ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಡೆ ಸ್ನಾನ' ಭೀಕರ ಮನೋವಿಪ್ಲವ; ತಡೆಯುವುದು ಕಷ್ಟ- ವೈದೇಹಿ

Last Updated 1 ಡಿಸೆಂಬರ್ 2019, 5:36 IST
ಅಕ್ಷರ ಗಾತ್ರ

ಜಾನಕಿ ಹೆಬ್ಬಾರ್‌ ಎಂದರೆ ಥಟ್ಟನೆ ಯಾರೆಂದು ಗೊತ್ತಾಗದೆ ಹಲವರು ತಲೆ ಕೆರೆದುಕೊಳ್ಳುತ್ತಾರೆ. ಅದೇ ವೈದೇಹಿ ಎಂದುನೋಡಿ, ಅವರನ್ನು ಗುರುತಿಸದೇ ಇರುವ ಕನ್ನಡದ ಮನಸ್ಸಿಲ್ಲ. ಅಂದಹಾಗೆ, ಜಾನಕಿ ಅವರಿಗೆ ವೈದೇಹಿ ಎಂಬ ಕಾವ್ಯನಾಮವನ್ನು ಕೊಟ್ಟಿದ್ದು ‘ಪ್ರಜಾವಾಣಿ’ ಬಳಗದ ಸುಧಾ ವಾರಪತ್ರಿಕೆ. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಗುವ ಎರಡು ವರ್ಷಗಳ ಮೊದಲೇ ಜನಿಸಿದ ಈ ಜೀವ, ಈಗಲೂ ಮಹಿಳಾ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದೆ. ಹೆಣ್ಣಿನ ಸ್ಥಿತಿ ಇಂದಿಗೂ ಬದಲಾಗಿಲ್ಲ ಎಂದು ಕೊರಗುತ್ತಿದೆ. ವೈದೇಹಿ ಅವರು 75 ವಸಂತಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಅವರೊಂದಿಗೆ ಮತ್ತೊಬ್ಬ ಹಿರಿಯ ಕವಿಯತ್ರಿ ಸವಿತಾ ನಾಗಭೂಷಣ ಅವರು ನಡೆಸಿದ ಒಂದು ಆತ್ಮೀಯ ಸಂವಾದ ಇಲ್ಲಿದೆ.

* ಬರವಣಿಗೆ ವಿಷಯದಲ್ಲಿ ನೀವು ಆಲ್‌ರೌಂಡರ್. ಒಮ್ಮೊಮ್ಮೆ ಸಾವಧಾನದಿಂದ ದಾರಿ ಕ್ರಮಿಸಿರುವ ಮ್ಯಾರಥಾನ್‌ ಓಟಗಾರ್ತಿಯ ಥರ ಕಾಣುವಿರಿ. ಸಾಹಿತ್ಯಕ್ಕೆ ಮನ್ನಣೆ, ಸಾಹಿತಿಗಳಿಗೆ ಬಹಳ ಗೌರವ ಇರುವ ಕಾಲದಲ್ಲಿ ಬರಹ ಆರಂಭಿಸಿದವರು ನೀವು. ಬಹುದೂರ ಕ್ರಮಿಸಿ ಒಂದು ಚಣ ನಿಂತು ಹಿಂತಿರುಗಿ ನೋಡಿದಾಗ ಏನು ಅನಿಸುವುದು?

ಹಿಂತಿರುಗಿ ನೋಡಿದಾಗ ಬಂದದ್ದೇ ತಿಳಿಯಲಿಲ್ಲವಲ್ಲ ಅಂತ; ನನಗೇ ತಿಳಿಯದಂತೆ ಬರವಣಿಗೆಯ ದಾರಿಯ ಈ ದೂರ ಕ್ರಮಿಸಿರುವೆನಲ್ಲ ಅಂತ ಅನಿಸುತ್ತಿದೆ. ಎಂತಲೇ ನಾನು ಬರೆದೆ ಎಂಬುದಕ್ಕಿಂತ ನನ್ನಿಂದ ಬರೆಸಲ್ಪಟ್ಟಿತು ಎಂಬುದೇ ಹೆಚ್ಚು ನಿಜ ಎನ್ನುವೆ. ನನ್ನ ಹುಟ್ಟೂರು, ಅಲ್ಲಿನ ಜನ, ಭಾಷೆ, ದೊಡ್ಡ ಕುಟುಂಬ ಪುಟ್ಟ ಪ್ರಪಂಚದಲ್ಲಿ ನಾ ಕಂಡ ಅಸಂಖ್ಯ ವ್ಯಕ್ತಿಗಳು, ನಗೆ, ನೋವು, ಸಂಭ್ರಮ, ಸಂಕಟಗಳು ನನಗೆ ಒದಗಿ ಬಂದಿರುವುದು ಬರವಣಿಗೆಗಾಗಿ ನನ್ನ ಮನಸ್ಸನ್ನು ಉತ್ತು ಹದ ಹಾಗೂ ಸಿದ್ಧಗೊಳಿಸಲೆಂದೇ ಇರಬಹುದೆ? ಕುಂದಾಪುರ, ಅಲ್ಲಿಂದ ಶಿವಮೊಗ್ಗ, ಅಲ್ಲಿಂದ ಉಡುಪಿ, ಮಣಿಪಾಲ - ಈ ಪಯಣದ ಉದ್ದಕ್ಕೂ ಸ್ವಂತ ಮತ್ತು ಆಚೀಚಿನ ಬದುಕು ಘಟನೆಗಳ ಬಿಸಿಲು, ನೆರಳು, ನೇಸಲುಗಳು; ಬಳಲಿಕೆ, ದಣಿವು, ಬೇಗೆ, ಅವಮಾನ, ಅವಜ್ಞೆ, ಖುಷಿ, ಸಂತಸಗಳು ಇಂಥ ರೀತಿಯಲ್ಲಿ ಎಂದು ಸ್ಪಷ್ಟ ಹೇಳಲಾಗದಂತೆ ನನ್ನ ಒಳಹೊಕ್ಕವು. ಅಕ್ಷರ ಚಿತ್ರಗಳಲ್ಲಿ ಅವು ಒಡಮೂಡದೆ ಇರುವುದಾದರೂ ಹೇಗೆ? ಅದು ಆಗಲೇ ಬೇಕಿತ್ತು, ಆಯಿತು ಅಷ್ಟೆ.

* ಅಡುಗೆಮನೆ ಸಾಹಿತ್ಯ ಅಂತ ತಮಾಷೆ ಮಾಡುತಿದ್ದ ಕಾಲವದು. ಅದನ್ನೇ ನೀರು ಗೊಬ್ಬರವಾಗಿ ಬಳಸಿಕೊಂಡು ಬರೆದವರು ನೀವು. ಹಲವು ಲೇಖಕಿಯರು ಗಟ್ಟಿಮುಟ್ಟಾದ ಕತೆಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕವನ್ನು ವಿಸ್ತರಿಸಿದರೂ ಕನ್ನಡ ಸಾಹಿತ್ಯ ಲೋಕ ಇವರನ್ನು ಕುರಿತು ಉತ್ಸಾಹದಿಂದ ಚರ್ಚಿಸಿರುವುದು ಕಡಿಮೆ. ಬರವಣಿಗೆಯ ಆರಂಭದ ದಿನಗಳಲ್ಲಿ ‘ನಾನು ಚೆನ್ನಾಗಿ ಬರೀತಿದೀನಾ’ ಎಂದು ನಿಮಗೆ ನೀವೇ ಕೇಳಿಕೊಂಡಿದ್ರಾ?

ಓದುಗರು, ಅವರ ಸ್ವೀಕಾರ, ಚೆನ್ನಾಗಿ ಬರೀತಿದೀನಾ ಇತ್ಯಾದಿ ಚಿಂತೆ ಎಲ್ಲಿತ್ತು ನನಗೆ? ಬರೆಯಬೇಕೆನಿಸಿತು, ಬರೆದೆ. ಪತ್ರಿಕೆಗೆ ಕಳಿಸಬೇಕು ಅನಿಸಿತು, ಕಳಿಸಿದೆ. ಆಗ ಕರ್ಮವೀರ, ಪ್ರಜಾಮತ, ಜೀವನ, ನವಭಾರತ, ರಾಷ್ಟ್ರಮತ, ಭವ್ಯವಾಣಿ ಇತ್ಯಾದಿ ಪತ್ರಿಕೆಗಳು ಬರುತ್ತಿದ್ದವು. ಮುಂದೆ ನನ್ನ ಕಾಲದಲ್ಲಿಯೇ ಸುಧಾ ಪತ್ರಿಕೆ ಆರಂಭವಾಯ್ತು. ಬರೆದರೆ ಪ್ರಕಟಣೆಗೆ ಕಳಿಸುವ ಹಂಬಲ ಹೆಚ್ಚಾಯಿತು. ಪ್ರಕಟಣೆಗೆ ಅರ್ಹ ಅಂತ ಕಾಣದಿದ್ದಲ್ಲಿ, ಪತ್ರಿಕೆ ಬರಹವನ್ನು ಹಿಂದೆ ಕಳಿಸುವ ಸಂಪ್ರದಾಯವಿದ್ದ ಕಾಲವದು. ಹೀಗಾಗಿ, ಕಳಿಸಿದ ಬರಹ ಹಿಂದೆ ಬಂದರೆ ಎಂಬ ಆತಂಕ, ಅಂತಹ ಅಂಚೆ ತರುವ ದುಗುಡ, ಅದು ಮನೆಮಂದಿಗೆ ಗೊತ್ತಾದರೆ ಏಳುವ ಹಿಂದುಮುಂದಿಲ್ಲದ ನಾಚಿಕೆ –ಎಳೆವಯಸ್ಸಿನ ಇಂತಹ ಎಳಸು ತಳಮಳಗಳೇ ನನಗೆ ಪೋಷಕವಾದವು ಎಂದರೆ ನಂಬುತ್ತೀರ? ಗಮನ, ಪ್ರೋತ್ಸಾಹ ಇತ್ಯಾದಿ ಶಬ್ದಗಳ ತಂಟೆ ನನ್ನ ಸುತ್ತ ಇರಲೇ ಇಲ್ಲ. ನನ್ನನ್ನು ಕಾಪಾಡಿದ್ದು ಇವೇ ಎಲ್ಲ ಅನಿಸುತ್ತಿದೆ. ಹೆಚ್ಚು ಗಮನಿಸದೇ ಇರುವುದು ಎಷ್ಟೋ ಸಲ ನಮ್ಮನ್ನು ಹೆಚ್ಚು ಸ್ವತಂತ್ರಗೊಳಿಸುತ್ತದೆ ಗೊತ್ತೆ? ನನ್ನ ‘ಮರ ಗಿಡ ಬಳ್ಳಿ’ ಸಂಕಲನಕ್ಕೆ ಒಳ್ಳೆಯ ವಿಮರ್ಶೆ ಬಂದಿರಲಿಲ್ಲ. ಆದರೆ ನನ್ನನ್ನದು ಯಾವ ರೀತಿಯಲ್ಲಿಯೂ ಬಾಧಿಸಲೇ ಇಲ್ಲ. ಹೇಳಿದೆನಲ್ಲ, ಅವೆಲ್ಲದರ ಕಡೆ ನನ್ನ ಕಣ್ಣೇ ಇರಲಿಲ್ಲ. ಬರೆಯಬೇಕೆನಿಸಿದಾಗ ಬರೆಯುತ್ತ ಹೋಗಿದ್ದೇ ನನ್ನನ್ನು ಉಳಿಸಿತೆ? ಯೋಚಿಸುತ್ತಿದ್ದೇನೆ.

* ನಾನು ಬಾಲ್ಯದಲ್ಲಿ ಕಂಡಂತೆ ಬಹುತೇಕ ಹೆಣ್ಣುಮಕ್ಕಳದ್ದು ದೈನೇಸಿ ಸ್ಥಿತಿ. ವಿದ್ಯೆ ಅಷ್ಟೋ ಇಷ್ಟು. ಹೆಂಗೋ ಆದಷ್ಟು ಬೇಗ ಹೊಸಿಲು ದಾಟಿಸಿದರೆ ಸಾಕು. ಒಂದು ಜೀವ ಸ್ವಾಭಿಮಾನದಿಂದ ಬದುಕಲಾರದ ಸ್ಥಿತಿ ವಾತಾವರಣ. ಹೀಗಿರುವಾಗ ನೀವು ಇಂಥದರಿಂದ ಹೇಗೆ ಪಾರಾದಿರಿ? ಒಂದಿಷ್ಟು ವಿದ್ಯೆ ಮತ್ತು ಸಣ್ಣ ಕೆಲಸ ಆ ಹೊತ್ತು ಮಹಿಳಾ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಇದು ಇಲ್ಲದೇ ಹೋದಲ್ಲಿ ಮಹಿಳಾ ಲೋಕ ಅದೆಷ್ಟು ‘ಫಣಿಯಮ್ಮ, ‘ಅಕ್ಕು’ಗಳಿಂದ ತುಂಬಿ ಹೋಗಿರುತ್ತಿತ್ತೋ ಏನೋ. ಈ ನವ ಎಚ್ಚರದ ಫಲಾನುಭವಿ ನೀವು ಅಂತ ಅನಿಸೊಲ್ಲವೆ?

ಹೌದು. ಒಂದಿಷ್ಟು ವಿದ್ಯೆ ಓದಿಗೆ ಅನುವುಗೊಳಿಸಿತು. ಮನಸ್ಸನ್ನು ಹೆಚ್ಚು ಹೆಚ್ಚು ಸೂಕ್ಷ್ಮಗೊಳಿಸಿತು. ನಮ್ಮ ದನಿಯನ್ನು ಆಲಿಸುವಲ್ಲಿ ನಮ್ಮನ್ನು ಸನ್ನದ್ಧಗೊಳಿಸಿತು. ಆದರೆ, ನನ್ನ ಕಾಲದಲ್ಲಿ ವಿದ್ಯೆ ಇದ್ದರೂ ಕೆಲಸಕ್ಕೆ ಹೋಗುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಮಹಿಳೆ ದುಡಿಯುವುದೆಂದರೆ ತುಸು ಹೀನ ಅನಿಸಿತ್ತು. ದುಡಿಯುವ ಮಹಿಳೆಗೆ ಗಂಡು ಸಿಗುವುದೂ ಕಷ್ಟವಿತ್ತು. ‘ಕಲಿತು ಆಫೀಸರ್ ಆಗಬೇಕಾ?’ ‘ಆಫೀಸಿಗೆ ಹೋಗುತ್ತಿದೆ. ಅಲ್ಲಿ ಯಾರ್‍ಯಾರೊಟ್ಟಿಗೆ ಹೇಗಿರುತ್ತದೋ ಕಂಡವರಾರು?’ ಎಂಬಂತಹ ಮಾತುಗಳು ಹಾಗೂ ಧೋರಣೆಗಳು ಆಳುತಿದ್ದ ಕಾಲ ಅದು.

ನೋಡುನೋಡುತಿದ್ದಂತೆ ಕಾಲ ಹೇಗೆ ಬದಲಾಯಿತು! ಮಹಿಳೆ ಕೆಲಸಕ್ಕೆ ಹೋಗುವುದರ, ದುಡ್ಡು ದುಡಿಯುವುದರ ಬಗ್ಗೆ ದೃಷ್ಟಿಕೋನವೇ ಬದಲಾಯಿತು. ಕಲಿತ ಮತ್ತು ಕೆಲಸಕ್ಕೆ ಹೋಗುವ ಹೆಣ್ಣಿಗೆ ಮದುವೆಯಲ್ಲಿ ಹೆಚ್ಚು ಪ್ರಾಶಸ್ತ್ಯ ದೊರೆಯಿತು! ನನ್ನ ಪೀಳಿಗೆ ಈ ಇಡೀ ಪಲ್ಲಟ ಪ್ರಕ್ರಿಯೆಯ ಪ್ರತ್ಯಕ್ಷ ಸಾಕ್ಷಿ. ಆದರೆ, ಇದು ಮೂಲಭೂತ ಸಮಸ್ಯೆಗೆ ಪರಿಹಾರ ತಂದಿದೆಯೇನು? ದುಡಿಮೆ, ಆರ್ಥಿಕ ಸ್ವಾತಂತ್ರ್ಯ ಎಲ್ಲರಿಗೂ ಸಮಾನವಾಗಿ ಬಿಡುಗಡೆ ನೀಡಿದೆ ಅಂತ ನನಗೆ ಕಾಣುತ್ತಿಲ್ಲ. ಅವರನ್ನು ಇಮ್ಮಡಿ ಶ್ರಮಕ್ಕೆ ಒಡ್ಡಿರುವ ಉದಾಹರಣೆಗಳು ಎಷ್ಟು ಬೇಕು! ‘ಫಣಿಯಮ್ಮ’ ಮತ್ತು ‘ಅಕ್ಕು’ ಇವರೆಲ್ಲ ಸೃಷ್ಟಿಯಾಗಿರುವುದು ಸಮಾಜದ ಕ್ರೌರ್ಯ, ಅಸ್ವಾಸ್ಥ್ಯ, ಅಸೂಕ್ಷ್ಮತೆಯಿಂದ. ಸಮಾಜದ ಈ ಗುಣ ಇಂದಿಗೂ ಒಂದಿಷ್ಟೂ ಬದಲಾಗಿಲ್ಲ. ಬಾಗಿಲು ತೆರೆದಿದೆ, ಹೊರಬಂದಿದ್ದೇವೆ ಎನ್ನುತ್ತೇವೆ. ತೆರೆದ ಬಾಗಿಲುಗಳು ತೆರೆದ ಭಂಗಿಯಲ್ಲಿಯೇ ಮುಚ್ಚಿಕೊಂಡೂ ಇರುವ ಹೊಸ ದುರಂತ ಇವತ್ತಿನದು. ನಮ್ಮ ತ್ರಿವೇಣಿಯವರು ಇದನ್ನು ಆಗಲೇ ಕಂಡುಕೊಂಡಿದ್ದರು. ಎಂತಲೇ ಅವರ ಕೃತಿಗಳು ಹೆಣ್ಣಿನ ಬದಲಾಗದ ಸ್ಥಿತಿಯ ಪಠ್ಯ ಎಂದೇ ನನಗನಿಸೋದು.

* ಈ ಪ್ರಶ್ನೆ ಕೇಳೋಕೆ ಕಷ್ಟ ಆಗ್ತಾ ಇದೆ. ಆದರೂ ಕೇಳ್ತೀನಿ. ಮಲದ ಗುಂಡಿಯಲ್ಲಿ ಬಿದ್ದು ಸಾಯುವುದನ್ನೂ ಎಂಜಲು ಎಲೆಯ ಮೇಲೆ ಉರುಳಾಡುವುದನ್ನೂ ಜಾತಿ ಮೀರಿದರೆ ಜೀವ ತೆಗೆಯುವುದನ್ನೂ ದಲಿತರ ಕೇರಿಯ ನಾಯಿ ಬೊಗಳಿತು ಎಂದು ಅದರ ಮಾಲೀಕನನ್ನು ದಂಡಿಸುವುದನ್ನೂ ಕಾಯಕ ಮಾಡಿಕೊಂಡಿರುವ ಮಂದಿ ತುಂಬಿರುವ ದೇಶವಿದು! ನೀವು ‘ಮಡೆ ಸ್ನಾನ’ದ ಪರ ಎಂದು ಕೆಲವರು ಈಗಲೂ ಆರೋಪಿಸುತ್ತಿರುವರು. ಮನುಷ್ಯ ಅಸಹಾಯಕನಾಗಿದ್ದಾಗ ಏನನ್ನೂ ಮಾಡಲು ಸಿದ್ಧನಾಗುವನು ಎಂಬುದು ನಿಜವಾದರೂ ಈ ತರಹದ ಆಚರಣೆಗಳು ಅಸಹಾಯಕನನ್ನು ಪಾತಾಳಕ್ಕೆ ತಳ್ಳಿದಂತೆ ಅಲ್ಲವೆ? ಇದನ್ನು ಹೇಗೆ ವಿವರಿಸುವಿರಿ?

ಅಸಹಾಯಕನನ್ನು ಪಾತಾಳಕ್ಕೆ ತಳ್ಳಿದಂತೆಯೇ. ಅದರಲ್ಲಿ ಸಂಶಯವೇ ಇಲ್ಲ. ಆದರೆ, ನನ್ನ ಮೇಲಿನ ಆರೋಪ ಯಾಕೆ ಬಂತು ಎಂದರೆ ನನ್ನ ಬರಹವೇ ಅದಕ್ಕೆ ಎಡೆಮಾಡಿಕೊಟ್ಟಿತ್ತು. ಆ ಇಡೀ ಬರಹದಲ್ಲಿ ನಾನು ಜನರು ತಮ್ಮ ಅಸಹಾಯಕತೆಯ ಪರಾಕಾಷ್ಠೆಯಲ್ಲಿ ಪರಿಹಾರಕ್ಕಾಗಿ ಏನು ಮಾಡಲೂ ಹಿಂಜರಿಯರು ಎಂಬುದನ್ನು ಸ್ವತಃ ಕಂಡ ಉದಾಹರಣೆ ಸಮೇತ ವೇದನೆಯಿಂದ ಹೇಳಿಕೊಂಡಿದ್ದೆ. ಅಂತಹ ವ್ರತಾಚರಣೆ ಮಾಡುವವರನ್ನು, ಅದೊಂದು ಭೀಕರ ಮನೋವಿಪ್ಲವ ಆದ್ದರಿಂದ, ತಡೆಯುವುದು ಕಷ್ಟ ಎಂದು ಸಂಕಟದಿಂದ ವಿವರಿಸಿದ್ದೆ. ಅದು ನನ್ನನ್ನು ಮಡೆಸ್ನಾನದ ಪರ ಎಂದು ಬಿಂಬಿಸಿತು.

ವ್ಯವಸ್ಥೆಯ ಕೂಸಾದ ಅಂತಹ ಅನಾಗರಿಕ ಆಚರಣೆಯನ್ನೇ ಅದರ ಹಿನ್ನೆಲೆಯಲ್ಲಿರುವ ದೇವಸ್ಥಾನಗಳು ಮತ್ತು ಸರಕಾರ ಶಾಶ್ವತವಾಗಿ ರದ್ದು ಮಾಡಬೇಕು ಎಂಬುದು ನನ್ನ ಇಂಗಿತವಾಗಿತ್ತು. ಇಂಗಿತವನ್ನು ಇಂಗಿತವಾಗಿಯಷ್ಟೇ ಬಿಡದೆ ಸ್ಪಷ್ಟವಾಗಿ ಒಂದು ಸಾಲು ಬರೆದು ಬಿಟ್ಟಿದ್ದರೆ ಈ ಅಪಾರ್ಥಕ್ಕೆ ಎಡೆಯೆ ಇರುತ್ತಿರಲಿಲ್ಲ. ಬರಹಗಾರರ ಕೃತಿಗಳನ್ನು ಓದಿದವರಿಗೆ ಅವರ ಮನಸ್ಸಿನ ಒಳಇಂಗಿತ ಅರ್ಥವಾಗುತ್ತದೆ ಎಂದು ನಾನು ಭಾವಿಸಿದ್ದೆ ಬಹುಶಃ. ಆದರೆ ಹಾಗೇನೂ ಆಗಬೇಕಿಲ್ಲ, ನಿರೀಕ್ಷಿಸುವಂತೆಯೂ ಇಲ್ಲ. ಬಂದ ಆ ಆಪಾದನೆಯನ್ನು ಕೇಳಿ ಕೇವಲ ಕಪ್ಪು ಬಿಳುಪಿನಲ್ಲಿ ಗ್ರಹಿಸುವವರ ನಡುವೆಯೂ ನಾವು ಬದುಕುತ್ತಿದ್ದೇವೆ ಎಂಬ ಎಚ್ಚರ ತಿಳಿದಂತಾಯಿತು. ಅದೇನೇ ಇರಲಿ, ಆ ಹೀನಾತಿಹೀನ ಅಮಾನುಷ ಆಚರಣೆಯನ್ನು ನಾನು ಸರಿ ಎನ್ನಲು ಎಂದಾದರೂ ಸಾಧ್ಯವೆ? ಸರಿ ಎಂದರೆ ನಾನು ಮನುಷ್ಯಳೆ? ಮನುಷ್ಯ ಕುಲಕ್ಕೇನೆ ಕಳಂಕವೆನಿಸುವ ಅಂತಹ ಆಚರಣೆ ಇರಕೂಡದು. ಅದನ್ನು ಈಗಾದರೂ ಬುಡದಲ್ಲೇ ನಿರ್ನಾಮಗೊಳಿಸಬೇಕು.

* ಜಗತ್ತಿನಲ್ಲಿ ಏನೆಲ್ಲಾ ಎಷ್ಟೆಲ್ಲಾ ಧರ್ಮಗಳನ್ನು ಹುಟ್ಟು ಹಾಕಿರುವರಪ್ಪಾ...ಆದರೂ ಶಾಂತಿ ಇಲ್ಲ! ಒಂದು ಕಣ್ಣೋಟ, ಒಂದು ಕಿರು ನಗೆ, ಒಂದು ಬಿಸಿ ಅಪ್ಪುಗೆ, ಒಂದು ಕೈ ಕುಲುಕು, ಒಂದು ನಿಟ್ಟುಸಿರು, ಅದಕ್ಕೊಂದು ಸಾಂತ್ವನ... ಉಣಿಸುವುದು, ತಣಿಸುವುದು, ಹಾಸುವುದು, ಹೊಚ್ಚುವುದು... ಎಲ್ಲವನ್ನೂ ಎಲ್ಲರನ್ನೂ ಬಾಚಿ ತಬ್ಬಿ ಅಳಲು ಹೆಗಲು ಕೊಡುವುದೇ ಹೆಣ್ಣು ಧರ್ಮ. ಹೆಂಗಸರು ಧರ್ಮವನ್ನೇ ಹುಟ್ಟುಹಾಕಿಲ್ಲ ಅಂತ ಬೇರೆ ಹೇಳುವರು! ನೀವೇನು ಹೇಳುವಿರಿ?

ಜಗತ್ತನ್ನು ನಿಜವಾಗಿಯೂ ಪೊರೆಯುವುದು ಮಾತೃಧರ್ಮ. ಇದು ಬಿಟ್ಟು ಬೇರೆ ಧರ್ಮ ಇನ್ನೊಂದಿಲ್ಲ. ಮಾತೃಧರ್ಮವೆಂಬುದು ಸ್ತ್ರೀಸತ್ವ ಮತ್ತು ಸ್ತ್ರೀತತ್ವದಲ್ಲಿಯೇ ಅಂತರ್ಗತವಾಗಿ ಇದ್ದೇ ಇರುವ, ಹೆಣ್ಣಿಗೆ ಹುಟ್ಟಿನಿಂದಲೇ ಲಭ್ಯವಾಗುವ ಆಂತರ್ಯದಲ್ಲಿ ಸದಾಕಾಲ ಹುದುಗಿರುವ ಅಪೂರ್ವ ಜೀವಗುಣ. ಎಂತಲೆ ಹೊಸಧರ್ಮದ ಅಗತ್ಯವೇ ಅವಳಿಗೆ ಕಾಣದು. ಅವಳ ಕಲ್ಪನೆಗೂ ಅದು ಬರದು. ವಿಚಿತ್ರವೆಂದರೆ ತಾಯ್ತನವೆನ್ನುವುದು ತಾಯಿಯಾಗಿಯೇ ಬರಬೇಕಿಲ್ಲದ ಒಂದು ಅನನ್ಯತೆ. ಹಾಗಾಗಿಯೇ ಹೆಣ್ಣಿನಲ್ಲಷ್ಟೇ ಅಲ್ಲ ಕೆಲ ಪುರುಷರಲ್ಲಿಯೂ ಕಾಣುವಂಥದು. ನನ್ನ ಪ್ರಕಾರ ಈಗ ಕಾಣುವ ಉಳಿದೆಲ್ಲ ಧರ್ಮಗಳು ಹುಟ್ಟಿದ್ದೂ ಮೂಲತಃ ಮಾತೃಧರ್ಮದ ಪ್ರತಿಪಾದಕರಾದ -ಹೆಂಗರುಳಿನ ಪುರುಷರಿಂದಲೇ. ಸಮಾಜದಲ್ಲಿ ಹಿಂಸೆ, ಅಸಮಾನತೆಗಳೇ ಪ್ರಧಾನವಾದಾಗ ಅಂದಿನ ಅಗತ್ಯಗಳಾಗಿ ಅವು ಹುಟ್ಟಿಕೊಂಡವು. ಬುದ್ಧ, ಯೇಸು, ಪೈಗಂಬರ, ಬಸವಣ್ಣ, ಮುಂತಾದ ಧರ್ಮದ ಮೂಲಪ್ರವರ್ತಕರನ್ನೆಲ್ಲ ಒಮ್ಮೆ ನೆನೆಸಿಕೊಳ್ಳಿ. ಅವರೆಲ್ಲ ಜಾಗೃತಗೊಳಿಸಹೊರಟದ್ದು ಮಾತೃಧರ್ಮವನ್ನೇ. ಆದರೆ ಬರಬರುತ್ತ ಅವು ಕೇವಲ ಒಣಕಲು ‘ಪುರುಷಮಾತ್ರ’ ರಾಗಿರುವವರ ಸುಪರ್ದಿಗೆ ಸಿಲುಕಿ ಅನಾಹುತ ವರ್ತನೆಗಳಾಗಿ ವಿಕೃತವಾಗಿ ದ್ವೇಷವಿಷಗಳಾಗಿ ಬದಲಾದವು.

* ‘ಕ್ರಿ.ಪೂ, ಅಡುಗೆಮನೆಯ ಹುಡುಗಿ ಮೆಣಸಿನ ಚೊಟ್ಟು ಮುರಿಯುತ್ತಾ, ಆಕಾಶದ ಸದ್ದಿಗೆ ಕಿವಿಯ ತೆರೆದಿಟ್ಟು ಯಾರೂ ಕಾಣದಂಥ ಲೋಕ ಕಾಣಲು ಹಂಬಲಿಸುವುದು’/ ‘ಬೆರಣಿ ತಟ್ಟುವ ಹುಡುಗಿ... ಬೆರಳ ಚಡಿಯಲ್ಲಿರುವ ಸೆಗಣಿ ನಾರು, ಉಟ್ಟ ಉಡುಗೆಗೆ ಉಜ್ಜಿ ಎದೆನೋವಿಗೆ ಮದ್ದು ಅರೆದು ತಂದವನೊಟ್ಟಿಗೆ ಕಬ್ಬು ಜಲ್ಲೆಯನೇರಿ ಆಕಾಶಲೋಕಕ್ಕೆ ಹೋಗುವುದು’... ಈ ನಿಮ್ಮ ಕವನಗಳ ನಾಯಕಿಯರ ಕನಸುಗಳು... ನಮ್ಮವೂ ಹೌದು! ನಮ್ಮ ತಾಯಿ ಅನೇಕಬಾರಿ ಉಚ್ಛರಿಸುತ್ತಿದ್ದದ್ದು ಉಂಟು. ಹೆಣ್ಣಾಗಿ ಹುಟ್ಟಬಾರದು, ಮರ ಅಥವಾ ಕಲ್ಲಾಗಿ ಹುಟ್ಟಬೇಕು ಅಂತ. ಆ ತಲೆಮಾರಿನ ನೋವು, ಸಂಕಟ, ವಿಷಾದ, ಕಳವಳ ಈಗ ಇತಿಹಾಸ. ಈಗ ಆ ಬದುಕೂ ಇಲ್ಲ ಆ ಪಾತ್ರಗಳೂ ಇಲ್ಲ. ಅದನ್ನೆಲ್ಲಾ ನೀವು ಬರೆದಿಟ್ಟು ಅವು ಬಹುಕಾಲ ನಮ್ಮ ನಡುವೆ ಜೀವಂತ ಇರುವಂತೆ ಮಾಡಿರುವಿರಿ. ನೀವು ನಮ್ಮ ಹಿಂದಣ ಹೆಜ್ಜೆ. ನಮಸ್ಕಾರ ಮೇಡಂ...

ಥ್ಯಾಂಕ್ಯೂ ಸವಿತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT