ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಮ್ಮನ ಶ್ರುತಿ ಹುಡುಕುತ್ತ ಜನಪದದ ಓಣಿಗಳಲ್ಲಿ ಪಯಣ

Last Updated 8 ಮೇ 2020, 9:12 IST
ಅಕ್ಷರ ಗಾತ್ರ

‘ಅರ್ಬನ್‌ ಫೋಕ್‌ ಪ್ರಾಜೆಕ್ಟ್‌’ ಸಂಸ್ಥೆಯ ಶಿಲ್ಪಾ ಮುಡಬಿ ಮತ್ತು ಆದಿತ್ಯ ಕೊತಕೋಟ ಯಲ್ಲಮ್ಮನ ನಂಟು ಹಚ್ಚಿಕೊಂಡು ಅಲೆದಾಟದಲ್ಲಿ ನಿರತರಾಗಿರುವ ಕಲಾಶೋಧಕರು. ಯಲ್ಲಮ್ಮನ ಆಟ ಅವರಿಗೆ ಬರಿಯ ಒಂದು ಪ್ರದರ್ಶನವಾಗಿರದೆ, ನಮ್ಮ ಊರುಕೇರಿಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಜಾನಪದ ಜಗತ್ತಿನ ಜೀವಂತಿಕೆಗೆ ಮುಖಾಮುಖಿಯಾಗುವ ಮಾರ್ಗವಾಗಿದೆ. ಈ ಅನನ್ಯ ಜೋಡಿಯ ಕಲಾಪಯಣದ ಈ ಕಥನ, ದೇಸಿ ಕಲಾಪ್ರಕಾರಗಳತ್ತ ನಾವು ಹೊರಳಬೇಕಾದ ಅಗತ್ಯವನ್ನು ಮನಗಾಣಿಸುವಂತಿದೆ.

ಆಸ್ಟ್ರೇಲಿಯಾದಲ್ಲಿ ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದ ಶಿಕ್ಷಣ ಪೂರೈಸಿರುವ ಶಿಲ್ಪಾ ಮುಡಬಿ, ತಮ್ಮ ಸೃಜನಶೀಲತೆಯ ಅಭಿವ್ಯಕ್ತಿಯನ್ನಾಗಿ ಆರಿಸಿಕೊಂಡಿರುವುದು ಮಾತ್ರ ರಂಗಭೂಮಿಯನ್ನು. ಸಿನಿಮಾದ ಕೃತಕತೆಗಿಂತ ರಂಗಭೂಮಿಯ ಜೀವಂತಿಕೆಯ ಸೆಳೆತಕ್ಕೆ ಅವರು ಒಲಿದಿದ್ದಾರೆ.

ಬಣ್ಣದ ಮೋಹಕ್ಕೆ ಒಳಗಾದ ಅವರು ಆಸ್ಟ್ರೇಲಿಯಾದಿಂದ ಪಾಂಡಿಚೇರಿಗೆ ಬಂದು ನಾಟಕದ ಕಂಪನಿಯೊಂದರಲ್ಲಿ ಸೇರಿಕೊಂಡು ಅಭಿನಯಿಸತೊಡಗಿದರು. ಒಮ್ಮೆ ನಾಟಕವೊಂದರಲ್ಲಿ ಯಲ್ಲಮ್ಮನ ಆಟವನ್ನು ರಂಗಕ್ಕೆ ತಂದರು (ಬೆಳಗಾವಿ ಜಿಲ್ಲೆ ಸವದತ್ತಿ ಸಮೀಪದಲ್ಲಿರುವ ಯಲ್ಲಮ್ಮನ ಗುಡ್ಡದಲ್ಲಿ ನೆಲೆಸಿರುವ ಯಲ್ಲವ್ವ/ ರೇಣುಕಾ). ಆಗ ಹುಟ್ಟಿದ ಯಲ್ಲಮ್ಮನ ಸೆಳೆತ ಇಂದು ಜಾನಪದ ಜಗತ್ತಿನ ಮೂಲ ಸೆಲೆಯ ಸಂಶೋಧನೆಗೆ ಅವರನ್ನು ಹಚ್ಚಿದೆ. ಮೂಲತಃ ಗಾಯಕಿ–ನಟಿಯಾಗಿರುವ ಅವರು ಶಾಸ್ತ್ರೀಯ ಸಂಗೀತವನ್ನು ಬಿಟ್ಟು ಜನಪದ ಹಾಡುಗಳನ್ನು ಮೂಲಮಟ್ಟಿನಲ್ಲಿ ಹಾಡುತ್ತಾರೆ. ಆ ಗೀತೆಗಳನ್ನು ಆಸಕ್ತರಿಗೆ ಉಚಿತವಾಗಿ ಕಲಿಸುತ್ತಾರೆ. ಅದಕ್ಕಾಗಿ ತಮ್ಮ ಸಂಗಾತಿ ಆದಿತ್ಯ ಕೊತಕೋಟ ಜೊತೆಗೂಡಿ ‘ಅರ್ಬನ್‌ ಫೋಕ್‌ ಪ್ರಾಜೆಕ್ಟ್‌’ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ.

ಅಲೆದಾಟ ಆರಂಭ ಆಗಿದ್ದು ಹೀಗೆ...

ಅರ್ಬನ್‌ ಫೋಕ್‌ ಪ್ರಾಜೆಕ್ಟ್‌ (Urban Folk Project) ಹುಟ್ಟಿದ್ದು ಏಕೆ, ಅದರ ಆಶಯ ಏನಾಗಿತ್ತು ಎಂದು ಕೆದಕಿದರೆ ಶಿಲ್ಪಾ ತಮ್ಮ ಚೌಡಕಿಯ ಆಲಾಪದಿಂದಲೇ ತಮ್ಮ ಕನಸು ಮತ್ತು ಕನವರಿಕೆಗಳನ್ನು ಹಂಚಿಕೊಳ್ಳತೊಡಗಿದರು. ಅವರು ಸಾಗಿದ ಹಾಗೂ ಸಾಗಬೇಕು ಎಂದುಕೊಂಡಿರುವ ಹಾದಿಯ ನೋಟವನ್ನು ಅವರ ಮಾತುಗಳಲ್ಲೇ ಕೇಳಿ:

‘‘ಕಾನ್ವೆಂಟ್‌ ಶಿಕ್ಷಣ, ಆಂಗ್ಲೊ ಇಂಡಿಯನ್‌ ಮಿತ್ರರ ಒಡನಾಟದಲ್ಲಿ ಬೆಂಗಳೂರಿನಲ್ಲಿ ಬೆಳೆದವಳು ನಾನು. ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮುಡಬಿ ಎಂಬ ಹಳ್ಳಿ ನನ್ನೂರು. ಅಲ್ಲಿ ನನ್ನ ಅಜ್ಜ–ಅಜ್ಜಿ ಮನೆ ಇದೆ. ಅವರಿಬ್ಬರೂ ಜನಪದ ಕಲಾವಿದರು. ಅಜ್ಜಿ ಹಾಡು ಹೇಳಿದರೆ, ಅಜ್ಜ ಶಹನಾಯಿ–ಹಲಗಿ ಸೇರಿದಂತೆ ಕೆಲವು ವಾದ್ಯಗಳನ್ನು ನುಡಿಸುತ್ತಿದ್ದರು.

ಶ್ರುತಿ ಮುಡುಬಿ– ಆದಿತ್ಯ

ಎಲ್ಲೆಲ್ಲೋ ಅಲೆದಾಟದ ನಡುವೆ ನಮ್ಮೂರ ಲಿಂಕ್‌ ಮಿಸ್‌ ಆಗಿತ್ತು. ನನ್ನ ತಲೆಯಲ್ಲಿ ಯಲ್ಲಮ್ಮ ಬಂದು ಸೇರಿದ್ದರ ಪರಿಣಾಮ ಆ ಲಿಂಕ್‌ ಶೋಧಿಸಬೇಕು ಎಂದೆನಿಸಲು ಶುರುವಾಯಿತು. ಪಾಂಡಿಚೇರಿಯಲ್ಲಿ ಯಲ್ಲಮ್ಮನ ಆಟವನ್ನು ಹಲವು ಬಾರಿ ನಾವು ಆಡಿದೆವು. ನಾನೊಬ್ಬ ಕಲಾವಿದಳಾಗಿ ಯಲ್ಲಮ್ಮನನ್ನು ಹೊರ ನಿಂತು ನೋಡಿದ್ದನ್ನು– ಕಂಡಿದ್ದನ್ನು ಪರಿಚಯಿಸುತ್ತಿದ್ದೇನೆ; ಆದರೆ ಆಕೆಯೊಂದಿಗೆ ಅನುಸಂಧಾನ ಸಾಧ್ಯವಾಗಿಲ್ಲ. ಯಲ್ಲಮ್ಮನನ್ನೊಳಗೊಂಡು ಲೋಕವ್ಯವಹಾರವನ್ನು ರೂಪಿಸಲು ಸಾಧ್ಯವಾಗಿಲ್ಲ ಎನ್ನುವ ಪಾಪಪ್ರಜ್ಞೆ ಕಾಡತೊಡಗಿತು. ಆ ಕೊರತೆಯನ್ನು ನೀಗಿಸಿಕೊಳ್ಳುವ ಹಂಬಲವೇ ಪ್ರಸ್ತುತ ನನ್ನನ್ನು ಕೈ ಹಿಡಿದು ನಡೆಸುತ್ತಿದೆ.

ರಜೆಯಲ್ಲಿ ನಾವು ಮುಡಬಿಗೆ ಪ್ರತಿ ವರ್ಷ ಹೋಗುತ್ತಿದ್ದೆವು. ಮೂರು ವರ್ಷಕ್ಕೊಮ್ಮೆ ಲಕ್ಷ್ಮಿ ಪೂಜೆ ಮಾಡಿ, ಕುರಿ ಕಡಿದು ಭರ್ಜರಿ ಊಟವನ್ನು ಮಾಡಿಸುತ್ತಿದ್ದೆವು. ನಮ್ಮೂರ ಮಂದಿಗೆ ಆತಿಥ್ಯ ಎನ್ನುವುದು ಜೀವನವಿಧಾನವೇ ಆಗಿದೆ. ಆಗ ನಾನು ಕಂಡ ಯಲ್ಲಮ್ಮನ ಆಟದ ಅನುಭವವನ್ನು ನನ್ನ ಪ್ರದರ್ಶನಗಳಲ್ಲಿ ತೋರಿಸಿದ್ದೆ. ಹೀಗೆ ಮಾಡುತ್ತಿರುವಾಗ ಎದುರಾದ ಕೆಲವು ಸಮಸ್ಯೆಗಳಿಗೆ ಉತ್ತರ ಹುಡುಕಲು ಹೊರಟಾಗ ದೊರಕಿದ್ದೇ ‘ಅರ್ಬನ್‌ ಫೋಕ್‌ ಪ್ರಾಜೆಕ್ಟ್‌.’

ಯಲ್ಲಮ್ಮನ ಆಟವನ್ನು ಹುಡುಕುತ್ತಾ ನಮ್ಮೂರಿಗೂ ಬಂದೆವು. ಹೈದ್ರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕವನ್ನು ಸುತ್ತಿದೆವು. ಊರೂರು ಅಲೆಯುತ್ತಾ ಹಾವೇರಿ ಜಿಲ್ಲೆಯ ಸಮೀಪದಲ್ಲಿರುವ ಜಾನಪದ ವಿಶ್ವವಿದ್ಯಾಲಯ ಬಟಗೋಡಿಗೆ ಭೇಟಿ ನೀಡಿದೆವು. ಅಲ್ಲಿ ಪ್ರಾಧ್ಯಾಪಕರೊಬ್ಬರು ಒಂದಿಷ್ಟು ಮಾಹಿತಿ ನೀಡಿದರು. ‘ಯಲ್ಲಮ್ಮನ ಆಟ ಬಯಲಾಟ ಇದ್ದಂಗೆ. ಹೀಗೆ ಹುಡುಕಿಕೊಂಡು ಹೋಗುವುದರಿಂದ ಸುಮ್ಮನೆ ಪ್ರಯಾಸ. ಜೋಗತಿಯರನ್ನು ಭೇಟಿಯಾದರೆ ನಿಮಗೆ ಸಹಾಯ ಆಗಬಹುದು‘ ಎಂದರು. ಮಂಜಮ್ಮ ಎಂಬ ಜೋಗತಿ ಮರಿಯಮ್ಮನಹಳ್ಳಿಯಲ್ಲಿ (ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು) ಇರುತ್ತಾರೆ ಎಂದು ಅವರ ಬಗ್ಗೆ ವಿವರ ನೀಡಿದರು. ಗೊತ್ತುಗುರಿ ಇಲ್ಲದೆ ತಮಟೆ ಅಥವಾ ವಾದ್ಯಗಳ ಸದ್ದು ಕೇಳಿದ ಕಡೆ ಸಾಗುತ್ತಿದ್ದ ನಮ್ಮ ಪಯಣದ ಹಾದಿಗೊಂದು ದಿಕ್ಕು ದೊರೆಯಿತು.

ಇದು ಕ್ರಾಸ್‌ ಜೆಂಡರ್‌ ಕಲ್ಚರ್‌!

ಜೋಗತಿ ಮಂಜಮ್ಮ ಅವರ ಜೊತೆ ಶಿಲ್ಪಾ ಮತ್ತು ಆದಿತ್ಯ

ಮರಿಯಮ್ಮನ ಹಳ್ಳಿಯ ಮಂಜಮ್ಮ ದೈತ್ಯ ಪ್ರತಿಭೆ. ಅವರಿಂದ ಚೌಡಕಿ ಪದಗಳನ್ನು ಕಲಿಯುವ ಜೊತೆಗೆ ಸತ್ಯ ಶೋಧನೆಯ ದಿಕ್ಸೂಚಿಯನ್ನು ಪಡೆದುಕೊಂಡೆ. ಗ್ರಾಮಭಾರತ ಮೂಲ ಸ್ವರೂಪವನ್ನು, ಪರಂಪರೆಯನ್ನು, ಸಾಂಸ್ಕೃತಿಕ ಆಚರಣೆಗಳನ್ನು ನಮ್ಮ ಅಗತ್ಯ–ಅನುಕೂಲಕ್ಕೆ ತಕ್ಕಂತೆ ಟೈಲರ್‌ ಮೇಡ್ ಮಾಡಿಕೊಂಡಿರುವುದು ಅರಿವಿಗೆ ಬಂತು. ಯಲ್ಲಮ್ಮ ಕೇವಲ ದೇವರ ಮೂರ್ತಿ ಅಲ್ಲ. ಆಕೆಯ ಹಿಂದೊಂದು ದೀರ್ಘ ಪರಂಪರೆಯಿದೆ. ಜನರ ನಂಬಿಕೆಯಲ್ಲಿ ಅಸಂಖ್ಯಾತ ಐತಿಹ್ಯ ಪುರಾಣಗಳು ಜೀವಂತವಾಗಿವೆ. ಯಲ್ಲಮ್ಮನ ಚರಿತ್ರೆಯ ಮೌಖಿಕ ಪರಂಪರೆಯ ತಾಯಿಬೇರು ಚೌಡಕಿಪದದಲ್ಲಿ ಅಡಗಿದೆ. ಆಕೆಗೆ ತಮ್ಮನ್ನೇ ಅರ್ಪಿಸಿಕೊಂಡಿರುವ ಜೋಗಪ್ಪ, ಜೋಗಮ್ಮ, ದೇವದಾಸಿ, ಗೊಂದಲಿಗರು, ಲಿಂಗಪರಿವರ್ತಿತರು (ಕ್ರಾಸ್‌ ಜೆಂಡರ್‌) ಈಗಲೂ ತಾಯಿಬೇರನ್ನು ಉಳಿಸಿಕೊಂಡಿದ್ದಾರೆ. ಜೋಗತಿ ಸ್ವರೂಪವೇ ಲಿಂಗ ರೂಪಾಂತರ ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ.

ಪಾಂಡಿಚೇರಿಯಲ್ಲಿ ಯಲ್ಲಮ್ಮನ ಆಟ ಪರಿಚಯಿಸಿದಾಗ ಪುರುಷ ಮಹಿಳೆಯ ವೇಷವನ್ನೂ, ಮಹಿಳೆ ಪುರುಷನ ವೇಷವನ್ನೂ ಹಾಕಿಕೊಂಡು ಜೋಗಮ್ಮ–ಜೋಗಪ್ಪನ ಪಾತ್ರಗಳನ್ನು ನಿರ್ವಹಿಸಿದ್ದೆವು. ಗಂಡು–ಹೆಣ್ಣು ಎನ್ನುವ ಜೈವಿಕ ರೂಪ ಕಪ್ಪು–ಬಿಳುಪು ಇದ್ದಂತೆ ಅಲ್ಲ. ಒಂದು ರೀತಿಯಲ್ಲಿ ಅವು ಸ್ಪೆಕ್ಟ್ರಂ (ಏಕರೂಪ ಅಲ್ಲ) ಇದ್ದ ಹಾಗೆ. ಮೀಸೆ ಹಚ್ಚಿದ ತಕ್ಷಣ ನನ್ನಲ್ಲಿ ಗಂಡಸುತನ ಬರ್ತಿತ್ತು. ಸಹ ಕಲಾವಿದರಿಗೆ ಜೋರು ಮಾಡುವುದೇನು, ಕೀಟಲೆಯೇನು... ಭಾರಿ ಮಸ್ತಾಗಿತ್ತು ಆ ಹೊತ್ತು.

ಜನಪದರ ಆಟಕ್ಕೆ ‘ನಟ’ ಇಲ್ಲ!

ಜೋಗಮ್ಮ

ಜನಪದದಲ್ಲಿ ನಟ ಎಂಬ ವೃತ್ತಿಪರ ಅಥವಾ ಹವ್ಯಾಸಿ ಕಲಾವಿದ ಇರುವುದಿಲ್ಲ. ಆತ ವೃತ್ತಿಯಿಂದ ಬಡಗಿ, ಕಮ್ಮಾರ, ಕುಂಬಾರ, ಚಮ್ಮಾರ ಇನ್ನೇನೋ ಆಗಿರುತ್ತಾನೆ. ಹಬ್ಬದ ಸಂಭ್ರಮದಲ್ಲಿ ಊರ ರಂಗ ರಂಗೇರುತ್ತದೆ. ನಾಲ್ಕಾರು ದಿನದ ಉತ್ಸವದಲ್ಲಿ ತಿಂದುಂಡು, ಕುಡಿದು, ಕುಣಿದು ದೇವರಗುಡಿ ಮುಂದೆ ನಾಟಕ ಆಡಿ ಮುಗಿಸುವುದು ಸಂಪ್ರದಾಯವಷ್ಟೆ.

ಪೌರಾಣಿಕ ನಂಬಿಕೆಗಳು ಭೌಗೋಳಿಕ ಕಾರಣಕ್ಕೆ ಬದಲಾಗುತ್ತಾ ಸಾಗುತ್ತವೆ. ಸವದತ್ತಿಯಿಂದ ಯಲ್ಲಮ್ಮನ ಪುರಾಣ ಬೀದರ್‌ವರೆಗೆ ಪ್ರಯಾಣಿಸುವಷ್ಟರಲ್ಲಿ ಸಾಕಷ್ಟು ಬದಲಾಗುತ್ತದೆ. ಉಪಪುರಾಣಗಳು ಹುಟ್ಟಿಕೊಂಡಿರುತ್ತವೆ. ಒಂದೇ ನಾಟಕದಲ್ಲಿ ಇದನ್ನೆಲ್ಲ ತೋರಿಸಲಾಗುವುದಿಲ್ಲ. ಯಲ್ಲಮ್ಮನ ಸಾಂಪ್ರದಾಯಿಕ ಆಟವನ್ನು ನಗರದಲ್ಲಿ ತಂದರೆ ಅದು ವೇದಿಕೆಯ ಪ್ರಯೋಗ ಆಗುತ್ತದೆ. ವಾಸ್ತವದಲ್ಲಿ ಅದರ ಹುಟ್ಟು ರಂಗಸಜ್ಜಿಕೆಗೆ ಹೊಂದುವುದಿಲ್ಲ. ನನ್ನ ದೃಷ್ಟಿಯಲ್ಲಿ ಅದೆಲ್ಲ ಸಂಗ್ರಹಿಸಿ ಇಡುವಂತಹದ್ದೂ ಅಲ್ಲ. ಅದಕ್ಕೆ ಆಚರಣಾತ್ಮಕ ನಿರಂತರತೆ ಇರಬೇಕು. ಅದನ್ನು ಉಳಿಸಬೇಕು ಎಂದು ಹೊರಟರೆ ನನ್ನನ್ನು ನಾನು ಸನ್ಮಾನಿಸಿಕೊಳ್ಳಲು ಪ್ರಯತ್ನಿಸಿದಂತೆ ಅನ್ನಿಸುತ್ತದೆ. ನಾವು ಉಳಿಸಲು ಯಾರೂ ಅಲ್ಲ. ಏಕೆಂದರೆ ವಿಡಿಯೊ ಮಾಡಿ ಸಂಗ್ರಹಿಸಿ ಇಡುವುದು ಆಚರಣೆಯಲ್ಲಿ ಇಟ್ಟಂತೆ ಅಲ್ಲ. ಮೌಖಿಕ ಪರಂಪರೆ ನಮ್ಮ ಅಜ್ಜಿ ಹಾಡಿ, ಅದು ನನ್ನ ಮನಸಿಗೆ ಬಂದು, ನನ್ನ ಮನಸಿನಲ್ಲಿ ಕುಲುಕಿ ಹೊರಹೊಮ್ಮಿ ಬೇರೆ ರೂಪವನ್ನು ಪಡೆದುಕೊಳ್ಳುತ್ತದೆ. ಆಗ ಮಾತ್ರ ಅದರ ಸಾರ್ಥಕತೆ.

ಜನಪದವನ್ನು ಗಾಜಿನ ಡಬ್ಬಿಯಲ್ಲಿ ಇಟ್ಟು ಅದಕ್ಕೆ ಶಾಸ್ತ್ರೀಯ ಸ್ವರೂಪ ಕೊಟ್ಟು, ರೂಢಿಸಿಕೊಳ್ಳುವುದು ಕಷ್ಟವೆಂದು ಹೇಳುತ್ತಿದ್ದೇವೆ. ಆದರೆ, ಅದು ನಮ್ಮದು – ಅದಕ್ಕೂ ನಮಗೂ ಅನುವಂಶೀಯ ಸಂಬಂಧ ಇದೆ ಎನ್ನುವ ಪ್ರಜ್ಞೆಯನ್ನು ಜಾಗೃತ ಮಾಡಬೇಕು ಎನ್ನುವುದು ನನ್ನ ಭಾವನೆ. ನಮ್ಮ ಮ್ಯೂಸಿಕ್‌ ಸೆನ್ಸ್‌ ಕನೆಕ್ಟ್‌ ಆಗಲು ಕೆಲವು ತಲೆಮಾರು ಮಿಸ್‌ ಆಗಿವೆ. ಅದಕ್ಕೆ ಕಷ್ಟ ಎಂದು ಭಾವಿಸುತ್ತೇವೆ‌. ಅದನ್ನು ಪಳೆಯುಳಿಕೆಯಂತೆ ನೋಡಬಾರದು. ನಮ್ಮ ಪರಂಪರೆಯಲ್ಲಿ ಅಜ್ಜಿಯೋ ಅವರಜ್ಜಿಯೋ ಯಾರೋ ದೇವದಾಸಿ ಆಗಿರಬಹುದುದಾದ ಕಾರಣಕ್ಕೆ ಈ ಸಂಪ್ರದಾಯದ ಅಂಟು ನಮಗೆ ಬೆಸೆದಿದೆ ಎನ್ನುವ ನೋಟದಲ್ಲಿ ತಡಕಾಡಿದರೆ ಅದರ ನಂಟು ಸಿಗುತ್ತದೆ. ನಮ್ಮ ನೋಟ ಅಕಡೆಮಿಕ್ ಆದಾಗ ಒಂದೊಂದು ಶಬ್ದವನ್ನು ದಾಖಲಿಸುವಾಗ ಎಚ್ಚರಿಕೆ ವಹಿಸುತ್ತೇವೆ. ಅದೇ ಮೌಖಿಕ ರೂಪದಲ್ಲಿದ್ದಾಗ ಬೇರೆಯದೇ ಆಗಿರುತ್ತದೆ. ನಮಗೆ ಬಂದ ಹಾಗೆ ಮಾತನಾಡುತ್ತೇವೆ. ಆಗ ಎದುರಾಗುವ ಭಿನ್ನಾಭಿಪ್ರಾಯಗಳು ಅವರವರಿಗೆ ಮಾತ್ರ ಸೀಮಿತವಾಗುತ್ತವೆ. ಜಾನಪದವನ್ನೂ ಕೂಡ ಸಮಕಾಲೀನ ಸ್ವರೂಪವಾಗಿ ನೋಡಬಹುದು. ನನ್ನ ಹಾಡುಗಾರಿಕೆಯನ್ನು ಮರಾಠಿ–ಹಿಂದಿ ಭಾಷಿಗರೂ ಕೇಳುತ್ತಾರೆ. ಅವರಿಗೆ ತಾಳ ಮುಟ್ಟುತ್ತದೆ. ಅದು ನಮ್ಮದು ಎಂದು ಅನ್ನಿಸುತ್ತದೆ, ಅದಕ್ಕೆ ಕೇಳುತ್ತಾರೆ. ಸಂಗೀತ ತುಂಬ ಶಕ್ತಿಶಾಲಿ. ನಮ್ಮ ಜೀನ್‌ನಲ್ಲಿ ಹೇಗೋ ಅದು ಬಂದಿರುತ್ತದೆ.

ಜನಪದ ರಂಗಕ್ಕೆ ಅಭಿನಯಚತುರ ನಟರು ಬೇಕಿಲ್ಲ. ಚುರುಕಾಗಿ ಇರುವ ನಾಲ್ಕು ಜನ ಇದ್ದರೆ ಅವರ ಜೊತೆ ಸೇರಿಯೇ ಯಲ್ಲಮ್ಮನ ಆಟ ಆಡಬಹುದು. ನಮ್ಮೂರಲ್ಲಿ ರೇಣುಕಾ ಗುಡಿಮುಂದೆ ಆಟ ಮಾಡುತ್ತೇವೆ. ರೇಣುಕಾ ಪಾತ್ರ ಮಾಡುವ ಲಿಂಗಪರಿವರ್ತಿತ ಜೋಗತಿ ಮಾತು ಮಾತಿಗೂ ಬೈಯುತ್ತಾಳೆ. ಆಕೆಯ ಬೈಗುಳ ಒಂದೆರಡಲ್ಲ. ಸಮುದಾಯದ ನಡುವೆ ಆಕೆಯ ಬೈಗುಳಗಳು ನುಡಿಗಟ್ಟಿನಂತಾಗುತ್ತವೆಯೇ ವಿನಃ ನಿಂಘಟಿನ ಅರ್ಥದಲ್ಲಿ ಅವಾಚ್ಯ ಅಪಾರ್ಥವನ್ನು ಧ್ವನಿಸುವುದಿಲ್ಲ.

ಗಾನ ಕೋಗಿಲೆಗೆ ಕಬ್ಬನ್‌ ಕಾಡು!

ಯಲ್ಲಮ್ಮನ ಭಕ್ತರು

‘ಅರ್ಬನ್‌ ಫೋಕ್‌ ಪ್ರಾಜೆಕ್ಟ್‌’ ವೇದಿಕೆಯನ್ನು ಎರಡು ವರ್ಷದ ಹಿಂದೆ ನಾನು ಮತ್ತು ಆದಿ ಕಟ್ಟಿದೆವು. ಕಬ್ಬನ್‌ ಪಾರ್ಕ್‌ನಲ್ಲಿ ಜನಪದ ಹಾಡುಗಳನ್ನು ಹೇಳುತ್ತಾ ಆಸಕ್ತರಿಗೆ ಕಲಿಸತೊಡಗಿದೆವು. ಅದು ತೀರಾ ಅನೌಪಚಾರಿಕ ಗಾಯನ ಮತ್ತು ಕಲಿಕೆಯ ತರಗತಿ. ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನ ಬೆಳಿಗ್ಗೆ 8ರಿಂದ 9.30ರ ತನಕ ಚೌಡಕಿಪದ ಹಾಡುತ್ತಿದ್ದೆವು. ಲಾಕ್‌ಡೌನ್‌ ಕಾರಣಕ್ಕೆ ಆ ಹಾಡುಗಾರಿಕೆಯನ್ನು ಆನ್‌ಲೈನ್‌ಗೆ ವರ್ಗಾಯಿಸಿಕೊಂಡಿದ್ದೇವೆ. ಪ್ರತಿ ಭಾನುವಾರ ಆನ್‌ಲೈನ್‌ನಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದೇವೆ. ಅನಿಯಮಿತವಾಗಿ ಹಾಡುಗಳನ್ನೂ ಹಾಡುತ್ತೇವೆ. ಆದರೆ, ಪಾರ್ಕ್‌ನಲ್ಲಿ ಹಾಡುವ ಹಾಡುಗಳೇ ಬೇರೆ. ಬಯಲು ವಾತಾವರಣದಲ್ಲಿ ಚೌಡಕಿ ಪದದ ಖದರ್‌ ಬೇರೆಯೇ ಇರುತ್ತದೆ. ಅದನ್ನು ನಾಲ್ಕುಗೋಡೆಯ ಮಧ್ಯದಲ್ಲಿ ಹಾಡಿದರೆ ಶಬ್ದದ ಕಂಪನ ಹಿಂದಿರುಗಿ ಕೇಳುತ್ತದೆ.

ನಮ್ಮನ್ನು ಪ್ರಭಾವಿಸಿದ ಜನಪದ ಹಾಡುಗಾರರನ್ನು ನಾವು ಇಮಿಟೇಟ್‌ ಮಾಡುತ್ತೇವೆ. ಜನಪದದ ಮೂಲ ಗಾಯಕರು ನಮ್ಮಂತೆ ಮಾತಾಡಲ್ಲ, ನಮ್ಮಂತೆ ಇರುವುದೂ ಇಲ್ಲ. ನಾನು ನಮ್ಮ ಅಜ್ಜಿಯ ಟೋನ್‌ ಸಾಧ್ಯವಾದಷ್ಟು ತರುತ್ತೇನೆ. ನಮ್ಮ ಅಜ್ಜಿ ನಮ್ಮ ಸೋದರತ್ತೆ ಹಾಡುತ್ತಾರೆ. ಅವರಿಬ್ಬರ ಹಾಡಿನಲ್ಲಿಯೇ ಸಾಕಷ್ಟು ವ್ಯತ್ಯಾಸ ಇರುತ್ತದೆ. ನಾನೂ ಎರಡು ವರ್ಷ ಅಭ್ಯಾಸ ಮಾಡಿದ ನಂತರ ಒಂದಿಷ್ಟು ಹಾಡುತ್ತಿದ್ದೇನೆ. ಮೊದಲೆಲ್ಲ ಭಾವಗೀತೆ ಮಾದರಿಯಲ್ಲಿ ಚೌಡಕಿಪದ ಹಾಡಿದ್ದಿದೆ.

ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಯೋಜನೆಗೆ ಬದಲಾವಣೆ ತರಬೇಕು ಎಂದುಕೊಂಡಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ಕೆಲಸ ಹೇಳಿಕೊಡುವುದಕ್ಕೆ ಮಾತ್ರ ಸೀಮಿತವಾಗಿದೆ. ಸಂಶೋಧನೆಗೆ ಅವಕಾಶ ಇಲ್ಲಿಲ್ಲ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಯಾವುದಾದರೂ ಹಬ್ಬ–ಜಾತ್ರೆ ಇದ್ದರೆ ತಕ್ಷಣಕ್ಕೆ ಹೋಗಲು ಆಗುವುದಿಲ್ಲ. 600–800 ಕಿ.ಮೀ. ದೂರದಲ್ಲಿ ಇರುವ ನಾವು ಅಲ್ಲಿನ ಹಬ್ಬ ತಿಳಿದು ಹೋಗುವಷ್ಟರಲ್ಲಿ ಅದು ಮುಗಿದೇ ಹೋಗುತ್ತದೆ. ಆ ಕಾರಣಕ್ಕೆ ಮೂರು ವರ್ಷ ಕ್ಷೇತ್ರಕಾರ್ಯವನ್ನು ಗಂಭೀರವಾಗಿ ಮಾಡುವ ಉದ್ದೇಶದಿಂದ ಕಲಬುರ್ಗಿಯಲ್ಲಿ ನೆಲೆಸಲು ನಿರ್ಧರಿಸಿದ್ದೇವೆ.

ರಾಕ್‌ ಸ್ಟಾರ್‌ ರಾಧಕ್ಕ

ರಾಧಾ ರಾಕ್‌ ಸ್ಟಾರ್‌ ಆರ್ಟಿಸ್ಟ್. ಅವರ ಆರೋಗ್ಯ ಮೊದಲಿನಷ್ಟು ಚೆನ್ನಾಗಿಲ್ಲ. ಅವರ ಉತ್ಸಾಹಕ್ಕೆ ಆರೋಗ್ಯ ಸಹಕರಿಸುತ್ತಿಲ್ಲ. ಹಾಗಾಗಿ ಓಡಾಟಕ್ಕೆ ಬ್ರೇಕ್‌ ಹಾಕಿದ್ದಾರೆ. ಅವರ ಹಾಡುಗಾರಿಕೆಯನ್ನು ಕೇಳಿದರೆ ಯಾರಾದರೂ ಅವರ ಅವರ ಫ್ಯಾನ್‌ ಆಗಿಬಿಡುತ್ತಾರೆ. ನಾನು ಮೊದಲಬಾರಿ ಅವರ ಹಾಡು ಕೇಳಿದಾಗ ಮೈ ಕೂದಲುಗಳು ಮುಳ್ಳಿನಂತಾಗಿದ್ದವು. ಮಂಜಮ್ಮ ನನಗೆ ಅಕ್ಕೋರು, ಗುರುಗಳು ಕೂಡ. ಚೌಡಕಿ ಹಾಡು ಹೇಳಿಕೊಟ್ಟಿದ್ದಾರೆ. ನಾನು ಎರಡು ವರ್ಷ ಕಲಿತಿದ್ದೇನೆ.

ಒಮ್ಮೆ ಅವರ ಜೋಡಿ ಸೇರಿ ಕಾರ್ಯಾಗಾರ ಮಾಡಿದೆವು. ಅವರು ಎಲ್ಲರಿಗೂ ಪದಗಳನ್ನು ಹೇಳಿಕೊಟ್ಟರು. ಹೀಗೆಯೇ ಮಾಡುತ್ತಿರಬೇಕು ಎಂಬ ಆಶೆಯೂ ಇದೆ. ಆದರೆ ಅದಕ್ಕೆ ಶಿಬಿರಾರ್ಥಿಗಳನ್ನು ಎಲ್ಲಿಂದ ತರುವುದು? ಇಂತಹ ಕಲೆಯಲ್ಲಿ ಸಾಮಾನ್ಯವಾಗಿ ನಿಮ್ನ ವರ್ಗದ ಜನ ಇರುತ್ತಾರೆ. ಅವರು ಅವರ ಸಮುದಾಯದಲ್ಲಿಯೇ ಹುಡುಕುತ್ತಾರೆ. ನನ್ನ ಕನಸಿನಲ್ಲಿ ಜಾತಿ, ಧರ್ಮ, ವರ್ಗದ ಕಟ್ಟಳೆಯ ಆಚೆ ಜನಪದವನ್ನು ತೆಗೆದುಕೊಂಡು ಹೋಗಬೇಕು ಎಂದಿದೆ. ಆಂಗ್ಲೊ ಇಂಡಿಯನ್,‌ ಮುಸ್ಲಿಂ ಎಲ್ಲರಿಗೂ ‘ನಮ್ಮದು ಇದು’ ಎನ್ನುವ ಭಾವ ಮೂಡಿಸಬೇಕು.

ನಾನು ಜಾನಪದ ಜಗತ್ತಿನಲ್ಲಿ ಆವಿಷ್ಕಾರ ಮಾಡುತ್ತಿದ್ದೇನೆಯೇ ಹೊರತು ಜಾನಪದ ಗಾಯಕಿಯಾಗುವುದು ನನ್ನ ಪ್ರಯತ್ನವಲ್ಲ. ಅದಾಗಲು ಸಾಧ್ಯವೂ ಇಲ್ಲ. ಕಲಬುರ್ಗಿ ಇಲ್ಲವೆ ಬೀದರ್ ಕೇಂದ್ರವಾಗಿ ಇಟ್ಟುಕೊಂಡು ‘ಲೈವ್ ಜಾನಪದ ಮ್ಯೂಸಿಯಂ’ ಮಾಡುವ ಆಸೆಯಿದೆ. ಡೊಳ್ಳು, ಕರಡಿ ಮಜಲು ಸೇರಿದಂತೆ ಭಿನ್ನ ಪ್ರಕಾರಗಳ ಜನಪದ ಕಲಾವಿದರನ್ನು ಒಟ್ಟಾಗಿಸಿ ಪ್ರತಿ ವರ್ಷ ಒಂದುವಾರ ಹಬ್ಬವನ್ನು ಮಾಡುವ ಕನಸು ಅರ್ಬನ್‌ ಫೋಕ್‌ ಪ್ರಾಜೆಕ್ಟ್‌ ಹೊಂದಿದೆ.

ನಾವು ಒಂದು ಕುಟುಂಬ ಕಟ್ಟುತ್ತಿದ್ದೇವೆ. ನಮ್ಮ ಅಜ್ಜಂದಿರು, ಅಜ್ಜಿಯಂದಿರು, ಕಾಕ, ಮಾವ, ಅತ್ತೆ, ಚಿಕ್ಕವ್ವ, ದೊಡ್ಡವ್ವಂದಿರನ್ನು ಆ ಕುಟುಂಬಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಕಾರ್ಪೊರೇಟ್‌ ರೀತಿಯಲ್ಲಿ ನಾವು ಕಾರ್ಯಕ್ರಮ ರೂಪಿಸುವುದಿಲ್ಲ. ನಮ್ಮ ಕೆಲಸ ಶೋ ಮಾಡುವುದು ಅಲ್ಲ. ನಮ್ಮೂರ ಯಲ್ಲಮ್ಮನ ಆಟ ಹೇಗಿದೆಯೋ ಹಾಗೆಯೇ ನಾವು ಆಟಗಳನ್ನು ಮಾಡಬೇಕು. ಜನಪದದಲ್ಲಿ ಇದು ಸರಿ, ಅದು ತಪ್ಪು ಎನ್ನುವಂತಹದ್ದಿಲ್ಲ. ನಮ್ಮ ಬದುಕು, ನಮ್ಮ ಸಮುದಾಯದ ಎಳೆಗಳು ಅದರಲ್ಲಿ ಸೇರಿದರೆ ಅದಕ್ಕೆ ಮೌಲ್ಯ ಇದ್ದೇ ಇರುತ್ತದೆ ಎಂದು ನಾನು ನಂಬಿದ್ದೇನೆ.’’

ಶ್ರುತಿ ಸೇರಿದಾಗ...

ಆದಿತ್ಯ ಕೊತಕೋಟ ಮೂಲತಃ ಆಂಧ್ರ ಪ್ರದೇಶದವರು. ಶಿಲ್ಪಾ ಅವರೊಂದಿಗೆ ಅವರ ಪರಿಚಯವಾದುದು ಆಸ್ಟ್ರೇಲಿಯಾದಲ್ಲಿ. ಕಾಂಗರೂ ನಾಡಿಗೆ ಶಿಲ್ಪಾ ಸಿನಿಮಾ ಕಲಿಯಲಿಕ್ಕೆ ಹೋಗಿದ್ದರೆ, ಆದಿತ್ಯ ಅಕೌಂಟ್ಸ್‌ ಓದಲು ಬಂದಿದ್ದರು. ಪರಿಚಯ ಮದುವೆಯವರೆಗೂ ಬಂತು. ಆದಿತ್ಯ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್‌ ಆಗಿದ್ದರು. ‌ಈಗ ದಂಪತಿಗಳಿಬ್ಬರೂ ಜನಪದದ ಬೇರುಗಳನ್ನು ತಡಕುವುದರಲ್ಲಿ ಆಸಕ್ತರು.

ಆಸ್ಟ್ರೇಲಿಯಾದಿಂದ ಬಂದ ನಂತರ ಪಾಂಡಿಚೇರಿಯಲ್ಲಿ ರಂಗಭೂಮಿ ಸಂಸ್ಥೆಯೊಂದರಲ್ಲಿ ಕೆಲ ಕಾಲ ದುಡಿದ ಶಿಲ್ಪಾ, ಬೆಂಗಳೂರಿಗೆ ಬಂದ ನಂತರ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದರು. ನಿರ್ದೇಶಕ ಪಿ.ಎಚ್‌. ವಿಶ್ವನಾಥ್‌ ಸಹಾಯಕಿಯಾಗಿ ಕೆಲಸ ಮಾಡಿದ್ದಾರೆ. ಹಲವು ಸಾಕ್ಷ್ಯಚಿತ್ರಗಳನ್ನು ರೂಪಿಸಿದ್ದಾರೆ. ಪ್ರಸ್ತುತ ಜನಪದ ವಿದ್ಯಾರ್ಥಿನಿಯಾಗಿರುವ ಅವರು, ತಮಗೆ ತಿಳಿದ ಜನಪದ ಸಂಗೀತವನ್ನು ಆಸಕ್ತರಿಗೆ ಉಚಿತವಾಗಿ ಕಲಿಸುತ್ತಿದ್ದಾರೆ. ಲಾಕ್‌ಡೌನ್‌ ನಂತರ ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಪ್ರತಿದಿನ ಬೆಳಿಗ್ಗೆ ಅವರ ಅಭ್ಯಾಸ–ತರಗತಿಗಳು ನಡೆಯುತ್ತವೆ. ಬಿಡುವು ಇದ್ದವರು ಬಂದು ಸೇರಿಕೊಳ್ಳಬಹುದು ಎನ್ನುತ್ತಾರೆ. ಸದ್ಯಕ್ಕೆ, ಫೇಸ್‌ಬುಕ್‌ನಲ್ಲಿ ಅಭ್ಯಾಸ–ಕಲಿಕೆ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT