ಗುರುವಾರ , ಸೆಪ್ಟೆಂಬರ್ 23, 2021
26 °C

ರಕ್ಷಾ ಬಂಧನ: ಬಾಂಧವ್ಯಕ್ಕೊಂದು ‘ಬೀಜ ರಕ್ಷೆ’

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ರಕ್ಷಾ ಬಂಧನ ಸಮೀಪಿಸುತ್ತಿದೆ. ಬಣ್ಣಬಣ್ಣದ ರಾಖಿಗಳು ಅಂಗಡಿ, ಸೂಪರ್ ಬಜಾರ್, ಆನ್‌ಲೈನ್‌ನಲ್ಲಿ ಕಾಣಸಿಗುತ್ತಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ರಾಖಿಗಳು ಪ್ಲಾಸ್ಟಿಕ್‌ಮಯ. ಬಳಕೆಯ ನಂತರ ಕಸದ ಬುಟ್ಟಿ ಸೇರುವ ಪ್ಲಾಸ್ಟಿಕ್ ರಾಖಿ ತ್ಯಾಜ್ಯವಾಗಿ ಪರಿಸರವನ್ನು ಹಾಳುಗೆಡವುತ್ತದೆ.

ಪ್ಲಾಸ್ಟಿಕ್‌ಗೆ ಪರ್ಯಾಯ ಸಾಮಗ್ರಿಯನ್ನು ಶೋಧಿಸುವ ಜೊತೆಗೆ ಅದನ್ನು ಬಳಕೆಗೆ ತರುವ ನಿಟ್ಟಿನಲ್ಲಿ ಮೈಸೂರಿನ ‘ಕೃಷಿಕಲಾ’, ಬೀಜಗಳ ರಾಖಿಯನ್ನು ಪರಿಚಯಿಸಿದೆ. ಇದು ಆರಂಭದಲ್ಲೇ ಸದ್ದು ಮಾಡಿದೆ. ನೋಡಲು ಆಕರ್ಷಕ. ಪರಿಸರಕ್ಕೂ ಪೂರಕ- ಇದು ಈ ರಾಖಿಯ ವೈಶಿಷ್ಟ್ಯ. 2020ರಲ್ಲೇ ಬೀಜದ ರಾಖಿಯ ಪ್ರಯೋಗ ನಡೆದಿತ್ತು. ಪರಿಸರಕ್ಕೆ ಪೂರಕವಾದ ಈ ರಕ್ಷಾಬಂಧನಕ್ಕೆ ನಿರೀಕ್ಷೆಗೂ ಮೀರಿದ ಬೇಡಿಕೆ ವ್ಯಕ್ತವಾಗಿದ್ದರಿಂದ; ಈ ಬಾರಿ ಮೂರು ಸಾವಿರ ರಾಖಿಗಳು ತಯಾರಾಗಿವೆ. ಈ ವಾರದಲ್ಲೇ ಗ್ರಾಹಕರಿಗೆ ಭಾರತೀಯ ಅಂಚೆ ಮೂಲಕ ತಲುಪಲಿವೆ. ಸರಳ–ಅತ್ಯಾಕರ್ಷಕವಾಗಿರುವ ಬೀಜದ ರಾಖಿಗಳಿಗೆ ನವದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ಕೇರಳದ ವಿವಿಧೆಡೆಯಿಂದ ಆನ್ಲೈನ್‌ನಲ್ಲೇ ಬೇಡಿಕೆ ಸಲ್ಲಿಕೆಯಾಗಿದೆ. ‘ಗ್ರಾಹಕರ ಕೋರಿಕೆಗೆ ಅನುಸಾರವಾಗಿ ಪಾರ್ಸೆಲ್ ಕಳುಹಿಸುತ್ತಿದ್ದೇವೆ. ನವದೆಹಲಿ, ಮುಂಬಯಿ ಮಹಾನಗರಗಳಿಗೆ ಬೀಜದ ರಾಖಿಯ ಪಾರ್ಸೆಲ್ ಕಳುಹಿಸಲಾಗಿದೆ’ ಎನ್ನುತ್ತಾರೆ ಕೃಷಿಕಲಾದ ರೂವಾರಿ ಸೀಮಾ.

ಮೈಸೂರಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿನ ‘ವೃದ್ಧಿ ಶಾಪಿಂಗ್’ನಲ್ಲೂ ಈ ರಾಖಿ ಖರೀದಿಗೆ ಲಭ್ಯವುಂಟು. ಮಳಿಗೆಗಳಲ್ಲಿಟ್ಟು ಮಾರಾಟ ಮಾಡುವುದಕ್ಕಿಂತ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ಆ್ಯಪ್ ಗ್ರೂಪ್ ಮೂಲಕವೇ ಆನ್‌ಲೈನ್‌ ವಹಿವಾಟು ನಡೆದಿದೆ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿದೆ.


ಬೀಜಗಳ ತರಹೇವಾರಿ ರಾಖಿ

ಬೀಜ ರಾಖಿ ಬಗ್ಗೆ:  ಲಿಮಾ ಬೀನ್ಸ್, ಕತ್ತಿ ಕಾಯಿ, ಪಲಾವ್ ಅವರೆ, ರೆಕ್ಕೆ ಅವರೆ, ಅಂಟುವಾಳ, ತಮ್ಮೇ ಬೀಜ, ಸೀತಾಫಲ, ಪಡವಲ ಕಾಯಿ, ಹೀರೆ ಕಾಯಿ, ಆನೆ ಗುಲಗಂಜಿ, ಕುಂಬಳ, ಕಾಡ ಅಗಸೆ ಬೀಜಗಳದ ಜೊತೆಗೆ ಮರದ ಮಣಿಗಳನ್ನು ಒಂದರ ಪಕ್ಕ ಒಂದನ್ನು ಪೋಣಿಸಿ ರಾಖಿ ತಯಾರಿಸುವುದರಲ್ಲಿ ಕೃಷಿಕಲಾ ಸಂಸ್ಥೆಯ ಸದಸ್ಯರೀಗ ನಿಷ್ಣಾತರು. ಬೀಜಕ್ಕೆ ರಂಧ್ರ ಕೊರೆಯಲು ಪುಟ್ಟ ಯಂತ್ರವೊಂದನ್ನು ಬಳಸಲಾಗುತ್ತಿದೆ. ಯಾವ ಗಾತ್ರದ ರಂಧ್ರ ಬೇಕೋ ಅದಕ್ಕೆ ತಕ್ಕಂಥ ಬಿಟ್ ಬಳಸುವುದು ವಿಶೇಷ. ಇದು ತುಂಬಾ ಸೂಕ್ಷ್ಮ ಕೆಲಸ. ಪರಿಣಿತರು ಒಂದು ಕೈಯಲ್ಲಿ ಬೀಜ ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಯಂತ್ರದಿಂದ ರಂಧ್ರ ಮಾಡುತ್ತಾರೆ. ಈ ಕೆಲಸವೇ ಹೆಚ್ಚಿನ ಶ್ರಮ ಹಾಗೂ ಕೌಶಲ ಬಯಸುತ್ತದೆ.

ಹೀಗೆ ರಂಧ್ರ ಕೊರೆದ ಬಳಿಕ ತರಹೇವಾರಿ ವಿನ್ಯಾಸ ಶುರುವಾಗುತ್ತದೆ. ಒಂದರ ಪಕ್ಕ ಒಂದು ಬೀಜವನ್ನು ಅತ್ಯಾಕರ್ಷವಾಗಿ ಪೋಣಿಸಿ, ಅಂದಗೊಳಿಸುವುದು ಮುಖ್ಯ ಕೆಲಸ. ಆರಂಭದಲ್ಲಿ ಹತ್ತು ತರಹ ವಿನ್ಯಾಸಗಳಿದ್ದ ಬೀಜದ ರಾಖಿಯ ರಚನೆ, ಇದೀಗ 40ಕ್ಕೂ ಹೆಚ್ಚು ಬಗೆಯಲ್ಲಿ ತಯಾರಾಗುತ್ತಿದೆ. ಬಣ್ಣಬಣ್ಣದಿಂದ ಕಂಗೊಳಿಸುವ ಈ ರಾಖಿಗಳು ಗ್ರಾಹಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ಒಂದು ರಾಖಿಯ ತಯಾರಿಗೆ ಅರ್ಧ ಗಂಟೆ ಸಾಕು. ಬೀಜಗಳಿಗೆ ರಂಧ್ರ ಕೊರೆದ ಬಳಿಕ ಗೋಣಿ ದಾರದಿಂದ ಒಂದರ ಪಕ್ಕ ಒಂದು ಬೀಜವನ್ನು ಪೋಣಿಸಲಾಗುವುದು. ವಿವಿಧ ಬಣ್ಣದ ಸ್ವರೂಪ ಹಾಗೂ ವರ್ಣದ ಬೀಜಗಳು ಇಲ್ಲಿ ಬಳಸಲ್ಪಡುತ್ತವೆ. ರಾಖಿಯ ಅಂದ ಹೆಚ್ಚಿಸಲು ಪಾಲಿಷ್ ಮಾಡಿದ ಮರದ ಮಣಿಗಳು, ಆನೆ ಗುಲಗಂಜಿ ಬಳಸಿ ರಕ್ಷಾ ಬಂಧನದ ಆಕರ್ಷಣೆ ಹೆಚ್ಚಿಸಲಾಗುತ್ತಿದೆ.

‘ಅಮೂಲ್ಯವಾದ ಬೀಜಗಳನ್ನು ಹೀಗೆ ವ್ಯರ್ಥ ಮಾಡುತ್ತಿದ್ದೀರಲ್ಲಾ ಎಂದು ಕೆಲವರು ಹೇಳಿದಾಗ ವಿಚಲಿತಗೊಂಡೆ. ಆದರೆ ನಾನು ಬಳಸುತ್ತಿದ್ದು ಹೆಚ್ಚಾಗಿ ಕಾಡು ಬೀನ್ಸ್ ಬೀಜಗಳನ್ನು. ಅದೂ ಒಂದೊಂದು ರಾಖಿ ತಯಾರಿಕೆಗೆ ಬಳಸುತ್ತಿದ್ದುದು ಎಂಟರಿಂದ ಹತ್ತು ಬೀಜಗಳನ್ನಷ್ಟೆ. ಹೀಗಾಗಿ ಬೀಜ ರಾಖಿ ತಯಾರಿ ಮುಂದುವರಿಸಿದೆ. ನಾನಾ ಕಡೆಗಳಿಂದ ಅಪಾರ ಮೆಚ್ಚುಗೆಯ ಜೊತೆಗೆ ಬೇಡಿಕೆಯೂ ಬರುತ್ತಿದೆ’ ಎನ್ನುತ್ತಾರೆ ಸೀಮಾ. ಅಂದಹಾಗೆ, ಒಂದು ‘ಬೀಜ ರಾಖಿ’ ಬೆಲೆ ಸುಮಾರು ₹ 30.


ಸೋರೆಕಾಯಿಯಲ್ಲಿ ತಯಾರಿಸಿದ ರಾಖಿಗಳು

ಸೋರೆ ರಾಖಿ: ‘ಕೃಷಿ ಕಲಾ’ದಲ್ಲಿ ಬೀಜದ ರಾಖಿಯಷ್ಟೇ ಅಲ್ಲ. ಸೋರೆಯ ರಾಖಿಯೂ ಲಭ್ಯ. ಕಳೆದ ವರ್ಷದಿಂದಲೇ ಸೋರೆ ರಾಖಿ ಮಾರುಕಟ್ಟೆಯಲ್ಲಿದೆ. ಒಂದು ರಾಖಿಯ ದರ ₹ 50. ಸೋರೆಕಾಯಿಯನ್ನು ಕೊಯ್ಲು ಮಾಡಿದ ಬಳಿಕ ಒಣಗಿಸುತ್ತಾರೆ. ನಂತರ ಅದನ್ನು ಒಡೆದು ಒಳಭಾಗ–ಹೊರಭಾಗದ ಒಂದು ಪದರ ತೆಗೆಯುತ್ತಾರೆ. ವಿವಿಧ ವಿನ್ಯಾಸಕ್ಕೆ ತಕ್ಕಂತೆ ಕತ್ತರಿಸಿಕೊಂಡು ರಕ್ಷಾ ಬಂಧನ ತಯಾರಿಸಲಾಗುತ್ತದೆ.

ನಕ್ಷತ್ರ, ಎಲೆ, ಬಿಲ್ಲೆ, ಚಕ್ರಾಕಾರದ ರಾಖಿಗಳಿಗೆ ಸಾಕಷ್ಟು ಬೇಡಿಕೆಯಿದೆ. ದಿನಕ್ಕೆ ಒಬ್ಬರು ಹತ್ತು ರಾಖಿಗಳನ್ನು ಮಾಡಬಹುದಷ್ಟೆ. ಇವು ಪರಿಸರ ಸ್ನೇಹಿ. ಪ್ಲಾಸ್ಟಿಕ್ ದಾರದೊಂದಿಗೆ ಮಾಡಿದ ರಾಖಿಗಳು ಕೈಗೆ ಆಗಾಗ್ಗೆ ಕಿರಿಕಿರಿ ಮಾಡಬಲ್ಲವು. ಆದರೆ ಸೋದರನ ಮುಂಗೈಗೆ ಕಟ್ಟಿದಾಗ ಆ ಕೈಗೂ ಮನಸ್ಸಿಗೂ ಹಿತಾನುಭವ ನೀಡುವ ‘ಬೀಜ ರಾಖಿ’, ಪರಿಸರ ಸಂರಕ್ಷಣೆಗೆ ಕೊಡುವ ಕಿರುಕಾಣಿಕೆಯೂ ಹೌದು!

ಸಂಪರ್ಕಿಸಲು ವಾಟ್ಸ್‌ ಆ್ಯಪ್: 9606529606 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು