ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟವರ್ಧನ ಮಹಾರಾಜರ ಯಶೋಗಾಥೆ

ಅಕ್ಷರ ಗಾತ್ರ

ಸ್ವಾತಂತ್ರ್ಯಪೂರ್ವದಲ್ಲಿ ಗ್ವಾಲಿಯರ್, ಮೈಸೂರು, ಹೈದರಾಬಾದ್‌, ಇಂದೋರ್‌, ಬರೋಡಾ, ಕೊಲ್ಹಾಪೂರ, ಸಂಡೂರ ಸಂಸ್ಥಾನಗಳು ಸೇರಿದಂತೆ ಒಟ್ಟು 465 ಸಂಸ್ಥಾನಗಳು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದವು. ಬೆರಳೆಣಿಕೆಯ ಪ್ರತಿಷ್ಠಿತ ಸಂಸ್ಥಾನಗಳಲ್ಲಿ ಜಮಖಂಡಿಯ ಪಟವರ್ಧನ ಮಹಾರಾಜರ ಸಂಸ್ಥಾನವೂ ಒಂದಾಗಿತ್ತು. ಇದು ಈಗ ಬಾಗಲಕೋಟ ಜಿಲ್ಲೆಯ ತಾಲ್ಲೂಕು ಕೇಂದ್ರ. ಹರ‍್ಬಟ್‌ಬಾಬಾ ಪಟವರ್ಧನ ಮಹಾರಾಜರು (1655ರಿಂದ 1750) ಸಂಸ್ಥಾನದ ಪೂರ್ವಜರಾಗಿದ್ದರು. 1811ರ ಬ್ರಿಟಿಷ್‌ ಇಂಡಿಯಾದಲ್ಲಿ ದೊಡ್ಡ ರಾಜ್ಯವಾಗಿದ್ದ ಸಂಸ್ಥಾನವು, 1923ರಲ್ಲಿ ತನ್ನದೇ ಆದ ಜಮಖಂಡಿ ಸ್ಟೇಟ್ ಲೆಜಿಸ್ಲೆಟಿವ್ ಅಸೆಂಬ್ಲಿ ಎಂಬ ಶಾಸನಸಭೆಯಿಂದ ಜನಪರ ರಾಜನೀತಿ ಬೋಧಿಸಿ, ಪ್ರಜೆಗಳಿಗೆ ಮೂಲಸೌಕರ್ಯ ಕೊರತೆಯಿಲ್ಲದೆ ಮಾದರಿಯಾಗಿತ್ತು.

1939ರಲ್ಲಿ ರಷ್ಟನ್ ಸ್ವಯಂಚಾಲಿತ ಎಂಜಿನ್‌ನಿಂದ ಬೀಸುವ ಗಿರಣಿ ಹಾಗೂ ನೀರೆತ್ತುವ ಪಂಪ್‌ಸೆಟ್‌ ಉಪಯೋಗಿಸುತ್ತಿದ್ದರು. ರಷ್ಟನ್ ಎಂಜಿನ್‌ಗೆ ಬಳಸುವ ಕಚ್ಚಾ ತೈಲವು ರೈಲ್ವೆ ವ್ಯಾಗನ್ ಮೂಲಕ ಕುಡಚಿ ಪಟ್ಟಣಕ್ಕೆ ಸರಬರಾಜಾಗುತ್ತಿತ್ತು. ಅಲ್ಲಿಂದ ಎತ್ತಿನಗಾಡಿಗಳ ಮೂಲಕ ಜಮಖಂಡಿಗೆ ಪೂರೈಕೆಯಾಗುತ್ತಿತ್ತು. 1912ರಲ್ಲಿ ಅರಸರು ತಮ್ಮ ವಾಸ್ತವ್ಯದ ಬ್ರಿಟಿಷ್‌ ಶೈಲಿಯ ವಿಶಾಲವಾದ ರಾಮತೀರ್ಥ ಅರಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಬಳಿಕ ಜಮಖಂಡಿ ಪಟ್ಟಣಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಜಮಖಂಡಿ ಯುರೋಪಿಯನ್ ಮಾದರಿ ಹಾಗೂ ಹರಪ್ಪ- ಮಹೆಂಜೋದಾರ ಪಟ್ಟಣ ಸಂಸ್ಕೃತಿಯ ಮೇಲೆ ರಚನೆಯಾಗಿತ್ತು. ಪಟ್ಟಣದಲ್ಲಿರುವ ಪ್ರತಿಯೊಂದು ಹಳೆಯ ರಸ್ತೆಗಳು + ಚಿನ್ನೆಯಂತೆ ರಚನೆಯಾಗಿರುವುದರಿಂದ ಇದಕ್ಕೆ ‘ಪಗಡಿ ಪಟ್ಟಿ ಬಜಾರ’ ಎಂದು ಕರೆಯುತ್ತಿದ್ದರು. ಇಂತಹ ಸೌಂದರ್ಯ ಹಾಗೂ ಸಂಪದ್ಭರಿತ ನಾಡಿನಲ್ಲಿ ಬ್ರಾಹ್ಮಣ ಸಂಪ್ರದಾಯದ ಪಟವರ್ಧನ ಮಹಾರಾಜರು, ಮೇಲ್ಜಾತಿಯ ಮಹಾರಾಜರು ಎಂಬ ಕಳಂಕ ತೊಲಗಿಸಲು 1890ರಲ್ಲಿ ಎಲ್ಲ ಜಾತಿಯ ಜನರಿಗೆ ಅರಮನೆ ಆವರಣದಲ್ಲಿ ಔತಣಕೂಟ ಏರ್ಪಡಿಸಿ ಜನಮನ್ನಣೆ ಗಳಿಸಿದ್ದರು.

ಜಮಖಂಡಿಯಲ್ಲಿ ಪ್ರಜೆಗಳ ಆರೋಗ್ಯಕ್ಕಾಗಿ ಸಿವಿಲ್ ಹಾಸ್ಪಿಟಲ್, ನಗರದ ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ಮುನ್ಸಿಪಾಲಿಟಿ ಸ್ಥಾಪಿಸಿದ್ದರು. ಜಮಖಂಡಿಯಲ್ಲಿ ಪರಶುರಾಮ ಭಾವುರಾವ್(ಪಿ.ಬಿ) ಹೈಸ್ಕೂಲ್, ಕುಂದಗೋಳದಲ್ಲಿ ಹರ‍್ಬಟ್ ಹೈಸ್ಕೂಲ್ ಮತ್ತು ಪುಣೆ ನಗರದಲ್ಲಿ (ಈಗ ಮಹಾರಾಷ್ಟ್ರ) ಸರ್ ಪರಶುರಾಮ್‌ ಭಾವು(ಎಸ್.ಪಿ) ಕಾಲೇಜು ಪ್ರಾರಂಭಿಸಿ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದರು. ಇಂದಿಗೂ ಪ್ರತಿವರ್ಷ ಜಮಖಂಡಿ ಸಂಸ್ಥಾನದ ಕಾರ್ಯಕ್ಷೇತ್ರದಲ್ಲಿನ 50 ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರದ ಪುಣೆಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ಶುಲ್ಕರಹಿತ ಶಿಕ್ಷಣ ಕೊಡುವ ವ್ಯವಸ್ಥೆ ಜಾರಿಯಲ್ಲಿದೆ.

ಇಲ್ಲಿನ ರಾಜರು ಕೃಷಿಗೆ ವಿಶೇಷವಾದ ಗಮನ ಕೇಂದ್ರೀಕರಿಸಿದ್ದರಿಂದ ಮಳೆ ನೀರನ್ನು ಹಂತ ಹಂತವಾಗಿ ಶೇಖರಿಸುವ ಕಟ್ಟೆ–ಕೆರೆಯನ್ನು ಆ ವೇಳೆಯೇ ನಿರ್ಮಿಸಿದ್ದಾರೆ. ವೈಜ್ಞಾನಿಕ ತಳಹದಿಯಲ್ಲಿ ನಿರ್ಮಿಸಿರುವ ಐತಿಹಾಸಿಕ ಆನೆಕೆರೆ, ಲಕ್ಕನಕೆರೆ, ಅಕ್ಕತಂಗೇರ ಬಾವಿ, ಸಕ್ಕರೆ ಬಾವಿ, ಗುಂಡ ಬಾವಿ, ಹೊಕ್ಕಳಬಾವಿ ಇಂದಿಗೂ ಜೀವಂತವಾಗಿವೆ. ಕೃಷಿಕರಿಗೆ ಜೀವನಾಡಿಗಳಾಗಿವೆ. ದನಕರುಗಳ ಖರೀದಿಗಾಗಿ ಪ್ರಸಿದ್ಧ ಅಮರಾಯಿ ಜಾತ್ರೆ ಆರಂಭಿಸಿದ್ದು ಅವರ ಹೆಗ್ಗಳಿಕೆ.

ಕ್ರೀಡೆಗಾಗಿ ಮಹಾರಾಜರು ವಿಶೇಷ ಪ್ರಾಧಾನ್ಯ ನೀಡಿದ್ದರು. ಆ ಸಮಯದಲ್ಲಿ ಬಿಲಿಯರ್ಡ್ಸ್ ಟೇಬಲ್ ಬೆಂಗಳೂರು ಹೊರತುಪಡಿಸಿದರೆ ಜಮಖಂಡಿಯಲ್ಲಿ ಮಾತ್ರ ಲಭ್ಯವಿತ್ತು. ಇದಲ್ಲದೆ ಪೋಲೋ ಮೈದಾನ, ಈಜುಕೊಳ, ಕುಸ್ತಿ ಕಣ (ಗರಡಿ ಮನೆ) ನಿರ್ಮಿಸಿದ್ದರು. ಟೆನಿಸ್ ಪ್ರಿಯರಾಗಿದ್ದ ಮಹಾರಾಜರು ಜಮಖಂಡಿಯಲ್ಲಿ ಇಂಗ್ಲೆಂಡ್ ಮಾದರಿಯ ಪುರುಷರ ಟೆನಿಸ್ ಅಂಕಣ, ರಾಣಿಯರ(ಮಹಿಳಾ) ಟೆನಿಸ್ ಅಂಕಣಗಳನ್ನೂ ನಿರ್ಮಿಸಿದ್ದಾರೆ. ಇವುಗಳ ಸಹಾಯದಿಂದ ಈ ಭಾಗದ ಕ್ರೀಡಾಪಟುಗಳು ಅಂತರರಾಷ್ಟ್ರೀಯಮಟ್ಟದಲ್ಲಿ ಮಿಂಚುತ್ತಿದ್ದಾರೆ.

ಮಹಾರಾಜರ ಜನಪರ ಕಾರ್ಯಕ್ರಮ ವೀಕ್ಷಿಸಲು ಶೃಂಗೇರಿಯ ಶಂಕರಾಚಾರ್ಯರು ಸಂಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಇಲ್ಲಿರುವ ಬ್ರಿಟಿಷ್‌ ಶೈಲಿಯ ರಾಮತೀರ್ಥ ಅರಮನೆ, ದರ್ಬಾರ್ ಹಾಲ್, ಗ್ರಂಥಾಲಯ, ವಿಶ್ರಾಂತಿ ಗೃಹಗಳು, ಸೈನಿಕರ ವಸತಿಗೃಹ, ಸಭಾಂಗಣ, ಭಾರತೀಯ ಶೈಲಿಯ ವಾಸ್ತು ಆಧಾರಿತ ನೀರಿನ ಹೊಂಡಗಳು, ಚಾಲುಕ್ಯ ಶೈಲಿಯ ದೇವಾಲಯಗಳು, ಐತಿಹಾಸಿಕ ಬಾವಿ- ಕೆರೆಗಳು, ಶಿಮ್ಲಾ ಮಾದರಿಯ ಮನಮೋಹಕ ನೋಟ, ಸ್ವಚ್ಛ ಪರಿಸರ, ಪರಿಶುದ್ಧ ವಾತಾವರಣ ಹಾಗೂ ಮೂಲಸೌಕರ್ಯಗಳಿಗೆ ಮನಸೋತು ಆಶೀರ್ವದಿಸಿದ್ದರು.

ಪಟವರ್ಧನ ಮಹಾರಾಜರ ಅರಮನೆ
ಪಟವರ್ಧನ ಮಹಾರಾಜರ ಅರಮನೆ

ಜಮಖಂಡಿಯ ಸುತ್ತಲೂ 12 ಜ್ಯೋತಿರ್ಲಿಂಗ ಮಾದರಿಯಂತೆ ಶಿವನ ದೇವಾಲಯಗಳು ಮತ್ತು ಈಶ್ವರ ಲಿಂಗಗಳು ಕಾಣಸಿಗುತ್ತವೆ. ಇಂದಿಗೂ ಎಲ್ಲ ಕಟ್ಟಡಗಳು ಸುಸಜ್ಜಿತವಾಗಿದ್ದು, ಸಾರ್ವಜನಿಕ ವೀಕ್ಷಣೆಗೆ ಲಭ್ಯವಿವೆ.

ಏಕೀಕರಣಕ್ಕೆ ಕೊಡುಗೆ
ಪಟವರ್ಧನ ಮಹಾರಾಜರ ಇನ್ನೊಂದು ತ್ಯಾಗವನ್ನು ಭಾರತೀಯರು ಮರೆಯಲಾರರು. ಅವರ ಅಪ್ರತಿಮ ತ್ಯಾಗದ ಫಲವಾಗಿ ಭಾರತ ಏಕೀಕರಣಗೊಂಡಿದೆ. 1947ಕ್ಕಿಂತ ಮುಂಚೆ ಜನತೆಯು ಬ್ರಿಟಿಷರ ಸಂಕೋಲೆಯಿಂದ ಭಾರತದ ಸಾರ್ವಭೌಮತ್ವವನ್ನು ಬಿಡಿಸಿಕೊಳ್ಳಲು ಚಳವಳಿ ನಡೆಸಿದರು. ಸ್ವಾತಂತ್ರ್ಯಾನಂತರ ದೇಶದಲ್ಲಿನ ಸಂಸ್ಥಾನಿಕರನ್ನು ಒಂದುಗೂಡಿಸಿ ಅಖಂಡ ಭಾರತದ ಏಕೀಕರಣ ವ್ಯವಸ್ಥೆಗೆ ಒಳಪಡಿಸುವುದು ಕೇಂದ್ರ ಸರ್ಕಾರಕ್ಕೆ ಸವಾಲಿನ ಕೆಲಸವಾಗಿತ್ತು.

ಭಾರತದ ಪ್ರಥಮ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರು ಸಂಸ್ಥಾನಗಳನ್ನು ನಿಯಂತ್ರಣದಲ್ಲಿಡಲು ಭಾರತದಲ್ಲಿರುವ ಸಂಸ್ಥಾನಗಳು ಏಕೀಕರಣ ವ್ಯವಸ್ಥೆಯಲ್ಲಿ ವಿಲೀನವಾಗಿರುತ್ತವೆ ಎಂದು ರಾಜ್ಯಪತ್ರದಲ್ಲಿ 1947ರ ಸೆಪ್ಟೆಂಬರ್‌ 30ರಂದು ಪ್ರಕಟಗೊಳಿಸಿದರು. ಸ್ವತಂತ್ರವಾಗಿ ರಾಜ್ಯಭಾರ ಮಾಡುವ ಆಸೆಯಿಂದ ಸಂಸ್ಥಾನಿಕರು ಏಕೀಕರಣ ಮಾಡುವ ಸರ್ಕಾರದ ಕ್ರಮವನ್ನು ವಿರೋಧಿಸಿದರು. ಇದರಿಂದ ದೇಶದಲ್ಲಿ ಒಡೆದು ಆಳುವ ನೀತಿ ಹಾಗೂ ಆಂತರಿಕ ಯುದ್ಧಗಳು ಸಂಭವಿಸುವ ಲಕ್ಷಣಗಳು ಗೋಚರವಾದವು.

ಮತ್ತೆ ದೇಶದಲ್ಲಿ ಪರಕೀಯರ ಆಗಮನವಾಗುವ ಆತಂಕವನ್ನು ಅರಿತ ಸರ್ದಾರ ವಲ್ಲಭಭಾಯಿ ಪಟೇಲ್ ಮತ್ತು ಜವಾಹರಲಾಲ್ ನೆಹರೂ ನೇತೃತ್ವದಡಿ ದೇಶದಾದ್ಯಂತ ಸಂಚರಿಸಿ ಆಳ್ವಿಕೆ ನಡೆಸುತ್ತಿದ್ದ ರಾಜ- ಮಹಾರಾಜರುಗಳಿಗೆ ಅಖಂಡ ಭಾರತದ ಒಗ್ಗಟ್ಟಿನ ಕುರಿತಾಗಿ ಮನವರಿಕೆ ಮಾಡಲು ಪ್ರಾರಂಭಿಸಿದರು. ತಾವು ಆಳುತ್ತಿದ್ದ ರಾಜ್ಯವನ್ನು ಏಕೀಕರಣಕ್ಕಾಗಿ ಬಿಟ್ಟುಕೊಡಲು ನಿರಾಕರಿಸಿದ ಸಂಸ್ಥಾನಿಕರು, ಸ್ವಾತಂತ್ರ್ಯ ಹೋರಾಟಗಾರರ ಕುರಿತು ಅಧಿಕಾರದಾಸೆಯ ತಪ್ಪುಕಲ್ಪನೆಯನ್ನು ರಾಜರಲ್ಲಿ ಹರಡಿಸಿ ಸಂಘಟಿತರಾದರು. ಮತ್ತಷ್ಟು ಬಿಗಡಾಯಿಸಿದ ಕ್ಲಿಷ್ಟ ಪರಿಸ್ಥಿತಿಯಿಂದ ಅಸಹಾಯಕರಾದ ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣಕ್ಕಾಗಿ ಸಂಸ್ಥಾನಿಕರಿಗೆ ಕಟ್ಟುನಿಟ್ಟಾದ ಸಂವಿಧಾನ ಹಾಗೂ ಕಾನೂನುಗಳು ಬಂಧನಕಾರಿಯಾಗಿ ಇರಲಿಲ್ಲವಾದ್ದರಿಂದ ಏಕೀಕರಣದ ಕಲ್ಪನೆ ಕೈಬಿಡಲು ನಿರ್ಧರಿಸಿದರು.

ಒಮ್ಮೆ ಆಕಸ್ಮಿಕವಾಗಿ ಜಮಖಂಡಿಯ ಪಟವರ್ಧನ ಮಹಾರಾಜರ ಭಾರತ ನೆಲದ ಪ್ರೇಮತ್ವ ಗುರುತಿಸಿದ ಸ್ವಾತಂತ್ರ್ಯ ಹೋರಾಟಗಾರರು, ಮಹತ್ವಾಕಾಂಕ್ಷೆಯ ಏಕೀಕರಣದ ಪರಿಕಲ್ಪನೆಯ ಕೊನೆಯ ಪ್ರಯತ್ನವಾಗಿ ಪಟವರ್ಧನ ಮಹಾರಾಜರನ್ನು ಭೇಟಿ ಮಾಡಲು ಜಮಖಂಡಿಗೆ ಪ್ರವೇಶಿಸಿದರು. ರಾಜಭಟರ ಮೂಲಕ ಅರಸರಿಗೆ ಮಾಹಿತಿ ರವಾನಿಸಿದರು. ವಿಷಯ ತಿಳಿದು ಆನಂದಭರಿತರಾದ ಪಟವರ್ಧನ ಮಹಾರಾಜರು, ಹೋರಾಟಗಾರರ ಕೆಚ್ಚೆದೆಯ ಹೋರಾಟವನ್ನು ಸ್ಮರಿಸಿದರು. ಸಂಸ್ಥಾನದಾದ್ಯಂತ ಡಂಗೂರ ಸಾರಿಸಿ ಆನೆ- ಕುದುರೆಗಳ ಭವ್ಯ ಮೆರವಣಿಗೆಯ ಮುಖಾಂತರ ಸ್ವಾಗತಿಸಿದರು.

ದೇಶದಾದ್ಯಂತ ಭೇಟಿ ಕೊಟ್ಟಾಗ ಯಾವುದೇ ಸಂಸ್ಥಾನಿಕರು ಸ್ವಾತಂತ್ರ್ಯ ಹೋರಾಟಗಾರರಿಗೆ ಹೀಗೆ ಸ್ಪಂದಿಸಿರಲಿಲ್ಲ. ಮಹಾರಾಜರ ಆತಿಥ್ಯವನ್ನು ಪ್ರೀತಿಯಿಂದ ಸ್ವೀಕರಿಸಿದ ಹೋರಾಟಗಾರರು, ಸರಳ ಜೀವನಶೈಲಿ ಮತ್ತು ಕಾಳಜಿಪೂರ್ವಕ ಮಧುರ ಬಾಂಧವ್ಯ ಕಂಡು ಮೂಕವಿಸ್ಮಿತರಾದರು.

ಮಹಾರಾಜರು ಹೋರಾಟಗಾರರ ಕುಶಲೋಪರಿ ಹಾಗೂ ಇಲ್ಲಿಗೆ ಬಂದ ಕಾರಣವನ್ನು ವಿಚಾರಿಸಿದರು. ಹೋರಾಟಗಾರರು ಅಖಂಡ ಭಾರತದ ಏಕೀಕರಣದ ಪರಿಕಲ್ಪನೆ ಮತ್ತು ಸದ್ಯದ ಪರಿಸ್ಥಿತಿಯಿಂದ ಮುಂದಾಗುವ ಅನಾಹುತವನ್ನು ಬಿಡಿಸಿಟ್ಟರು. ಪಟವರ್ಧನ ಮಹಾರಾಜರು ತದೇಕಚಿತ್ತದಿಂದ ಆಲಿಸುತ್ತ ಏಕೀಕರಣದ ಅವಶ್ಯಕತೆಯನ್ನು ಅರಿತುಕೊಂಡರು. ಭಾರತದಲ್ಲಿನ ಸಾಮಂತ- ಸಂಸ್ಥಾನಿಕರೆಲ್ಲ ಏಕೀಕರಣ ವ್ಯವಸ್ಥೆಯಲ್ಲಿ ಒಳಗೊಳ್ಳದಿದ್ದರೆ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ ಕಂಡು ಬ್ರಿಟಿಷರಂತೆ ಮತ್ತೊಬ್ಬ ಪರಕೀಯರು ತಮ್ಮ ಮೇಲೆ ಹಿಡಿತ ಸಾಧಿಸುತ್ತಾರೆ ಎಂದು ಮುಂದಾಲೋಚನೆ ಮಾಡಿದರು. ಕೆಲವು ಜನಪರ ಷರತ್ತುಗಳೊಂದಿಗೆ ತಮ್ಮ ಅಖಂಡ ಸಾಮ್ರಾಜ್ಯವನ್ನು ಭಾರತದ ಏಕೀಕರಣಕ್ಕಾಗಿ ತ್ಯಾಗ ಮಾಡಲು ಐತಿಹಾಸಿಕ ನಿರ್ಧಾರ ಕೈಗೊಂಡರು. ಈ ವಿಷಯವನ್ನು ಸ್ವಾತಂತ್ರ್ಯ ಹೋರಾಟಗಾರರು ಮಹಾರಾಜರ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿದರು.

ಕುಡಚಿ- ಬಾಗಲಕೋಟ ರೈಲು, ಜಂಬಗಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಸೇತುವೆ ನಿರ್ಮಾಣ, ಜಮಖಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಷರತ್ತುಗಳೊಂದಿಗೆ ಅಂದಿನ ಗೃಹ ಸಚಿವ ವಲ್ಲಭಭಾಯಿ ಪಟೇಲ್‌ ಅವರ ಸಮ್ಮುಖದಲ್ಲಿ ಪರಶುರಾಮ ಶಂಕರರಾವ್ ಪಟವರ್ಧನ ಮಹಾರಾಜರು ಜಮಖಂಡಿ ಸಂಸ್ಥಾನವನ್ನು ದೇಶದಲ್ಲಿಯೇ ಪ್ರಥಮವಾಗಿ ಏಕೀಕರಣದಲ್ಲಿ ವಿಲೀನಗೊಳಿಸಿ ಇತಿಹಾಸ ನಿರ್ಮಿಸಿದರು.

ಪಟವರ್ಧನರ ಐತಿಹಾಸಿಕ ನಿರ್ಧಾರದಿಂದ ದೇಶದಲ್ಲಿನ ಸಂಸ್ಥಾನಿಕರು ಬೆಚ್ಚಿಬಿದ್ದರು. ಸ್ವತಃ ಪಟವರ್ಧನ ಮಹಾರಾಜರ ಸಹೋದರು ಹಾಗೂ ಬಂಧುಗಳಿಂದಲೂ ವಿರೋಧ ವ್ಯಕ್ತವಾಯಿತು. ನಿರ್ಧಾರ ವಾಪಸ್ ಪಡೆಯುವಂತೆ ಮಹಾರಾಜರಿಗೆ ಒತ್ತಡ ತರಲಾಯಿತು. ಜೀವ ಬೆದರಿಕೆಯನ್ನೂ ಹಾಕಲಾಯಿತು. ಇದಕ್ಕೆ ಹೆದರದ ಮಹಾರಾಜರು ವಿಲೀನಗೊಳಿಸುವಿಕೆಯ ಹಿಂದಿರುವ ಮಹತ್ವವನ್ನು ಸಾರ್ವಜನಿಕವಾಗಿ ಡಂಗೂರ ಸಾರಿಸಿ ಮನವರಿಕೆ ಮಾಡಿಕೊಟ್ಟರು. ಪಟವರ್ಧನ ಮಹಾರಾಜರು ಅಖಂಡ ಭಾರತದ ಏಕೀಕರಣ ವ್ಯವಸ್ಥೆಯ ಮೂಲ ಕಾರಣಿಕರ್ತರಾಗಿದ್ದಾರೆ.

ಅಂದಿನ ಜವಾಹರಲಾಲ್ ನೆಹರೂ ಸರ್ಕಾರ ಪಟವರ್ಧನರ ಕೊಡುಗೆ ಪರಿಗಣಿಸಿ ಹಲವಾರು ಹುದ್ದೆಗಳನ್ನು ನಿರ್ವಹಿಸಲು ವಿನಂತಿಸಿಕೊಂಡಿತು. ಮನೆಯ ಬಾಗಿಲಿಗೆ ಬಂದ ಅಧಿಕಾರಗಳನ್ನು ವಿನಯದಿಂದಲೇ ತಿರಸ್ಕರಿಸಿದರು. ಅಸಮಾಧಾನಗೊಂಡ ಸಾಮಂತ- ಸಂಸ್ಥಾನಿಕರಿಗೆ ಸರ್ಕಾರದ ಹುದ್ದೆ ಕೊಡಿಸುವಲ್ಲಿ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT