ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಡುವೆ ಹಳಸದಿರಲಿ ದಾಂಪತ್ಯ ಸಂಬಂಧ

Last Updated 29 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಸುಷ್ಮಾ, ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಸ್ಥೆ. ಅವಳ ಗಂಡ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ. ಕೆಲಸದ ನಿಮಿತ್ತ ಊರೂರು ಸುತ್ತಾಡುವ ಕಾಯಕ ಅವನದ್ದು. ಕೋವಿಡ್ ಕಾರಣಕ್ಕಾಗಿ ತನ್ನೂರಿನಿಂದಲೇ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿರುವ ಸುಷ್ಮಾ ಮತ್ತು ಅವಳ ಗಂಡನಿಗೆ ಈಗ ಖಾಸಗಿ ಸಮಯದ್ದೇ ದೊಡ್ಡ ಸಮಸ್ಯೆ.

ಊರೂರು ಸುತ್ತಿ ಬರುವ ಗಂಡನಿಗೆ ಒಂದು ವೇಳೆ ಕೋವಿಡ್ ಸೋಂಕು ಇದ್ದರೆ ಅನ್ನುವ ಕಾರಣಕ್ಕಾಗಿ ಸುಷ್ಮಾಳ ಮನೆಯಲ್ಲಿ ಆತನಿಗೆ ಪ್ರವೇಶ ನಿಷಿದ್ಧ. ಸುಷ್ಮಾಳಿಗೆ ಒಂದೆಡೆ ಪೋಷಕರು– ಮಕ್ಕಳ ಆರೋಗ್ಯದ ಚಿಂತೆಯಾದರೆ, ಮತ್ತೊಂದೆಡೆ ಆರು ತಿಂಗಳಿನಿಂದ ದೂರವಿರುವ ಗಂಡನ ಚಿಂತೆ. ಮನೆಗೆಲಸ, ಮಕ್ಕಳು, ಉದ್ಯೋಗದ ಮಧ್ಯೆ ಅವಳಿಗೆ ಗಂಡನ ಜತೆ ಖಾಸಗಿ ಕ್ಷಣಗಳನ್ನು ಕಳೆಯಲು ಅವಕಾಶವೇ ಇಲ್ಲದಂತಾಗಿದೆ. ಪರವೂರಿನಲ್ಲಿರುವ ಗಂಡನದ್ದೂ ಅದೇ ಸ್ಥಿತಿ.

***

ಕೋವಿಡ್‌ ಕಾರಣಕ್ಕೆ ಎದುರಾದ ಲಾಕ್‌ಡೌನ್‌ನಿಂದಾಗಿ ಕುಟುಂಬ ಸದಸ್ಯರು ಒಟ್ಟಾಗಿ ಸಮಯ ಕಳೆಯುವ ಅವಕಾಶ ಬಂದಿದೆ. ಈ ಹಿಂದೆ ಜತೆಯಾಗಿ ಕಾಲ ಕಳೆಯುವ ಅವಕಾಶದಿಂದ ವಂಚಿತವಾಗಿದ್ದ ದಂಪತಿಗೆ ಇದು ವರದಾನವೂ ಆಗಿದೆ. ಹಾಗಾಗಿಯೇ ಯೋಜಿತವಲ್ಲದ ಗರ್ಭಧಾರಣೆಯ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತವೆ ಕೆಲ ಅಂಕಿ–ಅಂಶಗಳು.

‘ಕೆಲವು ದಂಪತಿಗಳಿಗೆ ಕ್ವಾಲಿಟಿ ಟೈಮ್ ಸಿಕ್ಕರೆ, ಮತ್ತೆ ಕೆಲವರಲ್ಲಿ ಕೋವಿಡ್‌ ಭೀತಿಯಿಂದಾಗಿ ದಾಂಪತ್ಯದಲ್ಲಿ ಅಂತರವೂ ಕಂಡು ಬರುತ್ತಿದೆ’ ಎನ್ನುತ್ತಾರೆ ನಿಮ್ಹಾನ್ಸ್‌ನ ಕ್ಲಿನಿಕಲ್ ಸೈಕಾಲಜಿ ವಿಭಾಗದ ತಜ್ಞವೈದ್ಯ ಡಾ.ಮನೋಜ್ ಕುಮಾರ್ ಶರ್ಮಾ.

‘ಕೋವಿಡ್ ಸೋಂಕು ತಗುಲಬಹುದೆಂಬ ಆತಂಕದ ಕಾರಣಕ್ಕಾಗಿ ಅನೇಕ ಮಧ್ಯವಯಸ್ಕ ಜೋಡಿಗಳಲ್ಲಿ ಲೈಂಗಿಕ ಚಟುವಟಿಕೆಗಳು ಕ್ಷೀಣಿಸಿವೆ. ರಕ್ತದೊತ್ತಡ, ಮಧುಮೇಹದ ಸಮಸ್ಯೆ ಇರುವ ಕೆಲವು ಜೋಡಿಗಳಲ್ಲಿ ಕೋವಿಡ್ ಸೋಂಕಿನ ಕಾರಣಕ್ಕಾಗಿ ದೈಹಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಇದು ಅವರ ದಾಂಪತ್ಯ ಜೀವನದ ಮೇಲೂ ಪರೋಕ್ಷ ಪರಿಣಾಮ ಬೀರುತ್ತಿದೆ. ಸಾಂಗತ್ಯದ ಕೊರತೆಯಿಂದ ಕೆಲವರು ಪೋರ್ನೊಗ್ರಫಿಯ ಮೊರೆಗೂ ಹೋಗುತ್ತಿದ್ದಾರೆ. ವಯಸ್ಕರು ಪೋರ್ನೊಗ್ರಫಿ ನೋಡುವುದು ತಪ್ಪಲ್ಲ. ಆದರೆ, ಅದು ಚಟವಾಗಬಾರದು’ ಎಂದು ಎಚ್ಚರಿಸುತ್ತಾರೆ ಅವರು.

‘ಭಾರತೀಯ ಕುಟುಂಬಗಳಲ್ಲಿ ಹೆಣ್ಣುಮಕ್ಕಳಿಗೆ ಕೌಟುಂಬಿಕ ಜವಾಬ್ದಾರಿ ಹೆಚ್ಚು. ಹಾಗಾಗಿ, ಅವರಿಗೇ ಹೆಚ್ಚಿನ ಒತ್ತಡಗಳಿರುತ್ತವೆ. ಉದ್ಯೋಗಸ್ಥ ಮಹಿಳೆಯಾಗಿದ್ದರೆ ದುಪ್ಪಟ್ಟು ಒತ್ತಡ. ಒಂದೆಡೆ ಕಚೇರಿ ಮತ್ತೊಂದೆಡೆ ಗೃಹಕೃತ್ಯಗಳು ಇವೆರೆಡರ ನಡುವೆ ಗಂಡನೊಂದಿಗೆ ಖಾಸಗಿ ಸಮಯ ಕಳೆಯುವುದು ಕಷ್ಟಕರ. ಕೋವಿಡ್ ಕಾರಣಕ್ಕಾಗಿ ಮನೆಯಿಂದಲೇ ಅನೇಕರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ತಡರಾತ್ರಿ ಆನ್‌ಲೈನ್ ಚಟವಟಿಕೆಗಳು ಹೆಚ್ಚಾಗಿವೆ. ಇನ್ನು ಕೆಲವರು ಒಟಿಟಿ ವೇದಿಕೆಗಳಲ್ಲಿ ಸಿನಿಮಾ, ವೆಬ್‌ ಸಿರೀಸ್ ನೋಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಮತ್ತೆ ಕೆಲವರು ಉದ್ಯೋಗ ಕಳೆದುಕೊಳ್ಳುವ ಭೀತಿ, ಆರ್ಥಿಕ ಸಂಕಷ್ಟದಂಥ ಸ್ಥಿತಿಯನ್ನೂ ಎದುರಿಸುತ್ತಿದ್ದಾರೆ. ಹಾಗಾಗಿ, ಗಂಡ–ಹೆಂಡತಿ ನಡುವಿನ ಖಾಸಗಿ ಸಮಯಕ್ಕೆ ಧಕ್ಕೆ ಉಂಟಾಗುತ್ತಿದೆ’ ಎಂದು ವಿವರಿಸುತ್ತಾರೆ ಶರ್ಮಾ.

‘ಕುಟುಂಬದ ಆರ್ಥಿಕ ಸ್ಥಿತಿ, ಭವಿಷ್ಯ, ಮಕ್ಕಳ ವಿದ್ಯಾಭ್ಯಾಸದ ಜತೆಗೇ ತಮ್ಮ ದಾಂಪತ್ಯ ಬದುಕಿನ ಬಗ್ಗೆಯೂ ಗಂಡ–ಹೆಂಡತಿ ನಡುವೆ ಮುಕ್ತ ಚರ್ಚೆಗಳಾಗಬೇಕು. ಇದರಿಂದ ಪರಸ್ಪರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಗಂಡ–ಹೆಂಡತಿ ಖಾಸಗಿ ಸಮಯ ಕಳೆಯಬಹುದು. ಒಬ್ಬರನ್ನೊಬ್ಬರು ದೂಷಿಸುವ ಬದಲು ಮುಕ್ತ ಮಾತುಕತೆಯೇ ಇದಕ್ಕೆ ಪರಿಹಾರ’ ಎಂದು ಸಲಹೆ ನೀಡುತ್ತಾರೆ ಅವರು.

ಸಮಯವಾದರೂ ಮೀಸಲಿಡಿ

* ಗಂಡ–ಹೆಂಡತಿಯ ನಡುವಿನ ಸಾಂಗತ್ಯ ಬರೀ ದೈಹಿಕವಲ್ಲ, ಮಾನಸಿಕ ಸಾಂಗತ್ಯವೂ ಅಗತ್ಯ

* ಗಂಡ–ಹೆಂಡತಿ ನಡುವೆ ಸಂವಹನ ಅತ್ಯಗತ್ಯ. ಇದಕ್ಕಾಗಿ ದಿನಕ್ಕೆ ಸ್ವಲ್ಪ ಸಮಯವಾದರೂ ಮೀಸಲಿಡಿ

* ಮನೆಗೆಲಸ, ಮಕ್ಕಳ ಪೋಷಣೆ ಜವಾಬ್ದಾರಿ ಹಂಚಿಕೊಳ್ಳಿ. ಇದರಿಂದ ಕೆಲಸಗಳು ಬೇಗ ಮುಗಿದು, ನಿಮ್ಮ ಕ್ವಾಲಿಟಿ ಸಮಯಕ್ಕೆ ಅವಕಾಶ ದೊರೆಯುತ್ತದೆ.

ಡಾ.ಮನೋಜ್‌ಕುಮಾರ್ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT