ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರ ಓದಿನ ಪರಿಧಿಯಲ್ಲಿ...

Last Updated 21 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ವರ್ಷಪೂರ್ತಿ ನಾವು ಓದಿದ ಪುಸ್ತಕಗಳು ಅದೆಷ್ಟೊ. ಆದರೆ, ಕೆಲವು ಕೃತಿಗಳಂತೂ ಮನದಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ. ಹೀಗೆ ‘ಎದೆಗೆ ಬಿದ್ದ ಅಕ್ಷರ’ಗಳು ಓದುಗರ ತಿಳಿವಳಿಕೆಯನ್ನು ವಿಸ್ತರಿಸುತ್ತವೆ. ಹೊಸ ಕಾಣ್ಕೆಯನ್ನು ನೀಡುತ್ತವೆ. ಕನ್ನಡ ಸಾಹಿತ್ಯದ ಅಂತಹ ಹೊಸ ಫಸಲಿನ ಜೊತೆಗಿನ ಪುಟ್ಟ ಅನುಸಂಧಾನ ಇಲ್ಲಿದೆ. ಓದುಗರು ಮೆಚ್ಚಿದ ಪುಸ್ತಕಗಳ ಪಟ್ಟಿಯೂ ಒಳಪುಟದಲ್ಲಿದೆ. ಅಂದಹಾಗೆ ಇದೇನು ರ‍್ಯಾಂಕಿಂಗ್‌ ಅಲ್ಲ. ಚರ್ಚಿತ ಪುಸ್ತಕಗಳ ಕಡೆಗಿನ ಒಂದು ಹೊರಳು ನೋಟವಷ್ಟೇ...

ಆಹಾ, ಎಷ್ಟೊಂದು ಸಮೃದ್ಧ!

‘ಕನ್ನಡ ಕಥನಗಳು’ ಪುರುಷೋತ್ತಮ ಬಿಳಿಮಲೆ ಅವರ ಪ್ರಬಂಧಗಳ ಸಂಕಲನ. ಇದು ಭಾಷೆಯನ್ನು ಕುರಿತೇ ಧ್ಯಾನಿಸುವ ಕೃತಿ. ‘ಭಾರತವ್ಯಾಪೀ ಕಥನ’ಗಳ ಮೂಲಕ ಕನ್ನಡ ಕಥನದ ಸ್ವರೂಪವನ್ನು ಶೋಧಿಸುವ ಈ ಪುಸ್ತಕವು, ಕಥೆಯ ಒಳಗೊಂದು ಕಥೆಯನ್ನು ಹೆಣೆಯುತ್ತ ರೂಪಿಸಿಕೊಂಡಿರುವ ಕಥನಕ್ರಮ ಕುತೂಹಲಕರ. ಭಾಷೆಯ ಜೀವಂತಿಕೆಯು ಮಸುಕಾಗುತ್ತಿರುವ ಈ ಹೊತ್ತಲ್ಲಿ, ತನ್ನ ‘ಕನ್ನಡದ ನೆನಪುಗಳಿಗೆ’ ಗಟ್ಟಿಯಾಗಿ ಅಂಟಿಕೊಂಡಿರುವುದೇ ಪ್ರತಿಭಟನೆಯ ಮಾರ್ಗವೆನ್ನುವ ಲೇಖಕರ ಜೊತೆಗೆ ನಾವೂ ಜೊತೆಗೂಡಬಹುದಾದದ್ದು, ಇವರು ಬಳಸಿಕೊಳ್ಳುವ ಕಥನಕ್ರಮವನ್ನು ಅರಿಯುವುದರಿಂದ.

‘ಸ್ತ್ರೀವಾದಿ ದೃಷ್ಟಿಕೋನ’ಕ್ಕೆ ಹೊಸ ಆಯಾಮಗಳನ್ನು ಸೇರಿಸುತ್ತ ಬಂದಿರುವ ಎಚ್.ಎಸ್. ಶ್ರೀಮತಿಯವರ ಪುಸ್ತಕ ‘ಸ್ತ್ರೀವಾದ- ಚಿಂತನೆ ಮತ್ತು ಹೋರಾಟ’. ‘ಹೆಣ್ಣು ಗುಣ’ ಮತ್ತು ‘ಗಂಡು ಗುಣ’ಗಳೆಂಬ ಸರಳೀಕೃತ ವಿಂಗಡಣೆಯಿಂದಲೇ ಹೆಣ್ಣು-ಗಂಡಿನ ನಡುವಿನ ಅಂತರವನ್ನು ಹೆಚ್ಚಿಸುತ್ತಿರುವ ಆಲೋಚನೆಗಳನ್ನು ಮುರಿದು, ಹೊಸ ಮಾರ್ಗವನ್ನು ಕಂಡುಕೊಳ್ಳುವ ಇವರ ಆಶಯವು ಒಟ್ಟಾರೆ ಲೋಕಗ್ರಹಿಕೆಗೆ ಮತ್ತು ವಿಶೇಷವಾಗಿ ಸಾಹಿತ್ಯ ವಿಮರ್ಶೆಗೆ ಹೊಸ ಮಾತನ್ನು ಸೇರಿಸುತ್ತದೆ. ಗಂಡಿನಲ್ಲಿರುವ ಹೆಣ್ಣುತನ ಮತ್ತು ಹೆಣ್ಣಿನಲ್ಲಿರುವ ಗಂಡುತನಗಳು ತೋರ್ಪಡುವ ರೀತಿಯನ್ನು ಅರ್ಥಮಾಡಿಕೊಂಡು ಮನುಷ್ಯ ಸ್ವಭಾವವನ್ನು ‘ಮಾನವೀಯತೆ’ಯೆನ್ನುವ ನೆಲೆಗೆ ವಿಸ್ತರಿಸುವುದು ಈ ಕೃತಿಯ ಘನತೆ.

ಸೃಜನಶೀಲ ಸಾಹಿತ್ಯ ಮತ್ತು ವಿಮರ್ಶೆಯ ನಿರಂತರ ಹುಡುಕಾಟ ಹಾಗೂ ಅವು ತೋರಲು ಬಯಸುವ ಜೀವನದರ್ಶನಗಳ ಆಚೆಗೂ ಉಳಿಯುವುದು ಶೂನ್ಯ. ಆದ್ದರಿಂದ, ಮನುಷ್ಯನ ಪಾಡು ಕಡೆಗೂ ‘ನಿಜವು ತೋರದಲ್ಲ’ ಎನ್ನುವ ಬದುಕಿನ ಸತ್ಯವನ್ನು ಹಲವು ಲೇಖನಗಳ ಮೂಲಕ ತೋರಿಸಿಕೊಡುವ ಪುಸ್ತಕ ಹೆಚ್.ಎಸ್.ರಾಘವೇಂದ್ರರಾವ್ ಅವರ ‘ನಿಜವು ತೋರದಲ್ಲ’. ‘ಸಾಹಿತ್ಯವನ್ನು ಕುರಿತ ಬರವಣಿಗೆಯೂ ಸಾಹಿತ್ಯ ಕೃತಿಗಳಿಂದ ದೂರ ಸರಿದಿರುವುದು ಇಂದಿನ ದಿನಗಳ ಮುಖ್ಯ ಲಕ್ಷಣ’ ಎನ್ನುವ ಲೇಖಕರ ಮಾತು ಕನ್ನಡ ಸಾಹಿತ್ಯ ವಿಮರ್ಶೆಯ ಅಳಿವಿನ ಎಚ್ಚರಿಕೆಯ ಕರೆಗಂಟೆಯಾಗಿ ಕೇಳಿಸುತ್ತದೆ.

ಪುಸ್ತಕದಲ್ಲಿನ ಕುಸುಮಾಕರ ದೇವರಗೆಣ್ಣೂರು ಅವರೊಂದಿಗಿನ ಮಾತುಕತೆಯು ಈ ಎಚ್ಚರಿಕೆಯನ್ನು ಸಶಕ್ತವಾಗಿ ವಿಸ್ತರಿಸುತ್ತದೆ. ನಿರಂತರವಾಗಿ ತಾವೂ ಕಥೆಯ ಗುಂಗಿನಲ್ಲಿದ್ದು, ಓದುಗರನ್ನೂ ಅದೇ ಗುಂಗಿಗೆ ಎಳೆದೊಯ್ಯುವ ಅಮರೇಶ ನುಗಡೋಣಿ ಅವರ ಆರನೆಯ ಕಥಾಸಂಕಲನ ‘ದಡ ಸೇರಿಸು ತಂದೆ’. ಕಥೆಯಿಂದ ಕಥೆಗೆ ಭಾಷೆಯ ಜಿಗಿತದಲ್ಲಿ ಭಿನ್ನವಾಗುವ ಅಮರೇಶರ ಕಥೆಗಳು, ಸಂದು ಹೋದ ನಿನ್ನೆ ಮತ್ತು ಜರುಗಲಿರುವ ನಾಳೆಗಳ ನಡುವೆ ಜೀಕುತ್ತ ‘ಶಾಶ್ವತ ವರ್ತಮಾನ’ವನ್ನು ಮುಟ್ಟಲು ಪ್ರಯತ್ನಿಸುತ್ತವೆ’ ಭಿನ್ನ ಭಾಷೆ, ಲಿಂಗ ಹಾಗೂ ಮನಸ್ಥಿತಿಗಳನ್ನು ಒಳಗೊಂಡಿರುವ ಸಮುದಾಯವು ಒಂದು ಹಲವಾಗಿ ಮಾತನಾಡಿದಂತೆನಿಸುವ ಈ ಕಥೆಗಳು ವಾಸ್ತವವನ್ನು ಆರ್ತವಾಗಿ, ಕಲಾತ್ಮಕವಾಗಿ ಅರಸುವುದರಿಂದಲೇ ‘ಮಾಧ್ಯಮ’ದ ಸಾಧ್ಯತೆಗಳನ್ನು ವಿಸ್ತರಿಸುತ್ತವೆ. ಲೇಖಕಿಯ ನಾಲ್ಕು ದಶಕಗಳ ಕಥಾಸೃಷ್ಟಿಯ ಹೂಗೊಂಚಲು ‘ಉಮಾ ರಾವ್ ಕತೆಗಳು’. ಕಥೆಯ ವಿವರಗಳನ್ನು ಚಿಕ್ಕಚಿಕ್ಕ ವಾಕ್ಯಗಳ ಮೂಲಕ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲು ಇವರು ಬಳಸುವ ಭಾಷೆಯು ‘ಹೇಳಿದ್ದೆಲ್ಲಾ ಅರ್ಥವಾಗಿದೆ’ ಎನ್ನಿಸಿದರೂ ತನ್ನೊಳಗೆ ಇನ್ನೂ ಏನನ್ನೋ ಬಚ್ಚಿಟ್ಟುಕೊಳ್ಳುವ ಬಗೆಯದು. ಖಚಿತವಾಗಿ ಇದನ್ನೇ ಹೇಳಬೇಕು ಎನ್ನುವ ಹಠ ಇವರ ಕಥೆಗಳಿಗಿಲ್ಲ. ಆದ್ದರಿಂದಲೇ ಕಥೆಗಳಿಗೆ ಬಹುಮುಖತೆ ಒದಗಿಬರುತ್ತದೆ. ಈ ಬಗೆಯ, ಮುಕ್ತ ನಿರೂಪಣೆ ಇವರ ಕಥೆಗಳ ಆಕರ್ಷಣೆ.

ಬರಹ: ಜ.ನಾ.ತೇಜಶ್ರೀ

***

ತಾತ್ವಿಕ ಕಾಣ್ಕೆಯ ಒಳ್ಳೆಯ ಕೃತಿಗಳು

ನನಗೆ ಸೃಷ್ಟಿಶೀಲತೆಯು ಕಾಣಿಸುವುದು ಕಥೆ, ಕವನ, ಕಾದಂಬರಿ... ಇಂಥವುಗಳಲ್ಲಿ ಮಾತ್ರವೇ ಅಲ್ಲ. ಸೃಜನಶೀಲ, ಸೃಜನೇತರ ಎಂದು ವಿಂಗಡಿಸುವುದು ತಪ್ಪು. ಪ್ರಬಂಧಗಳು, ವ್ಯಾಖ್ಯಾನಗಳು, ಯೋಚನಾ ಲಹರಿಗಳು ಇಂಥವು ಕೂಡ ಸೃಷ್ಟಿಶೀಲ ಆಗಿರುತ್ತವೆ, ಆಗಿರಬಲ್ಲವು. ನಾನು ನೋಡುವ ಕ್ರಮ ಅದು.

ಹಿತ್ತಲ ಜಗತ್ತು (ರಹಮತ್ ತರೀಕೆರೆ), ಗಾಂಧಿ ಕಥನ (ಡಿ.ಎಸ್. ನಾಗಭೂಷಣ), ಅವ್ಯಯ ಕಾವ್ಯ (ಕೆ.ವಿ. ತಿರುಮಲೇಶ್ – ಇದು ಸೃಜನ ಮತ್ತು ಸೃಜನೇತರದ ವ್ಯತ್ಯಾಸವನ್ನು ಹೋಗಲಾಡಿಸಲು ಎಂದೇ ಬಂದಂತೆ ಇದೆ) ನನಗೆ ಇಷ್ಟವಾದವು. ಹಾಗೆಯೇ, ಲಹರಿಯ ಕಡಲು (ಗುರುರಾಜ ಮಾರ್ಪಳ್ಳಿ) ಎಂಬ ಕವನ ಸಂಕಲನ ಕೂಡ ಚೆನ್ನಾಗಿದೆ. ತಾತ್ವಿಕ ಕಾಣ್ಕೆಗಳು ಅದರಲ್ಲಿ ಇವೆ.

ಬನ್ನಂಜೆಯವರ, ಭಗವದ್ಗೀತೆಯ ಅರ್ಥ ಚಿಂತನೆಯ ಕೆಲವು ಕೃತಿಗಳು ಪ್ರಕಟವಾಗುತ್ತಿವೆ. ಆ ಕೃತಿಗಳೂ ನನಗೆ ಇಷ್ಟವಾದವು. ಕೆ.ವಿ. ಅಕ್ಷರ ಬರೆದ ‘ಶಂಕರ ವಿಹಾರ’ ಕೂಡ ಕೆಲವೆಡೆ ಇಷ್ಟವಾಯಿತು. ಪುಸ್ತಕಗಳು ಬಹಳಷ್ಟು ಇವೆ. ಆದರೆ ಕಾಡುವುದು ಅಂದರೆ, ನಾವು ಯೋಚನೆ ಮಾಡಿರದ ರೀತಿಯಲ್ಲಿ ಯೋಚಿಸಿದ ಅಥವಾ ನಾವು ಬೇರೆಯ ರೀತಿಯಲ್ಲಿ ಯೋಚನೆ ಮಾಡುವಂತೆ ಮಾಡಿದ, ನಮಗೆ ಗೊತ್ತಿಲ್ಲದೆ ಸನ್ನೆಯ ಹಾಗೆ ಕೆಲಸ ಮಾಡಿದ ಕೃತಿಗಳು.

ಸಾಹಿತ್ಯವು ಮಾಡಬೇಕಾದ ದೊಡ್ಡ ಕೆಲಸವೆಂದರೆ –ಅದು ನಮ್ಮ ಮನಸ್ಸನ್ನು ಕಟ್ಟಿಹಾಕಿರುವ ನಾನಾ ಬಗೆಯ ಬಂಧನಗಳ ಗುರುತನ್ನು ನಮಗೆ ಮಾಡಿಸುವುದು. ಹಾಗೆ ಮಾಡಿಸುವಲ್ಲಿ ತನ್ನನ್ನೇ ತಾನು ಕಟ್ಟಿಹಾಕಿಕೊಂಡ, ಸೃಜನಶೀಲತೆಯನ್ನು ಕುರಿತ ಸಿದ್ಧಾಂತಗಳೂ ಒಂದು ಬಂಧನವೇ ಎಂದು ತಾನು ಮನಗಂಡದ್ದನ್ನು ಅದು ಕಾಣಿಸಬೇಕು. ತನ್ನ ಮೈಯಲ್ಲೇ ಕಾಣಿಸಬೇಕು!

ನೋಡಿ: ಒಳಗಿನವನಾಗಿ ನೋಡಬೇಕು; ಹೊರಗಿನವನಾಗಿ ಅಲ್ಲ ಎಂದು ಬಹಳ ಹೇಳಲಾಗುತ್ತಿದೆಯಲ್ಲ; ನಿಜ. ಒಳಗಿನವನಾಗಿ ನೋಡಬೇಕು. ನಾನು ಒಪ್ಪುವೆ. ಆದರೆ ಒಳಗಿನವನಾಗಿ ನೋಡಿದಾಗ ಹಾಗೆ ಕಂಡದ್ದು ಮತಾಂಧತೆಗೆ ಬಹಳ ಹತ್ತಿರವಿರುತ್ತದೆ ಎಂದು ಕೂಡ ನನಗೆ ಗೊತ್ತಾಗಿದೆ! ಇವೆಲ್ಲ ತುಂಬ ಸೂಕ್ಷ್ಮವಾದ ಸಂಗತಿಗಳು. ಸೃಜನಶೀಲತೆಯು ಅಪ್ಪಟ ಸ್ವತಂತ್ರವಾದ ಮನೋಸ್ಥಿತಿ ಎಂದು ಒಪ್ಪಿದರೆ; ಆ ಸ್ಥಿತಿಯಲ್ಲಿ ಈ ಎಲ್ಲ ಸೂಕ್ಷ್ಮಗಳೂ ಗೋಚರಿಸಬಲ್ಲವು. ಅಂಥ ಕೃತಿಗಳನ್ನು ನಾನು ಕಾಯುತ್ತಿರುವವನು.

ಬರಹ: ಲಕ್ಷ್ಮೀಶ ತೋಳ್ಪಾಡಿ

***

ನನ್ನಲ್ಲಿದ್ದ ಗಾಂಧಿಯನ್ನು ಚೆಂದ ಮಾಡಿಕೊಂಡೆ!

ಈ ವರ್ಷ ಏನಿಲ್ಲೆಂದರೂ ಎಪ್ಪತ್ತು ಪುಸ್ತಕಗಳನ್ನು ಓದಿದ್ದೇನೆ. ಎಲ್ಲವೂ ಕನ್ನಡದವು. ಜಾರಿಯಲ್ಲಿದ್ದ ಚೂರುಪಾರು ಓಡಾಟವನ್ನೂ ನಿಲ್ಲಿಸಿರುವ ನನಗೆ ಪುಸ್ತಕಗಳ ಓದು ಜಗತ್ತಿನ ಜೊತೆಯ ಮಾತುಕತೆ. ಈ ಎಲ್ಲ ಪುಸ್ತಕಗಳ ಜೊತೆಯಾಡಿದ ಮಾತುಕತೆ ಸಫಲವಾಗಿದೆ!

ನನ್ನ ತಿಳಿವಳಿಕೆಯನ್ನು ವಿಸ್ತರಿಸಿಕೊಳ್ಳಲು ಇವುಗಳಿಂದ ತುಸುವಾಗಿ ಬಹುವಾಗಿ ನಾನು ದೇಣಿಗೆ ಇಸುಕೊಂಡಿದ್ದೇನೆ. ಇವುಗಳಲ್ಲಿ ಹೊಸಬರ ಬರಹ ಭಲಾ ಭಲಾ, ಇನ್ನು ಕನ್ನಡಕ್ಕಳಿವಿಲ್ಲ ಎಂಬ ಭದ್ರತೆ ಕೊಟ್ಟಿವೆ. ಹಳಬರ ಬರಹ ನನ್ನನ್ನು ಅನೇಕ ಪೂರ್ವನಿಶ್ಚಿತ ಅಭಿಪ್ರಾಯಗಳ ಹಗ್ಗಕಟ್ಟಿನಿಂದ ಬಿಡಿಸಿವೆ. ಸಮಕಾಲೀನರ ಬರಹಗಳು ನನ್ನ ಹೆಬ್ಬಾವುತನವನ್ನು ಕದಲಿಸಿವೆ. ಈ ಎಲ್ಲಾ ‘ಎದೆಗೆ ಬಿದ್ದ ಅಕ್ಷರ’ಗಳಿಗೆ ಕೃತಜ್ಞೆ.

ಇವುಗಳಲ್ಲಿ ಈ ಕೆಳಕಂಡ ಪುಸ್ತಕಗಳನ್ನು ವಿಶೇಷವಾಗಿ ಪ್ರೀತಿಸಿದ್ದೇನೆ, ಮೆಚ್ಚಿದ್ದೇನೆ. ಬಹುಶಃ ಇವು ನಾನು ಮರೆಯಲಾರದ ಪುಸ್ತಕಗಳು.

ಗಾಂಧಿ - ಈ ವರ್ಷ ನಾಲ್ಕು ಹೊಸ ಗಾಂಧಿಗಳನ್ನು ಕಂಡೆ. ‘ಎಲ್ಲ ಮನುಷ್ಯರೂ ಸಹೋದರರು’ ಈ ಪುಸ್ತಕ ಗಾಂಧಿಯವರ ಆಯ್ದ ಲೇಖನಗಳ ಸಂಪಾದನೆ. 1958ರಲ್ಲಿ ವಿಶ್ವಸಂಸ್ಥೆಯು ಪ್ರಕಟಿಸಿದ ಇಂಗ್ಲಿಷ್‌ ಪುಸ್ತಕದ ಕನ್ನಡಾನುವಾದ (ಮರು ಮುದ್ರಣ: 2019). ಡಿ.ಎಲ್‌. ನರಸಿಂಹಾಚಾರ್‌ ಅವರ ಕನ್ನಡದ ಸೊಗಸು ‘ಸೀನೀರು ಕುಡಿದಂತೆ’. ಇಲ್ಲಿನ ಆಯ್ಕೆಯಲ್ಲಿ ಗಾಂಧಿಯ ಅನುಯಾಯಿಗಳು ಕಂಡ ಗಾಂಧಿ ಇದ್ದಾರೆ.

‘ನಾನು.... ಕಸ್ತೂರ್‌’ ಇದು ಡಾ.ಎಚ್‌.ಎಸ್‌.ಅನುಪಮಾ ಅವರ ಇತ್ತೀಚಿನ ಪುಸ್ತಕ. ಇಲ್ಲಿ ಹೆಂಡತಿ ಬಾ ಅವರು ಕಂಡ ಗಾಂಧಿ ಇದ್ದಾರೆ. ‘ಮಹಾತ್ಮ ಗಾಂಧಿ - ನನ್ನ ತಾತ’, ಇದು ಕುವೆಂಪು ಭಾಷಾಭಾರತಿಯ ಅನುವಾದ ಪುಸ್ತಕ. ಇಲ್ಲಿ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿಯವರು ಕಂಡ ಗಾಂಧಿ ಇದ್ದಾರೆ. ಪ್ರೊ.ಲಲಿತಾಂಬ ಅವರ ಅನುವಾದ.

‘ಗಾಂಧಿ: against whom am i fight?' ಇದು ರಾಜಶೇಖರ ಮಠಪತಿಯವರ ಪುಸ್ತಕ. ಗಾಂಧಿಯವರ ಕೊನೆಯ ದಿನಗಳ ವಿಶ್ಲೇಷಣೆಯ ಈ ಸಂಕಲನದಲ್ಲಿ ಕನ್ನಡ ಯುವ ಮನಸ್ಸೊಂದು 'ಕಂಡ ಗಾಂಧಿ ಇದ್ದಾರೆ.

ಈ ನಾಲ್ಕು ಪುಸ್ತಕಗಳನ್ನು ಓದಿದ ಮೇಲೆ, ಈಗಾಗಲೇ ಅನೇಕ ಸಲ ಓದಿದ್ದ ಗೊರೂರರ ಅನುವಾದ ‘ನನ್ನ ಸತ್ಯಾನ್ವೇಷಣೆ’ ಆತ್ಮಕಥೆಯನ್ನು ಮತ್ತೆ ಓದಿದೆ. ಇಲ್ಲಿರುವುದು ಗಾಂಧಿ ಕಂಡ ಗಾಂಧಿ. ಇವಿಷ್ಟೂ ಗಾಂಧಿಗಳನ್ನು ಈ ವರ್ಷ ‘ಕಂಡ’ ನಾನು ನನ್ನಲ್ಲಿದ್ದ ಗಾಂಧಿಯನ್ನು ಚೆಂದ ಮಾಡಿಕೊಂಡೆ. ಹೇಳಬಹುದಾದ್ದನ್ನು ಬಾಳಿ ಹೋದರು ಮಹಾತ್ಮ. ಅವರ ಬಾಳ್ವೆಯನ್ನು ಕುಯ್ದು ನೋಡುತ್ತಿರುವ ನಮಗೆ ಬಂಗಾರ ಸಿಕ್ಕಿದೆ, ಸಮಾಧಾನವಿಲ್ಲ! ಇಲ್ಲದ ಕಾಗೆ ಬಂಗಾರಕ್ಕೆ ಬಗೆಯುತ್ತಿದ್ದೇವೆ.

ಈ ಓದಿನಿಂದ ನಾನು ಹೇಳಬಯಸುವುದು ಇಷ್ಟನ್ನು. ಪ್ರಾಮಾಣಿಕತೆಯೆಂಬ ಎರಡಲಗಿನ ಕತ್ತಿಯ ಮೇಲೆ ನಡೆದ ಗಾಂಧಿದಾರಿಯೊಂದು ಸಿದ್ಧವಾಗಿದೆ ನಮಗಾಗಿ. ನಮ್ಮ ಕಾಲದ ಹೊಸ ಒತ್ತಡಗಳಿಗೂ ಆ ದಾರಿಯ ಹುಡುಕಾಟದಲ್ಲಿಯೇ ನಾವು ಪರಿಹಾರಗಳನ್ನು ಕಾಣಬಹುದಾಗಿದೆ. ಗಾಂಧಿಯನ್ನೂ ನಂಬದ ನಾವು ಆ ದಾರಿಯನ್ನೂ ಒದ್ದಿದ್ದು, ಬೇರೆ ದಾರಿಯನ್ನು ಹುಡುಕುವ ಪ್ರಾಮಾಣಿಕತೆಯನ್ನೂ ಕಳೆದುಕೊಂಡಿದ್ದೇವೆ. ಎಲ್ಲರೂ ‘ಗಾಂಧಿ’ಯನ್ನು ಓದಿ ಎಂಬುದೊಂದು ಹಳೆಯ ಪ್ರಾರ್ಥನೆಯ ಮರು ಉಚ್ಛಾರ ಮಾಡಬಹುದಷ್ಟೆ.

ಮತ್ತೆ ಮತ್ತೆ ನಾನು ಓದುವ ‘ಕುದಿ ಎಸರು’ ಎಂಬ ಹೆಂಗಸು ಕತೆ, ‘ನಾನು ಭಾರ್ಗವಿ’ ಎಂಬ ಹೆಂಗಸು ಕತೆ, ‘ಯಾವ ನಾಳೆಯೂ ನಮ್ಮದಲ್ಲ’ ಎಂಬ ಹೆಂಗಸು ಕತೆ, ‘ಕಣ್ಣಾಮುಚ್ಚೆ ಕಾಡೇಗೂಡೇ’ ಎಂಬ ಹೆಂಗಸು ಕತೆ, ‘ಬೆಂಕಿ ಬೆಡಗು’ ಎಂಬ ಹೆಂಗಸು ಕತೆ; ಇವಿಷ್ಟೂ ಹೆಂಗಸರ ಕತೆಗಳನ್ನು ಮತ್ತೆ ಓದಿದೆ. ನನ್ನನ್ನು ಯಾವತ್ತೂ ಇವು ತತ್ತರಗೊಳಿಸಿವೆ. ಏಟು ಕೊಟ್ಟು ತೀಡಿ ಒಪ್ಪ ಮಾಡಿವೆ. ಈ ಕತೆಗಳ ನಾಯಕಿಯರಾದ ವಿಜಯಕ್ಕ, ಭಾರ್ಗವಕ್ಕ, ಉಷಕ್ಕ, ಜಯಶ್ರೀ ಅಕ್ಕ, ಉಮಾಶ್ರೀ ಅಕ್ಕ ಎಂಬ ಹೆಂಗಸರ ಧಾರಣಶಕ್ತಿಗೆ ನಾನು ಮಣಿದಿದ್ದೇನೆ. ನೀವು ಯಾರದೇ ಆತ್ಮಕತೆಯನ್ನು ಓದಬಹುದು. ಇಷ್ಟಪಡಬಹುದು, ಪಡದೇ ಇರಬಹುದು. ಆದರೆ, ಅದು ಹೀಗಿರಬೇಕಾಗಿತ್ತು ಛೇ ಎಂದು ಉದ್ಧರಿಸುವ ಹಕ್ಕು ನಮಗಿದೆಯೆ?

ಇಲ್ಲದ ಹಕ್ಕನ್ನು ಸ್ಥಾಪಿಸಿಕೊಳ್ಳುವ ಭಂಡತನ ಇರಬಾರದು. ಈ ಕನ್ನಡದ ಹೆಂಗಸರ ಕತೆಗಳು ಕುವೆಂಪು, ಕಾರಂತರ ಕಾದಂಬರಿಗಳಂತೆ ಸದಾ ನನ್ನ ಕೈಯೆಟುಕಿನಲ್ಲೆ ಇರುತ್ತವೆ.

ಇತ್ತೀಚೆಗೆ ಪ್ರಕಟವಾದ ಎಂ.ಆರ್‌.ಕಮಲ ಅವರ ‘ಕಾಳನಾಮ ಚರಿತೆ’ಯ ಓದು ನನಗೆ ಬಹು ಖುಷಿ ಕೊಟ್ಟಿತು. ಮೇಲಿನ ಪುಸ್ತಕಗಳ ಓದು ಮನಸ್ಸಿನ ಸರ್ವಶಕ್ತಿಯನ್ನೂ ಹೀರಿ, ತದನಂತರವೂ ನಮ್ಮ ಧ್ಯಾನ ಅದರಲ್ಲೆ ಇರಿಸಿಕೊಳ್ಳುವಂತದ್ದು. ಕಮಲ ಅವರ ಪುಸ್ತಕದ ಓದು, ಹಗುರ ಹರಟೆಗಳ ಕಲರವದಲ್ಲಿ ಮನಸ್ಸನ್ನು ತಿಳಿನೀರ ಹರಿವಿಗೆ ನಿರ್ಯೋಚನೆಯಿಂದ ತೇಲಿ ಬಿಡುವ ತೆರದ್ದು. ಲೇಖಕಿಯರು ಹೀಗೆ ಯಾವ ವಾದಗಳನ್ಸೂ ತೊಡರುಗಾಲಾಗಿಸಿಕೊಳ್ಳದೆ, ಅದೇ ವೇಳೆಯಲ್ಲಿ ಸುತ್ತಲ ಜಗತ್ತಿಗೆ ಕಣ್ಣು ಮುಚ್ಚಿಕೊಳ್ಳದೆ ಬರೆಯುವುದು ನನಗೆ ಬಹಳ ಸೊಗಸೆನ್ನಿಸಿತು.

ಬರಹ: ಲಲಿತಾ ಸಿದ್ದಬಸವಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT