ವರ್ಷದ ಅಂತ್ಯಕ್ಕೆ ರೆಕ್ಸ್‌ಗೆ ‘ಟಾಟಾ’

7

ವರ್ಷದ ಅಂತ್ಯಕ್ಕೆ ರೆಕ್ಸ್‌ಗೆ ‘ಟಾಟಾ’

Published:
Updated:

ಬೆಂಗಳೂರು ನಗರದ ಮೂರು ತಲೆಮಾರುಗಳ ಯೌವ್ವನದೊಂದಿಗೆ, ಮನರಂಜನಾ ಕ್ಷೇತ್ರದೊಂದಿಗೆ ರೆಕ್ಸ್‌ ಎಂಬ ಹೆಸರು ಕಾಯಂ ಪುಟ ಹೊಂದಿದೆ. ಹಾಲಿವುಡ್‌ನ ಚಿತ್ರಗಳ ಪ್ರದರ್ಶನಕ್ಕಾಗಿ ಸ್ವಾತಂತ್ರ್ಯಪೂರ್ವದಿಂದಲೂ ಜನಪ್ರಿಯವಾಗಿದ್ದ ಚಿತ್ರಮಂದಿರವಿದು.

ಸುಮಾರು 80 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ರೆಕ್ಸ್‌  ನಗರವಾಸಿಗಳ ಅಚ್ಚುಮೆಚ್ಚಿನ ಚಿತ್ರಮಂದಿರ. ಸ್ವಾತಂತ್ರ್ಯ ಪೂರ್ವದಲ್ಲಿ ಬೆಂಗಳೂರು ಪ್ರಮುಖವಾಗಿ ಎರಡು ಹಂತಗಳಲ್ಲಿ ರೂಪುಗೊಂಡಿತ್ತು. ನಗರ ನಿರ್ಮಾತೃ ಕೆಂಪೇಗೌಡ ಅವರು ನಿರ್ಮಿಸಿದ್ದ ‘ಪೇಟೆ’ಯ ಭಾಗಗಳಲ್ಲಿ ಕನ್ನಡ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ದಂಡು ಪ್ರದೇಶ (ಕಂಟೋನ್ಮೆಂಟ್‌) ಮತ್ತು ಅದರ ಸುತ್ತಮುತ್ತ ಬ್ರಿಟಿಷರು, ತಮಿಳು ಭಾಷಿಗರು ಹೆಚ್ಚಾಗಿದ್ದರು. ಈ ಎಲ್ಲರೂ ಸಿನಿಮಾ ನೋಡಲು ಹೆಚ್ಚಾಗಿ ಬರುತ್ತಿದ್ದುದು ರೆಕ್ಸ್‌ಗೆ.

ಪಿ. ವೇಣುಗೋಪಾಲ್‌ ನಾಯ್ಡ್‌ ಉರುಫ್‌ ಪಿ.ವಿ. ಪೌಲ್‌ ಅವರು ರೆಕ್ಸ್‌ ಚಿತ್ರಮಂದಿರದ ಮೊದಲ ಮಾಲೀಕರು. ಇದನ್ನು ಮೊದಲು ‘ಪೌಲ್ಸ್‌ ರೆಕ್ಸ್‌’ ಥಿಯೇಟರ್‌ ಎಂದೇ ಕರೆಯಲಾಗುತ್ತಿತ್ತು. ಬ್ಯಾಂಕಿನಿಂದ ಪಡೆದಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದ ಕಾರಣ ಈ ಚಿತ್ರಮಂದಿರವನ್ನು ಬ್ಯಾಂಕ್‌ ತನ್ನ ಸ್ವಾಧೀನಕ್ಕೆ ಪಡೆಯಿತು. 1961ರಲ್ಲಿ ನಂದಲಾಲ್‌ ಕಪೂರ್‌ (ಈಗಿನ ಮಾಲೀಕರು) ರೆಕ್ಸ್‌ ಥಿಯೇಟರ್‌ ಅನ್ನು ಸಾರ್ವಜನಿಕ ಹರಾಜಿನಲ್ಲಿ ₹ 8.51 ಲಕ್ಷಕ್ಕೆ ಖರೀದಿಸಿದರು.

ಕಂಟೋನ್‌ಮೆಂಟ್‌ ಪ್ರದೇಶದಲ್ಲಿ ಹಾಲಿವುಡ್‌ ಮತ್ತು ಇಂಗ್ಲಿಷ್‌ ಭಾಷಾ ಚಿತ್ರಗಳನ್ನು ಪ್ರದರ್ಶಿಸುವ 10ಕ್ಕೂ ಹೆಚ್ಚು ಥಿಯೇಟರ್‌ಗಳು ಇದ್ದವು. ಅವುಗಳಲ್ಲಿ ಕೆಲವು 1970ರಲ್ಲಿ ಒಂದೊಂದಾಗಿಯೇ ಬಾಗಿಲು ಹಾಕಿದವು. 2002ರಲ್ಲಿ ಗ್ಯಾಲಕ್ಸಿ ಬಾಗಿಲು ಮುಚ್ಚಿತು. ನಗರದ ಮಹಾತ್ಮ ಗಾಂಧಿ (ಎಂ.ಜಿ) ರಸ್ತೆಯಲ್ಲಿದ್ದ ಪ್ಲಾಜಾ ಚಿತ್ರಮಂದಿರವನ್ನು ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕಾಗಿ 2005ರಲ್ಲಿ ಕೆಡವಲಾಯಿತು. ಇದೀಗ ಇತಿಹಾಸ ಪುಟ ಸೇರುವ ಸರದಿ ಬ್ರಿಗೆಡ್‌ ರಸ್ತೆಯ ರೆಕ್ಸ್‌ಗೆ ಬಂದಿದೆ.

ಕಪೂರ್‌ ಕುಟುಂಬದ ಮಾಲೀಕತ್ವದಲ್ಲಿ 1962ರಿಂದ ರೆಕ್ಸ್‌ನಲ್ಲಿ ಸಿನಿಮಾ ಪ್ರದರ್ಶನಕ್ಕೆ (ಚಿತ್ರ–‘ಸ್ಲೀಪಿಂಗ್‌ ಬ್ಯೂಟಿ’) ಚಾಲನೆ ಸಿಕ್ಕಿತು. ಬ್ರೂಸ್‌ ಲೀ ನಟಿಸಿದ ‘ರಿಟರ್ನ್‌ ಆಫ್‌ ಡ್ರಾಗನ್‌’ 1979ರಲ್ಲಿ ಅತಿ ಹೆಚ್ಚು ಅಂದರೆ 29 ವಾರಗಳ ಪ್ರದರ್ಶನ ಕಂಡಿತ್ತು. ಮಲಯಾಳಂ ಸಿನಿಮಾ ‘ಚಟ್ಟಕ್ಕರಿ’ (1974) 16 ವಾರಗಳ ಕಾಲ ಬೆಳಗ್ಗಿನ ಪ್ರದರ್ಶನ (ಮಾರ್ನಿಂಗ್‌ ಶೊ) ಕಂಡಿತ್ತು.

ಇತ್ತೀಚಿನ ವರ್ಷಗಳಲ್ಲಿ ‘ಎಂದಿರನ್‌’ (ತಮಿಳು), ‘ಬಾಹುಬಲಿ’ (ಹಿಂದಿ), ‘ಚಾರ್ಲಿ’ (ಕನ್ನಡ) ಸಿನಿಮಾಗಳು ಹೆಚ್ಚಿನ ಪ್ರದರ್ಶನಗಳನ್ನು ಕಂಡಿದ್ದವು.‌

ರೆಕ್ಸ್‌ ಸುತ್ತಲಿನ 3 ಕಿ.ಮೀ ವ್ಯಾಪ್ತಿಯಲ್ಲಿ ಹಲವು ಕಾಲೇಜುಗಳಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಮೊದಲಿನಿಂದಲೂ ಈ ಥಿಯೇಟರ್‌ ಮನರಂಜನಾ ತಾಣ. ತರಗತಿಗಳಿಗೆ ‘ಬಂಕ್‌’ ಮಾಡಿ ಸಿನಿಮಾ ನೋಡಲು ಬರುವ ವಿದ್ಯಾರ್ಥಿಗಳೂ ಇದ್ದಾರೆ. ‘ಜೋಡಿ ಹಕ್ಕಿ’ಗಳು, ಎಂ.ಜಿ ರಸ್ತೆ, ಬ್ರಿಗೆಡ್‌ ರಸ್ತೆಯಲ್ಲಿ ಸುತ್ತಲು ಮತ್ತು ಶಾಪಿಂಗ್‌ಗೆ ಬರುವವರೂ ರೆಕ್ಸ್‌ನಲ್ಲಿ ಸಿನಿಮಾ ನೋಡಲು ಆಸಕ್ತಿ ತೋರುತ್ತಾರೆ.

ರೆಕ್ಸ್‌ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ‘ಮೆಟ್ರೊ’ ಸಿಬ್ಬಂದಿ ಜತೆ ಕೆಲವರು ರೆಕ್ಸ್ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸ್ನೇಹಿತೆಯರೊಂದಿಗೆ 2.0 ಸಿನಿಮಾ ನೋಡಲು ಬಂದಿದ್ದ ಐಟಿ ಉದ್ಯೋಗಿ ರೂಪಾ ‘ನನ್ನಂತ ಹಲವರಿಗೆ ರೆಕ್ಸ್‌ ಚಿತ್ರಮಂದಿರ ಮನರಂಜನಾ ತಾಣ’ ಎನ್ನುತ್ತಾರೆ.

ಸಮೀಪದಲ್ಲಿಯೇ ತನ್ನ ಮಗಳ ನೆರವಿನಿಂದ ಮೆಟ್ಟಿಲು ಹತ್ತುತ್ತಿದ್ದ ಸೋಮೇಶ್‌ ಯಾದವ್‌ (84), ‘ನಾನು ರೆಕ್ಸ್‌ ಥಿಯೇಟರ್‌ನಲ್ಲಿ ಮಾತ್ರ ಸಿನಿಮಾಗಳನ್ನು ನೋಡುತ್ತಿದ್ದೆ. ಇತ್ತೀಚೆಗೆ ಚಿತ್ರಮಂದಿರಕ್ಕೆ ಹೋಗುವುದನ್ನು ಬಿಟ್ಟಿದ್ದೇನೆ’ ಎಂದು ಪ್ರತಿಕ್ರಿಯಿಸುತ್ತಾರೆ.

‘ಸೌಂಡ್‌ ಪ್ರೊಜೆಕ್ಷನ್‌ ಸೇರಿದಂತೆ ಪ್ರತಿಯೊಂದೂ ರೆಕ್ಸ್‌ನಲ್ಲಿ ಪರ್ಫೆಕ್ಟ್‌. ಹಾಗಾಗಿ ಕೆಲ ಸಾರಿ ಇಲ್ಲಿ ಒಂದೇ ದಿನ ಹೆಚ್ಚು ಶೊಗಳನ್ನು ನೋಡಿದ್ದಿದೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ ರಾವ್‌.

‘ರೆಕ್ಸ್‌ನಲ್ಲಿ ಪ್ರದರ್ಶನ ಕಾಣುವ ಹಾಲಿವುಡ್‌ ಸಿನಿಮಾನಗಳನ್ನು ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಕುಮಾರ್‌ ಬಂಗಾರಪ್ಪ, ಕೋಕಿಲಾ ಮೋಹನ್‌, ಸಿಹಿಕಹಿ ಚಂದ್ರು ಅವರು ತಪ್ಪದೇ ವೀಕ್ಷಿಸುತ್ತಾರೆ’ ಎನ್ನುತ್ತಾರೆ ರೆಕ್ಸ್‌ನ ವ್ಯವಸ್ಥಾಪಕ ಬಿ.ಎಂ.ನಾಗರಾಜ್‌.

ಸ್ಯಾಕ್ಸೋಫೋನ್‌ನ ಪ್ರಸಿದ್ಧ ವಾದಕ ರೆಕ್ಸ್‌ ರೊಜಾರಿಯೊ ಅವರು, ‘ರೆಕ್ಸ್‌ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ನನ್ನ ತಂದೆ ಜೇಕ್ಸ್‌ ರೊಜಾರಿಯೊ ಅವರು ಸ್ಯಾಕ್ಸೋಫೋನ್‌ ನುಡಿಸುತ್ತಿದ್ದರು’ ಎಂಬುದನ್ನು ಸ್ಮರಿಸುತ್ತಾರೆ.

ಇನ್ನೇನು ರೆಕ್ಸ್‌ನ ಕೊನೆಯ ಆಟಕ್ಕೆ ಒಂದಷ್ಟು ದಿನಗಳು ಉಳಿದಿವೆ. ನಿಮ್ಮ ನೆನಪಿನ ಪುಟದಲ್ಲಿ ಈ ಕೊನೆಯ ಅಧ್ಯಾಯವನ್ನೂ ದಾಖಲಿಸಿ.

ಇಲ್ಲಿನ ಸಿಬ್ಬಂದಿಯ ಮಾತುಗಳು

ಐವತ್ತು ವರ್ಷಗಳಿಂದ  ವೀಕ್ಷಕರಿಗೆ ಕೂರಲು ಸೀಟುಗಳನ್ನು ತೋರಿಸುವ ಗಂಗಾಧರ್‌ ಎಸ್‌. ಹಿರೇಮಠ್‌ (71) ಅವರು, ‘ನಾನು ರೆಕ್ಸ್‌ನ ಜತೆ ಜತೆಯಲ್ಲಿಯೇ ಬೆಳೆದಿದ್ದೇನೆ’ ಎನ್ನುತ್ತಾರೆ.

***

ಇಲ್ಲಿ ಕಾರ್ಪೆಂಟರ್‌ ಆಗಿ ಕೆಲಸ ಮಾಡುತ್ತಿರುವ ಎಸ್‌. ಜೋಸೆಫ್‌ (66), ‘ನಾನು ರೆಕ್ಸ್‌ನಲ್ಲಿ ಖುಷಿಯಿಂದ ಕೆಲಸ ಮಾಡಿದ್ದೇನೆ. ಇಲ್ಲಿನ ಮಾಲೀಕರು ನಮ್ಮನ್ನು ಕುಟುಂಬದ ಸದಸ್ಯರಂತೆಯೇ ಕಂಡಿದ್ದಾರೆ’ ಎಂದು ಹೇಳುತ್ತಾರೆ.

***

ಐವತ್ತು ವರ್ಷಗಳಿಂದ ರೆಕ್ಸ್‌ನಲ್ಲಿ ಬುಕಿಂಗ್‌ ಕ್ಲರ್ಕ್‌ ಆಗಿರುವ ಮೈಕೆಲ್‌ ಮೊಂಟೆರಿಯೊ, ಅಲಿಸ್ಟರೆ ಮ್ಯಾಕ್‌ಲೀನ್‌ ಅವರ ಕಾದಂಬರಿ ಆಧಾರಿತ ಸಿನಿಮಾಗಳಾದ ‘ವೇರ್‌ ಈಗಲ್ಸ್‌ ಡೇರ್‌’, ‘ದಿ ಗನ್ಸ್‌ ಆಫ್‌ ನವರೊನ್‌’, ಮತ್ತು ‘ಫಿಯರ್‌ ಈಸ್‌ ದಿ ಕಿ’ ರೆಕ್ಸ್‌ನಲ್ಲಿ ಉತ್ತಮ ಪ್ರದರ್ಶನ ಕಂಡಿದ್ದವು ಎಂದು ಸ್ಮರಿಸುತ್ತಾರೆ.

***

22 ವರ್ಷಗಳಿಂದ ರೆಕ್ಸ್‌ನ ವ್ಯವಸ್ಥಾಪಕರಾಗಿರುವ ಬಿ.ಎಂ. ನಾಗರಾಜ್‌ ಅವರು, ‘ನಗರದ ಜನರು ಹಾಲಿವುಡ್‌ ಸಿನಿಮಾಗಳನ್ನು ನೋಡಲು ಹೆಚ್ಚಾಗಿ ರೆಕ್ಸ್‌ಗೆ ಬರುತ್ತಿದ್ದರು. ಇತ್ತೀಚೆಗೆ ಮಲ್ಟಿಪ್ಲೆಕ್ಸ್‌ಗಳತ್ತ ಅವರು ಹೆಚ್ಚಾಗಿ ಆಕರ್ಷಿತರಾಗಿದ್ದಾರೆ. ಮೂರು ವರ್ಷಗಳಲ್ಲಿ ಇದೇ ಜಾಗದಲ್ಲಿ ಬರಲಿರುವ ಮಾಲ್‌ನಲ್ಲಿ ‘ರೆಕ್ಸ್‌’ ಮಲ್ಪಿಪ್ಲೆಕ್ಸ್‌ ರೂಪದಲ್ಲಿ ಬರಲಿದೆ’ ಎನ್ನುತ್ತಾರೆ.

***

33 ವರ್ಷಗಳಿಂದ ಇಲ್ಲಿ ಉಪ ವ್ಯವಸ್ಥಾಪಕರಾಗಿರುವ ಜಿ.ಸುಕುಮಾರ್‌ ಅವರ ಪ್ರಕಾರ, ‘ಟಿಕೆಟ್‌ ಬುಕಿಂಗ್‌ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಪೈಕಿ ಕೆಲವರು 40ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ’.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !