ಸೋಮವಾರ, ಜನವರಿ 25, 2021
16 °C

ಕಲಾವಿದರ ಕಂಗಳಲ್ಲಿ ಭರವಸೆಯ ಮಿಂಚು

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ವನವಾಸದಲ್ಲಿದ್ದ ಪಾಂಡವರ ಗುಡಿಸಲಿಗೆ ದೂರ್ವಾಸ ಮುನಿ 10 ಸಾವಿರ ಶಿಷ್ಯರೊಂದಿಗೆ ಭೇಟಿ ನೀಡಿದ ಸಂದರ್ಭವದು. ತಾಳಮದ್ದಲೆ ಅರ್ಥ ಹೇಳುತ್ತಿದ್ದ ಕೃಷ್ಣ ಪಾತ್ರಧಾರಿ ವಿದ್ವಾನ್ ಉಮಾಕಾಂತ ಭಟ್ಟರು ಹೇಳಿದ ಮಾತಿದು– ‘ಬದುಕಿನ ದಾರಿಯಲ್ಲಿ ಕಷ್ಟಗಳು ಇವೆ. ಆದರೆ, ಇವು ಬದುಕಿನ ಗುರಿಯಲ್ಲ. ಬದುಕಿನ ಗುರಿ ಇಷ್ಟವೇ ಹೊರತು ಕಷ್ಟವಲ್ಲ. ಬದುಕಿನ ದಾರಿಯಲ್ಲಿ ಅನಿವಾರ್ಯವಾದ ಕಷ್ಟಗಳನ್ನು ಸಹಿಸಿಕೊಂಡು ಅವುಗಳನ್ನು ದಾಟಿ, ಅವು ತಲೆ ಎತ್ತದಂತೆ ನಿವಾರಿಸಿಕೊಳ್ಳುವುದೇ ಜೀವನದ ಮರ್ಮ. ಇದೇ ಸಂಸ್ಕೃತಿಯ ರಹಸ್ಯ...’

ದೂರ್ವಾಸರಿಗೆ ಆತಿಥ್ಯ ಮಾಡಲಾಗದೇ ದ್ರೌಪದಿ ಬಿಕ್ಕಿಬಿಕ್ಕಿ ಅಳುತ್ತಿದ್ದಾಗ, ಅಕ್ಷಯ ಪಾತ್ರೆಯಲ್ಲಿದ್ದ ಒಂದು ಅಗುಳನ್ನು ತಾನು ತಿಂದ ಶ್ರೀಕೃಷ್ಣ, ದೂರ್ವಾಸರು ಹಾಗೂ ಅವರ ಶಿಷ್ಯರ ಹೊಟ್ಟೆ ತುಂಬಿಸಿದ. ಇಂತಹುದೇ ಒಂದು ದುರಿತ ಸಂದರ್ಭ ಯಕ್ಷಗಾನ ಕಲಾವಿದರಿಗೆ ನೈಜ ಬದುಕಿನಲ್ಲಿ ಎದುರಾಯಿತು.

ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆ ಜನ ಜೀವನವನ್ನೇ ಸ್ತಬ್ಧಗೊಳಿಸಿತು. ಗೆಜ್ಜೆ ಕಟ್ಟಲಾಗದ ಕಾಲುಗಳು, ಚಂಡೆ–ಮದ್ದಲೆ ನುಡಿಸಲಾಗದ ಬೆರಳುಗಳು, ಮಸ್ತಿಷ್ಕವನ್ನು ವ್ಯಾಕುಲಗೊಳಿಸಿದವು. ಹೀಗೆ ಕುಸಿದು ಕುಳಿತ ಕಲಾವಿದರ ಬದುಕಿಗೆ ಕಲಾ ಪೋಷಕರು ಕಸುವು ತುಂಬಿದರು. ಅಕ್ಷಯ ಪಾತ್ರೆಯ ಅಗುಳಿನಂತೆ, ಒಬ್ಬೊಬ್ಬರ ಸಹಾಯವೂ ಕಲಾವಿದರ ಹೊಟ್ಟೆ ತುಂಬಿಸಿದ್ದಷ್ಟೇ ಅಲ್ಲ, ಮಾನಸಿಕ ಸ್ಥೈರ್ಯವನ್ನು ಗಟ್ಟಿಗೊಳಿಸಿತು.

ಯಕ್ಷಗಾನ ಮಲೆನಾಡು–ಕರಾವಳಿಗರ ಆರಾಧ್ಯ ಕಲೆ. ಯಕ್ಷಗಾನವನ್ನು ಆರಾಧಿಸುವ ಪ್ರೇಕ್ಷಕರ ಪ್ರೇರಣೆಯಿಂದಲೇ ಪ್ರಯೋಗಗಳೂ ಹೆಚ್ಚುತ್ತಿವೆ, ಹತ್ತಾರು ಮೇಳಗಳೂ ನಡೆಯುತ್ತಿವೆ. ತೆಂಕುತಿಟ್ಟು ಹಾಗೂ ಬಡಗುತಿಟ್ಟು ಸೇರಿಸಿದರೆ ಸುಮಾರು 2000 ಕಲಾವಿದರಿಗೆ ಯಕ್ಷಗಾನವೇ ಜೀವಾಳ. ಮಾರ್ಚ್‌ ತಿಂಗಳಿನಲ್ಲಿ ಲಾಕ್‌ಡೌನ್ ಘೋಷಣೆಯಾದಾಕ್ಷಣ, ಮೇಳದ ತಿರುಗಾಟ ಅರ್ಧದಲ್ಲೇ ನಿಂತಿತು. ಮೇಳದ ಜೊತೆಗಿರುತ್ತಿದ್ದ ಕಲಾವಿದರು ಮನೆ ಸೇರಿದರು. ವೇಷ ಕಳಚಿದ ಕಲಾವಿದರ ಕೈಗಳು ಬರಿದಾದವು. ಕೈಯೊಡ್ಡಲು ಸ್ವಾಭಿಮಾನ ಬಿಡಲಿಲ್ಲ. ಈ ಸಂದಿಗ್ಧ ಸಂದರ್ಭದಲ್ಲಿ ಸಾರಥಿಗಳಾಗಿ ಕಲಾವಿದರ ಕುಟುಂಬದ ರಥ ಎಳೆದವರು ಕಲಾಭಿಮಾನಿಗಳು, ಕಲಾರಾಧಕರು. ಸದ್ದಿಲ್ಲದೇ ಹೋಗಿ, ಕಲಾವಿದರ ಮುಷ್ಟಿ ಹಿಡಿದು, ಆತ್ಮಸ್ಥೈರ್ಯ ತುಂಬಿದರು.

ಹೀಗೆ ಕಲಾವಿದರ ಮನೆ ಬಾಗಿಲಿಗೆ ಹೋದವರಲ್ಲಿ ಸಾಮಾನ್ಯ ಪ್ರೇಕ್ಷಕರು, ಉದ್ಯಮಿಗಳು, ರಾಜಕಾರಣಿಗಳು ಇದ್ದರೆಂಬುದು ವಿಶೇಷ. ರಾಜ್ಯದ ಮುಜರಾಯಿ ಇಲಾಖೆ ಸಚಿವರು ಕೊಲ್ಲೂರು ದೇವಾಲಯದ ಮೂಲಕ ಪ್ರತೀ ಕಲಾವಿದನಿಗೆ ನಿತ್ಯದ ತುತ್ತಿಗೆ ಕೊರತೆಯಾಗದಂತೆ ಕಾಳಜಿ ತೋರಿದರು.

ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್, ನೀಲ್ಕೋಡಿನ ಅಭಿನೇತ್ರಿ ಆರ್ಟ್ ಟ್ರಸ್ಟ್ ಇನ್ನೂ ಅನೇಕ ಕಲಾವಿದರು ಬಿಡಿಬಿಡಿಯಾಗಿ ಹೊಸ ಪ್ರಯೋಗಕ್ಕೆ ಕೈ ಹಾಕಿದರು. ಪಟ್ಲ ಫೌಂಡೇಷನ್‌ ಪಾವಂಜೆ ದೇಗುಲದಲ್ಲಿ ಯಕ್ಷಗಾನ, ತಾಳಮದ್ದಲೆ ಹಮ್ಮಿಕೊಂಡು ಕಲಾವಿದರಿಗೆ ರಂಗ ವೇದಿಕೆ ಒದಗಿಸಿತು. ವೇಷ ಕಟ್ಟಿದ ಕಲಾವಿದರು, ಪದ್ಯ ಹೇಳಿದ ಭಾಗವತರು, ಚಂಡೆ–ಮದ್ದಲೆ ನುಡಿಸಿದ ಹಲವಾರು ಕಲಾವಿದರು ಒತ್ತಾಸೆಯನ್ನು ಪೂರೈಸಿಕೊಂಡು ನಿರಾಳರಾದರು. ಇವು ಯುಟ್ಯೂಬ್, ಫೇಸ್‌ಬುಕ್‌ನಲ್ಲಿ ಪ್ರದರ್ಶನಗೊಂಡವು.

ಅಭಿನೇತ್ರಿ ಟ್ರಸ್ಟ್ ಮೊದಲ ಬಾರಿಗೆ ‘ಪೇ ಆ್ಯಂಡ್ ವಾಚ್’ ಪ್ರಯೋಗ ನಡೆಸಿತು. ನೂರಾರು ಪ್ರೇಕ್ಷಕರು ಟಿಕೆಟ್ ಖರೀದಿಸಿ, ಯಕ್ಷಗಾನವನ್ನು ಆಸ್ವಾದಿಸಿದರು. ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಧಾರೇಶ್ವರ ಚಾರಿಟಬಲ್ ಟ್ರಸ್ಟ್, ಕಲಾಧರ ಯಕ್ಷರಂಗ ಬಳಗ, ಕಲಾವಿದೆ ಅಶ್ವಿನಿ ಕೊಂಡದಕುಳಿ, ಅನೇಕ ಯಕ್ಷ ಮಂಡಳಿಗಳು ಡಿಜಿಟಲ್ ಮಾಧ್ಯಮಕ್ಕೆ ಹೊರಳಿ, ನೋಡುಗರ ಮನ ತಣಿಸಿದ ಜತೆಗೆ ಕಲಾವಿದರ ಮನದ ಭಾರವನ್ನು ಇಳಿಸಿದವು.

‘ಯಕ್ಷ ಕಲಾವಿದರಿಗೆ ದಿನದ ಗಳಿಕೆಯಲ್ಲೇ ಕುಟುಂಬ ನಿರ್ವಹಣೆಯ ಅನಿವಾರ್ಯತೆ. ಅರ್ಧದಲ್ಲಿ ಮೇಳ ನಿಂತಾಗ ಕಲಾವಿದರ ಬಳಿ ಹಣವಿರಲಿಲ್ಲ. ಕೆಲವರಂತೂ ಅಕ್ಷರಶಃ ಊಟಕ್ಕೂ ಇಲ್ಲದಂತಾದರು. ಪಟ್ಲ ಫೌಂಡೇಷನ್, 1200ಕ್ಕೂ ಅಧಿಕ ಕಲಾವಿದರ ಮನೆ ಬಾಗಿಲು ತಟ್ಟಿ, ಜೀವನಕ್ಕೆ ಅಗತ್ಯ ವಸ್ತುಗಳನ್ನು ಒದಗಿಸಿತು. ಅನಾರೋಗ್ಯಕ್ಕೆ ಒಳಗಾದ ಕಲಾವಿದರ ಆಸ್ಪತ್ರೆ ವೆಚ್ಚ ಭರಿಸಿದೆವು. ಇವೆಲ್ಲವುಗಳ ವೆಚ್ಚ ₹ 30 ಲಕ್ಷ ದಾಟಿದರೂ, ಕಲಾವಿದನಿಗಾಗಿ ಮಾಡಿದ ಖರ್ಚು ಇದು ಎನ್ನುವ ಹೆಮ್ಮೆಯಿದೆ’ ಎನ್ನುವಾಗ ಭಾಗವತ ಸತೀಶ ಪಟ್ಲರಿಗೆ ಸಂತೃಪ್ತ ಭಾವ.

ಸಾಲಿಗ್ರಾಮ ಮೇಳದ ಯಜಮಾನ ಪಿ. ಕಿಶನ್ ಹೆಗ್ಡೆ ಅವರು ಮೇಳದಲ್ಲಿರುವ ಪ್ರತೀ ಕಲಾವಿದ, ಕೆಲಸಗಾರ, ಈ ಮೊದಲು ಮೇಳದಲ್ಲಿ ಕೆಲಸ ಮಾಡಿದವರನ್ನು ನೆನಪಿಸಿಕೊಂಡು, ತುಂಬಿದ ಚೀಲದ ಅಕ್ಕಿಯನ್ನು ಮನೆಗೆ ತಲುಪಿಸಿ ಬಂದರು. ಅಮೆರಿಕ ಕನ್ನಡ ಸಂಘದವರು ಆನ್‌ಲೈನ್ ಯಕ್ಷಗಾನಕ್ಕೆ ವೇದಿಕೆ ಕಲ್ಪಿಸಿ, ಯಕ್ಷ ವ್ಯಾಮೋಹವನ್ನು ಪ್ರಕಟಿಸಿದರು.

‘ಕಲಾವಿದನಿಗೆ ಆತ್ಮತೃಪ್ತಿ ಸಿಗುವುದು ಬಣ್ಣ ಹಚ್ಚಿದಾಗಲೇ. ಪ್ರದರ್ಶನವಿಲ್ಲದೇ ಕಲಾವಿದರು ಮಾನಸಿಕವಾಗಿ ಕುಸಿದಿದ್ದಾರೆ. ಕಲಾವಿದನ ಈ ತಲ್ಲಣಗಳು ಬೇಗ ಕೊನೆಯಾಗಲಿ. ಬಯಲಾಟಗಳು ಆರಂಭವಾದಂತೆ, ಟೆಂಟ್‌ ಮೇಳಗಳ ಪ್ರದರ್ಶನಗಳು ಶುರುವಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು ಕಲಾವಿದ ಶಂಕರ ಹೆಗಡೆ ನೀಲ್ಕೋಡು. ಪಾವಂಜೆ ಮೇಳ, ಧರ್ಮಸ್ಥಳ ಮೇಳ, ಮಂದಾರ್ತಿ ಮೇಳಗಳ ಹರಕೆಯಾಟಗಳು ಆರಂಭವಾಗಿವೆ. ಕಟೀಲು ಮೇಳದ ವೇದಿಕೆಯೂ ಸಜ್ಜುಗೊಂಡಿದೆ. ಮತ್ತೆ ವೇಷ ಕಟ್ಟುವ ಸಂಭ್ರಮದ ಸರದಿ ಈಗ ಕಲಾವಿದರದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು