ಮಂಗಳವಾರ, ಜನವರಿ 31, 2023
18 °C

ಕಲಾವಿದ ಯೂಸುಫ್ ಅರಕ್ಕಲ್ ಕಣ್ಣಲ್ಲಿ ಯೇಸು

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಜಗತ್ತಿಗೆ ಶಾಂತಿ ಮತ್ತು ಪ್ರೇಮ ಸಂದೇಶವನ್ನು ಸಾರಿದ ಯೇಸುಕ್ರಿಸ್ತ, ಕ್ರೈಸ್ತರ ಪಾಲಿನ ಆರಾಧ್ಯದೈವ ಮಾತ್ರವಲ್ಲ, ಮನುಷ್ಯ ಪ್ರೀತಿಯುಳ್ಳ ಸಕಲರೂ ಆರಾಧಿಸುವಂಥ ವ್ಯಕ್ತಿತ್ವವುಳ್ಳವರು. ‘ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ, ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ’ ಎನ್ನುವ ಸಂದೇಶ ಸಾರಿದ ಯೇಸುವಿನ ಮಾನವೀಯ ಗುಣಗಳಿಗೆ ಸೋಲದವರಿಲ್ಲ. ಅಂಥದ್ದೇ ಸೆಳೆತಕ್ಕೊಳಗಾದ ಖ್ಯಾತ ಕಲಾವಿದ ದಿ.ಯೂಸುಫ್ ಅರಕ್ಕಲ್ ಅವರು ಕಲಾಪ್ರೇಮಿಗಳಿಗೆ ಅಪರೂಪದ ಉಡುಗೊರೆ ನೀಡಲೆಂದು ಯೇಸುಕ್ರಿಸ್ತನ ಕುರಿತಂತೆ ಸರಣಿಯೋಪಾದಿಯಲ್ಲಿ 1999ರ ಡಿಸೆಂಬರ್‌ನಲ್ಲಿ ವರ್ಣಚಿತ್ರಗಳನ್ನು ರಚಿಸಿದ್ದಾರೆ.

‘ದಿ ಕ್ರೈಸ್ಟ್‌ ಸಿರೀಸ್‌’ ಶೀರ್ಷಿಕೆಯಲ್ಲಿ ಕಲಾಕೃತಿಗಳನ್ನು ರಚಿಸಿರುವ ಯೂಸುಫ್ ಅವರು ತಮ್ಮ ಚಿತ್ರಕಲೆಯ ಮೂಲಕ ಯೇಸು ಅವರ ಜೀವನ ಮತ್ತು ಸರಳ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ. ‘ಮಿಲೇನಿಯಂ ಕ್ರೈಸ್ಟ್‌’ ಶೀರ್ಷಿಕೆಯ ಕಲಾಕೃತಿಯನ್ನು ಹೊರತುಪಡಿಸಿ ಯೂಸುಫ್ ಅವರ ಇತರ ಕಲಾಕೃತಿಗಳು ಇದುವರೆಗೆ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಂಡಿರಲಿಲ್ಲ. ಯೇಸುಕ್ರಿಸ್ತನ ಸರಣಿಯ ಮೊದಲ ಪ್ರದರ್ಶನವನ್ನು ರೋಮ್‌ನ ವ್ಯಾಟಿಕನ್‌ ನಗರದಲ್ಲಿ ಪ್ರದರ್ಶಿಸಬೇಕೆಂಬುದು ಅವರ ಮಹದಾಸೆಯಾಗಿತ್ತು. ಅಂತೆಯೇ 2013ರಲ್ಲಿ ವ್ಯಾಟಿಕನ್‌ನ ನಿಯೋಗವು ಅರಕ್ಕಲ್ ಸ್ಟುಡಿಯೊಕ್ಕೆ ಭೇಟಿ ನೀಡಿ ಅವರ ವರ್ಣಚಿತ್ರಗಳ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿತ್ತು. ಆದರೆ, ವ್ಯಾಟಿಕನ್‌ನಲ್ಲಿನ ನಿಯಮದ ಕಾರಣಕ್ಕಾಗಿ ‘ದಿ ಕ್ರೈಸ್ಟ್‌’ ಸರಣಿಯ ಮೊದಲ ಪ್ರದರ್ಶನವನ್ನು ಅಲ್ಲಿ ಆಯೋಜಿಸಲಾಗಲಿಲ್ಲ.

‘ಆರಂಭದಲ್ಲಿ ‘ಕ್ರೈಸ್ಟ್ ಸಿರೀಸ್’ ಅನ್ನು ಯೂಸುಫ್ ಅವರು ಸರಣಿ ರೂಪದಲ್ಲಿ ತರಲು ಯೋಜಿಸಿರಲಿಲ್ಲ. ಆದರೆ, ಅವರು ಒಂದೇ ದಿನದಲ್ಲಿ ಅಂದರೆ 1999ರ ಡಿ.31ರ ಬೆಳಿಗ್ಗೆ 6ರಿಂದ 2000ರ ಜನವರಿ 1ರ ಮುಂಜಾನೆಯ ತನಕ ಸರಣಿಯೋಪಾದಿಯಲ್ಲಿ ಕಲಾಕೃತಿಗಳನ್ನು ರಚಿಸಿದರು. ಇಡೀ ದಿನ ಉತ್ಸಾಹದಿಂದ ಇದ್ದ ಯೂಸುಫ್ ಇಡೀ ಕಲಾ ಜಗತ್ತು ಮತ್ತು ಕಲಾಪ್ರೇಮಿಗಳಿಗೆ ಸಹಸ್ರಮಾನದ ಮೊದಲ ದಿನವೇ ಅರ್ಥಪೂರ್ಣ ಉಡುಗೊರೆ ನೀಡಿದ್ದರು’ ಎಂದು ಸ್ಮರಿಸಿಕೊಳ್ಳುತ್ತಾರೆ ಯೂಸುಫ್ ಅವರ ಪತ್ನಿ ಸಾರಾ ಅರಕ್ಕಲ್. 

‘ಇಡೀ ಸರಣಿಯಲ್ಲಿ ಯೇಸುವನ್ನು ಏಷ್ಯನ್ ಮಾದರಿಯಲ್ಲಿ ಚಿತ್ರಿಸಲಾಗಿದೆ. ಯೇಸುವಿನ ಮುಖವು ಉದಯಿಸುವ ಸೂರ್ಯನ ಕಡೆಗೆ ತಿರುಗಿದ್ದು, ಸತ್ಯ ಮತ್ತು ಪುನರುತ್ಥಾನದ ವಿಜಯವನ್ನು ಸಂಕೇತಿಸುತ್ತದೆ. ಅಂತೆಯೇ ಸಾವು ಮತ್ತು ಸೋಲಿನ ವಿಷಣ್ಣತೆಯನ್ನೂ ಬಿಂಬಿಸುತ್ತದೆ. ಇಸ್ರೇಲ್‌ಗೆ ಭೇಟಿ ನೀಡಿದ ಕೆಲವೇ ವರ್ಷಗಳ ನಂತರ ಯೂಸುಫ್ ಕ್ರಿಸ್ತನ ಕುರಿತ ಕಲಾಕೃತಿಗಳ ರಚನೆಯತ್ತ ಗಮನ ಕೇಂದ್ರೀಕರಿಸಿದರು. ತಮ್ಮ ವಿಶಿಷ್ಟ ಶೈಲಿಯನ್ನು ಉಳಿಸಿಕೊಂಡೇ ಅವರು ಈ ಕಲಾಕೃತಿಗಳನ್ನು ರಚಿಸಿರುವುದು ವಿಶೇಷ’ ಎಂದೂ ಸಾರಾ ವಿಶ್ಲೇಷಿಸುತ್ತಾರೆ. 

ಯೂಸುಫ್ ಅವರ ಈ ಕಲಾಕೃತಿಗಳಲ್ಲಿರುವ ಯೇಸುವಿನ ಜೀವನವು ಅಧ್ಯಾತ್ಮ ಮತ್ತು ಧಾರ್ಮಿಕ ನೆಲೆಗಿಂತ ಭಿನ್ನವಾಗಿ ಮಾನವೀಯ ಮೌಲ್ಯಗಳನ್ನು ಬಿಂಬಿಸುವ ನೆಲೆಗಟ್ಟನ್ನು ಹೊಂದಿರುವುದು ವಿಶೇಷ. ಕಲಾಕೃತಿಗಳಲ್ಲಿನ ಬಣ್ಣಗಳ ಸಂಯೋಜನೆ, ಸೂಕ್ಷ್ಮ ಗೆರೆಗಳು, ಯೇಸುವಿನ ಭಾವತೀವ್ರತೆ ನೋಡುಗರನ್ನು ಥಟ್ಟನೆ ಸೆಳೆಯುತ್ತವೆ. 

ಯೇಸುವಿನ ಜೀವನ ಸನ್ನಿವೇಶಗಳನ್ನು ಚಿತ್ರಿಸುವ ಯೂಸುಫ್ ಅರಕ್ಕಲ್ ಅವರ 12 ವರ್ಣಚಿತ್ರಗಳು ಜನವರಿ 8ರಿಂದ 14ರವರೆಗೆ ನಗರದ ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಪ್ರದರ್ಶನವಾಗಲಿವೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ಕಲಾಪ್ರೇಮಿಗಳಿಗಾಗಿ ಕ್ರಿಸ್ತನ ಸರಣಿ ಕಲಾಕೃತಿಗಳ ಪ್ರದರ್ಶನವನ್ನು ಸಾರಾ ಅರಕ್ಕಲ್ ಗ್ಯಾಲರಿಯು ಆಯೋಜಿಸಿದೆ.

‘ದಿ ಕ್ರೈಸ್ಟ್ ಸಿರೀಸ್’ ಪ್ರದರ್ಶನ 8ರಿಂದ
ಚಿತ್ರಕಲಾವಿದ ಯೂಸುಫ್ ಅರಕ್ಕಲ್ ಅವರ ‘ದಿ ಕ್ರೈಸ್ಟ್ ಸಿರೀಸ್’ ಪ್ರದರ್ಶನ
ಆಯೋಜನೆ: ಸಾರಾ ಅರಕ್ಕಲ್ ಗ್ಯಾಲರಿ
ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), 4ನೇ ಮುಖ್ಯರಸ್ತೆ, ದೊಮ್ಮಲೂರು ಎರಡನೇ ಹಂತ. ಬೆಂಗಳೂರು.
ದಿನಾಂಕ: ಜ. 8ರಿಂದ ಜ. 14ರವರೆಗೆ
ಸಮಯ: ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ.
ಮಾಹಿತಿಗಾಗಿ: 9845039648.

ಯೂಸುಫ್ ಅರಕ್ಕಲ್ ಅವರ ಚಿತ್ರಗಳು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು