ಗುರುವಾರ , ಮಾರ್ಚ್ 30, 2023
24 °C
ಗಾಲಿಗಳುರುಳಲಿ, ಸೈಕಲ್ ಸಾಗಲಿ…

ಟ್ರಿಣ್‌ ಟ್ರಿಣ್‌... ಆರೋಗ್ಯ ಹುಷಾರು

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

Prajavani

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್‌ನಲ್ಲಿ ಯಾನ ಮಾಡಿದ ಈ ವೀರನಾರಾಯಣ ದಾರಿಯುದ್ದಕ್ಕೂ ಸಾರುತ್ತಾ ಹೋದ ಆ ವೀರ ಸಂದೇಶವಾದರೂ ಏನು?

‘ನಿಸರ್ಗದ ಎದುರು ಮನುಷ್ಯ ತೀರಾ ಕ್ಷುದ್ರ ಜೀವಿ ಎಂದು ಅರಿವಾಗುವ ಕ್ಷಣ ಅದು..!’

- ಶ್ರೀನಗರದಿಂದ ಬನಿಹಾಲ್‌ಗೆ ಸಾಗುತ್ತಿರುವಾಗ ತಮಗಾದ ಆ ಅನುಭವ ಜೀವನದಲ್ಲಿ ಎಂದಿಗೂ ಮರೆಯಲಾಗದು ಎನ್ನುತ್ತಾರೆ ವೀರನಾರಾಯಣ. ‘ಎಡಕ್ಕೆ ಮುನ್ನೂರು ಮೀಟರ್ ಎತ್ತರದ ಗುಡ್ಡ; ಬಲಭಾಗಕ್ಕೆ ಮುನ್ನೂರು ಮೀಟರ್ ಆಳ. ಆ ಕಂದಕದಲ್ಲಿ ಹರಿಯುವ ನದಿ. ಜಾರಿದರೆ...? ಊಹಿಸಿಕೊಂಡರೂ ಎದೆ ಝಲ್ಲೆನಿಸುವ ಕ್ಷಣವದು. ಅದನ್ನೆಲ್ಲ ನೋಡಿದರೆ, ಇಷ್ಟೆಲ್ಲ ಅಹಂಕಾರದಿಂದ ಮೆರೆಯುವ ಮನುಷ್ಯ ಪ್ರಕೃತಿ ಎದುರು ಅಣು ಮಾತ್ರ’ ಎಂದು ಅವರು ಉದ್ಗರಿಸುತ್ತಾರೆ.

ಆ ಬೆಟ್ಟ-ಕಂದಕದ ದಾರಿಯಲ್ಲಿ ಸೈಕಲ್ ತುಳಿಯುತ್ತ ಸಾಗಿದವರು ವೀರನಾರಾಯಣ ಕುಲಕರ್ಣಿ. ಹಾಗೆ ಪೆಡಲ್ ಮೇಲೆ ಅವರು ಕಾಲಿಟ್ಟಿದ್ದು ಶ್ರೀನಗರದಲ್ಲಿ; ಪ್ರಯಾಣ ಮುಕ್ತಾಯಗೊಳಿಸಿದ್ದು ಕನ್ಯಾಕುಮಾರಿಯಲ್ಲಿ. ಭಾರತದ ಮೇಲ್ತುದಿಯಿಂದ ಕೆಳತುದಿಯವರೆಗೆ ಅವರು ಸೈಕಲ್ ತುಳಿಯುತ್ತಲೇ, ಜನಜೀವನವನ್ನು ಸೂಕ್ಷ್ಮವಾಗಿ ನೋಡುತ್ತ ಸಾಗಿದವರು. ಒಂದೆರಡಲ್ಲ- ಸತತ ನಲವತ್ತೊಂದು ದಿನಗಳವರೆಗೆ!

ಪ್ರಯಾಣದ ಗಮ್ಯ ತಾಣ ತಲುಪುವ ಖುಷಿಗಿಂತ ಆ ದಾರಿಯಲ್ಲಿ ಸಾಗುವ ಅನುಭವವೇ ಅನನ್ಯ. ಅದರಲ್ಲೂ ಆ ಯಾನಕ್ಕೊಂದು ನಿರ್ದಿಷ್ಟ ಉದ್ದೇಶ ಇದ್ದರೆ, ಅದಿನ್ನೂ ಸೊಗಸು. ಧಾರವಾಡ ಮೂಲದ ವೀರನಾರಾಯಣ ವೃತ್ತಿಯಲ್ಲಿ ಎಂಜಿನಿಯರ್. ಹತ್ತಾರು ವರ್ಷಗಳ ಕಾಲ ದೇಶ-ವಿದೇಶಗಳಲ್ಲಿ ಉದ್ಯೋಗ ಮಾಡಿ, ಸ್ವದೇಶಕ್ಕೆ ವಾಪಸಾದರು. ಸಿರಿಧಾನ್ಯ ಸೇವನೆ ಉತ್ತೇಜಿಸಲು ಹುಬ್ಬಳ್ಳಿಯಲ್ಲಿ ‘ಮಿಲೆಟ್ ಮಾಂಕ್’ ಎಂಬ ಅನೌಪಚಾರಿಕ ಕೂಟ ರಚಿಸಿ, ಹುಬ್ಬಳ್ಳಿಯಲ್ಲಿ ಕೆಲಕಾಲ ವಿಶಿಷ್ಟ ರೆಸ್ಟೊರೆಂಟ್ ಕೂಡ ನಡೆಸಿದರು.

2012ರಲ್ಲಿ ಸಿಂಗಾಪುರದಲ್ಲಿ ಇದ್ದಾಗ ನಾಲ್ವರು ಸ್ನೇಹಿತರು ಸೇರಿ, ‘ಇನ್ನೈದು ವರ್ಷಗಳಲ್ಲಿ ಏನಾದರೊಂದು ಸಾಧನೆ ಮಾಡಬೇಕು ಹಾಗೂ ಅದು ಜೀವನದುದ್ದಕ್ಕೂ ನೆನಪಿರಬೇಕು’ ಎಂದು ಹಾಳೆಯೊಂದರಲ್ಲಿ ಬರೆದು ಸಹಿ ಮಾಡಿದ್ದರಂತೆ. ಹತ್ತು ವರ್ಷಗಳ ಬಳಿಕ (2022ರಲ್ಲಿ) ಈ ಕಡತ ಮತ್ತೆ ಸಿಕ್ಕಾಗ, ಉಳಿದ ಮೂವರೂ ಅನಿವಾರ್ಯ ಕಾರಣಗಳಿಂದಾಗಿ ತಮಗೇನೂ ಆಗದು ಎಂದು ಕೈಕಟ್ಟಿ ಕೂತರಂತೆ. ಆದರೆ ವೀರನಾರಾಯಣ ಮಾತ್ರ ದೃಢ ನಿರ್ಧಾರ ಮಾಡಿದರು; ಅವರ ತೀರ್ಮಾನಕ್ಕೆ ಪತ್ನಿ ಪೂರ್ಣಿಮಾ ಬೆಂಬಲ ನೀಡಿದರು. ಮಗಳು ಆಮೋದಿನಿ (7ನೇ ತರಗತಿ) ಓದುತ್ತಿದ್ದ ‘ಬಾಲಬಳಗ’ ಶಾಲೆಯು, ಇಂಥ ಪ್ರವಾಸದಿಂದ ಮಕ್ಕಳ ಮನೋವಿಕಾಸ ವೃದ್ಧಿಯಾದೀತು ಎಂದು ಆಶಿಸಿ, ರಜೆ ಮಂಜೂರು ಮಾಡಿತು.

ವೀರನಾರಾಯಣ ಅವರ ಯೋಜನೆ ಎಂದರೆ- ಕಾಶ್ಮೀರದಿಂದ ದಕ್ಷಿಣಾಭಿಮುಖವಾಗಿ ಹೊರಟು ಕನ್ಯಾಕುಮಾರಿ ತಲುಪುವುದು. ಅದೂ ಸೈಕಲ್ ಸವಾರಿ ಮಾಡುತ್ತ! ಆಯಾ ದಿನದ ಪ್ರಯಾಣದ ಕೊನೆಗೆ ಹೊಂದಿಕೊಳ್ಳುವಂತೆ ಪತ್ನಿ, ಮಗಳು ಕಾರಿನಲ್ಲಿ ಹೊರಟು ಸೇರುವುದು. ಮಾರ್ಗ, ಅವಧಿ ಇತ್ಯಾದಿ ಅಂಶಗಳನ್ನು ಸಂಯೋಜಿಸಿ ಇಡೀ ಯೋಜನೆಯನ್ನು ಗೂಗಲ್ ಮ್ಯಾಪ್ ಮೂಲಕ ರೂಪಿಸಿದ ಎಂಜಿನಿಯರಿಂಗ್ ಪದವೀಧರ ಪೃಥ್ವಿ, ಕಾರು ಪ್ರಯಾಣಕ್ಕೆ ಜತೆಗೂಡಿದ.

‘ಬರೀ ಪ್ರವಾಸ ಹೊರಡುವ ಬದಲಿಗೆ ಅದಕ್ಕೊಂದು ಉತ್ತಮ ಉದ್ದೇಶ ಜೋಡಿಸುವುದು ನನ್ನ ಗುರಿಯಾಗಿತ್ತು. ಮಧುಮೇಹದಿಂದ ಮುಕ್ತಿ ಅಥವಾ ಸ್ವಾತಂತ್ರ್ಯ ಪಡೆಯುವ ವಿಧಾನವನ್ನು ಜನರಲ್ಲಿ ಪ್ರಚುರಪಡಿಸುವುದು ನನ್ನ ಯೋಜನೆ. ಪುಣೆ ಮೂಲದ ಡಾ. ಪ್ರಮೋದ ತ್ರಿಪಾಠಿ ರೂಪಿಸಿರುವ ‘ಫ್ರೀಡಂ ಫ್ರಮ್ ಡಯಾಬಿಟೀಸ್’ ಪರಿಕಲ್ಪನೆ ಬಗ್ಗೆ ಮಧುಮೇಹಿಗಳಲ್ಲಿ ಅರಿವು ಮೂಡಿಸಲು ಈ ಅವಕಾಶ ಬಳಸಿಕೊಳ್ಳಲು ತೀರ್ಮಾನಿಸಿದೆ’ ಎಂದು ಪ್ರಯಾಣಕ್ಕೊಂದು ಚೌಕಟ್ಟಿನ ವಿವರ ಕೊಡುತ್ತಾರೆ ವೀರನಾರಾಯಣ.

ಭಾರತವು ಇನ್ನೇನು ‘ಮಧುಮೇಹಿಗಳ ರಾಜಧಾನಿ’ ಆಗುವ ದಿನ ದೂರವಿಲ್ಲ. ಆದರೆ, ಇದೇನೂ ಕಾಯಿಲೆ ಅಲ್ಲ. ಬದಲಾದ ಜೀವನಶೈಲಿಯಿಂದ ಬರುವ ಸಕ್ಕರೆ ಕಾಯಿಲೆಯನ್ನು, ಜೀವನಶೈಲಿ ಬದಲಾಯಿಸುವ ಮೂಲಕವೇ ಹಿಮ್ಮೆಟ್ಟಿಸಬಹುದು. ಇದಕ್ಕಾಗಿ ಒಂದಷ್ಟು ಸರಳ ಸೂತ್ರಗಳಿವೆ. ಈ ಸೂತ್ರವನ್ನು ಜನರಿಗೆ ತಿಳಿಸಲು ಸೈಕಲ್ ಯಾತ್ರೆಯನ್ನು ಬಳಸಿಕೊಂಡಿದ್ದಾಗಿ ವೀರನಾರಾಯಣ ಹೇಳುತ್ತಾರೆ. ‘ಕಾರಿನಲ್ಲಿ ಪ್ರಯಾಣಿಸುವವರು ಇಂಥದನ್ನು ಹೇಳಿದರೆ ಜನರು ಕೇಳಲಾರರು; ಬದಲಾಗಿ ಸೈಕಲ್ ಪ್ರವಾಸಿಗ ಹೇಳಿದರೆ ಒಂದಷ್ಟು ಗಮನಹರಿಸಬಹುದು ಎಂಬುದಷ್ಟೇ ನನ್ನ ದೂರಾಲೋಚನೆ’ ಎಂದು ನಗುತ್ತ ಈ ಪಯಣದ ಗುಟ್ಟನ್ನು ರಟ್ಟು ಮಾಡುತ್ತಾರೆ!

ಪೆಡಲ್ ತುಳಿಯುವ ಮುನ್ನ: ಈ ಸುದೀರ್ಘ ಸೈಕಲ್ ಯಾನಕ್ಕೆ ತಮ್ಮ ಶರೀರ ಶಕ್ತವಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಲು ವೀರನಾರಾಯಣ ಐದಾರು ತಿಂಗಳ ಕಾಲ ಹಲವು ಪರೀಕ್ಷೆ ಮಾಡಿಕೊಂಡರು. ಹುಬ್ಬಳ್ಳಿಯಿಂದ, ಬಾದಾಮಿ, ಅನವಟ್ಟಿ, ಗೋವಾಕ್ಕೆ ಸೈಕಲ್ ಸವಾರಿ ಮಾಡಿಬಂದರು. ಒಮ್ಮೆಯಂತೂ ದಿನಕ್ಕೆ ಇನ್ನೂರು ಕಿ.ಮೀ ದೂರವನ್ನು ಯಶಸ್ವಿಯಾಗಿ ಕ್ರಮಿಸಿದಾಗ, ಆತ್ಮವಿಶ್ವಾಸ ಇಮ್ಮಡಿಯಾಯಿತು. ಇದರ ಆಧಾರದ ಮೇಲೆ ದಿನಕ್ಕೆ ನೂರು ಕಿ.ಮೀ ಸೈಕಲ್ ತುಳಿಯುತ್ತ, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸುಮಾರು 4,000 ಕಿ.ಮೀ ಅಂತರವನ್ನು ನಲವತ್ತು ದಿನಗಳಲ್ಲಿ ಪ್ರಯಾಣಿಸುವ ಯೋಜನೆ ರೂಪುಗೊಂಡಿತು. ಅದರಂತೆ, ಕಾರಿನ ಹಿಂದೆ ಸೈಕಲ್ ಕಟ್ಟಿಕೊಂಡು ಧಾರವಾಡದಿಂದ ಪುಣೆ ಮಾರ್ಗವಾಗಿ ಶ್ರೀನಗರವನ್ನು ತಲುಪಿದರು. ಅಲ್ಲಿನ ಐತಿಹಾಸಿಕ ‘ಲಾಲ್ ಚೌಕ್‌ನಲ್ಲಿ ಫೆಬ್ರುವರಿ 4ರಂದು ಸುರಕ್ಷತಾ ಧಿರಿಸು ಧರಿಸಿ, ಸೈಕಲ್ ಹತ್ತಿ ಪೆಡಲ್ ತುಳಿದರು.

ಮೊದಲೇ ಯೋಚಿಸಿದಂತೆ ಮಾರ್ಗದುದ್ದಕ್ಕೂ ಹಲವು ಅಡೆತಡೆಗಳಿದ್ದವು. ಅದರಲ್ಲೂ ಭೌಗೋಳಿಕ ಸ್ಥಿತಿಗತಿ, ಹವಾಮಾನ ವೈಪರೀತ್ಯ ಹೆಚ್ಚಿನ ಸವಾಲು ಒಡ್ಡುತ್ತಿದ್ದವು. ಒಂದೆಡೆ ದಾರಿ ಏರು, ಮತ್ತೊಂದೆಡೆ ತಗ್ಗು. ತಾಪಮಾನದ ಏರಿಳಿತವೂ ಇತ್ತು. ಕಾಶ್ಮೀರದಲ್ಲಿ ಸಾಗುವಾಗ ಶೂನ್ಯ ತಾಪಮಾನವಿದ್ದರೆ, ರಾಜಸ್ಥಾನದಲ್ಲಿ 38 ಡಿ.ಸೆ. ಬೆವರಳಿಸುವಂತಿತ್ತು. ದಾರಿಯಲ್ಲಿನ ಅಡ್ಡಿಗಳನ್ನು ಸರಿದೂಗಿಸಬಹುದು; ಆದರೆ ವಾತಾವರಣದ ಏರುಪೇರು ಸಹಿಸಿಕೊಳ್ಳಲೇಬೇಕಲ್ಲ. ಹಾಗಿದ್ದರೂ ದಿನಕ್ಕೆ ಸರಾಸರಿ 100 ಕಿ.ಮೀ ಸೈಕಲ್ ಸವಾರಿ ಮಾಡುತ್ತ ಪಯಣ ಸಾಗಿತು. ಸಮಾನಮನಸ್ಕ ಸ್ನೇಹಿತರ ಜತೆ ಈ ಯೋಜನೆ ಕುರಿತು ಮಾತುಕತೆ ನಡೆಸಿದ್ದರಿಂದ, ವಾಸ್ತವ್ಯ ಹಾಗೂ ಊಟೋಪಚಾರಕ್ಕೆ ಯಾವ ಸಮಸ್ಯೆಯೂ ಆಗಲಿಲ್ಲ.


ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾತ್ರೆ ನಡೆಸಿದ ತಂಡ

ಆಹಾರ ವೈವಿಧ್ಯ: ಮೊದಲೇ ತೀರ್ಮಾನಿಸಿದಂತೆ, ಆದಷ್ಟೂ ಹೋಟೆಲ್ ಹೊರತುಪಡಿಸಿ ಆತಿಥೇಯರ ಮನೆ, ಗುರುದ್ವಾರ, ಶಾಲೆ, ಹಾಸ್ಟೆಲ್, ದೇವಸ್ಥಾನಗಳಲ್ಲಿ ವಾಸ್ತವ್ಯ ಮತ್ತು ಪಕ್ಕಾ ಸ್ಥಳೀಯ ಆಹಾರ ಸವಿಯುವುದು ಪ್ರವಾಸದಲ್ಲಿನ ಮುಖ್ಯ ಅಂಶವಾಗಿತ್ತು. ‘ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಬಿಸಿ ಬಿಸಿ ಆಹಾರವನ್ನು ಸೇವಿಸಿದೆವು ಮತ್ತು ಸ್ಥಳೀಯರು ಬಳಸುವ ನೀರನ್ನೇ ಕುಡಿದೆವು. ನಮಗಂತೂ ಯಾವ ಆರೋಗ್ಯದ ಸಮಸ್ಯೆಯೂ ಕಾಡಲಿಲ್ಲ. ಒಂದರ್ಥದಲ್ಲಿ ಏಳಲ್ಲ, ಎಪ್ಪತ್ತು ಕೆರೆ ನೀರು ಕುಡಿದಂಥವರು ನಾವು!’ ಎಂದು ಎದೆ ತಟ್ಟಿಕೊಂಡು ನಗುತ್ತಾರೆ ವೀರನಾರಾಯಣ.

ಅಗಾಧ ಅನಿಸುವಷ್ಟು ಆಹಾರ ವೈವಿಧ್ಯವನ್ನು ಕಣ್ಣಾರೆ ನೋಡುವ ಜತೆಗೆ, ಅದನ್ನೆಲ್ಲ ಸವಿಯುವ ಅವಕಾಶ ಇವರಿಗೆ ಸಿಕ್ಕಿದೆ. ಕೆಲವು ಆತಿಥೇಯರಂತೂ ಇಪ್ಪತ್ತಕ್ಕೂ ಹೆಚ್ಚು ಬಗೆಯ ಸಾಂಪ್ರದಾಯಿಕ ಖಾದ್ಯ ತಯಾರಿಸಿ, ಈ ತಂಡಕ್ಕೆ ಉಣಬಡಿಸಿದ್ದಾರೆ! ಒಂದೊಂದು ತಿನಿಸು ಕೂಡ ವಿಶಿಷ್ಟ, ರುಚಿಕರ. ಅದರ ಜತೆಗೆ, ಆತಿಥೇಯರು ಇವರೆಡೆ ತೋರುತ್ತಿದ್ದ ಕಾಳಜಿಯಂತೂ ಮೂಕವಿಸ್ಮಿತವಾಗಿಸಿದೆ. ಮೈನಡುಗಿಸುವ ಚಳಿಯಿಂದಾಗಿ ನೆಲದ ಮೇಲೆ ನಿದ್ರಿಸಲು ಆಗದ ರಾಜಸ್ಥಾನದ ನಾಗೌರ್ ಪಟ್ಟಣದಲ್ಲಿ ಆತಿಥೇಯ ಕುಟುಂಬವು ತಮ್ಮ ಬೆಡ್‌ರೂಮನ್ನು ಇವರಿಗೆ ಬಿಟ್ಟುಕೊಟ್ಟಿತಂತೆ. ‘ನಮಗೆ ಅನುಕೂಲ ಮಾಡಿಕೊಟ್ಟು ತಾವು ನೆಲದ ಮೇಲೆ ಚಳಿಯಲ್ಲಿ ನಡುಗುತ್ತ ನಿದ್ದೆ ಮಾಡಿದ್ದು ಬೆಳಿಗ್ಗೆ ಗೊತ್ತಾದಾಗ, ನಮ್ಮ ಕಣ್ಣು ಹನಿಗೂಡಿದವು. ಅತಿಥಿ ದೇವೋಭವ ಎಂಬುದು ಬರೀ ಮಾತಲ್ಲ’ ಎಂದು ಹೇಳುತ್ತ ಪೂರ್ಣಿಮಾ ಭಾವುಕರಾಗುತ್ತಾರೆ.

ಬೆಳಿಗ್ಗೆ ಅರ್ಧ ದಿನದ ಯಾನದ ಬಳಿಕ ಹಾಗೂ ದಿನದ ಕೊನೆಗೆ ‘ಮಧುಮೇಹವನ್ನು ದೂರ ಮಾಡುವುದು ಹೇಗೆ’ ಎಂಬ ಕುರಿತು ಪ್ರವಾಸದುದ್ದಕ್ಕೂ ಹತ್ತಾರು ಉಪನ್ಯಾಸಗಳನ್ನು ವೀರನಾರಾಯಣ ನೀಡಿದ್ದಾರೆ. ಸ್ಥಳೀಯ ರೋಟರಿ ಕ್ಲಬ್, ಸೈಕ್ಲಿಂಗ್ ಕ್ಲಬ್ ಮತ್ತು ‘ಫ್ರೀಡಂ ಫ್ರಮ್ ಡಯಾಬಿಟೀಸ್’ ಸಹಯೋಗದಲ್ಲಿ ಆ ಸಂವಾದಗಳು ನಡೆದಿವೆ.

ಸೈಕಲ್ ಸವಾರಿ ಆರೋಗ್ಯಕ್ಕೆ ಪೂರಕ. ಆರೋಗ್ಯವಂತ ವ್ಯಕ್ತಿ ತನ್ನ ಶಕ್ತಿಗೆ ಅನುಗುಣವಾಗಿ ದಿನಕ್ಕೆ 5ರಿಂದ 25 ಕಿ.ಮೀ ದೂರ ಸೈಕ್ಲಿಂಗ್ ಮಾಡಬಹುದು. ದೇಹದಲ್ಲಿನ ಕಲ್ಮಶ ನಿವಾರಿಸಿ, ಚೈತನ್ಯ ಮೂಡಲು ಇದು ಸಹಕಾರಿ ಎಂದು ಅನುಭವ ಹಂಚಿಕೊಳ್ಳುವ ವೀರನಾರಾಯಣ, ‘ಹಾಗೆಂದು ಒಂದೇ ದಿನಕ್ಕೆ ದೂರದ ಸವಾರಿ ಒಳ್ಳೆಯದಲ್ಲ; ದಿನದಿಂದ ದಿನಕ್ಕೆ ಅಂತರ ಹೆಚ್ಚಿಸಿಕೊಳ್ಳುತ್ತ ಹೋಗಬೇಕು’ ಎಂಬ ಮುನ್ನೆಚ್ಚರಿಕೆಯನ್ನು ಕೊಡುತ್ತಾರೆ.

ವಾಹನದಲ್ಲಿ ಹೋಗುವಾಗ ತಾಸಿಗೆ 80-100 ಕಿ.ಮೀ ವೇಗದಲ್ಲಿ ನಮ್ಮ ಎಡಬಲದ ಜಗತ್ತನ್ನು ನೋಡುವ ಬಗೆ ಬೇರೆ. ಆದರೆ ತಾಸಿಗೆ 15 ಕಿ.ಮೀ ವೇಗದಲ್ಲಿ ಸೈಕಲ್ ತುಳಿಯುತ್ತ ಆಸುಪಾಸು ದೃಷ್ಟಿ ಹರಿಸಿದಾಗ ಕಾಣುಸುವುದೇ ಬೇರೆ! ಅದರಲ್ಲೂ ಬಗೆಬಗೆಯ ನೋಟಗಳನ್ನು ಸವಿಯಲು ನಿಧಾನವಾದ ಸೈಕಲ್ ಸವಾರಿ ಹೇಳಿ ಮಾಡಿಸಿದಂಥದು ಎಂದು ವೀರನಾರಾಯಣ ಬಣ್ಣಿಸುತ್ತಾರೆ.

ಎರಡು ಗಾಲಿಗಳನ್ನು ನೆಚ್ಚಿಕೊಂಡು ಇವರು ಕ್ರಮಿಸಿದ ದೂರ ಕಡಿಮೆಯೇನಲ್ಲ! ಒಣಭೂಮಿಯಿಂದ ಹಿಡಿದು ಹಸಿರು ಹೊದ್ದ ಬೆಟ್ಟದ ಸಾಲುಗಳ ನೋಟ ದಕ್ಕಿದೆ. ಅದರ ಜತೆ ಜನರ ಒಡನಾಟದ ಅನುಭವಗಳ ಮೂಟೆಯಂತೂ ಹೊರಲಾರದಷ್ಟು ಸಿಕ್ಕಿದೆ! ‘ಅವಂತೂ ಅಪೂರ್ವ ನೆನಪುಗಳು. ಭಾರತದಂಥ ವೈವಿಧ್ಯಮಯ ಸಂಸ್ಕೃತಿಯ ದೇಶದಲ್ಲಿ ನನಗೆ ಸಿಕ್ಕಿದ್ದು ಅರ್ಧ ಹಿಡಿಯಷ್ಟೇ’ ಎಂದು ಅವರು ಉದ್ಗರಿಸುತ್ತಾರೆ.

ತಿಂಗಳ ಮೊದಲೇ ಈ ಸೈಕಲ್ ಯಾನದ ಪ್ರತಿ ವಿವರವನ್ನೂ ಅಚ್ಚುಕಟ್ಟಾಗಿ ರೂಪಿಸಿದ ಪರಿಯೇ ಸೋಜಿಗ. ಅದರಂತೆಯೇ ನಾಲ್ಕು ಸಾವಿರ ಕಿ.ಮೀ ದೂರದ ಪ್ರವಾಸ ಕರಾರುವಾಕ್ಕಾಗಿ ನಡೆದಿದ್ದು ಮತ್ತೊಂದು ಅಚ್ಚರಿ. ಶ್ರೀನಗರದಲ್ಲಿ ಸೈಕಲ್ ಏರಿ ದಕ್ಷಿಣದತ್ತ ಮುಖ ಮಾಡಿ ಪೆಡಲ್ ತುಳಿದಿದ್ದ ವೀರನಾರಾಯಣ, ಮೊನ್ನೆಯಷ್ಟೇ (ಮಾರ್ಚ್ 16, ಗುರುವಾರ) ಕನ್ಯಾಕುಮಾರಿ ತಲುಪಿ, ‘ವಿವೇಕಾನಂದ ಸ್ಮಾರಕ’ದ ಎದುರಿಗೆ ಎರಡೂ ಕೈಗಳಲ್ಲಿ ಹೆಮ್ಮೆಯಿಂದ ಸೈಕಲ್ ಎತ್ತಿಹಿಡಿದು ಸಂಭ್ರಮಿಸಿದರು.

ಮಹತ್ವಾಕಾಂಕ್ಷೆಯ ಯಾತ್ರೆಗೆ ಪ್ರಬಲ ಇಚ್ಛಾಶಕ್ತಿಯೂ ಜತೆಗೂಡಿದರೆ ಏನೆಲ್ಲ ಸಾಧ್ಯ ಎಂಬುದಕ್ಕೆ ಇದಕ್ಕಿಂತ ಬೇರೇನು ನಿದರ್ಶನ ಬೇಕು?!

ಸವಾರಿ ದಾರಿ ಇದು!
ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸೈಕಲ್ ಯಾನವು ಹಾದು ಹೋಗಿದೆ. ಸಂದರ್ಶಿಸಿದ ನಗರಗಳು: ಉಧಮ್‌ಪುರ, ಜಮ್ಮು, ಪಠಾಣಕೋಟ್, ಅಮೃತಸರ, ಫಜಿಲ್ಕಾ, ಬಿಕನೇರ್, ಜೋಧಪುರ, ಅಬು ರೋಡ್, ಅಹಮದಾಬಾದ್‌, ವಡೋದರ, ಸೂರತ್, ಪುಣೆ, ಕೊಲ್ಹಾಪುರ, ಬೆಳಗಾವಿ, ಧಾರವಾಡ, ಚಿತ್ರದುರ್ಗ, ಬೆಂಗಳೂರು, ಧರ್ಮಪುರಿ, ದಿಂಡಿಗಲ್ ಮತ್ತು ತಿರುನಲ್ವೇಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು