ಮಂಗಳವಾರ, ನವೆಂಬರ್ 24, 2020
21 °C

ನಿಮ್ಮೂರಿಗೂ ಬರಬಹುದು ನಂನಮ್ಮಂದಿ!

ಸುರೇಶ ಅರ್ಕಸಾಲಿ Updated:

ಅಕ್ಷರ ಗಾತ್ರ : | |

Prajavani

ಜಲವರ್ಣಗಳ ಡಬ್ಬಿಗಳು, ಸೀಸದ ಕಡ್ಡಿಗಳು, ಅಕ್ರೀಲಿಕ್–ಚಾರ್ಕೋಗಳು, ಕ್ಯಾನ್ವಾಸ್‌ಗಳು ಹಾಗೂ ಸಣ್ವು–ದೊಡ್ವು ಕುಂಚಗಳುಳ್ಳ ಗಂಟು ಕಟ್ಕೊಂಡು ತಂತಮ್ಮ ಊರಿಂದ ‘ನಂನಮ್ಮಂದಿ’ ಲ್ಯಾಂಡ್‌ಸ್ಕೇಪ್‌ ಚಿತ್ರ ಬಿಡಿಸಾಕ ಪ್ರತೀ ವಾರಾನೂ ಹೊಕ್ಕಾರ. ಮೊದ್ಲss ನಿಗದಿ ಮಾಡಿದ ಜಾಗಕ್ಕ ಅವರೆಲ್ಲ ಬಂದು ಸೇರುವ ವ್ಯಾಳ್ಯಾದಾಗ ಆಗತಾನ ಆ ಊರು ಎದ್ದು, ಕಣ್ಣು ಉಜ್ಕೊಂತ ಕುಂತಿರ್ತೈತಿ. ಅಂಗಳದ ಕಸ ಇನ್ನೂ ಹಂಗss ಬಿದ್ದಿರ್ತೈತಿ. ಒಂದು ಬಿಸಿ ಚಹಾ ಗಂಟಲದೊಳಗ ಇಳಿದಿದ್ದ ತಡ, ಗಂಟಿನೊಳಗಿನ ಬಣ್ಣದ ಡಬ್ಬಿಗಳು, ಸೀಸದ ಕಡ್ಡಿಗಳು, ಕುಂಚಗಳು ಬುದು ಬುದು ಹೊರಗ್‌ ಬರ್ತಾವ. ಪುರಾತನ ಕಟ್ಟಡದ ಮುಂದ ನೆಲದ ಮ್ಯಾಲಿನ ದೂಳು ಝಾಡಿಸಿ ಕುಂತ್ರ, ಕಟ್ಟಡಕ್ಕ ಗೋಪುರ ಕುಂದ್ರಿಸಿದ ಮ್ಯಾಲss ‘ನಂನಮ್ಮಂದಿ’ ತಂತಮ್ಮ ಗಂಟು ಕಟ್ಕೊಂಡು ಮ್ಯಾಲ ಏಳೋದು.

ನಮ್‌ ಈ ಕಲಾವಿದರ ತಂಡ ಹಿಂಗ ಪ್ರತೀ ಐತ್ಯಾರ (ಭಾನುವಾರ) ಒಂದೊಂದು ಊರಿಗೆ ಹೋಗಿ ಚಿತ್ರ ಬಿಡಿಸಾಕ ಸುರು ಮಾಡಿ ಎರಡ್‌ ವರ್ಸ ಆಗೇತಿ ನೋಡ್ರಿ ಸಾಹೇಬ್ರ. ಉತ್ತರ ಕರ್ನಾಟಕದ ಸಿಕ್ಕಾಪಟ್ಟಿ ಊರಿಗೆ ಹೋಗೀವಿ ಬಿಡ್ರಿ. ಒಮ್ಮೆ ಹಂಪಿಗೆ ಹೋಗಿ ಕಲ್ಲಿನ ತೇರಿನ ಮುಂದ ಹೋಗಿ ಕುಂತ್ವಿ ನೋಡ್ರಿ. ಸೂರಪ್ಪ ತುಂಗಭದ್ರವ್ವನ ಒಡಲಿನಿಂದ ಉದಯಿಸಿ ಮ್ಯಾಲ, ಮ್ಯಾಲ ಏರ್ದಂಗ ಈ ತೇರು ಬಣ್ಣ ಬದಲಾಯಿಸಾಕ ಹತ್ರಿ. ಡಬ್ಬಿ ಮುಚ್ಳ ತಗತಗದು ಬರಿ ಬಣ್ಣ ಕಲಸೂದ, ಕಲಸೂದ ಆತ್ರಿ. ಸಂಜಿಮುಂದ ಎಲ್ಲಾ ಕಲಾವಿದರ ಕ್ಯಾನ್ವಾಸ್‌ಗಳ ಮ್ಯಾಲ ಕಲ್ಲಿನ ತೇರುಗಳ ಜಾತ್ರಿ ನಡದಿತ್‌ರೀ. ವಿರೂಪಾಕ್ಷಪ್ಪನಿಗೆ ಶರಣು ಹೊಡ್ದು ಬಂದ್ವ್‌ರೀ.ಹುಬ್ಬಳ್ಳಿಯ ಚಂದ್ರಮೌಳೇಶ್ವರ ಗುಡಿ ಕಲೆ: ಮಂಜುನಾಥ ಕೆ. ಭಂಡಾರೆ

ಮೊನ್ನೆ ಹುಬ್ಬಳ್ಳಿಯ ಸಿದ್ಧಾರೂಢರ ಮಂಟಪದ ಚಿತ್ರ ಬಿಡಿಸಾಕ ಹೋಗಿದ್ವಿ. ಮಂಟಪದ ಮುಂದ್‌ ಕುಂತ್ರ, ಎಷ್ಟ್‌ ಮಂದಿ ಅಡ್ಡಾಡಿದ್ರು ನಿಮ್ಗ ಗೊತ್ತೇನ್ರೀ? ಆದ್ರೂ ನಂನಮ್ಮಂದಿ ಅತ್ಲಾಗ, ಇತ್ಲಾಗ ನೋಡ್ದ ಕ್ಯಾನ್ವಾಸ್‌ನೊಳಗ ‘ಮಂಟಪ’ ಹೊತ್ಕೊಂಡು ಬಂದ್ರು. ಜಮಖಂಡಿ ಸಾಲಿಗುಡಿ ಬಿಡಸಾಕ ಹೋದ್ರ, ಅದ್ರ ಚಿತ್ರ ಒಳ್ಳೆಯ ಅರಮನಿ ಅದ್ಹಾಂಗ ಆತ್ರಿ. ಹೇಳಿ ಕೇಳಿ ರಾಜರ ಊರss ನೋಡ್ರಿ.

ಈ ಕಲಾಯಾತ್ರಾ ಹ್ಯಾಂಗ್‌ ಸುರುವಾತಪ ಅಂತಿರೇನು? ಒಬ್ಬೊಬ್ರ ಏನಾರ ಮಾಡ್‌ಬೌದು. ಆಜೂ ಬಾಜೂ ನಾಲ್ಕು ಜನಾ ಸೇರ್ಕೊಂಡು ಏನರ ಮಾಡಿದ್ರ ಅದ್ರ ಮಜಾನ ಬ್ಯಾರೆ, ಸಂತೃಪ್ತಿನ ಬ್ಯಾರೆ. ಕುಂದಗೋಳ ತಾಲ್ಲೂಕಿನ ರಾಮನಕೊಪ್ಪದ ನಮ್‌ ಸರ್ಕಾರಿ ಸಾಲಿಯಿಂದ ಒಮ್ಮೆ ಕಲಾ ಶಿಬಿರ ಮಾಡಿದ್ವಿ ನೋಡ್ರಿ. ರಾಜ್ಯದ ಬ್ಯಾರೆ ಬ್ಯಾರೆ ಕಡೀಲಿಂದ ಬಂದಿದ್ದ ಕಲಾವಿದರೆಲ್ಲ ಸೇರಿ ‘ನಂನಮ್ಮಂದಿ’ ಅಂತ ಒಂದು ತಂಡ ಹುಟ್ಕೊಂತು. ಪ್ರತೀ ಐತ್ಯಾರ ಸೇರಾಕ ಠರಾವು ಪಾಸ್‌ ಮಾಡ್ತು. ನಾ ಕೂಡು, ನೀ ಕೂಡು ಅನ್ಕೊಂತ ಗಬ್ಬೂರ ಹಾದಿ ಹಿಡಿದು ಚಿತ್ರ ತೆಗೆದಿದ್ದಾತು. ಹಂಗಾದ್ರ ಇಸ್ಟss ಸಾಕ ಎಂಬ ಪ್ರಶ್ನಾ ಮುಂದ್‌ ನಿಂತಾಗ, ‘ಯಾಕ್‌ ಆಗವಲ್ದಕ್ರೀ ದೂರನ ಹೋಗೂಣಂತ’ ಅದ್ಕೊಂಡು ಹಂಪಿ–ಜಮಖಂಡಿ ಅಂತ ಎಲ್ಲಾ ಕಡಿ ಓಡ್ಯಾಡಿ ಚಿತ್ರ ಬಿಡಿಸಾಕ ಸುರು ಮಾಡಿದ್ವಿ ನೋಡ್ರಿ.ನಂನಮ್ಮಂದಿ ತಂಡ: (ಎಡದಿಂದ ಬಲಕ್ಕೆ): ರಾಘವೇಂದ್ರ ಪತ್ತಾರ, ವಾಸುದೇವ ಕೂಡಲಗಿ, ರಾಮಪ್ಪ ಒಣರೊಟ್ಟಿ, ವಿಜಯಕುಮಾರ್‌ ಗಾಯಕವಾಡ, ಮಂಜುನಾಥ್ ಭಂಡಾರೆ, ಸುರೇಶ ಅರ್ಕಸಾಲಿ, ಮಾರುತಿ ಪಾಟೀಲ, ದೇವೇಮದ್ರ ಬಡಿಗೇರ, ಲಿಂಗರಾಜ ಬಾರಕೇರ, ಕುಳಿತವರು: ಗಣಪತಿ ಘಾಟಗೆ ಚಿತ್ರ: ಯಲ್ಲಪ್ಪ ಕಟಾವಿ

ಎಲ್ಲಾರ್ನೂ ಸಾಲ್ಕ ನಿಂದ್ರಿಸಿ ಎಣಿಸಿದ್ರ ಒಂದು ಡಜನ್‌ ಆಕ್ಕೀವ್ರಿ. ಅದ್ರಾಗ ಕಲಾ ಮಾಸ್ತಾರ್‌ಗೋಳು ಅದಾರ, ಸ್ವತಂತ್ರ ಕಲಾವಿದರು ಅದಾರ, ಬೇರೆ ಸಂಸ್ಥಾದೊಳಗ ಕೆಲ್ಸ ಮಾಡಿದ್ರೂ ಕಲಾರಾಧನೆ ಮಾಡೋರೂ ಅದಾರ. ಯಾವ ಊರಿಗೆ ಹೋಗಿರ್ತೀವಿ, ಅಲ್ಲಿ ಜನಾ ಕೇಳಿದ್ರ ಒಂದು ಸಣ್ಣ ಶಿಬಿರನೂ ಮಾಡ್ತೀವ್ರಿ. ಊರಿಗೆ ಹೋಗಿ ಚಿತ್ರ ಬಿಡಿಸಾಕ ಕುಂತಾಗ, ಹಣಿಕಿ ಹಾಕಿ ನೋಡೋರು ಇರ್ತಾರ ನೋಡ್ರಿ. ಅಂಥವ್ರೆಲ್ಲ ಸಭೆ ಮಾಡಿ, ನಂನಮ್ಮಂದಿ ಕಡೀಲಿಂದ ತಂತಮ್ಮ ಊರಾಗ ಗ್ವಾಡಿ ಮ್ಯಾಲ ಚಿತ್ರ ಬಿಡಿಸ್ಕೊಂಡಾರ. ‘ಬರ‍್ಯಪ ತಮ್ಮಗೋಳ, ಬಣ್ಣಾ, ಕುಂಚಾ ಕೊಡಿಸ್ತೀವಿ. ನಮ್‌ ಸಾಲಿ ಗೂಡಿಗೆ ಚಿತ್ರ ಬಿಡಿಸ್ರಿ’ ಅಂದೋರಿಗೆ ನಾವು ‘ಇಲ್ಲ’ ಅಂದಿಲ್ಲ. ಸಾಲಿಗುಡ್ಯಾಗ ಮಕ್ಕಳೊಂದಿಗೆ ಮಕ್ಕಳಾಗಿ ವ್ಯಾಳ್ಯಾ ಕಳೆಯೋದ್ರ ಮಜಾನ ಬ್ಯಾರೆ ಬಿಡ್ರಿ.

ಸ್ಮಾರಕಗಳ ಮುಂದ ಕುಂತ್ರ, ಆ ಶಿಲ್ಪಿಗಳ ಕೆಲ್ಸ, ಶೈಲಿ, ಸಮರ್ಪಣಾಭಾವ ನೆಪ್ಪು ಮಾಡ್ಕೊಂಡು ಖುಷಿ ಆಕ್ಕೈತಿ. ಅವ್ರ ಕೂಡ ನಾವೂ ಭಾಗಿ ಆಗೀವಿ ಅನಸ್ತೈತಿ. ಈ ಒತ್ತಡದ ಜೀವನ್ದಾಗ ಶಾಂತಿ, ನೆಮ್ಮದಿ ಎಲ್ಲಿ ಅದಾವ? ನನ್‌ ಕೇಳಿದ್ರ ಇಂಥ ಸ್ಮಾರಕ, ಹಸಿರು ಸೂಸುವ ನಿಸರ್ಗ ಇದ್ರಾಗ ಅದಾವ.ಹಂಪಿಯ ಕಲ್ಲಿನ ರಥ ಕಲೆ: ವಿಜಯಕುಮಾರ್‌ ಆರ್. ಗಾಯಕವಾಡ

ನಮ್‌ ಈ ಗುಂಪಿಗೆ ಕಲಾವಿದ ಚಂದ್ರನಾಥ ಆಚಾರ್ಯರು ಗೌರವಾಧ್ಯಕ್ಷ ಆಗ್ಯಾರ. ಕೆ.ವಿ. ಸುಬ್ರಹ್ಮಣ್ಯ, ಎಜಿಕೆ ಜಯಪ್ರಕಾಶ್, ಕೆ.ಎ.ದೊಡ್ಡಮನಿ, ಸುಭಾಷ್‌ ಕಮ್ಮಾರ, ಮಹದೇವಪ್ಪ ಕುಂಬಾರಗೇರಿ– ಎಲ್ಲಾರೂ ಮಾರ್ಗದರ್ಶನ ಮಾಡ್ತಾರ. ಪ್ರತೀ ವರ್ಸ ಏಪ್ರಿಲ್‌ 15ರಂದು ವಿಶ್ವ ಕಲಾವಿದರ ದಿನದಂದು ನಾವೂ ಕಾರ್ಯಕ್ರಮ ಮಾಡಿ, ಸಾಧಕರಿಗೆ ಸನ್ಮಾನ ಮಾಡ್ತೀವಿ. ಈ ಐತ್ವಾರದ ಯಾತ್ರಾನ ಯಾವ ಕಾರಣಕ್ಕೂ ಬಿಡ್‌ಬಾರ್ದು ಅದ್ಕೊಂಡೀವಿ. ಯಾರಿಗೆ ಗೊತ್ತು? ನಂನಮ್ಮಂದಿ ನಿಮ್ಮೂರಿಗೂ ಒಂದು ದಿನ ಬರ್‌ಬೌದು. ಹಾಂಗ್ ಬಂದಾಗ ಭೇಟಿ ಆಗೂನಂತ್ರಿ ಮತ್ತ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು