ಲಿತಾ’ ಎಂಬ ಸಂಸ್ಕೃತ ಶಬ್ದವನ್ನು ಪಾದ್ಮಪುರಾಣದಲ್ಲಿ, ‘ಲೋಕಗಳನ್ನು ಅತಿಕ್ರಮಿಸಿ ವಿಹರಿಸುವವಳು’ ಎಂದು ವಿವರಿಸಲಾಗಿದೆ. ಲಲಿತ ಎಂದರೆ ಸುಂದರ ಎಂದು ‘ಶಬ್ದಾರ್ಣವ’ದಲ್ಲಿರುವುದರಿಂದ ಸೌಕುಮಾರ್ಯ ಸೌಂದರ್ಯ ಮುಂತಾದವುಗಳಿಂದ ಕೂಡಿರುವವಳು ಲಲಿತೆ. ದಿವ್ಯವಾದ ನವಾವರಣಗಳಿರುವುದರಿಂದಲೂ ಕಬ್ಬಿನ ಬಿಲ್ಲು ಅಸ್ತ್ರ ಹೂಗಳು – ಎಲ್ಲವೂ ಸುಂದರವಾಗಿರುವುದರಿಂದಲೂ ಆ ಹೆಸರು ಅನ್ವರ್ಥಕವಾಗಿದೆ. ವಾಮ ದಕ್ಷಿಣ ಎಂಬ ಎರಡು ಮಾರ್ಗಗಳಲ್ಲಿ ದಕ್ಷಿಣ ಮಾರ್ಗವು ಬಹು ಸುಂದರವಾಗಿ ಸುಲಭವಾಗಿರುವುದರಿಂದ ಗಮ್ಯಸ್ಥಾನವನ್ನು ಲಲಿತೆಯೆನ್ನಲಾಗಿದೆ.

‘ಶ್ರೀಮಾತಾ’ ಎಂದು ಆರಂಭವಾಗುವ ಶ್ರೀಲಲಿತಾ ಸಹಸ್ರನಾಮವು ‘ಲಲಿತಾಂಬಿಕಾ’ ಎಂದು ಕೊನೆಗೊಳ್ಳುತ್ತದೆ. ಇವೆರಡನ್ನೂ ಸೇರಿಸಿದರೆ ಶ್ರೀಮಾತೆಯು ಲಲಿತಾಂಬಿಕೆ ಎಂಬ ಅರ್ಥವಾಗುವುದಲ್ಲದೆ, ಎಲ್ಲಾ 999 ಶಬ್ದಗಳೂ ಲಲಿತಾಂಬಿಕೆಯನ್ನು ವರ್ಣಿಸುತ್ತವೆ. ಸಾವಿರ ನಾಮಗಳಲ್ಲಿ ಒಂದನ್ನು ಬಿಟ್ಟು ಉಳಿದ ನಾಮಗಳೆಲ್ಲವೂ ವಿಶೇಷಣವಾಗಿದ್ದರೆ ಲಲಿತಾಂಬಿಕಾ ಎಂಬುದು ವಿಶೇಷ್ಯವಾಗಿದೆ. ನಿಜವಾಗಿ ನೋಡಿದರೆ, ಶ್ರೀಲಲಿತೆಯ ನಾಮಗಳು ಅಸಂಖ್ಯಾತವಾಗಿರುವುದರಿಂದ ಇಲ್ಲಿರುವ ಸಾವಿರ ನಾಮಗಳು ಅತ್ಯಂತ ಸಂಕ್ಷಿಪ್ತವಾದವುಗಳು ಎನ್ನಬೇಕಾಗುತ್ತದೆ. ಅವುಗಳಲ್ಲೆಲ್ಲಾ ಲಲಿತಾಶಬ್ದವು ಮುಖ್ಯವಾಗಿರುವುದರಿಂದ ಸೂತ್ರಕಾರರು ಲಲಿತಾಶಬ್ದದಿಂದಲೇ ವ್ಯವಹರಿಸುತ್ತಾರೆ. ಇಲ್ಲಿ ಸ್ತ್ರೀಲಿಂಗ ಶಬ್ದಗಳನ್ನು ಮಾತ್ರವೇ ಪ್ರಯೋಗಿಸಲಾಗಿದೆಯಾದರೂ, ಶಾಕ್ತರಲ್ಲಿ ಅಗ್ರಗಣ್ಯನಾದ ಕಾಳಿದಾಸನು ಹೇಳುವಂತೆ ಲಲಿತೆಯು ಸ್ತ್ರೀ–ಪುರುಷಾದಿ ಲಿಂಗಗಳನ್ನು ಅತಿಕ್ರಮಿಸಿರುತ್ತಾಳೆ. ‘ಲಲಿತೋಪಾಖ್ಯಾನ’ದಲ್ಲಿ ಲಿಂಗವು ಐಚ್ಛಿಕವೆಂದೂ ಉಪಾಸಕನು ತನಗೆ ಇಷ್ಟವಾದ ಲಿಂಗವನ್ನು ಆಶ್ರಯಿಸಬಹುದೆಂದೂ ಹೇಳಲಾಗಿದೆ. ಹಾಗಾದರೆ ಮನಸ್ಸಿಗೆ ಕಂಡಂತೆ ಆರಾಧಿಸಬಹುದಲ್ಲವೇ ಎಂದರೆ, ವಶಿನ್ಯಾದಿ ವಾಗ್ದೇವತೆಗಳು ಆರಾಧಿಸಿದ ಕ್ರಮದಲ್ಲಿಯೇ ಅನೇಕ ಮಹಾತ್ಮರು ಆರಾಧಿಸಿ ತಮಗೆ ಬೇಕಾದ ಫಲಗಳನ್ನು ಪಡೆದಿರುವುದರಿಂದ ಹಾಗೆಯೇ ಆರಾಧಿಸಬೇಕಲ್ಲದೆ, ಮನಸ್ಸಿಗೆ ತೋಚಿದಂತೆ ಆರಾಧಿಸಿದರೆ ಮಾರ್ಗವು ಸರಿಯಾಗಿ ತೋರದೆ ಗೊಂದಲವುಂಟಾಗಬಹುದೆಂದು ಸೂಚಿಸಲಾಗಿದೆ. ಈ ಸಾವಿರ ನಾಮಗಳ ಮಾಹಾತ್ಮ್ಯವು ವಿಶೇಷವಾದವು ಸ್ವಯಂ ಶ್ರೀದೇವಿಯೇ ಹೇಳಿರುವುದರಿಂದಲೂ 125 ನಾಮಗಳನ್ನು ಪ್ರತ್ಯೇಕವಾಗಿ ವಶಿನ್ಯಾದಿ ವಾಗ್ದೇವತೆಗಳು ಶ್ರೀದೇವಿಯ ಆಜ್ಞೆಯಿಂದಲೇ ರಚಿಸಿರುವುದರಿಂದಲೂ ಲಲಿತಾಸಹಸ್ರ ನಾಮಗಳ ಮಾಹಾತ್ಮ್ಯವು ವಿವರಣೆಗಳಿಗೆ ಸುಲಭವಾಗಿ ಸಿಗುವುದಿಲ್ಲ.

ಪೂರ್ವಪೀಠಿಕೆ ಎಂಬ 50 ಶ್ಲೋಕಗಳೂ ಫಲಶ್ರುತಿಯೆಂಬ 86 ಶ್ಲೋಕಗಳೂ ಶ್ರೀಲಲಿತಾಸಹಸ್ರ ನಾಮ ಸ್ತೋತ್ರದಲ್ಲಿದ್ದು ಅವುಗಳನ್ನು ಪಾರಾಯಣ ಮಾಡಲೇಬೇಕೆಂದೇನೂ ಇಲ್ಲ. ‘ಶ್ರೀಮಾತಾ’ ಎಂದು ಆರಂಭವಾಗುವ ನಾಮದಿಂದ ಲಲಿತಾಂಬಿಕಾ ಎಂಬ ನಾಮದ ವರೆಗೆ ಪಾರಾಯಣ ಮಾಡಿದರೆ ಸಾಕು. ಋಷಿ ದೇವತಾ ಛಂದಸ್ಸು ನ್ಯಾಸ ಮುಂತಾದವುಗಳನ್ನು ಫಲಾರ್ಥಿಯಾದವನು ಸ್ವಲ್ಪವೂ ತಪ್ಪಿಲ್ಲದೆ ಉಚ್ಚರಿಸಬೇಕಲ್ಲದೆ, ಫಲದ ಇಚ್ಛೆಯಿಲ್ಲದವನು ಅವುಗಳನ್ನು ಹೇಳಬೇಕಾಗಿಲ್ಲ.

ಯಾವುದೇ ಕರ್ಮವನ್ನು ಸಕಾಮನಾಗಿ ಮಾಡುವುದಕ್ಕಿಂದ ನಿಷ್ಕಾಮನಾಗಿ ಮಾಡುವುದೇ ಶ್ರೇಯೋಮಾರ್ಗವಾಗಿದೆ. ಶ್ರೀದೇವಿಯ ಪ್ರೀತಿಗಾಗಿ ಸಹಸ್ರನಾಮವನ್ನು ಪಠಿಸುವ ಪರಿಪಾಟಿಯಿದ್ದರೆ, ಅದರಿಂದ ಎಲ್ಲರಿಗೂ ಒಳ್ಳೆಯದಾಗುವುದು. ಶ್ರೀದೇವಿಯ ಪ್ರೀತಿಯು ದುರ್ಲಭವಾಗಿದ್ದು ಅದನ್ನು ಸಂಪಾದಿಸಿದರೆ, ಸಕಾಮನಾಗಿ ಸಂಪಾದಿಸಬಹುದಾದ ಎಲ್ಲ ಫಲಗಳೂ ದೊರೆಯುತ್ತವೆ. ಈ ಕಾರಣದಿಂದಾಗಿ ನಿಷ್ಕಾಮನಾಗಿಯೇ ಪಾರಾಯಣ ಮಾಡಬೇಕು.

ಕೆಲವರಿಗೆ ಕೀಳರಿಮೆಯಿಂದ ಶ್ರೀಲಲಿತಾ ಸಹಸ್ರನಾಮ ಪಾರಾಯಣ ಮಾಡುವ ಅರ್ಹತೆ ತಮಗಿಲ್ಲವೆಂಬ ಕಲ್ಪನೆಯಿರುತ್ತದೆ. ಮುಖ್ಯವಾಗಿ ಸ್ತ್ರೀಯರು ತಾವು ಅದನ್ನು ಮಾಡಬಹುದೇ ಎಂದು ಪ್ರಶ್ನಿಸುತ್ತಿರುತ್ತಾರೆ. ಆದರೆ ಈ ವಿಷಯವಾಗಿ ಒಂದೇ ಉತ್ತರವನ್ನು ನಿರೀಕ್ಷಿಸಲಾಗದು. ಶ್ರೀಲಲಿತಾ ಸಹಸ್ರನಾಮವನ್ನು ವ್ಯಾಖ್ಯಾನಿಸಿದ ವೈದ್ಯನಾಥ ದೀಕ್ಷಿತರು, ಒಂದು ನಾಮದ ವ್ಯಾಖ್ಯಾನದಲ್ಲಿ ಹೀಗೆ ಹೇಳುತ್ತಾರೆ:

‘ಸುವಾಸಿನ್ಯರ್ಚನಪ್ರೀತಾ’ ಎಂದರೆ ಸುವಾಸಿನೀ ಕರ್ಮಕ ಬಿಲ್ವಾರ್ಚನದಿಂದಲೋ ಸುವಾಸಿನೀ ಕರ್ತೃಕ ಬಿಲ್ವಾರ್ಚನದಿಂದಲೋ ಸಂತುಷ್ಟಳಾದವಳು’.

ಇದಕ್ಕೆ ಮೊದಲು ಸುವಾಸಿನಿಯೆಂದರೆ ‘ಸ್ತ್ರೀಸಾಮಾನ್ಯ ರೂಪಿಣಿ’ಯೆಂದು ಹೇಳಲಾಗಿದೆ. ಎಂದರೆ ಎಲ್ಲ ಸ್ತ್ರೀಯರೂ ಪಾರಾಯಣವನ್ನು ಮಾಡಬಹುದು. ಎಲ್ಲ ಸ್ತ್ರೀಯರೂ ಶ್ರೀದೇವಿಯ ರೂಪವೇ ಎಂದಾದರೆ ಮತ್ತೆ ಸ್ತ್ರೀಯರು ಶ್ರೀದೇವಿಯನ್ನು ಪೂಜಿಸುವುದೇಕೆ ಎಂಬ ಪ್ರಶ್ನೆಯೇನೋ ಬರುವುದುಂಟು. ಅದಕ್ಕೆ ಉತ್ತರವಾಗಿ ‘ಸುವಾಸಿನ್ಯರ್ಚನಪ್ರೀತಾ’ ಎಂಬ ನಾಮವಿದೆ. ಆದರೆ ಈ ನಾಮವು ಸಂದಿಗ್ಧಾರ್ಥವಾಗಿದೆ. ಸುವಾಸಿನಿಯರನ್ನು ಪೂಜಿಸಿದರೆ, ಶ್ರೀದೇವಿಯು ಸಂತುಷ್ಟಳಾಗುವಳು ಎಂದು ಒಂದು ಅರ್ಥವಾದರೆ, ಸುವಾಸಿನಿಯು ಪೂಜಿಸಿದರೆ ಅವಳು ಪ್ರಸನ್ನಳಾಗುವಳು ಎಂಬುದು ಇನ್ನೊಂದು ಅರ್ಥ. ಈ ಎರಡೂ ಅರ್ಥಗಳನ್ನು ವ್ಯಾಖ್ಯಾನಕಾರರು ತೋರಿಸುತ್ತಾರೆ. ಇವೆರಡು ಅರ್ಥಗಳನ್ನೂ ಲೋಕದಲ್ಲಿ ಸ್ವೀಕರಿಸುವುದುಂಟು. ನವರಾತ್ರಿಯೇ ಮೊದಲಾದ ಸಂದರ್ಭದಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೆ. ಇದರಿಂದ ಶ್ರೀದೇವಿಯು ಸುಪ್ರಸನ್ನಳಾಗುತ್ತಾಳೆ. ವಿವಾಹಾದಿ ಕೆಲವು ಸಂದರ್ಭಗಳಲ್ಲಿ ಸ್ತ್ರೀಯರೇ ಶ್ರೀದೇವಿಯನ್ನು ಪೂಜಿಸುತ್ತಾರೆ. ಅದರಿಂದಲೂ ಶ್ರೀದೇವಿಯು ಸಂತುಷ್ಟಳಾಗುತ್ತಾಳೆ ಎಂಬಲ್ಲಿ ಸಂಶಯವೇನೂ ಇಲ್ಲ.

ಸ್ತ್ರೀಯರಾಗಲಿ ಪುರುಷರಾಗಲಿ ಶ್ರೀದೇವಿಯ ಪ್ರೀತಿಗಾಗಿ ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದಾದರೆ, ಅದಕ್ಕೆ ಯಾವುದೇ ಸಾಧನ–ಸಲಕರಣೆಗಳು ಬೇಕಾಗುವುದಿಲ್ಲ. ಹಾಗಾದರೂ ಸಾಧ್ಯವಾದಷ್ಟು ಬಾಹ್ಯ ಮತ್ತು ಅಂತರಂಗ ಶುದ್ಧಿಯನ್ನು ಸಂಪಾದಿಸಿಕೊಂಡು ಸಹಸ್ರನಾಮ ಪಾರಾಯಣವನ್ನು ಮಾಡುತ್ತಾರೆ. ಕೆಲವರು ಮೊದಲು ದೀಪವನ್ನು ಬೆಳಗಿಸಿಕೊಂಡು ಸರಿಯಾಗಿ ಕುಳಿತು ಪಾರಾಯಣ ಮಾಡುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ತಮಗೆ ಇಷ್ಟವಾದಾಗ ಹೇಗೆಯೇ ಇದ್ದರೂ ಶ್ರೀಮಾತಾ ಲಲಿತಾಂಬಿಕೆಯನ್ನು ಸಹಸ್ರ ನಾಮಗಳಿಂದ ಸಂತೋಷ ಪಡಿಸಬಹುದು ಎಂಬುದು ಅನುಭವಿಗಳ ಹೇಳಿಕೆಯಾಗಿದೆ.

ಯಜ್ಞಕುಂಡದಲ್ಲಿ ಹುಟ್ಟಿದವಳು

ಲಲಿತಾ– ಎಂದರೆ ಸರ್ವಶಕ್ತಿಯಾದ ದೇವಿ. ಅವಳ ಶಕ್ತಿಯನ್ನು ಪ್ರಶಂಸಿಸುವ ‘ಲಲಿತಾಸಹಸ್ರನಾಮ’ವು ಬ್ರಹ್ಮಾಂಡಪುರಾಣದಲ್ಲಿದೆ. ಹಯಗ್ರೀವನಿಗೆ ಶ್ರೀದೇವಿಯೇ ಸ್ವತಃ ಲಲಿತೆಯ ಮಾಹಾತ್ಮ್ಯವನ್ನು ಬೋಧಿಸಿದಳು. ದೈತ್ಯನಾದ ಭಂಡಾಸುರನನ್ನು ಸಂಹಾರಮಾಡುವಂತೆ ದೇವತೆಗಳು ಪ್ರಾರ್ಥಿಸಿಕೊಂಡಾಗ, ಯಜ್ಞಕುಂಡದಿಂದ ಅವತರಿಸಿದವಳೇ ‘ಲಲಿತಾ’.

ಲಲಿತಾಸಹಸ್ರನಾಮಕ್ಕೆ ಭಾಸ್ಕರರಾಯಮಖೀ ಎಂಬುವವರು ಬರೆದಿರುವ ಭಾಷ್ಯ ತುಂಬ ಪ್ರಸಿದ್ಧವಾಗಿದೆ. ದೇವಿಯನ್ನು ಕುರಿತಂತೆ ಸಾವಿರದೆಂಟು ಹೆಸರುಗಳ ಗುಚ್ಛವೇ ಸಹಸ್ರನಾಮ. ಈ ಒಂದೊಂದು ಹೆಸರಿನಲ್ಲೂ ದೇವಿಯ ಒಂದೊಂದು ತತ್ತ್ವ ಅಡಕವಾಗಿದೆ. ಅದನ್ನು ಅರಿತು ಪಾರಾಯಣ ಮಾಡಿದರೆ ಹೆಚ್ಚಿನ ಫಲ ಸಿಗುತ್ತದೆ ಎನ್ನುವುದು ಶ್ರದ್ಧಾಳುಗಳ ನಂಬಿಕೆ. ಧರ್ಮ–ಅರ್ಥ–ಕಾಮ–ಮೋಕ್ಷ – ಹೀಗೆ ಯಾವ ಬಯಕೆಯಿಂದ ದೇವಿಯನ್ನು ಉಪಾಸಿಸಿದರೂ ಅವಳು ನೀಡುತ್ತಾಳೆ ಎನ್ನುವುದು ಶಾಸ್ತ್ರಗಳು ನೀಡಿರುವ ಭರವಸೆ.

ಮೊದಲ ಸ್ತೋತ್ರ

ಶ್ರೀಮಾತಾ ಶ್ರೀಮಹಾರಾಜ್ಞೀ ಶ್ರೀಮತ್-ಸಿಂಹಾಸನೇಶ್ವರೀ |

ಚಿದಗ್ನಿ-ಕುಂಡ-ಸಂಭೂತಾ ದೇವಕಾರ್ಯ-ಸಮುದ್ಯತಾ ||

– ಇದು ಲಲಿತಾಸಹಸ್ರನಾಮದ ಮೊದಲನೆಯ ಶ್ಲೋಕ. ಇದರ ಅರ್ಥ ಹೀಗೆ: ಶ್ರೀಮಾತಾ – ಶ್ರೇಷ್ಠಳಾದ ತಾಯಿ, ಶ್ರೀಮಹಾರಾಜ್ಞೀ – ಚಕ್ರವರ್ತಿನೀ, ಶ್ರೀಮತ್ಸಿಂಹಾಸನೇಶ್ವರೀ – ಸಾಮಾಜ್ರ್ಯ ಪೀಠಾಧೀಶ್ವರೀ, ಚಿದಗ್ನಿಕುಂಡಸಂಭೂತಾ – ಚೈತನ್ಯವೆಂಬ ಅಗ್ನಿಯಲ್ಲಿ ಹುಟ್ಟಿದವಳು, ದೇವತಾಕಾರ್ಯಸಮುದ್ಯತಾ – ದೇವತೆಗಳ ಕಾರ್ಯದಲ್ಲಿ ನಿರತಳಾಗಿರುವವಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.