ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಡಿದ ಕಲಾ ಬೆಳುದಿಂಗಳು

Last Updated 27 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬಾನಿನಲ್ಲಿ ಪೌರ್ಣಿಮೆಯ ಚಂದಿರ ಮೂಡಿ, ಹರಡಿದ ಬೆಳುದಿಂಗಳಿನಲ್ಲಿ ಕೃಷ್ಣ–ರಾಧೆ ಪ್ರೇಮದ ಹೊನಲಿನಲ್ಲಿ ಮೈಮರೆತು ಬಿಟ್ಟಿದ್ದಾರೆ. ಜಗತ್ತಿನ ಯಾವ ಆಗು–ಹೋಗುಗಳೂ ಅವರಿಗೆ ಆ ಕ್ಷಣದಲ್ಲಿ ಕ್ಷುಲ್ಲಕ ಸಂಗತಿಗಳಾಗಿ ಗೋಚರಿಸುತ್ತಿವೆ ಅಥವಾ ಅವರ ಆ ಪ್ರೇಮದ ಕಣ್ಣುಗಳಿಗೆ ಬೇರೆ ಯಾವುದೂ ಕಾಣುತ್ತಿಲ್ಲ. ಭಾರತಿ ಕರ್‌ ಅವರ ಈ ಕಲಾಕೃತಿಯಲ್ಲಿ ಅದೆಂತಹ ವರ್ಣವೈಭವ. ಪ್ರೇಮ ಭಾವವನ್ನು ಉಕ್ಕೇರಿಸುವ ಈ ಕಲಾಕೃತಿ ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ.

ಮತ್ತೊಂದು ಕ್ಯಾನ್ವಾಸ್‌ನಲ್ಲಿ ಹೈದರಾಬಾದ್‌ನ ಜೀವನ ಸಂಸ್ಕೃತಿಯೇ ಮೈದಳೆದು ನಿಂತಿದೆ. ಮೀನುಗಾರ್ತಿಯ ಮುಖದಲ್ಲಿ ಅಷ್ಟು ಅಂದದ ಮುಗ್ಧತೆಯನ್ನು ತುಂಬಿದ ಕಲಾವಿದರಿಗೆ ನೋಡುಗರಮನ ಒಮ್ಮೆ ಸಲಾಂ ಹೇಳುತ್ತದೆ. ರಾಜೇಶ್ವರ್‌ ಅವರ ಹರಟೆ ಹೊಡೆಯುವ ಮಹಿಳೆಯರ ಮುಂದೆ ನಾವೂ ಕಾಲದ ಪರಿವೆಯೇ ಇಲ್ಲದಂತೆ ನಿಂತು ಬಿಡಬೇಕು ಎಂಬ ಆಸೆ ಮೂಡುತ್ತದೆ.

ಬುಟ್ಟಿ ಹೊತ್ತು ಹೊರಟ ಮೀನುಗಾರ ಮಹಿಳೆ... ಕಲಾಕೃತಿ: ಶ್ರೀಪತಿ
ಬುಟ್ಟಿ ಹೊತ್ತು ಹೊರಟ ಮೀನುಗಾರ ಮಹಿಳೆ... ಕಲಾಕೃತಿ: ಶ್ರೀಪತಿ

ಹೌದು, ಇದೊಂದು ಮಹಾಸಂಗಮ. ಪುರಾಣ, ಗ್ರಾಮೀಣ ಹಾಗೂ ನಗರ ಬದುಕು ಹೀಗೆ ಹತ್ತಾರು ವಿಷಯಾಧಾರಿತ ಚಿತ್ರಗಳ ಮಹಾಸಾಗರ. ಇದರ ಹಿಂದೆ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹತ್ತು ರಾಜ್ಯಗಳ 42ಕ್ಕೂ ಹೆಚ್ಚು ಕಲಾವಿದರ ಕುಂಚದ ಕೈಚಳಕ ಇದೆ. ಇದಕ್ಕೆ ವೇದಿಕೆಯಾಗಿದ್ದು, ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆ. ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಬೆಂಗಳೂರು ಪ್ರಮುಖ ಚಿತ್ರಕಲಾ ಪ್ರದರ್ಶನವೊಂದಕ್ಕೆ ಸಾಕ್ಷಿಯಾಗುತ್ತಿದೆ.

ಹೈದರಾಬಾದಿನ ಎಂ.ಈಶ್ವರಯ್ಯ ಚಿತ್ರ ಶಾಲೆ ಆಯೋಜಿಸಿರುವ ಮೊತ್ತಮೊದಲ ಅಖಿಲ ಭಾರತ ಕಲಾ ಪ್ರದರ್ಶನ ವೆಂಕಟಪ್ಪ ಚಿತ್ರಶಾಲೆಯಲ್ಲಿ ಆರಂಭವಾಗಿದ್ದು, ಮಾರ್ಚ್‌ 6ರವರೆಗೂ ನಡೆಯಲಿದೆ. ಈ ಪ್ರದರ್ಶನಕ್ಕೆ ಈಶ್ವರಯ್ಯ ಚಿತ್ರ ಶಾಲೆಯ ನಿರ್ದೇಶಕ ಸಂಜಯ್‌ ಕುಮಾರ್‌ ರೂವಾರಿ. ಕರ್ನಾಟಕದಿಂದ ಮೇಘನಾಥ್‌‌ ಅಬ್ರಹಾಮ್‌ ಬೆಳ್ಳಿ, ತೆಲಂಗಾಣದಿಂದ ಸುಭಾಷ್‌ ಬಾಬು ರೌರಿ, ಅಮಿಲಾ ರೆಡ್ಡಿ ಅನ್ನಪೂರ್ಣ, ರಾಮು ಮರೇಡು, ಸತ್ಯ ಗನ್ನೋಜು, ಬಾಲಭಕ್ತ ರಾಜ್‌, ಶ್ರೀದೇವಿ, ತಮಿಳುನಾಡಿನ ಉಮಾ ಕೃಷ್ಣಮೂರ್ತಿ, ಪಶ್ಚಿಮ ಬಂಗಾಳದ ನಿವೇದಿತ ಚಕ್ರವರ್ತಿ ಹಾಗೂದೇವದ್ರತ ಬಿಸ್ವಾಸ್‌ ಸೇರಿದಂತೆ ಹಲವು ಚಿತ್ರ ಕಲಾವಿದರು ರಚಿಸಿರುವ ಚಿತ್ರಗಳು ಇಲ್ಲಿ ಪ್ರದರ್ಶನಕ್ಕಿವೆ. ಕಲಾಭಿಮಾನಿಗಳಿಗೆ ವರ್ಷದಿಂದಲೂ ಕಾದಿದ್ದಂತೆ ಆ ಕಲಾಕೃತಿಗಳು ತಮ್ಮ ಸೊಬಗನ್ನು ಮೊಗೆ ಮೊಗೆದು ಕೊಡುತ್ತಿವೆ.

ಹೈದರಾಬಾದ್‌ನ ಜನಜೀವನ–ಸಂಸ್ಕೃತಿ ಕಲಾಕೃತಿ: ದೇವದ್ರತ ಬಿಸ್ವಾಸ್‌
ಹೈದರಾಬಾದ್‌ನ ಜನಜೀವನ–ಸಂಸ್ಕೃತಿ ಕಲಾಕೃತಿ: ದೇವದ್ರತ ಬಿಸ್ವಾಸ್‌
ಕೃಷ್ಣ–ರಾಧೆಯ ಸಲ್ಲಾಪ... ಭಾರತಿ ಕರ್‌ ಅವರ ಕಲಾಕೃತಿ
ಕೃಷ್ಣ–ರಾಧೆಯ ಸಲ್ಲಾಪ... ಭಾರತಿ ಕರ್‌ ಅವರ ಕಲಾಕೃತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT