ಹೊರಗಡೆ ದೋ ಎಂದು ಮಳೆ ಸುರಿಯುತ್ತಿದೆ. ಗುಡುಗಿನ ಶಬ್ದ ಮುಚ್ಚಿದ ಕಿಟಕಿಗಳಿಂದ ತೂರಿ ಬರುತ್ತಿದೆ. ಸಿಕ್ಕಿದ ಒಂದೇ ಹೋಟೆಲ್ ರೂಮಿನಲ್ಲಿ ಈ ಕವಯತ್ರಿ ಜೊತೆ ಈ ರಾತ್ರಿ ಇರುವುದು ಮುಜುಗರ ತರುತ್ತಿದೆ. ಬೇರೆ ದಾರಿಗಾಣದೆ ಇಲ್ಲೇ ಉಳಿಯುವ ಪ್ರಸಂಗ ಎದುರಾಗಿ ಸಿಕ್ಕಿಹಾಕಿಕೊಂಡನೇನೋ ಅನಿಸುತ್ತಿದೆ. ಕವಯತ್ರಿ, ಇರುವ ಒಂದೇ ಹಾಸಿಗೆಯ ಮೇಲೆ ಕುಳಿತು ಯಾವುದೋ ಪುಸ್ತಕ ಓದುತ್ತಿದ್ದಾರೆ. ಕವಿತೆಗಳು. ನಾನೂ ಕವಿಯೇ. ಕವಿ-ಕವಯತ್ರಿ, ಇಬ್ಬರಿಗೂ ಮೂವತ್ತೈದರ ಆಸುಪಾಸು. ರಮ್ಯಗೀತೆಗಳನ್ನು ಸಾಕಷ್ಟು ಬರೆದಿದ್ದೇವೆ. ಕವಯತ್ರಿ ತುಂಬಾ ಸುಂದರವಾದ ಹೆಣ್ಣು, ತೆಳು, ಆಕಾಶ ನೀಲಿ ಸೀರೆ, ಕೆಂಪು ಬಣ್ಣದ ರವಿಕೆ ತೊಟ್ಟಿದ್ದಾರೆ. ಉದ್ದ ಕೂದಲು ಕೆಳಗೆ ಹಾಸಿಗೆಗೆ ಹರಡಿದೆ, ಒಂದೇ ಒಂದು ಕ್ಲಿಪ್ ಹಾಕಿ ಕೂದಲನ್ನು ಬೆನ್ನಿನ ಮೇಲೆ ಹರಿಯ ಬಿಟ್ಟಿದ್ದಾರೆ. ಕೈಯ ತುಂಬಾ ಕೆಂಪು ಗಾಜಿನ ಬಳೆ, ಪುಸ್ತಕದ ಪುಟ ತಿರುಗಿಸುವಾಗ ಬಳೆ ಮಾಡುವ ಶಬ್ದ ಕಿವಿಗೆ ಇಂಪಿಗಿಂತ, ಮೋಹಕವಾಗಿದೆ. ಅವರು ಕುಳಿತಿರುವ ಭಂಗಿ ಯಾವೊದೋ ಕಲಾಕೃತಿಯಂತೆ ಇದೆ. ಕತ್ತಿನಲ್ಲಿ ಬಂಗಾರದ ಉದ್ದ ಸರ ಇದೆ, ಆ ಸರದ ಸುತ್ತ ಕೂದಲು ಲಾಸ್ಯವಾಡುತ್ತಿವೆ. ಪರಿಸರದ ಪರಿವೆಯೇ ಇಲ್ಲದೆ ಕವಿತೆಗಳಲ್ಲಿ ಮುಳುಗಿ ಹೋಗಿದ್ದಾರೆ, ಆಗಾಗ ಕೆಂಪು ತುಟಿಯಲ್ಲಿ ತುಸುನಗೆ ಮೂಡುತ್ತದೆ. ಬೆಳ್ಳಗಿನ ಕೆನ್ನೆ, ಗಂಭೀರ ಮುಖ. ಹೆಣ್ಣು ಹದಿನಾರ ವಯಸ್ಸಿಗಿಂತ ಮೂವತ್ತರ ವಯಸ್ಸಿನಲ್ಲೇ ಹೆಚ್ಚು ಸುಂದರವಾಗಿ ಕಾಣಿಸುತ್ತಾಳೆ ಎನಿಸುತ್ತದೆ. ಏಕೆಂದರೆ ಹದಿಹರಯದ ಚೆಲ್ಲು, ಅತೀ ಮುಗ್ದತೆ, ಪ್ರಪಂಚದ ಅರಿವಿಲ್ಲದಿರುವುದು, ಗಾಂಭೀರ್ಯ ಇರದಿರುವುದು, ಇವೆಲ್ಲಾ ಮೂವತ್ತರ ನಂತರ ಬದಲಾಗುತ್ತವೆ. ಮೂವತ್ತರ ವಯಸ್ಸಿಗೆ ಗಾಂಭೀರ್ಯ ಹೊಂದಿದ ಮುಖ, ಎಲ್ಲವನ್ನೂ ತಿಳಿದುಕೊಂಡಿರುವ ಮನಸ್ಸು, ಪರಿಸರವನ್ನು ನಿಭಾಯಿಸುವ ಶಕ್ತಿ ಎಲ್ಲವು ಕೂಡಿ ಬಂದು ಸೌಂದರ್ಯ ತುಸು ಹೆಚ್ಚೇ ಆಗುತ್ತದೆ. ಜೀವನಸ್ಥಿರತೆ ಇನ್ನೂ ಹೆಚ್ಚು ನಿರಾಳ ನೀಡುತ್ತದೆ.

ಇಷ್ಟೋತ್ತಿಗಾಗಲೇ ನೀವು ಗಂಡಸು ಬುದ್ದಿ ಅಂದುಕೊಂಡಿರಬಹದು, ಗಂಡಸರು ಎಷ್ಟೇ ಒಳ್ಳೆಯವರಾಗಿದ್ದರೂ ಹೆಣ್ಣಿನ ಸೌಂದರ್ಯದ ಸೆಳೆತ ಉಂಟೇ ಉಂಟಾಗುತ್ತದೆ. ಅದು ಪ್ರಕೃತಿ ದತ್ತ. ಒಳ್ಳೆಯವರು ಎಂದು ಅನಿಸಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟಪಡಬಹುದೇನೋ, ಆದರೆ ಒಳಹೊಕ್ಕು ನೋಡಿದರೆ ಹೆಣ್ಣಿನ ಸೌಂದರ್ಯ ಸಂತೋಷದ ಅಲೆಗಳನ್ನು ಎಬ್ಬಿಸಿಯೇ ಎಬ್ಬಿಸುತ್ತವೆ. ಎಲ್ಲಾ ವಿಕಾರವಾಗುವುದು ಅತಿರೇಕಕ್ಕೆ ಹೋದಾಗ, ಇಲ್ಲ ಹೆಣ್ಣಿನ ಇಷ್ಟದ ವಿರುದ್ಧ ಹೋದಾಗ ಮಾತ್ರ.

ತನ್ನನು ಒಬ್ಬ ಪುರುಷ ಗಮನಿಸುವುದು ಹೆಣ್ಣಿಗೆ ತಿಳಿದೇ ತಿಳಿಯುತ್ತದೆ. ಪುರುಷ ಇಷ್ಟದವನಾಗಿದ್ದರೆ ಸಂತೋಷವೂ, ಇಷ್ಟವಿಲ್ಲದಿದ್ದರೆ ಮುಜುಗರವೂ ಆಗುತ್ತದೆ. ಕೆಲವು ಸಲ ಏನನ್ನೂ ವ್ಯಕ್ತಪಡಿಸದ ಕಲೆ ಹೆಣ್ಣಿಗೆ ಸಿದ್ಧಿಸಿರುತ್ತದೆ. ಒಳಗೆ ಎಂತಹ ತರಂಗಗಳು ಎದ್ದರೂ ಅವು ಮನಸಿನಾಚೆಗೆ ಸುಳಿಯುವುದಿಲ್ಲ. ಗಂಡಿಗಿಂತ ಹೆಣ್ಣು ಹೆಚ್ಚು ಸೂಕ್ಷ್ಮಳೂ, ಬುದ್ಧಿವಂತಳೂ ಆಗಿರುತ್ತಾಳೆ. ಹೆಣ್ಣಿಗೆ ಸಂದರ್ಭಗಳನ್ನು ನಿಭಾಯಿಸುವ ಶಕ್ತಿ ಹೆಚ್ಚು ಇರುತ್ತದೆ. ಹಿಂದಿನಿಂದ, ಗಂಡಿಗೆ ಸಿಕ್ಕ ಅವಕಾಶಗಳು ಹೆಣ್ಣಿಗೆ ಸಿಕ್ಕಿದ್ದಿದ್ದರೆ ಇಂದು ಹೆಣ್ಣು ಇನ್ನೂ ಎತ್ತರಕ್ಕೆ ಏರುವುದಲ್ಲದೆ ಪ್ರಪಂಚವನ್ನು ಇನ್ನೂ ಹೆಚ್ಚು ಸುಂದರವಾಗಿರಿಸುತ್ತಿದ್ದಳು. ಮನೆಯಲ್ಲಿ ಹೆಣ್ಣಿನ ಇರುವಿಕೆಯೇ ನೆಮ್ಮದಿ.

ಮಂಗಳೂರಿನ ಕನ್ನಡ ಸಂಘದವರು ಕನ್ನಡ ರಾಜ್ಯೋತ್ಸವಕ್ಕೆ ನನ್ನನು ಅತಿಥಿ ಆಗಿ ಬರಲು ಸಾಧ್ಯವೇ ಎಂದು ಕೇಳಿದ್ದರು. ಮಂಗಳೂರಿನ ಕಡಲ ತೀರವೆಂದರೆ ನನಗೂ ಇಷ್ಟವೇ, "ಸರಿ" ಎಂದು ಒಪ್ಪಿಕೊಂಡಿದ್ದೆ. ನಾನಿರುವ ಊರಿನಿಂದ ಮೂರು ಗಂಟೆಯ ಪ್ರಯಾಣ. ಕಾರ್ಯಕ್ರಮ ಬೆಳಿಗ್ಗೆ ಹತ್ತು ಗಂಟೆಗೆ, ಸರಿ ಬೆಳಿಗ್ಗೆ ಆರು ಗಂಟೆಗೆ ಹೊರಟರೂ, ಸಂಜೆ ವಾಪಸ್ ಆಗಬಹುದು. ಹೆಂಡತಿ ಸ್ವಾತಿ, ಎರಡನೇ ಮಗುವಿನ ಬಾಣಂತನಕ್ಕೆ ತವರಿಗೆ ಹೋಗಿದ್ದಾಳೆ. ಪತ್ನಿ ಕವಿಯಲ್ಲದಿದ್ದರೂ "ತೌರ ಸುಖದಳೆನ್ನ ಮರೆತಿಹಳು ಎನ್ನದಿರಿ" ಎಂದು ಪತ್ರ ಬರೆಯುವಷ್ಟು ರೋಮ್ಯಾಂಟಿಕ್. ಅವಳೆಂದರೆ ನನಗೆ ಇನ್ನಿಲ್ಲದ ಪ್ರೀತಿ.

ಕಾರ್ಯಕ್ರಮ ಮುಗಿದಾಗ ಸಂಜೆ ಐದು ಗಂಟೆ, ಇನ್ನೂ ಬಿಸಿಲಿತ್ತು. ಬಂದಿದ್ದವರೆಲ್ಲಾ ಹೊರಡತೊಡಗಿದ್ದರು. ನಾನು ಹೊರಗಡೆ ಬಂದು ಬಸ್ಸಿಗಾಗಿ ನಿಲ್ದಾಣದ ಕಡೆ ನಡೆಯುವುದೋ, ಇಲ್ಲಾ ಸಮುದ್ರ ತೀರಕ್ಕೆ ಹೋಗಿ ಸ್ವಲ್ಪ ಸಮಯ ಕಳೆಯುವುದೋ ಎನ್ನುವ ಗೊಂದಲದಲ್ಲಿ ನಿಂತಿದ್ದೆ. ಸರಿ ಇನ್ನೂ ಸಮಯವಿದೆ, ಸಮುದ್ರ ತೀರಕ್ಕೆ ಹೋಗೋಣ ಎಂದು ಆ ಕಡೆ ನಡೆಯಲು ತಿರುಗಿದಾಗ "ಸರ್" ಎಂದು ಹೆಣ್ಣಿನ ದನಿ ಕೇಳಿಸಿತು. ಹಿಂದೆ ತಿರುಗಿದರೆ ಕಾರ್ಯಕ್ರಮಕ್ಕೆ ಬಂದಿದ್ದ ಕವಯತ್ರಿ, ಅವರ ಹೆಸರು ಪಲ್ಲವಿ. ‘ಪ್ರಕೃತಿ’ ಎನ್ನುವ ಕಾವ್ಯನಾಮದಿಂದ ಕವಿತೆ ಬರೆಯುತ್ತಾರೆ. ಅವರ ‘ಎದೆಯಲ್ಲಿ ಅರಳಿದ ಹೂವು’ ಕವನ ಸಂಕಲನದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ದೆ. ಅಲ್ಲಿನ ಕವನಗಳಿಂದ ಪ್ರಭಾವಿತನಾಗಿದ್ದೆ. ಅಲ್ಲೇ ನಿಂತೆ.

ಹತ್ತಿರ ಬಂದವರೆ "ಸರ್ ನಿಮ್ಮ ಮಾತು ತುಂಬಾ ಚೆನ್ನಾಗಿತ್ತು" ಎಂದಳು . "ಥ್ಯಾಂಕ್ಸ್ " ನಾನೆಂದೆ.

"ಬಸ್ ಸ್ಟ್ಯಾಂಡ್ಗೆ ಹೊರಟಿರಾ' ಎಂದಳು. "ಇಲ್ಲ, ಇಲ್ಲೇ ಬೀಚ್ ಹತ್ತಿರ ಹೋಗೋಣ ಎಂದು" ಎಂದೆ.

"ಹೌದಾ! ನಡೆಯಿರಿ ನಾನೂ ಬರುತ್ತೇನೆ. ಬೀಚ್ ನೋಡಿ ತುಂಬಾ ದಿನ ಆಯಿತು" ಎಂದು ನಡೆಯತೊಡಗಿದಳು. ಸರಿ ನಾನೂ ಹೆಜ್ಜೆ ಹಾಕಿದೆ.

ಇದೊಂದು ಸೋಜಿಗವಾಗಿ ಕಂಡಿತಾದರೂ, ಒಬ್ಬನೇ ಬೀಚಿನಲ್ಲಿ ಕುಳಿತಿರುವುದಕ್ಕಿಂತ ಸಮಾನ ಅಭಿರುಚಿಯೊಂದಿದ ಒಬ್ಬರು ಸಿಕ್ಕಿದ್ದು ಒಳ್ಳೆಯದೇ ಅನಿಸಿತು. ದಾರಿಯುದ್ದಕ್ಕೂ ಅವಳು ಮಾತನಾಡುತ್ತಲೇ ಇದ್ದಳು. ಸಿಹಿಯಾದ ದನಿ ಅನಿಸಿತು. ಸಾಹಿತ್ಯ, ಸಂಗೀತ, ರಾಜಕಾರಣ ಎಲ್ಲವೂ ಅವಳ ಮಾತಿನಲ್ಲಿ ಬಂದು ಹೋದವು. ನಾನು "ಆ, ಹೂಂ" ಅಂತಿದ್ದೆ. ಅವಳು ತುಂಬಾ ಬುದ್ದಿವಂತಳು ಅನಿಸಿತು.

ಅದು ಇದೂ ಮಾತನಾಡುತ್ತಾ ಸಮುದ್ರ ತೀರಕ್ಕೆ ಬಂದೆವು. ಸೂರ್ಯನ ಬೆಳಕು ಪ್ರತಿಫಲಿಸಿ, ನೀರೆಲ್ಲಾ ಬೆಳಕಾದಹಾಗೆ ಸಮುದ್ರ ಕಂಡಿತು. ಸಮುದ್ರದ ಹತ್ತಿರಕ್ಕೆ ಓಡಿದ ಪಲ್ಲವಿ, ಚಿಕ್ಕ ತುಂಟ ಹುಡುಗಿಯಂತೆ, ಅಲೆಗಳೊಡನೆ ಆಟವಾಡತೊಡಗಿದಳು. ಸೀರೆಯ ನೆರಿಗೆಗಳನ್ನು ಎತ್ತಿ ಅಲೆ ಬಂದಾಗ ಅಲೆಗಳಿಂದ ದೂರ ಓಡುವುದು, ಅಲೆ ಸಮುದ್ರಕ್ಕೆ ಹಿಂತಿರುಗಿದಾಗ ಹಿಂಬಾಲಿಸುವುದು ಮಾಡುತಿದ್ದಳು. ಅವಳ ಬಿಳಿ ಪಾದದಲ್ಲಿನ ಬೆಳ್ಳಿ ಗೆಜ್ಜೆಗಳು ಸುಂದರವಾಗಿ ಕಾಣಿಸುತ್ತಿದ್ದವು.

ಇದ್ದಕಿದ್ದಹಾಗೆಯೇ ಮೋಡ ಕವಿಯಿತು. ಆಗಸವೆಲ್ಲಾ ಕಪ್ಪುಮೋಡದಿಂದ ತುಂಬಿ ಹೋಯಿತು.ಸೂರ್ಯ ಮೋಡಗಳ ಒಳಗೆ ಮರೆಯಾಗಿ ಕತ್ತಲು ಆವರಿಸಿದಂತಾಯಿತು. ಈಗಷ್ಟೇ ಇಲ್ಲಿ ಸೂರ್ಯ ರಶ್ಮಿ ಇತ್ತು ಎನ್ನುವುದು ನಂಬುವುದೇ ಅಸಾಧ್ಯ ಎನ್ನುವ ಮಟ್ಟಿಗೆ ಕತ್ತಲು ಕವಿಯಿತು. ಎಲ್ಲರೂ ಮಳೆ ಬರಬಹುದು ಎಂದು ಅಲ್ಲಿಂದ ಎದ್ದು ಓಡತೊಡಗಿದರು. ನಾನು "ಪಲ್ಲವಿ ಅವರೆ" ಎಂದು ಜೋರಾಗಿ ಕೂಗಿದೆ.

ನಾವಿಬ್ಬರೂ ರಸ್ತೆಗೆ ಬರುವಷ್ಟರಲ್ಲಿ ಮಳೆ ಜೋರಾಗಿ ಸುರಿಯತೊಡಗಿತು. ಎಲ್ಲಿ ಹೋಗುವುದೋ ತಿಳಿಯದೆ ಅಲ್ಲೇ ಇದ್ದ ಅಂಗಡಿ ಮಳಿಗೆಯ ಮುಂಭಾಗ ನಿಂತೆವು. ಅಂಗಡಿ ಆಗಲೆ ಮುಚ್ಚಿತ್ತು.

ಏನು ಮಾಡುವುದು ಎಂದು ಅವಳ ಕಡೆ ನೋಡಿದೆ. ಅವಳು ನಿರಾಳವಾಗಿ ನಿಂತಿದಳು. ಜೊತೆಯಲ್ಲಿ ಪುರುಷನಿದ್ದರೆ ತನ್ನ ಜವಾಬ್ದಾರಿಯೆಲ್ಲಾ ಅವನದೇ ಎಂದು ಹೆಣ್ಣು ತಿಳಿಯುತ್ತಾಳೆಯೇ ಎನಿಸಿತು. ಇಲ್ಲೇ ಇದ್ದರೆ ರಾತ್ರಿಯೆಲ್ಲಾ ಇಲ್ಲೇ ಕಳೆಯಬೇಕೇನೋ ಅನಿಸಿತು. ನಮ್ಮ ಅದೃಷ್ಟಕ್ಕೆ ಎಂಬಂತೆ ಒಂದು ಆಟೋ ನಮ್ಮ ಕಡೆ ಬರುತ್ತಿರುವುದು ಕಾಣಿಸಿತು. ಹೋಗಿ ದಾರಿಗೆ ಅಡ್ಡನಿಂತೆ.

"ಸ್ವಲ್ಪ ನಮ್ಮನ್ನು ಹತ್ತಿರದ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಲು ಸಾಧ್ಯವೇ" ಎಂದೆ.

ಅವನು ಸ್ವಲ್ಪ ಯೋಚಿಸಿ ಹೊತ್ತು "ಬನ್ನಿ’' ಎಂದ.

ಆಟೋ ಹತ್ತಿದೆವು. ಮುಂದೆ ಸಾಗಿದರೆ ರಸ್ತೆಯೆಲ್ಲಾ ನೀರು. ಚಾಲಕ ಆಟೋವನ್ನು ಕಷ್ಟದಿಂದ ನಡೆಸುತ್ತಿದ್ದ. ರಸ್ತೆ ಯಾವುದು ಗುಂಡಿ ಯಾವುದೋ ತಿಳಿಯದೆ ಸಾಧ್ಯವಾದಷ್ಟು ನಿಧಾನವಾಗಿ ಚಲಿಸುತ್ತಿದ್ದ. ಕರೆಂಟು ಹೋಗಿ ತುಂಬಾ ಹೊತ್ತು ಆಗಿತ್ತು.

ಅಂತೂ ಇಂತೂ ಒಂದು ಗಂಟೆಯ ಸ್ಲೋ ಮೋಶನ್ ಪ್ರಯಾಣದಲ್ಲಿ ಒಂದು ಹೋಟೆಲ್ ತಲುಪಿದೆವು. ಕೌಂಟರ್ ಹತ್ತಿರ ತಲುಪಿದಮೇಲೆ ತಿಳಿದಿದ್ದು ಯಾವುದೇ ರೂಮ್ ಖಾಲಿ ಇಲ್ಲ ಎಂದು. ಹೋಟೆಲ್ ಮ್ಯಾನೇಜರ್ ಹತ್ತಿರ ಗೋಗೆರೆಯುತ್ತಿದ್ದಾಗ ಅವನಿಗೆ ಒಂದು ಫೋನ್ ಬಂತು "ಹೌದಾ ಸರ್,ಓಕೆ, ಸರ್" ಎಂದು ಫೋನ್ ಇಟ್ಟು "ನಿಮ್ಮಅದೃಷ್ಠ ಚನ್ನಾಗಿದೆ. ಅದು ನಮ್ಮ ಓನರ್ ಫೋನ್ ಅವರು ಇಂದು ಇಲ್ಲಿ ಬರಬೇಕಾಗಿತ್ತು. ಆದರೆ ಮಳೆಯಿಂದ ಬರಲಾಗುವುದಿಲ್ಲ ಎಂದರು" ಎಂದು "ಅವರ ರೂಮ್ ನಿಮಗೆ ಕೊಡುತೇನೆ" ಎಂದ. ನಾನು "ತುಂಬಾ ಧನ್ಯವಾದಗಳು" ಎಂದೆ.

ಪಲ್ಲವಿ ಯಾರಿಗೋ ಫೋನ್ ಮಾಡಿ ವಿಷಯ ತಿಳಿಸಿದಳು.

" ನೀವು ರೂಮ್ಗೆ ಹೋಗಿ ನಾನು ಇಲ್ಲೇ ಎಲ್ಲಾದರೂ ಮಲಗುತ್ತೇನೆ" ಎಂದೆ.

ಪಲ್ಲವಿ ಸುತ್ತಲೂ ನೋಡುತ್ತಾ " ಇಲ್ಲಿ ನೋಡಿದ್ರ ಎಷ್ಟು ಜನ ಇದಾರೆ, ನೀವು ಇಲ್ಲಿ ಮಲಗಲು ಸಾಧ್ಯವೇ ಇಲ್ಲ, ಪರವಾಗಿಲ್ಲ ಬನ್ನಿ" ಎಂದಳು.

ರೂಮ್ ಚನ್ನಾಗಿತ್ತು. ಹೋಟೆಲ್ನಲ್ಲಿ ಯುಪಿಎಸ್ ಇದ್ದುದ್ದರಿಂದ ಲೈಟ್ಸ್ ಎಲ್ಲ ಬೆಳಗುತ್ತಿದ್ದವು.

ಹಾಸಿಗೆಯ ಮೇಲೆ ಕುಳಿತು ಪುಸ್ತಕ ಓದುತ್ತಿದ್ದ ಪಲ್ಲವಿಯನ್ನು ನಾನು ನೋಡುತ್ತಿರುವುದು ಅವಳ ಗಮನಕ್ಕೆ ಬಂತೇನು ಎಂಬಂತೆ ತಲೆ ಎತ್ತಿ ನಸು ನಕ್ಕಳು. ನಾನು ತಲೆ ತಗ್ಗಿಸಿದೆ.
ಮೌನ ತುಸು ಹೆಚ್ಚಾಯಿತು ಅನಿಸಿತು. ಮಳೆ, ಮಿಂಚು, ಗುಡುಗು ಕೂಡ ಮೌನದ ಭಾಗವಾದಂತಾಯಿತು, ಎಷ್ಟೋಸಲ ಒಂದೇ ಶಬ್ದ ನಿರಂತರವಾಗಿ ಕೇಳಿಸುತಿದ್ದರೆ ಅದು ನಮ್ಮ ಒಂದು ಭಾಗವಾಗಿ ಅದು ಶಬ್ದ ಅನಿಸುವುದೇ ಇಲ್ಲ. ಅಷ್ಟು ಮಾತನಾಡುತ್ತಿದ್ದವಳು ಇಷ್ಟು ಮೌನವಾಗಿರುವುದು ಕಂಡು ಆಶ್ಚರ್ಯವಾದರೂ ಅವಳು ಓದುತ್ತಿರುವ ಪುಸ್ತಕ ತುಂಬಾ ಆಸಕ್ತಿದಾಯಕವಾಗಿರಬೇಕು ಅನಿಸಿತು.

ಮೌನ ಮುರಿಯಲು ಎಂಬಂತೆ " ನಿಮ್ಮ ಮನೆಯಲ್ಲಿ ವಿಷಯ ತಿಳಿಸಿದ್ರಾ" ಎಂದೆ.

"ಹೌದು ಆಗಲೇ ಫೋನ್ ಮಾಡಿ ಹೇಳಿದೆ ಬೆಳಿಗ್ಗೆ ಬರುತ್ತೇನೆ ಎಂದು" ಎಂದಳು.

"ನೀವು ವಿಷಯ ಯಾರಿಗೂ ತಿಳಿಸಲಿಲ್ಲ" ಎಂದಳು.

ಹೆಂಡತಿ ತವರಿಗೆ ಹೋಗಿರುವ ವಿಷಯ ತಿಳಿಸಿದೆ.

"ನೀವು ನಿಮ್ಮ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತೀರಾ?" ಎಂದಳು. ಇದೊಂದು ಗಂಭೀರ ಪ್ರಶ್ನೆಯೇ, ಇಲ್ಲ ಪ್ರಶ್ನೆಯಲ್ಲಿ ಕೀಟಲೆಯಿದೆಯೇ ಎಂದುಕೊಂಡು ಅವಳ ಮುಖ ನೋಡಿದೆ, ಗಂಭೀರವಾಗಿದ್ದಳು.

ಎಷ್ಟು ಎಂದರೆ, ಹೇಗೆ ಹೇಳುವುದು, ಕಾವ್ಯಾತ್ಮಕವಾಗಿ ಹೇಳಿದರೂ ಅದು ಇನ್ನೊಬ್ಬ ಕವಿಯ ಹತ್ತಿರ ಕ್ಲೀಷೆ ಅನಿಸಬಹದು, ಏನೂ ಹೇಳದೆ ಸುಮ್ಮನೆ ಮುಗುಳ್ನಕ್ಕೆ.

"ಹೇಳಿ ಪರವಾಗಿಲ್ಲ".

" ನೋಡಿ ಗಂಡ ಹೆಂಡತಿಯ ನಡುವೆ ಪ್ರೀತಿ, ಗೌರವ, ಅಭಿಮಾನ, ಹೆಮ್ಮೆ ಮತ್ತು ನಂಬಿಕೆ ಇರಬೇಕು, ಅದು ನಮ್ಮ ನಡುವೆ ಇದೆ ಅನಿಸುತ್ತದೆ"

"ಹೌ ಸ್ವೀಟ್" ಎಂದ ಅವಳು, "ಪ್ರೀತಿ, ಗೌರವ, ಅಭಿಮಾನ, ಹೆಮ್ಮೆ ಮತ್ತು ನಂಬಿಕೆ" ಎಂದು ಪುನರುಚ್ಛರಿಸಿ ಮುಂದುವರೆಯುತ್ತಾ,

"ಪ್ರೀತಿ ಹೇಗೆ ವ್ಯಕ್ತಪಡಿಸುವುದು, ಯಾವುದನ್ನು ಪ್ರೀತಿ ಎನ್ನುವುದು, ಕಾಮವನ್ನು ಪ್ರೀತಿ ಅಂಗಳದಿಂದ ಹೊರಗಡೆ ಇಟ್ಟರೆ, ಈ ಪ್ರೀತಿ ಯಾವುದಿರಬಹುದು? ಒಬ್ಬರಿಗೊಬ್ಬರ ನೋವಿಗೆ ಮಿಡಿಯುವುದು ಪ್ರೀತಿ ಎನ್ನಬಹುದೇ?, ಬಹುಶ ಹೆಣ್ಣೇ ಹೆಚ್ಚು ಪ್ರೀತಿ ವ್ಯಕ್ತಪಡಿಸುವುದಲ್ಲವೇ? ಏಕೆಂದರೆ ಅವಳ ಪ್ರಪಂಚ, ಮನೆ, ಗಂಡ, ಮಕ್ಕಳೇ ಅಲ್ಲವೇ? ಹೆಣ್ಣು ಪ್ರಪಂಚ ಗೆದ್ದರೂ ಕೊನೆಗೆ ಯೋಚಿಸುವುದು ತನ್ನ ಕುಟುಂಬದ ಬಗ್ಗೆ ಮಾತ್ರ. ಇನ್ನು ಪರಸ್ಪರ ಗೌರವ ಸಿಗಬೇಕಾದರೆ, ಇಬ್ಬರೂ ಗೌರವ ತರುವಂತೆ ನಡೆದುಕೊಳ್ಳಬೇಕು. ನೀನು ಎಲ್ಲಾ ಹೆಂಗಸರಂತೆ ಅಥವಾ ನೀನು ಎಲ್ಲಾ ಗಂಡಸರಂತೆ ಎಂದು ಪರಸ್ಪರ ಹೇಳಿಕೊಳ್ಳುವ ಪ್ರಸಂಗ ಬರಬಾರದು, ಅಭಿಮಾನ ಮತ್ತು ಹೆಮ್ಮೆ ಎನ್ನುವುದು ನಾವು ಹೇಗೆ ಮನೆಯನ್ನು ನಿಭಾಯಿಸುತ್ತೇವೆ, ಹೇಗೆ ನಮ್ಮ ಕಾರ್ಯಗಳಲ್ಲಿ ಸಕ್ಸಸ್ ಆಗುತ್ತೇವೆ ಎನ್ನುವುದರಿಂದ ಆಗುತ್ತದೆ. ಇನ್ನು ನಂಬಿಕೆ ಇಲ್ಲದಿದ್ದರೆ ಜೊತೆಗೆ ಇರುವುದಾದರೂ ಹೇಗೆ?.

ಹಾಗೆ ಮಾತನಾಡುತ್ತ ಇದ್ದಕ್ಕಿಂದಂತೆ ಬೇರೆ ವಿಷಯಕ್ಕೆ ಹೊರಳಿದಳು.

"ಗಂಡು ಹೆಣ್ಣಿನ ಸೌಂದರ್ಯ ಅಷ್ಟೊಂದು ಸೋಲುವುದೇಕೆ? ಪರಸ್ತ್ರೀಯನ್ನು ನೋಡುವಾಗಿನ ಗಂಡಿನ ಆಸೆಗಳು ಏನಿರಬಹುದು. ಹೆಣ್ಣಿಗೂ ಆಸೆಗಳು ಬರುತ್ತವೆ, ಆದರೆ ಅವನ್ನು ಕ್ರಿಯೆಯ ಇಳಿಸುವ ಮಟ್ಟಕ್ಕೆ ಅವಳು ಹೋಗುವುದಿಲ್ಲ. ತನ್ನ ಮಗಳು ಎಷ್ಟೇ ಸುಂದರಿಯಾದರೂ ಅಪ್ಪನಿಗೆ ಮಮತೆಯಲ್ಲದೆ ಬೇರೆಯದೇ ಭಾವನೆ ಉಂಟಾಗುವುದಿಲ್ಲ. ಅದೇ ಅಪ್ಪ ಬೇರೆ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಬೇರೆಯಾಗುತ್ತದೆ. ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡುವ ಹಾಗೆ ನೋಡಿದರೆ, ಅಷ್ಟೇ ಅಲ್ಲ ಎಲ್ಲಾ ಹೆಣ್ಣು ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಪಾಡಿದರೆ ಸಮಾಜ ಎಷ್ಟೊಂದು ಸೊಗಸಾಗಿರುತ್ತದೆ. ಹೆಣ್ಣಿಗೂ ಏನೇನೋ ಬಯಕೆಗಳು ಇರುತ್ತವೆ. ಇಲ್ಲಿ ನಾನು ಪರಸ್ಪರ ಒಪ್ಪಿತ ಒಲವಿನ ಬಗ್ಗೆ ಮಾತನಾಡುತ್ತಿಲ್ಲ, ವಿಕಾರದ ಬಗ್ಗೆ ಮಾತ್ರ ಎಂದು ತನ್ನೊಳಗೆ ತಾನೇ ಮಾತನಾಡುತ್ತಿದ್ದವಳು "ಸಾರಿ" ಎಂದು ನಿಲ್ಲಿಸಿದಳು.

"ಪರವಾಗಿಲ್ಲ ಮಾತನಾಡಿ" ನಾನೆಂದೆ.

"ಒಂದು ಹೆಣ್ಣು ಒಂದು ಗಂಡಿಗೆ ಆಕರ್ಷಿತಳಾಗುವುದಕ್ಕೂ, ಒಂದು ಗಂಡು ಒಂದು ಹೆಣ್ಣಿಗೆ ಆಕರ್ಷಿತನಾಗುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ. ಹೆಣ್ಣು ಸೋಲುವುದು ಗಂಡಿನ ಸೌಂದರ್ಯಕ್ಕೆ ಅಲ್ಲ, ಅವನ ವ್ಯಕ್ತಿತ್ವಕ್ಕೆ, ಒಳ್ಳೆಯ ಗುಣಕ್ಕೆ, ಮಾತುಗಾರಿಕೆಗೆ. ಆದರೆ ಗಂಡಿಗೆ ಹೆಣ್ಣಿನ ಸೌಂದರ್ಯವೇ ಮುಖ್ಯ. ಮೊದಲು ಸೋಲುವುದು ಬಾಹ್ಯ ಸೌಂದರ್ಯಕ್ಕೆ, ಹೆಣ್ಣನ್ನು ನೋಡಲು ಬರುವ ಗಂಡಿಗೆ ಕಾಣಿಸಬೇಕಾಗಿರುವುದು ಹೆಣ್ಣಿನ ಸೌಂದರ್ಯ ಮಾತ್ರ. ಅದಕ್ಕೆ ಅಷ್ಟು ಅಲಂಕಾರ ಮಾಡಿ ಹೆಣ್ಣನ್ನು ತೋರಿಸುವುದು. ಗಂಡಿನ ಬಗ್ಗೆ ಒಂದೇ ಮಾತು, ಹುಡುಗ ಒಳ್ಳೆಯವನು ಅಂತ. ಹುಡುಗನ ಒಳ್ಳೆಯತನ ಗೊತ್ತಾಗುವುದು ಅವನಿಗೆ ತುಂಬಾ ಹತ್ತಿರವಾದಾಗ ಮಾತ್ರ. ಅದಕ್ಕೆ ಅವನ ಪ್ರೇಯಸಿಯೋ, ಹೆಂಡತಿಯೋ ಆಗಿರಬೇಕು. ಯಾರು ಏನೇ ಹೇಳಿದರೂ ಇಬ್ಬರು ತುಂಬಾ ಹತ್ತಿರವಾಗುವವರೆಗೂ ಪರಸ್ಪರರ ಸ್ವಭಾವ ತಿಳಿಯುವುದಿಲ್ಲ.

ಇವಳು ನನ್ನ ಬಗ್ಗೆ ಮಾತನಾಡುತ್ತಿಲ್ಲ ತಾನೇ. ನಾನು ಅವಳ ಸೌಂದರ್ಯ ಆಸ್ವಾದಿಸುತ್ತಿದ್ದಿದ್ದು ಅವಳ ಗಮನಕ್ಕೆ ಬಂದಿರಬಹುದೇ? ಬಂದು ಹೀಗೆ ಮಾತನಾಡುತ್ತಿದ್ದಾಳೆಯೇ? ಮನಸಿಗೆ ಕಸಿವಿಸಿಯಾಯಿತು.

"ಹಾಗಾದರೆ ಪ್ರೀತಿ ಎಂದರೇನು" ನಾನು ಕೇಳಿದೆ.

"ಇನ್ನೊಬ್ಬರನ್ನು ಹೇಗಿದ್ದಾರೋ ಹಾಗೆ, ಅವರ ಒಪ್ಪು ತಪ್ಪುಗಳನ್ನೂ ಸೇರಿಸಿ ಇಷ್ಟಪಡುವುದೇ ಪ್ರೀತಿ. ನೀನು ಹೀಗಿದ್ದರೆ ಮಾತ್ರ ನಾ ನಿನ್ನ ಪ್ರೀತಿಸುವೆ ಎನ್ನುವುದು ಪ್ರೀತಿಯಲ್ಲ. ಎಲ್ಲರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ಅದನ್ನು ತನ್ನವರಿಗಾಗಿ ಸ್ವಲ್ಪ ಬದಲಾಯಿಸಿಕೊಂಡರೂ ಮೂಲ ಹಾಗೆ ಇರುತ್ತದೆ. ಅದು ಯಾವುದೋ ಒಂದು ಸಂದರ್ಭದಲ್ಲಿ ಹೊರಬರುತ್ತದೆ. ಆಗ ನಮ್ಮ ಹತ್ತಿರದವರಿಗೆ ಭ್ರಮನಿರಸನವಾಗುತ್ತದೆ. ಅರೆ ಇವನು ಹಾಗೆ ಅಥವಾ ಇವಳು ಹೀಗೆ ಎಂದುಕೊಂಡಿದ್ದೆನಲ್ಲಾ ಎಂದು. ಎಂಬತ್ತು ಪ್ರತಿಶತ ಒಳ್ಳೆಯ ಗುಣಗಳಿಗಾಗಿ ಒಪ್ಪಿಕೊಂಡವರವನ್ನು ಅವರ ಇಪ್ಪತ್ತು ಪ್ರತಿಶತ ಅವಗುಣಗಳನ್ನೂ ಒಪ್ಪಿಕೊಳ್ಳಬೇಕು. ನಮ್ಮವರನ್ನೂ, ನಮ್ಮ ಸಂಗಾತಿಗಳನ್ನು ನಾವು ಆರ್ಡರ್ ಮಾಡಿ ಪಡೆಯುವುದಕ್ಕೆ ಆಗುವುದಿಲ್ಲ. ಅವರು ಹೇಗಿದ್ದರೂ ನಮ್ಮವರೇ, ಇದು ಇಡೀ ದೇಶಕ್ಕೆ ಅನ್ವಯಸುತ್ತದೆ. ನಮ್ಮ ಸಂಗಾತಿಯಲ್ಲಿ ಯಾವುದೋ ನಮಗೆ ಒಪ್ಪಿಗೆಯಾಗದ ಗುಣ ಇರುತ್ತದೆ ಎಂದು ಒಪ್ಪಿಕೊಳ್ಳಬೇಕು. ಹಾಗೆ ಒಪ್ಪಿಕೊಂಡಾಗ ಅದು ಹೊರ ಬಂದಾಗ ಬೇಸರ, ಗಾಬರಿ ಆಗುವುದಿಲ್ಲ".

ಮಾತನಾಡುತ್ತಲೇ ಪಲ್ಲವಿ ಏನೋ ಎತ್ತಿಕೊಳ್ಳಲು ಬಗ್ಗಿದಳು. ಅವಳ ಸೆರಗು ಜಾರಿತು. ಅವಳ ಸುಂದರ ತುಸು ದೊಡ್ಡದೇ ಎನಿಸುವ ಎದೆ ಮೋಡ ಸರಿದ ಚಂದ್ರನಂತೆ ಮೋಹಕ ಎನಿಸಿದವು. ನಾನು ನನ್ನ ನೋಟವನ್ನು ಪಕ್ಕಕ್ಕೆ ಸರಿಸಿದೆ. ಅವಳು ಸೆರಗು ಸರಿಮಾಡಿಕೊಂಡು ತುಸು ನಕ್ಕಳು. ಅವಳ ನಗುವಿನಲ್ಲಿ ವ್ಯಂಗವೇನಾದರೂ ಇದೆಯೇ ಎಂದು ಹುಡುಕಿದೆ. ಹಾಗೇನೂ ಅನ್ನಿಸಲಿಲ್ಲ, ಅದು ಸಹಜವಾಗಿತ್ತು.

"ಈಗ ನನ್ನ ನೋಡಿ ನಿಮಗೆ ಏನ್ನನಿಸಿತು" ಎಂದಳು.

ನಾನು ಅಂತಹ ಪ್ರಶ್ನೆಯನ್ನು ನೀರೀಕ್ಷೆ ಮಾಡಿರಿರಲಿಲ್ಲ. ಇಂತಹ ಸಂದರ್ಭಗಳು ಗಂಡಿಗೆ ಎಷ್ಟೋ ಸಲ ಬಂದಿರಬಹದು. ಹೆಣ್ಣಿನೊಡನೆ ಮಾತನಾಡುತ್ತಾ ತನಗೇ ಅರಿವಿಲ್ಲದೆ ಗಂಡೊಬ್ಬ ಹೆಣ್ಣಿನ ಎದೆಯ ಕಡೆ ದೃಷ್ಟಿ ನೆಟ್ಟಿರಬಹುದು. ಅದು ದೃಷ್ಟಿ ಮಾತ್ರ, ಮನಸು ಎಲ್ಲೋ ಇರಬಹದು. ಕೆಲವರು ಬೇಕೆಂತಲೇ ನೋಡಲೂಬಹದು.

"ಕೆಟ್ಟ ಆಲೋಚನೆಗಳೇನೂ ಬರಲಿಲ್ಲ. ಆದರೆ ನೀವು ತುಂಬಾ ಸುಂದರಿ ಅನಿಸಿತು. ನನ್ನದು ಸೌಂದರ್ಯ ಉಪಾಸನೆ ಮಾತ್ರ. ಒಂದು ಹೂವನ್ನೋ, ಹಕ್ಕಿಯನ್ನೋ, ಹಸಿರನ್ನೋ ನೋಡಿದಂತೆ"

"ಅದ್ಬುತ" ಎಂದವಳು ಮುಂದುವರೆಸುತ್ತಾ "ನಿಜ ಹೇಳಿ ನಿಮಗೆ ಮದುವೆ ಆಗಿರದಿದ್ದರೆ, ನಾನೇ ನಿಮ್ಮ ಹತ್ತಿರ ಸರಿದಿದ್ದರೆ ನೀವು ನನ್ನನ್ನು ನಿರಾಕರಿಸುತ್ತಿದ್ದಿರಾ?" ಎಂದಳು.

ನನ್ನ ಎದೆ ಧಸಕ್ಕೆಂದಿತು. ಇದೆಂತಹ ಪ್ರಶ್ನೆ. ನನ್ನ ಪ್ರಾಮಾಣಿಕತೆಯನ್ನು ಪಣಕ್ಕೆ ಒಡ್ಡುವ ಪ್ರಶ್ನೆ. ನನಗೆ ಮದುವೆ ಆಗಿಲ್ಲದಿದ್ದರೆ ಇಂತಹ ಸಂದರ್ಭದಲ್ಲಿ ಹೇಗೆ ವರ್ತಿಸುತ್ತಿದ್ದೆ. ಮದುವೆಯಾಗಿದೆ, ನನ್ನವಳೆಂದರೆ ನನಗೆ ತುಂಬಾ ಇಷ್ಟ. ಅವಳ ನೆನಪೇ ಮಧುರ. ಅವಳು ಮನೆಯಲ್ಲಿ ಇದ್ದರೆ ಒಂದು ನೆಮ್ಮದಿ. ಅವಳ ಇರುವಿಕೆಯೇ ಮನಸಿಗೆ ಒಂದು ಮುದ. ಎಷ್ಟೋಸಲ ನಾನು ಎಲ್ಲೋ ಒಂದು ರೂಮಿನಲ್ಲಿ ಕುಳಿತು ಏನಾದರೂ ಓದುತ್ತಿರುತ್ತೇನೆ. ಅವಳು ಇನ್ಯಾವುದೋ ರೂಮಿನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅವಳು ಮನೆಯಲ್ಲಿ ಇದ್ದಾಳೆ ಅನ್ನುವುದೇ ಒಂದು ಖುಷಿ. ಅವಳಿಗೆ ನನ್ನ ಇಷ್ಟ ಗಳು ಗೊತ್ತು, ನನಗೂ ಕೂಡ. ನಾವು ಜಗಳ ಆಡುವುದು ತುಂಬಾ ಕಡಿಮೆ, ನಾನು ಕೋಪಿಸಿಕೊಳ್ಳುವುದಿಲ್ಲ, ಅವಳು ಆಗಾಗ ಕೋಪಿಸಿಕೊಳ್ಳುತ್ತಾಳೆ.

" ನಾನು ಮದುವೆಯಾಗಿಲ್ಲದಿದ್ದರೆ ಎನ್ನುವುದು ಈಗ ಒಂದು ಹೈಪಾಥೆಟಿಕಲ್ ಪ್ರಶ್ನೆ. ಮದುವೆ ಆಗಿಲ್ಲದಿದ್ದರೆ ನಾನು ನಿಮ್ಮನ್ನು ಇಷ್ಟ ಪಡುವ ಅವಕಾಶವಿರುತ್ತಿತ್ತು. ಇಲ್ಲ ಇಷ್ಟಪಡದ ಅವಕಾಶವೂ ಇತ್ತು. ನನ್ನ ಮನ, ದೇಹ ಈ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳುತ್ತಿತ್ತು ಎಂದು ಹೇಳಲು ಈಗ ಅಸಾಧ್ಯ. ದೇಹ ತಯಾರಿದ್ದರೂ ಮನಸು ಅದನ್ನು ನಿಲ್ಲಿಸಲು ಪ್ರಯತ್ನ ಪಡುತ್ತಿತ್ತೇನೋ, ಆದರೆ ಮನಸೇ ಸಿದ್ಧಗೊಂಡರೆ ದೇಹಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ."

ಅವಳು ಮುಗುಳ್ನಕ್ಕಳು. "ನೀವು ನಿಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೀರಿ ಅಲ್ಲವೇ? ಒಂದು ಪರೀಕ್ಷೆ ಮಾಡುವ. ನಾವಿಬ್ಬರು ಇರುವ ಈ ಒಂದೇ ಹಾಸಿಗೆಯಲ್ಲಿ ಮಲಗೋಣ, ಒಂದೇ ರಗ್ಗನ್ನು ಹೊದ್ದಿಕೊಂಡು. ಸಾಧ್ಯವಾದರೆ ಬೆತ್ತಲೆಗೊಂಡು, ಆಗ ನೋಡುವ ನಮ್ಮ ನಿಗ್ರಹ ಶಕ್ತಿ ಎಷ್ಟಿದೆ ಎಂದು, ಏನಂತೀರಿ?

ಅವಕ್ಕಾಗಿ ಅವಳ ಕಡೆ ನೋಡಿದೆ, ಇದೆಂತಹ ವಾದ, ಇದೆಂತಹ ಪರೀಕ್ಷೆ. ಇದೆಲ್ಲ ಬೇಡ ಎನಿಸಿತು.

"ನೋಡಿ ನೀವು ಏನಾದರೂ ನನಗೆ ಪರಸ್ತ್ರೀ ಅಲ್ಲವೇ, ನಿಮ್ಮನ್ನು ಬೆತ್ತಲೆ ನೋಡುವುದೇ, ಇಂತಹ ಪರೀಕ್ಷೆಗೆ ನಾನು ಎಂದೂ ಒಳಗೊಂಡಿಲ್ಲ, ರಾತ್ರಿ ನಿದ್ದೆಯ ಮಂಪರಿನಲ್ಲಿ ನಾನು ಕಾಲೋ ಕೈಯೋ ನಿಮ್ಮ ಮೇಲೆ ಹಾಕಿದರೆ ಅದನ್ನು ನನ್ನ ಇಷ್ಟ ಎಂದು ಪರಿಗಣಿಸುವ ಸಾಧ್ಯತೆ ಇದೆ"

" ಹಾಗಲ್ಲ, ನೀವು ತನ್ನನು ತಾಕಿದಾಗ ನಿಮಗೆ ಎಚ್ಚರ ಆಗೇ ಆಗುತ್ತದೆ. ಆಗ ನೀವು ಮುಂದುವರೆಯುತ್ತಿರೋ ಇಲ್ಲ ಪಕ್ಕಕೆ ತಿರುಗಿ ಮಲಗುತ್ತಿರೋ ನೋಡೋಣ. ಇದು ನಿಮಗೆ ಮಾತ್ರ ಪರೀಕ್ಷೆ ಅಲ್ಲ ನನಗೂ ಕೂಡ. ನೆನಪಿಡಿ ನನಗೂ ಮದುವೆಯಾಗಿದೆ. ಇದು ಸುಮ್ಮನೆ ತಮಾಷೆಗೆ ಎಂದು ಕೊಳ್ಳಿ, ಹಾಗೇನಾದರೂ ನಮ್ಮ ನಿಗ್ರಹ, ನಮ್ಮ ಸಂಗಾತಿ ಮೇಲಿನ ಪ್ರೀತಿ ಕೈಕೊಟ್ಟರೆ, ಅಂತದೊಂದು ಪ್ರೀತಿ ಇಲ್ಲ ಎಂದು ಸಾಬೀತಾಗುತ್ತದೆ" ಎಂದು ಜೋರಾಗಿ ನಕ್ಕಳು.

"ಇದು ಅತಿರೇಕ ಅನ್ನಿಸುವುದಿಲ್ಲವೇ, ಯಾವುದನ್ನೋ ಪರೀಕ್ಷಿಸಲು ಹೋಗಿ ಇನ್ನೇನೋ ಮಾಡಿದಂತೆ, ನೀವು ತುಂಬಾ ಬುದ್ದಿವಂತರು ಹಾಗು ಸೂಕ್ಷಮನಸ್ಸಿನವರು ಎಂದು ಕವನಗಳನ್ನು ಓದಿದರೆ ಅನಿಸುತ್ತದೆ. ಆದರೆ ನೀವು ಇದಕ್ಕೆ ತಯಾರಿದ್ದೀರಿ ಎಂದರೆ"

ಪಲ್ಲವಿ ಇನ್ನೂ ಜೋರಾಗಿ ನಕ್ಕುಬಿಟ್ಟಳು. "ನೋಡಿದಿರಾ ನನ್ನ ಮೇಲಿನ ಅಭಿಪ್ರಾಯ ಎಷ್ಟು ಬೇಗ ಬದಲಾಯಿಸಿ ಕೊಂಡಿರಿ" ಎಂದಳು.

"ಹಾಗಲ್ಲ ನಾವೇನಾದರೂ ತಪ್ಪು ಮಾಡಿದರೆ, ಅದರ ನೋವನ್ನು ಅನುಭವಿಸಬೇಕೆಲ್ಲವೇ, ನಮ್ಮ ಸಂಗಾತಿಗಳು ಹಾಗೆ ಮಾಡಿದರೆ ನಾವು ಒಪ್ಪಿಕೊಳ್ಳಲು ಸಿದ್ಧರಿರಬೇಕಲ್ಲವೇ. ಇಲ್ಲಿ ನಡೆಯುವ ಪ್ರತಿಯೊಂದನ್ನೂ ನಾನು ಮನೆಯಲ್ಲಿ ಹೇಳೇ ಹೇಳುತ್ತೇನೆ, ನನ್ನವಳು ಕೇಳೇ ಕೇಳುತ್ತಾಳೆ, ನಾನು ಇಂತಹ ಪರೀಕ್ಷೆಗೆ ಹೊರಟರೆ ನಿಮಗೆ ಸಮ್ಮತವೇ ಎಂದು "

" ನಮ್ಮ ಸಂಗಾತಿ ಮೇಲಿನ ಪ್ರೀತಿ ನಮ್ಮನ್ನು ಕಾಪಾಡಿಕೊಳ್ಳುತ್ತೆ ಅಲ್ಲವೇ, ನಾವು ಅಷ್ಟು ನಿಷ್ಠರಾಗಿದ್ದರೆ ನಾವು ಈಗಿರುವ ಹಾಗೆಯೇ ನಾಳೆ ಬೆಳಿಗ್ಗೆ ಏಳುತ್ತೆವೆ"

ನಾನು ಸುಮ್ಮನೆ ಅವಳ ಮುಖ ನೋಡಿದೆ, ನಿರಾಳವಾಗಿದ್ದಳು. ಅವಳಿಗೆ ಅವಳ ಮೇಲೆ ಹೆಚ್ಚು ನಂಬಿಕೆ ಇದೆ ಅನ್ನಿಸಿತು.

ಇಂತಹ ಸಂಭಾಷಣೆಯಿಂದ ಇವಳನ್ನು ಹೊರತರುವುದೇ ಸೂಕ್ತ ಅನಿಸಿತು. ಹಾಗಾಗಿ ಅವಳನ್ನು ಕೇಳಿದೆ.

" ನಿಮ್ಮ ಅರ್ಥದಲ್ಲಿ ಸಂತೋಷ ಎಂದರೆ ಏನು?"

ಅವಳು ಸ್ವಲ್ಪ ಹೊತ್ತು ನನ್ನ ನೋಡಿ " ಮನಸು ಉಲ್ಲಸಿತವಾಗಿರುವುದೇ ಸಂತೋಷ. ಅದು ಯಾವ ರೂಪದಲ್ಲಿ ಬಂದರೂ ಸರಿ, ಆದರೆ ಆ ಸಂತೋಷ ಪಶ್ಚಾತ್ತಾಪಕ್ಕೆ ದಾರಿಯಾಗಬಾರದು. ಹಿಂಸೆ ಎನ್ನುವುದು ಅಸಂತೋಷಕರ ಕ್ರಿಯೆ ಆದ್ದರಿಂದ ಅಹಿಂಸೆಯೆ ಸಂತೋಷ. ಹಿಂಸೆಯೆಂದರೆ ದೈಹಿಕ ನೋವೊಂದೇ ಅಲ್ಲ, ಮಾತಿನಲಿ ಮಾನಸಿಕವಾಗಿ ಹಿಂಸಿಸುವುದೂ, ಮನಸಿನಲಿ ಸಂಚು ಹೂಡುವುದೂ ಸಹ. ಆತ್ಮಹತ್ಯೆ ಮಾಡಿಕೊಳ್ಳುವುದೂ ಸಹ. ಬದುಕಲು ಹಾತೊರೆಯುವ ಒಂದು ದೇಹಕ್ಕೆ ಮಾಡುವ ಹಿಂಸೆ. ದೇಹ ನಮ್ಮದಾದರೂ ಅದೂ ಕೂಡ ಬದುಕಲು ಪ್ರಯತ್ನ ಪಡುತ್ತಿರುತ್ತದೆ. ಅಂತಹ ದೇಹವನ್ನು ಕಷ್ಟಪಟ್ಟು, ಹಿಂಸೆಕೊಟ್ಟು ಮುಗಿಸುವುದು ಕೊಲೆಯೇ ಹೌದು. ಒಂದು ಕಾಲದಲ್ಲಿ ಊಟ, ಇರಲು ಜಾಗ ಸಿಕ್ಕರೆ ಅದೇ ಸಂತೋಷ. ಈಗ ಅಂತಹ ಮೂಲಭೂತ ಅಗತ್ಯತೆಗಳಿಗೆ ಕಷ್ಟಪಡುವುದು ಬೇಕಾಗಿಲ್ಲ. ಮನುಷ್ಯನ ಹೊಟ್ಟೆ ತುಂಬಿರುವುದರಿಂದ ಬೇರೆ ಬೇರೆ ಆಸೆ ಅಗತ್ಯಗಳ ಯೋಚನೆ ಎಲ್ಲರನ್ನು ಅಸಂತೋಷಿಗಳನ್ನಾಗಿ ಮಾಡಿದೆ.
ಅವಳು ಸ್ವಗತ ಎಂಬಂತೆ ಮಾತನಾಡಿಕೊಳ್ಳುತ್ತಲೇ ಇದ್ದಳು.

"ಸಂತೋಷವೆಂಬುದು ಏನು? ಅದು ಎಲ್ಲಿರುತ್ತದೆ? ಬಾಹ್ಯದ ಆತಂಕಗಳಿಗೆ ಆಂತರಿಕವಾಗಿ ಗಲಿಬಿಲಿಗೊಳ್ಳುವುದ ಸಂಬಾಳಿಸುವುದು ಹೇಗೆ? ಮನಸಿನೊಳಗೆ ಬರೀ ಸಂತೋಷವನ್ನೇ ತುಂಬಿಕೊಳ್ಳುವುದು ಹೇಗೆ? ನಮ್ಮದೇ ಒಂದು ಪ್ರಪಂಚ ಸೃಷ್ಟಿಸಿಕೊಳ್ಳುವುದು ಹೇಗೆ? ನಮ್ಮ ಏಕಾಂತಕ್ಕೆ ನಮ್ಮನ್ನೇ ಜೊತೆಮಾಡಿಕೊಳ್ಳುವುದು ಹೇಗೆ? ಪ್ರಶ್ನೆಗಳು, ಉತ್ತರವಿಲ್ಲದ ಅಥವಾ ಅನುಸರಿಸಲಾಗದ ಉತ್ತರವಿರುವ ಪ್ರಶ್ನೆಗಳು. ಎಲ್ಲರೂ ತಮಗೆ ಸರಿ ಎಣಿಸಿದ ಉತ್ತರಗಳ ಕಾಣಿಸಿದ್ದಾರೆ. ಆದರೆ ಅವು ಎಷ್ಟು ಪ್ರಾಯೋಗಿಕ. ಎಷ್ಟು ಅನುಕರಣೀಯ, ಎಷ್ಟು ಸಂತೋಷಕರ ಎಂದು ತಿಳಿಯಾಗುತ್ತಿಲ್ಲ. ಊಟ, ನಿದ್ರೆ, ಮೈಥುನ, ಸಾವು ಇರುವ ಈ ಬಾಳಿನಲ್ಲಿ ಯಾವುದು ಮುಖ್ಯ. ಸಾವು ನಮ್ಮ ಕೈಯಲ್ಲಿ ಇರುವುದಿಲ್ಲವಾದ್ದರಿಂದ ಅದರ ಚಿಂತನೆಗೆ ಅರ್ಥವಿಲ್ಲ. ನಮ್ಮ ಇರುವಿಕೆಯ ಮಿತಿಯ ಎಚ್ಚರಿಕೆಗೆ ಸಾವಿನ ಅರಿವಿರಬೇಕಾಗುತ್ತದೆ. ಇರುವ ಸಮಯ ತುಂಬಾ ಕಡಿಮೆ ಇರುವುದರಿಂದ ಅಂತಹ ಸಮಯವನ್ನು ನಾವು ಮಾಡಲೇಬೇಕಾದ ಕೆಲಸಕ್ಕೆ ಮಾತ್ರ ಉಪಯೋಗಿಸಬೇಕು ಎನ್ನುವ ಅರಿವು ಸಾವಿನ ಅರಿವಿನಿಂದ ಮಾತ್ರ ಬರುತ್ತದೆ. ಎಲ್ಲರಿಗೂ ಇದರ ಅರಿವು ಮೂಡಿಸಬೇಕು. ಸಮಯ ಕಡಿಮೆ ಇರುವುದರಿಂದ ಅನಾವಶ್ಯಕ ವಿಷಯಗಳಿಗೆ, ರಾಜಕಾರಣಿಗಳ ಸುತ್ತ ಸುತ್ತುವುದಕೆ, ಅವರಿಗೆ ಜೈಕಾರ ಆಗುವುದಕ್ಕೆ, ಧರ್ಮಕಲಹಗಳಲ್ಲಿ ಭಾಗವಹಿಸುವುದಕ್ಕೆ, ಬಂದ್ ಮಾಡುವುದಕ್ಕೆ ಹೀಗೆ ಯಾವುದಕ್ಕೂ ಉಪಯೋಗಿಸದೆ ತಮಗೆ ಉಪಯೋಗುವಂತಹುದಕ್ಕೆ ಮಾತ್ರ ಉಪಯೋಗಿಸುವ ಹಾಗೆ ಅರಿವು ಮೂಡಿಸಬೇಕು.

ಅವಳು ಮಾತನಾಡುತ್ತಲೇ ಇದ್ದಳು. ಅವಳ ಹಾವಭಾವ, ಇಂಪಾದ ಧ್ವನಿ, ಸುಂದರ ಮುಖ ನೋಡುತ್ತಾ ಕುಳಿತೆ. ಗಂಡು ಮದುವೆಯಾಗಿದ್ದರೂ, ಇನ್ನೊಂದು ಹೆಣ್ಣಿನ ಸೌಂದರ್ಯಕ್ಕೆ ಸೋಲುವುದೇಕೆ? ಅದು ಗಂಡಿನ ಮಿತಿಯೇ ಇಲ್ಲ ಅವನ ನಿಯಂತ್ರಣದಲ್ಲಿ ಇಲ್ಲದಿರುವ ಭಾವವೇ. ಮದುವೆಯಾದ ಗಂಡಸರು ಹೆಣ್ಣಿನ ಸೌಂದರ್ಯಕ್ಕೆ ಸೋತರೆ ಅದು ಅವರ ಬಲಹೀನತಯೇ, ಸೌಂದರ್ಯ ಉಪಾಸನೆಯೇ, ಮನದಲ್ಲಿ ಏಳುವ ಸಿಹಿ ಭಾವನೆಯೇ, ಇದರಲ್ಲಿ ಅವನನ್ನು ತಪ್ಪಿತಸ್ಥ ಎನ್ನಬಹುದೇ. ಹೆಣ್ಣಿನ ಸೌಂದರ್ಯಕ್ಕೆ ಸೋಲದ ಗಂಡು ಇರುವುದು ಸಾಧ್ಯವೇ. ಸಾಧ್ಯ ಎನ್ನುವವರು ಆತ್ಮವಂಚನೆ ಮಾಡಿಕೊಳ್ಳುತಿದ್ದಾರೆಯೇ. ಹೆಣ್ಣಿನ ಸೌಂದರ್ಯವನ್ನು ಆಸ್ವಾದಿಸಿದರೂ ಅದು ಅಲ್ಲಿಗೆ ನಿಲ್ಲದೆ ಮುಂದುವರೆದರೆ ವಿಕಾರ ಆಗಬಹುದೇನೋ.

ಅವಳು ಮಾತನಾಡುತ್ತಿದ್ದಾಗ ನಾನು ಹಾಗೆ ನಿದ್ದೆಗೆ ಜಾರಿದ್ದೆ ಅನಿಸುತ್ತದೆ. ರಾತ್ರಿಯೆಲ್ಲಾ ಏನೇನೋ ಕನಸುಗಳು.

ಎಚ್ಚರವಾದಾಗ, ಬೆಳಕು ಹರಡಿತ್ತು. ಸೂರ್ಯಕಿರಣಗಳು ಹೋಟೆಲ್ ರೂಮಿನ ತುಂಬಾ ಹರಡಿದ್ದವು. ಕಣ್ಣುಜ್ಜಿಕೊಂಡು, ಮಲಗಿದ ಕಡೆಯಿಂದ ಎದ್ದು, ಹಾಸಿಗೆಯ ಕಡೆ ನೋಡಿದೆ. ಅದು ಖಾಲಿಯಾಗಿತ್ತು. ಹೊರಗಡೆ ಬಂದು ಎಲ್ಲ ಕಡೆ ಹುಡುಕಿದರೂ, ಎಲ್ಲೂ ಪಲ್ಲವಿ ಕಾಣಿಸಲಿಲ್ಲ.

ಎರಡು ದಿನಗಳ ನಂತರ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.