ಸೋಮವಾರ, ಜೂನ್ 21, 2021
28 °C

ಪರಮಾಣು ಬಾಂಬ್‌ಗೆ 75 ವರ್ಷ: ಇನ್ನೂ ಕಾಡುವ ಲಿಟ್ಲ್‌ ಬಾಯ್‌, ಫ್ಯಾಟ್‌ ಮ್ಯಾನ್‌

ಡಾ. ಬಿ.ಆರ್.ಗುರುಪ್ರಸಾದ್ Updated:

ಅಕ್ಷರ ಗಾತ್ರ : | |

prajavani

ಜಗತ್ತಿನಲ್ಲಿ ಪರಮಾಣು ಬಾಂಬ್‌ ಯುಗ ಆರಂಭವಾಗಿ ಇದೀಗ 75 ವರ್ಷ. ಅಮೆರಿಕದ ಅಂತಹ ಬಾಂಬ್‌ಗಳಿಗೆ ಮೊದಲ ಬಲಿಪಶುಗಳಾದ ಹಿರೋಷಿಮಾ, ನಾಗಾಸಾಕಿ ನಗರಗಳು ಏಳೂವರೆ ದಶಕಗಳಲ್ಲಿ ಮತ್ತೆ ಎದ್ದು ನಿಂತಿರುವುದೇನೋ ನಿಜ. ಆದರೆ, ಮನುಕುಲದ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿರುವ ಇಂತಹ ಅಸ್ತ್ರಗಳು ಬೇಡ ಎಂದು ಹೋರಾಟಗಳು ನಡೆದಷ್ಟೂ ಹೊಸ ಹೊಸ ಅಸ್ತ್ರಗಳು ಪ್ರಬಲ ದೇಶಗಳ ಬತ್ತಳಿಕೆಯನ್ನು ಸೇರುತ್ತಲೇ ಇವೆಯಲ್ಲ?

ಜೊರ್ನಾದಾ ದೆಲ್ ಮ್ಯುರ್ತೋ (ಮರಣಹೊಂದಿದ ಮನುಷ್ಯನ ಪಯಣ)– ಇದು ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಮೆಕ್ಸಿಕೊ ರಾಜ್ಯದ ಒಂದು ನಿರ್ಜನ ಮರುಭೂಮಿ ಪ್ರದೇಶ.


ರಾಬರ್ಟ್‌ ಓಪನ್‌ ಹೈಮರ್‌

1945ರ ಜುಲೈ 16ರಂದು ಬೆಳಗಿನ ಜಾವ ಅಲ್ಲಿನ ‘ಟ್ರಿನಿಟಿ ಪರೀಕ್ಷಾ ಸ್ಥಳ’ದಲ್ಲಿ ಸುಮಾರು 400 ವಿಜ್ಞಾನಿಗಳು, ಎಂಜಿನಿಯರ್‌ಗಳು ಹಾಗೂ ಮಿಲಿಟರಿ ಅಧಿಕಾರಿಗಳು ನೆರೆದಿದ್ದರು. ಇಡೀ ಜಗತ್ತಿನಿಂದ ಅತ್ಯಂತ ಗೋಪ್ಯವಾಗಿಟ್ಟ ಸಂಗತಿಯೊಂದು ಅಂದು ಅಲ್ಲಿ ಘಟಿಸಲಿತ್ತು. ವಿಶೇಷ ಸಾಧನವೊಂದರ ಪರೀಕ್ಷಾ ಸ್ಫೋಟ ಅದಾಗಿತ್ತು. ಅದನ್ನೇ ಅವರೆಲ್ಲರೂ ಕಾತರದಿಂದ ಎದುರು ನೋಡುತ್ತಿದ್ದರು.

ವೇಳೆ ಬೆಳಿಗ್ಗೆ 5.29 ಅನ್ನು ಸಮೀಪಿಸಿದಂತೆ, ಅಲ್ಲಿ ನೆರೆದಿದ್ದ ಬಹುತೇಕರ ಹೃದಯದ ಬಡಿತ ಹೆಚ್ಚಿತು. ಕ್ಷಣಗಳು ಉರುಳಿದಂತೆ ಗಡಿಯಾರದ ಮುಳ್ಳು ಆ ಸಮಯ ಆಗಿದ್ದನ್ನು ಸೂಚಿಸಿತು. ಆದರೆ, ಯಾವ ಆಸ್ಫೋಟನೆಯೂ ಘಟಿಸಲಿಲ್ಲವೆಂಬಂತೆ ಭಾಸವಾಗಿ, ಒಂದು ಕ್ಷಣ ಎಲ್ಲರೂ ಉಸಿರು ಬಿಗಿಹಿಡಿದರು. ಆ ವೇಳೆಯಲ್ಲಿ, ಸ್ಫೋಟಿಸಬೇಕಾಗಿದ್ದ ಸಾಧನ ವಿಫಲವಾಯಿತೇ?

ಈ ಪ್ರಶ್ನೆಯು ಸ್ಫೋಟಕ ಸಾಧನ ನಿರ್ಮಿಸುವ ಯೋಜನೆಯ ವಿಜ್ಞಾನಿಗಳ ತಂಡದ ನೇತೃತ್ವವನ್ನು ವಹಿಸಿದ್ದ ಅಮೆರಿಕದ ಖ್ಯಾತ ವಿಜ್ಞಾನಿ ಡಾ.ಜೆ.ರಾಬರ್ಟ್ ಓಪನ್ ಹೈಮರ್‌ ಅವರ ಮನದಲ್ಲಿ ಧುತ್ತೆಂದು ಮೂಡಿತು. ಆದರೆ, ಅದು ಕ್ಷಣಿಕವಷ್ಟೆ.

ಹತ್ತು ಮಹಡಿಗಳಷ್ಟು ಎತ್ತರವಿದ್ದ ಉಕ್ಕಿನ ಗೋಪುರವೊಂದರ ಮೇಲೆ ಇರಿಸಲಾಗಿದ್ದ ಆ ಸಾಧನ ಮರುಕ್ಷಣವೇ, ಓಪನ್ ಹೈಮರ್ ಅವರಿದ್ದ ಸ್ಥಳದಿಂದ 32 ಕಿಲೋಮೀಟರ್‌ಗಳಾಚೆ ಪ್ರಚಂಡವಾಗಿ ಆಸ್ಫೋಟಿಸಿತು. ಇದರ ಸಾಮರ್ಥ್ಯ 22 ಸಾವಿರ ಟನ್‌ಗಳಷ್ಟು ಟಿಎನ್‌ಟಿಯನ್ನು (ಇದು ಒಂದು ಅತ್ಯಂತ ಸಮರ್ಥ ರಾಸಾಯನಿಕ ಸ್ಫೋಟಕ ವಸ್ತು) ಒಂದೇ ಕ್ಷಣದಲ್ಲಿ ಸ್ಫೋಟಿಸುವುದರಿಂದ ಬಿಡುಗಡೆಯಾಗುವ ವಿನಾಶಕಾರಿ ಶಕ್ತಿಗೆ ಸಮನಾಗಿತ್ತು! ಪರಮಾಣು ಯುಗ ಪ್ರಾರಂಭವಾಯಿತು. 

ಪರಮಾಣುವಿನ (ಆಟಂ) ಗರ್ಭದಲ್ಲಿ ಹುದುಗಿದ್ದ ಅಪಾರವಾದ ಶಕ್ತಿ ಒಮ್ಮೆಲೇ ಕ್ಷಣಾರ್ಧದಲ್ಲಿ ಬಿಡುಗಡೆಯಾದ ಕಾರಣ ಉಂಟಾದ ಆ ವಿರಾಟ್ ರೂಪದ ಆಸ್ಫೋಟನೆಯಿಂದ ಜನಿತವಾದ ಕಣ್ಣುಕುಕ್ಕುವ ಬೆಳಕು, ಬೆಂಕಿಯುಂಡೆ ಹಾಗೂ ಗಗನಕ್ಕೇರಿದ ಬೃಹತ್ ನಾಯಿಕೊಡೆಯನ್ನು (ಮಶ್ರೂಮ್) ಹೋಲುವಂತಿದ್ದ ಮೋಡವನ್ನು ಕಂಡ ಓಪನ್ ಹೈಮರ್‌ ಅವರಿಗೆ ಅದರ ವಿನಾಶಕಾರಿ ಸಾಮರ್ಥ್ಯದ ಅರಿವು ತಕ್ಷಣವೇ ಉಂಟಾಯಿತು. 

ಪೌರ್ವಾತ್ಯ ತತ್ವಶಾಸ್ತ್ರವನ್ನು, ಅದರಲ್ಲೂ ಭಾರತೀಯ ತತ್ವಶಾಸ್ತ್ರವನ್ನು ಚೆನ್ನಾಗಿ ಬಲ್ಲವರಾಗಿದ್ದ ಅವರಿಗೆ ಭಗವದ್ಗೀತೆಯ ಈ ಎರಡು ಶ್ಲೋಕಗಳು ಥಟ್ಟನೆ ನೆನಪಿಗೆ ಬಂದವು.  


ನಾಗಾಸಾಕಿಯಲ್ಲಿ ‘ಫ್ಯಾಟ್‌ ಮ್ಯಾನ್‌’ ಬಾಂಬ್‌ ಸ್ಫೋಟಗೊಂಡಾಗ ನಾಯಿಕೊಡೆ ಆಕಾರದಲ್ಲಿ ಎದ್ದ ದೂಳು

ಮೊದಲನೆಯದು–

ದಿವಿಸೂರ್ಯ ಸಹಸ್ರಸ್ಯ ಭವೇದ್ಯುಗಪದುತ್ಥಿತಾ

ಯದಿ ಭಾಃ ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನಃ

ಸಾವಿರಾರು ಸೂರ್ಯರು ಆಗಸದಲ್ಲಿ ಒಮ್ಮೆಲೇ ಉದಯಿಸಿದಲ್ಲಿ, ಅವರ ಪ್ರಭೆಯು ವಿಶ್ವರೂಪದಲ್ಲಿದ್ದ ಪರಮಪುರುಷನ (ಕೃಷ್ಣನ) ತೇಜಸ್ಸನ್ನು ಹೋಲಬಹುದಿತ್ತು

(ಭಗವದ್ಗೀತೆ, 11ನೇ ಅಧ್ಯಾಯ, ವಿಶ್ವರೂಪದರ್ಶನ, ಶ್ಲೋಕ 12). ಇದು ಧೃತರಾಷ್ಟ್ರನಿಗೆ ಸಂಜಯ ನೀಡಿದ ವಿವರಣೆ.

ಎರಡನೆಯದು–

ಕಾಲೋಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ

ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ

ಋತೇಪಿ ತ್ವಾ ನ ಭವಿಷ್ಯಂತಿ ಸರ್ವೇ

ಯೇವಸ್ಥಿತಾಃ ಪ್ರತ್ಯನೀಕೇಷು ಯೋಧಾಃ

ನಾನು ಕಾಲನು, ಎಲ್ಲಾ ಲೋಕಗಳ ನಾಶಕಾರಿಯು. ಎಲ್ಲ ಜನರನ್ನೂ ನಾಶ ಮಾಡಲು ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು (ಪಾಂಡವರನ್ನು) ಬಿಟ್ಟು ಎರಡು ಪಕ್ಷಗಳ ಎಲ್ಲ ಯೋಧರೂ ಕೊಲ್ಲಲ್ಪಡುವರು.

(ಭಗವದ್ಗೀತೆ, 11ನೇ ಅಧ್ಯಾಯ, ವಿಶ್ವರೂಪದರ್ಶನ, ಶ್ಲೋಕ 32)

ಇದು ವಿಶ್ವರೂಪ ತಳೆದ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಮಾತು.

ಪರಮಾಣು ವಿದಳನ (ಅಟಾಮಿಕ್ ಫಿಷನ್), ಇನ್ನೂ ಸರಿಯಾಗಿ ಹೇಳಬೇಕೆಂದರೆ ಬೈಜಿಕ ವಿದಳನ (ನ್ಯೂಕ್ಲಿಯರ್ ಫಿಷನ್) ಪ್ರತಿಕ್ರಿಯೆಯನ್ನು ಆಧರಿಸಿದ ಆ ವಿಶೇಷ ಸಾಧನದ ಪರೀಕ್ಷಾ ಸ್ಫೋಟದ ಯಶಸ್ಸು, ಸುಮಾರು ಮೂರು ವರ್ಷಗಳ ಕಾಲ ಅಮೆರಿಕ ಹಾಗೂ ಯುರೋಪಿನ ಅನೇಕ ಸಮರ್ಥ ವಿಜ್ಞಾನಿಗಳು, ಎಂಜಿನಿಯರ್‌ಗಳು, ತಂತ್ರಜ್ಞರು ಹಾಗೂ ಗಣಿತಶಾಸ್ತ್ರಜ್ಞರು ‘ಮ್ಯಾನ್‌ಹಾಟನ್ ಪ್ರಾಜೆಕ್ಟ್’ ಎಂಬ ಹೆಸರಿನ ಅತ್ಯಂತ ಗೋಪ್ಯವಾದ ಯೋಜನೆಯ ಅಂಗವಾಗಿ ಪಟ್ಟ ಶ್ರಮದ ಫಲವಾಗಿತ್ತು. 

ಈ ಜಗತ್ತಿನ ವಸ್ತುಗಳೆಲ್ಲವೂ ಪರಮಾಣುಗಳಿಂದ ಆಗಲ್ಪಟ್ಟಿವೆ ಎಂಬುದು ಇಂದು ಸರ್ವವಿಧಿತ. 1938ರಲ್ಲಿ ಆಟೊ ಹಾನ್ ಮತ್ತು ಫ್ರಿಟ್ಜ್ ಸ್ಟ್ರಾಸ್‌ಮನ್ ಎಂಬ ಜರ್ಮನಿಯ ಇಬ್ಬರು ವಿಜ್ಞಾನಿಗಳು ಯುರೇನಿಯಂನ ಒಂದು ಬಗೆಯ ಪರಮಾಣುವಿನ ಬೀಜವನ್ನು (ನ್ಯೂಕ್ಲಿಯಸ್) ನ್ಯೂಟಾನ್ ಎಂಬ ಕಣದಿಂದ ‘ಹೊಡೆದಾಗ’ ಅದು ಎರಡು ಹೋಳಾಯಿತು ಎಂಬುದು ಕೆಲಕಾಲದ ಸಂಶೋಧನೆಯ ನಂತರ ತಿಳಿಯಿತು. ಯುರೇನಿಯಂನ ಆ ‘ವಿದಳನ’ ಪ್ರತಿಕ್ರಿಯೆಯಿಂದಾಗಿ (ಫಿಷನ್ ರಿಯಾಕ್ಷನ್) ಮತ್ತಷ್ಟು ನ್ಯೂಟ್ರಾನುಗಳು ಹಾಗೂ ಅದಕ್ಕಿಂತ ಮುಖ್ಯವಾಗಿ ಶಕ್ತಿ ಬಿಡುಗಡೆಯಾಗುತ್ತದೆಂದು ತಿಳಿಯಿತು.

ಇಂತಹ ವಿದಳನ ಪ್ರತಿಕ್ರಿಯೆಯನ್ನು ಕೋಟ್ಯಂತರ ಯುರೇನಿಯಂ (ಅಥವಾ ಪ್ಲುಟೋನಿಯಂ) ಪರಮಾಣುಗಳನ್ನು ಉಳ್ಳ ವಸ್ತುವೊಂದರಲ್ಲಿ ‘ಸರಪಣಿ ಪ್ರಕ್ರಿಯೆ’ಯೊಂದರ ಮೂಲಕ ಅನಿಯಂತ್ರಿತವಾಗಿ ಉಂಟು ಮಾಡಲು ಸಾಧ್ಯವೇ?  

ಒಂದು ವೇಳೆ ಆದಲ್ಲಿ, ಆಗ ಬಾಂಬೊಂದರಂತೆ ಅಪಾರವಾದ ವಿನಾಶಕಾರಿ ಶಕ್ತಿಯನ್ನು ಕ್ಷಣಾರ್ಧದಲ್ಲಿ ಬಿಡುಗಡೆ ಮಾಡಲು ಸಾಧ್ಯ ಎಂಬುದು ಹಿಟ್ಲರ್‌ನ ನಾಜಿ ಜರ್ಮನಿಯಿಂದ ಹಾಗೂ ಅದು ಆಕ್ರಮಿಸಿಕೊಂಡ ದೇಶಗಳಿಂದ ಪಲಾಯನ ಮಾಡಿದ್ದ ವಿಜ್ಞಾನಿಗಳಿಗೆ ಅರಿವಾಯಿತು. ಈ ತಂತ್ರಜ್ಞಾನವೇನಾದರೂ ಹಿಟ್ಲರ್‌ಗೆ ಮೊದಲಿಗೇ ಲಭ್ಯವಾದಲ್ಲಿ ಆಗ ಜಗತ್ತಿಗೆ ಉಂಟಾಗಬಹುದಾದ ಅಪಾಯವನ್ನು ಮನಗಂಡ ಅವರು, ವಿಶ್ವವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ ಅವರನ್ನು ಸಂಪರ್ಕಿಸಿದರು. 

ಅವರ ಕೋರಿಕೆಯ ಮೇರೆಗೆ ಐನ್‌ಸ್ಟೀನ್‌ ಅವರು ಆ ಬಗ್ಗೆ ಎಚ್ಚರಿಸಿ ಅಮೆರಿಕದ ಅಧ್ಯಕ್ಷ ಫ್ರ್ಯಾಂಕ್ಲಿನ್ ರೂಸ್‌ವೆಲ್ಟ್ ಅವರಿಗೆ ಪತ್ರ ಬರೆದದ್ದು, ಅದರಿಂದ ಪ್ರಭಾವಿತರಾದ ರೂಸ್‌ವೆಲ್ಟ್ ಅವರು ಅಣುಬಾಂಬನ್ನು ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದ್ದು ಇಂದು ಚರಿತ್ರೆ. 


ಹಿರೋಷಿಮಾದ ಮೇಲೆ ಬಾಂಬ್‌ ದಾಳಿ ನಡೆಸಿದ ಅಮೆರಿಕದ ವಾಯುಪಡೆ ತಂಡ. ‘ಎನೊಲಾ ಗೇ’ ಹೆಸರಿನ ಈ ವಿಮಾನದಲ್ಲಿ ಒಂಬತ್ತು ಜನರ ತಂಡ ಕಾರ್ಯಾಚರಣೆಗೆ ತೆರಳಿತ್ತು. ಕರ್ನಲ್‌ ಪಾಲ್‌ ಟಿಬೆಟ್ಸ್‌ ಜ್ಯೂನಿಯರ್‌ (ನಿಂತವರಲ್ಲಿ ಮಧ್ಯದಲ್ಲಿರುವವರು) ಕಾರ್ಯಾಚರಣೆಯ ನೇತೃತ್ವವಹಿಸಿದ್ದರು

ಮುಂದೆ ಮ್ಯಾನ್‌ಹಾಟನ್ ಯೋಜನೆ ಎಂದು ಖ್ಯಾತಿಯನ್ನು ಪಡೆದ ಆ ಯೋಜನೆಯು ಯುರೇನಿಯಂ ಹಾಗೂ ಪ್ಲುಟೋನಿಯಂ ಬಾಂಬುಗಳನ್ನು ಸುಮಾರು ಮೂರು ವರ್ಷಗಳಲ್ಲಿ ತಯಾರಿಸುವಲ್ಲಿ ಯಶಸ್ವಿಯಾಯಿತು. ಆ ನಡುವೆ ನಡೆದ ಕುತೂಹಲಕಾರಿ ವೈಜ್ಞಾನಿಕ ಬೆಳವಣಿಗೆಗಳನ್ನು ಅವಲೋಕಿಸಿದಾಗ ಮೈಜುಮ್ಮೆನ್ನುತ್ತದಾದರೂ ಅದೇ ಬೇರೊಂದು ಪ್ರತ್ಯೇಕವಾದ ಲೇಖನದ ವಸ್ತುವಾಗಬಲ್ಲದು.

ಹೀಗೆ 1945ರ ಜುಲೈ 16ರಂದು ಪರಮಾಣು ಬಾಂಬೊಂದನ್ನು ಯಶಸ್ವಿಯಾಗಿ ಪರೀಕ್ಷಿಸಲಾದ ವಿಷಯ, ಅಮೆರಿಕದ ಅಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ ಅವರಿಗೆ ಶೀಘ್ರವಾಗಿ ತಲುಪಿತು. ಅದಾದ ಮೂರೇ ವಾರಗಳ ನಂತರ ಆಗಸ್ಟ್ 6ರಂದು ಅಮೆರಿಕದ ಬಿ-29 ಎಂಬ ಬಾಂಬರ್ ವಿಮಾನವೊಂದು ಶಾಂತಸಾಗರದಲ್ಲಿನ (ಪೆಸಿಫಿಕ್ ಓಷನ್) ಟಿನಿಯನ್ ದ್ವೀಪದಲ್ಲಿ ಯಾನಕ್ಕೆ ಸಜ್ಜಾಯಿತು. ‘ಎನೊಲಾ ಗೇ’ ಎಂಬ ಹೆಸರಿನ ಆ ದೊಡ್ಡ ವಿಮಾನದ ಉದರದಲ್ಲಿ 4,400 ಕೆ.ಜಿ ತೂಕದ ಬಾಂಬೊಂದನ್ನು ಅಳವಡಿಸಲಾಗಿತ್ತು.

‘ಲಿಟ್ಲ್ ಬಾಯ್’ ಎಂಬ ಹೆಸರಿನ ಆ ಬಾಂಬು ಪರಮಾಣು (ಬೈಜಿಕ) ವಿದಳನ ಪ್ರತಿಕ್ರಿಯೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿತ್ತು. ಜಗತ್ತಿನಲ್ಲಿ ಬಳಸಲಾದ ಮೊದಲ ಪರಮಾಣು ಬಾಂಬು ಎಂಬ (ಕು?)ಖ್ಯಾತಿಗೆ ಇದು ಮುಂದೆ ಪಾತ್ರವಾಯಿತು.

ಮೇಲೇರಿದ ಸುಮಾರು ಆರು ಗಂಟೆಗಳ ಪ್ರಯಾಣದ ಬಳಿಕ ಎನೊಲಾ ಗೇ ವಿಮಾನ ಜಪಾನಿನ ಹಿರೋಷಿಮಾ ನಗರದ ಮೇಲೆ ಹಾರುತ್ತಿದ್ದಾಗ ಅದರಿಂದ ಕಳಚಿಕೊಂಡು ಬಿದ್ದ ‘ಲಿಟ್ಲ್ ಬಾಯ್’ ನಂತರ ಗಾಳಿಯಲ್ಲೇ ಆಸ್ಫೋಟಿಸಿತು. ಇದರಿಂದಾಗಿ ಕೆಲ ಸಮಯದಲ್ಲೇ 66 ಸಾವಿರ ಜನ ಸತ್ತರೆ, ಇನ್ನೂ ಅನೇಕರು ಆನಂತರ ಸತ್ತರು. ಹಿರೋಷಿಮಾ ನೆಲಸಮವಾಯಿತು. ಓಪನ್ ಹೈಮರ್‌ ಅವರ ನೆನಪಿಗೆ ಬಂದ ಭಗವದ್ಗೀತೆಯ ಶ್ಲೋಕಗಳು ಈ ಸನ್ನಿವೇಶದಲ್ಲಿ ಬಹಳ ಸೂಕ್ತವೆನಿಸಿದವು. ಆದರೆ, ಪರಮಾಣು ಬಾಂಬ್‌ನ ವಿನಾಶಕಾರಿ ಸಾಮರ್ಥ್ಯವನ್ನು ಈ ಜಗತ್ತಿಗೆ ಅತ್ಯಂತ ಸಮರ್ಥವಾಗಿ ಪರಿಚಯಿಸುವ ಕಾರ್ಯ ಇಷ್ಟಕ್ಕೇ ಮುಗಿಯಲಿಲ್ಲ. ಹಿರೋಷಿಮಾ ಬಹುಮಟ್ಟಿಗೆ ನಾಶವಾದ ನಂತರವೂ ಜಪಾನ್ ಶರಣಾಗತವಾಗಲಿಲ್ಲ. 

ಇದಕ್ಕೆ ಪ್ರತಿಯಾಗಿ ಮೂರು ದಿನಗಳ ಬಳಿಕ ಅಮೆರಿಕದ ಮತ್ತೊಂದು ಬಿ-29 ವಿಮಾನ ‘ಬಾಕ್ಸ್ ಕಾರ್’ ಜಪಾನಿನ ನಾಗಾಸಾಕಿ ನಗರದ ಮೇಲೆ ‘ಫ್ಯಾಟ್ ಮ್ಯಾನ್’ ಎಂಬ ಇನ್ನೊಂದು ಪರಮಾಣು ಬಾಂಬನ್ನು ಎತ್ತಿಹಾಕಿತು. ನ್ಯೂ ಮೆಕ್ಸಿಕೊದಲ್ಲಿ ಪರೀಕ್ಷಿಸಲಾದ ಸಾಧನದ ಪ್ರತಿರೂಪವಾದ, 4,670 ಕೆ.ಜಿ ತೂಕದ ಆ ಬಾಂಬಿನಿಂದಾಗಿ 35 ಸಾವಿರದಿಂದ 40 ಸಾವಿರ ಜನ ತಕ್ಷಣವೇ ಹತರಾದರೆ, ಅದರಿಂದ ಉಂಟಾದ ಪರಿಣಾಮದಿಂದ ಇನ್ನೂ ಸಾವಿರಾರು ಜನ ನಂತರ ಹತರಾದರು. ಜಪಾನ್ ಶರಣಾಯಿತು. ಹೀಗೆ, ಪರಮಾಣು ಭೂತದ ಹಠಾತ್ ಬಿಡುಗಡೆಯಿಂದ ಜಗತ್ತು 1945ರಲ್ಲಿ ತತ್ತರಿಸಿದರೂ ನಂತರ ಅದರ ಜೊತೆ ಬದುಕುವುದನ್ನು ಕಲಿಯುವುದು ಅದಕ್ಕೆ ಅನಿವಾರ್ಯವಾಯಿತು. ಈ ಸರಣಿ ಘಟನೆಗಳು ನಡೆದು ಈಗ 75
ವರ್ಷಗಳಾದವು. ಮಾನವ ಇತಿಹಾಸದಲ್ಲಿ ಮರೆಯಲಾಗದ ಮೈಲಿಗಲ್ಲುಗಳಾಗಿವೆ.

ಕಾಲಚಕ್ರ ನಿಂತಾಗ..

ಅಮೆರಿಕದ ಯುದ್ಧ ವಿಮಾನ ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ಬಾಂಬ್‌ ದಾಳಿ ನಡೆಸಿದ ಸುದ್ದಿ ತಿಳಿದ ತಕ್ಷಣ ಜಪಾನಿನ ಪತ್ರಿಕೆಯೊಂದು ಟೋಕಿಯೊದಿಂದ ಛಾಯಾಗ್ರಾಹಕರೊಬ್ಬರನ್ನು ಚಿತ್ರ ತೆಗೆಯಲು ಆ ಎರಡು ನಗರಗಳಿಗೆ ಕಳುಹಿಸಿತ್ತು.

ಆ ನಗರಗಳಿಗೆ ತೆರಳಿದ್ದು, ಐಚಿ ಮತ್ಸುಮೊಟೊ ಎಂಬ ಛಾಯಾಗ್ರಾಹಕಿ. ಐಚಿ ಅವರು ಅದಕ್ಕಿಂತ ಮುಂಚೆ ಬೇರೆ ಯುದ್ಧದ ಸನ್ನಿವೇಶಗಳ ಚಿತ್ರಗಳನ್ನೂ ಸೆರೆ ಹಿಡಿದಿದ್ದರು. ‘ಪರಮಾಣು ಬಾಂಬ್‌ ಸ್ಫೋಟಿಸಿ ಆಗಿದ್ದ ಅನಾಹುತದಂತಹ ಬೇರೆ ದುರಂತಗಳನ್ನು ನನ್ನ ಜೀವಮಾನದಲ್ಲಿ ಬೇರೆ ಕಂಡಿರಲಿಲ್ಲ’ ಎಂದು ಅವರು ಹೇಳಿದ್ದರು.

ಹಿರೋಷಿಮಾದ ಬಳಿಯ ರೆಡ್‌ ಕ್ರಾಸ್‌ ಆಸ್ಪತ್ರೆಯಲ್ಲಿ ಐಚಿ ಅವರು ಸಂತ್ರಸ್ತರನ್ನು ಭೇಟಿ ಮಾಡಿದ್ದರು. ದೇಹದ ಮೇಲೆಲ್ಲ ಕೆಂಪು ಕಲೆಗಳಿಂದ ಒದ್ದಾಡುವುದನ್ನು ಕಂಡು ಕಣ್ಣೀರು ಇಟ್ಟಿದ್ದರು. ನಾಗಾಸಾಕಿಯಲ್ಲಿ ಅಗಲಿದ ಪ್ರೀತಿ ಪಾತ್ರರ ದೇಹಗಳನ್ನು ಅಗ್ನಿಜ್ಞಾಲೆಗೆ ಅರ್ಪಿಸುವ ಹೃದಯವಿದ್ರಾವಕ ಸನ್ನಿವೇಶಕ್ಕೂ ಸಾಕ್ಷಿಯಾಗಿದ್ದರು. 

ಘಟನೆ ನಡೆದಾಗ ಅವರಿಗೆ ಕೇವಲ 30ರ ಹರೆಯ. ತಮ್ಮ 89ನೇ ವಯಸ್ಸಿನಲ್ಲಿ ಅವರು ನಿಧನರಾದರು. ಅದಕ್ಕಿಂತ ಮುಂಚೆ ಬಾಂಬ್‌ ಸ್ಫೋಟದ ಘಟನಾವಳಿ ಕುರಿತು ಪತ್ರಿಕೆಗಳಲ್ಲಿ ಮೆಲುಕು ಹಾಕಿದ್ದರು. ಐಚಿ ಅವರಲ್ಲದೆ ಇನ್ನೂ ಹಲವು ಛಾಯಾಗ್ರಾಹಕರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಅವರು ತೆಗೆದ ಚಿತ್ರಗಳ ಮೇಲೆ ಅಮೆರಿಕ ನಿಷೇಧ ವಿಧಿಸಿತ್ತು.

ಟೆಕ್ಸಾಸ್‌ ವಿಶ್ವವಿದ್ಯಾಲಯ ಬಾಂಬ್‌ ಸ್ಫೋಟದ 75ನೇ ವರ್ಷದ ನೆನಪಿಗಾಗಿ ಹೊರತಂದಿರುವ ಸ್ಮರಣ ಸಂಚಿಕೆಯಲ್ಲಿ ಜಪಾನಿ ಛಾಯಾಗ್ರಾಹಕರ ಹಲವು ಚಿತ್ರಗಳಿವೆ. ಅದರಲ್ಲಿ ಐಚಿ ಅವರ ಬಾಂಬ್‌ ಸ್ಫೋಟ ಸಂಭವಿಸಿದ ತಕ್ಷಣ ಹಿರೋಷಿಮಾ ವಾಲ್‌ ಕ್ಲಾಕ್‌ ನಿಂತುಹೋದ ಚಿತ್ರವೂ ಸೇರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು