗುತ್ತಿದ್ದ. ಆದರೆ ಅಜ್ಜಿಯ ಮನಸ್ಸು ಮಾತ್ರ ವಠಾರದ ಹುಡುಗರು ಹೀಗೆ ಹಾಳಾಗುವುದನ್ನು ಒಪ್ಪುತ್ತಿರಲಿಲ್ಲ.

ಚಾರ್ಲಿಗೆ ಅಜ್ಜಿಯ ವರ್ತನೆ ಕಂಡು ಬೇಸರವೆನಿಸಿದರೂ ಆಕೆಗೆ ಯಾರು ಹೇಳೋದು ಎಂದುಕೊಂಡು ಸುಮ್ಮನಾಗಿ ಬಿಡುತ್ತಿದ್ದ. ಅಜ್ಜಿಯ ವರ್ತನೆ ಬದಲಾಗುವುದಿಲ್ಲ ಎಂದುಕೊಂಡ ಚಾರ್ಲಿ, ತಾನಾಯಿತು ತನ್ನ ಕೆಲಸ ಆಯಿತು ಎಂದು ಕೊಂಡು ಸುಮ್ಮನಾಗುತ್ತಿದ್ದ. ಕ್ರಿಸ್ಮಸ್ ಹಬ್ಬ ಹತ್ತಿರ ಬಂದಂತೆ ಅಜ್ಜಿಯ ಹುಚ್ಚು ಇನ್ನಷ್ಟು ಜಾಸ್ತಿಯಾಗುತ್ತದೆ ಎಂದು ಊರಿನ ಜನ ಅಂದುಕೊಂಡರು. ಚಾರ್ಲಿಗೆ ಮಾತ್ರ ಅಜ್ಜಿಯ ವರ್ತನೆ ಸರಿ ಎನಿಸುತಿತ್ತು. ಆದರೂ ಅಜ್ಜಿಗೆ ಯಾರು ಹೇಳೋದು ಅಂದುಕೊಂಡು ಇತ್ತೀಚೆಗೆ ಸುಮ್ಮನಾಗುತ್ತಿದ್ದ. ಅಜ್ಜಿಯ ಈ ವರ್ತನೆಗೆ ವಠಾರದಲ್ಲಾದ ಮಹತ್ತರ ಬದಲಾವಣೆಗಳು ಪ್ರಮುಖ ಕಾರಣವಾಗಿತ್ತು.

-2-
ಚಾರ್ಲಿ ಇದ್ದ ವಠಾರವು ಚಿಕ್ಕದಾಗಿದ್ದು ಚರ್ಚಿನ ದೃಷ್ಟಿಯಲ್ಲಿ ಅತ್ಯುತ್ತಮ ಆದರ್ಶ ವಠಾರವಾಗಿತ್ತು. ಇದು ಚಾರ್ಲಿಗೆ ಹೆಮ್ಮೆಯ ವಿಚಾರವಾಗಿತ್ತು. ತಾನು ಗುರ್ಖಾರನಾಗಿ ಕೆಲಸ ಮಾಡಿದಷ್ಟು ದಿನವೂ ವಠಾರದಲ್ಲಿ ಒಗ್ಗಟ್ಟು ಇದ್ದು, ಚರ್ಚಿನ ಯಾವುದೇ ಕೆಲಸಕ್ಕಾದರೂ ಚರ್ಚಿನಿಂದ ಬುಲಾವ್ ಬಂದು ಭಾನುವಾರ ಪೂಜೆಯಲ್ಲಿ ಪಾದ್ರಿ ಚಾರ್ಲಿಯ ವಠಾರವನ್ನು ಅವರ ಒಗ್ಗಟ್ಟನ್ನು ಹಾಡಿ ಹೊಳುತ್ತಿದ್ದುದನ್ನು ಕಂಡಾಗಲೆಲ್ಲ ತನ್ನ ವಠಾರದ ಬಗ್ಗೆ ಹೆಮ್ಮೆ ಎನಿಸುತ್ತಿತ್ತು. ತನ್ನ ಮೊಮ್ಮಗ ಗುರ್ಖಾರ ಆಗಿದ್ದಕ್ಕೂ ಸಾರ್ಥಕ ಎಂದು ಅಜ್ಜಿ ತನ್ನ ವಠಾರದ ಬಗ್ಗೆ ಎಲ್ಲಿಲ್ಲದ ಪ್ರೀತಿ ಇಟ್ಟುಕೊಂಡಿದ್ದಳು. ಚಾರ್ಲಿಯ ನೇತೃತ್ವದಲ್ಲಿ ವಠಾರದ ಕ್ರಿಸ್ಮಸ್ ಎಂದರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡುತ್ತಿತ್ತು. ವಠಾರದ ಎಲ್ಲಾ ಜಾತಿಯವರು ಜಾತಿ ಭೇದವಿಲ್ಲದೆ ಒಟ್ಟಾಗಿ ಸೇರಿ ಕ್ರಿಸ್ಮಸ್ ಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ ಗೋದಲಿ ನಿರ್ಮಿಸಲು ಮುಂದಾಗಿ ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದವು. ಅಲ್ಲಿ ಚಾರ್ಲಿಯ ಅಜ್ಜಿಯದೇ ಕಾರುಬಾರು. ರಾತ್ರಿ ಹಗಲು ವಠಾರದವರೆಲ್ಲರೂ ಒಟ್ಟಿಗೆ ಸೇರಿ ಜೊತೆಯಾಗಿ ಶ್ರಮಿಸುತ್ತಿದ್ದುದನ್ನು ಕಂಡು ಎಲ್ಲರೂ ತುಂಬಾ ಹೊಗಳಿ ಕೊಂಡಾಡುತ್ತಿದ್ದರು. ಹಬ್ಬ ಪ್ರಾರಂಭವಾದಾಗಿನಿಂದ ಪ್ರತಿ ದಿನ ಗೋದಲಿಯ ಬಳಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವಾಗ ಹಾಡು, ಕುಣಿತ, ಡಾನ್ಸ್, ನಾಟಕ ಎಂದು ರಾತ್ರಿ ಹನ್ನೆರಡಾದರೂ ಜನ ಕದಲುತ್ತಿರಲಿಲ್ಲ. ಗೋದಲಿಯ ಸುತ್ತಲೂ ತಿರುಗಾಡುತ್ತ ಸಂತಸ ಪಡುತ್ತಿದ್ದರು. ಪ್ರತಿ ವರ್ಷ ಚರ್ಚಿನಿಂದ ನೀಡುವ ಬಹುಮಾನವನ್ನು ಚಾರ್ಲಿಯ ಅಜ್ಜಿ ಮುಟ್ಟಿ ಮುಟ್ಟಿ ನೋಡಿ ಸಂತಸ ಪಡುತ್ತಿದ್ದಳು. ಆದರೆ ಆ ವಠಾರದಲ್ಲಿ ಇಂತಹ ವಾತಾವರಣ ಕಣ್ಮರೆಯಾಗಲು ಹೆಚ್ಚು ದಿನಗಳು ಬೇಕಾಗಲಿಲ್ಲ.

-3-
ಚಾರ್ಲಿಯ ವಠಾರದ ಒಂದಿಬ್ಬರು ಹೆಂಗಸರು ಇಸ್ರೇಲ್ಗೆ ಹೋಗಿ ಬಂದಾದ ನಂತರ ಚಾರ್ಲಿಯ ವಠಾರದ ಸ್ಥಿತಿಗತಿಯೇ ಬದಲಾಗಿ ಹೋಯಿತು. ಚಾರ್ಲಿಯ ಅಜ್ಜಿ ಇಸ್ರೇಲ್ಗೆ ಹೋಗಲು ಸಾಧ್ಯವಾಗದೇ ಇದ್ದರೂ ಅಲ್ಲಿಗೆ ಹೋಗಿ ಬಂದವರ ಕೈ ಕಾಲು ಮುಟ್ಟಿ ಪ್ರಭು ಯೇಸುವಿನ ಪಾದವನ್ನು ಮುಟ್ಟಿದಷ್ಟೇ ಸಂತಸ ಪಡುತ್ತಿದ್ದಳು. ಅವರು ಕೊಡುತ್ತಿದ್ದ ಪವಿತ್ರ ಮಣ್ಣು, ತೈಲ, ಕೋಂತ್ ಮುಂತಾದ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಂಡು ನಮ್ಮ ವಠಾರಕ್ಕೂ ಪವಿತ್ರ ಮಣ್ಣು, ತೈಲ ಬಂತಲ್ಲ ಎಂದು ಸಂತಸ ಪಡುತ್ತಾ ಯಾರಿಗೆ ಏನಾದರೂ ಅನಾರೋಗ್ಯವಾದರೆ, ಕಷ್ಟ ಬಂದರೆ ಅವರಿಗೆ ಪವಿತ್ರ ಮಣ್ಣು ಕೊಟ್ಟು ತೈಲ ಹಚ್ಚಿ ಜಪಸರ ಮಾಡಿ ಅವರಿಗಾಗಿ ಪ್ರಾರ್ಥಿಸುತ್ತಿದ್ದಳು. ದಿನಗಳು ಕಳೆದಂತೆ ಚಾರ್ಲಿಯ ವಠಾರದ ಅನೇಕ ಹೆಂಗಸರು ಇಸ್ರೇಲ್ ಕಡೆ ಮುಖಮಾಡ ತೊಡಗಿದರು. ಒಬ್ಬರ ಹಿಂದೆ ಒಬ್ಬರು ಇಸ್ರೇಲ್ಗೆ ಹೋದಂತೆ ಚಾರ್ಲಿ ವಠಾರದಲ್ಲಿ ಹೆಂಗಸರ ಸಂಖ್ಯೆ ಕಡಿಮೆಯಾಯಿತು. ಅಲ್ಲಿಂದ ದುಡಿದು ಕಳುಹಿಸಿದ ಹಣದಲ್ಲಿ ವಠಾರದ ಗಂಡಸರು ಎಲ್ಲಿಲ್ಲದ ಶೋಕಿ ಮಾಡಲು ಶುರು ಮಾಡಿದರು. ಗುಡುಸಲುಗಳು ಕಾಲ ಕ್ರಮೇಣ ಬಂಗಲೆ ರೂಪ ಪಡೆದವು. ವಠಾರಕ್ಕೆ ಹಲವಾರು ಬೈಕುಗಳು, ಕಾರುಗಳು ಬಂದು ನಿಂತವು. ಟಿ ವಿ ಪ್ರಿಜ್ಗಳು ಎಲ್ಲರ ಮನೆಯನ್ನು ಅಲಂಕರಿಸಿ ಬಂಗಲೆಗೆ ಮತ್ತಷ್ಟು ಮೆರುಗು ನೀಡಿದವು. ವಠಾರದ ಗಂಡಸರು ಸಂಜೆಯಾಗುತ್ತಲೇ ಬಾರಿನಲ್ಲಿ ಕಾಲ ಕಳೆಯ ತೊಡಗಿದರು. ಪ್ರಪಂಚದ ಆಗುಹೋಗುಗಳ, ದೇಶದ ಆಗುಹೋಗುಗಳ ಬಗ್ಗೆ ದೇಶದ ಕಾನೂನು ಕಟ್ಟಲೆಗಳ ಬಗ್ಗೆ ಮಾಹಿತಿ ನೀಡುವ ಪ್ರಮುಖ ಕೇಂದ್ರ ಸ್ಠಾನಮಾನವನ್ನು ಬಾರ್ ಪಡೆದು ಕೊಂಡಿತು. ಸಂಜೆಯ ವೇಳೆ ಇತ್ತ ಹೆಂಗಸರೂ ಇಲ್ಲದೆ ಅತ್ತ ಗಂಡಸರೂ ಇಲ್ಲದೆ ಬಂಗಲೆಗಳು ಒಂದು ರೀತಿಯ ಶೋ ಕೇಸಿನ ಬೊಂಬೆಯಂತೆ ನೀಟಾಗಿ ಬಣ್ಣ ಬಳಿದುಕೊಂಡು ಕಂಗೊಳಿಸಲಾರಂಬಿಸಿದವು. ಬಣ್ಣ ಬಣ್ಣದ ಲೈಟುಗಳಿಂದ ಸಿಂಗರಿಸಿ ಕೊಂಡಿದ್ದ ಆ ಬಂಗಲೆಯಲ್ಲಿ ಸಂಜೆಯ ಪ್ರಾರ್ಥನೆ ಮಾಡಲು, ಜಪಸರ ಮಾಡಲು ಯಾರು ಇಲ್ಲದಂತಾಗಿದ್ದು ಮಾತ್ರ ಚಾರ್ಲಿಯ ಅಜ್ಜಿಗೆ ಸಹಿಸಲಾರದ ಹಿಂಸೆಯಾಗಿ ಪರಿಣಮಿಸಿತು. ಇಸ್ರೇಲಿನಿಂದ ನೀರಿನಂತೆ ವಠಾರಕ್ಕೆ ಹಣ ಹರಿದು ಬರತೊಡಗಿತು. ಚರ್ಚಿಗೂ ಕಾಣಿಕೆ ರೂಪದಲ್ಲಿ ಸ್ವಲ್ಪ ಹಣ ಬರತೊಡಗಿತು. ವಠಾರದ ಜನರಿಗೆ ಚರ್ಚು ಹಳೆಯದೆನಿಸ ತೊಡಗಿತು. ಕೆಲವು ಗಂಡಸರು ಚರ್ಚ್ ಅನ್ನು ಹೊಸದಾಗಿ ಕಟ್ಟಿದರೆ ಹ್ಯಾಗೆ ? ನಾನು ಅಷ್ಟು ಕೊಡಬಲ್ಲೆ, ನಾನು ಇಷ್ಟು ಕೊಡಬಲ್ಲೆ ಎನ್ನ ತೊಡಗಿದರು. ಗಂಡಸರು ಚರ್ಚಿನ ಕಡೆ ಮುಖ ಮಾಡದೇ ಇದ್ದರೂ ಬಾರಿನ ಕಡೆ ಮುಖ ಮಾಡುವುದನ್ನು ಮಾತ್ರ ಮರೆಯಲಿಲ್ಲ. ಆದರೂ ವಠಾರಕ್ಕೊಂದು ಒಳ್ಳೆಯ ಚರ್ಚ್ ಬೇಡವೇ ಎಂಬ ತರ್ಕ ಕೆಲವು ಗಂಡಸರದು. ಅತ್ತ ಇಸ್ರೇಲಿನಲ್ಲಿ ಹೆಂಗಸರು ತಮ್ಮ ಗಂಡಂದಿರು ಮತ್ತು ಮಕ್ಕಳಿಗಾಗಿ ಮನೆ ಮನೆ ತಿರುಗಿ ಕೆಲಸ ಮಾಡಿ ಹಣ ಕಳುಹಿಸತೊಡಗಿದರು.

ಚಾರ್ಲಿಯ ವಠಾರ ದಿನ ಕಳೆದಂತೆ ಆಧುನಿಕ ಬಡಾವಣೆಯಾಗಿ ಪರಿವರ್ತನೆಗೊಳ್ಳತೊಡಗಿದರೂ ಚಾರ್ಲಿ ಮತ್ತು ಆತನ ಅಜ್ಜಿಯ ಮನೆ ಮಾತ್ರ ಯಾವುದೇ ಬದಲಾವಣೆ ಕಾಣಲಿಲ್ಲ. ಚಾರ್ಲಿಯ ವಠಾರಕ್ಕೆ ಎಲ್ಲಿಲ್ಲದ ಸವಲತ್ತುಗಳು ಬಂದರು ಕೂಡ ಚಾರ್ಲಿ ಮನೆಯಲ್ಲಿ ಮಾತ್ರ ಯಾವುದೇ ವ್ಯತ್ಯಾಸವಿಲ್ಲದೆ ಜಪ-ತಪ ಜಪಸರಗಳ ಶಬ್ದ ಮಾತ್ರ ಹಿಂದಿಗಿಂತಲೂ ಹೆಚ್ಚಾಗಿತ್ತು. ವಠಾರದ ಜನ ಮಾತ್ರ ಅಜ್ಜಿಗೆ ವಯಸ್ಸಾದ್ದರಿಂದ ಜಪ ಜಾಸ್ತಿಯಾಗಿದೆ ಎನ್ನುವುದನ್ನು ಮಾತ್ರ ಮರೆಯಲಿಲ್ಲ. ವಠಾರದಲ್ಲಿ ಆಗುತ್ತಿದ್ದ ಬದಲಾವಣೆಗಳು ಚಾರ್ಲಿಗೆ ಸಂತಸ ಎನಿಸಿದರೂ ಜನರು ಧರ್ಮದ ಬಗ್ಗೆ ಚರ್ಚಿನ ಬಗ್ಗೆ ಅಸಡ್ಡೆ ತೋರುವುದು ಮಾತ್ರ ಚಾರ್ಲಿಗೆ ನುಂಗಲಾರದ ತುತ್ತಾಯಿತು. ಚಾರ್ಲಿಯ ಗುರ್ಖಾರಗಿರಿಗೆ ಪೈಪೋಟಿ ಮಾಡುವವರೇ ಇಲ್ಲದಂತಾಗಿ ಆ ಹುದ್ದೆ ಯಾರಿಗೆ ಬೇಕು ಮಾರಾಯ ನೀನೇ ಗುರ್ಖಾರ್ ಆಗಿರು, ನಮಗೇನು ತೊಂದರೆ ಇಲ್ಲ ಎಂದು ವಠಾರದ ಗಂಡಸರು ಅರಾಮಾಗಿ ಕಾಲ ಕಳೆಯುವುದನ್ನು ಮಾತ್ರ ಚಾರ್ಲಿಗೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ವಠಾರದಲ್ಲಿ ಜಪವಿಲ್ಲದೆ, ಪ್ರಾರ್ಥನೆ ಇಲ್ಲದೆ ಜಪಸರ ಇಲ್ಲದೆ, ತಿಂಳಿಗೊಮ್ಮೆ ನಡೆಯುವ ವಠಾರ ಪ್ರಾರ್ಥನೆಗೆ ವಠಾರದ ಗಂಡಸರು ಬಾರದೆ ಬರೀ ಸಬೂಬು ಹೇಳುವುದನ್ನು ಕಂಡಾಗಲೆಲ್ಲ ಚಾರ್ಲಿಯ ಅಜ್ಜಿಗೆ ಎಲ್ಲಿಲ್ಲದ ಬೇಸರ ಉಂಟಾಗುತ್ತಿತ್ತು.

-4-

ಕ್ರಿಸ್ಮಸ್ ಬರುತ್ತಿದ್ದಂತೆಯೇ ಚಾರ್ಲಿಯ ಅಜ್ಜಿಗೆ ಹುಚ್ಚು ಹಿಡಿದಂತೆ ಆಗುತ್ತಿತ್ತು. ಈ ವಿಚಾರ ತಿಳಿದ ವಠಾರದ ಜನ ತಲೆ ಕೆಡಿಸಿಕೊಳ್ಳದೆ ಆ ಅಜ್ಜಿಗೆ ಹಬ್ಬ ಬಂದರೆ ಹಾಗೇ. ಹಬ್ಬ ಮುಗಿದ ಮೇಲೆ ಎಲ್ಲ ಸರಿ ಆಗುತ್ತೆ ಎಂದು ಕೊಂಡು ಸುಮ್ಮನಾಗುತ್ತಿದ್ದರು. ಆದರೆ ಚಾರ್ಲಿಗೆ ಮಾತ್ರ ತನ್ನ ಅಜ್ಜಿಗೆ ವಠಾರದ ಬದಲಾವಣೆಗಳೇ ಹುಚ್ಚು ಹಿಡಿಸಿದೆ ಎನ್ನುವುದರಲ್ಲಿ ಸಂಶಯವಿರಲಿಲ್ಲ. ಹಿಂದೆ ಹಬ್ಬ ಬಂತೆಂದರೆ ಎಲ್ಲರೂ ಸೇರಿ ಒಟ್ಟಿಗೆ ಗೋದಲಿ ನಿರ್ಮಿಸುವುದು, ಅಲ್ಲಿ ಕಾರ್ಯಕ್ರಮ ನಡೆಯುವುದು ಎಲ್ಲರ ಮನೆಯ ಸಿಹಿ ತಂದು ಹಂಚಿ ತಿನ್ನುವುದು, ದಿನದ ಜಪಸರ, ನಂತರ ಎಲ್ಲರೂ ಒಟ್ಟಾಗಿ ಕಷ್ಟ ಸುಖ ಮಾತನಾಡುವುದು, ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸಹಕರಿಸುವುದು ಆ ವಠಾರದ ವಾಡಿಕೆಯಾಗಿತ್ತು. ಆದರೆ ಹೆಂಗಸರು ಇಸ್ರೇಲ್ನ ಕಡೆ ಮುಖ ಮಾಡಿನ ನಂತರ ವಠಾರದಲ್ಲಿ ಒಂದೊಂದೇ ಅಚರಣೆಗಳು ನಿಂತು ಹೋಗತೊಡಗಿತು. ಒಂದೆರೆಡು ವರ್ಷಗಳ ಹಿಂದೆ ಚಾರ್ಲಿ ಕರೆದ ವಠಾರದ ಮೀಟಿಂಗಿಗೆ ಒಂದೆರೆಡು ಜನ ಮಾತ್ರ ಬಂದು ಗೋದಲಿ ಮಾಡಲು ಸಾಧ್ಯವೇ ಆಗಿರಲಿಲ್ಲ. ಆ ವರ್ಷ ಗೋದಲಿ ನಿರ್ಮಿಸದೇ ಇದ್ದುದಕ್ಕೆ ಚರ್ಚಿನಲ್ಲಿ ಚಾರ್ಲಿಗೆ ಬಹಳ ಅವಮಾನವಾದಂತಾಗಿತ್ತು. ನಂತರದ ವರ್ಷಗಳಲ್ಲಿ ಗುರ್ಖಾರ್ ಆದ ನೀನೇ ಗೋದಲಿ ನಿರ್ಮಿಸಿಕೋ ಅದರ ಖರ್ಚು ಬೇಕಾದರೆ ನಾವು ಕೊಡುತ್ತೇವೆ ಎಂದು ಉಡಾಫೆಯ ಮಾತು ಬಂದಾಗ ಚಾರ್ಲಿ ಗೋದಲಿಯ ಸಹವಾಸಕ್ಕೆ ಹೋಗದೆ ಈ ಗುರ್ಖಾರಗಿರಿಯೇ ಬೇಡ ಎನ್ನುವ ಹಂತಕ್ಕೆ ಬಂದಿದ್ದ. ಗುರ್ಖಾರಗಿರಿ ಬಿಡಲು ಅಜ್ಜಿಯು ‘ನೀನೂ ಗುರ್ಖಾರಗಿರಿ ಬಿಟ್ಟರೆ ಈ ವಠಾರದ ಪಾಡೇನು’ ಎಂದು ಅಡ್ಡಗಾಲು ಹಾಕಿ ತಾನೇ ಗುರ್ಖಾರ ಆಗುವಂತೆ ಮಾಡಿತ್ತು.

ಈ ವರ್ಷ ಕ್ರಿಸ್ಮಸ್ ಹತ್ತಿರ ಬಂದಂತೆ ಚಾರ್ಲಿಯ ಅಜ್ಜಿ ಕೂಗಾಡುವುದನ್ನು ಕಂಡ ಚಾರ್ಲಿ ಗಲಿಬಿಲಿಗೊಂಡಿದ್ದ. ಅಜ್ಜಿ ಒಂದೇ ಸಮನೆ ವಠಾರದ ಜನರನ್ನು ಬೈಯ ತೊಡಗಿದಳು. ಈ ವಠಾರದಲ್ಲಿ ದೇವರ ಬಗ್ಗೆ ಭಕ್ತಿ ಇಲ್ಲ. ಪ್ರಾರ್ಥನೆ ಇಲ್ಲ. ಜಪಸರ ಇಲ್ಲ. ಇಲ್ಲಿ ಸೈತಾನ ಬಂದು ನೆಲಿಸಿದ್ದಾನೆ. ಈ ವಠಾರಕ್ಕೆ ಒಂದು ಗೋದಲಿ ಮಾಡದ ಮೇಲೆ ಇಷ್ಟು ದೊಡ್ಡ ಬಂಗಲೆ ಕಟ್ಟಿ ಪ್ರಯೋಜನವೇನು ? ದೇವರು ನಿಮಗೆ ಸ್ವರ್ಗದಲ್ಲಿ ಜಾಗ ಕೊಡುವುದಿಲ್ಲ. ಹಬ್ಬಕ್ಕೆ ಬರೀ ಹೊಸ ಬಟ್ಟೆ, ಕೇಕ್ ಮಾಂಸದೂಟ ಮಾಡಿ ಮನೆಯ ಮುಂದೆ ಆಕಾಶಬುಟ್ಟಿ ಕಟ್ಟಿದರೆ ಹಬ್ಬ ಆಯಿತಾ ..? ಈ ವಠಾರದಲ್ಲಿ ಪ್ರೀತಿ ಶಾಂತಿ ಬೇಡವಾ? ಬಾಲ ಯೇಸುವಿಗೆ ಒಂದು ಗೋದಲಿ ಕಟ್ಟದ ಈ ವಠಾರದಲ್ಲಿ ಎಷ್ಟು ಬಂಗಲೆ ಕಟ್ಟಿದರೆ ಪ್ರಯೋಜನವೇನು ? ದೇವರ ಮಗ ಹೇಳಿದ್ದು ಏನು ? ಯಾಕೆ ಈ ವಠಾರ ಈ ರೀತಿ ಬದಲಾಗಿದೆ. ಇವರಿಗೆ ದುಬೈ, ಇಸ್ರೇಲ್ ಹಣವೇ ದೇವರಾಯಿತಾ ? ಇವರ ಅಹಂಕಾರಕ್ಕೆ ಇಷ್ಟು ಬೆಂಕಿ ಹಾಕ ಎಂಬಿತ್ಯಾದಿ ಮಾತುಗಳನ್ನಾಡುವುದನ್ನು ಕೇಳಿದಾಗಲೆಲ್ಲ ಚಾರ್ಲಿ ಅಜ್ಜಿಯನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದ. ವಠಾರದ ಜನರ್ಯಾರೂ ಆಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆಕೆಗೆ ಹಬ್ಬ ಬಂದರೆ ಸಂತಸ ಪಡುವುದು ಅವಳ ಹಣೆಯಲ್ಲಿ ಬರೆದಿಲ್ಲ ಎಂಬಿತ್ಯಾದಿ ಮಾತನಾಡಿಕೊಂಡು ಸುಮ್ಮನಾಗುತ್ತಿದ್ದರು. ಚಾರ್ಲಿ ಎಷ್ಟು ಪ್ರಯತ್ನ ಪಟ್ಟರೂ ವಠಾರದ ಜನ ಬದಲಾಗಿ ವಠಾರದ ಗೋದಲಿ ನಿರ್ಮಾಣವಾಗುವಂತೆ ಇರಲಿಲ್ಲ. ವಠಾರದ ಜನರ್ಯಾರು ಅಜ್ಜಿಯ ಕೂಗಿಗೆ ತಲೆ ಕೆಡಿಸಿಕೊಳ್ಳದೆ ಒಂದಷ್ಟು ಹೆಚ್ಚಾಗಿಯೇ ಕುಡಿದು ಮಲಗುತ್ತಿದ್ದರು.

ಅಜ್ಜಿ ಮಾತ್ರ ಗೋದಲಿ ನಿರ್ಮಿಸುತ್ತಿದ್ದ ಜಾಗ ನೋಡಿ ನೋಡಿ ಇನ್ನೂ ಹುಚ್ಚಳಂತೆ ಏನೇನೋ ಮಾತನಾಡುತ್ತಿದ್ದಳು. ಬಾಲ ಯೇಸು ವಠಾರದ ಗೋದಲಿಯಲ್ಲಿ ಮಲಗದೇ ಇದ್ದರೂ ವಿದೇಶದಿಂದ ತಂದಿದ್ದ ಬಾಲ ಯೇಸು ಗೋದಲಿಯಲ್ಲಿ ಬಣ್ಣ ಬಣ್ಣದ ಲೈಟುಗಳ ನಡುವೆ ಅಂಗಾತ ಮಲಗಿದ್ದ. ವಠಾರದ ಗೋದಲಿ ಇಲ್ಲದೆ ಇತ್ತ ಅಜ್ಜಿ ಕೊರಗುತ್ತಿದ್ದರೂ ಅಜ್ಜಿಯ ಕೂಗೂ ಯಾರಿಗೂ ಕೇಳಿಸುವಂತೆಯೂ ಇರಲಿಲ್ಲ. ಒಬ್ಬರಿಗೊಬ್ಬರು ಪ್ರೀತಿಸಿ ಎಂದ ಯೇಸುವಿನ ಮಾತು ಯಾರ ಕಿವಿಗೆ ಬೀಳುವಂತೆಯೂ ಇರಲಿಲ್ಲ. ವಿದೇಶಿ ಹಣದ ಶಬ್ಬದ ಮುಂದೆ ಗುರ್ಖಾರನ ಕೂಗಾಗಲೀ, ಅಜ್ಜಿಯ ಕೂಗಾಗಲೀ ಯಾರಿಗೂ ಕೇಳಿಸಲೇ ಇಲ್ಲ. ಬಾಲ ಯೇಸು ಮಾತ್ರ ಅಂಗಾತ ಮಲಗಿ ದೇವರನ್ನು ಪ್ರಾರ್ಥಿಸುತ್ತಿದ್ದ ‘ಓ ದೇವರೇ ಇವರಿಗಾಗಿ ಪ್ರಾರ್ಥಿಸು, ಇವರನ್ನು ಕ್ಷಮಿಸು’ ಎಂದೂ ವಠಾರದ ಜನ ಬದಲಾಗದೆ ಮುಂದಿನ ಕ್ರಿಸ್ಮಸ್ ಎದುರು ನೋಡ ತೊಡಗಿದರರು. ವಠಾರದ ಕ್ರಿಸಮಸ್ ಇತಿಹಾಸದ ಪುಟ ಸೇರಿತು. ಅಜ್ಜಿಯು ನಿಜವಾಗಿಯಾ ಹುಚ್ಚಳಾಗಿದ್ದಳು. ಜೊತೆ ಚಾರ್ಲಿಯೂ ಹುಚ್ಚನಾಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.