ಮಂಗಳವಾರ, ಆಗಸ್ಟ್ 16, 2022
21 °C

ಮುದುಡಿದ ಕಲೆ ಅರಳಿದಾಗ..: ಅವರ ನೆರವಿಗೆ ಇವರು ಬಂದರು

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಪ್ರದರ್ಶನ ಕಲೆಗಳ ಪಾಲಿಗೆ ಕೋವಿಡ್‌–19 ಒಂದು ರೀತಿಯಲ್ಲಿ ಸುಂಟರಗಾಳಿಯಾಗಿ ಪರಿಣಮಿಸಿತು. ಅನ್ನದ ಮಾರ್ಗ ಕಾಣದೆ, ಸ್ವಾಭಿಮಾನದ ಹಾದಿಯನ್ನೂ ಬಿಡದೆ ಸಾವಿರಾರು ಸಂಖ್ಯೆಯ ಕಲಾವಿದರು ಹಸಿದ ಹೊಟ್ಟೆಯಲ್ಲೇ ಜೀವನ ಸಾಗಿಸಬೇಕಾದ ಸಂದರ್ಭ ಸೃಷ್ಟಿಯಾಯಿತು. ಅವರ ಕಷ್ಟವನ್ನು ನೋಡಲಾಗದೆ ಹಲವು ಕಲಾವಿದರು, ಕಲಾ ಸಂಸ್ಥೆಗಳು ಸದ್ದಿಲ್ಲದೆ ನೆರವಿಗೆ ಧಾವಿಸಿದ ವಿವರಗಳು ಅಪ್ಪಟ ಮಾನವೀಯ ಕಥನಗಳು. ಜಗತ್ತು ನಿಧಾನವಾಗಿ ಮತ್ತೆ ಪ್ರದರ್ಶನ ಕಲೆಗಳಿಗೆ ದಾರಿ ಮಾಡಿಕೊಡುತ್ತಿರುವ ಈ ಹೊತ್ತಿನಲ್ಲಿ ಅಂತಹ ಮಾನವೀಯ ಕಥನಗಳ ಮೇಲೊಂದು ಹಿನ್ನೋಟ...

***

ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಡೊಳ್ಳು ಕುಣಿತ ಪ್ರದರ್ಶಿಸಿ ಪ್ರಸಿದ್ಧಿ ಪಡೆದಿದ್ದ ಜನಪದ ಕಲಾವಿದ ಅನಿಲ್‌ ಈಗ ಮಂಡ್ಯದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದಾರೆ. ಅಪರೂಪದ ಗಾರುಡಿಗೊಂಬೆ ಕಲೆ ಪೋಷಣೆ ಮಾಡಿದ್ದ ಎಚ್‌.ಎಂ.ಅನಿಲ್‌ಕುಮಾರ್‌ ಆಟೊ ಓಡಿಸುತ್ತಿದ್ದಾರೆ. ಪೂಜಾ ಕುಣಿತದಲ್ಲಿ ಪ್ರಸಿದ್ಧಿ ಪಡೆದಿದ್ದ ಸುರೇಶ್‌, ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಟೈಲರಿಂಗ್‌ ಮಾಡುತ್ತಿದ್ದಾರೆ. ಜನಪದ ಉತ್ಸವಗಳ ಸಂಘಟನೆ ಮಾಡುತ್ತಿದ್ದ ಶಂಕರೇಗೌಡ ತಮ್ಮೂರಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ.

ಜನಪದ ಕಲೆಗಳನ್ನೇ ನಂಬಿ ಬದುಕುತ್ತಿದ್ದ ಕಲಾವಿದರು ಕೋವಿಡ್‌ ಸಂಕಷ್ಟದಲ್ಲಿ ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಜಾನಪದ ಜಾತ್ರೆ, ದಸರಾ, ಯುವಜನೋತ್ಸವ, ಕನ್ನಡ ರಾಜ್ಯೋತ್ಸವ, ಜಯಂತಿಗಳು ಸ್ಥಗಿತಗೊಂಡಾಗ ಜನಪದ ಕಲಾವಿದರು ಅದರ ನೇರ ಪರಿಣಾಮ ಅನುಭವಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ನಡೆಯುವುದೂ ಸೇರಿದಂತೆ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಇಲ್ಲದಿದ್ದರೆ ಜನಪದ ಕಲಾವಿದರ ಹೊಟ್ಟೆ ತುಂಬುವುದಿಲ್ಲ. ಇಂತಹ ಕಾರ್ಯಕ್ರಮಗಳೇ ನಿಂತು ಹೋದಾಗ ಅನಿವಾರ್ಯವಾಗಿ ಅನ್ಯ ಉದ್ಯೋಗ ಮಾಡಬೇಕಾಯಿತು.

ಸಂಗೀತ, ನಾಟಕ ಕಾರ್ಯಕ್ರಮಗಳು ಈಗ ಸಣ್ಣ ಮಟ್ಟದಲ್ಲಿ ಆರಂಭಗೊಂಡಿವೆ. ಜಾತ್ರೆ, ಉತ್ಸವ, ಹಬ್ಬಗಳ ಜನಸಂದಣಿ ಮೇಲೆ ನಿಯಂತ್ರಣವಿರುವ ಕಾರಣ ಜನಪದ ಕಾರ್ಯಕ್ರಮ  ಇನ್ನೂ ಆರಂಭಗೊಂಡಿಲ್ಲ. ಹೀಗಾಗಿ ಕಲಾವಿದರ ಸಂಕಷ್ಟಮಯ ಬದುಕು ಮುಂದುವರಿದಿದೆ. ತಮಟೆ, ಡೊಳ್ಳು, ಡೋಲಕ್‌, ತಾಳ, ತಂಬೂರಿಗಳು ಮೂಲೆ ಸೇರಿದ್ದು ಕಲಾವಿದರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.

ಸಂಕಷ್ಟದಲ್ಲಿದ್ದ ಕಲಾವಿದರಿಗೆ ಸರ್ಕಾರ, ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿರುವುದು ಕಲಾವಿದರ ಬದುಕಿಗೆ ಜೀವ ತುಂಬಿದಂತಾಗಿದೆ. ಕರ್ನಾಟಕ ಜಾನಪದ ಪರಿಷತ್‌ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳ 10 ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ತಲಾ ₹ 2 ಸಾವಿರ ಧನಸಹಾಯ ವಿತರಿಸಲಾಗಿದೆ. ರಾಜ್ಯ ಸರ್ಕಾರ ಕಲಾವಿದರಿಗಾಗಿ ಬಿಡುಗಡೆ ಮಾಡಿದ ₹ 2 ಕೋಟಿ ಅನುದಾನದಲ್ಲಿ ಜನಪದ ಕಲಾವಿದರಿಗೂ ಪಾಲು ಸಿಕ್ಕಿದೆ.

‘ಕೋವಿಡ್‌ ಸಂಕಷ್ಟದಲ್ಲಿರುವ ಜನಪದ ಕಲಾವಿದರನ್ನು ಮೇಲೆತ್ತಲು ಅವರಿಗೆ ಕಾರ್ಯಕ್ರಮ ನೀಡಬೇಕಾಗಿದೆ. ಜನಪದ ಉತ್ಸವಗಳ ಆಯೋಜನೆ ಹಾಗೂ ತರಬೇತಿಗೆ ಎಲ್ಲಾ ಜಿಲ್ಲೆಗಳ ಒಂದೊಂದು ಕಲಾ ತಂಡಗಳಿಗೆ ಧನಸಹಾಯ ನೀಡಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ಜಾನಪದ ಪರಿಷತ್‌ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳುತ್ತಾರೆ.

ಆದಿಚುಂಚನಗಿರಿ ಮಠದ ಆವರಣದಲ್ಲಿ ಪ್ರತಿವರ್ಷ ನಡೆಸುತ್ತಿದ್ದ ಜಾನಪದ ಉತ್ಸವದಲ್ಲಿ ರಾಜ್ಯದ ಮೂಲೆಮೂಲೆಯಿಂದ ಬಂದ ಕಲಾವಿದರು ಕಾರ್ಯಕ್ರಮ ಕೊಡುತ್ತಿದ್ದರು. ಆದರೆ ಈ ಬಾರಿ ಉತ್ಸವ ಸರಳವಾಗಿ ನಡೆದ ಕಾರಣ ಕಲಾವಿದರಿಗೆ ವೇದಿಕೆ ದೊರೆಯಲಿಲ್ಲ. ಕಲಾವಿದರ ಸಂಕಷ್ಟ ಅರಿತ ಆದಿಚುಂಚನಗಿರಿ ಮಠ ಕಲಾವಿದರಿಗೆ ₹ 3 ಲಕ್ಷ ಧನ ಸಹಾಯ ನೀಡಿತು.

ಹುಬ್ಬಳ್ಳಿ–ಧಾರವಾಡ ಭಾಗದಲ್ಲಿ ಸಾವಿರಾರು ಜನಪದ ಕಲಾ ಪ್ರಕಾರಗಳು ಜೀವಂತವಾಗಿದ್ದು ಲಕ್ಷಾಂತರ ಮಂದಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಸಂಘಟನೆಯಲ್ಲಿರುವ, ಸರ್ಕಾರಿ ಉದ್ಯೋಗದಲ್ಲಿರುವ ಕಲಾವಿದರು ತಮ್ಮ ಕೈಯಿಂದ ಬಡ ಕಲಾವಿದರಿಗೆ ಸಹಾಯ ಮಾಡಿದ್ದಾರೆ. ಕಲೆಯಲ್ಲಿ ಆಸಕ್ತಿ ಇರುವ ಜನಪ್ರತಿನಿಧಿಗಳು ಹಣ, ಆಹಾರ ಸಾಮಗ್ರಿ ವಿತರಣೆ ಮಾಡಿದ್ದಾರೆ. ಇನ್ಫೊಸಿಸ್‌ ಸಂಸ್ಥೆ ವತಿಯಿಂದಲೂ ಜಾನಪದ ಕಲಾವಿದರಿಗೆ ಸಹಾಯ ಸಿಕ್ಕಿದೆ.

‘ಬಡ ಜನಪದ ಕಲಾವಿದರ ಮನೆ ಹುಡುಕಿಕೊಂಡು ಹೋಗಿ ಆಹಾರ ಧಾನ್ಯಗಳ ಕಿಟ್‌ ವಿತರಿಸಲಾಗಿದೆ. ಸಂಕಷ್ಟದಲ್ಲಿ ಒಬ್ಬರಿಗೊಬ್ಬರು ಸಹಾಯಕ್ಕೆ ಬಂದಿದ್ದಾರೆ. ಕಾರ್ಯಕ್ರಮಗಳು ಆರಂಭವಾದರೆ ನಮ್ಮ ಜೀವನ ನಡೆಯುತ್ತದೆ’ ಎಂದು ಕಲಾವಿದ ರಾಮು ಮೂಲಗಿ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು