ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಖಾಲಿಹಾಳೆ ಮತ್ತು ಚಿತ್ರ

ವಿಶ್ವನಾಥ ಎನ್ ನೇರಳಕಟ್ಟೆ
Published 20 ಜನವರಿ 2024, 23:35 IST
Last Updated 20 ಜನವರಿ 2024, 23:35 IST
ಅಕ್ಷರ ಗಾತ್ರ

ಮನೆಯ ಚಾವಡಿಯಲ್ಲಿ ನಿಂತು, ತನಗಿಂತ ಎರಡಡಿ ಎತ್ತರದಲ್ಲಿ ಗೋಡೆ ಮೇಲೆ ತೂಗುಹಾಕಿದ್ದ ಚಿತ್ರವನ್ನೇ ನೋಡುತ್ತಿದ್ದಳು ವಿನುತಾ. ಚಿತ್ರ ಹಂತಹಂತವಾಗಿ ಅವಳ ಮನಸ್ಸನ್ನು ಪ್ರವೇಶಿಸತೊಡಗಿತ್ತು. ತಿಳಿತಿಳಿಯಾದ ಕೊಳದ ನೀರು. ಅದರಲ್ಲಿ ತನ್ನ ಬಿಂಬವನ್ನು ಕಾಣುತ್ತಾ ನಿಂತಿದ್ದಾಳೆ ಒಬ್ಬ ಹುಡುಗಿ. ಅವಳ ಕಣ್ಣುಗಳಲ್ಲಿನ ಕಾಂತಿ ಲೋಕ ಬೆಳಗುವಂತಿದೆ. ಕೊಳದಲ್ಲಿ ನೆಲೆನಿಂತ ಹುಡುಗಿಯ ಬಿಂಬವನ್ನು ಸರಿಯಾಗಿ ಗಮನಿಸಿದರೆ, ಅವಳ ಹೃದಯದ ಭಾಗದಲ್ಲೊಂದು ಹೂವಿದೆ. ಕಡುಗೆಂಪು ಬಣ್ಣದ ತಾವರೆ ಹೂ. ಆ ಹೂವಿನೊಳಗಡೆ ಹುಡುಗನೊಬ್ಬ ಕುಳಿತಿದ್ದಾನೆ. ಆ ಹುಡುಗಿಯ ಪ್ರೇಮಿ ಅವನಿರಬಹುದೆಂಬ ಕಲ್ಪನೆ ಮೂಡಿಸುವಂತಿದೆ. ಹುಡುಗಿಯ ಹೃದಯದಲ್ಲಿ ಹೂವಿಲ್ಲ. ಹೂವಿನೊಳಗಡೆ ಹುಡುಗನಿಲ್ಲ. ಆದರೆ ಹುಡುಗಿಯ ಬಿಂಬದಲ್ಲಿ, ಕೊಳದಲ್ಲಿ ಬಿದ್ದ ಅವಳ ಬಿಂಬದಲ್ಲಿ, ಹೂವಿದೆ; ಹುಡುಗನೂ ಇದ್ದಾನೆ.

ಈ ಚಿತ್ರವನ್ನು ವಿನುತಾಳೇ ಬರೆದಿದ್ದಳು, ಎರಡು ವರ್ಷಗಳಷ್ಟು ಹಿಂದೆ. ಇನ್ನೊಬ್ಬರ ಕಣ್ಣು ಸೋಲುವಂತೆ ಚಿತ್ರ ಬರೆಯುವ ಸಾಮರ್ಥ್ಯ ಇವಳಿಗಿತ್ತು. ಇನ್ನೂ ಇಪ್ಪತ್ತು ವರ್ಷ ದಾಟಿರದ ಅವಳಿಗೆ ಪ್ರೀತಿಯ ಬಗ್ಗೆ ಚಿತ್ರ ಬರೆಯುವುದೆಂದರೆ ಬಹಳ ಇಷ್ಟ. ಇನ್ನೂ ಪ್ರೌಢತೆ ಮೂಡಿರದ ಅವಳ ಅರ್ಥದಲ್ಲಿ ಪ್ರೀತಿ ಎಂದರೆ ಗಂಡು ಹೆಣ್ಣಿನ ನಡುವಿನ ಪ್ರೀತಿ ಮಾತ್ರ. ಬೇರೆ ಬೇರೆ ಆಯಾಮಗಳಲ್ಲಿ ಹರಿದು ಹಬ್ಬುವ ಪ್ರೀತಿಯ ವಿಶಾಲತೆಯ ಅರಿವು ಅವಳಿಗಿರಲಿಲ್ಲ. ಇದರಿಂದಾಗಿ ಅವಳು ರಚಿಸುತ್ತಿದ್ದ ಚಿತ್ರಗಳೆಲ್ಲ ಗಂಡು ಹೆಣ್ಣಿನ ನಡುವಿನ ಆಕರ್ಷಣೆಯನ್ನು ಹೇಳುವಂಥದ್ದೇ ಆಗಿರುತ್ತಿತ್ತು. ಕೃಷ್ಣ- ರಾಧೆಯರ ಚಿತ್ರ, ರೋಮಿಯೋ ಜೂಲಿಯೆಟ್ ಚಿತ್ರ ಇವುಗಳೇ ತುಂಬಿಹೋಗಿದ್ದವು ಅವಳ ಮನೆಯ ಗೋಡೆ ತುಂಬೆಲ್ಲ.

ವಿನುತಾ ಇದನ್ನು ಬರೆದದ್ದು ಅವಳ ಗೆಳತಿ ಮತ್ತು ಅವಳು ಪ್ರೀತಿಸುತ್ತಿದ್ದ ಹುಡುಗನನ್ನು ನೆನಪಿಸಿಕೊಂಡು. ಅವಳ ಗೆಳತಿ ವಿದ್ಯಾ ಹುಡುಗನೊಬ್ಬನನ್ನು ಪ್ರೀತಿಸತೊಡಗಿದ್ದಳು. ಅವನೂ ಇವಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ತಮ್ಮ ತಮ್ಮ ಮನೆಯವರನ್ನು ಅದು ಹೇಗೋ ಹಠ ಹಿಡಿದು ಒಪ್ಪಿಸಿ, ಮದುವೆ ಮಾಡಿಕೊಳ್ಳುವ ಹಂತಕ್ಕೂ ಬಂದಿದ್ದರು. ಇದೇ ಸಂದರ್ಭದಲ್ಲಿ ವಿನುತಾ ಈ ಚಿತ್ರವನ್ನು ಬರೆದದ್ದು. ಅವರ ಮದುವೆಗೆ ಉಡುಗೊರೆ ಕೊಡಬೇಕೆಂಬ ಇಚ್ಛೆ ಇವಳಿಗಿತ್ತು. ಆದರೆ ಆಮೇಲೆ ಅದೇನಾಯಿತೋ ಗೊತ್ತಿಲ್ಲ, ವಿದ್ಯಾ ಮತ್ತು ಆ ಹುಡುಗನ ಮಧ್ಯೆ ಅದೇನೋ ಮನಸ್ತಾಪ. ಏನು ಮಾಡಿದರೂ ಮತ್ತೆ ಅವರಿಬ್ಬರ ಮನಸ್ಸು ಒಂದಾಗಲೇ ಇಲ್ಲ. ವಿದ್ಯಾ ಬೇರೆ ಯಾವುದೋ ಹುಡುಗನನ್ನು ನೋಡಿ ಮದುವೆ ಮಾಡಿಕೊಂಡಳು. ಅವಳ ಮಾಜಿ ಪ್ರೇಮಿ ಯಾವುದೋ ಸಿರಿವಂತ ಹುಡುಗಿಯನ್ನು ಮನದನ್ನೆಯಾಗಿಸಿಕೊಂಡ. ಅವರಿಬ್ಬರನ್ನು ಕಲ್ಪಿಸಿಕೊಂಡು ಬರೆದ ಚಿತ್ರವನ್ನು ಅವರು ಬೇರೆಯವರನ್ನು ಮದುವೆಯಾದ ಸಂದರ್ಭದಲ್ಲಿ ಉಡುಗೊರೆ ನೀಡಲು ವಿನುತಾಳ ಮನಸ್ಸು ಸಿದ್ಧವಿರಲಿಲ್ಲ. ಇದರಿಂದಾಗಿ ಈ ಚಿತ್ರ ವಿನುತಾಳ ಮನೆಯ ಗೋಡೆಯಲ್ಲಿಯೇ ಉಳಿಯುವಂತಾಗಿತ್ತು.

ಈಗ ಮತ್ತೆ ಚಿತ್ರ ಬರೆಯುವ ಉತ್ಸಾಹ ಬಂದಿತ್ತು ವಿನುತಾಳಿಗೆ. ಮನೆಯಲ್ಲಿ ತಂದೆ–ತಾಯಿ ಇರಲಿಲ್ಲ. ಇದ್ದ ಏಕಾಂತ ಅವಳಲ್ಲಿ ಮೂಡಿಸಿದ್ದು ಆ ಹುಡುಗನ ನೆನಪನ್ನು. ಗುಂಗುರು ಕೂದಲಿನ, ದುಂಡು ಕಂಗಳ ಆ ಹುಡುಗನನ್ನು ವಿನುತಾ ಈಗ ನೆನಪಿಸಿಕೊಂಡಳು. ಎರಡು ದಿನಗಳ ಹಿಂದಷ್ಟೇ ಪರಿಚಯವಾದ ಹುಡುಗ. ವಿನುತಾಳಿಗಿಂತ ಎರಡು ವರ್ಷ ದೊಡ್ಡವನಿರಬಹುದೇನೋ. ಚಿತ್ರ ಬಿಡಿಸುವ ಮೊದಲೊಮ್ಮೆ ಆ ಹುಡುಗನಲ್ಲಿ ಮಾತಾಡಿಯೇಬಿಡೋಣ ಎಂದುಕೊಂಡ ವಿನುತಾ ಅವನಿಗೆ ಕರೆಮಾಡಿ ಮಾತನಾಡಿದಳು. ಒತ್ತೊತ್ತಿ ಬರುತ್ತಿದ್ದ ಸಂಕೋಚ ಅವಳನ್ನು ಎಂಟು ನಿಮಿಷಕ್ಕಿಂತ ಹೆಚ್ಚು ಹೊತ್ತು ಮಾತನಾಡಲು ಬಿಡಲಿಲ್ಲ.

***

ಬೆಂಗಳೂರಿನ ಕಾಲೇಜೊಂದರಲ್ಲಿ ಅಂತರ್‌ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ಕಾಲೇಜಿಗೆ ಅರ್ಧ ಗಂಟೆಗಳ ಅವಕಾಶ. ನಿರೂಪಣೆ, ನೃತ್ಯ, ಸಂಗೀತ, ಪ್ರಹಸನ ಈ ಎಲ್ಲವುಗಳನ್ನೂ ಒಳಗೊಂಡ ಪ್ರದರ್ಶನವೊಂದನ್ನು ನೀಡಬೇಕಾಗಿತ್ತು. ಇದರಲ್ಲಿ ಭಾಗವಹಿಸುವುದಕ್ಕಾಗಿ ತನ್ನ ಗೆಳತಿಯರ ಜೊತೆಗೆ ಬೆಂಗಳೂರಿಗೆ ಹೋಗಿದ್ದಳು ವಿನುತಾ. ಭರ್ತಿ ಇಪ್ಪತ್ತು ತಂಡಗಳಿದ್ದವು. ಅದರಲ್ಲಿ ಎಂಟನೆಯ ತಂಡವಾಗಿ ಪ್ರದರ್ಶನ ನೀಡುವ ಅವಕಾಶ ವಿನುತಾಳ ತಂಡಕ್ಕೆ. ಅರೆನಿಮಿಷಕ್ಕೊಮ್ಮೆ ಕಿಲಕಿಲ ಎಂದು ನಗುತ್ತಾ, ಮೇಕಪ್, ಡ್ರೆಸ್ ಎಲ್ಲಾ ಮಾಡತೊಡಗಿದ್ದರು ವಿನುತಾ ಮತ್ತು ಅವಳ ಗೆಳತಿಯರು. ನೃತ್ಯಕ್ಕೆ ಬೇಕಾದ ನವಿಲುಗರಿ ಮತ್ತು ಎದೆಯ ಭಾಗಕ್ಕೆ ಹಾಕಿಕೊಳ್ಳುವ ಒಂದು ಬಟ್ಟೆಯನ್ನು ತಾವು ತಂದೇ ಇಲ್ಲ ಎಂದು ವಿನುತಾಳ ತಂಡಕ್ಕೆ ತಿಳಿಯುವ ಹೊತ್ತಿಗಾಗಲೇ ಏಳನೆಯ ತಂಡದವರ ಪ್ರದರ್ಶನ ಅರ್ಧದಷ್ಟು ಮುಗಿದಿತ್ತು. ಇನ್ನು ಹದಿನೇಳು ನಿಮಿಷಗಳಷ್ಟೇ ಬಾಕಿ ಇದ್ದದ್ದು ಇವರು ವೇದಿಕೆ ಹತ್ತುವುದಕ್ಕೆ. ಕಾರ್ಯಕ್ರಮದ ಆಯೋಜಕರು ಮೊದಲೇ ಹೇಳಿಯಾಗಿತ್ತು, ಎಲ್ಲಾ ತಂಡಗಳೂ ಸಮಯವನ್ನು ಕಾಯ್ದುಕೊಳ್ಳುವುದು ಮುಖ್ಯ. ಸಮಯವೇನಾದರೂ ವಿಳಂಬವಾದರೆ ಅಂಕಗಳನ್ನು ಕಮ್ಮಿ ಮಾಡಲಾಗುತ್ತದೆ. ಹತ್ತು ನಿಮಿಷಕ್ಕಿಂತ ಹೆಚ್ಚು ವಿಳಂಬ ಮಾಡಿದರೆ ಅಂತಹ ತಂಡವನ್ನು ಸ್ಪರ್ಧೆಗೆ ಪರಿಗಣಿಸುವುದೇ ಇಲ್ಲ.

ಮೇಕಪ್ ಎಲ್ಲಾ ಮಾಡಿಕೊಂಡಿದ್ದ ಇವರು ಹೊರಹೋಗಿ ಅವನ್ನೆಲ್ಲಾ ತರುವಂತಿರಲಿಲ್ಲ. ತರುವಷ್ಟು ಸಮಯವೂ ಇರಲಿಲ್ಲ. ಒಂದು ವೇಳೆ ತಾರದೇ ಇದ್ದರೆ ಇಬ್ಬರು ಹುಡುಗಿಯರು ನೃತ್ಯ ಮಾಡುವುದಕ್ಕೆ ಸಾಧ್ಯ ಇರಲಿಲ್ಲ. ಆಗ ತಂಡದಲ್ಲಿರಬೇಕಾದವರ ಸಂಖ್ಯೆ ಕಡಿಮೆಯಾಗಿ ತೀರ್ಪುಗಾರರು ಇವರ ತಂಡವನ್ನು ಸ್ಪರ್ಧೆಗೆ ಪರಿಗಣಿಸುವ ಸಾಧ್ಯತೆಯೇ ಕಡಿಮೆಯಿತ್ತು. ಅದೆಷ್ಟೋ ದಿನ ಪ್ರ್ಯಾಕ್ಟೀಸ್ ಮಾಡಿ, ಗೆಲ್ಲಲೇಬೇಕೆಂಬ ಕನಸನ್ನು ಎದೆಯೊಳಗಿರಿಸಿಕೊಂಡು ದೂರದ ಬೆಂಗಳೂರಿಗೆ ಬಂದಿದ್ದವರು ಈ ಹುಡುಗಿಯರು. ಈಗ ಪ್ರದರ್ಶನವನ್ನೂ ಸರಿಯಾಗಿ ಕೊಡದೆ ಹೋಗುವುದೆಂದರೆ ಅದೆಂತಹ ಸ್ಥಿತಿ? ಎಂದು ಯೋಚಿಸಿ ವಿಪರೀತ ಚಿಂತೆ ಆಗತೊಡಗಿತ್ತು ಅವರಿಗೆ. ಗೂಡು ಕಳೆದುಕೊಂಡ ಹಕ್ಕಿಗಳಂತೆ ಆತಂಕದಿಂದ ಚಿಲಿಪಿಲಿಗುಟ್ಟುತ್ತಿದ್ದ ವಿನುತಾಳ ತಂಡದವರೆದುರು ಬಂದು ನಿಂತದ್ದು ಗುಂಗುರು ಕೂದಲಿನ ಒಬ್ಬ ಹುಡುಗ. ‘ಏನಾಯ್ತು? ಯಾಕೆ ಇಷ್ಟು ಟೆನ್ಶನ್‍ನಲ್ಲಿದ್ದೀರಿ?’ ಎಂದು ಅವನು ಪ್ರಶ್ನಿಸಿದ ತಕ್ಷಣವೇ ಅವನ್ಯಾರೆಂದೂ ವಿಚಾರಿಸುವ ಗೋಜಿಗೆ ಹೋಗದೆ ವಿಷಯವನ್ನೆಲ್ಲಾ ಅರುಹಿದ್ದಳು ವಿನುತಾ. ‘ಇರಿ, ನಮ್ಮ ತಂಡದವರ ಬಳಿ ಇದೆಯಾ ಕೇಳಿ ನೋಡುತ್ತೇನೆ’ ಎಂದವ ತಕ್ಷಣ ತನ್ನ ತಂಡದವರಿದ್ದ ಗ್ರೀನ್‍ರೂಮಿಗೆ ಹೋಗಿ, ಎದೆಯ ಭಾಗಕ್ಕೆ ಹಾಕಿಕೊಳ್ಳುವ ಬಟ್ಟೆಯನ್ನು ಹಿಡಿದುಕೊಂಡು ಬಂದಿದ್ದ. ‘ಇದಾಗುತ್ತದಾ ನೋಡಿ’ ಎಂದು ಅದನ್ನು ವಿನುತಾಳ ಕೈಗೆ ಕೊಟ್ಟವನು, ‘ನವಿಲುಗರಿ ಇಲ್ಲೇ ಒಂದು ಅಂಗಡಿಯಲ್ಲಿ ಸಿಗುತ್ತದೆ. ನನಗೆ ಗೊತ್ತಿದೆ. ಈಗಲೇ ತರುತ್ತೇನೆ’ ಎಂದವನು ಹೊರಟ. ‘ಅಯ್ಯೋ, ಅಷ್ಟೆಲ್ಲಾ ಟೈಮಿಲ್ಲ. ನೀವು ಹೋಗಿ ಬರುವುದಕ್ಕೆ ತಡವಾಗಬಹುದು’ ಎಂದು ವಿನುತಾ ಕಿರುಚಿಕೊಳ್ಳುತ್ತಿದ್ದಂತೆಯೇ ಅವನು ನಗುತ್ತಾ ‘ನನ್ನಲ್ಲಿ ಬೈಕ್ ಇದೆ. ಈಗ ಮೂರು ನಿಮಿಷದಲ್ಲಿ ಬರುತ್ತೇನೆ’ ಎಂದವನು ಬಿರುಗಾಳಿಯಂತೆ ಹೊರಟುಹೋಗಿದ್ದ. ನಿಮಿಷ ಮೂರು ಕಳೆದು, ಆರಾಗಿ, ಒಂಭತ್ತಾದರೂ ಆಸಾಮಿಯ ಪತ್ತೆಯಿಲ್ಲ. ಎರಡು ಮೂರು ನಿಮಿಷಗಳಷ್ಟೇ ಬಾಕಿಯಿದ್ದದ್ದು ಏಳನೇ ತಂಡದವರ ಪ್ರದರ್ಶನ ಮುಗಿಯುವುದಕ್ಕೆ. ಇನ್ನಿವನು ಬರುವುದಿಲ್ಲ, ಇವತ್ತು ತಮ್ಮ ಕಥೆ ಮುಗಿದಂತೆಯೇ ಎಂದು ವಿನುತಾ ಕೈ ಕೈ ಹಿಸುಕಿಕೊಳ್ಳುವಾಗಲೇ ಅವಳಿಗೆ ಕಾಣಿಸಿದ್ದು ನಗುತ್ತಾ, ನವಿಲುಗರಿ ಹಿಡಿದುಬರುತ್ತಿದ್ದ ಅವನ ದುಂಡುಮುಖ. ಆತುರಾತುರವಾಗಿ ಬಂದವನು ನೃತ್ಯ ಮಾಡಬೇಕಿದ್ದ ಹುಡುಗಿಗೆ ನವಿಲುಗರಿಯನ್ನು ತಾನೇ ಕಟ್ಟಿದ. ಅಷ್ಟರಲ್ಲಿ ನಿರೂಪಕರು ‘ಈಗ ಪ್ರದರ್ಶನ ನೀಡಲಿರುವ ತಂಡದ ಸಂಖ್ಯೆ ಎಂಟು’ ಎಂದು ಘೋಷಿಸಿಯಾಗಿತ್ತು. ‘ಟೆನ್ಶನ್ ಮಾಡಿಕೊಳ್ಳಬೇಡಿ. ಚೆನ್ನಾಗಿ ಪರ್ಫಾರ್ಮ್ ಮಾಡಿ. ಆಲ್ ದ ಬೆಸ್ಟ್’ ಎಂದು ನಗುತ್ತಾ ಹೇಳಿದ ಆತ ಇವರ ಪ್ರದರ್ಶನ ಮುಗಿಯುವವರೆಗೂ ವೇದಿಕೆ ಹಿಂಭಾಗದಲ್ಲಿಯೇ ನಿಂತಿದ್ದ.

ಪ್ರದರ್ಶನ ಮುಗಿಸಿ ಬಂದ ವಿನುತಾ ಮೊದಲು ಮಾಡಿದ ಕೆಲಸ, ಆ ಹುಡುಗನಿಗೆ ಧನ್ಯವಾದ ತಿಳಿಸಿದ್ದು. ಅವನ ಬಗ್ಗೆ ವಿಚಾರಿಸಿದಾಗ ಅವಳಿಗೆ ತಿಳಿದದ್ದಿಷ್ಟು, ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಅವನಿಗೆ ಬೆಂಗಳೂರಿನ ಗಲ್ಲಿಗಲ್ಲಿಯೂ ಗೊತ್ತಿದೆ. ಹೆಸರು ಆಕಾಶ್. ತಂದೆ–ತಾಯಿಗೆ ಅವನೊಬ್ಬನೇ ಮಗ. ತಂದೆ ಕಂಪೆನಿಯೊಂದನ್ನು ನಡೆಸುತ್ತಿದ್ದಾರೆ. ಮೂರನೇ ವರ್ಷದ ಡಿಗ್ರಿ ಕಲಿಯುತ್ತಿರುವ ಅವನೀಗ ಅಲ್ಲಿಗೆ ಬಂದದ್ದು ತನ್ನ ಕಾಲೇಜು ತಂಡದಲ್ಲಿ ಡ್ಯಾನ್ಸರ್ ಆಗಿ. ಪಾಶ್ಚಾತ್ಯ ನೃತ್ಯ ಕಲಿತಿರುವ ಅವನಿಗೆ ಡ್ಯಾನ್ಸ್ ಮಾಡುವುದೆಂದರೆ ಬಹಳ ಇಷ್ಟ. ಈ ಸ್ಪರ್ಧೆಯಲ್ಲಿ ಅವನ ತಂಡಕ್ಕೆ ಕೊನೆಯ ಅವಕಾಶ. ಅವನ ಜೊತೆಗೊಂದು ಸೆಲ್ಫಿ ತೆಗೆಸಿಕೊಂಡ ವಿನುತಾಳಲ್ಲಿ ಅವನು ಮೊಬೈಲ್ ನಂಬರ್ ಕೇಳಿದ್ದ. ಇವಳು ಕೊಟ್ಟಿದ್ದಳು.

ಬಹುಮಾನ ಘೋಷಿಸುವಾಗ ರಾತ್ರಿ ಎಂಟು ಗಂಟೆ ಕಳೆಯಬಹುದು ಎಂಬ ಸೂಚನೆ ಸಿಕ್ಕಿದಾಗಲೇ ವಿನುತಾ ಮತ್ತು ಅವಳ ಗೆಳತಿಯರಿಗೆ ನಿರಾಸೆಯಾಗಿತ್ತು. ಏಳು ಗಂಟೆಯ ಬಸ್ಸಿಗೆ ಅವರು ಸೀಟು ಬುಕ್ ಮಾಡಿಯಾಗಿತ್ತು. ಅವರು ಕಾರ್ಯಕ್ರಮಕ್ಕೆ ನಿಲ್ಲಲು ಸಾಧ್ಯ ಇರಲಿಲ್ಲ. ಹೊರಡಲೇಬೇಕಿತ್ತು. ಬಸ್ಸಿನ ಸುಖಾಸೀನದಲ್ಲಿ ಒರಗಿದ್ದ ವಿನುತಾಳ ಮೊಬೈಲ್ ರಿಂಗಣಿಸಿದ್ದು ಆಕಾಶ್‍ನ ಕರೆ ಬಂದಾಗಲೇ. ಇವರ ತಂಡಕ್ಕೆ ಎರಡನೇ ಬಹುಮಾನ ಬಂದಿತ್ತು. ಅದನ್ನು ತಿಳಿಸುವುದಕ್ಕಾಗಿಯೇ ಆಕಾಶ್ ಕರೆಮಾಡಿದ್ದ. ಅವನು ವಿಷಯ ತಿಳಿಸಿದಾಗ ಅವನನ್ನೇ ಅಪ್ಪಿ ಮುದ್ದಾಡಬೇಕೆನಿಸುವಷ್ಟು ಸಂತಸವಾಗಿತ್ತು ವಿನುತಾಳಿಗೆ.

***

ವಿನುತಾಳ ಕೈಯ್ಯಲ್ಲಿದ್ದ ಖಾಲಿಹಾಳೆ ಅವನ ಮನಸ್ಸಿನಂತೆಯೇ ಪರಿಶುದ್ಧವಾಗಿತ್ತು. ಅದನ್ನು ಚಿತ್ರ ಬರೆಯುವ ಬೋರ್ಡ್‍ಗೆ ಲಗತ್ತಿಸಿದವಳು ಕುಂಚವನ್ನು ಕೈಗೆತ್ತಿಕೊಂಡಳು. ಕುಂಚವನ್ನವಳು ಚಲಿಸಿದ್ದು ನೀಲಿ ಬಣ್ಣದೆಡೆಗೆ. ಖಾಲಿಹಾಳೆಯ ತುಂಬ ಅವಳ ಕೈಯ್ಯ ಕುಂಚ ನಾಟ್ಯವಾಡತೊಡಗಿತ್ತು. ಈಗವಳಿಗೆ ಬೇಕೆನಿಸಿದ್ದು ಹಸಿರು ಬಣ್ಣ. ಜೊತೆಗೆ ನೀಲಿ ಬಣ್ಣ. ಹಾಳೆಯ ಮೇಲ್ತುದಿ ಆ ಎರಡು ಬಣ್ಣಗಳಿಂದ ತುಂಬಿಹೋಗಲು ಬೇಕಾದದ್ದು ಆರೇ ಆರು ನಿಮಿಷ. ಕೆಂಪು, ಹಳದಿ ಜೊತೆಗೊಂದಷ್ಟು ಬಣ್ಣಗಳನ್ನು ಹೊತ್ತುನಿಂತ ಕುಂಚ ಹಾಳೆಯ ಎರಡೂ ಬದಿಗಳಲ್ಲಿ ಓಡಾಡಿತು.

ಚಿತ್ರವನ್ನು ಸಂಪೂರ್ಣಗೊಳಿಸಿದ ತೃಪ್ತಿ ವಿನುತಾಳಲ್ಲಿತ್ತು. ಹಾಳೆಯ ಮೇಲೆ ಜೀವ ತಳೆದು ನಿಂತಿದ್ದ ಚಿತ್ರವನ್ನೇ ನೋಡತೊಡಗಿದಳು. ನಸುನಗುತ್ತಾ ನಾಟ್ಯವಾಡುತ್ತಿರುವ ಕೃಷ್ಣ...ಅವನ ತಲೆಯ ಮೇಲೆ ನವಿಲುಗರಿ...ಸುತ್ತ ನರ್ತನವಾಡುತ್ತಿರುವ ಕೆಂಪು ಹಳದಿ ದಿರಿಸಿನ ಹೆಂಗಳೆಯರು...ಕೃಷ್ಣನ ಪಕ್ಕದಲ್ಲಿರುವವಳು ಅವನ ಪ್ರೇಯಸಿ ರಾಧೆ...ಸುತ್ತು ಬಳಸಿರುವ ಅಷ್ಟೂ ಜನ ಹೆಂಗಳೆಯರ ಮೋಹದ ಕಣ್ಣು ಕೃಷ್ಣನ ಮೇಲೆ...ಆದರೆ ಕೃಷ್ಣನ ಪ್ರೇಮದ ನೋಟ ರಾಧೆಯ ಕಡೆಗೆ... ಚಿತ್ರವನ್ನೇ ನೋಡುತ್ತಿದ್ದ ವಿನುತಾಳ ಕಣ್ಣಿನಲ್ಲಿದ್ದವನು ಶ್ರೀಕೃಷ್ಣ...ಮನಸ್ಸಲ್ಲಿದ್ದವನು ಆ ಗುಂಗುರು ಕೂದಲಿನ ಹುಡುಗ ಆಕಾಶ್...

***

‘ಈಗ ಅವಳೇ ಕಾಲ್ ಮಾಡಿದ್ದಳು, ಅದೇ ಮೊನ್ನೆ ಸಿಕ್ಕಿದ್ದಳು ಎಂದಿದ್ದೆನಲ್ಲಾ ಅದೇ ಹುಡುಗಿ. ಮಸ್ತಾಗಿದ್ದಾಳೆ. ಮೂರು ತಿಂಗಳ ಹಿಂದೆ ನನ್ನ ಜೊತೆಗೆ ಊಟಿಗೆ ಬಂದಿದ್ದಳಲ್ಲಾ ಕಾವ್ಯಾ, ಅವಳಿಗಿಂತಲೂ ಚಂದ ಇದ್ದಾಳೆ. ನಮ್ಮ ಕ್ಲಾಸಿನ ರೇಷ್ಮಾ ಇದ್ದಾಳಲ್ಲಾ, ಥೇಟ್ ಅವಳದ್ದೇ ಬಣ್ಣ. ಬಿಳಿ ಬಿಳಿ ಇದ್ದಾಳೆ. ನಾನು ಶ್ರೀಮಂತ, ತಂದೆ ತಾಯಿಗೆ ಒಬ್ಬನೇ ಮಗ, ತಂದೆಯದ್ದೇ ಒಂದು ಕಂಪೆನಿ ಇದೆ, ವರ್ಷಕ್ಕೆ ಕೋಟಿಯ ವ್ಯವಹಾರ ಎಂದೆಲ್ಲಾ ಸುಳ್ಳು ಬಿಟ್ಟಿದ್ದೇನೆ. ನಂಬಿದ್ದಾಳೆ. ಇನ್ನೊಂದೈದು ದಿನ ಅಷ್ಟೇ, ಊಟಿಯಲ್ಲಿ ರೂಮ್ ಬುಕ್ ಮಾಡಿ, ಅವಳೊಂದಿಗೆ ಮಜಾ ಮಾಡುವುದು ಗ್ಯಾರಂಟಿ...’ ಗುಂಗುರು ಕೂದಲನ್ನು ಸವರಿಕೊಂಡು ಸ್ನೇಹಿತನ ಜೊತೆಗೆ ಫೋನ್‍ನಲ್ಲಿ ಮಾತನಾಡುತ್ತಿದ್ದ ಹುಡುಗನ ಕಣ್ಣಿನಲ್ಲಿ ಕೀಚಕ ಕುಣಿಯತೊಡಗಿದ್ದ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT