ಮೂಲ: ಬಾಬು ಛಾಡವಾ ಕನ್ನಡಕ್ಕೆ: ಡಿ.ಎನ್. ಶ್ರೀನಾಥ್

ದಟ್ಟ ಪೊದೆಗಳ ದಟ್ಟ ಕಾಡಿನಲ್ಲಿ ವ್ಯಕ್ತಿಯೊಬ್ಬ ತಲೆ ತಗ್ಗಿಸಿಕೊಂಡು ಹೋಗುತ್ತಿದ್ದ. ಅವನ ತಲೆಯ ಮೇಲೆ ದೊಡ್ಡ ಭಾರವಿತ್ತು. ಆ ಭಾರದಿಂದಾಗಿ ದೇಹ ಬಾಗಿತ್ತು, ಕಾಲುಗಳು ತಡಬಡಿಸುತ್ತಿದ್ದವು. ಅವನು ಅತೀವವಾಗಿ ದಣಿದಿದ್ದ. ಆದರೂ ಮುಂದಕ್ಕೆ ಹೋಗುತ್ತಲೇ ಇದ್ದ. ತಲೆಯ ಮೇಲಿನ ಭಾರ ಹಾಗೆಯೇ ಇತ್ತು.

ಮರದ ಮೇಲೆ ನೇತಾಡುತ್ತಿದ್ದ ಭೂತವೊಂದು ಆ ವ್ಯಕ್ತಿಯನ್ನು ನೋಡುತ್ತಿತ್ತು. ಅದು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತಾ ಅದೆಷ್ಟೋ ಹೊತ್ತಿನಿಂದ ಆ ವ್ಯಕ್ತಿಯನ್ನು ಹಿಂಬಾಲಿಸುತ್ತಿತ್ತು. ಕುತೂಹಲ ಮತ್ತು ಆಸೆಯಿಂದ ಪ್ರೇರಿತವಾದ ಆ ಭೂತ ಆ ವ್ಯಕ್ತಿಯ ಚಲನವಲನಗಳನ್ನು ಗಮನಿಸುತ್ತಿತ್ತು. ತಲೆಯ ಮೇಲಿನ ಭಾರದಿಂದಾಗಿ ಆ ವ್ಯಕ್ತಿ ದಣಿದಿದ್ದ. ಆದರೂ ಅವನು ಕ್ಷಣಕಾಲ ವಿಶ್ರಾಂತಿ ಪಡೆಯಲು ಅಥವಾ ನೆಮ್ಮದಿಯಿಂದ ಉಸಿರಾಡಲು ಸಹ ನಿಲ್ಲುತ್ತಿರಲಿಲ್ಲ. ಬಹು ಕಷ್ಟದಿಂದ ಸಾಗುತ್ತಲೇ ಇದ್ದ.

ಕಡೆಗೆ ಭೂತ ತಡೆದುಕೊಳ್ಳದೆ ಹೇಳಿತು, “ನಿಮ್ಮ ಅಡ್ಡಿ ಇಲ್ಲದಿದ್ದರೆ, ನಿಮ್ಮ ತಲೆಯ ಮೇಲಿನ ಒಂದು ದೊಡ್ಡ ಭಾರವನ್ನು ನಾನು ಹೊತ್ತುಕೊಳ್ಳಲೇ? ನಾನು ನಿಮ್ಮೊಂದಿಗೇ ಬರುತ್ತೇನೆ, ನೀವೆಲ್ಲಿಗೆ ಹೇಳುತ್ತೀರೋ ಅಲ್ಲಿಗೇ ನಿಮ್ಮನ್ನು ಕರೆದೊಯ್ಯುತ್ತೇನೆ.” ಈ ಮಾತುಗಳಲ್ಲಿ ದಯೆ, ಕರುಣೆ ಮತ್ತು ಅನುಕಂಪಕ್ಕೆ ಬದಲು ವ್ಯಾಕುಲತೆಯಿತ್ತು.

ಈ ಮಾತುಗಳನ್ನು ಕೇಳಿ ಆ ವ್ಯಕ್ತಿ ಒಮ್ಮೆಲೆ ನಿಂತ. ಕ್ಷಣ ಕಾಲ ನಿಂತು, ತಾನು ಕೇಳಿದ್ದು ನಿಜವಲ್ಲವೆಂದು ಯೋಚಿಸಿದ. ಇದು ತನ್ನ ಭ್ರಮೆಯಾಗಿರಬೇಕು ಅಥವಾ ಯಾರೋ ತನ್ನೊಂದಿಗೆ ಹುಡುಗಾಟ ಮಾಡುತ್ತಿರಬಹುದು.

ಅವನು ಅನೇಕ ವರ್ಷಗಳಿಂದ ಹೀಗೆ ಭಾರ ಹೊತ್ತು ಹೋಗುತ್ತಿದ್ದ. ಅವನು ಈ ಹಿಂದೆ ಬಹಳಷ್ಟು ಜನರಿಗೆ ತನ್ನ ಭಾರವನ್ನು ಹೊರುವಂತೆ ಹೇಳಿದ್ದ; ಇದಕ್ಕೆ ವಿನಂತಿಸಿಯೂ ಕೊಂಡಿದ್ದ, ಅಂಗಲಾಚಿಯೂ ಇದ್ದ. ಆದರೆ ಎಲ್ಲರೂ ಅಲ್ಲಗೆಳೆದಿದ್ದರು, ಆದರೆ ಇಂದು ಯಾರೋ ಅವನ ಭಾರವನ್ನು ಹೊರಲು ಒಪ್ಪಿದ್ದ.
ಅವನು ತಲೆಯ ಮೇಲಿನ ಬಂಡೆಯಂಥ ಭಾರದ ಬಗ್ಗೆ ಯೊಚಿಸುತ್ತಾ-ಯೋಚಿಸುತ್ತಾ ಕ್ಷಣಕಾಲ ಕಳೆದು ಹೋದ.

ಆರಂಭದಲ್ಲಿ ಅವನು ಯುವಕನಾಗಿದ್ದಾಗ, ತುಂಬಾ ಗರ್ವದಿಂದ ಮತ್ತು ಉತ್ಸಾಹದಿಂದ ಆ ಭಾರವನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡಿದ್ದ. ಈ ಬಗ್ಗೆ ಅವನಿಗೆ ಹೆಮ್ಮೆಯಿತ್ತು. ಆ ದಿನಗಳಲ್ಲಿ ಅವನು ತನ್ನ ಚಿಕ್ಕ ವಯಸ್ಸಿನಲ್ಲಿ ಇಷ್ಟು ಭಾರವನ್ನು ಸ್ವೇಚ್ಛೆಯಿಂದ ಹೊತ್ತು ಅಡ್ಡಾಡುತ್ತಿದ್ದ, ಜನ ಅವನನ್ನು ನೋಡಿ ಆಶ್ಚರ್ಯ ಪಡುತ್ತಿದ್ದರು. ತನ್ನ ಈ ಭಾರದಿಂದಾಗಿ ತಾನು ತನ್ನ ಸಮುದಾಯದಲ್ಲಿ ವಿಚಿತ್ರ ವ್ಯಕ್ತಿಯಾಗಿ ತೋರುತ್ತಿದ್ದೇನೆ ಎಂದು ಅವನಿಗೆ ಅನ್ನಿಸುತ್ತಿತ್ತು. ಈ ಯೋಚನೆಯಿಂದಾಗಿ ಅವನಲ್ಲಿ ಸ್ಪೂರ್ತಿ ಬರುತ್ತಿತ್ತು, ಕತ್ತು ಸೆಟೆದುಕೊಳ್ಳುತ್ತಿತ್ತು, ಎದೆ ಉಬ್ಬುತ್ತಿತ್ತು; ಆಗ ಅವನಿಗೆ ಭಾರ ಹೊರುವಲ್ಲಿ ಶಕ್ತಿ ಲಭಿಸುತ್ತಿತ್ತು.

ಆದರೆ ದಿನಗಳು ಕಳೆದಂತೆ, ಭಾರದಿಂದಾಗಿ ಹೆಚ್ಚು ಕಷ್ಟವೆನಿಸುತ್ತಿತ್ತು. ತಾನು ವ್ಯರ್ಥವಾಗಿ ಇಷ್ಟು ಭಾರವನ್ನು ತಲೆಯ ಮೇಲೆ ಹೊತ್ತು ಅಡ್ಡಾಡುತ್ತೇನೆ, ಇದರಿಂದಾಗಿ ತನಗಿಷ್ಟದ ಅನೇಕ ವಸ್ತುಗಳನ್ನು ತಾನು ತ್ಯಜಿಸಬೇಕಾಗುತ್ತದೆ ಎಂದು ಅನ್ನಿಸುತ್ತಿತ್ತು. ಈ ಭಾರವನ್ನು ತಲೆಯ ಮೇಲೆ ಹೊರದಿದ್ದರೆ, ತಾನು ವೇಗವಾಗಿ ಹೋಗಬಹುದಿತ್ತು, ಅನೇಕ ಗುರಿಗಳನ್ನು ಸುಲಭವಾಗಿ ನಿರ್ಧರಿಸಬಹುದಿತ್ತು. ಆದರೆ ಇಂಥ ಭಾವನೆಗಳು ಅವನ ಮನಸ್ಸಿನಲ್ಲಿ ಹೆಚ್ಚು ದಿನಗಳು ಇರುತ್ತಿರಲಿಲ್ಲ, ಏಕೆಂದರೆ, ಅವನು ಹೋದಲ್ಲೆಲ್ಲಾ, ಜನ ಅವನನ್ನೇ ನೋಡುತ್ತಿದ್ದರು, ಅವನನ್ನು ಪ್ರಶಂಸಿಸುತ್ತಿದ್ದರು, ಅವನ ಸಮೀಪಕ್ಕೆ ಬಂದು ಅವನನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿದ್ದರು. ಈ ಎಲ್ಲದರಿಂದ ಪ್ರಭಾವಿತನಾದ ಅವನು ಆ ಭಾರವನ್ನು ಹೊತ್ತು ಸಾಗುತ್ತಿದ್ದ; ಇದರಿಂದ ಮುಕ್ತಿ ಪಡೆಯುವ ವಿಷಯ ಅವನ ಮನಸ್ಸಿನಲ್ಲಿ ಉದ್ಭವಿಸುತ್ತಿರಲಿಲ್ಲ.

ಅವನಿಗೆ ವಯಸ್ಸಾದಂತೆ, ಶರೀರ ದುರ್ಬಲವಾಗುತ್ತಿತ್ತು, ಆ ಭಾರವನ್ನು ಹೊರುವುದು ಅಸಹ್ಯವಾಯಿತು. ಆಗಾಗ ಅವನು ತುಂಬಾ ಬೇಸರಗೊಳ್ಳುತ್ತಿದ್ದ, ಆಶ್ಚರ್ಯವೂ ಆಗುತ್ತಿತ್ತು. ಆದರೂ ಆ ಭಾರವನ್ನು ಕಳಚುವ ವಿಷಯದ ಬಗ್ಗೆ ಯೋಚಿಸುತ್ತಿರಲಿಲ್ಲ. ಅವನಿಗೆ ಭಾರ ಹೊತ್ತು ಸಾಗುವ ಅಭ್ಯಾಸವಾದಂತಿತ್ತು. ತನ್ನ ತಲೆಯಿಂದ ಯಾವಾಗ ಭಾರ ಕೆಳಗಿಳಿಯುವುದೋ, ಆಗ ತಾನೇನು ಮಾಡುವುದು, ತಾನು ಶೂನ್ಯವಾಗುತ್ತೇನೆ, ತನ್ನ ಅಸ್ತಿತ್ವವೇ ಇರುವುದಿಲ್ಲ ಎಂಬ ಭಯ ಸಹ ಮನಸ್ಸಿನಲ್ಲಿತ್ತು. ಹೀಗಾಗಿ ಅವನು ಭಾರವನ್ನು ಹೊರುತ್ತಲೇ ಇದ್ದ, ಹೊರುತ್ತಲೇ ಇದ್ದ.

ಕಡೆಗೆ ಅವನು, ತಲೆಯ ಮೇಲಿನ ಭಾರವನ್ನು ಹೊರಲಾಗದಂಥ ಸ್ಥಿತಿಗೆ ಬಂದ. ಮುಂದಕ್ಕೆ ಹೆಜ್ಜೆ ಹಾಕುತ್ತಲೇ ಕಣ್ಣುಗಳಿಗೆ ಕತ್ತಲು ಕವಿಯುತ್ತಿತ್ತು, ಏದುಸಿರು ಬರುತ್ತಿತ್ತು, ತುಟಿಗಳಿಂದ ನಿರಂತರವಾಗಿ ಜೊಲ್ಲು ಹನಿಯುತ್ತಿತ್ತು. ಈಗ ಅವನಿಗೆ ತಲೆಯ ಮೇಲಿನ ಭಾರದ ನಿರರ್ಥಕತೆಯ ಅನುಭವವಾಗುತ್ತಿತ್ತು. ಅವನು ಅನೇಕ ಬಾರಿ ತುಂಬಾ ವ್ಯಗ್ರನಾಗುತ್ತಿದ್ದ. ತಲೆಯ ಮೇಲೆ ಈ ಭಾರವಿರದಿದ್ದರೆ ತಾನು ಹಗುರವಾಗಿ ಅಡ್ಡಾಡಬಹುದಿತ್ತು, ಮಾಡಬೇಕಾದ ಕೆಲಸಗಳನ್ನು ಮುಕ್ತ ಮನಸ್ಸಿನಿಂದ ಮಾಡಬಹುದಿತ್ತು ಎಂದು ಯೋಚಿಸುತ್ತಿದ್ದ.

ಒಂದು ದೀರ್ಘ ಮಂಥನದ ನಂತರ ತಲೆಯ ಮೇಲಿನ ಭಾರವನ್ನು ಒಂದು ಹೊಂಡಕ್ಕೆಸೆದು, ಅಲ್ಲಿಂದ ಓಡಿ ಹೋಗಲು ನಿಶ್ಚಯಿಸಿದ. ಅವನೊಂದು ಕಾಡಿನ ಬಳಿಗೆ ಹೋಗಿ, ಮನಸ್ಸನ್ನು ಗಟ್ಟಿ ಮಾಡಿಕೊಂಡು, ಎರಡೂ ಕೈಗಳಿಂದ ಆ ಭಾರವನ್ನು ಅಲ್ಲಿ ಎಸೆಯಲು ಪ್ರಯತ್ನಿಸಿದ, ಆಗಲೇ...

ಈಗ ತುಂಬಾ ತಡವಾಯಿತೆಂದು ಅನ್ನಿಸಿತು. ತಲೆಯ ಮೇಲಿನ ಭಾರ ಕೆಳಗಿಳಿಯುತ್ತಿರಲಿಲ್ಲ. ಆ ಭಾರ ಅವನ ತಲೆಯ ಅವಿಭಾಜ್ಯ ಅಂಗವಾಗಿತ್ತು. ಅವನು ತನ್ನ ತಲೆಯ ಮೇಲಿನ ಭಾರವನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿರುವಂತೆ, ಭಾರ ಅವನ ತಲೆಯ ಮೇಲೆ ಬೇರೂರಲಾರಂಭಿಸಿತು. ಭಾರ ಕೆಳಗಿಳಿದಾಗ ತನ್ನ ತಲೆಯೇ ಪ್ರತ್ಯೇಕವಾಗುತ್ತದೆ ಎಂಬ ಅವಸ್ಥೆ ಎದುರಾಯಿತು.

ಜೀವನದ ಆರಂಭದಲ್ಲಿ ಅವನು ಯಾವ ಭಾರವನ್ನು ತುಂಬಾ ಅಸಕ್ತಿಯಿಂದ ತಲೆಯ ಮೇಲೆ ಹೊತ್ತುಕೊಂಡಿದ್ದನೋ ಹಾಗೂ ಅದನ್ನು ಉತ್ಸಾಹದಿಂದ ಹೊರುತ್ತಿದ್ದನೋ, ಅದೇ ಭಾರ ಇಂದು ಅವನಿಗೆ ಮಹಾಘಾತಕವಾಗಿತ್ತು. ಆ ಭಾರ ಒಂದು ಶಾಪವಾಗಿ ಪರಿಣಮಿಸಿತ್ತು. ಆದರೆ ಆ ಭಾರವನ್ನು ಹೊರಲಾಗುತ್ತಿರಲಿಲ್ಲ. ಈ ಭಾರದಿಂದಾಗಿ ಅವನು ಬದುಕಲೂ ಸಾಧ್ಯವಿರಲಿಲ್ಲ, ಸಾಯಲೂ ಸಾಧ್ಯವಿರಲಿಲ್ಲ. ಅವನ ಪರಿಸ್ಥಿತಿ ತ್ರಿಶಂಕುವಿನಂತಾಯಿತು. ಕೂರುವಂತಿರಲಿಲ್ಲ, ನಿದ್ರಿಸುವಂತಿರಲಿಲ್ಲ.
ಹೀಗೆಯೇ ಸಾಗಿ ಹೋಗುತ್ತಿರುವಾಗ ಅವನು ಒಂದು ನದಿ ತೀರದಲ್ಲಿ ಒಬ್ಬ ಸನ್ಯಾಸಿಯನ್ನು ನೋಡಿದ. ನಿರಾಳತೆಯಿಂದ ಕೂತಿದ್ದ ಆ ಸನ್ಯಾಸಿ ಒಂದು ಲಂಗೋಟಿಯನ್ನು ಮಾತ್ರ ಧರಿಸಿದ್ದ. ಅವನ ಮುಖದಲ್ಲಿ ಸಂತಸವಿತ್ತು. ಒಳಗಿನಿಂದ ಜರ್ಜರಿತನಾಗಿದ್ದ ಆ ಮನುಷ್ಯ ಆ ಸನ್ಯಾಸಿಯ ಬಳಿಗೆ ಹೋಗಿ ತನ್ನ ದುಃಖವನ್ನು ಹೇಳಿಕೊಂಡು ರೋದಿಸಿದ, ಸನ್ಯಾಸಿಯಿಂದ ಸಲಹೆಯನ್ನು ಕೇಳಿದ.

ವಿಷಯ ಕೇಳಿ ಮೊದಲು ಸನ್ಯಾಸಿ ಕಿಲಕಿಲನೆ ನಕ್ಕ. ನಂತರ ಹೇಳಿದ, “ತಲೆಯ ಮೇಲಿನ ಭಾರವನ್ನು ತೆಗೆಯುವ ಸರಳ ಮತ್ತು ರಾಮಬಾಣ ಉಪಾಯ ನಿನ್ನ ಬಳಿಯೇ ಇದೆ.”

“ಅದೇನು?” ಭಾರದಿಂದ ಬೇಸತ್ತಿದ್ದ ಆ ವ್ಯಕ್ತಿ ಉತ್ಸುಕತೆಯಿಂದ ಕೇಳಿದ.

“ಅದೇನೆಂದರೆ, ಯಾರಾದರು ನಿನ್ನ ತಲೆಯ ಭಾರವನ್ನು ಹೊರಲು ಒಪ್ಪಿದರೆ, ಕ್ಷಣ ಮಾತ್ರದಲ್ಲಿಯೇ ನಿನ್ನ ತಲೆಯ ಭಾರ ಇಳಿಯುತ್ತದೆ.”
ಸನ್ಯಾಸಿಯ ಮಾತಿನಿಂದ ಆ ವ್ಯಕ್ತಿ ಸಂತಸಗೊಂಡ; ಇಷ್ಟು ಸುಲಭ ಉಪಾಯ ತನಗೆ ಮೊದಲೇ ಏಕೆ ಹೊಳೆಯಿಲ್ಲವೆಂದು ಅವನಿಗೆ ಆಶ್ಚರ್ಯವಾಯಿತು. ತಲೆಯ ಮೇಲಿನ ಭಾರದಿಂದಾಗಿ ಅದೆಷ್ಟೋ ಜನ ಅವನ ಬಳಿಗೆ ಬಂದು, ತಮ್ಮ ತಲೆಯ ಮೇಲೂ ಇಂಥ ಭಾರವನ್ನು ಹೆಚ್ಚಿಸಲು ಒತ್ತಾಯ ಮಾಡುತ್ತಿದ್ದರು; ಅವರಲ್ಲಿ ನಿಷ್ಠೆ ಇರಲಿಲ್ಲ ಅಥವಾ ಶಕ್ತಿ ಇರಲಿಲ್ಲ. ಹೀಗಾಗಿ ಅವರಿಗೆ ಯಶಸ್ಸು ಲಭಿಸುತ್ತಿರಲಿಲ್ಲ. ಹೀಗಾಗಿ ಅವರು ಆ ಮನುಷ್ಯನನ್ನು ಗುರುವೆಂದು ಹೇಳಿ ಅವನನ್ನು ಅಭಿನಂದಿಸುತ್ತಿದ್ದರು, ಅವನ ಕಾಲುಗಳಿಗೆ ನಮಸ್ಕರಿಸುತ್ತಿದ್ದರು, ಅವನಿಂದ ಕೃಪಾದೃಷ್ಟಿಯನ್ನು ಅಪೇಕ್ಷಿಸುತ್ತಿದ್ದರು. ಪ್ರತಿ ವರ್ಷ ಇಂಥ ಶಿಷ್ಯರ ಸಂಖ್ಯೆ ಹೆಚ್ಚುತ್ತಲೇ ಇತ್ತು.

ಒಂದು ದಿನ ಬೆಳಿಗ್ಗೆ ಅವನ ಸಭೆಯಲ್ಲಿ ವಿಶಾಲ ಜನ-ಸಮುದಾಯವೊಂದು ಹಾಜರಾಯಿತು. ಆ ವ್ಯಕ್ತಿ ಕ್ಷಣಕಾಲ ಸ್ಥಿರವಾಗಿದ್ದು, ನಂರತ ನಾಟಕೀಯವಾಗಿ, ತಾನು ಮಹಾನ್ ತ್ಯಾಗವನ್ನು ಮಾಡುವಂತೆ, ತನ್ನ ತಲೆಯ ಭಾರವನ್ನು ನಿಜವಾದ ಉತ್ತರಾಧಿಕಾರಿಗೆ ಒಪ್ಪಿಸುವುದಾಗಿ ಘೋಷಿಸಿದ; ನಂತರ ಭಾರವನ್ನು ಹೊರಲು ಬಯಸುವವರು ಮುಂದೆ ಬರುವಂತೆ ಸೂಚಿಸಿ, ತಾನೇ ಯೋಗ್ಯನಾದವನ್ನು ಆಯ್ಕೆ ಮಾಡುವುದಾಗಿಯೂ ಹೇಳಿದ.

ತಲೆಯ ಮೇಲಿನ ಭಾರದಿಂದ ದುಃಖಿಯಾಗಿದ್ದಾಗ್ಯೂ ಆ ವ್ಯಕ್ತಿ ಮಹಾನುಭಾವನಂತೆ ತೋರುತ್ತಿದ್ದ; ಅವನ ಘೋಷಣೆಯನ್ನು ಕೇಳಿ ಕ್ಷಣಕಾಲ ಇಡೀ ಸಮುದಾಯಕ್ಕೆ ಆಶ್ಚರ್ಯವಾಯಿತು. ಸ್ವಲ್ಪ ಹೊತ್ತಿನ ನಂತರ ಗುಸುಗುಸು ಆರಂಭವಾಯಿತು. ಕೆಲವು ಅಸ್ಪಷ್ಟ ಮಾತುಗಳು ಕೇಳಿ ಬಂದವು. ನಂತರ ಇದ್ದಕ್ಕಿದ್ದಂತೆ ಕೋಲಾಹಲವುಂಟಾಯಿತು.

ಆದರೆ ಇದ್ದಕ್ಕಿದ್ದಂತೆ ಏನಾಯಿತೆಂದು ಯಾರಿಗೂ ತಿಳಿಯಲಿಲ್ಲ.
ನಂತರ ಗುಂಪಿನಲ್ಲಿ ಎಳೆದಾಟ ಆರಂಭವಾಯಿತು. ತಾವು ಹಿಂದುಳಿಯಬಾರದು ಎಂಬ ಭಯದಿಂದ ಎಲ್ಲರಲ್ಲಿ ಅತಂಕವುಂಟಾಯಿತು. ಆ ವ್ಯಕ್ತಿ ವಾಸ್ತವವಾಗಿಯೂ ವ್ಯಗ್ರನಾದ. ಸಾಕಷ್ಟು ಜನ ತನ್ನ ತಲೆಯ ಭಾರವನ್ನು ಹೊರಲು ಉತ್ಸುಕರಾಗಿದ್ದರಿಂದ ಈ ಕೋಲಾಹಲ ಹಬ್ಬಿತು ಎಂದು ಅವನು ಯೋಚಿಸಿದ. ಇಂಥ ಪರಿಸ್ಥಿತಿಯಲ್ಲಿ ಯೋಗ್ಯ ವ್ಯಕ್ತಿಯನ್ನು ಹೇಗೆ ಆಯ್ಕೆ ಮಾಡುವುದು?

ಆದರೆ ಏನು ಸಂಭವಿಸಿತ್ತೋ ಅದು ಉಲ್ಟಾ ಆಗಿತ್ತು. ಒಬ್ಬನೂ ಆ ವ್ಯಕ್ತಿಯ ಭಾರವನ್ನು ಹೊರಲು ಮುಂದೆ ಬರಲಿಲ್ಲ. ಹೂಂ-ಇಲ್ಲ, ಹೂಂ-ಇಲ್ಲ ಎನ್ನುತ್ತಾ ಗುಂಪು ಹಿಂದಕ್ಕೆ ಹೊರಳಿ ಹೋಯಿತು.

ತನ್ನ ಸುತ್ತ-ಮುತ್ತ ಕಲೆತಿದ್ದ ಜನರ ಗುಂಪು ಹೀಗೆ ವರ್ತಿಸಿದ್ದನ್ನು ನೋಡಿ ಆ ವ್ಯಕ್ತಿಯ ಭಾರ ಮತ್ತೆ ಹೆದರಿಸಿತು. ಆ ವ್ಯಕ್ತಿ ಹುಚ್ಚನಂತಾಗಿ ಜನರ ಕೈಗಳನ್ನು ಹಿಡಿದು, ಮೊಣಕಾಲೂರಿ ತನ್ನ ತಲೆಯ ಭಾರವನ್ನು ಹೊರುವಂತೆ ಅವರಲ್ಲಿ ಗೋಳಾಡಿದ. ಈಗಂತೂ ಜನ ಲಜ್ಜೆಯನ್ನೂ ತ್ಯಜಿಸಿ, ಅವನ ಕೈಯನ್ನು ಕೊಡವಿ, ಅಲ್ಲಿಂದ ಹೊರಟು ಹೋದರು.

ಅವನು ಇನ್ನಷ್ಟು ಹುಚ್ಚನಾಗಿ ಆ ಜನರನ್ನು ಹಿಂಬಾಲಿಸಿ ಹೋದ; ಬಂದು-ಹೋಗುವ ಜನರ ಮಾರ್ಗವನ್ನು ತಡೆದ. ಯಾರೂ ಅವನ ಮಾತುಗಳನ್ನು ಸರಿಯಾಗಿ ಕೇಳುತ್ತಲೂ ಇರಲಿಲ್ಲ. ಕಡೆಗೆ ಜನ ಅವನು ಎದುರಿಗೆ ಬರುವುದನ್ನು ನೋಡಿ ಅತ್ತ-ಇತ್ತ ಹೋಗಲಾರಂಭಿಸಿದರು ಅಥವಾ ಮನೆಯ ಬಾಗಿಲು-ಕಿಡಕಿಗಳನ್ನು ಮುಚ್ಚುತ್ತಿದ್ದರು.

ನಂತರ ಆ ವ್ಯಕ್ತಿ ಹೆಚ್ಚಿದ ಭಾರವನ್ನು ತಲೆಯ ಮೇಲೆ ಹೊತ್ತು ಗಲ್ಲಿಗಳಲ್ಲಿ, ನಗರಗಳಲ್ಲಿ ಕೂಗುತ್ತಾ-ಕೂಗುತ್ತಾ ಹೋಗಿ ದಣಿದ. ಅವನ ತಲೆಯ ಭಾರವನ್ನು ಹೊರಲು ಯಾರೂ ಮುಂದೆ ಬರಲಿಲ್ಲ. ಪ್ರತಿಯಾಗಿ ಈಗ ಜನ ಅವನನ್ನು ಗೇಲಿ ಮಾಡುತ್ತಿದ್ದರು, ಅವನನ್ನು ಗದರಿಸುತ್ತಿದ್ದರು. ಚಿಕ್ಕ ಮಕ್ಕಳು ಅವನಿಗೆ ಕಲ್ಲಿನಿಂದ ಹೊಡೆಯಲಾರಂಭಿಸಿದರು.

ಈಗ ಅವನು ಹಳ್ಳಿಯಲ್ಲಿ ವಾಸಿಸುವುದು ಕಷ್ಟವಾಯಿತು. ನಂತರ ಆ ವ್ಯಕ್ತಿ ತನ್ನ ದುಃಖ ಮತ್ತು ಭಾರವನ್ನು ಹೊರುತ್ತಾ ದೂರದ ನಿರ್ಜನ ಕಾಡಿಗೆ ಹೋಗಿ, ಅಲ್ಲಿ ಶಾಪಗ್ರಸ್ತ ಆತ್ಮದಂತೆ ಒಂಟಿಯಾಗಿ ಅಲೆಯಲಾರಂಭಿಸಿದ, ದಟ್ಟ ಪೊದೆಗಳ ಕಾಡಿಗಳಿಗೂ ಹೊದ. ಈಗ ಅವನು ತನ್ನ ಭಾರವನ್ನು ಹೊರುವ ವ್ಯಕ್ತಿಯ ಬಗ್ಗೆ ಕಲ್ಪಿಸಿಕೊಳ್ಳುವುದನ್ನು ಸಹ ತ್ಯಜಿಸಿದ. ಹೀಗಿರುವಾಗ ಇಂದು...

ಈ ನಿರ್ಜನ ಪ್ರದೇಶದಲ್ಲಿ ಒಬ್ಬ ಕೈ ಮುಗಿದು ಅವನಲ್ಲಿ ವಿನಂತಿಸಿಕೊಳ್ಳುತ್ತಿದ್ದ, “ಒಂದು ವೇಳೆ ನಿಮಗೆ ಅಡ್ಡಿಯಿಲ್ಲದಿದ್ದರೆ, ನಾನು ನಿಮ್ಮ ಭಾರವನ್ನು ಹೊರಲೇ?”
ಅವನಿಗೆ ಈ ಧ್ವನಿ ಕೇಳಿ ಇದು ಭ್ರಮೆಯಲ್ಲ ಎಂದು ನಂಬಿಕೆಯಾಯಿತು. ಧ್ವನಿಯಲ್ಲಿ ದುಃಖದ ಅಂಶ ಸಹ ಇರಲಿಲ್ಲ. ಹೀಗೆ ವಿನಂತಿಸಿಕೊಳ್ಳುವವನಲ್ಲಿ ದಯೆ, ಕರುಣೆಯಿರದೆ ತನ್ನ ಇಚ್ಛೆಯಿಂದಾಗಿ ಹೇಳುತ್ತಿದ್ದ. ತಲೆಯ ಮೇಲಿನ ಭಾರದಿಂದಾಗಿ ಆ ವ್ಯಕ್ತಿ ತಲೆಯೆತ್ತಿ ನೋಡಲು ಸಾಧ್ಯವಿರಲಿಲ್ಲ, ಹೀಗಾಗಿ ಅವನು ತಲೆ ಬಾಗಿಸಿಯೇ ಕೇಳಿದ, “ನೀನ್ಯಾರು? ಈ ಭಾರವನ್ನು ಹೊರಲು ಏಕೆ ಬಯಸುತ್ತೀಯ?”

ಇದನ್ನು ಕೇಳಿ ಮರದ ಮೇಲೆ ನೇತಾಡುತ್ತಿದ್ದ ಭೂತ ಕೈಮುಗಿದು ಠೀವಿಯಿಂದ ಹೇಳಿತು, “ಬ್ರದರ್! ಏಕೆಂದರೆ ನನ್ನ ಕಾಲುಗಳು ನೆಲದ ಮೇಲಿರುವುದೇ ಇಲ್ಲ. ಹೀಗಾಗಿ ನಾನು ಸದಾ ಒಂದು ಅಥವಾ ಎರಡು ಮರಗಳ ಮೇಲೆ ನೇತಾಡಬೇಕಾಗುತ್ತದೆ. ನಿಮಗೆ ಒಪ್ಪಿಗೆಯಾದರೆ, ನಿಮ್ಮ ಭಾರವನ್ನು ನನ್ನ ತಲೆಯ ಮೇಲೆ ಹೊತ್ತು ಕೊಳ್ಳುತ್ತೇನೆ, ಅದರ ಭಾರದಿಂದ ನನ್ನ ಕಾಲುಗಳನ್ನು ನೆಲದ ಮೇಲಿಟ್ಟುಕೊಳ್ಳುತ್ತೇನೆ, ಹೀಗೆ ಬಹುಶಃ ನನಗೆ ಸದ್ಗತಿ ಸಿಗಬಹುದು. ಆದರೆ ನಾನು ಮರಗಳ ಮೇಲೆ ನೇತಾಡಿ-ನೇತಾಡಿ ತುಂಬಾ ಬೇಸರಗೊಂಡಿದ್ದೇನೆ. ನೀವು ಎಲ್ಲಿಗೆ ಹೋಗುವಿರೋ, ಅಲ್ಲೆಲ್ಲಾ ನಾನು ನಿಮ್ಮ ಜೊತೆಗಿರುತ್ತೇನೆ. ನೀವು ಬಯಸಿದಲ್ಲಿಗೆ ನಿಮ್ಮ ಭಾರ ಹೊತ್ತು ಹೋಗುತ್ತೇನೆ. ಭಾರವನ್ನು ಹೇಗಿದೆಯೋ ಹಾಗೆಯೇ ಇಡುತ್ತೇನೆ. ಅದಕ್ಕೆ ಲೇಶಮಾತ್ರವೂ ಹಾನಿಯಾಗದಂತೆ ಎಚ್ಚರಿಕೆಯನ್ನು ವಹಿಸುತ್ತೇನೆ. ನೀವು ದಯವಿಟ್ಟು ನಿಮ್ಮ ತಲೆಯ ಭಾರವನ್ನು ಹೊರುವುದರಿಂದ ನನ್ನನ್ನು ತಡಯಬೇಡಿ.”

ಆ ವ್ಯಕ್ತಿ ಆ ಭೂತದ ಅವಸರವನ್ನು ನೋಡಿ ಆಶ್ಚರ್ಯಗೊಂಡ. ನಗುವುದೋ, ಅಳುವುದೋ ಅರ್ಥವಾಗುತ್ತಿರಲಿಲ್ಲ. ತಡವಾಗಿಯಾದರೂ ಅವನು ಬಯಸಿದಂತೆಯೇ ಸಂಭವಿಸುತ್ತಿತ್ತು. ಈಗಲೂ ಅವನಲ್ಲಿ ತಾನು ಹೊಸದಾಗಿ ಎಲ್ಲವನ್ನೂ ಮಾಡಲು ಸಾಧ್ಯವಾಗುವುದು ಎಂಬ ಭರವಸೆ ಮೂಡಿತು. ಅವನಲ್ಲಿ ಹೊಸ ಶಕ್ತಿಯ ಸಂಚಾರವಾಯಿತು. ಅವನು ಒಮ್ಮೆಲೆ ಉತ್ಸಾಹಿತನಾದ. ಇನ್ನು ಸಮಯವನ್ನು ನಾಶಮಾಡುವುದರಲ್ಲಿ ಅರ್ಥವಿರಲಿಲ್ಲ.

“ಈ ಕ್ಷಣವೇ ನೀನು ಕೆಳಗೆ ಬಾ, ನಾನು ನಿನಗೆ ಈ ಭಾರವನ್ನು ಒಪ್ಪಿಸುತ್ತೇನೆ. ಆದರೆ ನೀನು ಸದಾ ಈ ಭಾರವನ್ನು ಹೊತ್ತಿರಬೇಕು, ನನಗಿಷ್ಟಬಂದಲ್ಲಿ ನನ್ನೊಂದಿಗೆ ನೀನೂ ಬರಬೇಕು. ಒಪ್ಪಿಗೆಯೇ?”

ಇದು ಭೂತಕ್ಕೆ ಖುಷಿಯ ವಿಷಯವಾಗಿತ್ತು. ಅದಕ್ಕೆ ಇದೇ ಬೇಕಿತ್ತು. ಅದು ಹೊಸ ಆಸೆಯಿಂದ ಕುಣಿಯುತ್ತಾ ಹೇಳಿತು, “ಒಪ್ಪಿಗೆಯಿದೆ.” ನಂತರ ಅದು ಕೂಡಲೇ ಕೆಳಗಿಳಿದು ಬಂತು. ಆ ವ್ಯಕ್ತಿಯ ತಲೆಯ ಮೇಲಿನ ಭಾರವನ್ನು ತನ್ನ ತಲೆಯ ಮೇಲೆ ಪೇಟದಂತೆ ಇಟ್ಟುಕೊಂಡಿತು.
ಆಗಲೇ ಚಮತ್ಕಾರವೊಂದು ಘಟಿಸಿತು.

ಆ ವ್ಯಕ್ತಿ ಹಗುರವಾದ, ಅವನ ಕಾಲುಗಳು ನೆಲದಿಂದ ಮೇಲೆದ್ದವು. ಅವನು ಭೂತವಾಗಿ ಮರದ ಮೇಲೆ ನೇತಾಡಿದ. ಆದರೆ ಭೂತ ತಲೆಯ ಮೇಲಿನ ಭಾರದಿಂದ ಮನುಷ್ಯನಾಗಿ ಭೂಮಿಯಲ್ಲಿ ಅಲೆದಾಡಲಾರಂಭಿಸಿತು; ಈಗ ಆ ವ್ಯಕ್ತಿ ಅತ್ಯಂತ ಖುಷಿಗೊಂಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.