ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿ ಅವರ ಕಥೆ: ಬಲೀಂದ್ರ ಲೆಪ್ಪು...

Published 26 ಆಗಸ್ಟ್ 2023, 23:30 IST
Last Updated 26 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

“ಬಲಿಯೇ ಬಾ ... ಕೂ... ಕೂ... ಕೂ... “

ಪ್ರತಿವರ್ಷದಂತೆ, ಇಂದು ದೀಪಾವಳಿಯ ಮೂರನೆಯ ದಿನದ ಸಂಜೆ. ಎಂದಿನಂತೆ, ತುಳುನಾಡಿನ ರೈತರು ಸಂಭ್ರಮದಿಂದ 'ಬಲೀಂದ್ರ ಲೆಪ್ಪು'ಗೆ(ಬಲೀಂದ್ರನ ಕರೆಯುವುದು) ಸಿದ್ಧವಾಗುತ್ತಿದ್ದಾರೆ. ಗದ್ದೆ ಇರುವ ಮನೆಗಳ ಗಂಡಸರೆಲ್ಲಾ ಇದರಲ್ಲಿ ಸಂಭ್ರಮದಿಂದ ತೊಡಗಿಸಿಕೊಳ್ಳುತ್ತಾರೆ.

ಇದನ್ನೆಲ್ಲಾ ಶೂನ್ಯತೆಯ ಮುಖಭಾವದಿಂದ ಗಮನಿಸುತ್ತಾ ಬೆಟ್ಟದ ತುದಿಯಲ್ಲಿ ಕುಳಿತಿದ್ದ ಬಲೀಂದ್ರ ಆಕಾಶದತ್ತ ಮುಖ ಮಾಡಿ ನಿಟ್ಟುಸಿರು ಬಿಟ್ಟ. ಅವನಿಗೆ ತನ್ನ ಭೂತಕಾಲದ ಸ್ಮೃತಿಗಳು, ಖುಷಿ ಮತ್ತು ವಿಷಾದದ ಹೂರಣವೆನ್ನಬಹುದು. ಅವನು ನಿಧಾನವಾಗಿ ಹಸಿರು ಹುಲ್ಲಿನ ಮೇಲೆ ಬೆನ್ನ ಒರಗಿಸಿ ಆಕಾಶವನ್ನು ದಿಟ್ಟಿಸಿ ನೋಡುತ್ತಾ ಆಲೋಚನೆಯಲ್ಲಿ ಬಿದ್ದ...

ನಿನ್ನೆಯಷ್ಟೇ, ಅಮಾವಾಸ್ಯೆ. ಕತ್ತಲು ಹೆಚ್ಚಾದಂತೆ, ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸಲಾರಂಭಿಸಿದವು. ತಣ್ಣಗಿನ ಗಾಳಿ ಬೀಸಿ ಮೈಸೋಕಿದಂತೆ ಚಳಿ ಹೆಚ್ಚಾಗ ತೊಡಗಿತು. ಯಾಕೋ, ಈ ಘಟ್ಟಪ್ರದೇಶವು ವರ್ಷದಿಂದ ವರ್ಷಕ್ಕೆ ಬೋಳಾಗುವುದು ಹೆಚ್ಚಾಗುತ್ತಿದೆ. ಕಳೆದ ವರ್ಷ ಇಲ್ಲಿ ದೊಡ್ಡ ದೊಡ್ಡ ಮರಗಳ ಕಂಡ ನೆನಪು. ಆದರೆ, ಈಗ ಎಲ್ಲಾ ನೆಲಸಮ ಮಾಡಿದ್ದಾರೆ. ಬಹುಶಃ, ಇಲ್ಲೊಂದು ಪ್ರವಾಸಿ ವಸತಿಗೃಹ ಸಧ್ಯದಲ್ಲೇ ಬರಬಹುದು. ಅಲ್ಲಾ, ಈ ಮನುಷ್ಯ ತನ್ನನ್ನು ಏನೋ ಮಹಾನ್ ಅಂದುಕೊಂಡಿದ್ದಾನೆ! ಮನುಷ್ಯನಿಲ್ಲದ ಒಂದು ತುಂಡು ನೆಲ ಸಿಗಬಹುದೇ ಅನ್ಯ ಜೀವಿಗಳಿಗೆ- ಅಲ್ಲಿ ತಮ್ಮದೇ ಪುಟ್ಟ ಪ್ರಪಂಚ ಕಟ್ಟಿಕೊಳ್ಳಲು, ಸ್ವತಂತ್ರವಾಗಿ, ತನ್ನ ಬಳಗದೊಂದಿಗೆ, ಊಟ, ವಸತಿ ನಿರಂತರವಾಗಿ ಪೂರೈಸಿಕೊಳ್ಳಲು? ಮನುಷ್ಯ ಮೂಲತಃ ವಿಧ್ವಂಸಕಾರಿ ಅನ್ನಿಸುತ್ತೆ. ನಾವು ಪಾಠ ಕಲಿಯುವುದೇ ಇಲ್ಲ.

ನನ್ನ ಯುಗದಲ್ಲಿ ಹೀಗಿರಲಿಲ್ಲ. ಮನುಷ್ಯನ ದುರಾಸೆಗೆ ಇಷ್ಟೊಂದು ಆಯಾಮಗಳ ಗಳಿಕೆಯ ಮಾರ್ಗಗಳ ಆವಿಷ್ಕಾರ ನಡೆದಿರಲಿಲ್ಲ. ಒಂದು ವೇಳೆ, ಇದ್ದಿದ್ದರೆ ಎಲ್ಲರೂ ವಾಮನರಾಗಿ ಬಿಡುತ್ತಿದ್ದರೆನಿಸುತ್ತದೆ. ಆಗ, ದೇವತೆಗಳೆಂದು ಹೇಳಿಕೊಳ್ಳುತ್ತಿದ್ದವರಿಗೆ ಮಾತ್ರ ದುರಾಸೆಯಿತ್ತು, ದಾನವರಿಗೆ ಬರಿ ಆಸೆಗಳಿದ್ದವು. ದೇವತೆಗಳು, ಮೂರು ಜಗತ್ತಿನ ನಿಯಂತ್ರಣ ತಮ್ಮ ಕೈಯಲ್ಲಿಯೇ ಇರಬೇಕು, ನಾವೆಲ್ಲಾ ಅವರ ಶಾಶ್ವತ ಗುಲಾಮರಾಗಿಯೇ ಉಳಿಯಬೇಕೆಂದು ಕೊಂಡಿದ್ದರು. ಈ ವ್ಯವಸ್ಥೆ ಮುಂದುವರಿಯಲೆಂದೇ, ಅವರು ತಮ್ಮನ್ನು ಕಾಯುವ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತವರ ಬಳಗವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾವು, ದಾನವರು ಆ ಪರಿಧಿಯ ಹೊರಗೇನೆ ಇದ್ದೆವು, ಹಲವಾರು ಪೀಳಿಗೆಯವರೆಗೆ. ಅಂತೂ, ನಿಧಾನವಾಗಿ ನಮ್ಮಲ್ಲಿಯೂ ಕೊಂಚ ಅರಿವು ಮೂಡಲಾರಂಭಿಸಿತು. ಆದರೆ, ಆರಂಭದಲ್ಲಿ ನಮ್ಮ ಅಜ್ಞಾನ, ಆತುರದ ಬುದ್ಧಿ ನಮಗೆ ಹಿನ್ನೆಡೆ ತಂದಿತೆನ್ನಬಹುದು. ಇದರಿಂದಾಗಿಯೇ, ನಮ್ಮ ಅತಿರಥ ಮಹಾರಥರೆಲ್ಲಾ ಒಬ್ಬೊಬ್ಬರಾಗಿ ಉದುರಿಹೋದರು. ಇದನ್ನೆಲ್ಲಾ ನೋಡುತ್ತಾ ನೋಡುತ್ತಾ ಗುರು ಶುಕ್ರಾಚಾರ್ಯ ಕುಂದಿಹೋಗಲಾರಂಭಿಸಿದರು. ನಾನು, ಅವರ ಕೊನೆಯ ಆಶಾಕಿರಣವಾಗಿದ್ದೆ ಅನ್ನಿಸುತ್ತದೆ.

ಶುಕ್ರಾಚಾರ್ಯ, ನನ್ನನ್ನು ಅವರ ಬ್ರಹ್ಮಾಸ್ತ್ರದಂತೆ ಸಿದ್ಧಮಾಡಿದ್ದರು. ಹಾಗಾಗಿ, ದಾನವರಲ್ಲಿ ಇದ್ದ ಕುಂದುಕೊರತೆಗಳು ನನ್ನಲ್ಲಿ ನುಸುಳದಂತೆ, ದೇವತೆಗಳಲ್ಲಿ ಇದೆಯೆನ್ನಲಾದ ಎಲ್ಲಾ ಒಳ್ಳೆಯ ಅಂಶಗಳು ನನ್ನಲ್ಲಿ ಮೈತಳೆಯುವಂತೆ ಜಾಗರೂಕತೆಯಿಂದ ಬೆಳೆಸಿದರು. ಈ ನೆನಪುಗಳು ಮತ್ತೊಮ್ಮೆ ನನ್ನ ಬದುಕು ಕಣ್ಮುಂದೆ ಹಾದು ಹೋಗುವಂತೆ ನನ್ನನ್ನು ಕಾಡುತ್ತಿದೆಯಲ್ಲ...

ನೋಡುಗರ ದೃಷ್ಟಿಯಲ್ಲಿ, ನನ್ನ ಬದುಕು ಚೆನ್ನಾಗಿಯೇ ಇತ್ತು. ಹೆತ್ತವರ ಪ್ರೀತಿ, ಗುರುಗಳ ಕಾಳಜಿ ಮತ್ತು ನನ್ನ ಪ್ರಜೆಗಳ ಹೃದಯಪೂರ್ವಕ ಗೌರವ ನನ್ನ ರಕ್ಷಿಸುತ್ತಿತ್ತು. ಇವುಗಳ ಆಧಾರದ ಮೇಲೆ ನಾನು ಜಗವನ್ನೇ ಗೆಲ್ಲುವ ಆಲೋಚನೆ ಮಾಡುವಷ್ಟು, ನನ್ನ ಮುಂದೆ ಹಲವಾರು ಸಾಧ್ಯತೆಗಳಿದ್ದವು. ನಾನು ಕೂಡ, ನನ್ನ ಜನರ ಉತ್ತಮ ಭವಿಷ್ಯಕ್ಕಾಗಿ ಒಂದು ಉತ್ತಮ ನಿರ್ಧಾರ ತೆಗೆದುಕೊಂಡೆ ಅನ್ನಿಸುತ್ತೆ. ಅದರ ಕುರಿತು ನನಗೆ ಯಾವುದೇ ವಿಷಾದವಿಲ್ಲ. ನಿಜ ಹೇಳಬೇಕೆಂದರೆ, ವರ್ತಮಾನದಲ್ಲಿ ನಾನಿನ್ನೂ ಬದುಕುತ್ತಿರುವುದಕ್ಕೂ ಅದುವೇ ಕಾರಣ.

ಇದೊಂದು ಮೈ ಪುಳಕವಾಗುವ ಕ್ಷಣ. ಈ ಮುಸ್ಸಂಜೆಯ ಮಸುಕು ಬೆಳಕಲ್ಲಿ ಇಲ್ಲಿನ ಜನ ನನ್ನ ಹೆಸರನ್ನು ಮತ್ತೆ ಮತ್ತೆ ಜಪಿಸುತ್ತಿದ್ದಾರೆ. ಕಾಲ ಬದಲಾದರೂ ಸಂಪ್ರದಾಯ ಮಾತ್ರ ಬದಲಾಗಿಲ್ಲ. ಇಂದಿನ ತಲೆಮಾರಿಗೆ ಈ 'ಬಲಿ' ಯಾರೆಂದು ಗೊತ್ತಿಲ್ಲದಿದ್ದರೂ, ನನ್ನ ಹೆಸರು ಮಾತ್ರ ಕೂಗುತ್ತಿದ್ದಾರೆ. ಗದ್ದೆಯ ಬದಿಯಲ್ಲಿ ಅಚ್ಚುಕಟ್ಟಾಗಿ ಮೊದಲೇ ಕತ್ತರಿಸಿಟ್ಟ ಬಿದಿರಿನ ಕೋಲಿಗೆ ಬಟ್ಟೆ ಸುತ್ತಿ ಎಣ್ಣೆಯಲ್ಲಿ ಅದ್ದಿ ಅದಕ್ಕೆ ಬೆಂಕಿ ಹಚ್ಚಿ ಉರಿಸುತ್ತಾರೆ. ಗೆರಸೆಯಲ್ಲಿ ನನಗಾಗಿ, ತೆಂಗಿನಕಾಯಿ, ಅವಲಕ್ಕಿ ಮತ್ತು ಉದ್ದಿನ ಗಟ್ಟಿ ಇಟ್ಟು, 'ಬಲಿಂದ್ರ... ಕೂ... ಕೂ... ಕೂ...' ಎಂದು, ನನ್ನನ್ನು ಮರಳಿ ಭೂಮಿಗೆ ಕರೆಯುತ್ತಿದ್ದಾರೆ. ಇದಲ್ಲವೇ, ಸತ್ತು ಅಮರರಾಗುವುದೆಂದರೆ?

ದೇವರ ಪ್ರಭಾವಳಿಯಲ್ಲಿ ಈ ದಾನವ ಹೇಗೆ ಅಮರನಾದ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹದು. ಅದು ನನಗೂ ಕಾಡಿತ್ತು ಸ್ವಲ್ಪ ಕಾಲ... ನಿಧಾನವಾಗಿ ಅರ್ಥವಾಗತೊಡಗಿತು. ಸತ್ಯಕ್ಕೆ ಜಯವಿದೆ. ಕೆಲವೊಮ್ಮೆ ನಿಧಾನವಾಗಬಹುದಷ್ಟೆ.

ನಿಜ... ಇಂದು ಭೂಲೋಕದಲ್ಲಿ ಪ್ರಜೆಗಳೇ ಪ್ರಭುಗಳು. ಆದರೂ... ಎಂದೋ ಈ ಭೂಮಿಯ ಮೇಲೆ ಕೆಲವು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಬಲೀಂದ್ರ, ‘ರಾಜನಾಗಿ ಮರಳಿ ಬಾ... ನಮ್ಮನ್ನು ಆಳು...’, ಎನ್ನುವ ಜನರ ಕರೆಯ ಹಿಂದಿರುವ ಮರ್ಮವೇನು?... ಇದೊಂದು, ಕೇವಲ ಸಾಂಕೇತಿಕ ಆಚರಣೆಯೇ?... ಅಥವಾ, ಅಂದು ನನ್ನನ್ನು ತುಳಿದು, ಅವರನ್ನು ಆಳುತ್ತಾ ಬಂದಿರುವ ದೇವತೆಗಳ ನಿಜ ಬಂಡವಾಳ ಬಯಲಾಯಿತೇ?

ಅಂದು, ಮಹಾ ಪ್ರಚಂಡ ಕುಳ್ಳ ವಾಮನನ ದೆಸೆಯಿಂದ ಭೂಗತನಾಗಿದ್ದ ನಾನು, ಇಂದಿಗೂ ವರುಷಕ್ಕೆರಡು ಬಾರಿ ಭೂಲೋಕಕ್ಕೆ, ಒಂದು ದಿನದ ಸಂಚಾರ ಕೈಗೊಳ್ಳುತ್ತೇನೆ.

ದೀಪಾವಳಿಯ ಮೂರನೆಯ ದಿನದ ಮಬ್ಬುಕತ್ತಲೆಯ ಸಮಯದಲ್ಲಿ, ನನಗಾಗಿ ನಡೆಯುವ ವಾರ್ಷಿಕ ಸೇವೆಯ ಈ ಕೂಗು ನನ್ನನ್ನು ಮತ್ತೆ ಮೇಲಕ್ಕೆ ಎಳೆದು ತರುತ್ತದೆ. ಇದಾದ ಕೆಲವು ತಿಂಗಳ ನಂತರ, ಕೇರಳ ಪ್ರದೇಶದವರು ಕೂಡ, ಇಡೀ ನಾಡನ್ನೇ ಶೃಂಗರಿಸಿ 'ಓಣಂ' ಹಬ್ಬ ಆಚರಿಸುವಾಗ, ಪುನಃ ನನ್ನನ್ನು ಮೇಲಕ್ಕೆ ಕರೆದು ನಾಡನ್ನು ಶೃಂಗರಿಸಿ ಸ್ವಾಗತಿಸುತ್ತಾರೆ. ಒಂದು ರೀತಿಯಲ್ಲಿ ಯೋಚಿಸಿದರೆ ನಾನು ಬಹಳ ಅದೃಷ್ಟವಂತ. ದೇವತೆಗಳನ್ನು ಮೀರಿಸಿದ, ಇಷ್ಟೊಂದು ಜನರ ಪ್ರೀತಿ ಗಳಿಸುವುದಕ್ಕೂ ಭಾಗ್ಯ ಬೇಕಲ್ಲವೇ?

ಎಷ್ಟೋ ಯುಗಗಳು ಕಳೆದು ಹೋದರೂ, ಎಷ್ಟೊಂದು ಹೊಸ ನಾಯಕರುಗಳು ಹುಟ್ಟಿ, ಗತಿಸಿ ಹೋದರೂ, ಈ ಪ್ರದೇಶದ ಜನಸಾಮಾನ್ಯರು ಮಾತ್ರ, ಇನ್ನೂ ನನ್ನ ಮರೆಯದೇ ವರುಷಕ್ಕೆ ಎರಡು ಬಾರಿ ಪ್ರೀತಿಯಿಂದ ಬರ ಮಾಡಿಕೊಂಡು ಆದರಿಸುತ್ತಾರೆ. ಈ ಅಚಲ ನಿಸ್ವಾರ್ಥ ಪ್ರೀತಿಯ ಹಿಂದಿರುವ ಶಕ್ತಿ ಯಾವುದು? ಅಚ್ಚರಿಯೆಂದರೆ, ದೇವರುಗಳ ನೆನೆದರೆ ಇಷ್ಟಾರ್ಥ ಸಿದ್ಧಿಸಬಹುದು. ನಾನೊಬ್ಬ ದಾನವ, ದೇವರಿಂದ ತುಳಿಯಲ್ಪಟ್ಟವ. ನನ್ನ ಕರೆದರೆ, ನಾ ಏನನ್ನು ಕೊಡಬಲ್ಲೆ? ಜನ, ಇಂದಿಗೂ ನನಗೆ ದೇವರುಗಳಿಂದ ಅನ್ಯಾಯವಾಗಿದೆಯೆಂದು ತಿಳಿದಿದ್ದಾರೆಯೇ? ದೇವರುಗಳಿಗೆ ಭಯಪಡುವ ಜನರು, ಅವರ ಮುಂದೆಯೇ ನನ್ನ ಹೆಸರನ್ನು ಜೋರಾಗಿ ಕೂಗಿ ಕರೆಯುತ್ತಾರೆ, ಅಂದರೆ ವಿಸ್ಮಯವಲ್ಲವೇ?...

ಬೆಟ್ಟದ ತುದಿಯಲ್ಲಿ ಕುಳಿತು, ಕೆಳಗೆ ಭರತ ಖಂಡದ ಪಶ್ಚಿಮ ಕರಾವಳಿಯ ರೈತ ಬಂಧುಗಳು ತಮ್ಮ ಹೊಲಗಳಲ್ಲಿ ನನಗಾಗಿ ಹೊತ್ತಿಸಿದ ದೀಪಗಳನ್ನು ನೋಡುತ್ತಾ ನೋಡುತ್ತಾ, ಮನಸ್ಸು ನನ್ನನ್ನು ನನ್ನ ಬಾಲ್ಯದತ್ತ ಕೊಂಡೊಯ್ದಿತು…

ನಾನು ‘ಬಲಿ’. ನನ್ನ ಪರಿಚಯ ಇಲ್ಲದವರೂ ಕೂಡ ತಮ್ಮ ದೈನಂದಿನ ಆಡುಮಾತಿನಲ್ಲಿ 'ಬಲಿ' 'ಬಲಿದಾನ', ಪ್ರಾಣಿ ಬಲಿ', ಇತ್ಯಾದಿ ಶಬ್ದಗಳ ಮೂಲಕ ನನ್ನ ಹೆಸರ ಜಪಿಸುವುದುಂಟು. ಅವರಿಗೆ ಈ ಪದಗಳು, ನನ್ನ ಹೆಸರಿಂದಾಗಿಯೇ ರೂಢಿಗೆ ಬಂತು, ಎಂಬುವುದು ಕೂಡ ತಿಳಿದಿರಲಿಕ್ಕಿಲ್ಲ. ನನ್ನದು ಒಂದು ರೀತಿಯಲ್ಲಿ ದೇಹದ ಬಲಿದಾನ, ಲೋಕಕಲ್ಯಾಣಕ್ಕಾಗಿ. ನಾನು, ನನ್ನ ದೇಹ ದಾನ ಮಾಡಿದ್ದರಿಂದ, ನನ್ನ ಸಾವಿನ ನಂತರ ಬಲಿಯ ದಾನ, ‘ಬಲಿದಾನ’ ಎಂದು ಜನರು ಹೇಳಲಾರಂಭಿಸಿದರು. ಅನಂತರ, 'ಲೋಕಕಲ್ಯಾಣ'ಕ್ಕಾಗಿ ನಡೆದ ಎಲ್ಲಾ ದೇಹ ತ್ಯಾಗಗಳು ಬಲಿದಾನವೆಂದೇ ಕರೆಯಲ್ಪಟ್ಟವು . ಬಹುಶಃ, ಲೋಕಕ್ಕೆ ಒಳ್ಳೆಯವನಾಗಿದ್ದೂ, ದೇಹ ತ್ಯಾಗ ಮಾಡುವ ಪರಿಸ್ಥಿತಿ ಬಂದರೆ, ಅದು 'ಬಲಿದಾನ'ವಾಗುತ್ತದೆ. ಇದನ್ನು, ದೇವತೆಗಳ ಪ್ರಭಾವಳಿಗಳ ನಡುವೆ, ಜನರು ಚೆನ್ನಾಗಿ ಅರ್ಥಮಾಡಿಕೊಂಡದ್ದು ವಿಶೇಷವೇ ಸರಿ.

ಹೋಗಲಿ ಬಿಡಿ... ಈ ಹಳೆಯ ನೆನಪುಗಳು. ಈ ಭೂಮಿಯ ಮೇಲೆ ಎಷ್ಟೊಂದು ಕೋಟಿಗಟ್ಟಲೆ ಜನರು ಹುಟ್ಟಿದ್ದಾರೆ, ಜೀವಿಸಿದ್ದಾರೆ ಮತ್ತು ಸತ್ತಿದ್ದಾರೆ. ಎಲ್ಲರೂ ತರಗೆಲೆಗಳಂತೆ ಉದುರಿ ಹೋಗುತ್ತಾರೆ. ಈ ಮನುಷ್ಯರು ನೆನೆಸಿಕೊಳ್ಳುವುದು ಇತಿಹಾಸದಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸಿದವರನ್ನು ಬಿಟ್ಟರೆ, ದೇವರನ್ನು ಮಾತ್ರ. ಆದರೂ, ದಾನವಕುಲದಲ್ಲಿ ಹುಟ್ಟಿದ ನನಗೆ, ಈ ವಿಶೇಷ ಗೌರವ ಜನಸಾಮಾನ್ಯರಿಂದ. ತಮಾಷೆಯೆಂದರೆ, ಅವರಿಗೆ ದೇವರ ರಾಜ್ಯಕ್ಕಿಂತ, ಈ ದಾನವನ ರಾಜ್ಯಭಾರವೇ ಬೇಕಂತೆ. ಹೌದು, ನಾನೂ ರಾಜನಾಗಿದ್ದೆ…

ನನ್ನ ಪ್ರಜೆಗಳು ನನಗೆ ಪ್ರೀತಿಯಿಂದ 'ಬಲೀಂದ್ರ ಚಕ್ರವರ್ತಿ... ' ಎಂದು ಕರೆಯುತ್ತಿದ್ದರು. ನನ್ನ ಅಪ್ಪ, ವಿರೋಚನ ಮಹಾರಾಜ ಮತ್ತು ಅಮ್ಮ, ವಿಶಾಲಾಕ್ಷಿ. ನಾನು, ಮಹಾ ವಿಷ್ಣುಭಕ್ತ ಪ್ರಹ್ಲಾದನ ಮೊಮ್ಮಗ. ಹೀಗೆ, ನನ್ನ ವಂಶದ ರಕ್ತದಲ್ಲಿ ಅಜ್ಜ ಪ್ರಹ್ಲಾದನಿಂದ ಹಿಡಿದು ನನ್ನವರೆಗೂ ವಿಷ್ಣು ಭಕ್ತಿ ಹರಿಯುತ್ತಿತ್ತು. ಅಜ್ಜ ಹಾಕಿಕೊಟ್ಟ ಅಧಿಕಾರದ ರೂಪುರೇಷೆಯಲ್ಲಿ, ಇಷ್ಟದೇವರಾದ ವಿಷ್ಣುವಿನ ಆಶಯದಂತೆ ರಾಜ್ಯಭಾರ ಮಾಡುತ್ತಾ ಬಂದೆವು. ನಮ್ಮ ವಂಶದ ಆಡಳಿತಕ್ಕೆ ಇಡೀ ಭೂಮಂಡಲವೇ ಪ್ರೀತಿ, ಶಾಂತಿ ಮತ್ತು ಗೌರವದಿಂದ ಶರಣಾಯಿತು. ನಾವು ಕೂಡ ಸಂತೃಪ್ತರಾಗಿದ್ದೆವು. ನಮ್ಮ ಪ್ರಜೆಗಳು, ಯಾವುದೇ ರೀತಿಯ ಭೇದ ಭಾವ ಎದುರಿಸದೆ ನೆಮ್ಮದಿಯಿಂದ ಬಾಳುತ್ತಿದ್ದರು. ಗುರು ಶುಕ್ರಾಚಾರ್ಯರ ಮಾರ್ಗದರ್ಶನದಲ್ಲಿ ಆಯಾಯ ಸಂದರ್ಭಕ್ಕೆ ಅನುಸಾರವಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಇದ್ದೆವು.

ಹೀಗೆ, ನಾನು ನನ್ನ ಸಾಮ್ರಾಜ್ಯದ ಜನರ ಸುಖ ದುಃಖಗಳ ನೋಡಿಕೊಳ್ಳುತ್ತಾ ತಕ್ಕಮಟ್ಟಿಗೆ ಶಾಂತಿಯಿಂದಲೇ ದಿನ ಕಳೆಯುತ್ತಿದ್ದಾಗ, ಒಂದು ದಿನ ರಾಜಗುರು ಶುಕ್ರಾಚಾರ್ಯ ಬಹಳ ಬೇಸರದಿಂದಲೇ ನನ್ನಲ್ಲಿ ಬಂದು ಹೇಳಿದರು:

'ಬಲೀಂದ್ರ, ನೀನು ಕೇವಲ ನಿನ್ನ ಕುರಿತಷ್ಟೇ ಯೋಚಿಸುತ್ತಿದ್ದಿ. ಅಲ್ಪತೃಪ್ತ ನೀನು. ತಲತಲಾಂತರಗಳಿಂದ, ದಾನವರಿಗೆ ದೇವತೆಗಳಿಂದ ಅನ್ಯಾಯ ಆಗುತ್ತಾ ಬಂದಿದೆ. ನಾವು ಗುಲಾಮರಾಗಿಯೇ ಉಳಿದಿದ್ದೇವೆ. ವಾಸ್ತವ ಏನೆಂದರೆ, ದೇವತೆಗಳು ನಮಗಿಂತ ಬಲಹೀನರು. ಆದರೂ, ಸ್ವರ್ಗ ಲೋಕದ ಅಧಿಪತ್ಯ ಅವರಿಗೇನೇ. ತ್ರಿಮೂರ್ತಿಗಳು ಮತ್ತು ಅವರ ಬಳಗದವರ ನಿಬಂಧನಾರಹಿತ ಬೆಂಬಲವೂ ಅವರಿಗೇನೇ. ಇದನ್ನು ಪ್ರಶ್ನಿಸಲು ಹೋದ ಪ್ರತಿಯೊಬ್ಬ ದಾನವ ವೀರನೂ ದೇವತೆಗಳ ಮೋಸಕ್ಕೆ ಬಲಿಯಾಗಿದ್ದಾನೆ. ಎಷ್ಟು ಕಾಲ, ನಾವು ಹೀಗೆ ಕೈಕಟ್ಟಿಕೊಂಡು ಹೇಡಿಗಳಂತೆ ಕುಳಿತಿರಬೇಕು? ನೀನಾದರೂ, ಇದನ್ನು ಸರಿ ಮಾಡಬೇಕು. ನೀನು ದಾನವರ ವಂಶದಲ್ಲಿಯೇ ಬಲಿಷ್ಠ ಮತ್ತು ಜನಪ್ರಿಯ ರಾಜ. ನಿನ್ನ ಶಕ್ತಿಯ ಅರಿವು ನಿನಗಾದಂತಿಲ್ಲ. ಇಂದು, ನಿನ್ನ ಆಡಳಿತದಲ್ಲಿ ಇಡೀ ಭೂಮಿ ನಮ್ಮ ಕೈವಶದಲ್ಲಿದೆ. ಜನರು ಸಂತೋಷವಾಗಿದ್ದಾರೆ, ನಿನ್ನನ್ನು ಆರಾಧಿಸುತ್ತಿದ್ದಾರೆ. ನಾವೀಗ, ಹಿಂದೆಂದಿಗಿಂತಲೂ ಬಲಾಢ್ಯರಾಗಿದ್ದೇವೆ. ಇದೇ ಸರಿಯಾದ ಸಮಯ. ತಾವೇನೂ ದುಡಿಯದೇ, ನಮ್ಮ ಬೆವರಿನ ದುಡಿಮೆಯ ಮೇಲೆ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವ ದೇವತೆಗಳನ್ನು ಸದೆಬಡಿದು, ಅವರಿಗೆ ಬೆವರಿಳಿಸಿ ದುಡಿದು ಬಾಳುವ ಮಹತ್ವವನ್ನು ತಿಳಿಸುವ ಸಮಯ ಬಂದಿದೆ. ಹಾಗಾಗಿ, ತಡ ಮಾಡದೇ ಸೈನ್ಯದೊಂದಿಗೆ ಇಂದ್ರನ ಲೋಕಕ್ಕೆ ದಾಳಿ ಮಾಡಿ ಅದನ್ನು ವಶಪಡಿಸಿಕೊಳ್ಳೋಣ. ಅಲ್ಲಿಗೂ, ನಿನ್ನಂತಹ ಯೋಗ್ಯ ರಾಜನ ಅವಶ್ಯಕತೆಯಿದೆ.’

ನನಗೆ ತಕ್ಷಣ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ನನ್ನ ಅಧೀನದಲ್ಲಿದ್ದ ಸಮಸ್ತ ಭೂಮಂಡಲವನ್ನು ಚೆನ್ನಾಗಿ ನಿರ್ವಹಿಸಿ, ಅದನ್ನು ಸುಭಿಕ್ಷೆಯಾಗಿ ಮುನ್ನೆಡೆಸುವತ್ತ ಗಮನಹರಿಸಬೇಕೇ ಅಥವಾ ನನ್ನ ಪೂರ್ವಜರಿಗೆ ನಿರಂತರವಾಗಿ ದೇವತೆಗಳಿಂದಾದ ಮೋಸ, ವಂಚನೆ, ನೋವು, ಸೋಲು ಮತ್ತು ಸಾವಿಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ, ದೇವಲೋಕವನ್ನು ವಶಪಡಿಸಿಕೊಳ್ಳಲೇ?...

ಯೋಚಿಸುತ್ತಾ ಕಣ್ಣು ಮುಚ್ಚಿ ಕುಳಿತು ಕೊಂಡವನಿಗೆ ದಾನವ ಕುಲದ ಶ್ರೇಷ್ಠ ಮುಖಂಡರುಗಳ ದಾರುಣ ಅಂತ್ಯದ ಸರಣಿ ಕಣ್ಮುಂದೆ ಬಂದಂತಾಗಿ, ಗುರುಗಳ ಮನದಾಸೆಯನ್ನು ಪೂರೈಸಬೇಕೆಂದು ಕೊಂಡೆ. ನನ್ನಲ್ಲಿ ಸೈನ್ಯದ ಬಲವಿತ್ತು. ಎಲ್ಲರೂ ಸಾಹಸಿಗಳು, ನಿಷ್ಠರು ಮತ್ತು ನನ್ನ ಮಾತಿಗೆ ತಮ್ಮ ತಲೆದಂಡ ಕೊಡಲೂ ಯೋಚಿಸರು. ಹೆಚ್ಚು ತಡಮಾಡದೇ, ನನ್ನ ಪ್ರಚಂಡ ಸೈನ್ಯದೊಂದಿಗೆ, ಅವನಿಗೆ ಸೂಚನೆ ಸಿಗದಷ್ಟು ವೇಗದಲ್ಲಿ, ದೇವೇಂದ್ರನ ಒಡ್ಡೋಲಗಕ್ಕೆ ದಾಳಿಯಿಟ್ಟೆ. ಅದೆಂತಹ ದೃಶ್ಯ!...

ಅಬ್ಬಬ್ಬಾ!...ಅದೆಂತಹ ವೈಭೋಗ!..ಬೆವರು ಸುರಿಸಿ ದುಡಿಯುವವರು ನಾವು. ನಮ್ಮದು ಬೆವರಿನ ಸಂಸ್ಕ್ರತಿ. ದುಡಿಯುವ ಮೈಗೆ ನಿದ್ರೆ ಚೆನ್ನಾಗಿ ಹತ್ತುತ್ತದೆ. ಆದರೆ, ಇಲ್ಲಿ, ಏನೂ ಕೆಲಸ ಮಾಡದೇ, ನಮ್ಮಿಂದ ಕಾಣಿಕೆ ವಸೂಲಿ ಮಾಡಿ, ಹವಿಸ್ಸನ್ನು ಆಸ್ವಾದಿಸುತ್ತಾ, ಎಷ್ಟೊಂದು ಸುಖ ಅನುಭವಿಸುತ್ತಿದ್ದಾರೆ! ಇವರಿಗೆ, ಸಂಗೀತ, ನೃತ್ಯ, ಮೃಷ್ಟಾನ್ನ ಭೋಜನ, ಮದ್ಯ-ಮದಿರೆ ಬಿಟ್ಟರೆ ಬೇರೆ ಏನೂ ಮಾಡಲಿಕ್ಕೆ ಕೆಲಸ ಇಲ್ಲ. ಅವರ ಹಣೆಯಲ್ಲಿ ಎಂದಿಗೂ ಬೆವರು ಮೂಡಿರಲಿಕ್ಕಿಲ್ಲ. ಎಲ್ಲದಕ್ಕೂ ಶುಲ್ಕ ವಸೂಲಿ ಮಾಡುತ್ತಾರೆ ನಮ್ಮಿಂದ. ಅವರ ಈ ವೈಭೋಗಕ್ಕೆ ನಮ್ಮ ನಿರಂತರ ಶ್ರಮವೇ ಕಾರಣವೆಂಬುವುದನ್ನು ಮರೆತು, ನಮ್ಮನ್ನು ಕೇವಲವಾಗಿಯೇ ಕಾಣುತ್ತಾ ಬಂದಿದ್ದಾರೆ. ಇಂತಹ ವೈಭೋಗದ ನಶೆಯಲ್ಲಿ ಮೈಮರೆತು ಓಲಾಡುತ್ತಿದ್ದ ಇಂದ್ರ ಮಹಾರಾಜಾ ನನ್ನ ಬರುವಿಕೆಯಿಂದ ದಿಕ್ಕೆಟ್ಟು ಗಡಿಬಿಡಿಯಲ್ಲಿ ಜಾಗ ಖಾಲಿ ಮಾಡಿದ. ಅವನಿಗೂ ಗೊತ್ತಿತ್ತು, ಸವಾಲನ್ನು ಎದುರಿಸುವ ತಾಕತ್ತು ತನ್ನಲ್ಲಿ ಇಲ್ಲವೆಂದು. ಏನೇ ಆದರೂ ನೋಡಿಕೊಳ್ಳಲು ಮೇಲಿನ ಅಧಿಪತಿಗಳಾದ ತ್ರಿಮೂರ್ತಿಗಳಿದ್ದಾರೆ ಎನ್ನುವ ಉಡಾಫೆ. ನಿರೀಕ್ಷೆಯಂತೆ, ಕೈಗೆ ಸಿಗದೇ ಓಡಿಹೋದ. ಆಮೇಲೆ ತಿಳಿಯಿತು, ವೈಕುಂಠವಾಸಿಯಾದ ವಿಷ್ಣುವಿನ ಪಾದ ಹಿಡಿದುಕೊಂಡು ರಕ್ಷಿಸು... ಎಂದು ಬೇಡಿಕೊಂಡನಂತೆ.

ನನ್ನ ಬಳಗದವರು ಸಂಭ್ರಮಿಸಿದರು. ನಾನು ಮೊದಲೇ ಅವರಿಗೆ ಸೂಚನೆ ಕೊಟ್ಟಿದ್ದೆ, ಅಲ್ಲಿರುವ ಸಂಪತ್ತಿನ ಮೇಲೆ ಕಣ್ಣು ಹಾಕಬಾರದು, ಬದಲಾಗಿ, ಅದನ್ನು ಬಡವರಿಗೆ ಹಂಚಬೇಕು…ಅಲ್ಲಿ ಸೆರೆ ಸಿಕ್ಕ ಹೆಣ್ಣುಮಕ್ಕಳ ಸತಾಯಿಸಬಾರದು, ಬದಲಾಗಿ, ಅವರನ್ನು ಸ್ವತಂತ್ರವಾಗಿ ಬಿಟ್ಟುಬಿಡಬೇಕು.. ಅಲ್ಲಿರುವ ಗುಲಾಮರನ್ನು ಬಂಧಮುಕ್ತಗೊಳಿಸಬೇಕು..

ನನಗೆ ಗೊತ್ತಿತ್ತು.. ನಾವು ಮಾಡುವ ಒಂದು ತಪ್ಪು ಕೆಲಸವನ್ನು ಅಕ್ಷರದ ಪ್ರಪಂಚ, ರಾಕ್ಷಸಿ ಪ್ರವೃತ್ತಿಯೆಂದು ವೈಭವೀಕರಿಸುತ್ತದೆಯೆಂದು. ಹಾಗಾಗಿ, ನಾವಿಡುವ ಪ್ರತಿ ಹೆಜ್ಜೆಯಲ್ಲೂ ಎಚ್ಚರವಿರಬೇಕು. ನಾವು ಕೈಗೊಂಡ ಕೆಲಸ ಮೌನವಾಗಿ ಮುಗಿಸಿ, ಅಬ್ಬರದ ವಿಜಯೋತ್ಸವ ಮಾಡದೇ ಮರಳಿ ಊರಿಗೆ ಬಂದೆವು. ಆದರೆ, ಬರುವ ಮೊದಲು, ಇಂದ್ರನ ಒಡ್ಡೋಲಗದ ಮಂದಿಗೆ ಹೇಳಿದೆ :

‘ಇಂದಿನಿಂದ, ಈ ಲೋಕದ ಅಧಿಪತ್ಯ ದಾನವರ ಕೈಯಲ್ಲಿ. ಇನ್ನು ಏನಿದ್ದರೂ, ದೇವರೊಂದಿಗೆ ಮನುಷ್ಯರ ನೇರ ವ್ಯವಹಾರ. ಈ ಮಧ್ಯವರ್ತಿ ಕೆಲಸದಿಂದ ನಿಮಗೆ ಮುಕ್ತಿ...ನೀವು ಸಹ ನಮ್ಮಂತೆ ದುಡಿದು ಅನ್ನ ಸಂಪಾದಿಸಿ. ತಿಂದಿರುವುದು ಜೀರ್ಣವಾಗುತ್ತದೆ...’

ಮರಳಿ, ನನ್ನ ಆಸ್ಥಾನ ತಲುಪಿದ ಮೇಲೆ ಗುರುಗಳ ಕಣ್ಣಲ್ಲಿ ಆನಂದ ಭಾಷ್ಪ ಕಂಡೆ. ಅವರಿಗೆ ಸಾಕಷ್ಟು ಖುಷಿಯಾಯಿತು, ಅಷ್ಟೇ ಆತಂಕವು ಕೂಡ. ಅವರು ಇಂತಹ ಎಷ್ಟೋ ಕ್ಷಣಿಕ ಜಯವನ್ನು ಸಂಭ್ರಮಿಸಿ, ಅನಂತರ ನಿರಾಶೆಯನ್ನು ಅನುಭವಿಸಿದವರು. ಅದಕ್ಕಾಗಿ, ನನಗೆ ಎಚ್ಚರಿಸಿದರು. ಅವರ ಅಂದಾಜಿನಂತೆ, ವಿಷ್ಣು ನನ್ನನ್ನು ಸೋಲಿಸಲು ಇಂದ್ರನಿಗೆ ಸಹಾಯ ಮಾಡಬಹುದು. ಇದು ನನ್ನನ್ನು ಆಲೋಚನೆಗೆ ಹಚ್ಚಿತು.

ಆದರೆ, ಇಂದ್ರನಿಗೆ ಮರಳಿ ಪದವಿ ನೀಡಲು ಮಹಾವಿಷ್ಣು ನನ್ನ... ವಿರುದ್ಧ ನಿಲ್ಲಬಹುದೇ?... ನಾನು, ಮಹಾನ್ ವಿಷ್ಣು ಭಕ್ತ ಪ್ರಹ್ಲಾದನ ಮೊಮ್ಮಗ. ನಾನು ಕೂಡ ಅವನಂತೆ ವಿಷ್ಣುಭಕ್ತ. ಅಂದು ಹಿರಣ್ಯಕಶುಪುವಿನಿಂದ, ಪ್ರಹ್ಲಾದನನ್ನು ರಕ್ಷಿಸಿದ ವಿಷ್ಣು, ಇಂದು ನನ್ನ ವಿರುದ್ಧ ನಿಲ್ಲುವನೇ?..

ನನ್ನ ಮತ್ತು ಪ್ರಹ್ಲಾದನ ನಡುವಿನ ವ್ಯತ್ಯಾಸವೇನು? ಪ್ರಹ್ಲಾದ ಎಂದಿಗೂ ತನ್ನ ಗಡಿ ದಾಟಲಿಲ್ಲ. ದೇವತೆಗಳಿಂದ ತನ್ನ ಜನರಿಗಾಗುತ್ತಿರುವ ವಂಚನೆಯನ್ನು ಪ್ರಶ್ನಿಸಿದವನಲ್ಲ. ಹರಿನಾಮ ಜಪಿಸುವುದರಲ್ಲಿಯೇ ಜೀವನ ಕಳೆದ. ಹಾಗಾಗಿ, ದೇವರುಗಳು ಮತ್ತು ದೇವತೆಗಳು ಅವನನ್ನು ಹಾಡಿ ಹೊಗಳಿದರು. ಆದರೆ, ನಾನು ಅವರ ಸಾಮ್ರಾಜ್ಯವ ಅಲುಗಾಡಿಸಿದೆ. ಮುಂದೇನಾಗಬಹುದು?...

ನಾವು ದಾನವರು, ಏನಿದ್ದರೂ ಭರತ ಖಂಡದ ದಕ್ಷಿಣ ಪ್ರಸ್ತಭೂಮಿಯ ಕೆಳಗೆಯೇ ಇರಬೇಕು. ಉತ್ತರ ಭರತ ವರ್ಷವೇನಿದ್ದರೂ ದೇವತೆಗಳದ್ದು. ಈ ಅಲಿಖಿತ ನಿಯಮ ಪ್ರಶ್ನಿಸಿದ, ದಂಗೆಯೆದ್ದ ಪ್ರತಿ ದಾನವ ‘ರಾಕ್ಷಸ’ನಂತೆ ಕಂಡ. ಅವನನ್ನು ಸಂಹಾರ ಮಾಡಿದ ದೇವದೇವತೆಗಳು ಪೂಜನೀಯವೆನಿಸಿಕೊಂಡರು. ಆದ್ದರಿಂದ, ಈ ಬಲಿಯನ್ನೂ ನಿರ್ದಾಕ್ಷಿಣ್ಯವಾಗಿ ಬಲಿ ಕೊಡಲು ಮಹಾವಿಷ್ಣು ಸಿದ್ದನಾಗಬಹುದು, ಎನ್ನುವ ವದಂತಿ ನನ್ನ ಕಿವಿ ತಲುಪಿತು.

ನಿಜವಿರಬಹುದು... ಅವರ ಬೇಕುಬೇಡಗಳನ್ನು ಪೂರೈಸುವ ದೇವಲೋಕದ ವ್ಯವಸ್ಥೆ ಯಥಾಪ್ರಕಾರ ರಕ್ಷಿಸಲು, ಎಲ್ಲಾ ದೇವರುಗಳು ನಿಷ್ಠೆ ತೋರಿಸುತ್ತಾರೆ.

ನನಗೀಗ ಎಲ್ಲಾ ಸ್ಪಷ್ಟವಾಗತೊಡಗಿತು-ನಾವು ದಾನವರು ಹರಿ ಭಕ್ತನಾಗಿರಲಿ, ಹರ ಭಕ್ತನಾಗಿರಲಿ, ನಮಗೆ ಉಳಿಗಾಲವಿಲ್ಲ. ನಮ್ಮ ಸಂಹರಿಸುವಾಗ ನಮ್ಮ ಅಂತರಾಳದ ಭಕ್ತಿ ಅವರಿಗೆ ಕಾಣಿಸುವುದಿಲ್ಲ. ಅಂದ ಹಾಗೆ ನಾವೇಕೆ ದಾನವರೆಂದು ಕರೆಸಿಕೊಳ್ಳುತ್ತೇವೆ? ನಮ್ಮ ಮೈಬಣ್ಣ ಕಪ್ಪೆಂದೇ? ಉತ್ತರದವರೇಕೆ ದೇವತೆಗಳಾಗುತ್ತಾರೆ? ಬೆಳ್ಳಗಿರುವವರೆಂದೇ? ನಮ್ಮವರ ದುಡಿಮೆಯ ಬೆವರೇ ಅಲ್ಲವೇ ಅವರನ್ನು ಸಾಕುತ್ತಿರುವುದು? ಇನ್ನೊಂದು ವಿಸ್ಮಯವೆಂದರೆ, ನಮ್ಮವರಿಗೆ ದುಡಿಮೆ ಅನಿವಾರ್ಯ, ಕೂತು ತಿನ್ನುವ ಸೌಲಭ್ಯವಿಲ್ಲ. ಆದರೆ, ಅವರಲ್ಲಿ ಕೆಲವರು ಅಧ್ಯಾತ್ಮದ ದಾರಿಯಲ್ಲಿ ಸಾಗಲೆಂದು, ಮನೆ ಸಂಸಾರ ಬಿಟ್ಟು, ನಾವು ದುಡಿಯುವವರು ಪುಣ್ಯಗಳಿಸಲು ಕೊಡಬೇಕಾಗುತ್ತದೆ ಎನ್ನಲಾದ ಭಿಕ್ಷೆಯಲ್ಲಿಯೇ, ಜೀವನ ಸಾಗಿಸಿ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ನಮ್ಮ ಜನರಿಗೆ ಈ ಭಾಗ್ಯವಿದೆಯೇ? ನಮಗ್ಯಾರು ಭಿಕ್ಷೆ ಹಾಕುವವರು?...

ನಾವು ದೈಹಿಕವಾಗಿ ಬಲಾಢ್ಯರೇನೋ, ನಿಜ. ಆದರೆ, ಜ್ಞಾನದ ಪ್ರಪಂಚದಿಂದ ನಮ್ಮನ್ನು ವಂಚಿಸಿದ್ದಾರೆ. ಒಂದು ವೇಳೆ ಜ್ಞಾನವೂ ನಮ್ಮದಾಗಿದ್ದರೇ... ನಾವೇ ತ್ರಿಲೋಕದ ಅಧಿಪತಿಗಳಾಗಿ ಬಿಡುತ್ತಿದ್ದೆವು. ಬಹುಶಃ, ಈ ದೇವತೆಗಳು ನಮ್ಮಂತೆ ದೈಹಿಕ ದುಡಿಮೆ ಮಾಡುತ್ತಿದ್ದರು, ನಮಗೆ ಕಪ್ಪಕಾಣಿಕೆ ಒಪ್ಪಿಸುತ್ತಿದ್ದರೆನಿಸುತ್ತದೆ.

ಛೆ, ಛೆ, ನಾನು ಕೂಡ ದೇವತೆಗಳಂತೆ ಆಲೋಚಿಸಬಹುದೇ? ಇಲ್ಲ, ಇದು ಸರಿಯಲ್ಲ. ಈ ಗುಲಾಮಗಿರಿ ಯಾರದಾದರೂ ಅಂತ್ಯಗೊಳಿಸಬೇಕಲ್ಲವೇ?...

ಪ್ರಪಂಚದಲ್ಲಿ ನಾ ಕಾಣಬಯಸುವ ಬದಲಾವಣೆಯನ್ನು ತರುವ ಅವಕಾಶ ನನಗೆ ಸಿಕ್ಕಿದೆ ಈಗ. ಇಂದು ಆಗದ್ದು, ನಾಳೆಯೂ ಆಗದು. ಹೌದು. ಪ್ರಪಂಚದಲ್ಲಿ ಅಸಮಾನತೆ ಸಾಮಾನ್ಯ. ಅದನ್ನು ಅರಿತುಕೊಂಡು ಸಮಾನತೆ ಸೃಷ್ಟಿಸುವವನೇ ನಿಜವಾದ ಮನುಷ್ಯ. ಇಂದಿನಿಂದ ದೇವತೆಗಳು, ದಾನವರು ಸಮಾನರು. ಯಾರೂ, ಯಾರ ಗುಲಾಮರಲ್ಲ. ನಾವೆಲ್ಲಾ ಒಟ್ಟಾಗಿ ಸಹಬಾಳ್ವೆ ನಡೆಸಬಹುದಲ್ಲವೇ?...

ನಾನು ದೇವತೆಗಳಿಗೆ ಹೇಳ ಹೊರಟಿದ್ದು ಇಷ್ಟೇ- ‘ನಾವೂ ಕೂಡ ನಿಮಗೆ ಸಮಾನರು, ನಮಗೂ ಸ್ವಾಭಿಮಾನ ಇದೆ. ನಾವು, ಕೇವಲ ದುಡಿಯುವವರಲ್ಲ. ಆಳುವುದಕ್ಕೂ, ನಮಗೆ ಗೊತ್ತು. ಆದರೆ, ಇನ್ನೊಬ್ಬರ ದುಡಿಮೆಗೆ ಜೋತುಬಿದ್ದು ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವ ಹಕ್ಕು ಯಾರಿಗೂ ಇಲ್ಲ. ಇದನ್ನು ಸರಿ ಮಾಡಿ, ಸಮಾನತೆಯ ಹೊಸ ಅಧ್ಯಾಯ ಜೊತೆಯಾಗಿ ಬರೆಯೋಣ…’

ನನ್ನ ಯೋಜನೆ ಮತ್ತು ಅಳವಡಿಕೆಗೆ ಮಧ್ಯೆ ಅಡ್ಡಿ ಇದ್ದುದು ವಿಷ್ಣು ಮಾತ್ರ. ಅವನು ಯಾವಾಗಲೂ ದೇವತೆಗಳ ತಪ್ಪುಗಳಿಗೂ ಪರವಾಗಿ ನಿಂತು ರಕ್ಷಿಸುತ್ತಾ ಬಂದವ. ಈಗ, ಅವನ ಒಬ್ಬ ಅಪ್ಪಟ ಭಕ್ತ ಮತ್ತು ದೇವತೆಗಳ ನಾಡಿನ ಮಧ್ಯೆ ಹೋರಾಟದಲ್ಲಿ, ಅವನ ಆಯ್ಕೆ ಯಾರಿರಬಹುದು? ...’

ಹೆಚ್ಚು ತಲೆ ಕೆಡಿಸಿಕೊಳ್ಳುವ ಪ್ರವೃತ್ತಿ ನನ್ನದಲ್ಲ. ಕೈಗೊಂಡ ನಿರ್ಧಾರಕ್ಕೆ ಬದ್ಧನಾಗಿರುವುದು ನನ್ನ ಧ್ಯೇಯ. ದೇವಲೋಕ ವಶಪಡಿಸಿಕೊಂಡ ಮೇಲೆ ಮರಳಿ ನನ್ನ ರಾಜ್ಯಭಾರ ಮುಂದುವರಿಸಿದೆ. ನನ್ನ ಆಡಳಿತದ ಮಾದರಿಯನ್ನು ದೇವಲೋಕದಲ್ಲೂ ಜಾರಿಗೆ ತಂದೆ. ಆರಂಭದಲ್ಲಿ ದೇವತೆಗಳು ಪ್ರತಿಭಟಿಸಿದರು. ಎಂದೂ ದೇಹ ದಂಡಿಸದ ಜೀವಗಳವು. ಅರ್ಥಮಾಡಿಕೊಂಡೆ. ಹೆಚ್ಚು ಒತ್ತಾಯಿಸಲಿಲ್ಲ. ಆದರೆ, ದುಡಿಯದವರಿಗೆ ತಿನ್ನಲಿಕ್ಕೆ ಏನೂ ಸಿಗದಂತೆ ನೋಡಿಕೊಂಡೆ. ದೇವತೆಗಳಿಗೆ ಮೊದಲ ಬಾರಿಗೆ ಹಸಿವು ಅಂದರೇನು ಗೊತ್ತಾಯಿತು. ಅವರು ದುಡಿಯಲೇ ಬೇಕಾಯಿತು. ಬದಲಾವಣೆಗೆ ಅನಿವಾರ್ಯವಾಗಿ ಹೊಂದಿಕೊಳ್ಳಲಾರಂಭಿಸಿದರು. ತಿಂಗಳುಗಳು ಉರುಳಿದವು. ನನಗೆ ಅಚ್ಚರಿಯಾಯಿತು. ಇಂದ್ರನ ಸುಳಿವೇ ಇಲ್ಲ...

ಗುರು ಶುಕ್ರಾಚಾರ್ಯರು ಬಹಳ ಕಾಲದ ನಂತರ ಇಷ್ಟೊಂದು ಸಂತೋಷವಾಗಿದ್ದರು. ಒಂದು ದಿನ ನನ್ನಲ್ಲಿ ಹೇಳಿದರು:

'ದಾನವ ಕುಲಕ್ಕೆ ಇದೊಂದು ಅಭೂತಪೂರ್ವ ಗಳಿಗೆ. ಎಷ್ಟೋ ಪೀಳಿಗೆಗಳ ಸೋಲು, ಅವಮಾನ, ಮೋಸಕ್ಕೆ ತಕ್ಕ ಸೇಡು ತೀರಿಸಿಕೊಂಡಿದ್ದೇವೆ. ಇದನ್ನು ಶಾಶ್ವತವಾಗುವಂತೆ ನಾವು ನೋಡಿಕೊಳ್ಳಬೇಕು. ಇದಕ್ಕಾಗಿ, ನೀನು ಭೂಲೋಕದಲ್ಲಿ ಹಿಂದೆಂದೂ ಕಾಣದ ಮಹಾ ಅಶ್ವಮೇಧ ಯಾಗ ಮಾಡಬೇಕಾಗಿದೆ.'

ನಾನು ಗುರುಗಳ ಆಶಯಕ್ಕೆ ಸಮ್ಮತಿಸಿದೆ. ಮಹಾ ಯಾಗಕ್ಕಾಗಿ ಸಿದ್ಧತೆ ಮಾಡಿಕೊಳ್ಳತೊಡಗಿದೆ. ದಾನವರ ನಾಡಿನಲ್ಲಿ ಸಂಭ್ರಮಾಚರಣೆ ಬಹಳ ವಿರಳ. ಈ ಪೂಜೆ ಪುನಸ್ಕಾರ ಎಲ್ಲಾ ಲೌಕಿಕ ಆಸೆಗಳ ಹುಚ್ಚಿನ ಶ್ರೀಮಂತರಿಗೆ. ನನಗಾಗಿ ಏನೂ ಬೇಕಿರಲಿಲ್ಲ. ಆದರೂ, ಗುರುಗಳು ಹೇಳಿದಂತೆ, ಇದರಿಂದ ಏನಾದರೂ ಒಳ್ಳೆಯದಾದರೆ ಶ್ರೇಯಸ್ಸು ನನ್ನವರಿಗೆ, ನಾನು ಇಲ್ಲಿ ನೆಪ ಮಾತ್ರ, ಅಂದುಕೊಂಡೆ.

ಅಂತೂ, ಯಾಗದ ಸಿದ್ಧತೆ ನಡೆಯಿತು. ನನ್ನ ಕುಲ ಬಾಂಧವರು ಊರೆಲ್ಲಾ ಶೃಂಗರಿಸಿದರು. ನಾಡಿನಲ್ಲಿ ಹಬ್ಬದ ವಾತಾವರಣ. ಯಾಗಕ್ಕಾಗಿ, ಶ್ರೇಷ್ಠ ಪುರೋಹಿತರ ದಂಡನ್ನೇ ಕರೆಸಿಕೊಂಡೆ. ಅವರ ಸತ್ಕಾರದಲ್ಲಿ ಏನೂ ಕೊರತೆಯಾಗದಂತೆ ನೋಡಿಕೊಂಡೆ. ಅಲ್ಲಿಗೆ ದಾನ ಪಡೆಯಲೆಂದೇ ಭರತವರ್ಷದ ಮೂಲೆಮೂಲೆಯಿಂದ ಬಂದಿದ್ದ ಬ್ರಾಹ್ಮಣರಿಗೆ ವಸ್ತ್ರ, ಫಲಾಮೃತ, ಗೋವುಗಳು, ರಥಗಳು, ಆಭರಣಗಳು, ಆನೆಗಳು, ಚಿನ್ನ, ಗ್ರಾಮಗಳು, ಕೃಷಿ ಭೂಮಿ, ಇತ್ಯಾದಿ, ಏನೆಲ್ಲಾ ದಾನವಾಗಿ ಕೊಡಬಹುದೋ, ಅದನ್ನೆಲ್ಲಾ ಉಡುಗೊರೆಯಾಗಿ ಕೊಡಲಾರಂಭಿಸಿದೆ. ಇದರ ಸುದ್ದಿ ಹಬ್ಬಿದಂತೆ, ಜನರ ಸರದಿ ಹಿಗ್ಗಿತು. ಇದು, ಹಲವು ತಿಂಗಳುಗಳವರೆಗೆ ಮುಂದುವರಿಯಿತು...

ಅಂತೂ, ಒಂದು ದಿನ ಬಂದ ಕುಳ್ಳ ವಾಮನ… ಅವನು ಯಾವ ಅವತಾರದಲ್ಲಿ ಬಂದಿದ್ದರೂ, ನಾನು ಗುರುತು ಹಿಡಿಯಬಹುದಾದಷ್ಟು ವಿಷ್ಣುಭಕ್ತಿ ನನ್ನಲ್ಲಿತ್ತು. ಅದು ಅವನಿಗೂ ಗೊತ್ತಿತ್ತು. ನಾನು, ನನ್ನ ಭಕ್ತಿ ಮೆಚ್ಚಿ ಆಶೀರ್ವದಿಸಲು ಬಂದಿದ್ದ ಅಂದುಕೊಂಡೆ. ಆದರೆ, ಅವನು ಬಂದಿದ್ದು ತನ್ನ ದೇವಲೋಕ ಉಳಿಸಲು, ಎಂದು ಆಮೇಲೆ ಗೊತ್ತಾಯಿತು. ಅವನ ಈ ಹೊಸ ವೇಶ ಕಂಡು ನನಗೆ ಮನಸ್ಸಿನಲ್ಲಿಯೇ ನಗು ಬಂದಿತು. ಆದರೂ, ಏನು ಅರಿಯದವನಂತೆ ನಟಿಸಿದೆ.

ಅವನು ಅಂದು, ಋಷಿ ಕಶ್ಯಪ ಮತ್ತು ಅದಿತಿ ಅವರ ಮಗನೆಂದು ಹೇಳಿಕೊಂಡು, ಬ್ರಾಹ್ಮಣ ವಟುವಾಗಿ, ಲೋಕದ ಕಣ್ಣಿಗೆ ಮುಗ್ದ ಮುಖವಾಡದ ಬ್ರಹ್ಮಚಾರಿಯಾಗಿ ಬಂದ. ಅವನ ಮುಖದ ತೇಜಸ್ಸನ್ನು ನೋಡಿ ಅಲ್ಲಿ ನೆರೆದಿದ್ದ ಜನರೆಲ್ಲಾ ಭಾವಪರವಶರಾದರು. ಇದು ಸ್ವಾಭಾವಿಕ. ಎಷ್ಟಾದರೂ, ಅವನು ಮೂರು ಲೋಕದ ಸೂತ್ರದಾರನಲ್ಲವೇ? ಆ ಪ್ರಭೆ ಅವನಲ್ಲಿತ್ತು.

ಅವನ ನೋಡಿ ನನ್ನ ಗುರುಗಳಿಗೂ ಕಸಿವಿಸಿಯಾಯಿತು. ಅವರು, ಸದ್ದಿಲ್ಲದೇ ನನ್ನ ಬಳಿ ಬಂದು ಕಿವಿಯಲ್ಲಿ ಪಿಸುಗುಟ್ಟಿದರು:

'ಮಗು, ಬಲಿ...ಆ ಬ್ರಾಹ್ಮಣ ವಟುವನ್ನು ನೋಡಿದರೆ ಏನೋ ಕೆಟ್ಟ ಮುನ್ಸೂಚನೆಯಂತೆ ಕಾಣಿಸುತ್ತದೆ. ನೀನು ಅವನ ಬಗ್ಗೆ ಜಾಗ್ರತೆ ವಹಿಸು. ಅವನು ಏನೇ ಕೇಳಿದರೂ, ಚೆನ್ನಾಗಿ ಯೋಚಿಸಿ ದಾನ ನೀಡು. ನಿನ್ನ ಉತ್ತರದ ಆಧಾರದ ಮೇಲೆ ನಮ್ಮ ದಾನವ ಸಾಮ್ರಾಜ್ಯದ ಉಳಿವು ನಿಂತಿದೆ, ಅನ್ನಿಸುತ್ತಿದೆ. ಹಾಗಾಗಿ, ಸಮಾಧಾನದಿಂದ ನಡೆದುಕೋ. ಆವೇಶ ಬೇಡ. ದಾನಶೂರನೆನಿಸಿಕೊಳ್ಳುವ ಹುಚ್ಚು ಬೇಡ. ಕೆಲವೊಮ್ಮೆ, ನಮ್ಮನ್ನು ಆಶ್ರಯಿಸಿರುವವರ ಉಳಿವಿಗಾಗಿ ನಮ್ಮ ಆದರ್ಶಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ತಪ್ಪೇನಿಲ್ಲ. ಇದು, ನೀನು ನಿನ್ನವರಿಗಾಗಿ ಮಾಡುವ ರಾಜಿ.’

ನಾನು ಸುಮ್ಮನೆ ಮುಗುಳ್ನಕ್ಕೆ. ವಾಮನ ಸರದಿಯಲ್ಲಿ ನಿಂತಿದ್ದ. ಅವನ ಮುಂದಿದ್ದ ಬ್ರಾಹ್ಮಣರು ತಮಗೆ ಬೇಕಾಗಿದ್ದನ್ನು ಕೇಳಿದರು, ನಾನು ಕೊಟ್ಟಂತೆ ಜಾಗ ಖಾಲಿ ಮಾಡಿದರು. ಅಂತೂ, ಅವನು ಕೊನೆಗೂ ನನ್ನೆದುರು ನಿಂತ.

ನಾನು ತಲೆಯೆತ್ತಿ ಅವನ ಮುಖ ನೋಡಿದೆ. ಅವನ ಮುಖದಲ್ಲಿ ಪರಿಚಯದ ನಗು ಮೂಡಿತು. ಚಿಕ್ಕ ಮೂರ್ತಿ. ಜನಿವಾರ ದರಿಸಿದ್ದ. ಬೋಳಾದ ತಲೆಯಲ್ಲೊಂದು ಪುಟ್ಟ ಜುಟ್ಟು. ಮುಖದಲ್ಲಿ ಉದ್ದನೆಯ ನಾಮ. ಒಂದು ತುಂಡು ಬಟ್ಟೆಯನ್ನೇ ಎರಡು ಭಾಗ ಮಾಡಿ, ಸೊಂಟ ಸುತ್ತಲೂ ಒಂದು, ಮತ್ತೊಂದು ತುಂಡು ಭುಜ ಮೇಲೆ ತೊಟ್ಟಿದ್ದ. ಅವನ ವೇಷ ನೋಡಿ ಮತ್ತೊಮ್ಮೆ ನಗು ಬಂತು. ನನಗೆ ಗೊತ್ತಾಯಿತು, ಅವನು ಯಾಕೆ ಬಂದಿದ್ದನೆಂದು. ನಾನು ಈಗ ಕೂತಿರುವುದು ದಾನ ಮಾಡಲೆಂದು. ಇದೆ ಸರಿಯಾದ ಸಮಯ, ತನಗೆ ಬೇಕಾದ ದಾನ ಕೇಳಲು, ಎಂದು ವಿಷ್ಣು ಯೋಚಿಸಿರಬೇಕು. ಹೇಗಾದರೂ ಮಾಡಿ ಇಂದ್ರನಿಗೆ ದೇವಲೋಕದ ಅಧಿಪತ್ಯ ವಾಪಸ್ಸು ಕೊಡಲೇ ಬೇಕಲ್ಲವೇ? ಹಾಗಿದ್ದರೆ, ನನ್ನ ಭಕ್ತಿಗೆ ಬೆಲೆ ಇಲ್ಲವೇ? ನಾನೇನು ಅಧರ್ಮ ಮಾಡಿದೆನೆಂದು ನನಗೆ ಈ ಶಿಕ್ಷೆ? ಸ್ವಜನರ ಹಿತವಷ್ಟೇ ಮುಖ್ಯವೇ? ಈ, ನಾವು, ಉಳಿದವರು, ನಮ್ಮ ನಡುವಿನ ಭದ್ರ ಬೇಲಿ, -ಯಾಕೆ ವಿಷ್ಣುವಿಗೂ ಕೂಡ ಮುರಿಯಬೇಕೆನಿಸಲಿಲ್ಲ?...

ಆದರೆ, ಹೆಚ್ಚು ಯೋಚನೆಗೆ ಸಮಯವಿರಲಿಲ್ಲ. ತಕ್ಷಣ ಕಾರ್ಯೋನ್ಮುಖವಾಗಬೇಕಾಗಿದೆ. ಎದುರಿಗೆ ಅವನಿದ್ದಾನೆ. ದೀರ್ಘವಾಗಿ ಉಸಿರೆಳೆದುಕೊಂಡು ಅವನ ಕಣ್ಣನ್ನೇ ದಿಟ್ಟಿಸಿ ಕೇಳಿದೆ:

'ನಿನಗೆ ಏನು ಬೇಕು?’

ನನ್ನ ದೃಷ್ಟಿಯ ತೀಕ್ಷ್ಣತೆಗೆ ಅವನು ಕಸಿವಿಸಿಗೊಂಡು ತನ್ನ ಕಣ್ಣನ್ನು ನೆಲಕ್ಕೆ ನೆಟ್ಟು ಮೆಲುದನಿಯಲ್ಲಿ ಹೇಳಿದ:

'ದಾನಶ್ರೇಷ್ಠ ಬಲೀಂದ್ರ ಚಕ್ರವರ್ತಿ. ನೀನು ಏನು ಕೇಳಿದರೂ ಕೊಡುವವನೇ. ಆದರೆ, ನಾನೊಬ್ಬ ಸಾಮಾನ್ಯ ಬ್ರಾಹ್ಮಣ. ನನಗೆ ಬೇರೇನೂ ಆಸೆ ಇಲ್ಲ. ಕೇವಲ ಮೂರು ಅಡಿ ಜಾಗ ಕೊಡು, ಸಾಕು.'

ಮೂರು ಅಡಿ ಜಾಗಕ್ಕೇ ಈ ಅವತಾರವೇ?... ಇದು ಅಷ್ಟು ಸರಳವಾಗಿಲ್ಲ. ಎಷ್ಟೊಂದು ಒಳ್ಳೆಯವನಾಗಲು ವ್ರತಃ ಪ್ರಯತ್ನಿಸುತ್ತಿದ್ದಾನೆ. ಒಂದು ದಿನ ಜನರಿಗೆ ಕಾಣಿಸದೇ?... ಆದರೂ ಸಾವರಿಸಿಕೊಂಡು ಕೇಳಿದೆ:

. 'ಇಷ್ಟೇನಾ? ಇನ್ನೂ ಏನಾದರೂ ಕೇಳು.’

ನಾನು ಮುಗುಳ್ನಕ್ಕೆ. ಅವನು ಗಲಿಬಿಲಿಗೊಂಡ.

ನಿಧಾನವಾಗಿ ಕಂಪಿಸುವ ಧ್ವನಿಯಲ್ಲಿ ಹೇಳಿದ:

'ಅಷ್ಟೇ ಸಾಕು. ನನಗೆ ದುರಾಸೆಯಿಲ್ಲ. ಅಲ್ಪ ತೃಪ್ತ ನಾನು.'

ನಿನಗೆ ದುರಾಸೆ ಇಲ್ಲದಿರಬಹುದು. ಆದರೆ, ದುರಾಸೆಯವರನ್ನು ಯಾಕೆ ಪೋಷಿಸಬೇಕು, ಅದೂ ನಿನ್ನ ನಿಜ ಭಕ್ತರ, ಶ್ರಮಿಕರ ಬಲಿಕೊಟ್ಟು?, ಮನಸ್ಸಿನಲ್ಲಿ ಅಂದುಕೊಂಡು ಹೇಳಿದೆ:

'ಸರಿ, ತೆಗೆದುಕೋ'

ಅವನು ತನ್ನ ಅಸಲಿ ಆಟ ಶುರು ಮಾಡಿದ. ವಾಮನ ಹೇಳಿದ:

'ಆದರೆ… ಒಂದು ಷರತ್ತು…'ಅಲ್ಲಿಗೆ ನಿಲ್ಲಿಸಿದ.

ನಾನು ಮಾನಸಿಕವಾಗಿ ಸಿದ್ಧನಾಗಿದ್ದೆ- ಅದೇನೇ ಆಗಲಿ, ನನ್ನಲ್ಲಿರುವ ಒಳ್ಳೆಯತನ ಬದಲಾಗದು. ಜೀವ ಮತ್ತು ಅಧಿಕಾರದ ಆಸೆಗಾಗಿ ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಶಾಂತವಾಗಿ ಕೇಳಿಸಿಕೊಂಡೆ. ಅವನು ತನ್ನ ಮಾತನ್ನು ಮುಂದುವರಿಸಿದ:

‘ನನ್ನ ಕಾಲು ಎಲ್ಲಿ ಇಡುತ್ತೇನೋ, ಅದೆಲ್ಲಾ ನನ್ನದೇ.’

'ಸರಿ. ಹಾಗೆಯೆ ಆಗಲಿ', ಎಂದೆ.

ಅವನು ತನ್ನ ಮೊದಲ ಅಡಿಯನ್ನಿಟ್ಟ. ತನ್ನ ಬಲಗಾಲನ್ನು ಭೂಮಿಯ ಮೇಲಿಟ್ಟು ಹೇಳಿದ:

‘ನಾನೀಗ ಭೂಮಿಯ ಮೇಲೆ ಕಾಲಿಟ್ಟಿದ್ದೇನೆ. ಹಾಗಾಗಿ, ಇಡೀ ಭೂಮಿ ನನ್ನದೇ.’ ಅಂದ.

ನನಗೀಗ ಅರ್ಥವಾಯಿತು. ಇದು ಕೇವಲ ಇಂದ್ರನಿಗೆ ಪದವಿ ಮರಳಿಸುವ ಯೋಜನೆ ಮಾತ್ರವಲ್ಲ, ನಾನೆಂದೂ ಮರಳಿ ಪ್ರಯತ್ನ ಮಾಡದಂತೆ ನನ್ನ ಮುಗಿಸುವ ಕೆಲಸ. ಆಗ, ನಾನು ಅಂದುಕೊಂಡೆ- ಪದವಿ ಶಾಶ್ವತವಲ್ಲ. ಇಂತಹ ಸ್ಥಿತಿಯಲ್ಲಿ ನನ್ನ ನಡವಳಿಕೆಯಿಂದ ಜನರಿಗೆ ಕೊಡುವ ಸಂದೇಶ ಮುಖ್ಯವೆನಿಸಿತು.

‘ಆಯಿತು.. ಹಾಗೆಯೆ ಆಗಲಿ.’ ಅಂದೆ.

ಈಗ, ತನ್ನ ಎಡಗಾಲನ್ನು ಎತ್ತಿ ಆಕಾಶದತ್ತ ಉತ್ತರ ದಿಕ್ಕಿಗೆ ಚಾಚಿದ ಮತ್ತು ನನ್ನತ್ತ ತಿರುಗಿ ಹೇಳಿದ:

‘ಈಗ, ಆಕಾಶ ಅಂದರೆ ದೇವಲೋಕವೂ ನನ್ನದೇ.’

ನನಗೆ, ಇನ್ನು ಅವನಲ್ಲಿ ಮಾತನಾಡಿ ಪ್ರಯೋಜನವಿಲ್ಲ, ಅಂತ ಗೊತ್ತಾಯಿತು. 'ಎಲ್ಲಾ, ನಿನ್ನಿಷ್ಟದಂತೆ.' ಎಂದು ದೀರ್ಘವಾಗಿ ಉಸಿರೆಳೆದು ಕೊಂಡೆ. ಪಕ್ಕದಲ್ಲಿದ್ದ ಚೆಂಬನ್ನು ಕೈಗೆತ್ತಿಕೊಂಡು ಗಟಗಟನೆ ನೀರು ಕುಡಿದೆ. ನನ್ನ ಅಂತ್ಯ ಸಮೀಪಿಸುತ್ತಿರುವುದು ಗೊತ್ತಾಯಿತು.

‘ಇನ್ನೊಂದು ಅಡಿ ಜಾಗ ಎಲ್ಲಿಂದ ಕೊಡುತ್ತಿ?’ ಎಂದ, ಸಭಿಕರನ್ನು ನೋಡುತ್ತಾ. ನನ್ನ ದಿಟ್ಟಿಸಿ ನೋಡುವುದು ಅವನಿಂದಾಗಲಿಲ್ಲ ಅನ್ನಿಸುತ್ತದೆ..

ನಾನು ಉತ್ತರಿಸಲಿಲ್ಲ. ಸುಮ್ಮನೆ ಕೈಮುಗಿದು ತಲೆಬಾಗಿ ಅಲ್ಲಿಯೇ ಕುಳಿತೆ. ಆದರೂ, ಮನಸ್ಸಿನ ಮೂಲೆಯಲ್ಲಿ ಅಲ್ಪಸ್ವಲ್ಪ ಅಸೆ ಇನ್ನೂ ಜೀವಂತವಾಗಿತ್ತು. ' ಅವನು ಎಷ್ಟಾದರೂ ನನ್ನ ಆರಾಧ್ಯ ದೈವ. ನನ್ನ ಮುಗಿಸುವಷ್ಟು ಸ್ವಜನ ಪಕ್ಷಪಾತ ಮಾಡಲಿಕ್ಕಿಲ್ಲ. ಅಂದುಕೊಂಡಿದ್ದೆ. ಬದಲಾಗಿ ಹೀಗೆ ಹೇಳಿಬಿಡುತ್ತಾನೆ, ಅಂದುಕೊಂಡೆ:

'ಮಗು, ನಾನು ನಿನ್ನ ಸತ್ವ ಪರೀಕ್ಷೆ ಮಾಡಿದೆ. ಇದರಲ್ಲಿ ನೀನು ಗೆದ್ದಿ. ಹಾಗಾಗಿ, ಮೂರನೇ ಅಡಿ ಜಾಗ ನನಗೆ ಬೇಕಾಗಿಲ್ಲ. ಇಂದ್ರನ ದೇವಲೋಕ ವಾಪಸ್ಸು ಮಾಡು. ನೀನು ಭೂಲೋಕ ಆಳು. ಹೇಗೂ ಚೆನ್ನಾಗಿ ರಾಜ್ಯಭಾರ ಮಾಡುತ್ತಿದ್ದಿ. ನಿನಗೆ ಒಳ್ಳೆಯಾದಾಗಲಿ.'

ಆದರೆ, ದಾನವರಿಗೆ ನ್ಯಾಯ ಸಿಗುವ ನಿರೀಕ್ಷೆ ಮರೀಚಿಕೆಯಾಗಿಯೇ, ನನ್ನ ವಿಷಯದಲ್ಲೂ ಮುಂದುವರಿಯಿತು. ಅವನು ತನ್ನ ಯೋಜನೆಯಂತೆ ನಡೆದುಕೊಂಡ. ತಕ್ಷಣ, ಉಸಿರು ನಿಲ್ಲುವಂತೆ ತನ್ನ ಕಾಲನ್ನು ಬಲವಾಗಿ ನನ್ನ ತಲೆಯ ಮೇಲಿಟ್ಟು ನಿರ್ದಾಕ್ಷಿಣ್ಯವಾಗಿ ಕೆಳಗೆ ಅದುಮಿದ…

ಹೀಗೆ, ವಾಮನ ಕುಬ್ಜನಾಗಿಯೇ ಉಳಿದ. ಬಲಿ, ಮಾತ್ರ ಬಲೀಂದ್ರ ಚಕ್ರವರ್ತಿಯಾಗಿ ಇಂದಿಗೂ ಪ್ರೀತಿಯಿಂದ ಕರೆಯಲ್ಪಡುತ್ತಾನೆ. ಇದೇ.. ಸಾವನ್ನೂ ಮೀರಿ ಬದುಕುವುದೆಂದರೆ…

ಅಂತೂ, ನನ್ನ ಪ್ರಶ್ನೆಗೆ ನಿಧಾನವಾಗಿ ನಾನೇ ಉತ್ತರ ಕಂಡುಕೊಂಡೆ. ನನ್ನಜ್ಜ ಪ್ರಹ್ಲಾದ ದೇವತೆಗಳ ಪ್ರಭುತ್ವ ಪ್ರಶ್ನಿಸಲಿಲ್ಲ. ಹಾಗಾಗಿ, ಬದುಕಿ ಉಳಿದ. ವಿಷ್ಣು ಕೂಡ ಅವನ ವಿಚಾರದಲ್ಲಿ ಪ್ರಸನ್ನನಾಗಿಯೇ ಉಳಿದ, ದೇವತೆಗಳ ಅಧಿಪತ್ಯವನ್ನು ಒಪ್ಪಿಕೊಂಡದ್ದಕ್ಕೆ. ಪ್ರಹ್ಲಾದ ಭಕ್ತನೆನಿಸಿಕೊಂಡ. ಬಲಿ ರಾಕ್ಷಸನಾದ. ನಾನು, ಇನ್ನೊಬ್ಬ ಪ್ರಹ್ಲಾದನಾಗದಿದ್ದಕ್ಕೆ, ಬಲಿಯಾದೆ. ಇತರ ಸಾಧಕರನ್ನು ತುಳಿದು ತನ್ನ ಹಿರಿಮೆ ಸಾಧಿಸುವ ಮನುಷ್ಯ ಪ್ರವೃತ್ತಿ, ಬಹುಶಃ ವಾಮನನ ಬಳುವಳಿ ಅನ್ನಿಸುತ್ತದೆ…

ಬಲೀಂದ್ರ, ಮೈಕೊಡವಿಕೊಂಡು ನಿಧಾನವಾಗಿ ಎದ್ದು ಕುಳಿತು ಕೆಳಗಿನ ಕರಾವಳಿಯನ್ನೊಮ್ಮೆ ವೀಕ್ಷಿಸಿದ. ರೈತರು ಹಚ್ಚಿದ್ದ ದೀಪಗಳೆಲ್ಲಾ ಆರಿ ನಿದ್ರೆ ಮಾಡುತ್ತಿದ್ದವು, ಮುಂದಿನ ವರ್ಷ ಪುನಃ ಎಚ್ಚರಗೊಂಡು ಬೆಳಗಿ ಅವನನ್ನು ಸ್ವಾಗತಿಸಲೆಂದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT