ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ: ಸ್ವಿಸ್ ವೈದ್ಯರೊಬ್ಬರ ಸಾವು

Published 15 ಜೂನ್ 2024, 23:30 IST
Last Updated 15 ಜೂನ್ 2024, 23:30 IST
ಅಕ್ಷರ ಗಾತ್ರ
ಹಿಂದಿಯಲ್ಲಿ : ಪ್ರೇಮಲತಾ ವರ್ಮಾ

ಡಾಕ್ಟರ್ ವಿಲಿಯಮ್ ಡಬ್ ಇಹಲೋಕವನ್ನು ತ್ಯಜಿಸಿದರು. ಬೆಂಕಿ ಒಮ್ಮೆಲೆ ದಿಗ್ಗನೆದ್ದು ಆರಿತು!
ಪೃಥ್ವಿಯ ಭೂಗೋಳದಿಂದ ಬೀಳ್ಕೊಂಡು ಹೋಗುವ ಈ ಘಟನೆ ಅಧಿಕಾರಶಾಹಿ ಮತ್ತು ನೌಕರಶಾಹಿಯ ನಡುವಿನ ಬಿರುಕಿನಿಂದ ಹೊಮ್ಮಿದ ಸಂವೇದನಾರಹಿತ ಕಾರ್ಯಕ್ರಮದೊಳಗೆ ಒಂದು ನಿಮಿಷ ಮರಗಟ್ಟಿದಂತಹ ಅನುಭವವನ್ನು ನೀಡಿತು. ನಂತರ ಕುತೂಹಲದ ಜ್ವಾಲೆ ಉರಿಯಿತು. ಇದು ಹೇಗಾಗಿರಬಹುದು? ಮೊನ್ನೆ ಶುಕ್ರವಾರವಷ್ಟೇ ಅವರು ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿದ್ದರು. ಶನಿವಾರದಂದು ಒಂದು ನಿಮಿಷದ ತೂಕಡಿಕೆ. ಸಾವಿನೆದುರು ಅವರಂತಹ ದಿಗ್ಗಜ ವೈದ್ಯರ ಆಟ ನಡೆಯಲಿಲ್ಲ.

ಅವರು ಎರಡು ದಿನ ತಮ್ಮ ಮನೆಯ ಸೋಫಾದಲ್ಲಿ ಹಾಗೆಯೇ ಬಿದ್ದುಕೊಂಡಿದ್ದರು. ಅವರು ಶೂನ್ಯ ನೋಟದಿಂದ ಮೃತ ಚಿಟ್ಟೆಗಳ ಫ್ರೇಮಿನೆಡೆಗೆ ನೋಡುತ್ತಿದ್ದರು! ಅಬ್ಬಾ! ಸೋಮವಾರದಂದು ಅವರ ಸೆಕ್ರೆಟರಿ ಕ್ಲೀನಿಕ್‌ಗೆ ಬಂದಾಗಲೇ ಅವರು ಈ ಸ್ಥಿತಿಯಲ್ಲಿದ್ದುದು ತಿಳಿದಿತ್ತು.

ಅವಳಿಗೂ ಭಯವಾಗಿತ್ತು! ಕೂಡಲೇ ಅವಳು ‘ಕ್ಲೀನಿಕ್ ಮುಚ್ಚಿದೆ’ ಎಂದು ಬೋರ್ಡ್ ನೇತು ಹಾಕಿದಳು. ಕಡೆಗೆ ಉದ್ವಿಗ್ನಳಾಗಿ, ಕಂಪಿಸುತ್ತಾ ಟೆಲಿಫೋನ್ ಡೈರಿಯಲ್ಲಿ ಗುರುತು ಹಾಕಿಕೊಂಡಿದ್ದ ಪ್ರತಿಯೊಂದು ಹೆಸರಿಗೂ ಫೋನ್ ಮಾಡತೊಡಗಿದಳು.

ಇಂದಿಗೆ ಒಂದು ವಾರವೇ ಆಯಿತು. ಅವರ ಶವಸಂಸ್ಕಾರ ಇನ್ನೂ ಆಗಿರಲಿಲ್ಲ. ಡಾಕ್ಟರ್ ಡಬ್ ಅವರಿಗೆ ಕಾಹಿಲೆಯಿತ್ತೆ ಎಂಬುದು ಯಾರಿಗೂ ತಿಳಿಯಲಿಲ್ಲ. ಹಾಗಂತ ಅವರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ತುಂಬಾ ರಿಸರ್ವ್ ಆಗಿದ್ದರು. ಇಲ್ಲಿ ಅವರ ಕುಟುಂಬವಿರಲಿಲ್ಲ. ತಮ್ಮ ನಲ್ವತ್ತೆದರ ಈ ವಯಸ್ಸಿನಲ್ಲಿಯೂ ಅವರು ಬ್ರಹ್ಮಚಾರಿಯಾಗಿಯೇ ಇದ್ದರು. ಈ ಬಗ್ಗೆ ಕೇಳಿದರೆ ಅವರು ನಗುತ್ತಾ ಹೇಳುತ್ತಿದ್ದರು, “ರೋಗಿಗಳ ರೋಗಾಣುಗಳು ನನ್ನನ್ನು ತುಂಬಾ ಪ್ರೀತಿಸುತ್ತಿವೆ. ಅವು ನನಗಾಗಿ ಸಾಯಲೂ ಸಿದ್ಧವಾಗಿವೆ. ಹೀಗಿರುವಾಗ ನನ್ನಂತಹವನನ್ನು ಬದುಕಿನುದ್ದಕ್ಕೂ ಕಟ್ಟಿಕೊಳ್ಳಲು ಯಾವ ಹೆಣ್ಣು ತಾನೇ ಒಪ್ಪುತ್ತಾಳೆ?”
ಅವರ ಅಂತಿಮ ಸಂಸ್ಕಾರಕ್ಕೆ ಅವರ ದೇಶದಿಂದ ಇಲ್ಲಿಗೆ ಬರುವ ಅವರ ಸಂಬಂಧಿಕರು, ಬಂಧು-ಬಾಂಧವರ ಬಗ್ಗೆಯೂ ಯಾರಿಗೂ ಗೊತ್ತಿಲ್ಲ. ಒಮ್ಮೆ ಡಾಕ್ಟರ್ ಡಬ್ ಅವರೇ ತಮಾಷೆ ಮಾಡುತ್ತಾ ಹೇಳಿದ್ದರು, “ನೋಡಿ, ನನ್ನನ್ನು ಹೂಳುವುದು ನನಗಿಷ್ಟವಿಲ್ಲ. ಈ ವಿಚಾರದಲ್ಲಿ ನಾನು ಹಿಂದೂ ಪದ್ಧತಿಯನ್ನು ಮೆಚ್ತೀನಿ. ಅಂದರೆ ಉರಿಯುವ ಚಿತೆಯಲ್ಲಿ ಭಸ್ಮವಾದರೆ, ಮತ್ತೇನೂ ಉಳಿಯೋಲ್ಲ. ಮತ್ತೆ-ಮತ್ತೆ ನೋಡಿ ಅಳುವುದಕ್ಕೂ ಸಾಧ್ಯವಾಗಲ್ಲ. ಆದರೆ ನನಗೊಂದು ವೇಳೆ, ಯಾವುದಾದ್ರು ದೈಹಿಕ ರಾಸಾಯನಿಕ ಕ್ರಿಯೆಯಿಂದ ಸಮಾಧಿಯೊಳಗೆ ಜೀವ ಬಂದರೆ...! ಓಹ್! ಆ ನೋವಿನ ಬಗ್ಗೆ ನಾನು ಯೋಚಿಸಲೂ ಬಯಸಲ್ಲ” ಹೀಗೆಂದು ಅವರು ಬೇಸರಗೊಳ್ಳುತ್ತಿದ್ದರು.

ಅವರ ಶವಕ್ಕೆ ಮೇಕ್‌ಅಪ್ ಮಾಡಿ, ಸೂಟು-ಟೈ ಸಮೇತ ಹೊಳೆಯುವ ಶವಪೆಟ್ಟಿಗೆಯಲ್ಲಿ ಕ್ರೈಸ್ತ ಸಂಪ್ರದಾಯದಂತೆ ಇಡಲಾಗಿತ್ತು. ಅವರನ್ನು ನೋಡಲು ಎಲ್ಲರಿಗೂ ಸಾಧ್ಯವಾಗುವಂತೆ ಶವಪೆಟ್ಟಿಗೆಯಲ್ಲಿ ಶವದ ಮುಖ ಕಾಣುವಂತೆ ಇಡಲಾಗಿತ್ತು, ಅಲ್ಲದೆ, ಸೋಂಪಿನ ಮದ್ಯ ಸೇವಿಸಿ ಅವರ ಸದ್ಗುಣಗಳ ಬಗ್ಗೆ ಒಂದೆರಡು ಮಾತನಾಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಡಾ|| ಡಬ್ ಅವರು ತುಂಬಾ ಸ್ಫುರದ್ರೂಪಿಯಾಗಿದ್ದರು. ಮುಖದ ಮೇಲೆ ಸ್ವಲ್ಪ ಬಿಸಿಲು ಬಿದ್ದರೂ ಮುಖದಲ್ಲಿ ಕಂದು ಬಣ್ಣದ ಬೊಕ್ಕೆಗಳು ಮೂಡುತ್ತಿದ್ದವು. ಈಗ ಇನ್ನೆಷ್ಟು ಶ್ವೇತ ವರ್ಣ ಆವರಿಸಿರಬಹುದು! ಅದು ಸಾವಿನ ಬಣ್ಣದಂತೆ ಅತ್ಯಂತ ಭಯಾನಕ
ಎಂದು ಅನ್ನಿಸುತ್ತಿತ್ತು!

ಅವರ ಶವದ ಪೋಸ್ಟ್ ಮಾರ್ಟಮ್ ಆಗಲಿಲ್ಲ. ಅದನ್ನು ಮಾಡಿಸುವುದಾದರೂ ಯಾರು? ಅವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ತಮ್ಮ ಐದನೇ ಅಂತಸ್ತಿನ ಭವ್ಯ ಫ್ಲಾಟ್‌ಗೆ ಅವರು ಯಾರನ್ನೂ ಎಂದೂ ಆಹ್ವಾನಿಸುತ್ತಿರಲಿಲ್ಲ. ಆದರೆ ತಾವೇ ಮೇಲ್ವರ್ಗದ ಪಾರ್ಟಿಗಳಿಗೆ ಅವಶ್ಯವಾಗಿ ಹೋಗುತ್ತಿದ್ದರು. ಹೀಗಾಗಿ ಎಲ್ಲರಿಗೂ ಅವರ ಪರಿಚಯವಿತ್ತು. ಪರಿಚಯ, ಅಷ್ಟೆ!
ಅವರು ರಾತ್ರಿ ಕ್ಲೀನಿಕ್‌ನಿಂದ ಮರಳಿ ಬಂದಾಗ ದಣಿದ ಕೈಗಳಿಂದ ತಮ್ಮ ಮನೆಯ ಕೀಲಿ ಕೈಯನ್ನು ತಾವೇ ಬಳಸಬೇಕಿತ್ತು.

-ಪೊಲೀಸರು ಇಲಿಯ ಬಿಲವನ್ನೂ ಪರಿಶೀಲಿಸದೆ ಬಿಡುವುದಿಲ್ಲ, ಆದರೆ ಈ ಪ್ರಸಂಗದಲ್ಲಿ!
-ರ‍್ಲಿ, ಸುಮ್ನಿರಿ...ಅವರು ಸಹಜವಾಗಿಯೇ ಸತ್ತಿದ್ದಾರೆಂದು ಒಪ್ಪಿಕೊಳ್ಳಲು ನಿಮಗೇನು ತೊಂದ್ರೆ?...ಹಾಂ ಫೇಲ್ ಆಗೋದು ಹೊಸ ವಿಷಯವೇ? ಇನ್ನೊಬ್ಬರ ಸ್ಪೇಸ್‌ಗೆ ಬದುಕುವ ಮತ್ತು ತಮ್ಮ ಸಂತೋಷ ಅಥವಾ ದುಃಖದ ಬಗ್ಗೆ ಗಮನ ಕೊಡದಿರುವ ವ್ಯಕ್ತಿಗೂ ಏನಾದ್ರೂ ಸಮಸ್ಯೆ ಇರಬೇಕಲ್ಲ! ಆಶ್ಚರ್ಯವೇನಿದೆ!

-ಡಾ|| ಡಬ್ ತಮ್ಮ ಆರೋಗ್ಯದ ಬಗ್ಗೆ ಅದೆಷ್ಟು ಎಚ್ಚರಿಕೆ ವಹಿಸುತ್ತಿದ್ದರು! ಸಿಗರೇಟನ್ನು ಮುಟ್ಟಲಿಲ್ಲ, ಮದ್ಯದ ಸುಳಿಗೆ ಸಿಲುಕಲಿಲ್ಲ, ಸಾತ್ವಿಕ ಆಹಾರವನ್ನೇ ಸೇವಿಸಿದರು. ಅವರು ಸಾಮಾನ್ಯವಾಗಿ ತಡ ರಾತ್ರಿಯಾದರೂ ತಮ್ಮ ಫ್ಲಾಟ್‌ನಲ್ಲಿ ಕಾಣಿಸುತ್ತಿರಲಿಲ್ಲ. ತಮ್ಮ ರೋಗಿಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು, ತಮ್ಮ ಆರೋಗ್ಯ ಮತ್ತು ಸಂಯಮವನ್ನು ದೃಷ್ಟಾಂತವಾಗಿಟ್ಟುಕೊಳ್ಳುವುದು ತಮ್ಮ ನೈತಿಕ ಹೊಣೆಯೆಂದು ತಿಳಿಯುತ್ತಿದ್ದರು.
ಅವರ ಆಹಾರದಲ್ಲಿ ಕ್ಯಾಲ್ಸಿಯಂ, ವಿಟಾಮಿನ್ ಮತ್ತು ಮಿನರಲ್ ಡೋಜ್‌ಗಳಲ್ಲಿ ಯಾವುದೇ ಕೊರತೆಯಾಗುತ್ತಿರಲಿಲ್ಲ. ಆ ಆರೋಗ್ಯವರ್ಧಕ ಮಾತ್ರೆಗಳು ಅಲ್ಲಿ ಅಂಗರಕ್ಷಕರ ಪಾತ್ರ ವಹಿಸುತ್ತಿದ್ದವು.

ಡಾ|| ಡಬ್ ಅವರಿಗೆ ರೋಗಿಗಳೇ ಸರ್ವಸ್ವರಾಗಿದ್ದರು. ಅವರ ಬಗ್ಗೆ ರೋಗಿಗಳಿಗೂ ಅಪಾರ ವಿಶ್ವಾಸವಿತ್ತು. ಅವರ ಮನಸ್ಸಿನಲ್ಲಿ ಅದೆಂತಹ ಆಘಾತವಾಗಿರಬಹುದು, ಯೋಚಿಸಿ! ಲಂಗರು ತಟ್ಟನೆ ಬಂದರಿನಿಂದ ಪ್ರತ್ಯೇಕಗೊಂಡು, ಕಪ್ತಾನನಿಲ್ಲದ ಹಡಗು ಅನುಭವವಿಲ್ಲದ ಪ್ರಯಾಣಿಕರನ್ನು ಹೊತ್ತೊಯ್ದಂತೆ ಈ ಆಕಸ್ಮಿಕ ಸುದ್ದಿ ಕೇಳಿದ ರೋಗಿಗಳ ಸ್ಥಿತಿಯೂ ಆಗಿರಬಹುದು.

ನಗರದ ಕೋಲಾಹಲ ಬೆಳಿಗ್ಗೆಯ ಮೌನವನ್ನು ಕಠೋರವಾಗಿ ತಳ್ಳಿ, ಗಲ್ಲಿಯಿಂದ ಗಲ್ಲಿಗೆ ಹಾಗೂ ಎತ್ತರದಲ್ಲಿರುವ ಕಟ್ಟಡಗಳನ್ನು ಆವರಿಸುತ್ತದೆ. ಜೀವನದ ಕ್ಷಣಗಳನ್ನು ಅನುಭವಿಸಿದ ನಂತರ ಮತ್ತೆ ನೀರವತೆಯು ಎದೆಯಲ್ಲಿ ಸೇರಿಕೊಳ್ಳುತ್ತದೆ. ಅರ್ಥ-ಅನರ್ಥದ ಸುಳಿಯಲ್ಲಿ ಸುತ್ತುವ ಗದ್ದಲದ ಸಂಜೆಯ ಅರೆಬರೆ ಹೊಗೆಯಲ್ಲಿ ನಗರ ಮತ್ತೆ ಮುಳುಗುತ್ತದೆ.
ಇಲ್ಲಿ ಬ್ರಾಹ್ಮೀ ಮುಹೂರ್ತ ಸದಾ ದೂರವಿರುತ್ತದೆ...

ಶ್ವೇತ ಸೂಕ್ಷ್ಮ ಪರದೆಯಿಂದ ಸಾಣಿಸಿ ಸೂರ್ಯನ ಪ್ರಥಮ ಕಿರಣಗಳು ಸಂಕೋಚದಿಂದ ತೂರಿ ಬರುತ್ತಿದ್ದವು. ಈ ಕಿರಣಗಳು ಡಾ|| ಡಬ್ ಅವರ ಶವವಸ್ತ್ರದೊಳಗಿನಿಂದ ತೆರೆದ ಹಣೆಯ ಮೇಲೆ ಬೀಳುತ್ತಿದ್ದವು. ಅವರ ಸೆಕ್ರೆಟರಿ ಅನ್ನಾ, ಶೋಕಾಚರಣೆಗೆ ಬರುವ ಅತಿಥಿಗಳು ಅವರವರ ಜಾಗಕ್ಕೆ ಹೋಗಲು ಬಾಗಿಲನ್ನು ತೆರೆದಳು. ತನ್ನ ಹದಿನಾರನೇ ವರ್ಷದ ಪ್ರಾಮಾಣಿಕ ನೌಕರಿಯನ್ನು ನಿರ್ವಹಿಸುವಾಗ ಡಾ|| ಡಬ್‌ರವರು ಅವಳೊಂದಿಗೆ ಎಂದೂ ಅನುಚಿತವಾಗಿ ವರ್ತಿಸಿರಲಿಲ್ಲ. ಅವಳ ಅಗತ್ಯತೆಗಳನ್ನು ಸಜ್ಜನಿಕೆಯಿಂದ ಈಡೇರಿಸಿದರು. ಅವಳಿಗೆ ನಿಜವಾಗಿಯೂ ದುಃಖವಾಗುತ್ತಿತ್ತು. ಅವಳಿಗೆ, ತನ್ನ ಇಷ್ಟು ಒಳ್ಳೆಯ ನೌಕರಿ ತಪ್ಪಿ ಹೋಗುತ್ತಿರುವುದಕ್ಕೆ ದುಃಖವಾಗುತ್ತಿರಲಿಲ್ಲ. ಆದರೆ ಇಂಥ ದುರ್ದಿನಗಳಲ್ಲಿ, ಮಾನವೀಯತೆಯನ್ನೂ ಮರೆತು ಸೆಕ್ರೆಟರಿಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳದ ಇಂಥ ಯಜಮಾನನ ಅಗಲುವಿಕೆಯ ದುಃಖ ಕಾಡಿಸುತ್ತಿತ್ತು.

ನೌಕರಿ ಬೇರೆಲ್ಲಿಯಾದರೂ ಸಿಗಬಹುದು. ಡಾ|| ಡಬ್ ಅವರಲ್ಲಿ ನೌಕರಿ ಮಾಡುತ್ತಿರುವಾಗಲೇ ಅನೇಕ ಪ್ರಸಿದ್ಧ ಕ್ಲಿನಿಕ್‌ಗಳು ಮತ್ತು ಡ್ರಗ್ ಸ್ಟೊರ‍್ಸ್ಗಳಿಂದ ಅವಳಿಗೆ ಆಮಿಷವನ್ನು ಒಡ್ಡಲಾಗಿತ್ತು. ಆದರೆ ಈ ಸ್ವಿಸ್ ಡಾಕ್ಟರ್ ಅವಳನ್ನು ಎಂದೂ ಕಾಮದ ದೃಷ್ಟಿಯಿಂದ ಅಥವಾ ಕೆಟ್ಟ ದೃಷ್ಟಿಯಿಂದ ನೋಡಿರಲಿಲ್ಲ. ಬೆಂಕಿ ಕಾರುವ ಈ ಮಹಾನಗರದಲ್ಲಿ ಇದೇನು ಸಾಮಾನ್ಯವೇ! ಅಲ್ಲದೆ, ಅನ್ನಾಳ ಉತ್ತಮ ಆರೋಗ್ಯ, ಅವಳ ದೇಹದ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.

ಡಾ|| ಡಬ್ ಅವರು ತಮ್ಮ ಸತ್ಯ-ಮಿಥ್ಯ ಎಲ್ಲವನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋದರು; ಅನ್ನಾಳಿಗೆ, ನೌಕರಿಯ ಮಾನಸಿಕ ದಣಿವೆಂದರೇನೆಂಬುದು ಎಂದೂ ತಿಳಿಯಲೇ ಇಲ್ಲ. ಅವಳು ಸಮಯಕ್ಕೆ ಸರಿಯಾಗಿ ಹೋಗುತ್ತಿದ್ದಳು. ಡಾಕ್ಟರ್ ಅವಳು ಹೊರಟು ಹೋದ ಮೇಲೆ ತಾವೇ ಕೂತು ರೋಗಿಗಳ ಲೆಕ್ಕಾಚಾರ ಮಾಡುತ್ತಿದ್ದರು. ಆದರೆ ಅನ್ನಾಳಿಗೆ ಸಂಜೆ ಏಳು ಗಂಟೆಯ ನಂತರ ಇರುವಂತೆ ಎಂದೂ ಹೇಳಲಿಲ್ಲ. ತಮ್ಮ ಅಧಿಕಾರದ ನೆಪದಲ್ಲಿ, ತಂತ್ರಗಾರಿಕೆಯಿಂದ ಸಮಾಜದಲ್ಲಿ ಮಾಡಬಾರದ ಕೆಲಸ ಮಾಡಲು ಯಾರಿಗೆ ತಾನೇ ಇಂಥ ಸೌಲಭ್ಯ ಸಿಗುತ್ತದೆ!

ಅನ್ನಾಳ ದೇಹದಲ್ಲಿ ಒಂದು ವಿಚಿತ್ರ ಭಯ ಸಂಚರಿಸಿತು... ಅವಳ ಸುತ್ತ-ಮುತ್ತ ಭಯದ ಬಾವಲಿಗಳು ರೆಕ್ಕೆ ಬಡಿಯುತ್ತಾ ಅತ್ತ-ಇತ್ತ ಸುಳಿದಾಡಿದವು. ಅವಳು ಶವಪೆಟ್ಟಿಗೆಯಲ್ಲಿ ಮೈದಾಹಿಟ್ಟಿನಂತೆ ಬೆಳ್ಳಗಿದ್ದ ಶಾಂತ ಮುಖವನ್ನು ನೋಡಿ, ಬಿಕ್ಕಳಿಸಿ ರೋದಿಸತೊಡಗಿದಳು. ಅವಳ ಕಾಲುಗಳು ನೆಲದ ಮೇಲೆ ಸ್ಥಿರವಾಗಿ ನಿಲ್ಲದಾದವು...

-ಇಷ್ಟು ಸುಲಭವಾಗಿ ಸಾಯುವ ಉಪಾಯವನ್ನು ಹೇಗೆ ಪಡೆದಿರಿ, ಡಾಕ್ಟರ್ !
-ಹೆಚ್ಚಿನ ಜನ, ಡಾಕ್ಟರ್ ಡಬ್ ಅವರ ಹೃದಯದ ಬಡಿತ ಅಕಸ್ಮಾತ್ ನಿಂತಿತ್ತು ಎಂದೇ ಯೋಚಿಸಿದರು. ತಮ್ಮ-ತಮ್ಮ ದೃಷ್ಟಿಯಿಂದ ಯೋಚಿಸಿ ಎಲ್ಲರೂ ಈ ನಿಷ್ಕರ್ಷೆಗೆ ಬಂದರು. ಆದರೆ ನನ್ನ ಮನಸ್ಸು ಯಾಕೋ ಇವನ್ನೆಲ್ಲಾ ಅಲ್ಲಗೆಳೆಯುತ್ತಿತ್ತು.

ಶನಿವಾರದ ದಿನವೇ ಸಾವಿನ ಬಾಗಿಲು ಬರುವುದಿತ್ತು ! ಅಂದು ಕ್ಲೀನಿಕ್ ತೆರೆದಿರುವುದಿಲ್ಲ. ಅಂದು ಅವರೇಕೆ ಕ್ಲೀನಿಕ್‌ಗೆ ಹೋಗಿದ್ದಿರಬಹುದು...? ರೋಗಿಗಳು ಅವರಿಗಾಗಿ ಕಾಯುತ್ತಾ ಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದ ಜಾಗದಲ್ಲಿಯೇ ಕೂತಿದ್ದರು. ಎದುರಿಗಿದ್ದ ಗಾಜಿನ ಚೌಕಟ್ಟಿನಲ್ಲಿ ಎಲ್ಲಾ ದೇಶಗಳ ವಿಭಿನ್ನ ಆಕಾರಗಳ, ಬಣ್ಣ-ಬಣ್ಣದ ಮೃತ ಚಿಟ್ಟೆಗಳ ಚಿತ್ರಗಳಿದ್ದವು. ಅವರು ಕೂತಿದ್ದ ಸೋಫಾದ ಬಳಿಯಲ್ಲಿ ಒಂದು ಗಜದ ಅಂತರದಲ್ಲಿ ಒಂದು ಚಿಟ್ಟೆಯಿದ್ದು ಅದು ತುಂಬಾ ದೊಡ್ಡದಾಗಿತ್ತು. ಅದರ ದೇಹದ ಮಧ್ಯದಲ್ಲಿ ಒಂದು ಹಸಿರು ಬಣ್ಣದ ಪಿನ್ನನ್ನು ಚುಚ್ಚಲಾಗಿತ್ತು...

ನಾನು ಮೊದಲ ಬಾರಿಗೆ ಡಾ|| ಡಬ್‌ರವರ ಕ್ಲೀನಿಕ್‌ನಲ್ಲಿ ಸ್ವಲ್ಪ ಹೆದರಿಕೆ ಮತ್ತು ಸಂಕೋಚದಿಂದ, ಬಡ ರಾಜಕುಮಾರಿಯಂತೆ ಪ್ರವೇಶಿಸಿದ್ದೆ. ಅಂದರೆ ಅವರ ಮೌನದ ಸಾಮ್ರಾಜ್ಯದಲ್ಲಿ ಪ್ರವೇಶಿಸಿದ್ದೆ.
ಬಾಸ್ ತಮ್ಮ ಕಾಹಿಲೆಯ ವಿವರ ತಿಳಿಸಿ ನನ್ನನ್ನು ಔಷಧಿ ತರಲು ಕಳುಹಿಸಿದ್ದರು. ಅವರು ಓರ್ವ ರೋಗಿಯನ್ನು ತುಂಬಾ ಹೊತ್ತಿನಿಂದ ಪರೀಕ್ಷಿಸುತ್ತಿದ್ದರು. ತುಂಬಾ ಚಳಿಯಲ್ಲಿಯೂ ಅವರ ವೇಟಿಂಗ್ ರೂಮ್ ಬೆಚ್ಚಗಿತ್ತು. ಅಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಉಸಿರುಗಟ್ಟುವಿಕೆ ಹೆಚ್ಚುತ್ತಿತ್ತು. ಡಾಕ್ಟರ್ ಡಬ್ ತಮ್ಮ ಕೊನೆಯ ರೋಗಿಯನ್ನು ಪರೀಕ್ಷಿಸಿ ಹೊರ ಬಂದರು. ಅವರ ದೃಷ್ಟಿ ನೇರವಾಗಿ ನನ್ನೆಡೆಗೆ ಬಿತ್ತು. ನನ್ನ ಬಾಡಿದ ಮತ್ತು ಸುಡುವಂಥ ಮುಖವನ್ನು ಕಂಡು ನನ್ನನ್ನು ಕೇಳದೆ ನನ್ನ ನಾಡಿ ಹಿಡಿದುಕೊಂಡು, “ಬೇಬಿ! ನಿನಗೆ ಜ್ವರವಿದೆ, ಇದ್ದಕ್ಕಿದ್ದಂತೆ...” ಎಂದರು.
ಅವರು ನನ್ನ ನಾಲಿಗೆ, ಗಂಟಲು ಎಲ್ಲಾ ಪರೀಕ್ಷಿಸಿದರು. ಬೆನ್ನ ಮೇಲೆ ಸ್ಟೆತಾಸ್ಕೋಪ್ ಇಟ್ಟು ನನ್ನ ಉಸಿರಿನ ವೇಗ ಅಳೆದರು.

“ಆಫೀಸಿನಲ್ಲಿ ಹೇಗೆ ಕೆಲ್ಸ ಮಾಡ್ತೀಯಾ?” ಅವರು ತಕ್ಷಣ ತಮ್ಮ ಕ್ಯಾಬಿನ್‌ನಿಂದ ಔಷಧಿ ತಂದು ನನಗೆ ಕೊಡುತ್ತಾ ಹೇಳಿದರು, “ಈ ಔಷಧಿಗಳು ನಿನಗೆ. ನಿನ್ನ ಬಾಸ್‌ನ ಔಷಧಿಯನ್ನು ನಾನೇ ತಯಾರಿಸಬೇಕು. ನಾನು ಅವರಿಗೆ ಔಷಧಿಯನ್ನು ಕಡೇ ಪಕ್ಷ ಮೂರು ದಿನಗಳೊಳಗೆ ಕಳಿಸ್ತೀನಿ. ನೀನು ಚಿಂತಿಸಬೇಡ”.
ಅವರ ಫೀಜನ್ನು ಎಲ್ಲಿಂದ ಕೊಡಲಿ ಎಂದು ಚಿಂತಿಸಿದೆ. ಅದನ್ನು ಅರ್ಥ ಮಾಡಿಕೊಂಡರು, “ಈ ಬಾರಿ ಯಾವುದೇ ಫೀಜ್ ಬೇಡ”.
ನಾನು ಕೇಳದಿದ್ದರೂ, ಅವರು ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಮೆಡಿಕಲ್ ಸರ್ಟಿಫಿಕೇಟನ್ನು ಬರೆದುಕೊಟ್ಟರು.
ಅನಾಯಾಸವಾಗಿ ಬಂದ ಕೃಪೆಯಿಂದಾಗಿ, ನಾನು ಆಶ್ಚರ್ಯಗೊಂಡೆ. ಆದರೂ ಸ್ವಾಭಿಮಾನಿಯಾದ ನಾನು ಪೆಟ್ಟು ತಿಂದ ಸರ್ಪದಂತೆ ರ‍್ರನೆ ಅವರ ಕ್ಲೀನಿಕ್‌ನಿಂದ ಹೊರಬಂದೆ. ಬಹು ಪ್ರಯತ್ನ ಪಟ್ಟು ಥ್ಯಾಂಕ್ಸ್ ಹೇಳಿದೆ.

ಡಾ|| ಡಬ್ ಅವರಿಗೆ ರೋಗಿಯೇ ಆಗಬೇಕೆಂದಿರಲಿಲ್ಲ, ಅವರು ಒಂದಲ್ಲ ಒಂದು ವಿಚಾರದಲ್ಲಿ ಉನ್ನತ ಅಧಿಕಾರಿಗಳು ಅಥವಾ ರಾಜಕೀಯ ಮುಂದಾಳುಗಳನ್ನು ಭೇಟಿಯಾಗುತ್ತಿದ್ದರು. ಆದರೆ ನಾನು ಓರ್ವ ಸಾಮಾನ್ಯ ನೌಕರಳಾಗಿದ್ದೆ. ನನ್ನಂಥವಳನ್ನು ನೆಪದಿಂದ ಯಾಕೆ ಭೇಟಿಯಾಗುತ್ತಾರೆ ! ಅವರು ನಾನು ಹೋದ ಮೇಲೂ ನನ್ನ ಬಗ್ಗೆ ಕಾಳಜಿ ವಹಿಸುತ್ತಿದ್ದರು.

ನಾನು ಅವರ ಕೃಪೆಯನ್ನು ಓರ್ವ ಉತ್ತಮ ವೈದ್ಯರ ಮತ್ತು ಉತ್ತಮ ವ್ಯಕ್ತಿಯ ಸಹಜ ಗುಣವೆಂದೇ ತಿಳಿದಿದ್ದೆ. ಆದರೆ ನನ್ನ ಬಾಸ್ ಖುದ್ದಾಗಿ ಡಾ|| ಡಬ್ ಅವರಿಗೆ ನನ್ನನ್ನು ಹೊಗಳಿ ನನ್ನ ಬಗ್ಗೆ ಕುತೂಹಲವನ್ನು ಜಾಗೃತಗೊಳಿಸಿದ್ದು ನನಗೆ ನಂತರ ತಿಳಿಯಿತು.
ನನ್ನ ಸ್ವಭಾವದ ಬೌದ್ಧಿಕ ತೊಡಕು ನನ್ನ ಪರಿಸ್ಥಿತಿಗಳ ತೊಡಕಿನಲ್ಲೂ ಹಾಸುಹೊಕ್ಕಾಗಿತ್ತು, ಇದು ಯಾವ ವ್ಯಕ್ತಿಗಾದರೂ ಕಷ್ಟದ ಸಂಗತಿಯಾಗಿತ್ತು. ಆದರೆ ನನ್ನ ಬುದ್ಧಿಯನ್ನು ಆವರಿಸುತ್ತಿದ್ದ ಮುಗ್ಧ ನಂಬಿಕೆಯೊಂದು ನನ್ನನ್ನು ಎಚ್ಚರಗೊಳಿಸುತ್ತಿತ್ತು.

ಒಂದು ದಿನ ಡಾ|| ಡಬ್ ಹೇಳಿದರು, “ನೀನು ಒಂದು ವಿಶೇಷ ಸ್ಟೈಲ್‌ನಲ್ಲಿ ಸುಂದರವಾಗಿದ್ದೀಯ... ನೀನು ಹೆಚ್ಚು ಓದಿದವಳಷ್ಟೇ ಅಲ್ಲ, ಜಾಣೆಯೂ ಹೌದು, ತಿಳಿದವಳೂ ಹೌದು. ಆದರೆ ನಿನ್ನಲ್ಲಿ ತುಂಬಾ ಮೆಚ್ಚುವಂಥದ್ದೇನೆಂದೆ ನಿನ್ನ ಚುರುಕುತನ, ನಿನ್ನ ಒಳ್ಳೆಯ ಗುಣ ಮತ್ತು ನಿನ್ನ ಸಹನೆ-ತಾಳ್ಮೆಯೊಂದಿಗೆ ನಿನ್ನಲ್ಲಿ ಸಹಜ ಮುಗ್ಧತೆಯಿದೆ. ಈ ಮುಗ್ಧತೆ ಇಲ್ಲಿಯ ಯುವತಿಯರಲ್ಲಿ ಸಿಗುವುದಿಲ್ಲ... ಅವರು ತುಂಬಾ ಜಾಣರು, ಸುಂದರಿಯರು ಮತ್ತು ಇನ್ನೇನೋ ಎಂಬುದವುದರಲ್ಲಿ ಸಂದೇಹವಿಲ್ಲ. ಆದರೆ ಸಂವೇದನೆ ಮತ್ತು ಪ್ರಬುದ್ಧತೆ ಬಂಗಾರಕ್ಕೆ ಕುಂದಣವಿಟ್ಟಂತೆ ಹಾಗೂ ದೈವೀ ಕೃಪೆಯೆಂದೇ ತಿಳಿಯಬೇಕು. ನಿನ್ನಲ್ಲಿ ... ನಿನ್ನಲ್ಲಿ ಸಂವೇದನೆ ಮತ್ತು ಬುದ್ಧಿಶಕ್ತಿ ಎರಡೂ ಇವೆ”.
“ಇಷ್ಟೇನಾ-” ಅಂದು, ಕೂಡಲೇ ಉತ್ತರಿಸಿದ್ದೆ. ಬಹುಶಃ ಮನಸ್ಸಿನಲ್ಲಿ ಆಕ್ರೋಶವೊಂದು ಉಮ್ಮಳಿಸಿ ಬಂದಿತ್ತು ಅಥವಾ ಇಂಥ ಸ್ವಾರಸ್ಯಕರ ಕಾಮೆಂಟ್ ಈ ಮೊದಲೂ ಕೇಳಿದ್ದೆನೇನೋ.
ಕಛೇರಿಯೊಂದರಲ್ಲಿ ಮುದುಕ ಬಾಸ್‌ಗೆ ಸೆಕ್ರೆಟರಿಯಾದರೆ ಲಾಭಕ್ಕಿಂತ ಹಾನಿಯೇ ಹೆಚ್ಚು. ನನ್ನ ಬಾಸ್ ಒಂದೆಡೆ ನನ್ನ ಕೆಲಸಗಳಿಂದ ಸಂತೋಷ ಪಡುತ್ತಿದ್ದರು, ಇನ್ನೊಂದೆಡೆ ಅವರು ತಮ್ಮ ಕೆಲವು ವೈಯಕ್ತಿಕ ಅಗತ್ಯಗಳಿಗೆ ನನ್ನನ್ನು ಅವಲಂಬಿಸುತ್ತಿದ್ದರು. ತಮ್ಮ ಅನೇಕ ಹಳೇ ರೋಗಗಳಿಗೆ ನನ್ನನ್ನು ಅವರು ಡಾ|| ಡಬ್ ಅವರ ಬಳಿಗೆ ಕಳುಹಿಸುತ್ತಿದ್ದರೆ, ಇನ್ನೊಮ್ಮೆ ಯಾವುದೋ ಕೆಲಸಕ್ಕೆ ಕಳುಹಿಸುತ್ತಿದ್ದರು. ಹಾಗಂತ ಇಬ್ಬರ ಸಂಬಂಧ ರೋಗಿ-ವೈದ್ಯರದ್ದು ಮಾತ್ರವಾಗಿರದೆ, ಇಬ್ಬರೂ ಒಳ್ಳೆಯ ಸ್ನೇಹಿತರೂ ಆಗಿದ್ದರು.

ಆ ದಿನವೂ ಬಾಸ್‌ರ ಕೆಲಸಕ್ಕೆಂದೇ ಹೋಗಿದ್ದೆ. ಡಾ|| ಡಬ್ ಅವರನ್ನು ಕಾಯುತ್ತಾ ಮೃತ ಚಿಟ್ಟೆಗಳ ಗಾಜಿನ ಪ್ಯಾನಲ್ ಎದುರಿಗಿದ್ದ ಸೋಫಾದಲ್ಲಿ ಕೂತಿದ್ದೆ. ಗಾಜಿನ ಪ್ಯಾನಲ್‌ನಲ್ಲಿ ವೈವಿಧ್ಯಮಯ, ದೇಶ-ವಿದೇಶಿ ಚಿಟ್ಟೆಗಳ ಸಂದಣಿ ಕಂಡು ಆಶ್ಚರ್ಯಗೊಂಡೆ! ಡಾ|| ಸಾಹೇಬರದ್ದು ಎಂಥ ಅದ್ಭುತ ಆಸಕ್ತಿ ಎಂದು ಯೋಚಿಸಿದೆ !

ಕಾಯುತ್ತಾ ಕುಳಿತಿದ್ದ ನಾನು ಸಮಯದ ಪ್ರಯೋಜನ ಪಡೆಯುತ್ತಾ ಅವರ ಮನಸ್ಸನ್ನು ಅರಿಯಲು ಪ್ರಾರಂಭಿಸಿದೆ... ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿದವು. ಆದರೆ ನೆಮ್ಮದಿ ಕೊಡುವ ಒಂದೂ ಉತ್ತರ ಸಿಗಲಿಲ್ಲ.

ಡಾ|| ಡಬ್ ಅವರು ಬಂದು ಪಕ್ಕದಲ್ಲಿ ನಿಂತಿದ್ದು ತಿಳಿಯಲಿಲ್ಲ. ನಾನು ಬೆಚ್ಚಿ ಸುಧಾರಿಸಿಕೊಳ್ಳುತ್ತಾ, ಅವರೆಡೆಗೆ ನೋಡಿದಾಗ ಅವರು ಹೇಳಿದರು, “ನಾನು ಆಫ್ರಿಕಾ ಪ್ರವಾಸಕ್ಕೆ ಹೋದಾಗ ಆಫ್ರಿಕಾದ ಹತ್ತು ವಿವಿಧ ಬಗೆಯ ಈ ಚಿಟ್ಟೆಗಳನ್ನು ನಾನೇ ಖುದ್ದು ತಂದಿದ್ದೆ. ಅದರ ಪಕ್ಕದ ನಾಲ್ಕು ಚಿಟ್ಟೆಗಳು ವಿಶೇಷವಾಗಿ ‘ಓಂದೂರಾ’ ದೇಶದ್ದು. ಅವು ಅಲ್ಲಿಯ ಬಣ್ಣದ ‘ಕ್ರಾಟರ್’ಗಳಲ್ಲಿ ವಾಸಿಸುತ್ತವೆ... ಈ ಮೇಲ್ಭಾಗದಲ್ಲಿರುವ ಚಿಟ್ಟೆಗಳು ಅರ್ಜೆಂಟೀನಾದ ದಕ್ಷಿಣದ ಪ್ರಾಂತ್ಯಗಳದ್ದು. ಇವುಗಳ ವಿಶೇಷತೆಯೇನೆಂದರೆ... ಆ ಕಡೆ ಸ್ಕಾಂಡೆನೇವಿಯನ್ ಮತ್ತು ಜರ್ಮನ್ ತಳಿಯ ಚಿಟ್ಟೆಗಳಿವೆ... ಪ್ರತಿಯೊಂದು ದೇಶದ ಸ್ಥಿತಿ-ಗತಿಗಳು ಈ ಚಿಟ್ಟೆಗಳ ಬಣ್ಣ-ಆಕಾರ ಮತ್ತು ಸ್ವಭಾವನ್ನು ನಿರ್ಣಯಿಸುತ್ತವೆ... ಪ್ರತಿಯೊಂದು ಸ್ಥಳದ ಚಿಟ್ಟೆಗಳು ಒಂದೇ ರೀತಿಯಲ್ಲಿ ಹಾರಾಡುತ್ತವೆ ಅಂತ ತಿಳೀಬೇಡ. ಇವುಗಳಿಗೆ ತಮ್ಮದೇ ಆದ ಭಿನ್ನ ವೈಶಿಷ್ಟ್ಯತೆಗಳಿರುತ್ತವೆ...”
ಅವರು ಚಿಟ್ಟೆಗಳನ್ನು ವರ್ಣಿಸಿದ ನಂತರ ಬಹುಶಃ ನನ್ನ ಪ್ರತಿಕ್ರಿಯೆಗಾಗಿ ಕಾದರು. ಕಡೆಗೆ ಅವರೇ ಒಂದು ಅದ್ಭುತ ಕಾಮೆಂಟ್ರಿ ಮಾಡಿದರು-“ಮಹಿಳೆಯರೂ ಸಹ ಈ ಚಿಟ್ಟೆಗಳಂತೆ ರ‍್ತಾರೋ ಇಲ್ಲವೋ... ಆದರೆ ಅವರನ್ನು ಗಾಜಿನಲ್ಲಿಡಲು ಸಾಧ್ಯವಿಲ್ಲ...ಅವರು ಪುರುಷರಿಗಿಂತ ಹೆಚ್ಚು ಸ್ವತಂತ್ರರು...ಯಾವುದೇ ಭಯಾನಕ ಆಟಕ್ಕೆ ಟೊಂಕಕಟ್ಟಿ ನಿಲ್ಲುವುದನ್ನು ಅವರಿಂದ ಕಲಿಯಬೇಕು...”

ನನಗೆ ಅವರ ಈ ಟೀಕೆ ಹಿಡಿಸಲಿಲ್ಲ. ಆದರೆ ತೀಕ್ಣ ಬಿಸಿಲಿನಲ್ಲಿ ತುಂಬಾ ಸಮಯದವರೆಗೆ ಇಟ್ಟ ತಾಮ್ರದ ಪಾತ್ರೆಯ ಹೊಳಪು ಹಾಗೆಯೇ ಉಳಿಯಿತು. ಅವರು ಈ ಚಿಟ್ಟೆಗಳನ್ನು ಅದೆಷ್ಟು ಆ್ಯಂಟಿಪೋಯಿಟಿಕ್ ಮಾಡಿದ್ದಾರೆ, ಅವುಗಳನ್ನು ತವರದ ಹಾಳೆಯಲ್ಲಿ ಮಕ್ಕಳಂತೆ ಕಟಿಂಗ್ ಮಾಡಿದ್ದಾರೆ...!

ನಾನು ಅವರಿಗೆ ಆಭಾರಿಯಾಗಿದ್ದೆ. ಹೀಗಾಗಿ ಅವರ ಅನಿಯಮಿತವಾದ, ಜಟಿಲವಾದ ಹಾಗೂ ಅಮಾನವೀಯವೆನಿಸುವಂಥ ನಡತೆಯ ಬಗ್ಗೆ ಏನೂ ಹೇಳಲು ಸಾಧ್ಯವಿರಲಿಲ್ಲ !

“ನೀನು ಕವನಗಳನ್ನು ಬರೀತಿಯಾ ಅಂತ ಕೇಳಿದ್ದೆ. ಇದು ಒಂದು ಕಚೇರಿಯಲ್ಲಿ ಕೆಲಸ ಮಾಡುವ ಹುಡುಗಿ ಮಾಡುವಂಥದ್ದಲ್ಲ”.
ಅವರು ನನ್ನ ಬುದ್ಧಿವಂತಿಕೆಗೆ ಹೀಗೆ ಉತ್ತರಿಸಿದ್ದರು.

ನಾನು ಒಳಗೊಳಗೇ ವ್ಯಗ್ರಳಾದೆ. ನಿಜವಾಗಿಯೂ ನಾನು ಇಷ್ಟೆಲ್ಲಾ ಓದಿ, ಕವಯಿತ್ರಿಯಾಗಿಯೂ ಇದೇನು ಮಾಡುತ್ತಿರುವೆ! ಕಚೇರಿಯ ಜೀ ಹುಜೂರ್ ನನ್ನ ಜಾಣತನಕ್ಕೆ ವಿರುದ್ಧ! ಕೆಂಜಿರುವೆಗಳು ಮೆದುಳಿನಲ್ಲಿ ಅಸುರಕ್ಷತೆಯ ಭಾವನೆಯನ್ನು ಉಂಟುಮಾಡುತ್ತವೆಯಲ್ಲ! ಮತ್ತೆ ಎಲ್ಲವೂ ಉಚಿತ-ಅನುಚಿತ ಕಾನೂನಿನ ಹೆಸರಿನಲ್ಲಿ. ಎಲ್ಲೂ ಹಗ್ಗ ತುಂಡಾಗುವ ಅವಕಾಶವೇ ಇಲ್ಲ. ಆದರೆ ಆ ದಿನದ ನಂತರ ಅವರ ಮುಖದಲ್ಲಿ ಅಥವಾ ಮಾತುಗಳಲ್ಲಿ ವ್ಯಂಗ್ಯ ಹುಡುಕಿದರೂ ಸಿಗಲಿಲ್ಲ. ಅವರು ನನಗೆ, ಕಚೇರಿ ಏರ್ಪಾಟು ಮಾಡುವ ಸಮಾರಂಭಗಳಲ್ಲಿ ಮುಖಾಮುಖಿಯಾಗುತ್ತಿದ್ದಷ್ಟೇ ಅಲ್ಲ, ಅವರಿಗೆ ಮಾತನಾಡುವ ಅವಕಾಶವೂ ಸಿಗುತ್ತಿತ್ತು. ನಾನು ಹೆಚ್ಚು ಸೌಜನ್ಯ ತೋರಿಸುತ್ತಿದ್ದೆ. ಹೀಗಾಗಿ ಡಾ|| ಡಬ್ ನನ್ನಿಂದ ದೂರವಿರುತ್ತಿದ್ದರೇನೋ !
ಒಟ್ಟಿನಲ್ಲಿ, ಒಂದು ವಿಚಿತ್ರ ಕ್ಷಣದಿಂದ ಪಾರಾಗುವ ಕಣ್ಣಾಮುಚ್ಚಾಲೆ ಆಟದಂತೆ ಗೆಳೆತನದ ಕೊಂಡಿ ಪ್ರತಿ ಹಂತದಲ್ಲೂ ನಿರ್ಮಾಣಗೊಂಡಿತ್ತು.

ಆ ದಿನವೂ ಬಂದಿತು, ಅವರು ತಮ್ಮ ವಾಡಿಕೆಯನ್ನು ಬಿಟ್ಟು ನನ್ನನ್ನು ತಮ್ಮ ಫ್ಲಾಟ್‌ಗೆ ಆಹ್ವಾನಿಸಿದರು. ಅಲ್ಲಿ ಸರಳ ಆದರೆ ಒಳ್ಳೆಯ ಊಟದೊಂದಿಗೆ ಕಡುಕೆಂಪು ವರ್ಣದ ಅತ್ಯುತ್ತಮ ‘ವೈನ್-ಚಿಯಾಂತಿ’ ಸಹ ಇತ್ತು.
“ನೀವು ಮದ್ಯವನ್ನು ಕುಡಿಯಲ್ಲ ಅಂತ ನಾನು ತಿಳಿದಿದ್ದೆ” ನಾನು ತುಟಿ ಬಿಚ್ಚಿದೆ.


“ಇದು ಮದ್ಯವಲ್ಲ, ದ್ರಾಕ್ಷಿಯ ಪ್ರಸಿದ್ಧ ಇಟಾಲಿಯನ್ ವೈನ್. ಡಾಕ್ಟರ್ ಆದ ನಾವು ಇದನ್ನು ಹೃದಯ ರೋಗಿಗಳಿಗೂ ಸಹ ಒಂದು ಕಪ್ ಕುಡಿಯಲು ಸಲಹೆ ಕೊಡುತ್ತೇವೆ. ಈ ಮದ್ಯ ಆರೋಗ್ಯ ಮತ್ತು ಹೃದಯ ಎರಡಕ್ಕೂ ಒಳ್ಳೆಯದು. ಇನ್ನು ನನ್ನ ಬಗ್ಗೆ ಹೇಳುವುದೇನೆಂದರೆ, ನಾನು ಕೆಲವು ಆಪ್ತ ಸ್ನೇಹಿತರೊಂದಿಗೆ ವೈನ್ ಸೇವಿಸುತ್ತೇನೆ.”


“ಇದನ್ನು ನಿಮ್ಮ ಕಚೇರಿಯ ಪಾರ್ಟಿ ಅಥವಾ ಹೈ-ಫೈ ಸೊಸೈಟಿಯ ನೀರಸ ಮತ್ತು ಅಶಿಷ್ಟ ವಾತಾವರಣದಲ್ಲಿ ಕುಡಿದರೆ ರುಚಿ ಇರುವುದಿಲ್ಲ, ಯಾವುದೇ ಮಜವೂ ಬರುವುದಿಲ್ಲ. ವೈನ್ ಸವಿಯುವಂಥ ಪೇಯ, ಅದಕ್ಕಾಗಿ ಮುಕ್ತ, ಸಂತೋಷದ,

ತಾಜಾತನದ, ಆರೋಗ್ಯಕರ ಮತ್ತು ಆತ್ಮೀಯ ವಾತಾವರಣ ಬೇಕು”.
“ಇಂದು ನೀವು ಈ ವಾತಾವರಣವನ್ನು ಪಡೆದಿರಿ”. ನಾನು ಚಿಟಿಕೆ ಹೊಡೆಯುತ್ತಾ ವ್ಯಂಗ್ಯವಾಡಿದೆ. ಹೀಗೆ ಹೇಳುತ್ತಾ ತುಸು ನಾಚಿದೆ.

ಇದಕ್ಕುತ್ತರವಾಗಿ ಡಾ|| ಡಬ್ ಒಂದು ಅಂದದ ಸ್ಫಟಿಕ ಗಾಜಿನ ಗೋಳಾಕಾರದ ಕಪ್‌ನಲ್ಲಿ ವೈನ್ ಸುರಿದರು. ನಂತರ ಆ ಕಪ್ಪನ್ನು ಮೂಗಿನ ಬಳಿ ಹಿಡಿದು ಮೂಸಿದರು. ನನಗೂ ಹಾಗೆ ಮಾಡಲು ಹೇಳಿದರು. ಕಡೆಗೆ ತಮ್ಮ ಕಪ್ಪನ್ನು ನನ್ನ ಕಪ್‌ಗೆ ತಾಗಿಸಿ ‘ಸಾಲೂದ್’ (ಆರೋಗ್ಯ) ಎಂದರು. ಕಡೆಗೆ ಒಂದು ಗುಟುಕನ್ನು ಸವಿದರು, “ಒಳ್ಳೆಯ ವೈನ್ ಕುಡಿಯುವ ಫ್ರೆಂಚ್ ವಿಧಾನ ಇದೇ. ಫ್ರೆಂಚ್ ಯಾಕೆಂದು ಕೇಳ್ತೀಯಾ? ಅವರ ಚಕ್ರವಾಕ ಪಕ್ಷಿಗೆ ರೆಕ್ಕೆ ಬಂದಿದೆಯೇ ? ಹೌದು, ಬಂದಿದೆ. ವೈನಿನ ನಿಜವಾದ ಪರೀಕ್ಷಕರು ಅವರೇ ಆಗಿದ್ದಾರೆ. ಜಗತ್ತಿನ ಅತ್ಯುತ್ತಮ ವೈನನ್ನು ಅಲ್ಲಿಯೇ ತಯಾರಿಸಲಾಗುತ್ತದೆ. ಹಾಗಂತ ಅರ್ಜೆಂಟೀನಾದ ವೈನಿಗೆ ತನ್ನದೇ ಆದ ಮಹತ್ವವಿದೆ”.


ನಾನು ಅವರ ತಿಳಿವಳಿಕೆಯನ್ನು ಒಪ್ಪಿಕೊಂಡೆ, “ಯೂರೋಪಿನ ಸಂಸ್ಕೃತಿಯ ಈ ‘ಶ್ರೀಗಂಧ’ವನ್ನು ಸ್ವೀಕರಿಸುತ್ತೇನೆ” ಎಂದು ನಾನು ನಕ್ಕಾಗ ಅವರು ನನ್ನೆಡೆಗೆ ನೋಡಿದರು. ಕಡೆಗೆ ಸ್ವಲ್ಪ ಹೊತ್ತು ಹಾಗೆಯೇ ನೋಡುತ್ತಾ ಹೇಳಿದರು, “ನಾನು ಮದ್ಯವನ್ನು ನಶೆಗಾಗಿ ಕುಡಿಯಲ್ಲ. ನನ್ನ ಬಳಿ ಮರೆಯುವಂಥದ್ದು ಏನೂ ಇಲ್ಲ. ಪಶ್ಚಾತ್ತಾಪ ಪಡುವಂಥದ್ದೂ ಏನೂ ಇಲ್ಲ. ದುಃಖವನ್ನು ಮರೆಯಲೂ ಕುಡಿಯುವುದಿಲ್ಲ. ನಾನು ಸಂತೋಷಕ್ಕಾಗಿ ಕುಡಿಯುತ್ತೇನೆ, ಅದೂ ಒಮ್ಮೊಮ್ಮೆ. ಆದರೆ ನಶೆ ಏರುವುದಕ್ಕೂ ಮೊದಲೇ ಕಪ್ಪನ್ನು ಕೆಳಗಿಟ್ಟುಬಿಡ್ತೀನಿ”.

“ಯಾಕೆ ? ನಶೆಗೊಳಗಾಗಲು ಹೆರ‍್ತೀರ ?” ನಾನು ಅನಾಯಾಸವಾಗಿಯೇ ಕೇಳಿದೆ.
“ಇಲ್ಲ, ಹಾಗಲ್ಲ. ನಶೆಗೊಳಗಾಗಲು ಸುಂದರ ರೂಪವೇ ಸಾಕಲ್ಲವೇ ? ಅಥವಾ ಒಂದು ರಸಿಕತೆಯ ನೋಟ... ಮೋಗ್ದಲಿಯಾನಿಯ ಪೇಂಟಿಂಗ್ ಸಹ ನಶೆಯೇರಿಸುತ್ತದೆ. ಒಳ್ಳೆಯ ವೈಮಾನಿಕ ಪ್ರವಾಸ ಅಥವಾ ಒಂದು ನಿಶ್ಚಿತ ಸ್ಥಳದ ವಾಸ್ತವ್ಯ ಅಭ್ಯಾಸ ತಪ್ಪಿದಂತೆ ಕಂಡಾಗಲೂ ನಶೆಯೇರುತ್ತದೆ. ಗಂಧರ್ವ ನಗರದ ಕೋಮಲ, ಸೂಕ್ಷ್ಮ ಗತಿಯಲ್ಲಿಯೂ ನಮಗೆ ಇಡಿಯಾದಂತಹ ಅನುಭವವಾಗುತ್ತದೆ; ಆಗಲೂ ನಶೆಯೇರುತ್ತದೆ. ನಶೆಯ ಅನುಭವಕ್ಕೆ ಹೋಗಲು ಅನೇಕ ಸಂಗತಿಗಳಿವೆ, ಅನೇಕ ಬಯಕೆಗಳೂ ಇವೆ...”
ಒಮ್ಮೆ ಡಾ|| ಡಬ್‌ರವರ ಮುಖ, ಕೆಂಪಿರುವೆಗಳ ಸಾಲು ತೆವಳಿ ಹೋದಾಗ ಕೆಂಪಾಗುವಂತೆ ಕೆಂಪು-ಕೆಂಪಗಾಯಿತು. ತುಟಿಗಳಲ್ಲಿ ತೇವ ಹೊಳೆಯಿತು...
ಅವರ ಈ ರೂಪ ಮೊದಲ ಬಾರಿಗೆ ನನಗೆ ಹಿತವೆನಿಸಿತು. ಬಹುಶಃ ನಾನು ನನ್ನ ಪೂರ್ವಗ್ರಹಗಳಿಂದ ಮುಕ್ತಳಾದೆ.
ನಾವು ಊಟವಾದ ನಂತರ ಸೋಫಾದಲ್ಲಿ ಕೂತೆವು. ಅವರು ನನ್ನ ನೀಳ ಕೇಶಗಳನ್ನು ಹೆಣೆದು ಎತ್ತರದ ಹೆರಳು ಹಾಕುತ್ತಾ ಹೇಳಿದರು, “ಒಂದು ವೇಳೆ ನೀನು ನನ್ನ ಮನೆಯಲ್ಲಿ ಇದ್ದಿದ್ರೆ, ನಿನಗೆ ತುರುಬು ಹಾಕಿಕೊಳ್ಳಲು ಹೇಳ್ತಿದ್ದೆ. ನಿನಗಿದು ತುಂಬಾ ಚೆಂದವಾಗಿ ಕಾಣಿಸುತ್ತೆ, ನಿನ್ನ ವ್ಯಕ್ತಿತ್ವಕ್ಕೆ ಆತ್ಮವಿಶ್ವಾಸವನ್ನು ತುಂಬುತ್ತದೆ...”


ನಾನು ಅವರ ಈ ಮುಕ್ತ ಕ್ರಿಯೆಯಿಂದ ನಾಚಿದೆ. ಅವರ ಕೈಯನ್ನು ಮೆಲ್ಲನೆ ನನ್ನ ಮುಂಗುರುಗಳಿಂದ ಸರಿಸಿದೆ.
“ಹೆದರಿಬಿಟ್ಯಾ ! ನನ್ನ ಸ್ಪರ್ಶದಿಂದ ಯಾಕೆ ಮುದುಡಿಕೊಳ್ತೀಯ ? ನನ್ನನ್ನು ಮುಟ್ಟಬೇಡಿ ಅಂತ ಹಟ ಹಿಡೀಬೇಡ. ಮುಂದೆ ಇದೇ ತೀರಿಸಲಾಗದ ಪಶ್ಚಾತ್ತಾಪವಾಗಿ ನಿನ್ನನ್ನು ವಿಷದಂತಗಳಿಂದ ಕುಟುಕಿ ಮುಗಿಸಿಬಿಡಬಹುದು... ಕೆಲ ಕಾಲದ ನಂತರ...”
ನನಗೆ ಅವರ ತುಂಟತನ ಸ್ವಲ್ಪವೂ ಹಿಡಿಸಲಿಲ್ಲ. ಆದರೂ ಮನಸ್ಸನ್ನು ಗಟ್ಟಿ ಮಾಡಿಕೊಳ್ಳ್ಳಲು ಪ್ರಯತ್ನಿಸಿದೆ. ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡೆ. ಅಂದು ಅದೃಷ್ಟ ಖುಲಾಯಿಸಲಿಲ್ಲ, ಡಾ|| ಡಬ್ ಅವರ ಅದೃಷ್ಟವೂ ಖುಲಾಯಿಸಲಿಲ್ಲ.

ರಾತ್ರಿ ತಡವಾಗಿತ್ತು. ನನ್ನನ್ನು ಮನೆಗೆ ಬಿಡುತ್ತೇನೆಂದು ಹೇಳಿದಾಗ ನಾನು ಬೇಡವೆಂದೆ. ಅವರಿಗೆ ಅರ್ಥವಾಯಿತು, ಒತ್ತಾಯಿಸಲಿಲ್ಲ. ಹಾಗಂತ ಬೋನೋಸೈರಸ್ ನಗರವೂ ಶನಿವಾರ ರಾತ್ರಿ ತನ್ನ ಕಣ್ಣುಗಳನ್ನು ಅರಳಿಸಿಕೊಂಡು ಎಚ್ಚರವಾಗಿರುತ್ತದೆ. ರಾತ್ರಿಯೆಲ್ಲಾ ಜನರ ಓಡಾಟ! ರೆಸ್ಟೊರೆಂಟ್‌ಗಳಲ್ಲಿ, ಬಾರ್‌ಗಳಲ್ಲಿ ತಮ್ಮ-ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಲೋ ಅಥವಾ ತೊಡಕು ಮಾಡಿಕೊಳ್ಳುತ್ತಲೋ ಇರುವ ಯುವಕರ ಗುಂಪು. ಬೆಳಿಗ್ಗೆ ಆರು ಗಂಟೆಯವರೆಗೆ ದೀಪ ಆರುವುದಿಲ್ಲ. ಬಸ್‌ಗಳು ಯುವಕ-ಯುವತಿಯರಿಂದ ತುಂಬಿಕೊಂಡು ಅವರ ಹೌದು-ಅಲ್ಲ ಮಾತುಗಳಿಂದ ಮತ್ತು ಕುಲುಕಾಟದಿಂದ ರಾತ್ರಿಯಿಡೀ ಬೆಚ್ಚಗಿರುತ್ತವೆ !


ಇದಾದ ನಂತರ ನಾನು ಇನ್ನೊಬ್ಬರನ್ನು ಅವಲಂಬಿಸಲೇ ಇಲ್ಲ. ಭಯ ನನ್ನ ಬಳಿಯಲ್ಲಿ ಸುಳಿಯಲೇ ಇಲ್ಲ. ಬಾಗಿಲು ತೆರೆಯುವಾಗ ಹೇಳಿದ್ದರು, “ಈ ರಾತ್ರಿ ಕನಸು ಕಾಣಲು ಅಲ್ಲ, ಇಲ್ಲಿ ಎಚ್ಚರವಾಗಿದ್ದು ಕನಸು ಕಾಣಬೇಕಿದೆ, ನಮ್ಮನ್ನು ನಾವೇ ವಂಚಿಸಿಕೊಳ್ಳಬಾರದು...” ಹೀಗೆ ಯಾಕೆ ಹೇಳಿದರೋ! ನನಗೆ ಸಂದರ್ಭವೇ ಬರಲಿಲ್ಲ.
“ಹಾಗಂತ ಗುಲಾಬಿ ಬೆಳಕಿನೊಳಗೆ ನಾವೆಲ್ಲರೂ ಸುಖವಾಗಿದ್ದೇವೆಂಬ ನಾಟಕ ಮಾಡುತ್ತೇವೆ. ಅಪಾಯವನ್ನು ಎದುರಿಸಿದರೆ ಗಂಟೇನು ಹೋಗುತ್ತೆ !”

ಒಂದು ತಿಂಗಳು ಡಾ|| ಡಬ್ ಅವರ ಕ್ಲೀನಿಕ್‌ಗೆ ಹೋಗುವ ಸಂದರ್ಭ ಬರಲಿಲ್ಲ. ಅಂದು ಕತ್ತು ನೋವಿನಿಂದ ಬಳಲುತ್ತಿದ್ದೆ. ನಾನು ಬಾಸ್‌ನ ಸೆಕ್ರೆಟರಿಯಾಗಿದ್ದೆ. ಅವರ ವೈಯಕ್ತಿಕ ಕಾರ್ಯಕ್ರಮಗಳ ರಿಪೋರ್ಟ್ ಇಡುವುದು ನನ್ನ ಜವಾಬ್ದಾರಿಯಾಗಿತ್ತು. ವೈದ್ಯರ ರಿಪೋರ್ಟ್ ತರುವ ಕೆಲಸ, ಪ್ರಿಸ್ಕ್ರಿಪ್ಷನ್‌ ಕೊಡುವ ಕೆಲಸ, ವೈಯಕ್ತಿಕ ಸಂದೇಶಗಳನ್ನು ಹೊತ್ತೊಯ್ಯುವ ಕೆಲಸ... ಹೀಗೆ ಕೆಲಸಗಳು !


ಡಾಕ್ಟರ್ ನನ್ನ ಭುಜವನ್ನು ಅಲುಗಾಡಿಸಿ ಪರೀಕ್ಷಿಸಿದರು. ಕಡೆಗೆ ವ್ಯಾಯಾಮ ಮಾಡಿಸಿ ‘ಆರ್ಥೋರೈಟ್ಸ್!’ ಎಂದರು.
ಇದು ಅವರ ತಮಾಷೆಯೆಂದು ತಿಳಿದೆ. 32 ವರ್ಷದ ನೌಕರಿಯಲ್ಲಿ ಅವರ ವಿಚಿತ್ರ ಡಯಾಗ್ನೋಸಿಸ್ ಬಗ್ಗೆ ಹೇಗೆ ಲೆಕ್ಕವಿಡಲಿ
ಅವರು ಸುಂದರವಾಗಿ ಜೋಡಿಸಿಟ್ಟ ಚಿಟ್ಟೆಗಳನ್ನು ಮರೆಯಲು ಸಾಧ್ಯವಿರಲಿಲ್ಲ. ನನ್ನ ಕಣ್ಣುಗಳು ಅವುಗಳನ್ನೇ ನೋಡುತ್ತಿದ್ದವು. ಮನಸ್ಸಿನಲ್ಲಿ ಕತ್ತಲು ಕವಿದಂತಾಗುತ್ತಿತ್ತು... ಮತ್ತೊಮ್ಮೆ ಚಿಟ್ಟೆಗಳ ಬಗ್ಗೆ ಪ್ರಸ್ತಾಪಿಸಿದಾಗ ಡಾ| ಡಬ್ ಹೇಳಿದ್ದರು - “ಸಣ್ಣ ಪುಟ್ಟ ಸಂಶೋಧನೆಗಳಿಗೆ ಅವುಗಳದೇ ಆದ ಅರ್ಥ ಮತ್ತು ಉದ್ದೇಶಗಳಿರುತ್ತವೆ. ದೊಡ್ಡದ್ದನ್ನು ಪಡೆಯಲು ಸಣ್ಣ-ಪುಟ್ಟ ಆಸೆ ಮತ್ತು ಉದ್ದೇಶಗಳನ್ನು ಹಾಳು ಮಾಡಬಾರದು...

ನಿಜವಾಗಿ ಹೇಳುವುದಾದರೆ ಅವರ ಮಾತಿಗೂ, ನನ್ನ ಪ್ರಶ್ನೆಗೂ ಯಾವುದೇ ಸಂಬಂಧವಿರಲಿಲ್ಲ. ಅವರು ತಮ್ಮೊಂದಿಗೆ ಕಲಕಾಡಿಕೊಂಡೇ ಮಾತನಾಡುತ್ತಿರಬಹುದು, ಇದು ಅವರ ಮತ್ತು ನನ್ನ ನಡುವಿನ ವ್ಯತ್ಯಾಸವನ್ನು ಕಾಯ್ದಿಟ್ಟುಕೊಳ್ಳಲೂ ಆಗಿರಬಹುದು... ಅಥವಾ ಒಂದು ವಿಧದ ಸಮೀಪದ ನೋಟವೂ ಆಗಿರಬಹುದು !

ಕ್ಲೀನಿಕ್‌ನಿಂದ ಹೊರಟಾಗ ಮತ್ತೊಂದು ಆಹ್ವಾನ ಸಿಕ್ಕಿತು. ಐದು ಬ್ಲಾಕ್‌ವರೆಗೆ ಜಿಗ್-ಜಾಗ್ ಮಾಡಿಕೊಂಡು ಹೊರಟಿದ್ದೆವು. ಈ ಘಟನೆ, ಕೊನೆಯಲ್ಲಿದ್ದ ಕಾಫಿ ಬಾರ್‌ನಲ್ಲಿ ಸಂಭವಿಸಿತು. ಅಂದು ಅವರು ಮೂಡ್‌ನಲ್ಲಿದ್ದು ಸ್ವಲ್ಪ ಜಂಭದಿಂದಲೇ ಪ್ರಶ್ನಿಸಿದರು, “ನೀನು ಲೇಖಕಿ. ಲೇಖಕ ತನ್ನ ಲೇಖನದಲ್ಲಿ ಏನು ಬರೆಯುತ್ತಾನೆ ?”


ನನಗೆ ಈ ಪ್ರಶ್ನೆಯಿಂದ ಆಶ್ಚರ್ಯವಾಯಿತು. ಯಾಕೆಂದರೆ ಅವರು ವರ್ಜೀನಿಯಾ ವುಲ್ಫ್‌ನ ಬರವಣಿಗೆಯನ್ನು ಮೆಚ್ಚಿಕೊಂಡಿದ್ದರು. ‘ಕೋರ್ಟಾಸಾರ್’ ಅವರ ಮೆಚ್ಚಿನ ಕಥೆಗಾರರಾಗಿದ್ದರು. ನಾನು ಸಂಕ್ಷಿಪ್ತದಲ್ಲಿ ‘ಬರಹಗಾರ ತನ್ನ ಬರವಣಿಗೆಯಲ್ಲಿ ಓದುಗರಿಗೆ ತನ್ನ ಅನುಭವ, ಭಾವನೆ ಮತ್ತು ಕಾಮನೆಗಳು ಬದುಕುವಂತಹ ಅವಕಾಶವನ್ನು ಕಲ್ಪಿಸುತ್ತಾನೆ, ಅರೆ-ಬರೆ ಜೀವನ ಅಥವಾ ಭಾವನೆಯನ್ನು ಇಡಿಯಾಗಿ ಬದುಕುವಂತಹ ಚೈತನ್ಯವನ್ನು ಎಚ್ಚರಿಸುತ್ತಾನೆ. ಅವುಗಳ ಮೌಲ್ಯದೆಡೆಗೆ ಸನ್ನೆ ಮಾಡುತ್ತಾನೆ’ ಎಂದು ಉತ್ತರಿಸಿದೆ. ಆಗ ಡಬ್ ಅವರು ಸ್ವಲ್ಪ ಯೋಚಿಸಿದರು. ನಂತರ ಸಹಾನುಭೂತಿಯ ಮತ್ತು ಪ್ರಶಂಸೆಯಿಂದ ಹೇಳಿದರು, “ನೀನು ಜಾಣೆ ಹುಡುಗಿ. ಇಷ್ಟು ದೊಡ್ಡ ಪ್ರಶ್ನೆಗೆ ಇಷ್ಟು ಸರಳ ಮತ್ತು ಆಳವಾಗಿ ಕೆಲವೇ ಶಬ್ದಗಳಲ್ಲಿ ಉತ್ತರಿಸಿದೆ ! ವಿದ್ವಾಂಸರೂ ಸಹ ತಮ್ಮ ವಿದ್ವತ್‌ನ ಅಹಂಕಾರದಲ್ಲಿ ಇಂಥ ಉತ್ತರವನ್ನು ಕೊಡಲಾರರು. ಓಹ್, ನೀನು ಅದ್ಭುತ ! ಅಕಾಡೆಮಿಕ್‌ನವರು ನಿನ್ನಿಂದ ಸಮಸ್ಯೆ ಬಗೆಹರಿಸುವುದನ್ನು ಕಲಿಯಬೇಕು. ಅವರು ತಮ್ಮ ಜ್ಞಾನದ ಪಾತ್ರೆಯಲ್ಲಿ ನೀರನ್ನಷ್ಟೇ ತುಂಬುತ್ತಾರೆ!”


ಅವರು ಮನಸಾರೆ ಮುಗುಳ್ನಗುತ್ತಿದ್ದರು. ಆದರೆ ಅವರ ಮುಂದಿನ ಪ್ರಶ್ನೆ ಜೇನಿನಲ್ಲಿ ನೊಣ ಬಿದ್ದಂತೆ ಎದುರಾಯಿತು, “ಆದ್ರೆ ರಾಜಕುಮಾರಿ, ಹೇಳು ! ನಿನ್ನಂತಹ ಜಾಣೆ ಹುಡುಗಿ, ಸುಂದರ ಉಡುಪುಗಳ ಸುಂದರಿ, ಆ ಬ್ಯೂರೋಕ್ರೆಟ್‌ಗಳ ಕಛೇರಿಯಲ್ಲಿ ಏನು ಮಾಡ್ತೀಯ? ನಿಮ್ಮ ಬಾಸ್‌ಗಳಿಗೆ ಉಡುಪುಗಳನ್ನು ನೀಟಾಗಿ ಧರಿಸುವಷ್ಟೂ ಬುದ್ಧಿಯಿಲ್ಲವಲ್ಲ”
“ಅಲ್ಲಿ ನಾನು ಭೌತಿಕ ಅಸ್ತಿತ್ವವನ್ನು ಸಾವಿನಿಂದ ದೂರ ಮಾಡಲು ಇದ್ದೇನೆ. ಬಾಸ್ ವಹಿಸುವ ಕೆಲಸಗಳ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಅವರ ಆದೇಶವನ್ನು ಪಾಲಿಸಿದರೆ ಅವರಿಗೆ ಖುಷಿಯಾಗುತ್ತದೆ, ಉಲ್ಲಂಘಿಸಿದರೆ ನೈತಿಕ ಧರ್ಮವೆಂದು ಕಠಿಣ ಶಿಕ್ಷೆಯನ್ನು ಕೊಡುತ್ತಾರೆ. ಆ ಕೆಲಸಗಳಿಂದ ಮನಸ್ಸು ಭಿನ್ನವಾಗಿರುತ್ತದೆ. ನೌಕರಿಯಿಂದ ಲಾಭ-ನಷ್ಟ ಇದ್ದೇ ಇದೆ. ಇದರಿಂದ ಯಾರೂ ಹೊರತಲ್ಲ. ನಿಮ್ಮಂತಹ ಸ್ವತಂತ್ರ ಉದ್ಯಮಿಗಳು ಇಂಥ ಪರಿಸ್ಥಿತಿಯಲ್ಲಿಯೂ ರಾಜರಂತೆ ರ‍್ತೀರ” ನಾನು ಸ್ಪಷ್ಟವಾಗಿ ಹೇಳಿದೆ.

ನನ್ನ ಧ್ವನಿಯಲ್ಲಿ ಬೇಸರವಿತ್ತು. ಡಾಕ್ಟರ್ ತುಂಬಾ ಹೊತ್ತು ಮಾತನಾಡದೆ ಕಾಫಿಯನ್ನು ಗುಟುಕರಿಸಿದರು. ನಂತರ ಸ್ವಲ್ಪ ಬೇಸರದಿಂದ ಹೇಳಿದರು, “ನೀನು ದಣಿದು ಮನೆಗೆ ಹೋದಾಗ ನಿನ್ನನ್ನು ಕಾಯುತ್ತಾ ಬಹುಶಃ ಒಬ್ಬರು ಬಾಗಿಲ ಬಳಿ ಕೂತಿರುತ್ತಾರೆ. ಬಾಗಿಲನ್ನು ನೀನೇ ತೆರೆಯಬೇಕಿಲ್ಲ. ಬೇರೆಯವರು ಬಂದು ಬಾಗಿಲು ತೆರೆಯಬಹುದು. ಆದರೆ ಆ ಪ್ರೇತ ಮೌನದಲ್ಲಿ ನನ್ನಿಂದ ಯಾವುದೇ ಅತಿಕ್ರಮಣವಾಗುವುದಿಲ್ಲ... ಫ್ರಿಜ್‌ನಲ್ಲಿಟ್ಟಿದ್ದ ತಣ್ಣನೆ ಆಹಾರ ಮತ್ತು ಬ್ರೆಡ್ ಚೂರುಗಳು, ಪನೀರ್ ಸ್ಲೈಸ್‌, ಮೊಟ್ಟೆಗಳು ಎಲ್ಲವೂ ನನ್ನನ್ನು ಹೆದರಿಸುತ್ತವೆ...”


“ಇದು ನಿಮ್ಮ ಆಯ್ಕೆ...” ನಾನು ಕೂಡಲೇ ಹೇಳಿದೆ. ನನ್ನ ನಿಷ್ಠುರ ಉತ್ತರದಿಂದ ಡಾ|| ಡಬ್ ಅವರು ನೊಂದು ಹೇಳಿದರು, “ನಾವು ಆಯ್ಕೆಗೆ ಸ್ವತಂತ್ರರಾಗಿದ್ದರೆ ಎಷ್ಟು ಚೆಂದವಿತ್ತು ! ಸರಿ, ನೀನೀಗ ಹೇಳು...” ಅವರು ತಮ್ಮ ಮಾತಿನ ದಿಕ್ಕನ್ನು ಹೊರಳಿಸಿದರು.

ಡಾ|| ಡಬ್ ಎಂದೂ ತಮ್ಮ ಜೀವನದ ಬಗ್ಗೆ ಹೇಳಲಿಲ್ಲ. ತಮ್ಮ ರೋಗಿಗಳಿಂದ ಹಿಡಿದು ಸ್ನೇಹಿತರ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ಬಿಡಬೇಕೆಂದಿದ್ದ ಆಸ್ಪತ್ರೆಯ ಅನುಭವಗಳ ಬಗ್ಗೆಯೂ ಹೇಳುತ್ತಿದ್ದರು. ಬ್ರಿಟಿಷ್ ಆಸ್ಪತ್ರೆಗಳಲ್ಲಿ ಇನ್ನಿತರ ಲಾಭಗಳೊಂದಿಗೆ ಸಂಬಳವೂ ಸಿಗುತ್ತಿತ್ತು!

! ಅವರು ಒಳ್ಳೆಯ ಸರ್ಜನ್ ಆಗಿದ್ದು ರೋಗಿಗಳನ್ನು ಸಹಾನುಭೂತಿಯಿಂದ ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಇಪ್ಪತ್ತನಾಲ್ಕನೇ ವಯಸ್ಸಿಗೆ ಕಾಲಿಟ್ಟಿದ್ದ ಕ್ಯಾನ್ಸರ್ ಪೀಡಿತ ಯುವತಿಯೊಬ್ಬಳು ಅವರಿಗೆ ತನ್ನ ಹದಿನಾಲ್ಕನೇ ಗರ್ಭಪಾತದ ಸುದ್ದಿಯನ್ನು ಈ ವಿಶ್ವಾಸದಿಂದಲೇ ಹೇಳಿದ್ದಳು.

“ನನಗೆ ಆ ಯುವತಿಯ ಬಗ್ಗೆ ತುಂಬಾ ಕರುಣೆ ಹುಟ್ಟಿತು. ಅವಳ ನೀಚ ಕೆಲಸಕ್ಕೆ ಅವಳ ಬಗ್ಗೆ ಜಿಗುಪ್ಸೆಯುಂಟಾಗಲಿಲ್ಲ! ನಾನಾದರೂ ಯಾವ ಚಿಕಿತ್ಸೆ ಮಾಡಲು ಸಾಧ್ಯವಿತ್ತು? ಅವಳು ಅಷ್ಟು ಗರ್ಭಪಾತದ ಮೇಲೆ ಸತ್ತಿದ್ದಳು. ಅವಳು ಒಂದಾದ ಮೇಲೆ ಒಂದರಂತೆ ಅದೆಷ್ಟೋ ಜೀವಗಳನ್ನು ಹತ್ಯೆ ಮಾಡುತ್ತಿದ್ದಾಗ ಒಬ್ಬ ಯುವಕನೂ ಅವಳಿಗೆ ತನ್ನ ಪ್ರೀತಿಯ ಭರವಸೆಯನ್ನು ನೀಡಲಿಲ್ಲವೇ? ... ಎಂಥಾ ಐರನಿ! ಮನುಷ್ಯನ ನಿಜವಾದ ಸರಳತೆ ಒಂದು ಮಹತ್ವದ ಸಂಗತಿಯಾಗಿರುತ್ತದೆ. ಹೀಗಿರುವಾಗ ಅದು ಸುಂದರ ಯುವತಿಯಲ್ಲಿ ಮತ್ತೂ ಮಹತ್ವದ ಸಂಗತಿಯಾಗಿರಬೇಕು... ಆದರೆ ಆ ಯುವತಿಯನ್ನು ನೋಡು, ಅವಳು ಇಪ್ಪತ್ತನಾಲ್ಕನೇ ವಯಸ್ಸಿಗೆ ಒಮ್ಮೆಲೆ ಮುದುಕಿಯಾಗಿದ್ದಳು... ಅವಳನ್ನು ಮುದುಕಿಯೆಂದೇ ಹೇಳ್ತಾರೆ.

“ಜೀವನದ ಇಬ್ಬನಿ ನೆಕ್ಕಿ ಎಷ್ಟು ದಿನ ಬದುಕಿರಲು ಸಾಧ್ಯ?... ಅವಳ ಆತ್ಮ ಮಣ್ಣಾಗಿತ್ತು... ಅವಳಿಗೆ ಕ್ಯಾನ್ಸರ್ ಆಗದೆ ಬೇರೇನೂ ಆಗಲು ಸಾಧ್ಯವಿರಲಿಲ್ಲ...ಅವಳ ಕಥೆಯನ್ನು ನನ್ನಿಂದ ಕೇಳಲು ಸಾಧ್ಯವಾಗಲಿಲ್ಲ... ನೋಡು, ಡಾಕ್ಟರ್ ಸಹ ಹೇಡಿಯಾಗರ‍್ತಾನೆ, ಪುಕ್ಕಲು ಸ್ವಭಾವದವನಾಗರ‍್ತ್ತಾನೆ. ಅವನ ಮನಸ್ಸಿನಲ್ಲಿ ಸಂಶಯವಿರುವುದಿಲ್ಲ, ಅವನಿಗೆ ಬುದ್ಧಿಯಿರುವುದಿಲ್ಲವೆಂದೂ ಯೋಚಿಸುತ್ತಾರೆ. ಆದರೆ ಕಲ್ಲು ಮನಸ್ಸು ಸಹ ಬಿರಿಯುತ್ತದೆ... ನಾವು ಯಾವಾಗ್ಲೂ ಕಷ್ಟದ ಪರಿಸ್ಥಿತಿಯಲ್ಲಿರಬೇಕಾಗುತ್ತದೆ. ಡಾಕ್ಟರ್, ತಮ್ಮ ರೋಗಿಗಳೆದುರು ಭಾವಶೂನ್ಯರಾಗರ‍್ತಾರೆ ಅಂತ ನೀನು ತಿಳಿದುಕೊಂಡಿದ್ದೀಯ, ಆದರೆ ಇದು ಖಂಡಿತ ಸರಿಯಲ್ಲ. ಡಾಕ್ಟರ್ ಎದುರು ರೋಗಿ ಸತ್ತರೆ, ಡಾಕ್ಟರ್ ಸಹ ಸ್ವಲ್ಪ ಸಾಯುತ್ತಾರೆ, ಇದು ಅವರ ಸೋಲಲ್ಲ, ಒಂದು ಜೀವವನ್ನು ಉಳಿಸಿಕೊಳ್ಳಲಾಗದ ದುಃಖದಿಂದ ಅವರೇ ತಪ್ಪಿತಸ್ಥರಾಗುತ್ತಾರೆ.

“ರೋಗಿಯನ್ನು ಉಳಿಸಿಕೊಳ್ಳಲಾರದ ದುಃಖ ಅವನು ಸತ್ತ ದುಃಖಕ್ಕಿಂತ ನಾಲ್ಕು ಪಟ್ಟು ಹೆಚ್ಚುತ್ತದೆ... ವಿಜ್ಞಾನಿಗೆ ಆಸ್ತಿಕನಿಗಿರುವಂತಹ ಸಮಾಧಾನವಿರುವುದಿಲ್ಲ. ಅವನು ಅದೃಷ್ಟವನ್ನು ನಂಬಿ ತನ್ನ ತಪ್ಪಿನಿಂದ ತಪ್ಪಿಸಿಕೊಳ್ಳಲಾರ... ಅವನಿಗೆ ಅವನ ಕೆಲಸವೇ ಪಂಥಾಹ್ವಾನವಾಗುತ್ತದೆ...”


ಡಾ||ಡಬ್ ಮೌನ ವಹಿಸಿದಾಗ ಅವರ ಮುಖ ತುಂಬಾ ಬಿಳುಪಾಗುತ್ತದೆ... ಅವರು ಅಷ್ಟಕ್ಕೇ ನಿಲ್ಲಿಸದೆ ತಮ್ಮ ಭಾವನೆಗಳನ್ನು ಹೇಳಿಕೊಂಡರು,“ರೋಗಿ, ಗುಣಮುಖನಾದಾಗ ಡಾಕ್ಟರರ ಇಗೋಕ್ಕೆ ಸಂತೋಷವಾಗುತ್ತದೆ. ಅವರ ಮನಸ್ಸಿಗೂ ಸಂತಸವಾಗುತ್ತದೆ.

ಡಾಕ್ಟರ್ ಒಬ್ಬ ಕಲಾವಿದ. ನಾನು ಸರ್ಜನ್ ಸಹ ಹೌದು. ಆಪರೇಶನ್‌ನಿಂದ ಒಂದು ಅಂಗವನ್ನು ಗುಣಪಡಿಸಿದಾಗ ರೋಗಿಯಲ್ಲಿ ಹೊಸ ರಕ್ತ ಸಂಚಾರವಾಗುತ್ತದೆ. ರೋಗಿಯ ಊನ ಅಂಗಕ್ಕೆ ಹೊಸ ಬದುಕನ್ನು ನೀಡುವ ಸಂತೋಷ ತುಂಬಾ ದೊಡ್ಡದು. ರೋಗಿಯ ಸಂತೋಷದಲ್ಲಿ ಭಾಗಿಯಾಗುವುದು ತುಂಬಾ ಹಿತವೆನಿಸುತ್ತದೆ. ಆಗ ರೋಗಿಯ ಸಂಬಂಧಿಕನೂ ನಾನೇ ಅಂತ ಅನ್ನಿಸುತ್ತದೆ...ಇಂಥ ಅನುಭವ ಆಗದಿದ್ದರೆ ನನ್ನ ಕೆಲಸಗಳು ಅಪೂರ್ಣವಾಗುತ್ತವೆ. ಆದರೆ ರೋಗಿಯ ಸಾವು...ವಿಜ್ಞಾನದಲ್ಲಿ ನಂಬಿಕೆ ಎನ್ನುವುದು ತುಂಬಾ ದೊಡ್ಡದೆಂದು ನಿನಗೆ ಹೇಳ್ತಿದ್ದೆ. ಯಾಕೆಂದರೆ ಅವರಲ್ಲಿ ಧಾರ್ಮಿಕ ಶ್ರದ್ಧೆಯಿಲ್ಲ. ಹೀಗಾಗಿ ಮನಸ್ಸನ್ನು ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಲು ಸಾಧ್ಯವಿಲ್ಲ... ದುಃಖದಿಂದ ಪಾರಾಗಲು ಮಾರ್ಗವಿಲ್ಲ...ಇನ್ನು ನನ್ನಂತಹ ನಾಸ್ತಿಕನಾದರಂತೂ!...”


“ಬೇರೆ ಡಾಕ್ಟರ್‌ಗಳು ನಿಮ್ಮ ಹಾಗೆಯೇ ಅನುಭವ ಪಡೀತಾರಾ ?”
“ಹೆಚ್ಚು ಡಾಕ್ಟರ್‌ಗಳಿಗೆ ಅನುಭವವಾಗುತ್ತದೆ. ಇಂದು ರೋಗಿಯ ಕಷ್ಟವನ್ನು ನೋಡದೆ ಅವರ ಜೇಬಿಗೆ ಕತ್ತರಿ ಹಾಕಲು ಡಿಗ್ರಿ ಪಡೆಯುತ್ತಾರೆ. ಇವರು ಶ್ರೀಮಂತಿಕೆಯ ಜೀವನ ಸಾಗಿಸಲೆಂದೇ ಈ ಉದ್ಯೋಗವನ್ನು ಮಾಡುತ್ತಾರೆ. ಆದರೆ ಇಂಥ ಡಾಕ್ಟರ್‌ಗಳಿಗೆ ‘ಸೇವಾ ಭಾವನೆ’ ಇರುವುದಿಲ್ಲ. ಇವರು ವ್ಯಾಪಾರಿ ಮನೋವೃತ್ತಿಯವರು. ರೋಗಿಯ ರಕ್ತಸ್ರಾವವನ್ನು ಕಂಡೊಡನೆ ಮೂರ್ಛೆ ಹೋಗುತ್ತಾರೆ... ಭಯದಿಂದ ಕಂಪಿಸುತ್ತಾರೆ. ರೋಗಿಯ ಶ್ವಾಸಕೋಶ, ಕರುಳಿನ ಬಳ್ಳಿ, ಕೊಳೆತ ಯಕೃತ್ತು, ನೀಲಿ ರಕ್ತ, ತೊಗಲು ಚೀಲದಿಂದ ಬರುವಂತಹ ಉಸಿರು - ಎಲ್ಲವೂ ಅವರನ್ನು ಬೆದರಿಸಿ ಅವರ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ”.


ಡಾ|| ಡಬ್ ಉತ್ಸಾಹದಲ್ಲಿದ್ದರು.
ಡಾ|| ಡಬ್ ಅವರಲ್ಲಿ ಅನೇಕ ಗುಣಗಳಿದ್ದವು. ಅವರು ಒಮ್ಮೆ ಒರಟಾಗಿ ಕಂಡರೆ ಮತ್ತೊಮ್ಮೆ ಸಹೃದಯಿಗಳಂತೆ ಕಾಣುತ್ತಿದ್ದರು. ಅಧಿಕಾರಿಗಳು ಮತ್ತು ಉದ್ಯಮಿಗಳೆದುರು ಅವರ ಮತ್ತೊಂದು ಮಗ್ಗುಲನ್ನು ಕಾಣಬಹುದಿತ್ತು.
ಅವರು ನನ್ನೆದುರು ಮೇಣದಂತೆ ಕರಗುತ್ತಿದ್ದರು...!


ನಾನು ಒಂದು ತಿಂಗಳ ಕಾಲ ರಜ ಹಾಕಿದೆ. ಮರಳಿ ಬಂದ ಮೇಲೆ ತುಂಬಾ ಬರೆಯಬೇಕಿತ್ತು. ಬೆಲೆ ಏರಿಕೆಯ ಖರ್ಚನ್ನು ಭರಿಸಲು ಕೆಲಸದ ನಂತರ ಟ್ಯೂಶನ್ ಹೇಳಿದೆ. ಕಚೇರಿಯಲ್ಲಿ ಆಗಾಗ್ಯೆ ಸಾಹೇಬರ ಪಕ್ಕದಲ್ಲಿ ಅವರು ಕೂತಿರುವುದನ್ನು ನೋಡುತ್ತಿದ್ದೆ. ಆದರೆ ಆಗ ‘ನಮಸ್ಕಾರ’ ಹೇಳುವುದನ್ನು ಬಿಟ್ಟರೆ ಬರ‍್ಯಾವುದಕ್ಕೂ ಸಮಯಾವಕಾಶವಿರುತ್ತಿರಲಿಲ್ಲ.


ಆರೋಗ್ಯ ಕೆಟ್ಟಿತ್ತು. ವಾತಾವರಣದಲ್ಲಿ ಬದಲಾವಣೆಯಾಗಿತ್ತು. ಹೀಗಾಗಿ ‘ಫ್ಲೂ’ ಆಯಿತು. ಕ್ಲೀನಿಕ್‌ಗೆ ಫೋನ್ ಮಾಡಿದಾಗ ಸಿಗಲಿಲ್ಲ, ಮನೆಗೆ ಫೋನ್ ಮಾಡಿದೆ. ‘ಸಂದೇಶ ಟೈಪ್ ಮಾಡಿ, ಸಮಯಕ್ಕೆ ಸರಿಯಾಗಿ ಉತ್ತರ ಸಿಗುವುದು’ - ಫೋನ್‌ಗೆ ಉತ್ತರಿಸುವ ಯಂತ್ರ ಬಾಯಿಪಾಠ ಹೇಳಿತು. ದುಃಖವಾಯಿತು. ‘ತಾವು ಮನೆಯಲ್ಲಿದ್ದಾಗ ಫೋನ್‌ಗೆ ಉತ್ತರಿಸುವುದಿಲ್ಲ, ಯಂತ್ರವೇ ಸಂದೇಶವನ್ನು ಪಡೆಯುತ್ತದೆ. ದಿನವೀಡಿ ಕೋಲಾಹಲದ ನಂತರ ಮನೆಯಲ್ಲಿ ಮೌನ ಕವಿದಿರುತ್ತದೆ’ ಎಂದು ಒಮ್ಮೆ ಡಾ|| ಡಬ್ ಹೇಳಿದ್ದರು.

ನಾನು ಹಾಸಿಗೆಯಲ್ಲಿ ಮಲಗಿದೆ. ಜೋಂಪು ಆವರಿಸಿತು. ಬಹುಶಃ ಒಂದು ಉದ್ದ ಏಣಿಯನ್ನು ಕನಸಿನಲ್ಲಿ ಕಾಣುತ್ತಿದ್ದೆ. ಏಣಿಯ ಮೇಲೆ ಕೆಂಪು ರತ್ನಗಂಬಳಿಯನ್ನು ಹಾಸಲಾಗಿತ್ತು. ಅದು ಜಾರುತ್ತಿತ್ತು. ಏಣಿಯ ಮೇಲ್ಭಾಗ ಶೂನ್ಯದಲ್ಲಿ ಕೊನೆಗೊಂಡರೆ, ಕೆಳಭಾಗ ಹಾಳು-ಪಾಳಿನಲ್ಲಿ ಹೂತಿತ್ತು... ಬಾಗಿಲ ಗಂಟೆ ತಡೆ-ತಡೆದು ಹೊಡೆದುಕೊಂಡಾಗ ನಾನೆದ್ದು ನಿಂತೆ.


ಬಾಗಿಲ ಬಳಿ ಡಾ|| ಡಬ್ ತಮ್ಮ ಸಣ್ಣ ಬಾಕ್ಸ್ ಹಿಡಿದು ನಿಂತಿದ್ದರು. ನಾನು ಆಶ್ಚರ್ಯದಿಂದ ಅವರನ್ನೇ ನೋಡಿದೆ. ನನ್ನ ಬಗ್ಗೆ ಕೃಪೆ ತೋರಿದ್ದರು. ಆದರೆ ಪ್ರಸಿದ್ಧಿಯನ್ನು ಪಡೆದ ಡಾಕ್ಟರ್‌ಗಳಲ್ಲಿರುತ್ತಿದ್ದ ಅಹಂಕಾರ ಅವರಲ್ಲಿಯೂ ಇತ್ತು. ನನ್ನಂತಹ ಸಾಮಾನ್ಯ ನೌಕರಳ ಮನೆಗೆ ಡಾ|| ಡಬ್ ಬರುವುದೆಂದರೆ...!


ನನಗೆ ಸ್ವಲ್ಪ ಜ್ವರವಿದೆ ಎಂದು ಕೇಳಿದೊಡನೆ ಅವರು ಕೂಡಲೇ ನನ್ನ ಮನೆಗೆ ಬರುತ್ತಾರೆ, ನಾನು ಇಷ್ಟು ಸಮೀಪದವಳೆಂದು ನನಗೆ ತಿಳಿದಿರಲಿಲ್ಲ.


ಅಂದು ಅವರು ನನ್ನ ಬೆನ್ನು, ನಾಲಿಗೆ ಮತ್ತು ನಾಡಿಬಡಿತವನ್ನು ಪರೀಕ್ಷಿಸಿದರು. ಜ್ವರ ಎಷ್ಟಿದೆ ಎಂದು ನೋಡಿದರು. ಸಲಹೆಗಳನ್ನು ಕೊಟ್ಟರು. ಅವರೇ ಹೋಗಿ ಫಾರ್ಮಸಿಯಿಂದ ಔಷಧಿಗಳನ್ನು ಕೊಂಡು ತಂದರು. ನಂತರ ಹಾಸಿಗೆಯಲ್ಲಿ ಕೈಯೂರಿ ಹೇಳಿದರು, “ಜಾಣ ಹುಡುಗಿ, ನಿನ್ನ ಆರೋಗ್ಯದ ಬಗ್ಗೆ ಗಮನ ಕೊಡು. ನಿನ್ನ ಕಚೇರಿಗೆ ಐದು ದಿನ ರಜೆ ಹಾಕು. ಜ್ವರ ಜಾಸ್ತಿಯಿದೆ. ಗಂಟಲಿಗೆ ಇನ್‌ಫೆಕ್ಷನ್ ಆಗಿದೆ. ಒತ್ತಾಯದಿಂದ ಏನೂ ಮಾಡ್ಬೇಡ !”.

ನಂತರ ಗಲ್ಲ ಸವರಿ ಹೊರಟು ಹೋದರು.


ಅವರು ಮೂರನೇ ದಿನ ಮತ್ತೆ ಬಂದರು. ಜ್ವರ ಇಳಿದಿತ್ತು, ಆದರೆ ಗಂಟಲಿನಲ್ಲಿ ಇನ್ನೂ ತೊಂದರೆಯಿತ್ತು.
ಅವರ ಕೈಯಲ್ಲಿ ಟಾಫಿಯ ಪ್ಯಾಕೇಟ್ ಮತ್ತು ಗುಲಾಬಿ ಗುಚ್ಛ ಕಂಡು ಆಶ್ಚರ್ಯಗೊಂಡೆ. ಅವರು ಮೇಜಿನ ಮೇಲೆ ಗುಚ್ಛವಿಟ್ಟು ನನ್ನನ್ನು ಪರೀಕ್ಷಿಸಿದರು. ಕಂದು ಬಣ್ಣದ ಸೂಟ್‌ನಿಂದ ಸೆಂಟ್ ಸೂಸುತ್ತಿತ್ತು. ಅವರು ಸಮಾರಂಭದಿಂದ ಬರುತ್ತಿದ್ದಾರೆಂದು ತೋರುತ್ತಿತ್ತು. ಅವರು ತುಂಬಾ ಉತ್ಸಾಹದಲ್ಲಿರುವಂತೆ ಕಾಣುತ್ತಿದ್ದರು. ಅಲ್ಪ ಪ್ರಮಾಣದ ಬಿಸಿಲು ಸ್ನಾನದಿಂದ ಬಿಳಿ ಬಣ್ಣದ ವ್ಯಕ್ತಿಗಳ ಮುಖದ ಕಲೆ ಕಡಿಮೆಯಾಗುವಂತೆ ಅವರ ಮುಖದ ಕಲೆಯೂ ಕಡಿಮೆಯಾಗಿತ್ತು.


ನಾನು ಚಹಾ ಮಾಡಲು ಹೋದಾಗ ಅವರು ಬೇಡವೆಂದರು, “ಈಗ್ಲೂ ನಿನಗೆ ವಿಶ್ರಾಂತಿ ಬೇಕು, ನಾನು ಚಹಾ ಕುಡಿದು ಬಂದಿದ್ದೇನೆ. ಈ ಸ್ಟ್ರಾಬೆರಿಯ ಟಾಫಿಯನ್ನು ಬಾಯಲ್ಲಿಟ್ಟುಕೋ, ಇದರಿಂದ ಶಕ್ತಿ ಬರುತ್ತೆ. ನೀನು ಉಪವಾಸ ಮಾಡೋದ್ರಲ್ಲಿ ತುಂಬಾ ಚುರುಕು, ಅದಕ್ಕೇ ಹೀಗೆ ತೆಳ್ಳಗಿದ್ದೀಯ” ಎಂದರು.

ಅವರ ಸ್ವರದಲ್ಲಿ ಸ್ನೇಹ, ಮಮತೆಯಿತ್ತು...
ಅವರು ಹಾಸಿಗೆಯ ಮೇಲೇ ಕೂತರು. ತುಂಬಾ ಹೊತ್ತು ಮಾತನಾಡಲಿಲ್ಲ. ಅವರು ಇದ್ದಕ್ಕಿದ್ದಂತೆ ಪ್ರೀತಿಯಿಂದ ನನ್ನ ಎಡ ಅಂಗೈಯನ್ನು ಹಿಡಿದು ನನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಾ ಕೇಳಿದರು, “ವಿಲ್ ಯೂ ಲವ್ ಮಿ...?”
ನಾನು ಆಗಸದಿಂದ ಕೆಳಗೆ ಬಿದ್ದೆ! ಈ ಬಗ್ಗೆ ನಾನೆಂದೂ ಯೋಚಿಸಿರಲಿಲ್ಲ. ಎದೆ ಬಡಿದುಕೊಂಡಿತು. ಕೆಂಪು ಲೋಹ ಮುಖದೊಳಗೆ ತುರುಕಿದಂತಾಯಿತು. ಗಂಭೀರ ಮತ್ತು ಮೈದಾದಂತೆ ನುಣುಪು ಮುಖದ, ಗಿಡ್ಡ ದೇಹದ, ದಢೂತಿ ಶರೀರದ, ಮುಖದಲ್ಲಿ ಸೂಕ್ಷ್ಮ ಸುಕ್ಕುಗಳನ್ನು ಹೊಂದಿದ ಡಾ|| ಡಬ್ ನನ್ನೆದುರು ಪ್ರೇಮ ನಿವೇದನೆ ಮಾಡುವುದೆಂದರೆ ಆಶ್ಚರ್ಯವಲ್ಲವೇ! ನಾನು ಈ ಬಗ್ಗೆ ಕನಸಿನಲ್ಲೂ ಯೋಚಿಸಿರಲಿಲ್ಲ. ಒಮ್ಮೆಲೆ “ನೋ !” ಎಂದು ರೇಗಿದೆ.


“ಪ್ಲೀಸ್, ಹೀಗೆಲ್ಲಾ ಹೇಳ್ಬೇಡ. ಭವಿಷ್ಯವನ್ನು ಕೈಯಲ್ಲಿಟ್ಟುಕೊಂಡು ಹೇಳ್ತೀಯಾ? ಇವತ್ತಲ್ಲದಿದ್ದರೂ ಮುಂದೆ ಎಂದಾದರೂ...”

ಸೋತ ವೇದನೆಯಿಂದ ಅವರ ಅಹಂಕಾರಕ್ಕೆ ಪೆಟ್ಟು ಬಿತ್ತು. ಅದು ಮುಖದಲ್ಲಿ ಮೂಡಿತು. ಮುಖ ದಪ್ಪಗಾಯಿತು.
ಅವರು ನೊಂದು ನನ್ನನ್ನು ತಮ್ಮ ಬಾಹುಗಳಲ್ಲಿ ಬಂಧಿಸಿಕೊಂಡು ತಮ್ಮೆಡೆಗೆ ಎಳೆದುಕೊಂಡರು, ಆದರೆ ನನ್ನ ಮುಖದಲ್ಲಿ ಒಪ್ಪಿಗೆಯ ಭಾವನೆ ಇಲ್ಲದ್ದನ್ನು ಕಂಡು ತಮ್ಮ ಬಾಹುಗಳನ್ನು ಜರುಗಿಸಿಕೊಂಡರು...


ಅಂದು ಅವರು ವೇದನೆಯಿಂದ ತಲೆ ತಗ್ಗಿಸಿಕೊಂಡು ಹಿಂದಿರುಗಿ ನೋಡದೆ ಮನೆಯಿಂದ ಹೋದರು. ಹೃದಯ ಭಾರವಾಗಿತ್ತು...ಅಯ್ಯೋ ಅನಿಸಿತು. ಆದರೆ ನಾನೇನು ಮಾಡಲಿ? ಯಾವ ಭ್ರಮೆಯಲ್ಲಿರಲಿ? ನನ್ನೊಂದಿಗೆ ಬಲಾತ್ಕಾರ ಸಾಧ್ಯವಿಲ್ಲ. ಅವರ ಬಗ್ಗೆ ಕರುಣೆ ತೋರಿ ಅಥವಾ ಅವರ ಸ್ಪರ್ಶಕ್ಕೆ ಕರಗಿ ನನ್ನನ್ನು ಒಪ್ಪಿಸಿಕೊಳ್ಳುವುದು ಜಾಣತನವಾಗಿರಲಿಲ್ಲ. ನನಗೆ ದುಃಖವಾಯಿತು! ಗೆಳೆತನ ಮಾಡಿ ನಾನೂ ಸೋತೆ.

(ಆದರೆ ನಾನು ಇಂದೂ ಸಹ ‘ನಿಜವಾಗಿ ನನಗೆ ಡಾ|| ಡಬ್ ಅವರ ಮನಃಸ್ಥಿತಿಯನ್ನು ಮೊದಲು ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲವೆ?’ ಎಂದು ಮನಸ್ಸಿನಲ್ಲಿ ಕೇಳಿಕೊಳ್ಳುತ್ತೇನೆ.)


ನಂತರ ಡಾ|| ಡಬ್ ಅವರ ಕ್ಲೀನಿಕ್‌ನಿಂದ ಹೊರಟು ಕಚೇರಿಗೆ ಬಂದೆ! ಆಗಾಗ್ಯೆ ಡಾ|| ಡಬ್ ಅವರು ನನ್ನ ಆರೋಗ್ಯ ವಿಚಾರಿಸುತ್ತಿದ್ದರು. ಅನೇಕ ದಿನ ಅವರು ಕಾಣಲಿಲ್ಲ. ಈ ಘಟನೆ ಘಟಿಸಿ ಇಂದಿಗೆ ಒಂದೂವರೆ ವರ್ಷವಾಯಿತು. ಕಾಲದ ಅಂತರ ಮತ್ತು ಸ್ನೇಹದ ಅಂತರ ಹೆಚ್ಚಿತು. ಬದುಕಿಗೆ ತನ್ನದೇಯಾದ ತರ್ಕಗಳಿವೆ. ಕೆಲಸಗಳೂ ನಿಲ್ಲುವುದಿಲ್ಲ, ಜೀವನದ ಸುಖ-ದುಃಖಗಳು ಸ್ಥಿರವಲ್ಲ. ಡಾ|| ಡಬ್‌ರವರ ನೆನಪು ಹಿಂದಕ್ಕುಳಿಯಿತು. ನಾನು ಮೂವತ್ತೆರಡನೆಯ ವಯಸ್ಸಿಗೆ ಕಾಲಿಟ್ಟಿದ್ದೆ. ನಾಸ್ಟಾö್ಯಲ್ಜಿಯಾದಲ್ಲಿ ಅನುಭವ ಬದಲಾಗುವಷ್ಟು ಪ್ರೌಢವಾಗಲಿಲ್ಲ! ಅಥವಾ ಅಪ್ರಿಯ ಅನುಭವಗಳು ಮರೆತು ಹೋಗಲಿಲ್ಲ. ಯೌವನದಲ್ಲಿ ಕ್ಷಮಾಗುಣವಿರುವುದಿಲ್ಲ. ಇದು ತಿಳಿವಳಿಕಸ್ಥರಲ್ಲಿ ಮಾತ್ರ ಇರುತ್ತದೆ. ಯೌವನದ ಸಹಜ ಸಂಯಮವನ್ನು ಪ್ರೌಢಾವಸ್ಥೆಗೆ ಬಂದಾಗ ಕಲಿಯಬೇಕಾಗುತ್ತದೆ.

ಕ್ರಮೇಣ ಡಾ|| ಡಬ್ ಅವರು ಮರೆತೇ ಹೋದರು. ಆದರೆ ಇದ್ದಕ್ಕಿದ್ದಂತೆ ಅವರು ಇಹಲೋಕ ತ್ಯಜಿಸಿದ ವಿಷಯ ತಿಳಿಯಿತು!
ಅವರ ಮನಸ್ಸು ಬರಡಾಗಿತ್ತೆ? ಅವರ ಒಳ ನದಿ ಬತ್ತಿದಾಗ ಅದು ಸ್ಫೋಟದಿಂದ ಬಿರುಕು ಬಿಟ್ಟಿತು, ಅವರ ಭೌತಿಕ ಅಸ್ತಿತ್ವವನ್ನೇ ನಾಶಮಾಡಿತು!


ಅವರು ಎಂದೂ ದೂರು ಹೇಳಲಿಲ್ಲ. ಪ್ರಶ್ನೆ ಹಾಕಿ ಉತ್ತರ ನಿರೀಕ್ಷಿಸಲಿಲ್ಲ. ಅವರ ಬಳಿ ಪ್ರಶ್ನೆ ಮತ್ತು ಉತ್ತರದ ನಡುವೆ ಅನಂತ ಅಂತರವಿದ್ದಿರಬಹುದು, ಅದಕ್ಕೇ...


ಆದರೆ ಈಗ ಡಾ|| ಡಬ್ ಬದುಕಿಲ್ಲ. ಅವರ ಗಡಸು ನೀಲಿ ಕಣ್ಣುಗಳು ಇನ್ನೂ ಶವಪೆಟ್ಟಿಗೆಯಲ್ಲಿವೆ... ಗ್ರೀಕ್ ದೇವತೆ ಅಪೋಲೋವಿನ ಹಸಿರು ನೊಣ ಅವರ ಶವದ ಮೇಲೆ ಸುತ್ತು ಹಾಕಲು ವ್ಯಗ್ರಗೊಂಡಂತಿದೆ. ಡಾ|| ಡಬ್ ಅವರ ಅನುಪಸ್ಥಿತಿಯಲ್ಲಿ ಅವರ ಕ್ಲಿನಿಕ್‌ನ ಶೋ-ವಿಂಡೋನ ನಿರ್ಜೀವ ಸುಂದರ ಚಿಟ್ಟೆಗಳು ಕೊಳೆತಿವೆ, ಹೀಗಾಗಿ ಅವುಗಳನ್ನು ಹೊರಗೆ ಎಸೆಯಲಾಗಿದೆ.
ಡಾ|| ಡಬ್ ಇನ್ನಿಲ್ಲ. ನಾನು ಹಿರಣ್ಯಕಶಿಪುವಿನ ಹೊಸ್ತಿಲಾಗಿ ಬಿದ್ದಿದ್ದೇನೆ... ಎತ್ತರದ ಕಟ್ಟಡಗಳು ಬಿಸಿಲನ್ನು ಸದಾ ತಡೆಯುತ್ತವೆ, ಅವು ಪಶ್ಚಾತ್ತಾಪ ಪಡುವುದಿಲ್ಲ. ಅವಕ್ಕೆ ಸಾವಿಲ್ಲ? ಅವು ಅಪರಾಧ ಪ್ರಜ್ಞೆಯಲ್ಲಿ ಸೆಣೆಸುತ್ತವೆ.

‘ವಿಲ್ ಯೂ ಲವ್ ಮಿ?’ ಎಂದು ಅವರು ತಮ್ಮ ಜೀವನದ ಮೊದಲ ಪ್ರೀತಿಯನ್ನು ನಿವೇದಿಸಿಕೊಂಡಿದ್ದರು. (ಅವರು ನೊಂದು ಹೇಳಿದ್ದರು) ನನಗೆ ಮಂಕು ಕವಿದು ‘ನೋ’ ಎಂದು ಹೇಳಿದ್ದೆನೆ? ಅಥವಾ ಪೂರ್ವಗ್ರಹದಿಂದ ಹೇಳಿದ್ದೆನೆ? ಇದು ನನ್ನ ಸಂಸ್ಕಾರವಾಗಿತ್ತೆ? ಅಥವಾ ಡಾ|| ಡಬ್ ಅವರು ಸೌಂದರ್ಯಶಾಸ್ತç ಮತ್ತು ಎರೋಟಿಕ್ ಫ್ಯಾಂಟಸಿಯ ಪರೀಕ್ಷೆಯಲ್ಲಿ ಯಾವ ವಿಧದಲ್ಲೂ ಪಾಸಾಗುತ್ತಿರಲಿಲ್ಲವೇ?


ಆದರೆ ಈಗ? ಅವರು ಇನ್ನೂ ಯಾಕೆ ಕಾಯುತ್ತಾ ಶವಪೆಟ್ಟಿಗೆಯಲ್ಲಿದ್ದಾರೆ? ಅವರ ಶವಸಂಸ್ಕಾರ ಇನ್ನೂ ಯಾಕೆ ಆಗಿಲ್ಲ? ನನ್ನ ಮುಖಕ್ಕೆ ಅಂದದ ಮುಖವಾಡ ಹಾಕಿಕೊಂಡು (ಅಕಾರಣವಾಗಿ) ಚೆನ್ನಾಗಿ ಮೇಕಪ್ ಮಾಡಿಕೊಂಡು ಶವಪೆಟ್ಟಿಗೆ ಎದುರು ನಿಂತು, ಅವರ ನೀಲಿ ಕಣ್ಣುಗಳಲ್ಲಿ ನನ್ನ ಕಪ್ಪು ಪುತ್ಥಳಿಗಳನ್ನು ಕೂಡಿಸಿ ‘ಯಸ್ ! ಐ ಶಲ್ ಲವ್ ಯೂ’ ಎನ್ನಲೇ? ... ಗಂಧರ್ವ ನಗರಿಯ ಸ್ವರ್ಣ ಪ್ರಕಾಶದಲ್ಲಿ ಲೀನರಾಗಿ ತಮ್ಮ ಹೊಳೆಯುವ ಕಣ್ಣುಗಳಿಂದ ನನ್ನ ಮುಖವನ್ನೇ ನೋಡುತ್ತಾ ಹೇಳುತ್ತಿದ್ದ ಅವರ ಆತ್ಮ, ಸಂತೋಷದಿಂದ ತಾನು ಹೋಗಬೇಕಾದ ದಿಕ್ಕಿಗೆ ಹೋಗಲೆಂದು ಹೀಗೆ ಹೇಳಲೇ?


ಆದರೆ ಅವರು, “ಗುಲಾಬಿ ಬಣ್ಣದ ಬೆಳಕಿನಲ್ಲಿ, ನಾವು ಸುಖವಾಗಿದ್ದೇವೆಂದು ನಾಟಕವಾಡುತ್ತೇವೆ, ಆದರೆ ದುಃಖಕ್ಕೆ ನಾಟಕವಾಡುವ ಅಗತ್ಯವಿಲ್ಲ...” ಎಂದೂ ಹೇಳಿದ್ದರು.


ನಾನು ಇತ್ತಲೂ ಇಲ್ಲದ, ಅತ್ತಲೂ ಇಲ್ಲದ ಸಿಂಹದ ಪ್ರತಿರೂಪವಾಗಿದ್ದೇನೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT