‘ನನ್ನ ಅಣ್ಣ’ನ ನೆನಪುಗಳು 

ಮಂಗಳವಾರ, ಜೂಲೈ 16, 2019
26 °C

‘ನನ್ನ ಅಣ್ಣ’ನ ನೆನಪುಗಳು 

Published:
Updated:
Prajavani

ಅಮ್ಮನ ಮಮತೆಯಂತೆಯೇ ಅಪ್ಪನ ಒಲುಮೆ ಕೂಡ ದೊಡ್ಡದು. ಅಂತಹ ಒಲುಮೆಯ ಸಿಹಿಯುಂಡ ಹೃದ್ಯ ಬರಹ ಇಲ್ಲಿದೆ. ಸಾಹಿತ್ಯ ಲೋಕದ ಧೀಮಂತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕುರಿತು ಅವರ ಮಗಳು ಕೆ.ಪಿ. ಸುಸ್ಮಿತ ಬರೆದ ನುಡಿಚಿತ್ರ ಅಪ್ಪನ ಅನನ್ಯ ಚಿತ್ರಣವನ್ನು ಬಿಡಿಸಿಡುತ್ತದೆ. ಅಂದಹಾಗೆ, ಅಪ್ಪಂದಿರ ದಿನದ ನೆಪದಲ್ಲಿ ಅರಳಿದ ಈ ಬರಹ ಮನಸ್ಸಿಗೆ ಬೆಚ್ಚನೆಯ ಸ್ಪರ್ಶವನ್ನೂ ನೀಡುತ್ತದೆ.

**

ನಮ್ಮ ‘ಕಿವಿ’ ಗೊತ್ತಲ್ಲ? ಅದೇ ಕರ್ವಾಲೊ ಕಾದಂಬರಿಯಲ್ಲಿ ಬರುವ ಶಿಕಾರಿ ನಾಯಿ, ಪರಿಸರದ ಕತೆಗಳ ಉದ್ದಕ್ಕೂ ಉಪಕತೆಯ ರೂಪದಲ್ಲಿ ಕಾಡುವ ನಾಯಿ. ಅದರ ಜತೆ ನಾವು ನಿತ್ಯ ತೋಟ ಸುತ್ತೋದಕ್ಕೆ ಹೋಗುತ್ತಿದ್ದೆವು. ಅಣ್ಣ (ತಾತ ಕುವೆಂಪು ಅವರನ್ನು ಅಪ್ಪ ತೇಜಸ್ವಿಯವರು ಕರೆಯುತ್ತಿದ್ದ ರೀತಿಯಲ್ಲೇ ನಾವೂ ಆಪ್ಪನಿಗೆ ‘ಅಣ್ಣ’ ಎಂದೇ ಕರೆಯುತ್ತಿದ್ದೆವು) ಹಾಗೂ ‘ಕಿವಿ’ಯ ಸಾಂಗತ್ಯದಲ್ಲಿ ತೋಟ ಸುತ್ತುವುದೆಂದರೆ ನನಗೋ ಅಪರಿಮಿತ ಆನಂದ. ಹೆಜ್ಜೆ ಹೆಜ್ಜೆಗೂ ನನ್ನ ಮುಂದೆ ಕೌತುಕದ ಜಗತ್ತು ತೆರೆದುಕೊಳ್ಳುತ್ತಿತ್ತು. ತೋಟ ಸುತ್ತು ಹೊಡೆಯಲು ಹೋದಾಗಲೆಲ್ಲ ಅಣ್ಣ ನಮಗೆ ಕಿತ್ತಲೆ ಹಣ್ಣು ಕಿತ್ತು, ತೊಳೆಯ ಸಮೇತ ತಿನ್ನಲು ಕೊಡುತ್ತಿದ್ದರು. ಇಷ್ಟು ವರ್ಷಗಳ ನನ್ನ ಜೀವನದಲ್ಲಿ ಆ ಸ್ವಾದವನ್ನು ನಾನು ಯಾವ ಜ್ಯೂಸ್‌ನಲ್ಲೂ ಕಂಡಿಲ್ಲ ಬಿಡಿ.

ಅಣ್ಣ ಆಗಾಗ ಪಕ್ಷಿಗಳ ಛಾಯಾಗ್ರಹಣಕ್ಕೆ ಹೋಗುತ್ತಿದ್ದರಲ್ಲ? ಒಮ್ಮೆ ‘ಹಕ್ಕಿಗಳು ಸ್ನಾನ ಮಾಡೋದನ್ನು ತೋರಿಸುತ್ತೇನೆ ಬರ್ತಿಯಾ’ ಎಂದು ನನ್ನನ್ನೂ ಕರೆದೊಯ್ದಿದ್ದರು. ಹಕ್ಕಿಗಳೂ ಸ್ನಾನ ಮಾಡುತ್ತವೆಯೇ ಎಂದು ಮುಗ್ಧವಾಗಿ ಪ್ರಶ್ನಿಸಿ, ಅವರನ್ನು ಹಿಂಬಾಲಿಸಿದ್ದೆ. ಅವುಗಳು ರೆಕ್ಕೆ ಬಿಚ್ಚಿ ನೀರಿನಲ್ಲಿ ಮುಳುಗೇಳುವುದನ್ನು ಕಂಡು ಖುಷಿಯಿಂದ ಕುಣಿದಿದ್ದೆ. ಪಿಕಳಾರ ಹಕ್ಕಿಗಳನ್ನು ತೋರಿಸಿ, ಅದೋ ನೋಡು ಕೆಂಪು ಮೀಸೆಯ ಪಿಕಳಾರ, ಇದು ಕೆಂಪುಗಲ್ಲದ ಹಳದಿ ಪಿಕಳಾರ, ಅತ್ತ ಹಾರಿತಲ್ಲ, ಅದರ ಮುಖ ಹಳದಿಯಾಗಿದೆಯಲ್ಲವೇ? ಹೀಗಾಗಿ ಅದು ಹಳದಿ ಕಪಾಲದ ಪಿಕಳಾರ ಎಂದು ಕಾಮೆಂಟರಿ ಕೊಡುತ್ತಿದ್ದರು. ಪಿಕಳಾರದ ಮೊಟ್ಟೆ ತಂದು ಮರಿ ಮಾಡಿದ ಕತೆಯಂತೂ ನಿಮಗೆಲ್ಲ ಗೊತ್ತೇ ಇದೆ, ಅಲ್ಲವೆ?

ನಮ್ಮ ಮನೆಯ ಸುತ್ತ ಹಲವು ಪಕ್ಷಿಗಳು ಗೂಡು ಕಟ್ಟಿದ್ದವು. ಹಗಲು ಆಹಾರ ಅರಿಸಿ ಬಹುದೂರ ಹೋಗಿರುತ್ತಿದ್ದ ಅವುಗಳು, ರಾತ್ರಿಯಾದೊಡನೆ ಬಂದು ಗೂಡು ಸೇರಿ, ವಿಶ್ರಾಂತಿ ಪಡೆಯುತ್ತಿದ್ದವು. ಅಣ್ಣ ಟಾರ್ಚ್‌ ಹಿಡಿದು, ‘ಹಕ್ಕಿಗಳು ಮಲಗಿ ನಿದ್ದೆ ಹೋಗಿರುವುದನ್ನು ನೋಡಿ ಬರೋಣ ಬಾ’ ಎಂದು ನನ್ನನ್ನು ಕರೆದೊಯ್ಯುತ್ತಿದ್ದರು. ಹಕ್ಕಿಗಳು ನಿದ್ದೆ ಮಾಡುವುದನ್ನು ನಾನು ಆಗಲೇ ನೋಡಿದ್ದು.

ನನಗೆ ಆಗ ನಾಲ್ಕು ವರ್ಷಗಳು ತುಂಬಿದ್ದವೇನೋ. ಅಣ್ಣ, ಟಿಲ್ಲರ್‌ ಬಿಡಲು ನನಗೂ ಕಲಿಸಿದ್ದರು. ತೋಟದಲ್ಲಿ ಅವರು ಟಿಲ್ಲರ್‌ ಬಿಡುವಾಗ ಹಿಂದೆ, ಹಿಂದೆ ನಾನೂ ಓಡುತ್ತಿದ್ದೆ. ಕೆಲಸದ ನಿಮಿತ್ತ ಅವರು ಆಗಾಗ ಮೂಡಿಗೆರೆಗೆ ಹೋಗುತ್ತಿದ್ದರು. ನಮ್ಮ ತೋಟದ ಮನೆಯಿಂದ ಮೂಡಿಗೆರೆಗೆ ಬರೊಬ್ಬರಿ 13 ಕಿ.ಮೀ. ದೂರ. ಜೀಪಿನ ಪಯಣವೆಂದರೆ ನನಗೆ ಹಿಗ್ಗೋ ಹಿಗ್ಗು. ಮೂಡಿಗೆರೆಗೆ ಹೋಗುವ ಅವಕಾಶವನ್ನು ನಾನು ಯಾವಾಗಲೂ ಮಿಸ್‌ ಮಾಡ್ಕೋತಿರಲಿಲ್ಲ. ಚಾರ್ಮಾಡಿ ಘಾಟಿಗೂ ಆಗಾಗ ಹೋಗುತ್ತಿದ್ದೆವು.

ಅಣ್ಣನ ಸ್ಟೋರ್‌ ರೂಮ್‌ಗೆ ಹೋದರೆ ಸಾಕು, ಅವರ ಶಿಕಾರಿ ಪರಾಕ್ರಮದ ನೋಟಗಳದ್ದೇ ಮೆರವಣಿಗೆ. ಬೇಟೆಯಾಡಿದ ಪ್ರಾಣಿಗಳ ಅವಶೇಷಗಳನ್ನು ಅಲ್ಲಿ ಕಣ್ಣರಳಿಸಿ ನೋಡುತ್ತಿದ್ದೆ. ಓದಿನ ಬಗೆಗೆ ಅವರು ಏನೂ ಹೇಳ್ತಾ ಇರಲಿಲ್ಲ. ಓದಿನ ವಿಷಯವಾಗಿ ಅಮ್ಮ, ಅಣ್ಣ ತಲೆ ಕೆಡಿಸಿಕೊಳ್ಳಬೇಕಾದ ಪ್ರಮೇಯವೇ ಬರದಂತೆ ನಾವೂ– ನಾನು ಮತ್ತು ತಂಗಿ ಈಶಾನ್ಯ– ಮುಂದಿದ್ದೆವು. ಯಾವಾಗಲೂ ಫಸ್ಟ್‌ ಇಲ್ಲವೆ ಸೆಕೆಂಡ್‌ ರ‍್ಯಾಂಕ್‌ ಬರ್ತಾ ಇದ್ದೆವು. ಒಮ್ಮೆ ಶಾಲೆಯಲ್ಲಿ ‘ಮೂಗಿನ ಮೇಲೆ ಕೈ ಇಡು’ ಎಂಬ ನುಡಿಗಟ್ಟು ಕೊಟ್ಟು ವಾಕ್ಯ ರಚಿಸಿಕೊಂಡು ಬರುವಂತೆ ಹೇಳಿದ್ದರು. ಬೆರಗನ್ನು ಸೂಚಿಸುವ ಈ ನುಡಿಗಟ್ಟಿನಿಂದ ವಾಕ್ಯ ಮಾಡುವುದು ಹೇಗೆ ಅಂತ ಅಣ್ಣನನ್ನು ಕೇಳಿದ್ದೆ. ‘ಯಾರೂ ಮೂಗಿನ ಮೇಲೆ ಕೈ ಇಟ್ಟಿದ್ದನ್ನು ನಾನು ನೋಡಿಲ್ಲ’ ಎಂಬ ವಾಕ್ಯವನ್ನು ಅವರು ಹೇಳಿಕೊಟ್ಟಿದ್ದರು.

ನಾವು ಬಹುಮಾನ ಗೆದ್ದುಕೊಂಡು ಬಂದಾಗ ಅವರಿಗೆ ಖುಷಿ ಆಗುತ್ತಿತ್ತು ನಿಜ. ಆದರೆ, ಅದಕ್ಕಿಂತ ಹೆಚ್ಚಾಗಿ ಜನರ ಜತೆ ಹೇಗೆ ವರ್ತಿಸುತ್ತೇವೆ, ಸನ್ನಿವೇಶವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ನೋಡಿ ಸಂತೋಷಪಡುತ್ತಿದ್ದರು. ಕನ್ನಡ ಮಾಧ್ಯಮದಲ್ಲಿ ನೀವು ಓದಬೇಕು. ಅದರಿಂದ ಗ್ರಹಿಕೆ ಸಾಮರ್ಥ್ಯ ಜಾಸ್ತಿ ಆಗುತ್ತೆ ಎನ್ನುವ ಸಲಹೆಯನ್ನು ನೀಡುತ್ತಿದ್ದರು. ಎಂಟನೇ ಕ್ಲಾಸ್‌ನಿಂದ ನಾನು ಇಂಗ್ಲಿಷ್‌ ಮಾಧ್ಯಮ ತೆಗೆದುಕೊಂಡೆ. ಅದು ಅವರಿಗೆ ಇಷ್ಟ ಇರಲಿಲ್ಲ. ಈ ಬಗೆಗೆ ನಮ್ಮ ತಾಯಿಯ ಬಳಿ ಹೇಳಿದ್ದರು. ಆದರೆ, ಎಂಟನೇ ತರಗತಿಯಲ್ಲಿ ಇಂಗ್ಲಿಷ್‌ ತೆಗೆದುಕೊಂಡಿದ್ದು ನನಗೆ ಒಳ್ಳೆಯದೇ ಆಯಿತು. ನನ್ನ ಎಂಜಿನಿಯರಿಂಗ್‌ ಅಧ್ಯಯನಕ್ಕೆ ಅದು ನೆರವಿಗೆ ಬಂತು.

ಅಣ್ಣನ ಎಲ್ಲ ಕೃತಿಗಳನ್ನೂ ಬಿಡದಂತೆ ನಾನು ಓದಿದ್ದೇನೆ. ನಾನು ಚಿಕ್ಕವಳಿದ್ದಾಗ ಲಂಕೇಶ್‌ ಪತ್ರಿಕೆಗೆ ಅಣ್ಣ ಆಗಾಗ ಲೇಖನ ಬರೆದಿಟ್ಟಿರೋರು. ಅದನ್ನು ನಾನು ಮುಂಚಿತವಾಗಿಯೇ ಓದುತ್ತಿದ್ದೆ. 2–3 ವಾರಗಳ ಬಳಿಕ ಅದು ಪತ್ರಿಕೆಯಲ್ಲಿ ಬರೋದು. ಆಗಾಗ ಅವರು ಭಾವಾನುವಾದ ಮಾಡಲೂ ಕೂರುತ್ತಿದ್ದರು. ‘ಟ್ರೈಬಲ್‌ಗೆ ಕನ್ನಡದಲ್ಲಿ ಏನು ಅಂತಾರೆ’ ಎಂದು ನನ್ನನ್ನು ಪ್ರಶ್ನಿಸಿದ್ದರು. ‘ಆದಿವಾಸಿಗಳು’ ಎಂದು ಉತ್ತರಿಸಿದ್ದೆ. ನೀನೂ ಒಳ್ಳೆಯ ಅನುವಾದಕಿ ಆಗುತ್ತಿಯಾ ಬಿಡು ಎಂದು ತಮಾಷೆ ಮಾಡಿದ್ದರು. ಏಕೋ ಗೊತ್ತಿಲ್ಲ, ನನಗೆ ಬರವಣಿಗೆಯಲ್ಲಿ ಆಸಕ್ತಿ ಮೂಡಲಿಲ್ಲ. ನನ್ನ ಆಸಕ್ತಿಯ ಕ್ಷೇತ್ರವೇ ಬೇರೆಯೇ ಆಗಿತ್ತು.


ತಂದೆಯ ತೋಳಲ್ಲಿ ಸುಸ್ಮಿತ

ನಮ್ಮ ತೋಟದಲ್ಲಿ ಕಿವಿಯಲ್ಲದೆ ಹಲವು ನಾಯಿಗಳು ಇದ್ದವು. ಅವುಗಳು ಮರಿ ಹಾಕುತ್ತಿದ್ದವು. ಅವುಗಳಿಗೆ ಹಾಲು ಕುಡಿಸುತ್ತಿದ್ದೆವು. ಹೊಟ್ಟೆ ಮುಟ್ಟಿ ನೋಡಿ, ಅವುಗಳ ಹೊಟ್ಟೆ ತುಂಬಿದೆಯೋ ಇಲ್ಲವೋ ಎಂಬುದನ್ನು ಚೆಕ್‌ ಮಾಡಲು ಅಣ್ಣ ಕಲಿಸಿಕೊಟ್ಟಿದ್ದರು. ಆಗ ಕಲಿತ ವಿದ್ಯೆಯನ್ನು ನನ್ನ ಮಗಳು ಆರ್ಣ ಚಿಕ್ಕವಳಿದ್ದಾಗ ಅಪ್ಲೈ ಮಾಡಿದ್ದೆ. ನಮ್ಮ ಮನೆಯಲ್ಲಿ ಎಲ್ಲರಿಗೂ ಸೋಜಿಗ. ಅದು ಹೇಗೆ ಅಷ್ಟೊಂದು ಕರಾರುವಾಕ್ಕಾಗಿ ಮಗಳಿಗೆ ಹೊಟ್ಟೆ ತುಂಬಿರುವುದನ್ನು ಕಂಡು ಹಿಡಿಯುತ್ತಿ ಎಂದು ಎಲ್ಲರೂ ಪ್ರಶ್ನೆ ಹಾಕುತ್ತಿದ್ದರು.

ಒಮ್ಮೆ ಅಣ್ಣ, ‘ಕೂತ್ಕೊ ತಮಾಷೆ ತೋರಿಸ್ತೀನಿ’ ಎಂದು ನಾಣ್ಯವನ್ನು ಹಣೆಗೆ ಒತ್ತಿಟ್ಟು, ಹುಬ್ಬು ಅಲ್ಲಾಡಿಸಿದರು. ಹಣೆ ಮೇಲೆ ಅಂಟಿದ್ದ ನಾಣ್ಯವನ್ನು ಬೀಳಿಸಿ ತೋರಿಸಿದ್ದರು. ನನ್ನ ಹಣೆಗೂ ಒತ್ತಿ, ‘ನೀನೂ ಬೀಳಿಸು ನೋಡೋಣ’ ಎಂದು ಸವಾಲು ಹಾಕಿದರು. ಹುಬ್ಬು ಎಷ್ಟು ಅಲ್ಲಾಡಿಸಿದರೂ ನಾಣ್ಯ ಬೀಳುತ್ತಿಲ್ಲ. ಕೊನೆಗೆ ಹಣೆ ಮುಟ್ಟಿ, ನೋಡಿಕೊಂಡೆ. ಅಲ್ಲಿ ನಾಣ್ಯವೇ ಇರಲಿಲ್ಲ! ನಾಣ್ಯವನ್ನು ಒತ್ತಿದ್ದರಿಂದ ಇಂಪ್ರೆಷನ್‌ ಮಾತ್ರ ಇತ್ತು. ಹೀಗಾಗಿ ನಾಣ್ಯ ಇರುವ ಭ್ರಮೆ ಮೂಡಿತ್ತು ಎಂದು ಪಾಠ ಮಾಡಿದ್ದರು.

ಭದ್ರಾ ನದಿಗೆ ಮೀನು ಹಿಡಿಯೋಕೆ ಹೋಗುತ್ತಿದ್ದರು. ‘ಮೊಸಳೆ ತೋರಿಸುತ್ತೇನೆ ಬಾ’ ಎಂದು ಕರೆದೊಯ್ಯುತ್ತಿದ್ದರು. ಹಾಗೊಮ್ಮೆ ಮೀನು ಹಿಡಿಯಲು ಹೋದಾಗ ಕೆನೆತ್‌ ಆ್ಯಂಡರ್ಸನ್‌ ಅವರ ಪುಸ್ತಕವನ್ನು ಒಯ್ದಿದ್ದೆ. ದಂಡೆಯಲ್ಲಿ ಕುಳಿತು ನಾನು ಪುಸ್ತಕ ಓದುವಲ್ಲಿ ತಲ್ಲೀನವಾದರೆ, ಅಣ್ಣ ಮೀನು ಹುಡುಕುತ್ತಾ ದೂರ ಹೋಗಿದ್ದರು. ಪುಸ್ತಕದ ಕಥೆಯಲ್ಲಿ ಹುಲಿಯ ಸನ್ನಿವೇಶಗಳನ್ನು ಓದುವಾಗ, ನನ್ನ ಹಿಂದೆಯೂ ಹುಲಿ ಬಂದಂತೆ ಭಯ ಆಗಿತ್ತು. ಅಕ್ಕಪಕ್ಕದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಬೇರೆ ಇದ್ದವು. ಆ ಕ್ಷಣವೇ ಅಣ್ಣನನ್ನು ಹುಡುಕಿಕೊಂಡು ಹೋಗಿಬಿಟ್ಟೆ. ಕಾಡಲ್ಲಿ ತಿರುಗಬೇಕಾದರೆ ಡೈರೆಕ್ಷನ್‌ ಸೆನ್ಸ್‌ ಇರಬೇಕಾಗುತ್ತದೆ. ಹಾಗೆ ಮನಸ್ಸಿಗೆ ಬಂದ ದಿಕ್ಕಿನಲ್ಲಿ ಓಡುವ ಹಾಗಿಲ್ಲ ಎಂದು ನನಗೆ ಬುದ್ಧಿವಾದ ಹೇಳಿದ್ದರು.

ಇಪ್ಪತ್ತು ವರ್ಷಗಳ ಹಿಂದೆ ನನಗೆ ಮೊದಲ ಕೆಲಸ ಸಿಕ್ಕಾಗ 1,500 ರೂಪಾಯಿ ಸಂಬಳ. ನನಗೆ ಸಾಲಲ್ಲ ಅಂತ ಮೂರು ಸಾವಿರ ರೂಪಾಯಿ ಚೆಕ್‌ ಕಳುಹಿಸುತ್ತಿದ್ದರು. ಡ್ರೆಸ್‌ ತೊಗೊ ಎಂದೂ ಬರೆಯುತ್ತಿದ್ದರು. ಮುಂದೆ ಐದು ಸಾವಿರ ರೂಪಾಯಿ ಸಂಬಳ ಆದಾಗ ಅದು ಎಷ್ಟೊಂದು ಸಂಭ್ರಮಪಟ್ಟಿದ್ದರು. ಮುಂದಿನ ಯಾವ ದೊಡ್ಡ ಸಂಬಳವೂ ಅವರಿಗೆ ಅಷ್ಟೊಂದು ಖುಷಿ ಕೊಟ್ಟಿರಲಿಲ್ಲ.

ಅಣ್ಣ ನನಗೆ ಎಂದೂ ಬೈದಿಲ್ಲ. ಅವರ ಹೃದಯ ತುಂಬಾ ಮೃದು. ಅವರ ಹತ್ತಿರ ಸುಳಿದರೂ ಸಾಕು, ಅವರ ಪ್ರೀತಿಯ ಶಕ್ತಿ ನಮ್ಮನ್ನು ಆವರಿಸಿಬಿಡುತ್ತಿತ್ತು. ಏಷ್ಟೋ ಜನ ಕೇಳುತ್ತಾರೆ, ಇಂತಹ ಅಪ್ಪ ಸಿಗದಿದ್ದರೆ ನೀನು ಏನಾಗಿರುತ್ತಿದ್ದೆ ಎಂದು. ಉತ್ತರ ಕೊಡುವುದು ತುಸು ಕಷ್ಟ. ಅಣ್ಣನ ಸರಳ ರೀತಿಯಲ್ಲೇ ಉತ್ತರಿಸುವುದಾದರೆ ಇಷ್ಟೇ ಪ್ರೀತಿ ಕೊಡುವ ಬೇರೊಬ್ಬ ಅಪ್ಪ ಆ ಸ್ಥಾನದಲ್ಲಿ ಇರುತ್ತಿದ್ದರು. ಯಾವ ತಂದೆ ಮಗಳಿಗೆ ಪ್ರೀತಿ ಕೊಡಲ್ಲ, ನೀವೇ ಹೇಳಿ?

ಬರಹ ಇಷ್ಟವಾಯಿತೆ?

 • 36

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !