ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕೋ ಅಕ್ಕೈ ಬಂದರು ರಂಗಕ್ಕೆ...

Last Updated 5 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಸಿದ್ಧಮಾದರಿಗಳ ಆಚೆ ಸಮುದಾಯವೊಂದರ ಏಳಿಗೆಗೆ ಶ್ರಮಿಸಿದ ಪ್ರತಿನಿಧಿಯ ಬದುಕಿನ ಮಜಲುಗಳನ್ನು ಒಬ್ಬ ಪಾತ್ರಧಾರಿ ಕಟ್ಟಿಕೊಡುವ ಸವಾಲಿನ ರಂಗಪ್ರಯೋಗವೊಂದರ ಒಳನೋಟ

***

ಲೈಂಗಿಕ ಅಲ್ಪಸಂಖ್ಯಾತರಾಗಿದ್ದು, ಆ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಅಕ್ಕೈ ಪದ್ಮಶಾಲಿ ಅವರ ಆತ್ಮಕಥೆ ‘ಅಕ್ಕೈ– ಕರುಣೆಗೊಂದು ಸವಾಲು’ ರಂಗ ರೂಪಾಂತರ ಹೊಂದಿದೆ. ಮಾರ್ಚ್‌ 6ರಂದು ಸಂಜೆ 6ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಕೃತಿ ರಂಗವೇರುತ್ತಿದೆ.

ಡಾ.ಬೇಲೂರು ರಘುನಂದನ್‌ ಈ ನಾಟಕದ ನಿರ್ದೇಶಕರು. ನಯನಾ ಸೂದ್‌ ಈ ಏಕವ್ಯಕ್ತಿ ನಾಟಕದ ಪಾತ್ರಧಾರಿ.

ಅಕ್ಕೈ ಅವರ ಆತ್ಮಚರಿತ್ರೆಯ ಕೃತಿಯನ್ನು ನಾಟಕವಾಗಿಸಲು ಏನು ಪ್ರೇರಣೆ ಎಂಬ ಪ್ರಶ್ನೆಗೆ ರಘುನಂದನ್‌ ಅವರು ಉತ್ತರಿಸುವುದು ಹೀಗೆ: ‘ನಾನು ಅಕ್ಕೈ ಅವರನ್ನು ಬಹಳ ಕಾಲದಿಂದ ಬಲ್ಲೆ. ಆದರೆ ಈ ಪುಸ್ತಕವನ್ನು ಓದಿದಾಗ ಅದೆಷ್ಟೋ ಹೊಸ ಸಂಗತಿಗಳು ಗೊತ್ತಾದವು. ಕುಟುಂಬ, ಸಮುದಾಯ ಮತ್ತು ಸಮಾಜದಿಂದ ಅವರು ಎದುರಿಸಿದ ನೋವು, ಆಘಾತ, ಅವಮಾನ ಮತ್ತು ನಿಂದನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಹಾಗಾಗಿ ಈ ಪುಸ್ತಕ ನನ್ನನ್ನು ಭಾವುಕನನ್ನಾಗಿಸಿತು. ರಂಗಕ್ಕೆ ತರುವಂತೆಯೂ ಪ್ರೇರೇಪಿಸಿತು’.

ಸಿದ್ಧಮಾದರಿಗಳನ್ನು ಭೇದಿಸಿ ಸಮಾಜವನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು ಅಕ್ಕೈ ಅವರ ಪ್ರಯತ್ನಗಳನ್ನು ವ್ಯಾಪಕವಾಗಿಸುವ ಉದ್ದೇಶ ಈ ನಾಟಕದ ಹಿಂದಿದೆ ಎನ್ನುತ್ತಾರೆ ಅವರು.

‘ಅಕ್ಕೈ ಅವರು ಇಂದಿನ ಹಂತಕ್ಕೆ ಏರಲು ತುಂಬಾ ಕಷ್ಟಪಟ್ಟಿದ್ದಾರೆ. ಅವರ ಪ್ರಯತ್ನಗಳು ಅವರ ನೋವುಗಳನ್ನು ನಿವಾರಿಸಿದ್ದು ಮಾತ್ರವಲ್ಲ, ಅವರ ಸಮುದಾಯದವರಲ್ಲಿ ಹಕ್ಕುಗಳಿಗಾಗಿ ಹೋರಾಡಲು ಭರವಸೆ ಮತ್ತು ವಿಶ್ವಾಸವನ್ನು ಹುಟ್ಟುಹಾಕಿವೆ. ಇದು ಸುಲಭದ ಕೆಲಸವಲ್ಲ. ಆದರೆ, ಅಕ್ಕೈ ತಮ್ಮ ಕೆಲಸದ ಮೂಲಕ ಹಲವರ ಜೀವನವನ್ನು ಬೆಳಗಿಸಿದ್ದಾರೆ. ಈ ವಿಚಾರಗಳು ನಾಟಕದಲ್ಲಿ ಬಿಂಬಿತವಾಗಲಿವೆ’ ಎನ್ನುತ್ತಾರೆ ಬೇಲೂರು.

ವಿಭಿನ್ನ ಧ್ವನಿ ಮತ್ತು ಭಾವವನ್ನು ನಿರೂಪಿಸುವ ಪ್ರಯತ್ನ ಇಲ್ಲಿನದ್ದು. ಅದಕ್ಕಾಗಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯ ಪಾತ್ರವನ್ನು ಚಿತ್ರಿಸಲು ಪುರುಷನಿಗಿಂತ ಮಹಿಳೆಯೇ ಸೂಕ್ತ ಎಂದು ಯೋಚಿಸಿದ ಬೇಲೂರು ಅವರು, ಮಹಿಳೆಯನ್ನೇ ಆ ಪಾತ್ರಕ್ಕೆ ಆಯ್ಕೆ ಮಾಡಲು ನಿರ್ಧರಿಸಿದ್ದರು. ಹಾಗೆ ಅಕ್ಕೈ ಪಾತ್ರ ನಿರ್ವಹಣೆಗೆ ಆಯ್ಕೆಯಾದವರೇ ನಯನಾ.

ನಯನಾ ಅವರು ಈ ಪ್ರಯೋಗದಲ್ಲಿ ಅಕ್ಕೈ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಇಡೀ ನಾಟಕ ಒಂದೇ ಪಾತ್ರದಲ್ಲಿ ನಡೆಯುತ್ತದೆ. ಏಕಾಂಗಿ ಅಭಿನಯ. ಪುರುಷನೊಬ್ಬ ಮಹಿಳೆಯಾಗಿ ಪರಿವರ್ತನೆಗೊಳ್ಳುವ ಪಾತ್ರವದು. ಅಕ್ಕೈ ಅವರನ್ನೇ ಈ ಪಾತ್ರ ಬಿಂಬಿಸುವುದಾದರೂ ನಯನಾ ಅವರು ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತಿಸಲಿದ್ದಾರೆ. ಯಾವುದೇ ಅನುಕರಣೆ ಇಲ್ಲಿ ಇಲ್ಲ. ಮೂಲಕೃತಿಯಲ್ಲಿ ಬರುವ ಇತರ ಪಾತ್ರಗಳನ್ನೂ ಅವರು ಅಭಿವ್ಯಕ್ತಿಸಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು.

ನಯನಾ ಅವರೂ ಈ ಪಾತ್ರದ ಬಗ್ಗೆ ಖುಷಿಯಾಗಿದ್ದಾರಂತೆ. ಅವರ ಅಭಿನಯ ನೋಡಲು ಅಕ್ಕೈ ಅವರೇ ಖುದ್ದು ತಾಲೀಮಿನ ಜಾಗಕ್ಕೆ ಹೋಗಿದ್ದರು. ಅವರು ಗಮನಿಸಿದಂತೆ, ‘ನಯನಾ ಒಂದು ಪಾತ್ರದಿಂದ ಇನ್ನೊಂದಕ್ಕೆ ಎಷ್ಟು ಬೇಗನೆ ಬದಲಾಗುತ್ತಾಳೆ ಎಂಬುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಒಂದು ಹಂತದಲ್ಲಿ ಅವಳು ನನ್ನ ತಂದೆ ಮತ್ತು ಮರುಕ್ಷಣದಲ್ಲಿ ಪೊಲೀಸ್ ಆಗುತ್ತಾಳೆ. ಅವಳು ವಿಷಯ ಗ್ರಹಿಸಿದ್ದಷ್ಟೇ ಅಲ್ಲ, ಭಾವನೆಗಳನ್ನು ಪರಿಪೂರ್ಣವಾಗಿ ಚಿತ್ರಿಸಿದ್ದಾಳೆ. ಅವಳು ನನ್ನ ಜೀವನವನ್ನು ಎಷ್ಟು ಚೆನ್ನಾಗಿ ಅರ್ಥೈಸಿದ್ದಾಳೆ’ ಎಂದು ಅಚ್ಚರಿ ಮತ್ತು ಖುಷಿಯಿಂದ ಹೇಳುತ್ತಾರೆ ಅಕ್ಕೈ.

ನಯನಾ ಅವರು ಇದೇ ಮೊದಲ ಬಾರಿಗೆ ಒಂದೇ ನಾಟಕದಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ಹೇಳುವಂತೆ, ‘ಪಾತ್ರಗಳ ಸ್ಥಿತ್ಯಂತರವನ್ನು ನಿಭಾಯಿಸುವ ವಿಷಯದಲ್ಲಿ ಅಕ್ಕೈ ಅವರ ಜೀವನವನ್ನು ಚಿತ್ರಿಸುವುದು ಸವಾಲಿನ ಸಂಗತಿ. ಅಕ್ಕೈ ಹುಡುಗನಾಗಿ ಜನಿಸಿ, ಹುಡುಗಿಯಾಗಿ ರೂಪಾಂತರವಾಗುತ್ತಾರೆ. ಮುಂದೆ ಮಹಿಳೆಯಾಗಿ ಪರಿಪೂರ್ಣತೆಯತ್ತ ಹೊರಳುತ್ತಾರೆ. ಪೊಲೀಸರು, ಅಕ್ಕೈ ಅವರ ಪೋಷಕರು ಮತ್ತು ಶಿಕ್ಷಕರು, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹಿಜಡಾ ನಾಯಕ ಮತ್ತು ದೊಡ್ಡ ಸಮಾಜ... ಹೀಗೆ ಪ್ರತೀ ಪಾತ್ರದೊಳಗೆ ತೊಡಗಲು ಹೆಚ್ಚು ಮಾನಸಿಕ ಸಿದ್ಧತೆಯ ಅಗತ್ಯವಿದೆ’ ಎನ್ನುತ್ತಾರೆ.

‘ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಹಾನುಭೂತಿ ಬೆಳೆಸುವ ಬದಲು ನನ್ನ ಹೋರಾಟಗಳ ಮೂಲಕ ನಾನು ಈ ಸಮುದಾಯದ ಸದಸ್ಯರಲ್ಲಿ ಒಳಗೊಳ್ಳುವಿಕೆಯ ಪ್ರಜ್ಞೆ ಬೆಳೆಸಲು ಹೇಗೆ ಹೋರಾಟ ಮಾಡಿದೆ ಎಂಬುದನ್ನು ನಯನಾ ಕಂಡುಕೊಂಡಿದ್ದಾರೆ. ಅವರ ಅದ್ಭುತವಾದ ಧ್ವನಿ ಏರಿಳಿತ, ಅಭಿವ್ಯಕ್ತಿಯ ಮೂಲಕ ಲೈಂಗಿಕ ಅಲ್ಪಸಂಖ್ಯಾತರ ಜೀವನದಲ್ಲಿ ನೋವು, ಕಿರುಕುಳ, ಆಘಾತಕಾರಿ ಘಟನೆಗಳನ್ನು ತೋರಿಸಿದ್ದಾರೆ. ನಾಟಕದಲ್ಲಿ ತೊಡಗಿಕೊಳ್ಳುವ ಮುನ್ನ ನನ್ನ ಪುಸ್ತಕ ಓದಿದ್ದಾರೆ. ನನ್ನ ದೇಹಭಾಷೆ ಮತ್ತು ಪಾತ್ರವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ’ ಎಂದು ಮೆಚ್ಚುಗೆ ಮಾತುಗಳನ್ನಾಡುತ್ತಾರೆ ಅಕ್ಕೈ.

ಅಕ್ಕೈ ಅವರ ಮೊದಲ ಹೆಸರು ಜಗದೀಶ್. ಮಧ್ಯಮ ವರ್ಗದ ಸಣ್ಣ ಕುಟುಂಬದಲ್ಲಿ ಗಂಡಾಗಿಯೇ ಅವರು ಹುಟ್ಟಿದ್ದು. ತಂದೆ ಭಾರತೀಯ ರಕ್ಷಣಾ ಸಚಿವಾಲಯದ ಏರೋನಾಟಿಕಲ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದರು. ಅಮ್ಮ ಗೃಹಿಣಿ. ‘ಮಧ್ಯಮವರ್ಗ ಕುಟುಂಬದ ಸಾಮಾನ್ಯ ನಿರೀಕ್ಷೆಯಂದರೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣಾಗಿದ್ದರೆ ಸಾಕು ಎನ್ನುವುದು. ಹಾಗೆಯೇ ಆಗಿತ್ತು. ಅಂದರೆ, ನನ್ನೊಡನೆ ಮತ್ತಿಬ್ಬರು ಒಡಹುಟ್ಟಿದವರು ಇದ್ದರು. ನಾನು ಈ ಇಬ್ಬರ ನಡುವಿನ ಮಗುವಾಗಿದ್ದೆ’ ಎಂದು ಅವರು ಮೆಲುಕು ಹಾಕುತ್ತಾರೆ.

‘ಅಪ್ಪ-ಅಮ್ಮ ಇಬ್ಬರ ಕಡೆಯಿಂದಲೂ ಸಂಬಂಧಿಕರು ಹೆಚ್ಚು. ಇಂತಹ ಕುಟುಂಬದೊಳಗೆ ಹೆಣ್ಣುತನದತ್ತ ವಾಲಿದ್ದೆ, ಹುಡುಗಿಯಾಗಬೇಕೆಂದೇ ಇಚ್ಛಿಸಿದ್ದೆ. ಆ ಕುರಿತಂತೆ ಮಾತನಾಡಿದ್ದೂ ಇದೆ! ಗೆಜ್ಜೆ ತೊಟ್ಟು, ಅಮ್ಮನ ಸೀರೆಯುಟ್ಟು ಸಿಂಗಾರ ಮಾಡಿಕೊಳ್ಳುತ್ತಿದ್ದೆ. ಹಾಗೆಯೇ ಟವಲ್ ತೊಟ್ಟು, ಉದ್ದ ಕೂದಲಿನವಳೆಂದು ನಟಿಸುತ್ತಿದ್ದೆ’ ಎಂದೆನ್ನುವ ಅಕ್ಕೈ ಅವರ ಬದುಕಿನ ರೂಪಾಂತರದ ಕಥೆ ಈ ನಾಟಕದಲ್ಲಿ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ.

ನಾಟಕಕ್ಕೆ ರಾಜಗುರು ಅವರ ಸಂಗೀತ, ಜಯರಾಜ್‌ ಹುಸ್ಕೂರ್‌ ಅವರ ಮೇಕಪ್‌, ಎಂ.ಜಿ.ನವೀನ್‌ ಅವರ ಬೆಳಕಿನ ನಿರ್ವಹಣೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT