ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಪರಿಷತ್‌ನಲ್ಲಿ ಸಜ್ಜಾಗಿದೆ ಚಿತ್ರಸಂತೆ

ಜನವರಿ 5 ಭಾನುವಾರ
Last Updated 3 ಜನವರಿ 2020, 19:30 IST
ಅಕ್ಷರ ಗಾತ್ರ

ದೇಶದ ಹೆಸರಾಂತ ಕಲಾವಿದರು, ಉದಯೋನ್ಮುಖರ ಸೃಜನಶೀಲ ತುಡಿತದ ಸಾವಿರಾರು ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಲು ಚಿತ್ರ ಸಂತೆ ಒಂದು ವೇದಿಕೆ. ದೇಶ-ವಿದೇಶದ ಕಲಾಪ್ರೇಮಿಗಳಿಗೆ ಪ್ರತಿ ವರ್ಷದ ಮೊದಲ ವಾರಾಂತ್ಯ (ಶನಿವಾರ) ಅತ್ಯಂತ ನಿರೀಕ್ಷೆಯ ದಿನ.
ರಾಜ್ಯದ ಜನಪ್ರಿಯ ಚಿತ್ರ ಸಂತೆಯಾಗಿ ಇದು ಗಮನ ಸೆಳೆದಿದೆ. ಕಲಾಕೃತಿಗಳ ಮಾರಾಟ, ಪ್ರದರ್ಶನ ಏಕಕಾಲಕ್ಕೆ ನಡೆಯುವುದರಿಂದ ಚಿತ್ರಕಲಾ ಪರಿಷತ್‌ ‘ಚಿತ್ರಸಂತೆ’ಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ.

ಚಿತ್ರಸಂತೆ ಭಾನುವಾರ (ಜ.5) ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಲಿದೆ. ಚಿತ್ರಕಲಾ ಪರಿಷತ್‌ (ಸಿಕೆಪಿ) ಆವರಣ, ಕುಮಾರಕೃಪಾ ರಸ್ತೆ, ನಾರ್ತ್‌ಪಾರ್ಕ್‌ ರಸ್ತೆ, ಕ್ರೆಸೆಂಟ್‌ ರಸ್ತೆ ಇಕ್ಕೆಲ ಲಭ್ಯ ಜಾಗಗಳಲ್ಲಿ ಕಲಾಮಳಿಗೆಗಳಿಗೆ ಸಂಖ್ಯೆ ನಮೂದಿಸಿ ಸಜ್ಜುಗೊಳಿಸಲಾಗಿದೆ. 17ನೇ ವರ್ಷದ ಚಿತ್ರಸಂತೆ ರೈತರಿಗೆ ಸಮರ್ಪಿತ ಎನ್ನುವುದು ಅರ್ಥಪೂರ್ಣ.

ಸಂತೆಗೆ ಬೇಡಿಕೆ ಹೆಚ್ಚಿರುವುದರಿಂದ ಮಳಿಗೆಗಳ ಸಂಖ್ಯೆ ಹೆಚ್ಚಿದೆ. ಈ ಬಾರಿ 1,300 ಮಳಿಗೆಗಳಿಗೆ ಅವಕಾಶ ಕಲ್ಪಿಸಿರುವುದು ಗಮನಾರ್ಹ. ಆದರೆ, ಮಳಿಗೆಯ ಅಳತೆ ಚಿಕ್ಕದು. ಸ್ಥಳಾವಕಾಶ ಕಡಿಮೆ. ಸಿಗುವ ಪುಟ್ಟ ಜಾಗದಲ್ಲಿ ತಮ್ಮ ಕಲಾಕೃತಿಗಳನ್ನು ಹೊಂದಿಸಿಡಬೇಕಾದ ಅನಿವಾರ್ಯತೆ ಕಲಾವಿದರದು. ಇದು ಅವರಿಗೆ ಕೊಂಚ ಕಷ್ಟವಾಗಬಹುದು.

ಎಲ್ಲೆಡೆ ‘ಮಾರ್ಕೆಟ್‌ ಡೌನ್‌’ ಎನ್ನುವ ಮಾತು ಅನುರಣಿಸುತ್ತಿರುವುದು ಚಿತ್ರಸಂತೆಯನ್ನು ಬಾಧಿಸದು. ಕಲಾಕೃತಿಗಳು ಮಾರಾಟವಾಗುವ ಮತ್ತು ಭರ್ಜರಿ ಕಲೆಕ್ಷನ್‌ ಆಗುವ ಆಶಾಭಾವನೆ ಇದೆ ಎನ್ನುತ್ತಾರೆ ಸಂಘಟಕರು.

ಓಪನ್‌ ಗ್ಯಾಲರಿ ಪರಿಕಲ್ಪನೆ

‘ಈಗ ಸದ್ಯ ಆರ್ಟ್‌ ಮಾರ್ಕೆಟ್‌ ಬೂಮ್‌ ಇಲ್ಲ. ದೇಶದ ಮತ್ತು ಈ ಭಾಗದ ಚಿತ್ರಕಲಾವಿದರು ಚಿತ್ರಸಂತೆಯನ್ನು ನಂಬಿಕೊಂಡಿರುತ್ತಾರೆ. ಮುಂಬೈಯಂಥ ಮಹಾನಗರಗಳಲ್ಲಿ ಎಲ್ಲರಿಗೂ ಜಹಾಂಗೀರ್ ಆರ್ಟ್‌ ಗ್ಯಾಲರಿಯಲ್ಲಿ ಕಲಾಪ್ರದರ್ಶನದ ಅವಕಾಶ ಎಲ್ಲಿ ಸಿಗುತ್ತದೆ? ಅಲ್ಲಿ ದುಬಾರಿ ಬಾಡಿಗೆ ಬೇರೆ. ಅದನ್ನು ಭರಿಸಲು ಸಾಮಾನ್ಯ ಕಲಾವಿದನಿಗೆ ಸಾಧ್ಯವಾಗುವುದಿಲ್ಲ. ಈ ದೃಷ್ಟಿಯಿಂದ ದೇಶದ ಎಲ್ಲ ಕಲಾವಿದರಿಗಾಗಿ ಒಂದು ಓಪನ್‌ ಗ್ಯಾಲರಿ ಪರಿಕಲ್ಪನೆಯಲ್ಲಿ ಚಿತ್ರಸಂತೆಯನ್ನು ಚಿತ್ರಕಲಾ ಪರಿಷತ್‌ ಶುರು ಮಾಡಿತು. ಈಗ ಇದಕ್ಕೆ 17 ವರ್ಷಗಳು’ ಎನ್ನುತ್ತಾರೆ ಸಿಕೆಪಿ ಮಾಜಿ ಪ್ರಿನ್ಸಿಪಾಲ್‌ ಕುಲಕರ್ಣಿ.

ಸಂತೆಗೆ ಕಲಾಕೃತಿಗಳನ್ನು ತರುವಾಗ ಗುಣಮಟ್ಟದ ವರ್ಕ್‌ ಮಾಡಬೇಕು ಎನ್ನುವ ಪ್ರಜ್ಞೆ ಕಲಾವಿದರಿಗೆ ಇರಬೇಕು. ರೀವರ್ಕ್‌ ಅಥವಾ ಯಾವುದರದೋ ನಕಲು ಮಾಡಿ ಕಲಾಪ್ರೇಮಿಗಳನ್ನು ಯಾಮಾರಿಸುವುದು ಆಗಬಾರದು. ಪಶ್ಚಿಮ ಬಂಗಾಳದಿಂದ ಪ್ರತಿವರ್ಷ ಚಿತ್ರಸಂತೆಗೆ ಒಳ್ಳೆಯ ಲ್ಯಾಂಡ್‌ಸ್ಕೇಪ್‌ ಕಲಾಕೃತಿಗಳು ಬರುತ್ತವೆ. ಈ ಕಲಾವಿದರು ಕಮ್ಮಿ ಎಂದರೂ ಮೂರ್ನಾಲ್ಕು ಲಕ್ಷ ರೂಪಾಯಿ ಸಂಪಾದನೆ ಮಾಡಿಕೊಳ್ಳುತ್ತಾರೆ ಎನ್ನುವುದು ಕುಲಕರ್ಣಿ ಅವರ ಸಲಹೆ.

ಚಿತ್ರಸಂತೆಯಲ್ಲಿ ಅವಕಾಶ ಕೋರಿ ಹಲವರು ನೋಂದಣಿ ಮಾಡಿಕೊಳ್ಳಲು ಬರುತ್ತಾರೆ. ಬಂದವರಿಗೆಲ್ಲ ಅವಕಾಶ ನೀಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಆಯ್ಕೆ ಮಾಡುವುದು, ಸ್ಥಳಾವಕಾಶಕ್ಕೆ ಮಿತಿ ಹಾಕಿಕೊಳ್ಳಬೇಕಾದ್ದು ಅನಿವಾರ್ಯ. ಈ ಸಲವಂತೂ ತುಂಬ ಬೇಡಿಕೆ ಇದೆ. ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳ ಕಲಾವಿದರು ತಮ್ಮ ರಾಜ್ಯದ ಸಚಿವರುಗಳಿಂದ ಶಿಫಾರಸು ಪತ್ರಗಳನ್ನು ತರುವಷ್ಟರಮಟ್ಟಿಗೆ ಕ್ರೇಜ್‌ ಸೃಷ್ಟಿಯಾಗಿದೆ ಎನ್ನುತ್ತಾರೆ ಆಯೋಜಕರು.

ಹಿರಿಯ ಕಲಾವಿದರಿಗೆ ‘ಪ್ರೈಂ ಪ್ಲೇಸ್‌’

‘ಅತ್ಯಂತ ಪ್ರೌಢಿಮೆ ಇರುವ ಮತ್ತು ಕ್ರಿಯಾಶೀಲ ಕಲಾವಿದರಿಗೆ ಇಲ್ಲಿ ತುಂಬು ಹೃದಯದ ಸ್ವಾಗತವಿದೆ. ಕೆಲವು ಪ್ರಮುಖ ಹಿರಿಯ ಕಲಾವಿದರಿಗೆ ಸಂತೆಯ ಪ್ರಮುಖ ಜಾಗದಲ್ಲಿ (ಪ್ರೈಂ ಪ್ಲೇಸ್‌) ಮಳಿಗೆಗಳನ್ನು ನೀಡಲಾಗುತ್ತಿದೆ. ವಯಸ್ಸು 60 ಮೀರಿದ ಕಲಾವಿದರಿಗೆ ಅಂಥ 100ರಿಂದ 120 ಮಳಿಗೆಗಳನ್ನು ರೂಪಿಸಿಕೊಡಲಾಗುತ್ತಿದೆ. ಆದಷ್ಟು ಚಿತ್ರಕಲಾಪರಿಷತ್‌ನ ಒಳಭಾಗದಲ್ಲಿ ಅವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.ಸಂತೆಯಲ್ಲಿ ಮಾರಾಟವಾಗುವ ಕಲಾಕೃತಿಗಳಿಗೆ ಪರಿಷತ್‌ ಯಾವುದೇ ಕಮಿಷನ್‌ ಪಡೆಯುವುದಿಲ್ಲ. ಯಾವುದೇ ಮಧ್ಯವರ್ತಿಗಳಿಗೂ ಅವಕಾಶವಿರುವುದಿಲ್ಲ’ ಎಂದು ‘ಮೆಟ್ರೊ’ ಜೊತೆ ಮಾತನಾಡಿದ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌ ಖಡಾಖಂಡಿತವಾಗಿ ಹೇಳಿದರು.

ಚಿತ್ರಸಂತೆಯನ್ನು ಬೇರೆಡೆ ಸ್ಥಳಾಂತರ ಮಾಡುವ ಸಲಹೆಗಳಿವೆ. ಸಿಕೆಪಿ ಬ್ರ್ಯಾಂಡ್‌ , ಅದಕ್ಕೆ ಇರುವ ಅನನ್ಯತೆ ಸಂತೆಯ ಮೇಲೂ ಪ್ರಭಾವ ಬೀರಿದೆ. ಇದು ಪರಿಷತ್‌ಗೂ ಮತ್ತು ಒಟ್ಟಾರೆ ಕಲಾಪ್ರಪಂಚಕ್ಕೂ ಮುಖ್ಯ ಎನ್ನುತ್ತಾರೆ ಶಂಕರ್‌.

ರೈತರಿಗೆ ಸಮರ್ಪಣೆ

ಇಂದಿನ ತಲೆಮಾರಿಗೆ ಕೃಷಿ, ನೆಲ ಸಂಸ್ಕೃತಿ ಬಗ್ಗೆ ಅಷ್ಟೊಂದು ಅರಿವಿಲ್ಲ. ಅವರಲ್ಲಿ ಸಹಜವಾಗಿ ಮಣ್ಣಿನ ಜೊತೆಗಿನ ಭಾವಾನಾತ್ಮಕ ಸಂಬಂಧ ಹಾಸುಹೊಕ್ಕಾಗಿರಬಹುದು, ಅದನ್ನು ಬಡಿದೆಬ್ಬಿಸುವ ಅಗತ್ಯ ಇದೆ. ಕಲಾವಿದ್ಯಾರ್ಥಿಗಳಿಗೆ ಇದೆಲ್ಲದರ ಮಹತ್ವ ಅವರ ಸಂವೇದನೆಯ ಭಾಗವಾಗಬೇಕು. ಈ ಹಿನ್ನೆಲೆಯಲ್ಲಿ 17ನೇ ಚಿತ್ರಸಂತೆಯನ್ನು ರೈತರಿಗೆ ಸಮರ್ಪಿಸಲಾಗುತ್ತಿದೆ ಎನ್ನುತ್ತಾರೆ ಸಿಕೆಪಿ ಪ್ರಸ್ತುತ ಪ್ರಿನ್ಸಿಪಾಲ್‌ ತೇಜೇಂದರ್ ಸಿಂಗ್ ಭವಾನಿ.

ನಮ್ಮ ಈವರೆಗಿನ ಕಲಾ ಅಧ್ಯಯನ ಯುರೋಪಿಯನ್, ಅಮೆರಿಕನ್ ಆಧುನಿಕ ಕಲೆಯ ಸುತ್ತಲೇ ಹೆಚ್ಚು ನಡೆದಿದೆ. ನಾವು ಈಗ ನಮ್ಮ ಜನಪದ ಕಲೆ, ಸಂಸ್ಕೃತಿಗಳತ್ತಲೂ ಮುಖ ಮಾಡುತ್ತಿದ್ದೇವೆ. ಇದು ಮುಖ್ಯ ಕೂಡ. ಆಧುನಿಕ ಮತ್ತು ಪರಂಪರೆ ಎರಡನ್ನೂ ಈಗಿನ ಕಲಾಭ್ಯಾಸಿಗಳು ಹೆಚ್ಚಾಗಿ ದುಡಿಸಿಕೊಳ್ಳಬಹುದು. ಇದಕ್ಕೆ ಕಲಾಭ್ಯಾಸಿಗಳಲ್ಲಿ ಸಮರ್ಪಣಾ ಭಾವ ಬೇಕು. ಇಂದಿನವರು ಕಲೆ ಮತ್ತು ಕಲಾ ಜಗತ್ತನ್ನು ತುಂಬ ಹಗುರವಾಗಿ ಕಾಣುತ್ತಾರೆ. ರಸ್ಟಿಕ್ ಆದ ಸಂವೇದನೆಗಳಿಂದ ಹೆಚ್ಚು ದೂರ ಅನಿಸುತ್ತಾರೆ ಎನ್ನುವ ತೀವ್ರ ಕಾಳಜಿ ಭವಾನಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT