ಮಂಗಳವಾರ, ಏಪ್ರಿಲ್ 7, 2020
19 °C

ಧನ್ಯತೆಯ ಬೆಳಕಲ್ಲಿ ಜೀವನ ಸೌಂದರ್ಯ

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

Prajavani

ಈ ವರ್ಷ ಕೊನೆಯಾಗಲು ಇನ್ನೆರಡು ಮೂರು ದಿನಗಳಷ್ಟೇ ಬಾಕಿ ಇರುವಾಗ ಎಲ್ಲರಲ್ಲೂ ಏನೋ ಒಂದು ರೀತಿಯಾದ ಧಾವಂತವಿಲ್ಲದ ದಿನಚರಿಯನ್ನು ಕಳೆಯುವ ಸಂಭ್ರಮ–ಸೋಮಾರಿತನಗಳು ಮನೆ ಮಾಡಿರುತ್ತವೆ. ಇಂತಹ ಸಮಯದ ಬಹುಮುಖ್ಯ ಕ್ರಿಯೆ ಎಂದರೆ ಇಡೀ ವರ್ಷದ ಆಗುಹೋಗುಗಳೆಲ್ಲವನ್ನು ಒಮ್ಮೆ ಕಣ್ಮುಂದೆ ತಂದುಕೊಳ್ಳುವಂತಹ ಕ್ರಿಯೆ. ಇದೇನು ವರ್ಷಕೊಮ್ಮೆ ಮಾತ್ರ ಮಾಡುವಂತಹ ವಿಶೇಷ ಕೆಲಸವಲ್ಲ; ನಮ್ಮ ಜೀವನದ ಪ್ರತಿಯೊಂದು ದಿನವೂ ಅಥವಾ ಸ್ವಲ್ಪ ವಿರಾಮವಾಗಿರುವಾಗಲೆಲ್ಲ ನಾವು ಮಾಡುವಂತಹ ಕೆಲಸವೇ ಹೌದು. ಅಷ್ಟೇ ಏಕೆ, ನಾವೆಣಿಸಿದಂತೆ ಬದುಕಿನಲ್ಲೇನೂ ನಡೆಯದಿದ್ದಾಗ, ನಮ್ಮ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿ 'ಮುಂದೇನು' ಎಂಬ ಪ್ರಶ್ನೆ ಕಣ್ಮುಂದೆ ಬೃಹದಾಕಾರವಾಗಿ ನಿಂತಿದ್ದಾಗ, ಅನಿಶ್ಚಿತತೆಯಲ್ಲೂ ‘ಹೇಗಾದರೂ ಸರಿ ಮುಂದೆ ನಡೆಯಲೇಬೇಕು’ ಎಂಬ ಧೈರ್ಯ ಒದಗುವುದೇ ಒಮ್ಮೆ ಹಿಂದಿರುಗಿ ನೋಡಿ ನಾವು ಪಡೆದದ್ದು, ಅನುಭವಿಸಿದ್ದು, ಮಾಡಿದ್ದು, ಆಗಿದ್ದು ಎಲ್ಲದರ ಬಗ್ಗೆ ಒಂದು ರೀತಿಯ ಧನ್ಯತೆ ಮೂಡಿದಾಗಲೇ.

ಆಹಾ! ಜೀವನ ಅದೆಷ್ಟು ಸುಂದರ – ಎಂದು ನಮಗನಿಸಿದ ಘಳಿಗೆಗಳಲ್ಲೆಲ್ಲಾ ನಾವು ಈ ಧನ್ಯತೆಯ ಭಾವವನ್ನೇ ಅನುಭವಿಸುತ್ತಿರುತ್ತೇವೆ. ಜೀವನಸೌಂದರ್ಯವೂ ಕಲೆಯ ಸೌಂದರ್ಯದಂತೆಯೇ, ಆಸ್ವಾದಿಸಲು ಬರೀ ಇಂದ್ರಿಯಾನುಭವಗಳು, ಪರಿಣತಿ ಸಾಕಾಗುವುದಿಲ್ಲ - ಸಂಸ್ಕಾರವೂ ಬೇಕು. ಜೀವನಸೌಂದರ್ಯದ ಆಸ್ವಾದನೆಗೆ ಧನ್ಯತೆಯ ಭಾವವೇ ಅಂತಹ ಸಂಸ್ಕಾರವನ್ನು ಒದಗಿಸುತ್ತದೆ. ಕಲೆಯ ಆಸ್ವಾದನೆಯೂ ಧನ್ಯತೆಯ ಭಾವವಿಲ್ಲದೆ ಸಾಧ್ಯವಾಗುವುದಿಲ್ಲ.

ಧನ್ಯತೆ ಎನ್ನುವುದು ಕೇವಲ ನಮಗೊದಗಿದ ಒಳಿತುಗಳ ಕುರಿತಾದ ಕೃತಜ್ಞತೆಯಲ್ಲ; ಎಲ್ಲ ಕಹಿಯನ್ನು ಜೀರ್ಣಿಸಿಕೊಳ್ಳುವುದಕ್ಕೆ ಮನುಷ್ಯರಾಗಿ ನಮಗಿರುವ ಶಕ್ತಿಯ ಕುರಿತಾದ ಕೃತಜ್ಞತೆ. ಧನ್ಯತೆ ಎಂದರೆ ಬೇರೆಯವರಿಗೆ ಇಲ್ಲದ್ದು ನಮಗೇನು ದೊರಕಿದೆ ಎಂಬ ಹೋಲಿಕೆಯ ಕೃತಜ್ಞತೆಯಲ್ಲ; ಬದಲಾಗಿ ಏನಾಗಿದೆಯೋ, ಏನಿದೆಯೋ ಅದರ ಕುರಿತಾಗಿ ಅದರೊಟ್ಟಿಗೆ ನಮಗಿರುವ ಎಲ್ಲ ತಕರಾರು, ತಾಪತ್ರಯಗಳನ್ನು ಒಳಗೊಂಡಂತೆ ಏನನ್ನೂ ನಿರಾಕರಿಸದೆ ಬದುಕಿನ ಸಮಸ್ತವನ್ನೂ ಹೃದಯಪೂರ್ವಕವಾಗಿ ಮೆಚ್ಚುವ, ಗ್ರಹಿಸುವ ಅನುಭವ. ಪ್ರತಿಯೊಂದು ವಯಸ್ಸಿನಲ್ಲೂ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಜೀವನಸೌಂದರ್ಯದ ಅರ್ಥ, ಅದಕ್ಕಿರುವ ಮಾನದಂಡಗಳು ಬದಲಾಗುತ್ತಲೇ ಇದ್ದರೂ ಧನ್ಯತಾಭಾವದ ಹೊರತು ಜೀವನದ ರಸಗ್ರಹಣ ಸಾಧ್ಯವಿಲ್ಲ. ಬದುಕೆಂಬ ಈ ಅಚ್ಚರಿ ತನ್ನ ಒಳಗುಟ್ಟನ್ನು ಬಿಟ್ಟುಕೊಡಬೇಕಾದರೆ ‘ಈ ಬದುಕಿನಿಂದ ನಾನು ಪಡೆದದ್ದೆಷ್ಟು, ಕಳೆದುಕೊಂಡದ್ದೆಷ್ಟು’ ಎಂಬ ಕ್ಷುಲ್ಲಕ ಲೆಕ್ಕಾಚಾರಗಳನ್ನು ಮೀರಿ ಒಟ್ಟಾರೆ ಜೀವನಾನುಭವವನ್ನು ನೋಡಬೇಕಾಗುತ್ತದೆ.

ಮಾನವಜೀವನದ ಸಾರ್ಥಕತೆ ನಾವು ಬಯಸಿದಂತೆಲ್ಲಾ ಆಗುವುದರಲ್ಲಿಲ್ಲದೆ – ಇನ್ನೂ ಆಳವಾದ, ನಿಗೂಢವಾದ ಯಾವುದರಲ್ಲೊ ಇರಬಹುದಲ್ಲವೇ? ಬದುಕಿಗಿರುವ ಈ ಸಂಕೀರ್ಣ ವಿನ್ಯಾಸವನ್ನು ಅರಿಯುವ ವಿವೇಕದ, ವಿಕಾಸದ ಮಾರ್ಗವೇ ಧನ್ಯತೆ ಎಂಬ ಭಾವ. ಕಲಾವಿದನ ಸೀಮಿತ ಉದ್ದೇಶಗಳನ್ನು ಮೀರಿ ಕಲೆ ಜನ್ಮತಾಳಿದಾಗಷ್ಟೇ ಬಹುಕಾಲ ಬಾಳುವಂತಹ ಕಲೆಯಾಗಬಲ್ಲದು. ಹೀಗೆಯೇ ನಮ್ಮ ಗುರಿಯನ್ನು ಮೀರಿ ಅಥವಾ ಒಮ್ಮೊಮ್ಮೆ ಅದರ ವಿರುದ್ಧವಾಗಿಯೇ ಬದುಕು ಅರಳಿ ನಿಂತಿರುತ್ತದೆ. ಈ ವಿಸ್ಮಯವನ್ನು ಗುರುತಿಸಲು ಅಂತರಂಗದ ತಯಾರಿ ಬೇಕು. ಅನೂಹ್ಯವಾದ, ಕಂಡು ಕೇಳಿರದ ಲೋಕದ ಬಣ್ಣ, ಶಬ್ದ, ಸ್ಪರ್ಶವು ನಮ್ಮನ್ನು ತಲಪಿ ಇಲ್ಲಿಯವರೆಗೆ ಅಪರಿಚಿತವಾದದ್ದೇ ಅತ್ಯಾಪ್ತವಾಗಿಬಿಡುವ ಬದುಕಿನ ವಿಚಿತ್ರ ರೀತಿಯನ್ನು ಅರಿಯಬೇಕಾದರೆ ಆತ್ಮದ ಬಾಗಿಲು ಎಲ್ಲ ದಿಕ್ಕುಗಳಲ್ಲೂ ತೆರೆದುಕೊಂಡಿರಬೇಕಾದೀತು. ನಮ್ಮನ್ನು ಬೆಳೆಸುವ ಅರಳಿಸುವ ಎಲ್ಲ ಆಲೋಚನೆಗಳೂ ಧನ್ಯಭಾವದ ಇನ್ನೊಂದು ರೂಪವೇ ಹೌದು.

ಎಲ್ಲ ಸಂವೇದನೆಗಳನ್ನು, ಭಾವಗಳನ್ನು, ಅರಿವಿನೊಂದಿಗೆ ಬೆಸೆಯುವ ಬಂಧವೆ ಧನ್ಯತೆ. ಮೌಲಿಕವಾದ ಚಿಂತನೆ ನಿಜವಾಗಲೂ ಎಲ್ಲವನ್ನು ಬೆಸೆಯುವಂಥದ್ದೇ ಆಗಿರುತ್ತದೆ. ಆದರೆ ಎಲ್ಲವನ್ನು ಒಗ್ಗೂಡಿಸುವುದು ಹೇಳಿದಷ್ಟು ಸುಲಭವಲ್ಲ. ಎಷ್ಟೋ ಅನುಭವಗಳನ್ನು ನಮಗೇ ತಿಳಿಯದಂತೆ ನಾವು ನಿರಾಕರಿಸುತ್ತಲೇ ಇರುತ್ತೇವೆ. ನಮಗೆ ನೋವು, ಅವಮಾನ ತರುವ, ನಮ್ಮ ಅಹಂಕಾರಕ್ಕೆ ಘಾಸಿ ಮಾಡುವ ಅನುಭವಗಳನ್ನು ಮರೆಯುವ, ಮುಚ್ಚಿಡುವ ಪ್ರಯತ್ನ ಮಾಡುತ್ತಲಿರುತ್ತೇವೆ. ಹಾಗೆಯೇ ಅತ್ಯಂತ ಮುಖ್ಯವಾದ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಲಾರದಂತಹ ಜಡತ್ವವನ್ನು ಗೊತ್ತಿಲ್ಲದೆ ಮೈಗೂಡಿಸಿಕೊಂಡಿರುತ್ತೇವೆ. ನಮ್ಮ ಈ ಮಿತಿಗಳನ್ನು ಕಂಡು ಹಿಡಿದು, ಅವುಗಳನ್ನು ಹಿಗ್ಗಿಸಿ, ಎಲ್ಲ ಭಾವಗಳಿಗೂ ಸರಾಗ ಹರಿವು ಉಂಟಾದಾಗಲಷ್ಟೇ ಜೀವನಸೌಂದರ್ಯ ಅನುಭವಕ್ಕೆ ಬರುವಂಥದ್ದು. ವರ್ಷದ ಕೊನೆಯಲ್ಲಿ ಮಾತ್ರವಲ್ಲ, ಯಾವುದೇ ಕ್ಷಣದಲ್ಲಿಯೂ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ – ‘ನಾವು ಯಾವುದಕ್ಕೆ ಧನ್ಯರಾಗಿದ್ದೇವೆ’ – ಎಂಬುದಲ್ಲ ಧನ್ಯತೆಯನ್ನು ನಾವು ಕಂಡುಕೊಂಡ ಬಗೆ ಹೇಗೆ/ ಯಾವುದು ಎಂಬುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)