ಬ್ಯಾಂಕಿಂಗ್ ಕಾರ್ಟೂನ್‌ಗಳ ‘ನಗೆ ಬುಗ್ಗೆ’

7
Metro Cartoon

ಬ್ಯಾಂಕಿಂಗ್ ಕಾರ್ಟೂನ್‌ಗಳ ‘ನಗೆ ಬುಗ್ಗೆ’

Published:
Updated:

‌ಬ್ಯಾಂಕ್  ನೂರೆಂಟು ವ್ಯವಹಾರಗಳ ಕ್ಷೇತ್ರ. ಖಾತೆ ಆರಂಭ, ಠೇವಣಿ ಇಡುವುದು, ಸಾಲ ಪಡೆಯವುದು, ಉದ್ಯಮ ಸ್ಥಾಪನೆಗೆ ಹಣಕಾಸು, ಗೃಹ ಹಾಗೂ ಕಾರು ಸಾಲ, ಅಡಮಾನ, ಸಾಲ ವಸೂಲಾತಿ ಹೀಗೆ ಎಷ್ಟೋ ಜಂಜಾಟದ ಕ್ಷೇತ್ರ ಇದು. ಇಲ್ಲಿ ಶ್ರೀಮಂತರೂ ಬ್ಯಾಂಕ್‌ಗೆ ಅಂಡಲೆಯಬೇಕಾಗುತ್ತದೆ. ಹಳ್ಳಿಯ ಸಾಮಾನ್ಯ ಅನಕ್ಷರಸ್ಥ ಕೂಡ ಎಡತಾಕಬೇಕಾಗುತ್ತದೆ.

ಈಗ ಎಲ್ಲಾ ಯೋಜನೆಗಳಿಗೂ ಬ್ಯಾಂಕ್‌ನ್ನೇ ಅವಲಂಬಿಸಬೇಕಾಗಿದ್ದು, ವಿಪರೀತ ಒತ್ತಡದ ಕ್ಷೇತ್ರವಾಗಿದೆ. ಸಕಾಲಕ್ಕೆ ಕೆಲಸ ಆಗಿಲ್ಲ ಎಂದು ರೇಗುವ ಹಳ್ಳಿಯ ಮುಗ್ಧ ಜನರ ಜಗಳ, ಹುಸಿಕೋಪ, ಒರಟು ಭಾಷೆ ಎಲ್ಲವೂ ತಮಾಷೆ ಸಂಗತಿಗಳೇ. ಆದರೆ, ಅಧಿಕಾರಿಯೋ, ಸಿಬ್ಬಂದಿಯೋ ಇದೆಲ್ಲವೂ ಕಂಡು ಎಂಜಾಯ್‌ ಮಾಡುವಷ್ಟು ಬಿಡುವು ಇಲ್ಲದ ಕೆಲಸ. ಮೂರು ಹೊತ್ತು ಮುಖಗಂಟಿಕ್ಕಿಕೊಂಡೇ ಕೆಲಸ ಮಾಡಬೇಕಾಗಿರುವುದು ಈ ಕ್ಷೇತ್ರದ ಅನಿವಾರ್ಯತೆ.

ಆದರೆ, ಹಾಸ್ಯ ಮನೋಭಾವದ ಬ್ಯಾಂಕ್‌ ಅಧಿಕಾರಿಯೊಬ್ಬರು ದಿನನಿತ್ಯದ ಕೆಲಸದ ಒತ್ತಡದ ನಡುವೆಯೂ ಬ್ಯಾಂಕ್‌ಗೆ ಭೇಟಿ ನೀಡುವ ವಿಭಿನ್ನ ಹಿನ್ನೆಲೆಯ ಜನರ ಹಾವಭಾವ, ವರ್ತನೆ, ಅಧಿಕಾರಿಗಳ ಎಡವಟ್ಟುಯನ್ನು ನವಿರು ಹಾಸ್ಯದ ಕಾರ್ಟೂನ್‌ಗಳ ಮೂಲಕ ಕನ್ನಡಿಗರಿಗೆ ಕಳೆದ 45 ವರ್ಷದಿಂದ ಉಣಬಡಿಸುತ್ತಲೇ ಬಂದಿದ್ದಾರೆ.

ಅವರು ಮತ್ಯಾರೂ ಅಲ್ಲ; ಅಚ್ಚ ಕನ್ನಡಿಗರಾದ ಎಚ್.ಎಸ್.ವಿಶ್ವನಾಥ್‌. ಎಚ್.ಎಸ್‌ ಎಂದೇ ಬ್ಯಾಂಕ್‌ ಕ್ಷೇತ್ರದಲ್ಲಿ ಪ್ರಸಿದ್ಧರು. 1956ರಲ್ಲಿ ಶಿವಮೊಗ್ಗದಲ್ಲಿ ಹುಟ್ಟಿದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಬಿಬಿಎಂ , CAIIB ಮತ್ತು ಕಂಪ್ಯೂಟರ್ ಅಪ್ಲಿಕೇಷನ್‍ನಲ್ಲಿ ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ ಪದವಿ ಗಳಿಸಿದ್ದಾರೆ. ಕಾರ್ಪೊರೇಷನ್ ಬ್ಯಾಂಕ್‍ನಲ್ಲಿ ಅವರು ಕ್ಲಕ್ ಆಗಿ ವೃತ್ತಿ ಆರಂಭಿಸಿ 37ವರ್ಷಗಳ ಕಾಲ ಕೆಲಸ ಮಾಡಿ, ಹಿರಿಯ ವ್ಯವಸ್ಥಾಪಕ ಹುದ್ದೆಯಿಂದ ಈಗ ನಿವೃತ್ತರಾಗಿದ್ದಾರೆ.

ಆರ್. ಕೆ.ಲಕ್ಷ್ಮಣ್ ಅವರ ವ್ಯಂಗ್ಯಚಿತ್ರಗಳಿಂದ ಪ್ರೇರಿತರಾಗಿ 1973ರಲ್ಲಿ ಮೊದಲ ಬಾರಿಗೆ ‘ಸೇವಾಮೃತ’ ಎನ್ನುವ ನಿಯತಕಾಲಿಕೆಗೆ ಕಾರ್ಟೂನ್ ಬರೆಯುತ್ತಾರೆ. ಅಲ್ಲಿಂದ ಆರಂಭವಾದ ಅವರ ಹವ್ಯಾಸ ಮುಂದೆ; ಸುಧಾ, ಮಯೂರ, ತರಂಗ, ಪ್ರಜಾಮತ, ಕೆನರಾ ಟೈಮ್ಸ್‌, ಜನಾತರಂಗ ನಿಯತಕಾಲಿಕೆಗಳಿಗೆ ಪ್ಯಾಕೆಟ್‌ ಕಾರ್ಟೂನ್ ಬರೆದು ಹೆಸರಾದ ವ್ಯಕ್ತಿ.

ಬ್ಯಾಂಕ್‌ ಫೆಡರೇಷನ್‌ ವತಿಯಿಂದ ಹೊರ ಬರುವ ‘ಅಫೀಸರ್ಸ್‌ ವಾಯ್ಸ್’ ಎನ್ನುವ ಮಾಸಿಕ ನಿಯತಕಾಲಿಕೆಗೆ 22 ವರ್ಷಗಳ ಕಾಲ ಸದೀರ್ಘವಾಗಿ ಬ್ಯಾಂಕ್‌ ಕ್ಷೇತ್ರದ ಒಳ – ಹೊರಗೂ ಸಂಗತಿಗಳನ್ನೇ ಕಾರ್ಟೂನ್ ಬರೆದು, ಓದುಗರಿಗೆ ಕಜಗುಳಿ ಇಟ್ಟವರು. ಗ್ರಾಹಕರ ಮುಗ್ಧ ವ್ಯವಹಾರ ಚಟುವಟಿಕೆ, ಅಧಿಕಾರಿಗಳ ರಾಜಕೀಯ ಪಿತೂರಿ, ವರ್ಗಾವಣೆ ಗೊಂದಲಗಳು, ಊರಿಂದ ಊರಿಗೆ ವರ್ಗಾವಣೆ ಆವಾಂತರಗಳನ್ನು ಹಾಸ್ಯವಾಗಿ ಕಾರ್ಟೂನ್‌ಗಳಲ್ಲಿ ಚಿತ್ರಿಸಿದ್ದಾರೆ.

ಸಾಲ ತೆಗೆದುಕೊಂಡ ವ್ಯಕ್ತಿಯೊಬ್ಬ ‘ಸಾಲ ಕಟ್ಟಲು ಸ್ವಲ್ಪ ಸಮಯ ಕೊಡಿ ಸಾರ್...ನಾನು ಮುಂದಿನ ಸಲದ ಕನ್ನಡದ ಕೋಟ್ಯಾಧಿಪತಿ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ’. ಬ್ಯಾಂಕ್‌ಗಳ ವಿಲೀನ ಕುರಿತು ‘ಸಾಲ ತೆಗೆದುಕೊಂಡ ಬ್ಯಾಂಕ್‌ಗಷ್ಟೇ ಸಾಲ ಕಟ್ಟುವುದು’. ಪಾಸ್‌ವರ್ಡ್‌ ಮರೆತ ಅಧಿಕಾರಿಯೊಬ್ಬರ ಪೇಜಾಟದಂತಹ ಬ್ಯಾಂಕ್‌ ಕಾರ್ಟೂನ್‌ಗಳನ್ನು ಕಂಡು ಸಹೋದ್ಯೋಗಿ ಮಿತ್ರರ ಶಹಬ್ಬಾಸ್‌ಗಿರಿ, ಅಧಿಕಾರಿಗಳ ಪ್ರಶಂಸೆಗೆ ಪಾತ್ರನಾಗಿದ್ದೇನೆ ಎಂದು ವಿಶ್ವನಾಥ್‌‌ ವೃತ್ತಿ ಜೀವನದ ಬಗ್ಗೆ ತೃಪ್ತಿಪಟ್ಟರು. 

ರಾಜಕೀಯ, ಸಾಮಾಜಿಕ ಸಂಗತಿಗಳು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಸಾಮಾಜಿಕ ಜಾಲತಾಣದ ಬಗ್ಗೆಯೂ ಅವರು ಕಾರ್ಟೂನ್‌ಗಳನ್ನು ಬರೆದಿದ್ದಾರೆ. ‘ಕೆಲಸದ ಒದ್ದಾಟದ ನಡುವೆ ವ್ಯಂಗ್ಯಚಿತ್ರ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿವೃತ್ತ ನಂತರ ಸಂಪೂರ್ಣವಾಗಿ ಪ್ರವೃತ್ತಿಯನ್ನು ವೃತ್ತಿಯಾಗಿ ಸ್ವೀಕರಿಸಿದ್ದೇನೆ’ ಎಂದು ವಿಶ್ವನಾಥ್‌ ತಮ್ಮ ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ ತೋರಿದರು.

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಅವರು ವ್ಯಂಗ್ಯಚಿತ್ರಗಳ ಮೂಲಕ ಸಲ್ಲಿಸಿದ ಸೇವೆಗಾಗಿ ಆಲ್‌ ಇಂಡಿಯಾ ಬ್ಯಾಂಕ್‌ ಆಫೀಸರ್ಸ್‌ ಫೆಡರೇಷನ್ ವತಿಯಿಂದ ಸನ್ಮಾನಿಸಲಾಗಿದೆ. ಅವರು "Bankcartoons' ಎಂಬ ವ್ಯಂಗ್ಯಚಿತ್ರ ಸಂಕಲನ ಹೊರ ತಂದಿದ್ದಾರೆ. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಅವರ ‘ಬ್ಯಾಂಕ್  ಕಾರ್ಟೂನ್’ಗಳ ಪ್ರದರ್ಶನವನ್ನು ಗ್ಯಾಲರಿಯಲ್ಲಿ ಹಮ್ಮಿಕೊಂಡಿದೆ.

‘ಬ್ಯಾಂಕ್‌ ಕಾರ್ಟೂನ್’ ಪ್ರದರ್ಶನ

ಸ್ಥಳ : ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ
ನಂ.1,ಮಿಡ್‍ಫೋರ್ಡ್ ಹೌಸ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಬೆಂಗಳೂರು- 560001

ಸಮಯ ಬೆಳಿಗ್ಗೆ 11ರಿಂದ ಸಂಜೆ 6

ಪ್ರದರ್ಶನ ಕೊನೆ: 15ನೇ ಡಿ.2018ರವರೆಗೆ, ಸಾರ್ವಜನಿಕರಿಗೆ ಮುಕ್ತ ಪ್ರವೇಶ

ಸಂಪ­­­ರ್ಕ: 9980091428

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !