ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ್ತೋಟ ಮಂಜುನಾಥ ಭಾಗವತ: ಒಲಿದಂತೆ ಹಾಡು ನುಡಿದಂತೆ ಬಾಳು

Last Updated 7 ಜನವರಿ 2020, 11:06 IST
ಅಕ್ಷರ ಗಾತ್ರ

300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನಕ್ಕಾಗಿ ಇಡೀ ಬದುಕನ್ನೇ ಸಮರ್ಪಿಸಿದವರು. ಅವರ ಬಗ್ಗೆ2019ರಆಗಸ್ಟ್ 4ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಬರಹ

ಹೊಸ್ತೋಟ ಮಂಜುನಾಥ ಭಾಗವತರನ್ನು ಎಲ್ಲರೂ ಅವಧೂತರೆಂದೇ ಪರಿಗಣಿಸುತ್ತಾರೆ. ಅಪಾರ ಜ್ಞಾನ, ಮೌನ ವ್ರತ ಮತ್ತು ಆಸೆ ರಹಿತವಾದ ಅವರ ಜೀವನಶೈಲಿ ನನ್ನಲ್ಲಿ ಬಹಳ ಕುತೂಹಲ ಮೂಡಿಸಿತ್ತು. ಹಾಗೆಂದೇ ಅವರ ಕುಟೀರವನ್ನು ಹುಡುಕಿಕೊಂಡು ಹೋದರೆ, ತಮ್ಮ ಕುರಿತ ನಂಬಿಕೆಗಳನ್ನೆಲ್ಲ ಒಮ್ಮೆಗೇ ಸುಳ್ಳು ಮಾಡಿಬಿಡುವವರಂತೆ – ‘ಅವಧೂತ ಅಂತೆಲ್ಲ ನನ್ನ ಬಗ್ಗೆ ಬರೀತಾರೆ, ಎಂತದೂ ಇಲ್ಲ’ ಎಂದು ಬಲಗೈಯನ್ನು ಕೊಡವಿಬಿಟ್ಟರು.

ಸೌಕರ್ಯವನ್ನೂ ಕೀರ್ತಿಯನ್ನೂ ಆಶಿಸುವುದು ಮನುಷ್ಯ ಸಹಜ ಗುಣ. ಹಿಂದಿನ ಕಾಲದಲ್ಲಿ ಎಷ್ಟೋ ಮಂದಿ ಇವೆರಡನ್ನೂ ನಿರಾಕರಿಸಿ ಸಂತೃಪ್ತಿಯಿಂದ ಬಾಳಿದ್ದರು. ಆದರೆ ಈಗ ಅಂತಹವರು ಬಹಳ ಅಪರೂಪ. ಹೊಸ್ತೋಟ ಮಂಜುನಾಥ ಭಾಗವತರು ಸೌಕರ್ಯ ಮತ್ತು ಕೀರ್ತಿ ಎರಡನ್ನೂ ನಿರಾಕರಿಸಿ ಬೆಟ್ಟವೊಂದರ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದಾರೆ.

ಹೊಸ್ತೋಟರ ವಿಳಾಸ ಹುಡುಕುತ್ತ, ಉತ್ತರ ಕನ್ನಡ ಜಿಲ್ಲೆಯ ‘ಅಚುವೆ’ ಬಳಿಯ ಮೋತಿಗುಡ್ಡವನ್ನು ಹುಡುಕುತ್ತ ಹುಡುಕುತ್ತ ಮೂರ್ನಾಲ್ಕು ಬೆಟ್ಟಗಳನ್ನು ಏರಿ ಇಳಿಯುತ್ತ ದಾಟಿದ್ದಾಯಿತು. ಒಂದೊಂದು ಬೆಟ್ಟದಲ್ಲೂ ಒಂದೆರಡು ಮನೆಗಳಷ್ಟೆ. ತಪ್ಪಲಿನ ತುಂಬೆಲ್ಲ ಶ್ರಮವನ್ನೇ ಹರಿಸಿ ಬೆಳೆಸಿದ ವಿಶಾಲ ಕಂಗಿನ ತೋಟಗಳು.

ಮೋತಿಗುಡ್ಡದ ಮೇಲೆ ಒಂದು ಕೋಣೆಯ ನಿರ್ಮಲವಾದ ಮನೆ. ಪುಟ್ಟ ಅಂಗಳ. ಅದರ ಮುಂದೆ ಹಿಂದೆಲ್ಲಾ ವಿಸ್ತಾರವಾದ ವನರಾಶಿ. ಬಾಯಿತುಂಬಾ ಕವಳ ಜಗಿಯುತ್ತ, ಅವರು ಕುತೂಹಲದಿಂದ ಬರಮಾಡಿಕೊಂಡರು. ಕುಶಲ ಮಾತು, ಔಪಚಾರಿಕತೆಯ ಅಂತರವಿಲ್ಲದೇ ಅದಾಗಲೇ ತುಂಬ ವರ್ಷಗಳಿಂದ ಪರಿಚಯ ಇದ್ದವರಂತೆ ನೇರ ಮಾತುಗಳು.

ಹರಳುಗಟ್ಟಿದ ಜೀವನನುಭವದಿಂದ ರೂಪುಗೊಂಡ ತಾತ್ವಿಕತೆ ಅವರದು. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ‘ದಿನಾ ಬರೆಯೋರಿಗೆ ಸಂಭ್ರಮಿಸುವವರಾರು ಎಂಬಂತೆ ಸುಮಾರ್‌ ಪುಸ್ತಕ ಬರೆದು ಹಾಕಿದ್ದೇನೆ’ ಎಂದು ತಮ್ಮ ಕೃತಿಗಳ ಬಗ್ಗೆ ನಿರ್ಲಿಪ್ತವಾಗಿ ಹೇಳುತ್ತ, ನಿಜಕ್ಕೂ ನಾನು ನನ್ನ ಆತ್ಮರಕ್ಷಣೆಗೆ ಅಂತ ಬರೆಯಲು ಶುರು ಮಾಡಿದ್ದು ಎಂದರು.

ನಾನು ಕಣ್ಣರಳಿಸಿ ನಕ್ಕಾಗ, ‘ನಾನು ರಾಮಕೃಷ್ಣ ಆಶ್ರಮ ಸೇರಿ ಸ್ವಲ್ಪ ಸಮಯ ಅಲ್ಲಿದ್ದೆ. ನಂತರ ಹೊರಬಂದು ಯಕ್ಷಗಾನ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಮೇಳಗಳಲ್ಲಿ ಬಯಲಾಟ ಪ್ರದರ್ಶನಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಸುತ್ತಾಡೋದು ಸಾಮಾನ್ಯ ಅಲ್ವ. ಬೆಳಗ್ಗಿನ ಹೊತ್ತು ಬರೀ ಹಾಳುಹರಟೆ ಮಾತನಾಡುತ್ತ ಸಮಯ ಕಳೆಯುವ ಬದಲು, ಓದುವ ಬರೆಯುವ ಕಾಯಕ ಶುರು ಮಾಡಿದೆ. ಪ್ರದರ್ಶನಗಳ ಆಯೋಜಕರು ಬರವಣಿಗೆಗಾಗಿ ನನಗೊಂದು ವ್ಯವಸ್ಥೆಯನ್ನೂ ಕಲ್ಪಿಸುತ್ತಿದ್ದರು. ಊರಿನ ಉಸಾಬರಿಗಳಿಗೆ ಸುಖಾ ಸುಮ್ಮನೇ ತಲೆಹಾಕದೇ ನನ್ನಪಾಡಿಗೆ ಇರುವ ಅವಕಾಶ ಸಿಕ್ಕಿತು‘ ಎನ್ನುತ್ತ ನಕ್ಕರು. ಈ ಬರವಣಿಗೆಯೇ ನನಗೆ ಅಂತರಂಗದ ಜ್ಞಾನವನ್ನೂ, ಸ್ವಾತಂತ್ರ್ಯವನ್ನೂ ಕೊಟ್ಟಿದೆ ಎಂದೂ ಸೇರಿಸಿದರು.

ಕಿಟಕಿಯಂಚಿನಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಅವರು ನಿಧಾನವಾಗಿ ಎದ್ದು ಹೊರನಡೆದು ಕವಳದ ಕೆಂಪುರಸವನ್ನು ಉಗಿದು ಒಳಬಂದರು. ’ಈ ಲೋಕದಲ್ಲಿ ಏನಾಗಬೇಕೋ ಅದು ಆಗುತ್ತದೆ. ನಾವು ಹಾಗೆ ಮಾಡಿದೆವು, ಹೀಗೆ ಮಾಡಿದೆವು ಎಂದು ಸುಮ್ಮನೇ ಕೊಚ್ಚಿಕೊಳ್ಳುವುದು’ ಎನ್ನುತ್ತ ತುಟಿಗಳನ್ನು ಬೈರಾಸದಲ್ಲಿ ಒಡ್ಡೊಡ್ಡಾಗಿ ಒರೆಸಿಕೊಂಡರು.

ಕೇಳದೇ ಇದ್ದರೂ ಅವರು ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಜಗತ್ತಿನಲ್ಲಿ ಏನಾಗಬೇಕೋ ಅದಾಗುವುದು ಎನ್ನುವುದು ಪೂರ್ವಸೂರಿಗಳ ಮಾತು. ಹಾಗಿದ್ದರೆ ಮನುಷ್ಯ ಪ್ರಯತ್ನಕ್ಕೆ ಬೆಲೆ ಇಲ್ಲವೇ ಎಂಬ ಪ್ರತಿಪ್ರಶ್ನೆ – ಬಹುಶಃ ಇವು ಪ್ರತಿಯೊಬ್ಬರನ್ನು ಜೀವನದ ಒಂದಲ್ಲ ಒಂದು ಹಂತದಲ್ಲಿ ಕಾಡುವ ಪ್ರಶ್ನೆಗಳೇ. ಪ್ರತಿಯೊಬ್ಬರಿಗೂ ಉತ್ತರ ಪ್ರತ್ಯೇಕವಾಗಿ, ಅವರವರು ಕಂಡುಕೊಂಡ ಮಾಧ್ಯಮಗಳ ಮೂಲಕವೇ ಸಿಗುತ್ತದೇನೋ. ಮಂಜುನಾಥ ಭಾಗವತರು ಮನಸಿನ ಮಾತು ಗುರುತಿಸಬಲ್ಲರು ಅನಿಸುತ್ತದೆ. ನನ್ನೆಡೆಗೆ ದೃಷ್ಟಿಸಿ ನೋಡಿದಾಗ, ‘ನಮ್ಮ ಪ್ರಯತ್ನದ ಅಗತ್ಯವಿಲ್ಲ ಎಂದರೆ ಅದು ಜಡತ್ವ ಅಲ್ವೆ...’ ಕೇಳಿದೆ.

ಅವರು ದೈನಂದಿನ ನುಡಿಗಟ್ಟನ್ನು ಸರಳವಾಗಿ ಉದಾಹರಿಸಿದರು. ಸಾಮಾನ್ಯವಾಗಿ, ನಾವು ಮಾತನಾಡುವಾಗ ‘ಆದ್ರೆ ಆಗ್ತದೆ, ಹೋದ್ರೆ ಹೋಗ್ತದೆ‘ ಎಂಬ ನುಡಿಯಿದೆ. ಆದರೆ ‘ಮಾಡಿದ್ರೆ ಮಾಡ್ತದೆ‘ ಎಂಬ ನುಡಿಯಿದೆಯಾ? ಅಂದರೆ ನಾವು ಮಾಡಿದರೆ, ಅದು ಸಫಲವಾಗಿಯೇ ಆಗುತ್ತದೆ ಎಂಬ ತಾರ್ಕಿಕತೆ ಇಲ್ಲ. ದೈನಂದಿನ ಪ್ರಯತ್ನಗಳಿಗೆ ತಕ್ಷಣದ ಫಲಿತಾಂಶಗಳು ದೊರೆಯುತ್ತವೋ ಇಲ್ಲವೋ ಎಂದು ಕರಾರುವಕ್ಕಾಗಿ ಹೇಳುವಂತೆಯೂ ಇಲ್ಲ. ಆದರೆ ವಿಶ್ವದ ಒಟ್ಟುಚಲನೆಯಲ್ಲಿ ಮನುಷ್ಯಕುಲ ಪ್ರಯತ್ನದ ಅಗತ್ಯವಿದ್ದೇ ಇದೆ’ ಎನ್ನುತ್ತ ಮತ್ತೊಂದು ಕವಳದ ಸಿದ್ಧತೆಯಲ್ಲಿ ತೊಡಗಿದರು.

ತಕ್ಷಣದ ಫಲವಿಲ್ಲ ಎಂದಮೇಲೆ ಮನುಷ್ಯ ಪ್ರಯತ್ನಗಳನ್ನು ಮಾಡುವುದಾದರೂ ಏಕೆ ಎಂಬ ಅಸಮಾಧಾನ ನನ್ನ ಕಣ್ಣಲ್ಲಿ ಗೋಚರಿಸಿತೇನೋ? ಅವರು ಮತ್ತಷ್ಟು ನಿಧಾನವಾಗಿ ಹೇಳಿದರು:

‘ಅದಕ್ಕೆ ಅರ್ಜುನನಿಗೆ ಕೃಷ್ಣ ಹೇಳಿದ್ದು – ನಿನ್ನ ಪ್ರಯತ್ನವನ್ನು ನಿರಂತರ ಮಾಡುತ್ತಿರು ಎಂದು. ಗೀತೆಯಲ್ಲಿ ಕೃಷ್ಣ ಏನೇ ಹೇಳಿರಲಿ, ನಾವು ಕರ್ಮವನ್ನು ಮಾಡದೇ ಕೈಕಟ್ಟಿ ಕುಳಿತುಕೊಳ್ಳುತ್ತೇವೆ ಎನ್ನುವಂತಿಲ್ಲ. ಯಾಕೆಂದರೆ ನಾನು ಏನನ್ನೂ ಮಾಡುವುದಿಲ್ಲ ಎಂದು ಪಟ್ಟಾಗಿ ಕೈಕಟ್ಟಿ ಕುಳಿತುಕೊಂಡರೆ, ಅದೂ ಒಂದು ಕರ್ಮವೇ ಆಗಿರುತ್ತದೆ’.

‘ಹಂಗೆ... ಈ ಲೋಕದ ವಿಚಾರ ಅರ್ಥ ಆಯಿತಾ... ನಿಧಾನಕ್ಕೆ ಅರ್ಥವಾಗುತ್ತದೆ...’ ಎಂದು ಮುಗುಳುನಕ್ಕರು.

ಹೊಸ್ತೋಟರು ಹುಟ್ಟಿದ್ದು ಹನುಮಂತಿ ಎಂಬಲ್ಲಿ. ತಕ್ಕಮಟ್ಟಿಗೆ ವಿದ್ಯಾಭ್ಯಾಸ ಪಡೆದ ಬಳಿಕ ಸ್ವತಂತ್ರವಾಗಿ ಇರಬೇಕು ಎಂದು ಕೃಷಿ ಜಮೀನು ಖರೀದಿಸಿ ಮದುವೆ–ಸಂಸಾರದ ಹಾದಿಯಲ್ಲಿ ಸಾಗಬೇಕು ಎಂದುಕೊಂಡಿದ್ದರು. ಆದರೆ ಹಾಗೆ ಜಮೀನು ಹಿಡಿದು ಇನ್ನೇನು ಹಾದಿಗೆ ಬರಬೇಕು ಎನ್ನುವಷ್ಟರಲ್ಲಿ ಆ ಜಮೀನು ಮುಳುಗಡೆ ಪ್ರದೇಶ ಎಂದು ಘೋಷಣೆಯಾಯಿತು. ಹೊಸ್ತೋಟರು ಊರು ಬಿಟ್ಟು ಹೊರಡಬೇಕಾಯಿತು.

‘ಮದುವೆಯನ್ನೇ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದವನೇನೂ ಆಲ್ಲ. ಆದರೆ ಮದುವೆ ಆಗಬೇಕೆಂದು ತೀವ್ರವಾಗಿ ಅನಿಸಲಿಲ್ಲ. ಅಂತಹ ಮನೋಧರ್ಮ ನನಗೆ ತಾನಾಗಿಯೇ ಒಲಿದು ಬಂತು ಎನ್ನುವುದೇ ಹೆಚ್ಚು ಸತ್ಯ. ಯಾಕೆಂದರೆ ಆಸೆಗಳು ಮೊಳೆತರೆ ನಿಗ್ರಹದಿಂದ ಅವುಗಳನ್ನು ಗೆಲ್ಲುವುದಕ್ಕಿಂತಲೂ ನಿರಾಸಕ್ತಿಯಿಂದಲೋ ಅಥವಾ ಅನುಭವವೇದ್ಯವಾದ ಬಳಿಕ ಅವುಗಳನ್ನು ದಾಟಿಯೋ ಗೆಲ್ಲುವುದು ಒಳಿತು ಎಂದೆನಿಸುತ್ತದೆ’. ಅವರ ಈ ಸ್ವಗತದ ಹಿಂದಿನ ಲೋಕ ಬಹಳ ದೀರ್ಘವಾದುದು. ಆದರೆ ತಾನು ಸಾಗಿ ಬಂದ ದಾರಿಯಲ್ಲಿ ತನ್ನ ಸಾಧನೆಯೇನೂ ಇಲ್ಲವೆಂದೂ, ಬದುಕು ಒಲಿದು ಬಂದ ಹಾಗೆ ತಾನು ಬದುಕಿದೆ ಎಂದೂ ಹೇಳುತ್ತಿದ್ದರು.

ಪುಟ್ಟ ಮಕ್ಕಳಿಗೆ ಯಕ್ಷಗಾನದ ಪ್ರಸಂಗ ಬರೆದು ಹೇಳಿಕೊಡುತ್ತ, ಅಂಧ ಮಕ್ಕಳ ಕೈಲಿ ಯಕ್ಷಗಾನ ಪ್ರಸಂಗ ಪ್ರದರ್ಶನ ಮಾಡಿಸುತ್ತ, ಪ್ರಕೃತಿಯ ಕುರಿತು ಯಕ್ಷಗಾನ ಪ್ರಸಂಗವನ್ನು ಬರೆಯುತ್ತ, ಹತ್ತಾರು ಕೃತಿಗಳನ್ನೂ ತಮ್ಮ ಶೈಲಿ ಮತ್ತು ಒಳನೋಟಗಳ ಮೂಲಕ ರಚಿಸಿದವರು.

ಕೆರೆಮನೆ ಶಿವರಾಮ ಹೆಗಡೆ ಮತ್ತು ಮಹಾಬಲ ಹೆಗಡೆ ಅವರ ಮೂಲಕ ಯಕ್ಷಗಾನದತ್ತ ಹೆಜ್ಜೆ ಇರಿಸಿದ ಅವರುಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್‌, ಹೋಮರನ ಒಡಿಸ್ಸಿ ಕಾವ್ಯವನ್ನು ಆಧರಿಸಿ ಪ್ರಸಂಗ ರಚನೆ ಮಾಡಿದ್ದಾರೆ. ಪ್ರಕೃತಿ ಮತ್ತು ಅಭಿವೃದ್ಧಿಯ ವಿಪರ್ಯಾಸಗಳನ್ನು ವಿವರಿಸುವ ‘ನಿಸರ್ಗಾನುಸಂಧಾನ’ ಪ್ರಸಂಗ ಬರೆದಿದ್ದು, ಅದು ಕನ್ನಡ, ಹಿಂದಿ, ಸಂಸ್ಕೃತಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನ ಕಂಡಿವೆ.

‘ಈ ಜಗತ್ತಿನಲ್ಲಿ ಎಷ್ಟೋ ಜೀವಿಗಳು ಆಗಿ ಹೋಗಿದ್ದಾವೆ. ಅದೇ ಹಾದಿಯಲ್ಲಿ ನಾನೂ ಒಬ್ಬ‘ ಎಂಬಂತೆ ನಿರ್ಲಿಪ್ತವಾಗಿ ಮನೆಮುಂದೆ ಹರಡಿದ ಕಾನನವನ್ನು ನಿಟ್ಟಿಸುತ್ತಿದ್ದರು.

ಮನೆಯನೆಂದೂ ಕಟ್ಟಿಕೊಳ್ಳದೆ ಯಕ್ಷಗಾನ ಮೇಳಗಳಲ್ಲಿ ತಿರುಗಾಟ ಮಾಡುತ್ತ ಜೀವನದ ಬಹುತೇಕ ವರ್ಷಗಳನ್ನು ಕಳೆದಾಗಿದೆ. ಅವರಿಗೀಗ 79 ವರ್ಷ. ‘ಕುಟೀರ ಕಟ್ಟಿಕೊಳ್ಳಲು ಇದೇ ಜಾಗ ಯಾಕೆ ಇಷ್ಟವಾಯಿತು’ ಎಂಬುದನ್ನು ಹೇಳಿದರು.

ಯೌವನದ ದಿನಗಳಲ್ಲಿ ಮೋತಿಗುಡ್ಡದ ಶಾಲೆಯ ಮಕ್ಕಳಿಗೆ ಯಕ್ಷಗಾನ ಹೇಳಿಕೊಡುತ್ತಿದ್ದರು. ಅದೇ ವೇಳೆಗೆ ಶ್ರೀರಾಮಕೃಷ್ಣ ಆಶ್ರಮದ ಸಂಪರ್ಕದಿಂದಾಗಿ ರಾಮಕೃಷ್ಣ ಪರಮಹಂಸರ ಕುರಿತ ಮಹಾಕಾವ್ಯ ‘ಶ್ರೀ ಶ್ರೀ ರಾಮಕೃಷ್ಣ ಚರಿತೆ’ ರಚಿಸಿದ್ದರು. ‘ಇದೇ ಅಶ್ವತ್ಥ ಮರದಡಿಯಲ್ಲಿ ಕುಳಿತು ಬರೆಯಲು ಶುರು ಮಾಡಿದರೆ ಅಧ್ಯಾಯಗಳು ಸರಸರನೆ ಮುಂದುವರೆಯುತ್ತಿದ್ದವು. ಮನಸ್ಸು ಉಲ್ಲಸಿತವಾಗುತ್ತಿತ್ತು. ಆ ನೆನಪಿನಲ್ಲಿ ಇಲ್ಲಿಯೇ ಕುಟೀರ ಕಟ್ಟಿಕೊಳ್ಳಲು ನಿರ್ಧರಿಸಿದೆ’ ಎಂದರು.

ಮಕ್ಕಳಿಗೆ ಯಕ್ಷಗಾನದ ಪಾಠ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ‘ಗುರು’ ಎಂದು ಹೇಳಿಕೊಳ್ಳಲಾರೆ. ಯಾವ ಜ್ಞಾನವೂ ಸ್ವಂತದ್ದು ಎನ್ನುವಂತಿಲ್ಲ. ನನಗೆ ಗೊತ್ತಿರುವ ವಿಚಾರಗಳನ್ನು ಬೇರೆಯವರಿಗೆ ಹೇಳಿಕೊಡುವುದರಲ್ಲಿ ಹೆಚ್ಚುಗಾರಿಕೆಯೇನೂ ನನಗೆ ತೋರಲಿಲ್ಲ ಎನ್ನುತ್ತ ‘ಬನ್ನಿ ಊಟ ಮಾಡೋಣ’ ಎಂದುಪಕ್ಕದಲ್ಲೇ ಇರುವ ಸುಬ್ರಾಯ ಭಟ್‌ ಮತ್ತು ಸುಮಿತ್ರ ಅವರ ಮನೆಯತ್ತ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT