ಗುರುವಾರ , ಫೆಬ್ರವರಿ 25, 2021
20 °C

ಬಣ್ಣದ ಹೆಜ್ಜೆಗಳತ್ತ ತಿರುಗಿ ನೋಡಿ...

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

* ‘ಇನ್ನರ್ ರೆಸೊರೆನ್ಸ್‌: ಎ ರಿಟರ್ನ್‌ ಟು ಸಮ’ ಚಿತ್ರಕಲಾ ಪ್ರದರ್ಶನದ ಬಗ್ಗೆ ಹೇಳಿ...

1965ರಿಂದ ರಚಿಸಿದ ಸರಣಿ ಕಲಾ ಪ್ರಯೋಗಗಳ ಸಂಗ್ರಹ ಇದು. ಇವನ್ನು ಸಂಗ್ರಹಿಸಿದವರು ಲೇಖಕ ಹಾಗೂ ಕಲಾವಿದ ಸದಾನಂದ ಮೆನನ್. ಅರ್ಥಪೂರ್ಣವಾಗಿ ನೃತ್ಯಗಾರ್ತಿ ಮಿತಿ ದೇಸಾಯಿ ಸಂಯೋಜಿಸಿದ್ದಾರೆ. ಐದು ದಶಕದಿಂದ ಹಲವು ಪ್ರಕಾರಗಳಲ್ಲಿ ಸರಣಿ ಕಲಾಕೃತಿಗಳನ್ನು ರಚಿಸಿದ್ದೇನೆ, ಕಾಲೇಜು ದಿನಗಳ ಚಿತ್ರಗಳು ಒಳಗೊಂಡಂತೆ ಇಂದಿನವರೆಗೆ ರಚಿಸಿದ ಆಯ್ದ ಚಿತ್ರಗಳ ಪ್ರದರ್ಶನ ಇದಾಗಿದೆ.

ಮೈಥುನ, ವೃಕ್ಷ, ಟ್ರೀ ಆಫ್ ಲೈಫ್ ಅಂಡ್ ಡೆತ್, ಥಿಯೇಟರ್‌ ಆಫ್‌ ಲೈಫ್‌, ಹಿ ಅಂಡ್ ಶೀ ಎಂಬ ಸರಣಿ ಕಲಾಕೃತಿಗಳು ಈ ಪ್ರದರ್ಶನದ ಪ್ರಮುಖ ಆಕರ್ಷಣೆ. ರೇಖಾಚಿತ್ರ, ಚಿತ್ರಕಲೆ, ಕಾಪರ್‌ ವರ್ಕ್, ಕ್ಯಾಪೆಸ್ಟ್ರಿ (ವಸ್ತ್ರದ ಮೇಲೆ ನೇಯ್ಗೆ ಮೂಲಕ ಕಲಾಕೃತಿ ರಚಿಸುವುದು) 4 ಮಾಧ್ಯಮಗಳಲ್ಲಿ ರಚಿಸಿದ ಕಲಾಕೃತಿ ನೋಡಬಹುದು.

* ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಮೂಡಿದ್ದು ಹೇಗೆ?

ಕಾಲೇಜು ಮುಗಿದ ನಂತರ ಪಣಿಕರ್ ಎಂಬ ನನ್ನ ಶಿಕ್ಷಕರು ಚಿತ್ರಕಲೆ ಜೊತೆ ಕರಕುಶಲ ವಸ್ತು ಮಾಡುವ ಯೋಜನೆ ಹಾಕಿಕೊಟ್ಟರು. ಇದು ನನ್ನ ಕಲಾ ಬದುಕಿನ ಆಯಾಮವನ್ನು ಬದಲಿಸಿತು. ಬಾಟಿಕ್ ಕಲೆ ಮೂಲಕ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಮುಂದುವೆರೆದೆ. ಮೊದಲ ಪ್ರದರ್ಶನದಲ್ಲೇ ಅದ್ಭುತ ಯಶಸ್ಸು ಪಡೆದ ನಂತರ ನಮ್ಮದೇ ಒಂದು ಸ್ಥಳ ಹಾಗೂ ಸಂಸ್ಥೆಯನ್ನು ರೂಪಿಸಿ ಮತ್ತಷ್ಟು ಪ್ರಯೋಗ ಮಾಡಬೇಕೆನಿಸಿ ಕಲಾವಿದರ ಸಹಕಾರ ಸಂಘ ಮಾಡಿಕೊಂಡು, ಚೆನ್ನೈನ ಮಹಾಬಲಿಪುರಂ ಬಳಿ ಚೋಳಮಂಡಲ ಕಲಾಗ್ರಾಮ ನಿರ್ಮಿಸಿದೆವು. ಹೀಗೆ ಚಿತ್ರಕಲೆಯನ್ನು ಕಲಕುಶಲ ವಸ್ತುಗಳ ತಯಾರಿಕೆಗೆ ದುಡಿಸಿಕೊಂಡು ಆರ್ಥಿಕವಾಗಿಯೂ ಸದೃಢವಾದೆವು.

* ಕುಶಲಕರ್ಮಿಗಳ ಜತೆಗಿನ ಅನುಭವ...

ಕಲಾವಿದ ಹಾಗೂ ಕುಶಲಕರ್ಮಿ ನಡುವೆ ಒಂದು ತೆಳುಗೆರೆ ಇದೆ. ಹಳೆಬೀಡು ಕೆತ್ತಿದವರು ಕಲಾವಿದನೋ ಕುಶಲಕರ್ಮಿಯೋ? ನಾನು ಪಿಕಾಸೊ ಕ್ಯಾಪೆಸ್ಟ್ರಿ ಕಲೆ ನೋಡಿ ಸ್ಫೂರ್ತಿಗೊಂಡು, ಒಬ್ಬ ಕುಶಲಕರ್ಮಿ ಹುಡುಕಿಕೊಂಡೆ. ನಾನು ಮಾಡಿದ ವಿನ್ಯಾಸವನ್ನು ಕುಶಲಕರ್ಮಿ ನೇಯ್ಗೆ ಮಾಡುತ್ತಿದ್ದ. ಇಬ್ಬರ ಶ್ರಮ ಅದ್ಭುತ ಕಲಾಕೃತಿಗಳನ್ನು ಸೃಷ್ಟಿಸುತ್ತಿತ್ತು.

ಕಾಪರ್‌ ವರ್ಕ್‌ ಕಲಿತದ್ದು ಕಲಾವಿದ ಪೊನ್ನುಸ್ವಾಮಿ ಅವರಿಂದ. ಬಡಗಿಯಿಂದ ತಾಮ್ರದ ಕಲಾಕೃತಿಗಳು ಮಾಡಿಸುತ್ತಿದ್ದೆ. ಕಾಗದದಲ್ಲಿ ಬರೆದ ಚಿತ್ರವನ್ನು ತಾಮ್ರದ ಮೇಲೆ ಉಬ್ಬುತಗ್ಗುಗಳೊಂದಿಗೆ ರಚಿಸಬೇಕಿತ್ತು. ತಾಮ್ರ ಹದ ಮಾಡುವುದು, ಬೇಕೆಂದ ಆಕಾರಕ್ಕೆ ಬಗ್ಗಿಸುವುದು, ಎಲ್ಲ ಕಲಿತ ಬಡಗಿಗಳು ಉತ್ತಮ ಕಲಾಕೃತಿಗಳ ಸೃಷ್ಟಿಗೆ ನನ್ನೊಂದಿಗೆ ನಿಂತರು. ಹೀಗೆ ಸೆರಾಮಿಕ್ (ಪಿಂಗಾಣಿ ಮೇಲೆ ಚಿತ್ರ ರಚಿಸುವುದು), ವುಡ್‌ ಇನ್‌ಲೇ (ಮರದ ಹಲಗೆ ಮೇಲೆ ಚಿತ್ರ ರಚಿಸುವುದು) ಕಲಾಕೃತಿಗಳನ್ನು ಕುಶಲಕರ್ಮಿಗಳೊಂದಿಗೆ ಸೇರಿ ರಚಿಸಿದೆ.

* ಬದುಕಿನ ಭಿನ್ನಘಟ್ಟಗಳ ಕಲಾಕೃತಿಗಳನ್ನು ಒಟ್ಟು ಮಾಡಿ ನೋಡಿದಾಗ ಯಾವ ವ್ಯತ್ಯಾಸ ಅಥವಾ ಸಾಮ್ಯತೆಯನ್ನು ಗಮನಿಸಿದ್ದೀರಿ?

ಹೆಚ್ಚಿನ ವ್ಯತ್ಯಾಸವೇನಿಲ್ಲ. ಮೊದಲು ಕಲಾಕೃತಿ ರಚಿಸಲು ಆರಂಭಿಸಿದರಿಂದ ಹಿಡಿದು ಇಂದಿನವರೆಗೆ ಒಂದು ಎಳೆ ಸಾಮ್ಯತೆಯನ್ನು ನನ್ನ ಕಲಾಕೃತಿಯಲ್ಲಿ ಗುರುತಿಸಿದ್ದೇನೆ. ಯೌವನ, ಪ್ರೌಢ ವಯಸ್ಸಿನಲ್ಲಿ ಕಂಡ ನಾನಾ ಭಾವಗಳ ಭಿತ್ತಿ ಇದು.

* ನಾಟಕ, ಸಿನಿಮಾ, ಸಂಗೀತ, ಸಾಹಿತ್ಯದೊಂದಿಗಿನ ನಿಮ್ಮ ನಂಟು...

ಪತ್ರಕರ್ತ ವೈ.ಎನ್. ಕೃಷ್ಣಮೂರ್ತಿ ನಾನು ಗೆಳೆಯರು. ಅವರು ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರನ್ನು ಪರಿಚಯಿಸಿದರು. ಸಾಹಿತಿಗಳಾದ ಎ.ಕೆ. ರಾಮಾನುಜನ್, ಅನಂತಮೂರ್ತಿ, ಕಾಮರೂಪಿ, ಪ್ರಕಾಶಕ ಜಿ.ಬಿ. ಜೋಶಿ ಅವರೂ ಗೆಳೆಯರಾದರು. ಜೋಶಿ ಅವರಿಂದ ಹಲವು ಪುಸ್ತಕಗಳಿಗೆ ಮುಖಪುಟ ರಚಿಸಿದೆ.  ಕಾವ್ಯದ ಗೀಳು ಹಚ್ಚಿಸಿದ್ದು ವಿಮರ್ಶಕ ಕುರ್ತಕೋಟಿ. ಅವರು ಬೇಂದ್ರೆ ಪದ್ಯಗಳ ಅರ್ಥವನ್ನು ಅದ್ಭುತವಾಗಿ ವಿವರಿಸುತ್ತಿದ್ದರು. ಬೇಂದ್ರೆ ಅವರ ಕಾವ್ಯ ಪ್ರಭಾವದಿಂದ ‘ಕಲ್ಪವೃಕ್ಷ ಬೃಂದಾವನ’ ಎಂಬ ಸರಣಿ ರಚಿಸಿದೆ.  ಗಿರೀಶ್ ಕಾರ್ನಾಡ್‌ ಗೆಳೆತನದಿಂದ ಸಾಹಿತ್ಯ, ನಾಟಕ, ಸಂಸ್ಕಾರ ಸಿನಿಮಾದಲ್ಲಿ ಕಲಾ ನಿರ್ದೇಶಕನಾಗಿ ದುಡಿದ ಅನುಭವ ಪಡೆದೆ.
ಬಿ.ವಿ. ಕಾರಂತರ ಜತೆ ಹಲವು ನಾಟಕಗಳಲ್ಲಿ ಕೆಲಸ ಮಾಡಿದೆ. ರಾಮಾನುಜನ್ ಹೇಳುತ್ತಿದ್ದ ಜನಪದ ಕಥೆಗಳ ಪ್ರಭಾವದಿಂದ ‘ಹಿ ಅಂಡ್ ಶೀ’ ಎಂಬ ಸರಣಿ ರಚಿಸಿದೆ.

* ನಿಮ್ಮ ಕಲಾಕೃತಿಗಳಲ್ಲಿ ಹೆಚ್ಚು ದೇಸಿತನವನ್ನು ಗಮನಿಸಬಹುದು...

ಪಾಶ್ಚಿಮಾತ್ಯ ಕಲಾಪ್ರಭಾವ ಭಾರತೀಯ ಕಲೆಯ ಮೇಲೆ ಇದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪ್ರಜ್ಞಾಪೂರಕವಾಗಿ ಭಾರತೀಯ ಜನಪದ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲೆಯನ್ನು ಹೆಚ್ಚು ರಚಿಸಿದ್ದೇನೆ. ಕನ್ನಡ ಸಾಹಿತ್ಯ, ನಾಟಕ, ಸಂಸ್ಕೃತಿಯ ಪರಿಚಯ ಹೆಚ್ಚಾದಂತೆ ನನ್ನ ಕಲಾಕೃತಿಗಳ ರಚನೆಯಲ್ಲೂ ಕನ್ನಡತನ, ನಮ್ಮತನ ಹೆಚ್ಚಿತು. ಹಾಗೇ ಚೋಳಮಂಡಲಕ್ಕೆ ಹಲವು ಸಂಗೀತಗಾರರು, ಕವಿಗಳು, ನಟರನ್ನು ಕರೆಸಿ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದೆವು ಇದು ನನ್ನ ದೇಸಿ ಕಲೆಯ ಮೇಲೆ ಪರಿಣಾಮ ಬೀರಿದೆ.

* ಸಾಮಾಜಿಕ ಘಟನೆಗಳಿಗೆ ಕಲಾವಿದರಾಗಿ ಹೇಗೆ ಸ್ಪಂದಿಸುತ್ತೀರಿ? ನಿಮ್ಮ ಕಲಾಕೃತಿಯ ಮೇಲೆ ಬೀರಿದ ಪರಿಣಾಮವೇನು?

ಕೊಲ್ಕತ್ತಾದ ಕಲಾಶಿಬಿರಕ್ಕೆ ಹೋಗಿದ್ದಾಗ ಅಯೋಧ್ಯೆಯ ರಾಮಮಂದಿರ ಗಲಾಟೆ ನಡೆಯಿತು. ಈ ಘಟನೆ ನನ್ನನ್ನು ತೀವ್ರವಾಗಿ ಬಾಧಿಸಿತು. ಇದು ಮನುಷ್ಯನ ಹಲವು ಮುಖಗಳ ಅನಾವರಣ ಮಾಡಿದಂತೆ ಭಾಸವಾಯಿತು. ಆಗ ‘ಹ್ಯೂಮನ್ ಸ್ಕೇಪ್’ ಎಂಬ ಸರಣಿ ಕಲಾಕೃತಿ ರಚಿಸಿದೆ. ನಂತರ ಬೆಂಗಳೂರಿನಲ್ಲಿ ಹಲವಾರು ಪರಿಸರವಾದಿಗಳು, ಹೋರಾಟಗಾರರು, ಸಿನಿಮಾ ನಿರ್ದೇಶಕರನ್ನು ಭೇಟಿಯಾದೆ. ಇದರಿಂದ ಪರಿಸರ ಜಾಗೃತಿಯ ಪ್ರಭಾವಕ್ಕೆ ಒಳಗಾಗಿ ‘ಅರ್ಥ್‌ ಸ್ಕೇಪ್’ ಸರಣಿ ಚಿತ್ರಗಳನ್ನು ಬಿಡಿಸಿದೆ. ಸಾಮಾನ್ಯ ಜನರನ್ನು ಗಮನಿಸಿದಾಗ ಎಲ್ಲರೂ ಟೀವಿ ಮುಂದೆ ಕೂತು ಗಂಟೆಗಟ್ಟಲೆ ಧಾರಾವಾಹಿ ನೋಡುವುದು ನನ್ನ ಗಮನ ಸೆಳೆಯಿತು. ಆಗ ಮನುಷ್ಯನ ತಲೆಗಳ ಭಿನ್ನಭಿನ್ನ ಚಿತ್ರಗಳ ಸರಣಿ ಬರೆದೆ. ಮನುಷ್ಯನ ಐದಾರು ಮುಖವಾಡಗಳನ್ನು ಬಿಡಿಸುತ್ತಾ ಆತ ಅರ್ಥವಾಗುತ್ತಾನೆ ಈ ಎಳೆ ಇಟ್ಟುಕೊಂಡು ‘ಥಿಯೇಟರ್‌ ಆಫ್ ಲೈಫ್‌’ ಸರಣಿ ಚಿತ್ರಗಳ ಬಿಡಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.