ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣದ ‘ಬುಕ್‌ಮಾರ್ಕ್’: ‘ಸ್ಟಡಿ ಸರ್ಕಲ್‌’ನ ಸ್ಥಾಪಕ ವೇದೇಶ್ವರರ ನೆನಪು

Last Updated 19 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಗೋಕರ್ಣದ ‘ಸ್ಟಡಿ ಸರ್ಕಲ್’ಉತ್ತರ ಕನ್ನಡ ಜಿಲ್ಲೆಯಲ್ಲಿಯೇಅತ್ಯಂತ ಹಳೆಯ ಗ್ರಂಥಾಲಯ. ಅದರ ಸಂಸ್ಥಾಪಕ, ರಾಜ್ಯಪ್ರಶಸ್ತಿ ಪುರಸ್ಕೃತ ಗ್ರಂಥಪಾಲಕ, ಗಣಪತಿ ಮಂಜುನಾಥ ವೇದೇಶ್ವರ (85) ಆ.11ರಂದು ನಿಧನರಾದರು.

ಗೋಕರ್ಣದಂಥ ಊರಿನಲ್ಲಿ 1939ರಲ್ಲೇ ‘ಬಾಲಸಂಘ’ ಎಂಬ ಹೆಸರಿನ ಗ್ರಂಥಾಲಯ ಆರಂಭಿಸಿ ಊರಿನ ಜನರಿಗೆ ಓದಿನ ರುಚಿ ಹಚ್ಚಿದ ಹೆಗ್ಗಳಿಕೆ ಗಣಪತಿ ಮಂಜುನಾಥ ವೇದೇಶ್ವರ ಅವರದ್ದು. ಐದುಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ಜತನಮಾಡಿ ಅಪರೂಪ‍ದ ಸಾಹಿತ್ಯದೂಟವನ್ನು ಉಣಬಡಿಸಿದ್ದರು.ಅತಿ ಪುರಾತನ, ವಿರಳವಾದ ಪುಸ್ತಕಗಳು, ಗ್ರಂಥ, ವೇದ ಪುರಾಣಗಳ ಸಾಹಿತ್ಯಗಳು, ಐತಿಹಾಸಿಕ ಪುಸ್ತಕಗಳು ಅವರ ಸಂಗ್ರಹದಲ್ಲಿದ್ದವು. ತಮ್ಮ 85ನೇ ವಯಸ್ಸಿನಲ್ಲಿಯೂ ದಿನಕ್ಕೆ 12 ತಾಸುಗಳನ್ನು ಗ್ರಂಥಾಲಯದಲ್ಲಿ ಕಳೆಯುತ್ತಿದ್ದರು.

‘ಬಾಲಸಂಘ’ವನ್ನುಸಾಹಿತಿ ಗೌರೀಶ ಕಾಯ್ಕಿಣಿ ಅವರು, ‘ಸ್ಟಡಿ ಸರ್ಕಲ್’ ಎಂದು ಹೆಸರಿಸಿದರು. ಕನ್ನಡದಲ್ಲಿ ‘ವ್ಯಾಸಂಗ ಗೋಷ್ಠಿ’ಎಂದು ಕರೆದರು. ಬಳಿಕ ಅದೇ ಹೆಸರು ಚಾಲ್ತಿಗೆ ಬಂತು. ಅವರು ಯಾವಾಗಲೂ ಪುಸ್ತಕದ ಕೋಣೆಯಲ್ಲೇ ಇರುತ್ತಿದ್ದ ಕಾರಣ ಬಹಳ ಮಂದಿ ‘ಕೋಣೆ ಅಣ್ಣ’ ಎಂದೇ ಕರೆಯುತ್ತಿದ್ದರು. ‘ತಮ್ಮ ತಂದೆ ಗೌರೀಶ ಕಾಯ್ಕಿಣಿ ಅವರ ಜ್ಞಾನಾರ್ಜನೆಯಲ್ಲಿ ಈ ಪುಸ್ತಕಗಳ ಸಾಂಗತ್ಯದ ದೊಡ್ಡ ಪಾತ್ರವಿದೆ’ ಎನ್ನುವ ಸಾಹಿತಿ ಜಯಂತ ಕಾಯ್ಕಿಣಿ, ಇತ್ತೀಚೆಗೆ ನಿಧನರಾದ ವೇದೇಶ್ವರರ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ.

ಗೋಕರ್ಣದ ಸ್ಟಡಿ ಸರ್ಕಲ್‌ನ ಗಣಪತಿ ಮಂಜುನಾಥ ವೇದೇಶ್ವರ ಬಹಳ ಶಾಂತಚಿತ್ತರು, ಮೌನಪ್ರಿಯರು. ಪುಸ್ತಕಗಳ ಮಧ್ಯೆ ಇಡುವ ಬುಕ್‌ಮಾರ್ಕ್ ರೀತಿಯಲ್ಲೇ! ಅವರು ನೋಡಲುಬಹಳ ತೆಳ್ಳಗಿದ್ದರು. ಆದರೆ, ಈ ಭಾಗದಲ್ಲಿ ವೈಚಾರಿಕ ಕ್ಷೇತ್ರದಲ್ಲಿ ಅವರು ಬಹಳ ಕ್ರಿಯಾಶೀಲರಾಗಿದ್ದರು.

ಸಂಸ್ಕೃತಿ, ಸಾಹಿತ್ಯದ ಮೂಲಕ ಗೋಕರ್ಣಕ್ಕೆ ಪ್ರತ್ಯೇಕವಾದ ಪರಿಚಯ ಕೊಟ್ಟವರು ಅನೇಕಮಂದಿ. ಪನ್ನಿ ಕೃಷ್ಣ ಭಟ್, ಬರವಣಿ ಮಾಸ್ತರು, ಕೈಕೇರಿ, ನಮ್ಮ ತಂದೆಯವರು... ಹೀಗೆ ಹಲವರಿದ್ದಾರೆ. ಅವರೆಲ್ಲರೂ ವೈಚಾರಿಕತೆಯೇ ಧರ್ಮ ಎಂದು ತಿಳಿದಿದ್ದರು. ವೇದೇಶ್ವರರು ಹಾಗೂ ನಮ್ಮ ತಂದೆಯವರ ನಡುವೆದೊಡ್ಡ ಜುಗಲ್‌ಬಂದಿ ಇತ್ತು. ತಂದೆಯವರಿಗೆ ಬೇಕಾದ ಪುಸ್ತಕಗಳನ್ನೆಲ್ಲ ಪೂರೈಸುತ್ತಿದ್ದದು ಅವರೇ.

ವಿದೇಶಿ ನಿಯತಕಾಲಿಕೆಗಳನ್ನು ಆ ಕಾಲಕ್ಕೇಎಲ್ಲಿಂದ ತರುತ್ತಿದ್ದರೋ ಗೊತ್ತಿಲ್ಲ! ಅವು ಅವರ ಲೈಬ್ರರಿಯಲ್ಲಿ ಬಹಳ ಇವೆ. ಮಕ್ಕಳ ಕೈಗೆ ಸಿಗದಂತೆ ಬಹಳ ಜೋಪಾನ ಮಾಡುತ್ತಿದ್ದರು. ನಾವು ಶಾಲೆಯಲ್ಲಿ ಓದುತ್ತಿದ್ದಾಗ, ಗ್ರಂಥಾಲಯಕ್ಕೆ ಹೋದರೆ ಅವುಗಳನ್ನು ನಮಗೆ ಕೊಡ್ತಿರಲಿಲ್ಲ.ಹರಿದು ಹಾಳುಮಾಡಿದರೆ ಎಂಬ ಭಯ. ಅದಕ್ಕೆ ‘ದೂರದಿಂದಲೇ ನೋಡಿ’ ಎನ್ನುತ್ತಿದ್ದರು.ಹಳೆಯ ಪುಸ್ತಕಗಳನ್ನು ಹೊಲಿದು ಹೊಸದಾಗಿ ಬೈಂಡಿಂಗ್ ಮಾಡುತ್ತಿದ್ದರು. ಮಿಶ್ರ ರೂಪಕದಂತಿರುವ ಗೋಕರ್ಣಕ್ಕೆ ವೇದೇಶ್ವರರು ಆತ್ಮ ಸಾಕ್ಷಿಯಂತಿದ್ದರು.

ರಂಗಾಸಕ್ತರು...

ವೇದೇಶ್ವರ ಅವರಿಗೆ ರಂಗಾಸಕ್ತಿಯೂ ಬಹಳವಿತ್ತು. ಯುವಕರಿಂದ ನೂರಾರು ನಾಟಕಗಳನ್ನು ಆಡಿಸುತ್ತಿದ್ದರು. ಕೇವಲ ಸಂಸ್ಕೃತ ನಾಟಕಗಳಿಗೆ ಜೋತು ಬೀಳದೇ ಕನ್ನಡ, ಮರಾಠಿ ಹೀಗೆ ವಿವಿಧ ಭಾಷೆಗಳಲ್ಲಿ ಆಸಕ್ತಿ ತೋರುತ್ತಿದ್ದರು. ನನ್ನ ನೆನಪಿನ ಪ್ರಕಾರ ಅವರು ಆಡಿಸಿದ ಕೊನೆಯ ನಾಟಕ ‘ತಲೆದಂಡ’ ಇರಬೇಕು. ಅವರ ಮತ್ತೊಂದು ವಿಶೇಷವೆಂದರೆ, ಎಲ್ಲ ಪಾತ್ರಗಳಿಗೂ ಬೇಕಾದ ವೇಷಭೂಷಣ, ಉಪವನ, ಅರಮನೆ, ರಾಸ್ತಾ ಇತ್ಯಾದಿಪರದೆಗಳನ್ನೂ ತಾವೇ ಸಿದ್ಧಪಡಿಸುತ್ತಿದ್ದರು.

ರಾಜ್ಯದ ಎಲ್ಲ ಪತ್ರಿಕೆಗಳೂ ಅವರ ‘ಸ್ಟಡಿ ಸರ್ಕಲ್‌’ಗೆ ಬರುತ್ತಿದ್ದವು.ಎಲ್ಲ ಲೇಖಕರ ಜೊತೆಗೂ ಪತ್ರ ಸಂಬಂಧವಿತ್ತು.ವರ್ಷಕ್ಕೊಮ್ಮೆ ಹುಬ್ಬಳ್ಳಿ, ಬೆಂಗಳೂರು ಮುಂತಾದ ಕಡೆಗಳಲ್ಲಿಲೇಖಕರ ಮನೆಮನೆಗೆ ಹೋಗಿ ಅವರಿಗೆ ಬೇಡವಾಗಿದ್ದ ಪುಸ್ತಕಗಳನ್ನು ಸಂಗ್ರಹಿಸಿಕೊಂಡು ಬರುತ್ತಿದ್ದರು. ಇನ್ನು ಮುಂದೆ ಆ ಪುಸ್ತಕಗಳ ಕತೆಯೇನು ಎಂಬುದುಯೋಚನೆಯಸಂಗತಿಯಾಗಿದೆ.

ಈಗ ಪುಸ್ತಕ ಓದುವುದರಲ್ಲಿ ಜನರಿಗೆಆಸಕ್ತಿಯೇಹೊರಟು ಹೋಗಿದೆ.ಈಬಗ್ಗೆ ವೇದೇಶ್ವರರಿಗೂ ಬೇಸರವಿತ್ತು. ಒಮ್ಮೆ ಮಾತನಾಡುತ್ತ ಅವರು, ‘ನಾನು ಒಂದು ಕಾಲದಲ್ಲಿ ಪುಸ್ತಕಗಳನ್ನು ಮುಟ್ಟಬೇಡಿ ಎಂದು ಹೇಳುತ್ತಿದ್ದೆ. ಈಗ ಬರ‍್ರೋ ಮಾರಾಯ್ರ, ತಗೊಳ್ರೋ ಎಂದು ಕೂಗಿ ಕರೆಯುವ ಪರಿಸ್ಥಿತಿ ಬಂದಿದೆ’ಎಂದು ವಿಷಾದಿಸಿದ್ದರು.

‘ಓದಿದರೆ ಪುಸ್ತಕ ಚಲನಶೀಲ’

ಪುಸ್ತಕ ಸ್ಥಾವರ. ಆದರೆ, ಅದರ ಓದು ಜಂಗಮ. ನಾವು ಓದಿದಾಗ ಆ ಪುಸ್ತಕ ಚಲನಶೀಲವಾಗುತ್ತದೆ. ನಾವು ಈಗ ಸ್ಥಾವರ ಮಾಡುವುದರಲ್ಲೇ ಹೆಚ್ಚು ಆಸಕ್ತರಾಗಿದ್ದೇವೆ. ಇದರಿಂದ ಯಾವುದೇ ವಿಚಾರವಾದರೂ ಜನರಿಂದ ದೂರವಾಗುತ್ತದೆ. ಹಾಗಾಗಿ ಯಾರಾದರೂ ಗೋಕರ್ಣಕ್ಕೆ ಹೋದಾಗ ಕೇವಲ ಸಮುದ್ರ ನೋಡುವುದಲ್ಲ, ಮಕ್ಕಳನ್ನು ಇಂಥ ಕೇಂದ್ರಗಳಿಗೆ ಪ್ರವಾಸ ಕರೆದುಕೊಂಡು ಬರಬೇಕು.

ಅಗಾಧ ಜ್ಞಾನ ಭಂಡಾರ ‘ಸ್ಟಡಿ ಸರ್ಕಲ್‌’

ಪುರಾತನ ಶೈಲಿಯ ದೇವನಾಗರಿ ಲಿಪಿಯ ಕೃತಿಗಳು, ಸಂಸ್ಕೃತಸಾಹಿತ್ಯ, ತತ್ವಜ್ಞಾನ, ಪುರಾಣ, ವೇದಗಳಿಗೆ ಸಂಬಂಧಪಟ್ಟ ಪುಸ್ತಕಗಳು, 600 ವರ್ಷಗಳ ಹಳೆಯ 100ಕ್ಕೂ ಹೆಚ್ಚು ತಾಳೆಗರಿ ಕೃತಿಗಳು, ಬಾಂಬೆ ಸರ್ಕಾರ ಪ್ರಕಟಿಸಿದ175 ವರ್ಷಗಳಹಿಂದಿನ ಅಧ್ಯಯನ ಪಠ್ಯ ಪುಸ್ತಕಗಳು, ಹಳಗನ್ನಡ, ಹೊಸಗನ್ನಡದ ಅನೇಕ ಮಹತ್ವದ ಪುಸ್ತಕಗಳಿವೆ. ಮರಾಠಿ, ಹಿಂದಿ, ಇಂಗ್ಲಿಷ್, ಫ್ರೆಂಚ್, ಜರ್ಮನ್ ಸೇರಿದಂತೆ 38ಕ್ಕೂ ಹೆಚ್ಚು ಭಾಷೆಗಳ ಸಾಹಿತ್ಯದ ಸಂಗ್ರಹಿವಿದೆ. ಮದ್ರಾಸ್ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ವಿ.ರಾಘವನ್ ಅವರ ಎಲ್ಲ ಅಮೂಲ್ಯ ಸಾಹಿತ್ಯ ಕೃತಿಗಳು ಅವರ ನಿಧನದ ನಂತರ ಸ್ಟಡಿ ಸರ್ಕಲ್‌ಗೆದಾನದ ರೂಪದಲ್ಲಿ ಲಭಿಸಿವೆ.

ಮೈಸೂರು ಮಹಾರಾಜರು ಪ್ರಕಟಿಸಿದ ಋಗ್ವೇದ ಸಾಹಿಣ ಭಾಷ್ಯದ ರಾಯಲ್ ಅಳತೆಯ 36 ಭಾಗಗಳು, ಸಂಹಿತಾ, ಬ್ರಾಹ್ಮಣ, ಅರಣ್ಯಕ, ನಿರುಕ್ತ, ಚಡಂಗ ಸಹಿತವಾಗಿ ಕನ್ನಡದಲ್ಲಿ ಮುದ್ರಿತವಾದ ಪುಸ್ತಕಗಳು ಇವೆ. ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ ಈ ಗ್ರಂಥಾಲಯಕ್ಕೆ ಭೇಟಿಯಿತ್ತಾಗತಮ್ಮ ಸಹಿಯುಳ್ಳ ಪುಸ್ತಕವನ್ನು ನೀಡಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಎಸ್.ರಾಧಾಕೃಷ್ಣನ್, ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿ.ವಿ. ರಾಮನ್, ರಾಷ್ಟ್ರಕವಿ ಕುವೆಂಪು, ಶಿವರಾಮ ಕಾರಂತ ಮುಂತಾದವರು ಸಹಿ ಮಾಡಿದ ಪುಸ್ತಕಗಳು ಈ ಗ್ರಂಥಾಲಯದ ಸಂಗ್ರಹದಲ್ಲಿ ಇವೆ.

ಹಲವು ದೇಶಗಳಸ್ಟಾಂಪ್ ಮತ್ತು ನಾಣ್ಯಗಳನ್ನೂ ಇಲ್ಲಿ ಸಂಗ್ರಹಿಸಿಡಲಾಗಿದೆ.1984ರಲ್ಲಿ ‘ಉತ್ತಮ ಗ್ರಂಥಾಲಯ’ ರಾಜ್ಯ ಪ್ರಶಸ್ತಿ, ವೇದೇಶ್ವರ ಅವರಿಗೆ2003ರಲ್ಲಿ ‘ರಾಜ್ಯ ಪ್ರಶಸ್ತಿ’, ‘ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಮುಂತಾದ ಹಲವು ಗೌರವಗಳು ಪ್ರದಾನವಾಗಿವೆ.

(ನಿರೂಪಣೆ: ಸದಾಶಿವ ಎಂ.ಎಸ್.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT