ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆನಿಮ್‌ ಡೇ... ರೂಢಿಗತ ಮಿಥ್ಯೆಗಳ ವಿರುದ್ಧ ಜೀನ್ಸ್‌ಧಾರಿಗಳ ಪ್ರತಿರೋಧ

Last Updated 1 ಮೇ 2021, 19:30 IST
ಅಕ್ಷರ ಗಾತ್ರ

ಏಪ್ರಿಲ್ ಮಾಸದ ಕಟ್ಟಕಡೆಯ ಬುಧವಾರವನ್ನು ‘ಡೆನಿಮ್ ಡೇ’ ಎಂದು ಆಚರಿಸುವುದುಂಟು. ಲೈಂಗಿಕ ಹಲ್ಲೆಯ ಕುರಿತು ಅರಿವು ಮೂಡಿಸುವ ಸದುದ್ದೇಶದ ಈ ದಿನ ಮೊನ್ನೆ ಮೊನ್ನೆ ಸದ್ದಿಲ್ಲದೆ ಸರಿದು ಹೋಯಿತು.

ಮಹಿಳೆಯ ಮೇಲೆ ನಡೆಯುವ ಲೈಂಗಿಕ ಹಲ್ಲೆಗಳ ಸುತ್ತ ನೆಲೆಸಿರುವ ರೂಢಿಗತ ಮಿಥ್ಯೆಗಳು ನೂರಾರು. ಅವುಗಳನ್ನು ಹುಟ್ಟಿಹಾಕಿ ರೂಢಿಯಲ್ಲಿ ಇರಿಸಿರುವುದು ಗಂಡಾಳಿಕೆಯೆಂಬ ಪಟ್ಟಭದ್ರ ಹಿತಾಸಕ್ತಿ. ಅತ್ಯಾಚಾರಿಯ ರಕ್ಷಣೆಗಿಳಿದು ಅತ್ಯಾಚಾರಕ್ಕೆ ಬಲಿಯಾಗುವ ಹೆಣ್ಣನ್ನೇ ದೂರುತ್ತ ಬಂದಿದೆ ಪುರುಷಪ್ರಧಾನ ವ್ಯವಸ್ಥೆ. ಮಾನವ ಇತಿಹಾಸ ಮಾತ್ರವೇ ಅಲ್ಲ, ಶಾಸ್ತ್ರ-ಪುರಾಣ-ಸಂಹಿತೆಗಳಲ್ಲೂ ತುಂಬಿ ಸಮಕಾಲೀನ ಸಮಾಜಕ್ಕೂ ತುಳುಕಿರುವ ಅನ್ಯಾಯವಿದು.

ಅತ್ಯಾಚಾರಿಯೊಬ್ಬನಿಗೆ ಶಿಕ್ಷೆ ನೀಡಿದ್ದ ತೀರ್ಪೊಂದನ್ನು ರದ್ದುಗೊಳಿಸಿದ್ದಲ್ಲದೆ ಬಾಧಿತಳನ್ನೇ ದೂರಿದ ಇಟಲಿಯ ಸುಪ್ರೀಂ ಕೋರ್ಟಿನ ನಡೆ ಡೆನಿಮ್ ದಿನಾಚರಣೆಯ ಹಿಂದಿನ ಪ್ರಚೋದನೆ. ಸಂತ್ರಸ್ತೆಯು ಬಿಗಿಯಾದ ಜೀನ್ಸ್ ಪ್ಯಾಂಟ್ ತೊಟ್ಟಿದ್ದಳು. ಆಕೆಯ ಸಹಕಾರ ಇಲ್ಲದೆ ಅತ್ಯಾಚಾರಿ ಅದನ್ನು ಬಿಚ್ಚುವುದು ಅಸಾಧ್ಯ. ನೆರವಾಗಿದ್ದಾಳೆಂದರೆ ತಾನು ಒಪ್ಪಿಗೆ ನೀಡಿದಳೆಂದೇ ಅರ್ಥ ಎಂದು ಸುಪ್ರೀಂ ಕೋರ್ಟ್‌ ಸಾರಿತು. ತೀರ್ಪಿನ ವಿರುದ್ಧ ಪ್ರತಿಭಟನೆ ಸಿಡಿಯಿತು. ಮರುದಿನ, ಇಟಲಿಯ ಸಂಸತ್ತಿನಲ್ಲಿ ಕೆಲಸ ಮಾಡುವ ಮಹಿಳೆಯರು ಜೀನ್ಸ್ ಧರಿಸಿ ಕೆಲಸಕ್ಕೆ ಬಂದರು. ಸಂತ್ರಸ್ತೆಯ ಬೆಂಬಲಕ್ಕೆ ನಿಂತರು. ಈ ಪ್ರಕರಣ ಮತ್ತು ಇದರ ಸುತ್ತಮುತ್ತಲ ಆಂದೋಲನಕ್ಕೆ ಪ್ರತಿಸ್ಪಂದನವಾಗಿ ರೂಪು ತಳೆದು ರೂಢಿಗೆ ಬಂದದ್ದು ‘ಡೆನಿಮ್ ಡೇ’ ಎಂಬ ನಿರಂತರ ಪ್ರಚಾರಾಂದೋಲನ.

ಹೀಗೆ ಸಂತ್ರಸ್ತೆಯ ದೂಷಣೆ ಮತ್ತು ಲೈಂಗಿಕ ಹಿಂಸೆಯನ್ನು ಕವಿದು ಮುತ್ತಿದ ವಿಧ್ವಂಸಕ ಮಿಥ್ಯೆಗಳ ಕುರಿತ ಸ್ಥಳೀಯ ಪ್ರತಿರೋಧವೊಂದು ಚಳವಳಿಯೇ ಆಗಿ ಬೆಳೆಯಿತು. ಲೈಂಗಿಕ ಹಲ್ಲೆಗಳ ಸುತ್ತ ನೆಲೆಸಿರುವ ರೂಢಿಗತ ಮಿಥ್ಯೆಗಳ ವಿರುದ್ಧ ಜೀನ್ಸ್ ಧರಿಸಿ ಬಹಿರಂಗವಾಗಿ ಪ್ರತಿಭಟಿಸಬೇಕು ಎಂಬುದು ‘ಡೆನಿಮ್ ಡೇ’ ಹಿಂದಿನ ನಿವೇದನೆಯಾಯಿತು.

‘ಡೆನಿಮ್ ಡೇ’ಗೆ ಬೀಜ ಬಿದ್ದದ್ದು ಇಟಲಿಯಲ್ಲಿ (1992). ಹದಿನೆಂಟು ವರ್ಷದ ಯುವತಿಯ ಮೇಲೆ 45 ವರ್ಷ ವಯಸ್ಸಿನ ಡ್ರೈವಿಂಗ್ ತರಬೇತಿದಾರನೊಬ್ಬ ಅತ್ಯಾಚಾರ ನಡೆಸಿದ್ದ. ನೇಪಲ್ಸ್ ನಗರದಿಂದ 60 ಮೈಲಿ ದೂರದ ಮ್ಯೂರೋ ಲುಕಾನೋ ಎಂಬ ಸಣ್ಣ ಟೌನಿನಲ್ಲಿ ನಡೆದ ಘಟನೆಯಿದು. ಚಾಲನಾ ತರಬೇತಿಯ ಮೊದಲ ದಿನ. ಆಕೆಯನ್ನು ನಿರ್ಜನ ರಸ್ತೆಯೊಂದಕ್ಕೆ ಕರೆದೊಯ್ದು, ಕಾರಿನಿಂದ ಹೊರಗೆಳೆದು, ಆಕೆ ಧರಿಸಿದ್ದ ಜೀನ್ಸ್ ಪ್ಯಾಂಟ್ ಕಿತ್ತೆಸೆದು ಹಲ್ಲೆ ನಡೆಸಿದ್ದ. ಆಕೆ ದೂರು ನೀಡಿದಳು. ಆದರೆ ಅತ್ಯಾಚಾರದ ಶಿಕ್ಷೆಗೆ ಬದಲಾಗಿ, ಬಹಿರಂಗ ಸ್ಥಳದಲ್ಲಿ ಅಸಭ್ಯ ಪ್ರದರ್ಶನ ಮಾಡಿದನೆಂದು ಸಣ್ಣಪುಟ್ಟ ಶಿಕ್ಷೆ ವಿಧಿಸಲಾಯಿತು. ಆಕೆ ಮೇಲ್ಮನವಿ ಸಲ್ಲಿಸಿದಳು. ಅತ್ಯಾಚಾರಕ್ಕೆ ಶಿಕ್ಷೆಯಾಗಿ ಅವನನ್ನು ಜೈಲಿಗೆ ತಳ್ಳಲಾಯಿತು. ಆಕೆಯೊಂದಿಗೆ ಕಾರಿನಲ್ಲಿ ತಾನು ಹೊಂದಿದ್ದು ಸಮ್ಮತಿಪೂರ್ವಕ ಸಂಭೋಗವೇ ವಿನಾ ಬಲಾತ್ಕಾರ ಅಲ್ಲ ಎಂದು ಅವನು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ. ಇಟಲಿಯ ಸುಪ್ರೀಂ ಕೋರ್ಟ್‌ ಶಿಕ್ಷೆಯನ್ನು ರದ್ದು ಮಾಡಿದ್ದರಿಂದ ಅವನು ಬಿಡುಗಡೆಯಾದ.

ಸಂತ್ರಸ್ತೆಯು ಅತಿ ಬಿಗಿಯಾದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಆಕೆಯ ನೆರವಿಲ್ಲದೆ ಅವನು ಅದನ್ನು ಕಳಚಲಾರ. ಕಳಚಲು ಆಕೆ ನೆರವು ನೀಡಿರಲೇಬೇಕು. ನೆರವಾದಳೆಂದರೆ ಲೈಂಗಿಕಕ್ರಿಯೆಗೆ ಸಮ್ಮತಿ ನೀಡಿದಳೆಂದೇ ಅರ್ಥ. ಹೀಗಾಗಿ ಅದು ಸಮ್ಮತಿಪೂರ್ವಕ ಲೈಂಗಿಕ ಕ್ರಿಯೆಯೇ ವಿನಾ ಅತ್ಯಾಚಾರ ಅಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿತ್ತು. ಅತಿ ಬಿಗಿ ಜೀನ್ಸ್ ಪ್ಯಾಂಟನ್ನು ಅತ್ಯಾಚಾರಿಯು ಕಳಚುವುದು ಅಷ್ಟು ಸುಲಭವಲ್ಲ. ಇನ್ನು ಸಂತ್ರಸ್ತೆಯೊಬ್ಬಳು ಲೈಂಗಿಕ ಹಲ್ಲೆಕೋರನ ವಿರುದ್ಧ ತನ್ನೆಲ್ಲ ಬಲವನ್ನು ಬಳಸಿ ಸೆಣಸುತ್ತಿದ್ದಾಗಲಂತೂ ಕಳಚುವುದು ಅಸಾಧ್ಯವೇ ಸರಿ ಎಂದು ತೀರ್ಪಿನಲ್ಲಿ ಪ್ರತಿಪಾದಿಸಲಾಗಿತ್ತು. ಮಹಿಳೆಯೊಬ್ಬಳು ಬಿಗಿ ಜೀನ್ಸ್ ಧರಿಸಿದ್ದರೆ ಆಕೆಯ ಮೇಲೆ ಅತ್ಯಾಚಾರ ನಡೆಯುವುದು ಅಸಾಧ್ಯ ಎಂಬ ಅರ್ಥಕ್ಕೆ ಈ ತೀರ್ಪು ದಾರಿ ಮಾಡಿತು.

ಇಟಲಿ ದೇಶದ ಉದ್ದಗಲಕ್ಕೆ ‘ಜೀನ್ಸ್ ನೆಪ’ ಅಥವಾ ‘ಜೀನ್ಸ್ ಸಮರ್ಥನೆ’ ಎಂದು ಈ ತೀರ್ಪು ಜನಜನಿತವಾಯಿತು. ತೀರ್ಪಿನಿಂದ ಕುದಿದು ಹೋದ ಇಟಲಿಯ ಸಂಸತ್ತಿನ ಮಹಿಳೆಯರು ಸುಪ್ರೀಂ ಕೋರ್ಟಿನ ಸೋಪಾನಗಳ ಮೇಲೆ ಜೀನ್ಸ್ ಧರಿಸುವ ಪ್ರತಿಭಟನೆ ಹೂಡಿದರು. ಕ್ರೋಧದ ಈ ಪ್ರತಿಕ್ರಿಯೆ ದೇಶವಿದೇಶಗಳ ಸಮೂಹ ಮಾಧ್ಯಮಗಳ ಗಮನ ಸೆಳೆಯಿತು. ಅಮೆರಿಕೆಯ ಕ್ಯಾಲಿಫೋರ್ನಿಯಾದ ಸೆನೆಟ್ ಮತ್ತು ವಿಧಾನಸಭೆ ಕಟ್ಟಡದ ಮೆಟ್ಟಿಲುಗಳ ಮೇಲೆಯೂ ಜೀನ್ಸ್‌ಧಾರಿ ಪ್ರತಿಭಟನೆ ಜರುಗಿತು.

ಈ ವಿವಾದಾತ್ಮಕ ತೀರ್ಪು ಮತ್ತು ಅದಕ್ಕೆ ವ್ಯಕ್ತವಾದ ಆಸ್ಫೋಟಕ ಪ್ರತಿಕ್ರಿಯೆಯು ಅತ್ಯಾಚಾರದ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿತು. ಲೈಂಗಿಕ ಹಲ್ಲೆಯನ್ನು ನ್ಯಾಯಾಧೀಶರು ನೋಡುವ ಬಗೆಯ ಕುರಿತು ವ್ಯಗ್ರ ಸ್ವರೂಪದ ಚರ್ಚೆಗೆ ಕಾರಣವಾಯಿತು. ಇಟಲಿಯ ಸುದ್ದಿಪತ್ರಿಕೆಗಳು, ಟೆಲಿವಿಷನ್ ಮತ್ತು ರೇಡಿಯೊದಲ್ಲಿ ವ್ಯಾಪಕ ಸಂವಾದ ಜರುಗಿತು.

ಒಂದು ಕಾಲಕ್ಕೆ ಇಟಲಿಯ ಸರ್ವಾಧಿಕಾರಿಯಾಗಿದ್ದವನು ಬೆನಿಟಿನೊ ಮುಸೋಲಿನಿ. ಆತನ ಮೊಮ್ಮಗಳು ಮತ್ತು ಸಂಸದೆಯೂ ಆಗಿದ್ದ ಅಲೆಸ್ಸಾಂದ್ರ ಮುಸೋಲಿನಿಇತರೆ ಸಂಸದೆಯರ ಜೊತೆಗೂಡಿ ಜೀನ್ಸ್ ಧರಿಸಿ ಸಂಸತ್ ಭವನದ ಹೊರಗೆ ಪ್ರತಿಭಟನಾ ಪ್ರದರ್ಶನ ನಡೆಸಿದಳು. ರೋಮ್ ಮತ್ತು ನೇಪಲ್ಸ್ ನಗರಗಳ ಅಂಗಡಿಗಳು ‘ರೇಪ್-ನಿರೋಧಕ ಜೀನ್ಸ್’ಗಳನ್ನು ಪ್ರೇಮಿಗಳ ದಿನಾಚರಣೆಯ ಉಡುಗೊರೆಗಳೆಂದು ಕೀಟಲೆ ಮಾಡಿ ಮಾರತೊಡಗಿದವು. ಅತ್ಯಾಚಾರಕ್ಕೆ ಶಿಕ್ಷೆ ವಿಧಿಸುವ ಹೊಸ ಕಾಯ್ದೆಯನ್ನೇ 1996ರಲ್ಲಿ ರೂಪಿಸಲಾಯಿತು.ಅಲೆಸ್ಸಾಂದ್ರ ಮುಸೋಲಿನಿ ಈ ಕ್ರಿಯೆಯ ಮುಂಚೂಣಿಯಲ್ಲಿದ್ದಳು.

ಅತ್ಯಾಚಾರಿಯನ್ನು ಖುಲಾಸೆ ಮಾಡಿದ ಸುಪ್ರೀಂ ಕೋರ್ಟಿನ ತೀರ್ಪು ಆಘಾತಕಾರಿ ಪ್ರತಿಗಾಮಿ ಮನಃಸ್ಥಿತಿಯದು. ಅತ್ಯಾಚಾರದ ಮನಃಶಾಸ್ತ್ರದ ಸಂವೇದನೆಯೇ ನ್ಯಾಯಮೂರ್ತಿಗಳಿಗೆ ಇಲ್ಲ, ಸಂತ್ರಸ್ತರ ಮನಃಸ್ಥಿತಿ ಅಥವಾ ನಿಜ ಬದುಕಿನ ವಾಸ್ತವಗಳ ಕುರಿತು ತಿಳಿವಳಿಕೆಯೂ ಅವರಿಗಿಲ್ಲ ಎಂದು ಅಲೆಸ್ಸಾಂದ್ರ ಮುಸೋಲಿನಿ ಸಿಡಿದಿದ್ದಳು. ಇಟಲಿಯ ರಾಜಕೀಯ ಪಕ್ಷಗಳು, ಅಂಕಣಕಾರರು ಹಾಗೂ ಟೆಲಿವಿಷನ್ ವಿಶ್ಲೇಷಕರು ಆಕೆಯ ಆಕ್ರೋಶಕ್ಕೆ ದನಿಗೂಡಿಸಿದ್ದರು.

ಆಕೆಯ ತಾತನ ಆಡಳಿತದ 1930ರ ದಶಕದ ಕಾಯ್ದೆಯೇ ಅಲ್ಲಿಯ ತನಕ ಜಾರಿಯಲ್ಲಿತ್ತು. ಅತ್ಯಾಚಾರವನ್ನು ಸಂತ್ರಸ್ತೆಯ ಕುಟುಂಬದ ವಿರುದ್ಧ ಎಸಗುವ ‘ಮರ್ಯಾದಾ ಪಾತಕ’ (Crime of honor) ಎಂದು ಪರಿಗಣಿಸಿದ್ದ ಪ್ರತಿಗಾಮೀ ಕಾಯ್ದೆ ಅದು. ಪ್ರತಿವಾದಿಯು ಸಂತ್ರಸ್ತೆಯನ್ನು ಲಗ್ನವಾಗಲು ಒಪ್ಪಿ ಶಿಕ್ಷೆಯಿಂದ ಪಾರಾಗಲು ಅವಕಾಶ ಇದ್ದ ಕಾಯ್ದೆ. ಇಲ್ಲವಾದರೆ ಸಂತ್ರಸ್ತೆ ಅದಾಗಲೇ ಹಲವಾರು ಲೈಂಗಿಕ ಅನುಭವಗಳನ್ನು ಹೊಂದಿದ್ದಳೆಂದು ರುಜುವಾತು ಮಾಡಿದರೂ ಪ್ರತಿವಾದಿಯು ಶಿಕ್ಷೆಯಿಂದ ಬಚಾವಾಗಬಹುದಿದ್ದ ಕಾಯ್ದೆ.

ಐವರು ಸದಸ್ಯರ ನ್ಯಾಯಪೀಠದ ಪರವಾಗಿ ಈ ತೀರ್ಪು ಬರೆದಿದ್ದವರು ನ್ಯಾಯಮೂರ್ತಿ ಆಲ್ಡೊ ರಿಸ್ಸೊ. ನ್ಯಾಯಾಲಯದ ಇರಾದೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದರು. ಕೋಪಾವಿಷ್ಟರಾದ ಅವರು, ‘ಜೀನ್ಸ್ ಧರಿಸಿದ ಮಹಿಳೆಯ ಮೇಲೆ ಅತ್ಯಾಚಾರ ಎಸಗುವುದು ಸಾಧ್ಯವಿಲ್ಲ ಎನ್ನುವುದು ನೀಚತನ, ಮುಠ್ಠಾಳತನವಷ್ಟೇ ಅಲ್ಲ ಅಪಹಾಸ್ಯದ ಮಾತು’ ಎಂದರು.

‘ನಮ್ಮ ತೀರ್ಪಿನ ಅರ್ಥ ಅದಾಗಿರಲಿಲ್ಲ.ಶಿಕ್ಷೆಯನ್ನು ಎತ್ತಿ ಹಿಡಿಯುವಂತಹ ಸಾಕ್ಷ್ಯಾಧಾರವನ್ನು ಮೇಲ್ಮನವಿ ನ್ಯಾಯಾಲಯವು ಒದಗಿಸಿಲ್ಲ ಎಂದಷ್ಟೇ ನಾವು ಹೇಳಿದೆವು. ಹೊಂದಿಕೆಯೇ ಆಗದ ಅಸಮಂಜಸ ಹೇಳಿಕೆಗಳಿದ್ದವು. ಅವುಗಳನ್ನು ನಾವು ಎತ್ತಿ ತೋರಿದೆವು. ಅತ್ಯಾಚಾರ ನಡೆದ ದಿನದ ಅಪರಾಹ್ನ ಚಾಲನಾ ತರಬೇತಿ ಶಾಲೆಯಲ್ಲಿ ಪಾಠದ ತರಗತಿ ನಡೆದಿತ್ತು. ಈ ತರಗತಿಗೆ ಸಂತ್ರಸ್ತೆ ಬಂದಿದ್ದಳು ಎಂಬುದು ಇಂತಹ ಅಸಮಂಜಸ ಹೇಳಿಕೆಗಳಲ್ಲೊಂದು’ ಎಂದು ನ್ಯಾಯಮೂರ್ತಿಗಳು ಹೇಳಿದ್ದರು.ಅತ್ಯಾಚಾರ ಜರುಗಿದ್ದರೆ ಆ ಆಘಾತದಿಂದ ಆಕೆ ಮನೆಯಲ್ಲಿರುತ್ತಿದ್ದಳೇ ವಿನಾ ತರಗತಿಗೆ ಬರುತ್ತಿರಲಿಲ್ಲ ಎಂಬುದು ಅವರ ತರ್ಕವಾಗಿತ್ತು.

ಯುವತಿಯೊಬ್ಬಳು ತನ್ನ ಎಲ್ಲ ಕಸುವನ್ನು ಒಟ್ಟುಗೂಡಿಸಿಕೊಂಡು ಅತ್ಯಾಚಾರಿಯನ್ನು ವಿರೋಧಿಸುತ್ತಾಳೆ. ನಿಷ್ಕ್ರಿಯಳಾಗಿ ಅತ್ಯಾಚಾರಕ್ಕೆ ತನ್ನನ್ನು ಒಪ್ಪಿಸಿಕೊಳ್ಳುವುದಿಲ್ಲ ಎಂದೂ ತೀರ್ಪಿನಲ್ಲಿ ಹೇಳಲಾಗಿತ್ತು. ಸುಪ್ರೀಂ ಕೋರ್ಟಿನ ಈ ವಿತಂಡವಾದ ಇಟಲಿಯ ನಾಗರಿಕರನ್ನು ಕೆರಳಿಸಿತ್ತು. ಅಂದಿನ ಸುಪ್ರೀಂ ಕೋರ್ಟಿನ 410 ನ್ಯಾಯಮೂರ್ತಿಗಳ ಪೈಕಿ ಹತ್ತು ಮಂದಿ ಮಹಿಳಾ ನ್ಯಾಯಮೂರ್ತಿಗಳಿದ್ದರು. ಅವರ ಪೈಕಿ ಒಬ್ಬರು ಸಿಮೋನೆಟಾ ಸೊಜಿಯು. ‘ಕಾಯ್ದೆ ಕಾನೂನುಗಳು ಪುರುಷರ ಕೈವಶದಲ್ಲಿ ಹೆಪ್ಪುಗಟ್ಟಿ ಹೋಗಿವೆ. ಅವರಲ್ಲಿ ಬಹುತೇಕರ ಆಲೋಚನೆ ಸಾರಾಸಗಟಾಗಿ ವಾಸ್ತವಕ್ಕೆ ದೂರವಾಗಿರುತ್ತದೆ’ ಎಂದಿದ್ದರು ಆಕೆ.

ಪ್ರಪಂಚದ ಪ್ರಖ್ಯಾತ ಜೀನ್ಸ್ ಬ್ರ್ಯಾಂಡ್ ಕಂಪನಿಗಳು ಮಾರಾಟ ಮಾಡುವ ಜೀನ್ಸ್ ಉಡುಪುಗಳು ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಹತ್ತಾರು ಅಭಿವೃದ್ಧಿಶೀಲ ದೇಶಗಳ ಸಿದ್ಧಉಡುಪು ಕಾರ್ಖಾನೆಗಳಲ್ಲಿ ತಯಾರಾಗುತ್ತವೆ. ಈ ಫ್ಯಾಕ್ಟರಿಗಳ ಕೆಲಸಗಾರರು ಬಹುತೇಕ ಮಹಿಳೆಯರು. ಇವರ ಮೇಲಿನ ಲೈಂಗಿಕ ಶೋಷಣೆಗೆ ಎಣೆಯಿಲ್ಲ. ಪ್ರತಿಭಟಿಸುವವರು ಉದ್ಯೋಗದಿಂದ ಕೈತೊಳೆದುಕೊಳ್ಳುವುದು ಕಾಯಂ.

ಜೀನ್ಸ್ ತೊಡುಗೆ ತಯಾರಾದದ್ದು ಶ್ರಮಜೀವಿಗಳ ಬಿಡುಬೀಸು ಬಳಕೆಗೆಂದು. ಮೊದಲ ಜೀನ್ಸ್ ಷರಾಯಿ ತಯಾರಾದದ್ದು 1873ರಲ್ಲಿ. ಬಲು ಒರಟು ಬಟ್ಟೆಯಿಂದ ಹೊಲಿದ ಜೀನ್ಸ್ ಷರಾಯಿ ಹರಿಯದಂತೆ ತಾಮ್ರದ ತಿರುಪು ಮೊಳೆಗಳನ್ನು ಹೊಡೆಯಲಾಗಿತ್ತು.
ಆರ್ಥಿಕ ಏಣಿಶ್ರೇಣಿಯ ತಳಭಾಗದ ಸಾಧಾರಣ ಶ್ರಮಜೀವಿಗಳು ಈ ಉಡುಗೆಯನ್ನು ತೊಡುತ್ತಿದ್ದರು. ಕಾಲಕ್ರಮೇಣ ಈ ಉಡುಗೆ ಡಾಂಭಿಕ ಸಮಾಜದ ವಿರುದ್ಧ ಬಂಡಾಯ ಪ್ರತಿರೋಧಗಳ ಪ್ರತೀಕವೆನಿಸಿತು. ಜಾಗತಿಕ ಪ್ರತಿಭಟನಾ ಸಂಸ್ಕೃತಿಯ ಭಾಗವಾಯಿತು. ವರ್ಣಭೇದ ನೀತಿ, ನಾಗರಿಕ ಹಕ್ಕುಗಳು ಮತ್ತು ಮಹಿಳಾ ವಿಮೋಚನಾ ಆಂದೋಲನಗಳು ಈ ಉಡುಗೆಯನ್ನು ಅಪ್ಪಿಕೊಂಡಿದ್ದವು. ಕೆಡವಲಾದ ಐತಿಹಾಸಿಕ ಬರ್ಲಿನ್ ಗೋಡೆಯ ಮೇಲೆ ಕುಳಿತಿದ್ದ ನೂರಾರು ಯುವಜನರು ಧರಿಸಿದ್ದ ಜೀನ್ಸ್ ಉಡುಗೆ ಎದ್ದು ಕಂಡಿತ್ತು.

ನಮ್ಮ ಸಮಾಜದ ಸಂಪ್ರದಾಯವಾದಿಗಳೂ ಜೀನ್ಸ್ ವಿರುದ್ಧ ಕತ್ತಿ ಹಿರಿಯುತ್ತಲೇ ಬಂದಿದ್ದಾರೆ. ಹೆಣ್ಣಿನ ಉಣಿಸು ತಿನಿಸು, ಮಾತುಕತೆ, ಉಡುಗೆ ತೊಡುಗೆ, ಆಚಾರ ವ್ಯವಹಾರ ಎಲ್ಲದರ ಮೇಲೂ ಅವರದು ಉಡದ ಹಿಡಿತ. ಚೌಮೀನ್ (ದಪ್ಪ ಶಾವಿಗೆಯಿಂದ ಮಾಡಿದ ಖಾರದ ಚೀನೀ ಖಾದ್ಯ) ತಿನ್ನುವುದು, ಮೊಬೈಲ್ ಫೋನ್ ಬಳಸುವುದು ಹಾಗೂ ಜೀನ್ಸ್ ತೊಡುವುದು ಹೆಣ್ಣುಮಕ್ಕಳನ್ನು ದಾರಿ ತಪ್ಪಿಸುತ್ತವೆ ಎಂದು ಉತ್ತರ ಭಾರತದ ನೂರಾರು ಹಳ್ಳಿಗಳ ಖಾಪ್ ಪಂಚಾಯಿತಿಗಳು ಹೇರಿರುವ ವಿಧಿ ನಿಷೇಧಗಳು ಇಂದಿಗೂ ಜಾರಿಯಲ್ಲಿವೆ. ಜೀನ್ಸ್ ತೊಟ್ಟ ಹೆಣ್ಣುಮಗಳು ಗಂಡಿನ ಅಂಕೆಗೆ ಸಿಗಲಾರಳು ಎಂಬ ಗಂಡಾಳಿಕೆಯ ಭಯವೇ ಈ ವಿಧಿ ನಿಷೇಧಗಳ ಮೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT