ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಾಣಿಕ ನಾಟಕಗಳಿಗೆ ಜೀವ ತುಂಬುವ ಬಸವರಾಜು: 800ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ

ಉಮ್ಮತ್ತೂರಿನ ಕಲಾವಿದ
Last Updated 5 ಜುಲೈ 2022, 19:30 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿಯ ಉಮ್ಮತ್ತೂರು ಗ್ರಾಮದಲ್ಲಿ ಯಾರ ಬಳಿಯಾದರೂ ಹೋಗಿ, ‘ಇಲ್ಲಿನ ನಾಟಕ ಕಲಾವಿದ ಯಾರು‘ ಎಂದರೆ ಕೇಳಿದರೆ ತಕ್ಷಣ ಬಸವರಾಜು ಎಂಬ ಉತ್ತರ ಬರುತ್ತದೆ.

ಪೌರಾಣಿಕ ನಾಟಕ, ಸಾಮಾಜಿಕ ನಾಟಕ, ಸಿನಿಮಾ, ಹಾಡುಗಾರಿಕೆ, ಹಾಸ್ಯ ಸಂಜೆ.. ಹೀಗೆ ರಂಗಭೂಮಿ, ನಟನೆಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬಸವರಾಜು ಅವರನ್ನು ಬರೀ ಹೆಸರಿನಿಂದ ಕರೆದರೆ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಹೆಸರ ಮುಂದೆ ಉಮ್ಮತ್ತೂರು ಎಂದು ಬರಲೇ ಬೇಕು. ಅಷ್ಟರ ಮಟ್ಟಿಗೆ ಊರಿನೊಂದಿಗೆ ಅವರ ಹೆಸರು ಬೆರೆತಿದೆ.

ನಶಿಸಿ ಹೋಗುತ್ತಿರುವ ಪೌರಾಣಿಕ ನಾಟಕಗಳಿಗೆ ಜಿಲ್ಲೆ, ಹೊರ ಜಿಲ್ಲೆಗಳಲ್ಲಿಯೂ ಜೀವ ತುಂಬುತ್ತಿದ್ದಾರೆ ಉಮ್ಮತ್ತೂರು ಬಸವರಾಜು.ಬಾಲ್ಯದಿಂದಲೇ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಿಗೆ ಬಣ್ಣ ಹಚ್ಚಿದ ಬಸವರಾಜು ಅವರು ಇದುವರೆಗೆ 800 ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಶಿಕ್ಷಕರ ಪ್ರೇರಣೆ: ಶಾಲಾ ಅವಧಿಯಲ್ಲಿ ಏಕಪಾತ್ರಾಭಿನಯ ಹಾಗೂ ಮಿಮಿಕ್ರಿ ಮಾಡುತ್ತಿದ್ದ ಇವರನ್ನು ಶಿಕ್ಷಕರು ವಯಸ್ಕರ ಶಿಕ್ಷಣದ ಸಾಕ್ಷರ ವಾಹಿನಿಯಲ್ಲಿ ‘ಹೆಬ್ಬೆಟ್ಟು’ ನಾಟಕದಲ್ಲಿ ಅಭಿನಯಿಸುವಂತೆ ಪ್ರೇರೇಪಿಸಿದರು. ಆ ನಾಟಕದಲ್ಲಿ ಸೈ ಎನಿಸಿಕೊಂಡ ಇವರು ವಿವಿಧ ತಂಡಗಳೊಂದಿಗೆ ಬೀದಿ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಅಲ್ಲಿಂದ ನಾಟಕಗಳಲ್ಲಿ ಬಣ್ಣ ಹಚ್ಚುವ ಗೀಳು ಅಂಟಿಕೊಂಡಿತು.

ತಮ್ಮೂರಿನ ಗೆಳೆಯರ ಬಳಗದ ಮೂಲಕ ‘ರತ್ನಮಾಂಗಲ್ಯ’, ‘ಬಳ್ಳಿ ಬಾಡಿತು’ ಸೇರಿದಂತೆ ಕೆಲವು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿದರು. ಮೈಸೂರಿನ ಕಲಾ ಮಂದಿರದಲ್ಲಿ ಪ್ರದರ್ಶನ ನೀಡಿದರು. ಹಾಡುಗಾರಿಕೆ ಹಾಗೂ ಅಭಿನಯ ಎರಡರಲ್ಲೂ ಸೈ ಎನಿಸಿಕೊಂಡಿದ್ದ ಬಸವರಾಜು ಅವರನ್ನು ಹೆಚ್ಚು ಆಕರ್ಷಿಸಿದ್ದು ಪೌರಾಣಿಕ ನಾಟಕಗಳು.

ಧಕ್ಷಯಜ್ಞ, ಕುರುಕ್ಷೇತ್ರ, ಬೇಡರ ಕಣ್ಣಪ್ಪ, ಕೃಷ್ಣಲೀಲೆ, ಭಕ್ತ ಪ್ರಹ್ಲಾದ, ಪ್ರಭುಲಿಂಗ ಲೀಲೆ ಸೇರಿದಂತೆ ಹಲವು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಧಕ್ಷ ಬ್ರಹ್ಮ, ಭೃಗು, ವಿಷ್ಣು, ಜಾಲಬ್ರಹ್ಮ, ನಂದೀಶ್ವರ, ಕಾಶಿ, ಶಕುನಿ, ದ್ರೋಣ ಸೇರಿದಂತೆ ನಾಯಕ, ಖಳನಾಯಕ ಹಾಗೂ ಹಾಸ್ಯ ಪಾತ್ರಗಳು ಅವರಿಗೆ ಹೆಸರು ತಂದು ಕೊಟ್ಟಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ದೆಹಲಿಯಲ್ಲಿಯೂ ಪೌರಾಣಿಕ ನಾಟಕ ಪ್ರದರ್ಶನ ನೀಡಿದ್ದಾರೆ.

ಸುತ್ತೂರು ಜಾತ್ರಾ ಮಹೋತ್ಸವ, ಸಿದ್ಧಗಂಗೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಬಳ್ಳಾರಿ, ಮಂಡ್ಯ, ಮೈಸೂರಿನಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ದಸರಾ ಸಮಯದಲ್ಲಿ ಅರಮನೆ, ವಸ್ತುಪ್ರದರ್ಶನಗಳಲ್ಲಿ ಇವರ ಅಭಿನಯದ ಪೌರಾಣಿಕ ನಾಟಕಗಳು ಪ್ರದರ್ಶನ ಕಂಡಿವೆ.

ಮೈಸೂರಿನ ಮಹದೇಶ್ವರ ಕಲಾ ಸಂಘ ಸೇರಿದಂತೆ ವಿವಿಧ ಕಲಾ ತಂಡಗಳು ಇವರಿಗೆ ಆಮಂತ್ರಣ ನೀಡಿ ಅವರ ನಾಟಕಗಳಲ್ಲಿ ಇವರಿಗೊಂದು ಪಾತ್ರ ನೀಡುತ್ತಾ ಬಂದಿವೆ.

ಸುತ್ತಮುತ್ತಲಿನ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಯಾವುದೇ ಕಲಾ ಸಂಘಗಳು ಪೌರಾಣಿಕ ನಾಟಕ ಪ್ರದರ್ಶಿಸುವಾಗ ಇವರಿಗೊಂದು ಪಾತ್ರ ಇದ್ದೇ ಇರುತ್ತದೆ. ಉಮ್ಮತ್ತೂರು ಬಸವರಾಜು ನಮ್ಮ ನಾಟಕ ತಂಡದಲ್ಲಿ ಇರಬೇಕು ಎಂಬ ಆಶಯವನ್ನು ಬಹುತೇಕ ತಂಡಗಳ ಕಲಾವಿದರು ವ್ಯಕ್ತಪಡಿಸುತ್ತಾರೆ.

ವಿವಿಧ ಜಿಲ್ಲೆಯ ಕಲಾ ಸಂಘಗಳು, ಕನ್ನಡ ಪರ ಸಂಘಟನೆಗಳು ಇವರ ಕಲಾ ಸೇವೆಯನ್ನು ಗುರುತಿಸಿ ಗೌರವಿಸಿವೆ. ಸಿಜಿಕೆ ಪ್ರಶಸ್ತಿ, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ನೀಡುವ ಪ್ರಶಸ್ತಿಗಳಿಗೆ ಬಸವರಾಜು ಭಾಜನರಾಗಿದ್ದಾರೆ.

‘ಪೌರಾಣಿಕ ನಾಟಕ ನಶಿಸಬಾರದು’

ಇತ್ತೀಚೆಗೆ ಸಿನಿಮಾಗಳಲ್ಲಿ ನಟನೆಗೂ ಬಸವರಾಜು ಅವರಿಗೆ ಅವಕಾಶ ಸಿಗುತ್ತದೆ. ಹಾಸ್ಯಸಂಜೆ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಾರೆ. ಹಾಗಿದ್ದರೂ, ಪೌರಾಣಿಕ ನಾಟಕಗಳಲ್ಲಿ ನಟನೆಯನ್ನು ಬಿಡುವುದಿಲ್ಲ ಎಂದು ಹೇಳುತ್ತಾರೆ ಬಸವರಾಜು.

‘ಈಚಿನ ದಿನಗಳಲ್ಲಿ ಪೌರಾಣಿಕ ನಾಟಕಗಳು ಕಡಿಮೆಯಾಗುತ್ತಿವೆ. ಈ ನಾಟಕಗಳನ್ನು ನಂಬಿರುವ 50ಕ್ಕೂ ಹೆಚ್ಚು ಕುಟುಂಬಗಳು ಜಿಲ್ಲೆಯಲ್ಲಿವೆ. ಪೌರಾಣಿಕ ನಾಟಕ ಅಭಿನಯಿಸುವುದರಿಂದ ನಮ್ಮ ಗ್ರಾಮೀಣ ಕಲೆ ಉಳಿಯುತ್ತದೆ. ಈ ನಾಟಕಗಳು ಮಾನಸಿಕ ನೆಮ್ಮದಿಯನ್ನು ನೀಡುತ್ತವೆ. ಇಂತಹ ಪೌರಾಣಿಕ ನಾಟಕಗಳು ನಶಿಸಿ ಹೋಗಲು ಬಿಡಬಾರದು’ ಎಂಬುದು ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT