ಶುಕ್ರವಾರ, ನವೆಂಬರ್ 27, 2020
19 °C

ಶ್‌... ಮೌನದ ಕಥೆ ಕೇಳುವ ಸಮಯ

ಸುಂದರ್ ಸರುಕ್ಕೈ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ನನ್ನ ಮನದಲ್ಲಿ ಅಚ್ಚೊತ್ತಿದ ಎರಡು ಭಾವಗಳೆಂದರೆ, ಮೌನ ಮತ್ತು ಭೀತಿ. ಲಾಕ್‌ಡೌನ್ ಘೋಷಣೆಯಾದಾಗ, ಬೆಂಗಳೂರಿನಾದ್ಯಂತ ನೆಲೆಸಿದ ಮೌನದ ಬಗ್ಗೆ ಬಹುತೇಕ ಎಲ್ಲರೂ ಮಾತನಾಡಿದರು. ನಾವು ಮರೆತೇ ಹೋಗಿದ್ದ ಪಕ್ಷಿಗಳನ್ನು ಕಂಡೆವು, ಅವುಗಳ ಇಂಚರಕ್ಕೆ ಕಿವಿಗೊಟ್ಟೆವು. ಎಂದಿನಂತೆ ಗಾಳಿಯು ಕಟ್ಟಡ ನಿರ್ಮಾಣದ ದೂಳಿನಿಂದ ತುಂಬಿರಲಿಲ್ಲ. ವಾಹನಗಳ ಗಡಚಿಕ್ಕುವ ಸದ್ದಿನಿಂದ ಬೀದಿಗಳು ಗಿಜಿಗುಟ್ಟುತ್ತಿರಲಿಲ್ಲ.

ಮೌನ ಎನ್ನುವುದು ಕೇವಲ ಶಬ್ದದ ಅನುಪಸ್ಥಿತಿಯಲ್ಲ. ನಮ್ಮ ಸಮಾಜದಲ್ಲಿ ಬೇರೆಲ್ಲದರಂತೆಯೇ ಮೌನ ಕೂಡ ಲಿಂಗ, ವರ್ಗ, ಜಾತಿ ಹಾಗೂ ಧರ್ಮದ ಛಾಯೆಗಳನ್ನು ಪಡೆಯುತ್ತದೆ. ಮೌನದಲ್ಲೂ ನಾನಾ ವಿಧಗಳಿವೆ ಮತ್ತು ಆ ಪರಿಯ ನಿಶ್ಶಬ್ದಕ್ಕೆ ಕಾರಣಗಳೂ ಹಲವಿವೆ. ಏನನ್ನಾದರೂ ಅಭಿವ್ಯಕ್ತಗೊಳಿಸಲು ಸಾಧ್ಯವಾಗದೇ ಇದ್ದಾಗ ಒಬ್ಬರು ಮೌನವಾಗಿ ಉಳಿಯಬಹುದು. ಬಾಯಿಬಿಟ್ಟು ಹೇಳಿಕೊಳ್ಳಲಾಗದಂತಹ ಆಳವಾದ ವ್ಯಕ್ತಿಗತ ಅನುಭವಗಳೂ ಆಗಿರಬಹುದು. ಬಲವಂತವಾಗಿ ಬಾಯಿ ಮುಚ್ಚಿಸಿದ್ದಾಗಲೂ ಮೌನಕ್ಕೆ ಶರಣಾಗುವ ಸಂಭವ ಇರುತ್ತದೆ. ಶಿಕ್ಷಕರು ಅವಕಾಶ ಕೊಡದಿರುವ ಏಕೈಕ ಕಾರಣಕ್ಕೆ ಮಕ್ಕಳು ತರಗತಿಯಲ್ಲಿ ಸದ್ದಿಲ್ಲದೇ ಕುಳಿತುಕೊಳ್ಳುತ್ತಾರೆ. ಅಧಿಕಾರವು ಮಾತನಾಡಲು ಅವಕಾಶಗೊಡದ ಮೌನದ ಸ್ವರೂಪವು ನಮ್ಮ ಸುತ್ತಮುತ್ತ ಹಲವಾರು ರೀತಿಗಳಲ್ಲಿ ಅಸ್ತಿತ್ವದಲ್ಲಿದೆ.

ಏನನ್ನಾದರೂ ಅಭಿವ್ಯಕ್ತಗೊಳಿಸಲು ಮಾತುಗಳು ಇಲ್ಲದಂತೆ ಆದಾಗ ಅಲ್ಲಿ ನೀರವತೆ ನೆಲೆಸುತ್ತದೆ. ಯಾವುದನ್ನಾದರೂ ವಿವರಿಸಲು ಪದಗಳ ಕೊರತೆ ಉಂಟಾದಾಗಲೂ ನಾವು ಮೌನದ ಮೊರೆ ಹೋಗುತ್ತೇವೆ. ಕೆಲವೊಮ್ಮೆ ಮಾತನಾಡಬೇಕೆಂಬ ಇಚ್ಛೆ ಇದ್ದರೂ ಹೇಗೆ ಮಾತನಾಡಬೇಕೆಂಬುದೇ ನಮಗೆ ತಿಳಿಯುವುದಿಲ್ಲ. ಇನ್ನು ಕೆಲವೊಮ್ಮೆ ಸೊಲ್ಲೆತ್ತಬಾರದೆಂಬ ನಿರ್ಧಾರಕ್ಕೆ ನಾವೇ ಬಂದಿರುತ್ತೇವೆ. ಅದು ಹಾಗೆ ಮಾಡಲು ನಮಗೆ ಸಾಧ್ಯವಾಗದು ಎಂಬ ಕಾರಣಕ್ಕಲ್ಲ, ಪ್ರಜ್ಞಾಪೂರ್ವಕವಾಗಿಯೇ ಅಂತಹದ್ದೊಂದು ನಿರ್ಧಾರಕ್ಕೆ ಬಂದಿರುತ್ತೇವೆ. ನಮ್ಮೊಳಗೆ ಕೆಲವು ರಹಸ್ಯಗಳನ್ನು ಕಾಯ್ದುಕೊಳ್ಳಬೇಕಾದ ಸಂದರ್ಭದಲ್ಲೂ ನಾವು ಮೌನಕ್ಕೆ ಶರಣಾಗುತ್ತೇವೆ. ಗಾಂಧೀಜಿ ತಮ್ಮನ್ನು ಶುದ್ಧೀಕರಿಸಿಕೊಳ್ಳುವ ಸಲುವಾಗಿ ಉದ್ದೇಶಪೂರ್ವಕವಾಗಿಯೇ ಮೌನವಾಗಿರುವ ಪ್ರತಿಜ್ಞೆಯನ್ನು ಸ್ವೀಕರಿಸಿದ್ದರು.

ಕಠಿಣವಾದ ಧ್ಯಾನದ ಅಭ್ಯಾಸಗಳಿರುತ್ತವೆ. ಅಂತಹ ಸಮಯದಲ್ಲಿ ಸಂಪೂರ್ಣ ಮೌನ ಆವರಿಸಿರುತ್ತದೆ. ಹೊರಗಿನ ಪ್ರಪಂಚವು ಮೌನವಾಗಿದ್ದರೂ ನಮ್ಮೊಳಗೆ ಹಲವಾರು ಗದ್ದಲಗಳು ದಟ್ಟೈಸಿರಬಹುದಾದ ಸಾಧ್ಯತೆಯನ್ನು ಇಂತಹ ಅಭ್ಯಾಸಗಳು ನಮಗೆ ನೆನಪಿಸುತ್ತವೆ. ನಮ್ಮ ಹಲವಾರು ಸಂಪ್ರದಾಯಗಳಲ್ಲಿ ಅಳವಡಿಸಿಕೊಂಡಿರುವ ಧ್ಯಾನದ ಉದ್ದೇಶವೇ ನಮ್ಮೊಳಗಿನ ಈ ಬಗೆಯ ಗದ್ದಲವನ್ನು ಕಡಿಮೆ ಮಾಡಿಕೊಳ್ಳುವ ಮತ್ತು ಆಂತರ್ಯದ ಮೌನವನ್ನು ಅನುಭವಿಸುವ ಪ್ರಯತ್ನವೇ ಆಗಿದೆ.

ಶಿಕ್ಷೆಯ ರೂಪದ ಮೌನವೂ ಇದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಮಾತನಾಡಲು ನಿರಾಕರಿಸಿದಾಗ ಅಥವಾ ಇಬ್ಬರು ವಯಸ್ಕರು ಪರಸ್ಪರ ಮಾತನಾಡುವುದನ್ನು ನಿಲ್ಲಿಸಿದಾಗ, ಅವರು ಒಂದು ಶಿಕ್ಷೆಯಾಗಿ ಹಾಗೂ ತಮಗೆ ಇಷ್ಟವಾಗದ ಸಂಗತಿಯನ್ನು ಹೊರಗೆಡಹುವ ಸಾಧನವಾಗಿ ಮೌನವನ್ನು ಬಳಸಿರುತ್ತಾರೆ.

ಕೆಲವು ವಿದ್ಯಾರ್ಥಿಗಳಿಗೆ ಅವರ ಲಿಂಗ, ಜಾತಿ ಅಥವಾ ವರ್ಗದ ಆಧಾರದ ಮೇಲೆ ಕಲಿಸಲು ಶಿಕ್ಷಕರು ನಿರಾಕರಿಸಿದಾಗ, ಅದೂ ಒಂದು ರೀತಿಯ ಮೌನವೇ. ಅಧಿಕಾರಶಾಹಿಯ ಮೌನವು ಮತ್ತೊಂದು ಬಗೆಯ ಪ್ರಬಲ ಸ್ವರೂಪದ ಮೌನವಾಗಿದ್ದು, ಅದು ಸರ್ಕಾರವನ್ನು ತನ್ನ ಕಾರ್ಯಗಳಿಗೆ ಹೊಣೆ ಮಾಡುವ ನಮ್ಮ ಸಾಮರ್ಥ್ಯವನ್ನು ನಾಶಪಡಿಸುತ್ತದೆ. ಹಾಗಿದ್ದರೆ ಕೋವಿಡ್ ಕಾಲದಲ್ಲಿನ ನೀರವತೆಯು ಯಾವ ಬಗೆಯ ಮೌನ ಎಂದು ನಾವು ಅರ್ಥೈಸಿಕೊಳ್ಳುವುದು?

***

ಮೌನ ಎಂಬುದು ಕೇವಲ ಶಬ್ದದ ಅನುಪಸ್ಥಿತಿಯಷ್ಟೇ ಅಲ್ಲ, ಅದಕ್ಕೆ ಸಾಮಾಜಿಕ ಆಯಾಮಗಳಿರುತ್ತವೆ. ಸಮಾಜಕ್ಕೆ ಒಂದು ಧ್ವನಿ ಇದೆ, ಕುಟುಂಬಗಳಿಗೆ ಒಂದು ಧ್ವನಿ ಇರುತ್ತದೆ, ದೇಶವೂ ಒಂದು ಧ್ವನಿಯನ್ನು ಹೊಂದಿರುತ್ತದೆ. ಮೌನವನ್ನು ಸಮಾಜವು ಒಂದು ಸಾಮೂಹಿಕ ಶಕ್ತಿಯಾಗಿ ಬಳಸಿಕೊಳ್ಳುತ್ತದೆ. ಮಹಿಳೆಯರು ಮತ್ತು ಶೂದ್ರರು ವೇದಗಳನ್ನು ಓದಲಾರರು ಎಂದು ಹೇಳಿದಾಗ, ಅದು ಮೌನಗೊಳಿಸಲಾದ ಶಕ್ತಿಯ ಬಗೆಗಿನ ಹೇಳಿಕೆಯಾಗಿರುತ್ತದೆ. ಈ ಜನವರ್ಗಕ್ಕೆ ಅಂತಹ ಅವಕಾಶವನ್ನು ಕೊಡದಿರುವ ಮೂಲಕ ಸಮಾಜವು ಅಂತಹದ್ದೊಂದು ಮೌನವನ್ನು ಸೃಷ್ಟಿಸಿರುತ್ತದೆ. ಉತ್ತಮವಾದ ನಮ್ಮ ಶಾಲೆಗಳು ತಮಗೆ ಹಣ ಪಾವತಿಸುವವರಿಗಷ್ಟೇ ಮೀಸಲಾದಾಗ, ಬುದ್ಧಿವಂತರಾಗಿದ್ದರೂ ಬಡವರಾದ ಲಕ್ಷಾಂತರ ಮಕ್ಕಳ ಧ್ವನಿಗಳನ್ನು ನಾವು ಅಡಗಿಸಿರುತ್ತೇವೆ. ಸಾಮಾಜಿಕ ಸಭ್ಯತೆಯ ಹೆಸರಿನಲ್ಲಿ ಮಹಿಳೆಯರು ಮತ್ತು ಸಮಾಜದ ಕೆಳ ಶ್ರೇಣಿಯಲ್ಲಿರುವವರು ಸೇರಿದಂತೆ ಅನೇಕರ ಮೇಲೆ ನಾವು ಮೌನವನ್ನು ಹೇರುತ್ತೇವೆ.

ಲಾಕ್‌ಡೌನ್‌ ಕಾಲದಲ್ಲಿ ನನ್ನ ಮನಸ್ಸನ್ನು ಬಹುವಾಗಿ ಕಲಕಿದ ಅಂಶವೆಂದರೆ, ಪ್ರತೀ ದಿನ ಪ್ರತೀ ಕ್ಷಣ ದೇಶದಾದ್ಯಂತ ಅಡ್ಡಾಡುವ ಸಾವಿರಾರು ರೈಲುಗಳು ಮತ್ತು ಬಸ್ಸುಗಳು ತಟಸ್ಥವಾಗಿದ್ದು. ನನ್ನ ದೃಷ್ಟಿಯಲ್ಲಿ ರೈಲುಗಳು ಭಾರತದ ಪ್ರತೀಕ. ಅಂತಹ ರೈಲುಗಳು ಸಂಚಾರವನ್ನು ಸ್ಥಗಿತಗೊಳಿಸಿದಾಗ, ಇಡೀ ದೇಶವೇ ಸ್ತಬ್ಧವಾದಂತೆ ಭಾಸವಾಯಿತು. ಈ ಕಾಲಘಟ್ಟವು ಮತ್ತೊಂದು ಬಗೆಯ ಮೌನದ ಜಗತ್ತನ್ನೇ ನಮ್ಮ ಮುಂದೆ ತೆರೆದಿರಿಸಿತು. ಅದೆಂದರೆ, ಸಾಮಾಜಿಕ ಮೌನ. ಸಾವಿರಾರು ವಲಸಿಗರು ಹಸಿವು ಮತ್ತು ನೀರಡಿಕೆಯಿಂದ ಉರಿಬಿಸಿಲಿನಲ್ಲೇ ಸದ್ದಿಲ್ಲದೆ ಮೈಲಿಗಟ್ಟಲೆ ನಡೆದುಕೊಂಡು ಹೋಗಿದ್ದನ್ನು ನಾವು ಕಂಡೆವು. ತಮ್ಮನ್ನು ಹೇಗೆ ಕಡೆಗಣಿಸಲಾಗಿದೆ ಎಂಬುದು ಅರಿವಾದಾಗ ಅವರ ಆಂತರ್ಯದಲ್ಲಿ ಹೆಪ್ಪುಗಟ್ಟಿದ ಮೌನ ಅದಾಗಿತ್ತು.  ಸರ್ಕಾರ ಸಹ ಬಾಯಿ ಹೊಲಿದುಕೊಂಡಿತು, ಸಂಕಷ್ಟದಲ್ಲಿ ಸಿಲುಕಿದ್ದವರನ್ನು ರಕ್ಷಿಸಬೇಕಾದ ಕರ್ತವ್ಯ ಹೊಂದಿದ್ದವರ ಮೌನ ಅದಾಗಿತ್ತು.

ಹಾಗೆ ನೋಡಿದರೆ ಪ್ರತಿದಿನವೂ ಭೀತಿಪಟ್ಟುಕೊಂಡೇ ಬದುಕುವುದಕ್ಕೆ ನಮಗೆ ಯಾವಾಗಲೂ ಸಾಕಷ್ಟು ಕಾರಣಗಳು ಸಿಗುತ್ತವೆ. ಭೂಮಿಯನ್ನು ಹಲವಾರು ಬಾರಿ ನಾಶಪಡಿಸಬಹುದಾದಷ್ಟು ಅಣ್ವಸ್ತ್ರಗಳು ಹಾಗೂ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಇರುವುದನ್ನು ತಿಳಿದು ನಾವು ಭಯಪಡಬೇಕಾಗಿತ್ತು. ಈ ಪ್ರಪಂಚದ ಜಾಗತಿಕ ಸಂಪತ್ತು ಕೆಲವೇ ನೂರು ಜನರ ಕೈಯಲ್ಲಿರುವುದರ ಜೊತೆಗೆ, ಅಸಮಾನತೆ ಭಯಾನಕವಾಗಿ ಹೆಚ್ಚುತ್ತಿರುವುದರ ಬಗ್ಗೆ ಹಾಗೂ ಬಡವರ ಸಂಖ್ಯೆ ಏರುತ್ತಲೇ ಇರುವುದರ ಬಗ್ಗೆ ನಾವು ದಿಗಿಲುಗೊಳ್ಳಬೇಕಾಗಿತ್ತು. ಜಗತ್ತಿನೆಲ್ಲೆಡೆ ಪ್ರಜಾತಾಂತ್ರಿಕ ಸರ್ಕಾರಗಳು ಪತನಗೊಳ್ಳುತ್ತಿರುವುದರ ಬಗ್ಗೆ ಗಾಬರಿಯಿಂದ ಕಂಪಿಸಬೇಕಾಗಿತ್ತು. ಅದೇರೀತಿ ನಮ್ಮ ದೇಶವೂ ಸೇರಿದಂತೆ ಜಗತ್ತಿನ ಎಲ್ಲೆಡೆ ಊಳಿಗಮಾನ್ಯ ಪ್ರವೃತ್ತಿ ಹೆಚ್ಚಾಗುತ್ತಿರುವುದನ್ನು ನೋಡಿ ನಾವು ಹೆದರಿಕೆಯಿಂದ ನಡುಗಬೇಕಾಗಿತ್ತು.

ಆದರೆ ಇವುಗಳಲ್ಲಿ ಯಾವುದೊಂದಕ್ಕೂ ಜಗತ್ತಿನಲ್ಲಿ ಕೋವಿಡ್ ಸೃಷ್ಟಿಸಿದಂತಹ ಭೀತಿಯನ್ನು ಹುಟ್ಟುಹಾಕಲು ಸಾಧ್ಯವಾಗಲಿಲ್ಲ. ಆದರೆ ಇಂತಹ ಬೆಳವಣಿಗೆಗೆ ಸಂಪೂರ್ಣವಾಗಿ ವೈರಸ್‌ ಒಂದೇ ಕಾರಣವಲ್ಲ. ಈ ಜಗತ್ತು ಅದಾಗಲೇ ಒಂದು ಬಗೆಯ ಭೀತಿಯಲ್ಲಿ ಮುಳುಗಿದ್ದುದರಿಂದ ಒಂದು ಮಹಾ ಸಾಂಕ್ರಾಮಿಕ ಎರಗಲು ಕಾಲ ಪಕ್ವಗೊಂಡಿತ್ತು. 

***

ನಮ್ಮ ಸಾಮಾಜಿಕ ಬದುಕಿನಲ್ಲಿ ಭೀತಿಯು ಇಷ್ಟೊಂದು ಪ್ರಾಬಲ್ಯ ಸಾಧಿಸಿದ್ದಾದರೂ ಹೇಗೆ? ತಮ್ಮ ಸಂಪತ್ತನ್ನು ಕಿತ್ತುಕೊಳ್ಳಲು ಸಂಚು ಹೂಡುತ್ತಿದ್ದಾರೇನೋ ಎಂಬಂತೆ ಬಡವರ ಬಗ್ಗೆ ಸಮಾಜದ ಶ್ರೀಮಂತ ವರ್ಗವು ಭಯವನ್ನು ವ್ಯಕ್ತಪಡಿಸುತ್ತದೆ. ಇತರ ಜಾತಿಗಳವರೊಡನೆ ಸಾಮಾಜಿಕವಾಗಿ ಕಲೆತು ಬದುಕುವ ಬಗ್ಗೆ ಮೇಲ್ಜಾತಿಗಳು ಭೀತಿಯ ಮಾತುಗಳನ್ನು ಆಡುತ್ತವೆ. ಪಿತೃಪ್ರಧಾನ ಸಮಾಜಕ್ಕೆ ಒಪ್ಪಿತವಾಗದೇ ಇರುವುದೇನನ್ನೋ ಎಸಗಲಾಗುತ್ತಿದೆ ಎಂಬ ಭಯವನ್ನು ಹೆಣ್ಣುಮಕ್ಕಳಲ್ಲಿ ಮೂಡಿಸುವ ಕೆಲಸವಂತೂ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಕೋವಿಡ್‌ನ ಈ ಕಾಲದಲ್ಲಿ ನಮ್ಮ ಕೆಲಸ ಉಳಿಯುವುದೇ, ನಮ್ಮ ವ್ಯಾಪಾರ– ವಹಿವಾಟಿಗೆ ಭವಿಷ್ಯವಿದೆಯೇ ಎಂಬ ಬಗ್ಗೆ ಆತಂಕ ಇದ್ದೇ ಇದೆ. ವಿಶ್ವದಲ್ಲೇ ಅತಿ ಹೆಚ್ಚು ಅಪಘಾತಗಳು ಸಂಭವಿಸುವ ರಾಷ್ಟ್ರಗಳಲ್ಲಿ ಒಂದಾದ ನಮ್ಮ ಬೀದಿಗಳ ಬಗ್ಗೆ ನಾವು ಆತಂಕಕ್ಕೆ ಒಳಗಾಗುತ್ತೇವೆ. ಗಾಳಿಯ ಬಗ್ಗೆ ನಾವು ದಿಗಿಲುಗೊಳ್ಳುತ್ತೇವೆ, ನೀರಿನ ಬಗ್ಗೆಯೂ ನಮಗೆ ಅಂಜಿಕೆ.

ರಾಜಕೀಯಕ್ಕೆ ಭೀತಿಯ ಬೆಲೆ ಚೆನ್ನಾಗಿಯೇ ತಿಳಿದಿದೆ.ನಮ್ಮ ಸರ್ಕಾರವು ಭೀತಿಯ ಭಾವವನ್ನು ಮೂಡಿಸುವ, ಆ ಭಾವದ ಬೆಂಕಿಗೆ ತುಪ್ಪ ಸುರಿದು ಅದನ್ನು ಕೆರಳಿಸುವ ಕೆಲಸವನ್ನೇ ಮಾಡುತ್ತಿದೆ. ಹಿಂದೂಗಳಿಗೆ ಮುಸ್ಲಿಮರ ಬಗ್ಗೆ, ಮುಸ್ಲಿಮರಿಗೆ ಹಿಂದೂಗಳ ಬಗ್ಗೆ ಹಾಗೂ ದಲಿತರಿಗೆ ‌‌ಪ್ರಬಲ ಜಾತಿಗಳ ಆವೇಶದ ಬಗ್ಗೆ ದಿಗಿಲು ಹುಟ್ಟಿಸುವಂತಹ ಸನ್ನಿವೇಶಗಳನ್ನು ಅವರು ಸೃಷ್ಟಿಸುತ್ತಾರೆ. ಇಂದು ದೇಶದ ಬಗ್ಗೆ ಸತ್ಯದ ಮಾತುಗಳನ್ನು ಆಡುವ ಜನ ಹೆದರಿಕೆಯಿಂದ ಬದುಕಬೇಕಾಗಿದೆ. ದೇಶದಲ್ಲಿ ತಾವು ಕಣ್ಣಾರೆ ಕಂಡದ್ದನ್ನು ಬರೆಯುವ ಪತ್ರಕರ್ತರು ತಮ್ಮ ಜೀವದ ಬಗ್ಗೆ ಭಯಪಡಬೇಕಾಗಿದೆ. ಆಡಳಿತ ವರ್ಗದ ಅಪಾಯಕಾರಿ ನೀತಿಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಿರಿಯ ಮಹಿಳೆಯರು, ಪುರುಷರಂತೆಯೇ ದಿಟ್ಟವಾಗಿ ಮುನ್ನಡೆಯಲು ಸಿದ್ಧರಾದ ಮಹಿಳೆಯರು ತಮ್ಮ ಮೇಲೆ ಯಾವಾಗ ದಾಳಿಯಾಗುತ್ತದೋ ಎಂಬ ಆತಂಕದಲ್ಲಿ, ಇನ್ನೂ ಹೆಚ್ಚಿನ ಕಾದಾಟಕ್ಕೆ ಸಿದ್ಧರಾಗಬೇಕಾಗಿ ಬಂದಿದೆ.

ಆರೋಗ್ಯ ಕೂಡ ಹೆಚ್ಚಾಗಿ ಭೀತಿಯೊಂದಿಗೇ ತಳುಕು ಹಾಕಿಕೊಂಡಿದೆ. ವೈದ್ಯರ ಬಳಿಗೆ ಮತ್ತು ಆಸ್ಪತ್ರೆಗಳಿಗೆ ಜನ ಮುಗಿಬೀಳುವುದು, ಅಪಾರ ಪ್ರಮಾಣದ ರೋಗನಿರ್ಣಯ ಪರೀಕ್ಷೆಗಳಿಗೆ ಒಳಗಾಗುವುದೂ– ಅವುಗಳಲ್ಲಿ ಹೆಚ್ಚಿನವು ಅನಗತ್ಯವಾಗಿದ್ದರೂ– ಇಂತಹ ಒಂದು ನಿರಂತರವಾದ ಆತಂಕದ ಭಾವನೆಯಿಂದಲೇ. ನಾವು ವಿಜ್ಞಾನವನ್ನು ನಂಬಬೇಕು ಎಂಬ ಮಾತು ಕೋವಿಡ್‌ನ ಈ ಸಮಯದಲ್ಲಿ ನಮಗೆ ಪದೇ ಪದೇ ಕೇಳಿಬರುತ್ತಿದೆ. ವಿಜ್ಞಾನವನ್ನು ನಂಬುವುದು ಜನರ ಅನುಭವಗಳು ಹಾಗೂ ಆಯುರ್ವೇದದಂತಹ ಪರ್ಯಾಯ ವೈದ್ಯಕೀಯ ಕ್ರಮಗಳ ಜ್ಞಾನವನ್ನು ಆಧರಿಸಿದ ಸಾಮಾನ್ಯ ಜ್ಞಾನದ ಬಗೆಗೆ ಭೀತಿ ಪಡುವುದರ ತತ್ಸಮಾನ ಎಂಬಂತೆ ಆಗಿಹೋಗಿದೆ. 

ಕೋವಿಡ್ ಸಂಕಥನವು ಯಾರು ಕಾನೂನು ನಿಬಂಧನೆಗಳನ್ನು ಪಾಲಿಸುವುದಿಲ್ಲವೋ ಯಾರನ್ನು ನಿಯಂತ್ರಿಸಬೇಕೋ ಅಂತಹವರ ಕುರಿತದ್ದೇ ಆಗಿದೆ. ನಿರೀಕ್ಷೆಯಂತೆಯೇ, ಕೊರೊನಾ ವೈರಸ್ ಹರಡುವಿಕೆಗೆ ಕೆಲವು ರಾಜಕೀಯ ಗುಂಪುಗಳು ವರ್ಗ ಮತ್ತು ಧಾರ್ಮಿಕ ಆಯಾಮವನ್ನು ಸೇರಿಸಿದವು. ಕೋವಿಡ್ ಸಾಂಕ್ರಾಮಿಕವು ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ಮಹಾಮಾರಿಯಲ್ಲ, ಒಬ್ಬರು ಮತ್ತೊಬ್ಬರ ಬಗ್ಗೆ ಭೀತಿಪಡಲು ನಾವು ಆರಂಭಿಸಿದ ಸಾಮಾಜಿಕವಾದ ಮಹಾಮಾರಿ ಸಹ ಆಗಿದೆ. ಈ ಸಾಮಾಜಿಕ ಅವಿಶ್ವಾಸದ ಒಂದು ಅಭಿವ್ಯಕ್ತಿಯಾದ ‘ಸಾಮಾಜಿಕ ಅಂತರ’ವನ್ನು ಒಂದು ಕಾನೂನುಬದ್ಧ ವೈದ್ಯಕೀಯ ನಿಯಮ ಎಂದೇ ಮಾಡಲಾಯಿತು. ಆದರೆ ವಾಸ್ತವವಾಗಿ ಸಾಮಾಜಿಕ ಪ್ರಪಂಚದ ಬಗೆಗೇ ನಮಗೆ ಭಯ ಆರಂಭವಾಯಿತು. ಆಗ ನಾವು ನಮ್ಮೊಳಗೇ, ನಮ್ಮ ಕುಟುಂಬಗಳ ಒಳಗೇ, ನಮ್ಮ ಸ್ಮಾರ್ಟ್‌ಫೋನ್‌ಗಳ ಒಳಗೇ, ನಮ್ಮ ಕಂಪ್ಯೂಟರ್‌ಗಳ ಒಳಗೇ ಹುದುಗಿಕೊಂಡೆವು. ಈ ಬಗೆಯ ಮೌನ ಮತ್ತು ಭೀತಿಯ ಪ್ರಬಲವಾದ ಸಂಯೋಜನೆಯು ಇಂತಹ ಜಗತ್ತನ್ನು ನಮಗೀಗ ಸೃಷ್ಟಿಸಿದೆ. ಸರ್ಕಾರವು ಹೊರಭಾಗದಿಂದ ನಮ್ಮ ಮನೆಗಳನ್ನು ಲಾಕ್‌ಡೌನ್‌ ಮಾಡಿದಂತೆಯೇ ನಾವು ನಮ್ಮ ಮನೆಗಳೊಳಗೆ ಅಗಳಿ ಹಾಕಿಕೊಂಡು ಬಂದಿಯಾದೆವು.

ಭೀತಿಯು ಕಣ್ಕಟ್ಟು ಆಟಗಳನ್ನು ಆಡಲು ಸುಲಭವಾದ ಒಂದು ಭಾವನೆ. ನಮ್ಮ ಜಗತ್ತಿನಲ್ಲಿ ಹಾಸುಹೊಕ್ಕಾಗಿರುವ ದಿಗಿಲಿನ ವಾತಾವರಣಕ್ಕೆ ಕೋವಿಡ್‌ ಕೂಡ ಸೇರಿಕೊಂಡಿದ್ದರಿಂದ, ಭೀತಿ ಮತ್ತು ಮೌನದ ಭಾವನೆಗಳು ಮೇಲುಗೈ ಸಾಧಿಸುವುದು ಕಷ್ಟದ ಮಾತಾಗಿರಲಿಲ್ಲ. ಒಂದುರೀತಿ ಅನಿಶ್ಚಿತವಾದ, ಅಸ್ಪಷ್ಟವಾದ ಭವಿಷ್ಯ ಮತ್ತು ಏನೋ ಒಂದು ರೀತಿ ಮುಸುಕು ಆವರಿಸಿದಂತಾಗುವುದು ಹೆಚ್ಚು ಭೀತಿಗೆ ಕಾರಣವಾಗುತ್ತದೆ.

ಈ ಭೀತಿಯು ಹೊಸ ಆಲೋಚನೆಗಳ ಬಗೆಗಿನ ಅಂಜಿಕೆಗೂ ಎಡೆಮಾಡಿಕೊಟ್ಟಿರುವುದು ಅತ್ಯಂತ ಕಳವಳಕಾರಿ. ಧೀರೋದಾತ್ತ ಎನಿಸುವಂತಹ ಹೊಸ ಆಲೋಚನೆಗಳಲ್ಲಿ ಮಗ್ನರಾಗಿರಬೇಕಾಗಿದ್ದ ನಮ್ಮ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳ ತರುಣರು ಅತ್ಯಂತ ಸಂಪ್ರದಾಯನಿಷ್ಠರಾಗುತ್ತಾ ಚಿಪ್ಪಿನಲ್ಲಿ ಹುದುಗಿಕೊಂಡಿದ್ದಾರೆ. ಮೌನಕ್ಕೆ ಜಾರಿದ್ದಾರೆ. ಭೀತಿ ಮತ್ತು ಮೌನ ಎರಡೂ ಪರಸ್ಪರ ಪೋಷಿಸಿಕೊಳ್ಳುವ ಗುಣಗಳು. ಇವೆರಡರಲ್ಲಿ ಯಾವುದೂ ಸೌಹಾರ್ದಯುತ ಭವಿಷ್ಯವನ್ನು ನಮಗಾಗಿ ಸೃಷ್ಟಿಸುವುದು ಅಸಾಧ್ಯವೇ ಸರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು