ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯತನವೇ ಶ್ರೀರಕ್ಷೆ

Last Updated 15 ಜೂನ್ 2019, 13:35 IST
ಅಕ್ಷರ ಗಾತ್ರ

‘ಮೂರು ಸಲ ಸ್ಪರ್ಧಿಸಿದರೂ ನನಗೆ ಶಾಸಕನಾಗಲು ಆಗಲಿಲ್ಲ. ನೀನು ಆಗಿದ್ದೀಯ. ಜನ ಮೆಚ್ಚುವ ಕೆಲಸ ಮಾಡು. ರಾಜಕೀಯ ಹೊಲಸಾಗಿದೆ. ರಾಜಕೀಯದಲ್ಲಿ ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ನೀನೂ ಹಾಗೆಯೇ ಪ್ರಾಮಾಣಿಕನಾಗಿ ಇರಬೇಕು...’ ಹೀಗೆಂದು 1994ರಲ್ಲಿ ಮೊದಲ ಬಾರಿಗೆ ನಾನು ಶಾಸಕನಾದಾಗ ತಂದೆ ಶಿವಪ್ಪ ಶೆಟ್ಟರ್ ಹೇಳಿದ್ದರು. ಆ ಮಾತುಗಳನ್ನು ಇಂದಿಗೂ ನಿತ್ಯ ನೆನಪಿಸಿಕೊಳ್ಳುತ್ತಲೇ ಇರುತ್ತೇನೆ.

ಬೇರೆಯವರಿಗೆ ಅವರು ಬುದ್ಧಿ ಹೇಳುತ್ತಿದ್ದರು ಮಾತ್ರವಲ್ಲ, ಆ ವಿಷಯಗಳಲ್ಲಿ ಅವರೂ ಹಾಗೆಯೇ ನಡೆದುಕೊಳ್ಳುತ್ತಿದ್ದರು. ಹಾಗಾಗಿ ಅವರು ನಮಗೆಲ್ಲ ‘ಮಾಡೆಲ್‌’ ಆಗಿದ್ದರು. ಬಿ.ಕಾಂ. ಮುಗಿಸಿ ಎಲ್‌ಎಲ್‌ಬಿ ಮಾಡಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ಕಾಲೇಜಿಗೆ ಹೋಗಬೇಕು ಎಂದಿದ್ದೆ. ಅವರು ಇಲ್ಲಿಯೇ ಇರುವ ಜೆಎಸ್‌ಎಸ್‌ ಕಾಲೇಜಿಗೆ ಸೇರು. ಸಮಯ ಉಳಿಯುತ್ತದೆ. ಓದಲು, ಬೇರೆ ಕೆಲಸ ಮಾಡಲು ಸಹಾಯವಾಗುತ್ತೆ ಎಂದಿದ್ದರು. ಒಲ್ಲದ ಮನಸ್ಸಿನಿಂದಲೇ ಸೇರಿದ್ದೆ. ಆದರೆ, ನಂತರದಲ್ಲಿ ಓದಲು ಸಮಯ ಸಿಕ್ಕಿದ್ದರಿಂದ ಪದವಿ ಪಡೆದೆ. ಜತೆಗೆ ಪಾಪು ಅವರ ಪ್ರಪಂಚ, ವಿಶ್ವವಾಣಿಯಲ್ಲಿಯೂ ಸುದ್ದಿ ಬರೆಯುತ್ತಿದ್ದೆ. ಅವರ ದೂರದೃಷ್ಟಿಯಿಂದ ನನಗೆ ಬಹಳ ಅನುಕೂಲವಾಯಿತು.

ಅವರು ಎಂದೂ ನಮ್ಮನ್ನು ಬೆದರಿಸುತ್ತಿರಲಿಲ್ಲ. ಹೊಡೆದಿಲ್ಲ. ಗಟ್ಟಿಯಾಗಿಯೂ ಮಾತನಾಡುತ್ತಿರಲಿಲ್ಲ. ಎಲ್ಲವನ್ನೂ ಸ್ನೇಹಿತರಂತೆ ಸಮಾಧಾನವಾಗಿಯೇ ಬುದ್ಧಿ ಮಾತು ಹೇಳುತ್ತಿದ್ದರು. ಮಕ್ಕಳ ಆಸೆ, ಆಕಾಂಕ್ಷೆಗಳನ್ನು ನಾವು ಹೇಳುವ ಮೊದಲೇ ಅರ್ಥ ಮಾಡಿಕೊಂಡು ಈಡೇರಿಸುತ್ತಿದ್ದರು. ಸ್ಥಿತಪ್ರಜ್ಞರಾಗಿದ್ದರು. ಎಲ್ಲರೊಂದಿಗೂ ಸ್ನೇಹದಿಂದ ವರ್ತಿಸುತ್ತಿದ್ದರು. ಅದೇ ಅವರ ಶಕ್ತಿಯಾಗಿತ್ತು. ವಕೀಲರಾಗಿದ್ದ ಅವರು, ನಾನೂ ಅದೇ ವೃತ್ತಿಗೆ ಅವರ ಬಳಿ ಜೂನಿಯರ್‌ ಆಗಿ ಸೇರಿಕೊಂಡಿದ್ದೆ. ಅವರಿಗೆ ಬಂದ ಕೇಸ್‌ಗಳನ್ನು ನಮ್ಮ ಜೂನಿಯರ್‌ ನಡೆಸುತ್ತಾನೆ ಎಂದು ನನಗೆ ಬಿಡುತ್ತಿದ್ದರು. ಕಕ್ಷಿದಾರರು ಅದಕ್ಕೆ ವಿರೋಧಿಸಿದರೂ ಅವರಿಗೆ ನನ್ನ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದರು. ಅವರು ರಿಸ್ಕ್‌ ತೆಗೆದುಕೊಂಡಿದ್ದರಿಂದಲೇ ನಾನೂ ಯಶಸ್ವಿ ವಕೀಲನಾಗಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT