ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಾಫಿ ಟೇಬಲ್‌ ಬುಕ್, ಫೋಟೊಗಳದ್ದೇ ಝಲಕ್

Last Updated 28 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬಿಸಿ ಬಿಸಿ ಕಾಫಿ ಇರುವ ಕಪ್‌ ಟೇಬಲ್‌ ಮೇಲಿದೆ. ಅದರ ಪಕ್ಕದಲ್ಲಿ ಆಕರ್ಷಕ ಬಣ್ಣದ ಆಲ್ಬಮ್‌ನಂತಿರುವ ಬೃಹತ್‌ ಗಾತ್ರದ ಭಾರವಾದ ಪುಸ್ತಕ. ಅದರ ಮುಖಪುಟದ ಆಕರ್ಷಕ ಚಿತ್ರವನ್ನು ನೋಡಿಯೇ ಥಟ್ಟನೆ ಕೈಗೆತ್ತಿಕೊಳ್ಳುವಿರಿ. ಕಾಫಿ ಕುಡಿಯುತ್ತ ಪುಸ್ತಕದ ಹಾಳೆಗಳನ್ನು ತಿರುವಿಹಾಕತೊಡಗಿದರೆ, ಅದು ನಿಮ್ಮನ್ನು ತಲೆಎತ್ತದಂತೆ ಹಿಡಿದಿಡುತ್ತದೆ. ಕಾರಣ ಅದರೊಳಗಿನ ಚಂದನೆಯ ಚಿತ್ರಗಳು, ಅದಕ್ಕೆ ತಕ್ಕ ತಲೆಬರಹ, ಪುಟ್ಟ–ಪುಟ್ಟ ಅರ್ಥಗರ್ಭಿತ ವಿವರಣೆಗಳು. ಈ ರೀತಿಯ ಚಿತ್ರಕಾವ್ಯದ ಅನುಭವ ನೀಡುವ ಪುಸ್ತಕಗಳು ‘ಕಾಫಿ ಟೇಬಲ್‌ ಬುಕ್‌’ಗಳು.

ಇವು ಫೋಟೊಗ್ರಫಿ ಹಾಗೂ ಸಾಹಿತ್ಯದ ಸುಂದರ ಮಿಶ್ರಣ. ಫೊಟೊಗಳಿಗೆ ಇಲ್ಲಿ ಮಹತ್ವ ಒಂದು ತೂಕ ಹೆಚ್ಚೇ ಎನ್ನಬಹುದು. ಮೊಬೈಲ್‌ ಫೋಟೊಗಳಿಗೆ ಇಲ್ಲಿ ಜಾಗವಿಲ್ಲ. ಹೈ ರೆಸೊಲ್ಯೂಶನ್‌ ಚಿತ್ರಗಳಿಗೆ ಮಾತ್ರ ಕಿಮ್ಮತ್ತು. ಲೈಟ್‌ ರೀಡಿಂಗ್‌ಗೆ ಹೇಳಿ ಮಾಡಿಸಿದಂಥ ‘ಕಾಫಿ ಟೇಬಲ್‌ ಬುಕ್‌’ಗಳು ತಲೆಗೆ ಅಧ್ಯಯನದ ಭಾರ ಹೊರಿಸುವುದಿಲ್ಲ. ವಿಷಯವೊಂದರ ಬಗ್ಗೆ ಚಿಂತನೆಯ ಬೀಜವನ್ನು ಬಿತ್ತಬಲ್ಲವು. ವಿವರಣೆ ಓದದೆಯೂ ಬರೀ ಚಿತ್ರಗಳನ್ನು ನೋಡುತ್ತ ಹೋದರೂ ವಿಷಯದ ಹೊಳಹು ಸಿಕ್ಕಿಬಿಡುತ್ತದೆ. ಹೀಗಾಗಿ ವಿದ್ವಾಂಸರಿಗೂ, ಸಾಮಾನ್ಯ ಓದುಗರಿಗೂ ಮೆಚ್ಚುಗೆಯಾಗುತ್ತವೆ.

ಇಂಥ ಪುಸ್ತಕಗಳ ಕಲ್ಪನೆಯ ಶ್ರೇಯಸ್ಸು ಸಂದಿರುವುದು ಪರಿಸರವಾದಿ ಡೇವಿಡ್‌ ರಾಸ್‌ ಬ್ರೋವರ್‌ ಅವರಿಗೆ. ಆನ್ಸಲ್‌ ಆ್ಯಡಮ್ಸ್‌ ಅವರ ಫೋಟೊಗ್ರಫಿ, ನ್ಯಾನ್ಸಿ ನೇವ್ಹಲ್‌ ಅವರ ಬರವಣಿಗೆ ಇರುವ ‘ದಿಸ್‌ ಈಸ್‌ ದ ಅಮೆರಿಕನ್‌ ಅರ್ಥ್‌’ 1960ರಲ್ಲಿ ಪ್ರಕಟವಾಗಿದ್ದು, ಪ್ರಥಮ ಕಾಫಿ ಟೇಬಲ್‌ ಬುಕ್‌ ಎಂದು ಗುರುತಿಸಲಾಗಿದೆ. ಇದಕ್ಕೆ ಹಿಂದೆಯೂ ಈ ರೀತಿಯ ಬೃಹತ್‌ ಸಂಪುಟಗಳ ಮುದ್ರಣವಾಗಿತ್ತಾದರೂ ಅದಕ್ಕೆ ಸ್ಪಷ್ಟ ಚೌಕಟ್ಟು ಲಭಿಸಿರಲಿಲ್ಲ. 1961ರ ಆರ್ಟ್‌ ಮ್ಯಾಗಝೀನ್‌ನಲ್ಲಿ ಮೊದಲ ಬಾರಿಗೆ ‘ಕಾಫಿ ಟೇಬಲ್ ಬುಕ್‌’ ಎಂಬ ಶಬ್ದ ಬಳಸಿರುವುದು ಕಂಡು ಬಂದಿದೆ.

ಪರಿಸರ, ಅರಣ್ಯ, ವನ್ಯಜೀವಿಗಳು, ರೆಸಿಪಿ, ಪ್ರವಾಸಿ ಸ್ಥಳಗಳು, ಶಿಲ್ಪಕಲೆ, ಚಿತ್ರಕಲೆ, ಕರಕುಶಲ ಕಲೆ, ಮಹಿಳಾ ಸ್ಥಿತಿಗತಿ, ವಾಸ್ತುಶಿಲ್ಪ, ಫೋಟೊಗ್ರಫಿ, ರಾಜಕೀಯ... ಹೀಗೆ ಹಲವು ವಿಚಾರ ವೈವಿಧ್ಯಗಳಲ್ಲಿ ಕಾಫಿ ಟೇಬಲ್‌ ಬುಕ್‌ಗಳ ಹರವು ಇದೆ. ಮನರಂಜನೆಯ ವಿಷಯಗಳಿಂದ ಹಿಡಿದು ಅತ್ಯಂತ ಗಂಭೀರ ವಿಷಯಗಳವರೆಗೂ ಇದರಲ್ಲಿ ಅಡಕವಾಗಿವೆ.

ಸದ್ದು ಮಾಡಿದ ಪುಸ್ತಕಗಳು

ನ್ಯಾಷನಲ್‌ ಜಿಯೊಗ್ರಫಿಕ್‌ನವರ ‘ವುಮನ್‌’ ಕಾಫಿ ಟೇಬಲ್‌ ಬುಕ್‌ ಜಗತ್ತಿನ ವಿವಿಧೆಡೆಯ ಮಹಿಳೆಯರ ಸ್ಥಿತಿಗತಿ ದರ್ಶಿಸುವ ವರ್ಣಮಯ ಚಿತ್ರ–ವಿವರಗಳಿಂದ ಹೆಸರು ಮಾಡಿದೆ. ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ಇಟಲಿಯ ಸುಂದರ ತಾಣಗಳು ‘ಇಟಲಿ’ ಎಂಬ ಕಾಫಿ ಟೇಬಲ್‌ ಬುಕ್‌ನಲ್ಲಿ ದರ್ಶನ ನೀಡಿವೆ. ಬೆಕ್ಕುಗಳ ಫೋಟೊ ತೆಗೆಯುವುದರಲ್ಲೇ ಹೆಸರು ಮಾಡಿದ್ದ ಫೊಟೊಗ್ರಾಫರ್‌ ವಾಲ್ಟರ್‌ ಜಾರ್ಜ್‌ ಛಾಂಡೋಹಾ ಅವರು 1948ರಿಂದ 2018ರವರೆಗೆ ತೆಗೆದಿರುವ ಬೆಕ್ಕುಗಳ ಫೊಟೊಗ್ರಫಿಗಳಿರುವ ಕಾಫಿ ಟೇಬಲ್ ಬುಕ್‌ ‘ಕ್ಯಾಟ್ಸ್‌’ ಕೂಡ ಈಚೆಗೆ ಪಬ್ಲಿಷ್‌ ಆಗಿದ್ದು, ಅತ್ಯುತ್ತಮಗಳ ಸಾಲಿನಲ್ಲಿ ಸೇರ್ಪಡೆಗೊಂಡಿದೆ.

ದೇಶದಲ್ಲೂ ಹಲವು ಸಂಘ–ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಕಂಪನಿಗಳು ಕಾಫಿ ಟೇಬಲ್‌ ಬುಕ್‌ಗಳನ್ನು ಹೊರತಂದಿವೆ. ಕೇಂದ್ರ ಸರ್ಕಾರದ ನೀತಿ ಆಯೋಗವು 2019ರಲ್ಲಿ ಪ್ರಕಟಿಸಿದ ‘ವುಮನ್‌: ಟ್ರಾನ್ಸ್‌ಫಾರ್ಮಿಂಗ್‌ ಇಂಡಿಯಾ 2019’ ಬುಕ್‌ ದೇಶದ ಪ್ರಸ್ತುತ ಮಹಿಳಾ ಉದ್ಯಮಿಗಳ ಚಿತ್ರಗಳನ್ನು ಸಾಧನೆಗಳ ಕಿರುಮಾಹಿತಿಯೊಂದಿಗೆ ಪ್ರಸ್ತುತ ಪಡಿಸಿದೆ.

ಶಾರೂಖ್‌ ಖಾನ್‌ ಪತ್ನಿ, ಪ್ರಖ್ಯಾತ ವಿನ್ಯಾಸಕಿ ಗೌರಿ ಖಾನ್‌ 2021ರಲ್ಲಿ ಹೊರತರಲಿರುವ ಕಾಫಿ ಟೇಬಲ್‌ ಬುಕ್‌ ‘ಮೈ ಲೈಫ್‌ ಇನ್‌ ಡಿಸೈನ್‌’ ಈಗಲೇ ಸದ್ದು ಮಾಡತೊಡಗಿದೆ. ಲಾಕ್‌ಡೌನ್‌ ಸಮಯವನ್ನು ಈ ಬುಕ್‌ಗಾಗಿ ಉಪಯೋಗಿಸಿಕೊಂಡಿರುವುದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಪೆಂಗ್ವಿನ್‌ ಇಂಡಿಯಾ ಇವರ ಪುಸ್ತಕವನ್ನು ಪ್ರಕಟಿಸಲಿದೆ.

ಡಾ. ಸತ್ಯಕಾಮ ಭಾರದ್ವಾಜ್ ವೇದಿಕ್‌ ರಿಸರ್ಚ್‌ ಫೌಂಡೇಷನ್‌ ವೇದಗಳ ಬಗ್ಗೆ 2018ರಲ್ಲಿ ಕಾಫಿ ಟೇಬಲ್‌ ಬುಕ್‌ ಪ್ರಕಟಿಸಿದೆ. ಇಎನ್‌ಟಿ ತಜ್ಞರಾಗಿದ್ದ ಡಾ.ಸತ್ಯಕಾಮ ಭಾರದ್ವಾಜ್ ಅವರು ವೇದಗಳ ಬಗ್ಗೆ 7 ದಶಕಗಳ ಕಾಲ ನಡೆಸಿದ ಸಂಶೋಧನೆಗಳ ಪಕ್ಷಿನೋಟ ಈ ಪುಸ್ತಕದಲ್ಲಿ ಮೂಡಿ ಬಂದಿದೆ. 2018ರಲ್ಲಿ ಡಾ. ಅಂಬೇಡ್ಕರ್‌ ಅವರ ಬಗ್ಗೆ ವರ್ಣಮಯ ಚಿತ್ರಸಂಪುಟ ಮಹಾರಾಷ್ಟ್ರದಲ್ಲಿ ಪ್ರಕಟವಾಗಿದೆ. ಅರಣ್ಯ ಸಂರಕ್ಷಣೆ ಪ್ರೋತ್ಸಾಹಿಸಲು ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿರುವ 1000ಕ್ಕೂ ಹೆಚ್ಚು ಪಾರಂಪರಿಕ ಮರಗಳ ಬಗ್ಗೆ ಕಾಫಿ ಟೇಬಲ್‌ ಬುಕ್‌ ಪ್ರಕಟಿಸುವುದಾಗಿ ಈಚೆಗೆ ಘೋಷಿಸಿದೆ.

ಅದಿತಿ ರಂಜನ್‌ ಹಾಗೂ ಎಂ.ಪಿ.ರಂಜನ್‌ ಅವರು ರಚಿಸಿರುವ ‘ಹ್ಯಾಂಡ್‌ಮೇಡ್‌ ಇನ್‌ ಇಂಡಿಯಾ’ ಪ್ರಶಸ್ತಿ ವಿಜೇತ ಕಾಫಿ ಟೇಬಲ್‌ ಬುಕ್‌ ಎನಿಸಿದ್ದು, 3,500 ಚಿತ್ರಗಳನ್ನು ಒಳಗೊಂಡಿದೆ. ದೇಶದ ಕರಕುಶಲ ಕಲೆಗಳ ವೈವಿಧ್ಯವನ್ನು ಇದು ಕಟ್ಟಿಕೊಟ್ಟಿರುವ ರೀತಿಯೇ ಅದ್ಭುತ. ‘ಟೈಮ್‌ಲೆಸ್‌ ಲಕ್ಷ್ಮಣ್‌’, ನ್ಯಾಷನಲ್‌ ಜಿಯೊಗ್ರಫಿಕ್‌ನ ‘ಥ್ರೂ ದ ಲೆನ್ಸ್‌’, ‘ಬಾಲಿವುಡ್‌: ದ ಫಿಲ್ಮ್ಸ್‌– ದ ಸಾಂಗ್ಸ್‌– ದ ಸ್ಟಾರ್ಸ್‌’, ವೀರ್‌ ಸಾಂಘ್ವಿ ಅವರ ‘ಬಾಂಬೆ ಮುಂಬೈ’ ಮೊದಲಾದವು ಜನಪ್ರಿಯಗೊಂಡಿರುವ ಚಿತ್ರಸಂಪುಟಗಳು.

ರಾಜ್ಯದಲ್ಲಿ ಚಿತ್ರ ಸಂಪುಟ ವೈವಿಧ್ಯ

ಕರ್ನಾಟಕ ಚಿತ್ರಕಲಾ ಪರಿಷತ್‌ 2014ರಲ್ಲಿ ಪ್ರಕಟಿಸಿರುವ ಚಿತ್ರಕಲಾ ಸಂಪುಟ ‘ಸಿಂಫೊನಿ ಇನ್‌ ಲೈನ್ಸ್‌’ ರಾಜ್ಯದ ಪ್ರಸಿದ್ಧ ತೀರ್ಥ ಕ್ಷೇತ್ರಗಳು, ಕಟ್ಟಡಗಳ 100 ಸ್ಕೆಚ್‌ಗಳನ್ನು ಒಳಗೊಂಡಿದೆ, ವಾಸ್ತುಶಿಲ್ಪವನ್ನು ಕಲಾಕೃತಿಗಳಲ್ಲಿ ಹಿಡಿದಿಟ್ಟ ರಾಜ್ಯದ ಮೊದಲ ಕಾಫಿ ಟೇಬಲ್‌ ಬುಕ್‌ ಎನಿಸಿಕೊಂಡಿದೆ. ಪಾರಂಪರಿಕ ನಗರಿ ಮೈಸೂರು ಹಾಗೂ ಕರ್ನಾಟಕದ ಸುಂದರ ತಾಣಗಳ ಬಗ್ಗೆಯೂ ಹಲವು ಕಾಫಿ ಟೇಬಲ್‌ ಬುಕ್‌ಗಳು ಪ್ರಕಟವಾಗಿವೆ. ಪುಂಡಲೀಕ ಕಲ್ಲಿಗನೂರು ಅವರ 'ಬೇಲೂರು-ಹಳೇಬೀಡು: ಶಿಲ್ಪಕಲಾ ಸಾಮ್ರಾಜ್ಯ’ ಶಿಲ್ಪಕಲೆಯ ಬಗ್ಗೆ ಈಚೆಗೆ ಪ್ರಕಟಗೊಂಡಿರುವ ಅಮೂಲ್ಯ ಚಿತ್ರ ಸಂಪುಟವಾಗಿದೆ.

ಗುಣಮಟ್ಟದ ಹಾಳೆ, ಚಿತ್ರಗಳನ್ನು ಬಳಸಿ ಮಾಡಿರುವ ಕಾರಣ ಕಾಫಿ ಟೇಬಲ್‌ ಬುಕ್‌ಗಳು ದುಬಾರಿಯಾಗಿರುವುದು ಸಾಮಾನ್ಯ. ಆದರೆ ಮನೆಯ ಬೀರುವಿನಲ್ಲಿ ಭದ್ರವಾಗಿರುವ ಆಲ್ಬಮ್‌ಗಳಷ್ಟೇ ಇವು ಅಮೂಲ್ಯ. ಚಿತ್ರ ಹಾಗೂ ಬರಹಗಳ ಸುಂದರ ಹೆಣಿಗೆ ಇರುವ ಇಂಥ ಪುಸ್ತಕ ರಚಿಸಲು ಅಪಾರ ಶ್ರಮ, ಸಮಯ ಅಗತ್ಯ. ಕಲಾಪ್ರೇಮಿಗಳು ಇಂಥ ಸಂಪುಟಗಳನ್ನು ಅತ್ಯುತ್ತಮ ಉಡುಗೊರೆ ಎಂದೇ ಭಾವಿಸುತ್ತಾರೆ. ವ್ಯಾಪಾರ–ವಹಿವಾಟಿನ ಪ್ರಚಾರದ ಉದ್ದೇಶಕ್ಕೂ, ರಾಜಕೀಯ ನಾಯಕರ ಜೀವನ ಸಾಧನೆ ವಿವರಗಳನ್ನೊಳಗೊಂಡ ಕಾಫಿ ಟೇಬಲ್‌ ಬುಕ್‌ಗಳು ಎಷ್ಟು ಬಂದಿವೆಯೋ ಲೆಕ್ಕವಿಲ್ಲ. ಡಿಜಿಟಲ್‌ ಯುಗದಲ್ಲಿ ಇಂಥ ದುಬಾರಿ ಪುಸ್ತಕಗಳ ಮುದ್ರಣ ಒಂದು ಸವಾಲೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT