ಫೇಸ್‌ಬುಕ್ ಗೆಳತಿ ಬಾಳ ಸಂಗಾತಿಯಾದ್ಲು!

7

ಫೇಸ್‌ಬುಕ್ ಗೆಳತಿ ಬಾಳ ಸಂಗಾತಿಯಾದ್ಲು!

Published:
Updated:
Deccan Herald

ನನ್ನ ಬದುಕಿಗೆ ಹೀಗೊಂದು ತಿರುವು ಸಿಗುತ್ತದೆಂದು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಮದುವೆ ಎನ್ನುವ ಪದವೇ ಮರೀಚಿಕೆಯಾಗಿತ್ತು. ಕಾರಣ ಕೃಷಿಯನ್ನು ನಂಬಿ ಅದರೊಟ್ಟಿಗೆ ಬದುಕನ್ನು ಕಟ್ಟಿಕೊಂಡಿರುವ ನನಗೆ ಯಾವುದೇ ಸರ್ಕಾರಿ ಉದ್ಯೋಗ ಅಥವಾ ಆರ್ಥಿಕ ಮೂಲಗಳಿಲ್ಲದಿರುವುದು. ಜೊತೆಗೆ ನನ್ನ ತಂದೆಯವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದು ಮದುವೆಯ ಹಿನ್ನೆಡೆಗೆ ಕಾರಣವಾಗಿತ್ತು.

ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ನಾನು ತುಂಬಾ ಸಾಹಸದಿಂದ ಕೃಷಿ ಇಲಾಖೆ, ಸ್ವಯಂಸೇವಾ ಸಂಸ್ಥೆಯ ಯೋಜನೆಗಳಲ್ಲಿ ಕೆಲಸ ಮಾಡಿ ನನ್ನ ಜಮೀನಿನಲ್ಲಿ ಅಡಿಕೆ ತೋಟ, ಮನೆ ನಿರ್ಮಿಸಿಕೊಂಡು ಅಮ್ಮನೊಂದಿಗೆ ವಾಸಿಸುತ್ತಿದ್ದೆ. ಹೀಗೆ ಒಮ್ಮೆ ಸ್ನೇಹಿತರ ಒತ್ತಾಯದಿಂದ ಸಾಮಾಜಿಕ ಜಾಲತಾಣ ‘ಫೇಸ್ ಬುಕ್’ನಲ್ಲಿ ಖಾತೆ ತೆರೆದೆ. ವಿಭಿನ್ನ ಅಭಿರುಚಿಯವರು ಅಲ್ಲಿ ಪರಿಚಯವಾಗಿದ್ದರು. ಹೀಗೆ ದೂರದ ಬಂಧುವಿನ ಮೂಲಕ ಪರಿಚಯವಾದವರ ತಂಗಿ ಸಹ ಸ್ನೇಹಿತೆಯಾದಳು.

ನನ್ನ ಅಮ್ಮನಿಗೆ ನಾನು ಮದುವೆಯಾಗಲಿಲ್ಲವೆಂಬ ಚಿಂತೆ ಕಾಡಿದರೆ ನನಗೆ ಒಂಟಿತನ ಹಿಂಸೆಯಾಗುತ್ತಿತ್ತು. ಒಮ್ಮೆ ಅಮ್ಮ ಊರಿಗೆ ಹೋಗಿದ್ದಾಗ ನನ್ನ ಅತ್ತೆಯ ಮಗಳು ಬಂದು ಒಂದು ಹುಡುಗಿಯ ವಿಷಯ ಪ್ರಸ್ತಾಪಿಸಿದಳು. ಇಂತಹ ಬಹಳಷ್ಟು ಪ್ರಸ್ತಾಪಗಳು ಬಂದು ನಿರಾಸೆ ಅನುಭವಿಸಿದ್ದ ನಾನು ನಿರಾಸಕ್ತಿಯಿಂದಲೇ ಕೇಳಿಸಿಕೊಂಡೆ. ಆದರೆ ಆಕೆ ಹುಡುಗಿಯ ಹೆಸರು ಹೇಳಿದೊಡನೆ ನನ್ನ ಖುಷಿಗೆ ಪಾರವೇ ಇಲ್ಲದಾಯಿತು. ಆ ಹುಡುಗಿ ಮತ್ತಿನ್ಯಾರೋ ಆಗಿರದೇ ನನ್ನ ಫೇಸ್‌ಬುಕ್ ಗೆಳತಿಯಾಗಿದ್ದಳು. ಆಗಸ್ಟ್ 15ರಂದು ಹುಡುಗಿಯನ್ನು ನೋಡಲು ನಮ್ಮ ದಂಡು ಹೋಯಿತು. ನನ್ನನ್ನು ಹುಡುಗಿ ಒಪ್ಪುತ್ತಾಳೋ ಇಲ್ಲವೋ ಹೇಗೋ ಏನೋ ಎನ್ನುವ ಆತಂಕ! ಕೊನೆಗೂ ಫೇಸ್‌ಬುಕ್ ಚೆಲುವೆ ನನ್ನನ್ನು ಒಪ್ಪಿಯೇಬಿಟ್ಟಳು. ಕಳೆದ ಡಿಸೆಂಬರ್ 7ರಂದು ಸರಳವಾಗಿ ದೇವಸ್ಥಾನವೊಂದರಲ್ಲಿ ವಿವಾಹ ನಡೆಯಿತು.

ಸಮಾನ ಆಭಿರುಚಿಯುಳ್ಳ ಸುಂದರ ಚೆಲುವೆ ನನ್ನ ಬಾಳಸಂಗಾತಿಯಾದದ್ದು ಬಾನಚಂದಿರ ಕೈಗೆಟುಕಿದಷ್ಟು ಸಂತೋಷ ತಂದಿತು. ಈಗ ನಮ್ಮ ಬದುಕಲ್ಲಿ ಲವಲವಿಕೆ, ಉತ್ಸಾಹ, ಜೀವನಪ್ರೀತಿ ಇಮ್ಮಡಿಗೊಂಡಿದೆ. ಬದುಕು ಹಸಿರಿನಿಂದ ನಳನಳಿಸಿದೆ. ಕನಸಿನಂತೆ ನಡೆದ ಈ ಪ್ರಕ್ರಿಯೆಗಳನ್ನು ಕಂಡು ಮೂಕವಿಸ್ಮಿತನಾಗಿದ್ದೇನೆ. ಈಗಲು ನಂಬಲಾಗದೆ ಇದು ನಿಜವೇ ಎಂದು ಮೈಚಿವುಟಿಕೊಳ್ಳುತ್ತೇನೆ. ಫೇಸ್‌ಬುಕ್‌ನಿಂದ ನನ್ನ ಬಾಳಿಗೆ ಕಾಲಿರಿಸಿದ ನನ್ನ ಮುದ್ದು ಮಡದಿಯ ಮುಖವನ್ನು ನೋಡುತ್ತೇನೆ.

ಕಿರಣ್, ಹಳೇಹಳ್ಳಿ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !