ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ: ಗಾಂಧಿ ಹೆಜ್ಜೆ ಜಾಡು ಹಿಡಿದು...

Last Updated 26 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ತಮಿಳುನಾಡು, ಕರ್ನಾಟಕ, ಆಂಧ್ರದಲ್ಲಿ ತಿರುವಳ್ಳುವರ್, ಸರ್ವಜ್ಞ, ವೇಮನನಂತಹ ಕ್ರಾಂತಿಕಾರಕ ಕವಿವರ್ಯರು ಆಗಿಹೋಗಿದ್ದಾರೆ. ಕೇರಳದ ನಾರಾಯಣಗುರು, ಕರ್ನಾಟಕದ ಕುದ್ಮುಲ್ ರಂಗರಾವ್, ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಆರ್.ಗೋಪಾಲಸ್ವಾಮಿ ಅಯ್ಯರ್ ಮೊದಲಾದ ಪ್ರೀತಿಯ ವ್ಯಕ್ತಿತ್ವಗಳು ಅಮಾನವೀಯ ಅಸ್ಪೃಶ್ಯತೆ ಆಚರಣೆ, ಶ್ರೇಣೀಕೃತ ಜಾತಿ ವ್ಯವಸ್ಥೆ, ಅರ್ಥವಿಲ್ಲದ ಮೌಢ್ಯಗಳನ್ನು ಹೋಗಲಾಡಿಸಲು, ಮಾನವ ಸೌಹಾರ್ದದ ನೆಲೆಯಲ್ಲಿ ದಿಟ್ಟ ಕೆಲಸ ಮಾಡಿರುವುದು ದಕ್ಷಿಣ ಭಾರತದ ಹೆಗ್ಗಳಿಕೆ.

ಭಾರತದ ಇಂತಹ ಭೂಪ್ರದೇಶದ ಮೇಲೆ ಮಹಾತ್ಮ ಗಾಂಧಿ ಅವರು ಬೀರಿದ ಪ್ರಭಾವ ಬಲು ದೊಡ್ಡದು. ಹಾಗೆಯೇ ಈ ಭಾಗದ ಮಾನವೀಯ ನೆಲೆಗಳಿಂದ ಗಾಂಧೀಜಿ ಕೂಡ ಪ್ರಭಾವಕ್ಕೆ ಒಳಗಾಗಿದ್ದುದು ವಿಶೇಷ.

ಬ್ಯಾರಿಸ್ಟರ್ ಆಗಿ ಇಂಗ್ಲೆಂಡಿನಿಂದ ಭಾರತಕ್ಕೆ ಬಂದ ಸೂಕ್ಷ್ಮಗ್ರಾಹಿ ಗಾಂಧೀಜಿ ಅವರಿಗೆ ಗೋಪಾಲಕೃಷ್ಣ ಗೋಖಲೆ ಅವರು, ‘ಇಡೀ ಭಾರತವನ್ನು ಸುತ್ತಿ ಬಾ. ನಿನ್ನ ಸಾಮಾಜಿಕ ಗ್ರಹಿಕೆ ಇನ್ನಷ್ಟು ಆಳವಾಗುತ್ತದೆ’ ಎಂಬ ಸಲಹೆ ನೀಡಿದ್ದರು. ಆಗ ಗಾಂಧೀಜಿ, ಇಡೀ ಗ್ರಾಮಭಾರತವನ್ನು ಮೋಹದ ರೀತಿಯಲ್ಲಿ ಸಂಚರಿಸಿದ್ದರು. ದಕ್ಷಿಣ ಭಾರತದಲ್ಲೂ ತುಂಬಾ ಆಸ್ಥೆಯಿಂದಲೇ ಓಡಾಡಿದ್ದರು.

ಅಸ್ಪೃಶ್ಯತೆ ನಿವಾರಣೆ, ಹರಿಜನ ನಿಧಿ ಸಂಗ್ರಹ, ಖಾದಿ ಪ್ರಚಾರ ಹಾಗೂ ಸ್ವಾತಂತ್ರ್ಯ ಚಳವಳಿಯ ಜಾಗೃತಿಯ ಉದ್ದೇಶದಿಂದ ಅವರು ಕರ್ನಾಟಕ, ತಮಿಳುನಾಡು, ಕೇರಳ, ಅವಿಭಜಿತ ಆಂಧ್ರಪ್ರದೇಶಕ್ಕೆ 1896ರಿಂದ 1946ರವರೆಗೆ ಐದು ದಶಕಗಳಲ್ಲಿ ಐವತ್ತಕ್ಕೂ ಹೆಚ್ಚು ಸಲ ಪ್ರವಾಸ ಮಾಡಿದ್ದರು.

ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಚಳವಳಿಯಲ್ಲಿ ತೊಡಗಿದ್ದಾಗಲೇ ಅವರ ಬೆಂಬಲಿಗರಾಗಿದ್ದವರಲ್ಲಿ ತಮಿಳುನಾಡಿನ ವಳ್ಳಿಯಮ್ಮಾಳ್, ನಾಗಪ್ಪನ್ ನಾರಾಯಣಸ್ವಾಮಿ ಸೇರಿದ್ದರು. 1896ರಲ್ಲಿ ಮೊದಲ ಬಾರಿಗೆ ‘ಮದ್ರಾಸ್ ಮಹಾಸಭಾ’ದಲ್ಲಿ ಭಾಗವಹಿಸಿದ್ದ ಗಾಂಧೀಜಿ ಖಾದಿ ಪ್ರಚಾರ, ಹರಿಜನ ಸುಧಾರಣೆಯ ಬಗ್ಗೆ ಮಾತನಾಡಿದ್ದರು. ನಂತರ ಇಪ್ಪತ್ತು ಸಲ ತಮಿಳುನಾಡು ಪ್ರವಾಸ ಮಾಡಿ, ಇನ್ನೂರಕ್ಕೂ ಹೆಚ್ಚು ಪ್ರದೇಶಗಳಿಗೆ ಭೇಟಿ ನೀಡಿದ್ದರು. 1915ರಲ್ಲಿ ಗಾಂಧೀಜಿ ಮದ್ರಾಸ್‍ಗೆ ರೈಲಿನಲ್ಲಿ ಬಂದಿಳಿದು ಕುದುರೆ ಸಾರೋಟಿನಲ್ಲಿ ಮೆರವಣಿಗೆ ಬರುತ್ತಿದ್ದಾಗ, ಅಸಂಖ್ಯಾತ ಅಭಿಮಾನಿಗಳು ಸಾರೋಟಿನಿಂದ ಕುದುರೆಯನ್ನು ಬಿಚ್ಚಿ ತಾವೇ ಸಾರೋಟು ಎಳೆಯುತ್ತಾ ಸಾಗಿದ್ದರು.

ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ತಮಿಳು ಭಾಷೆಯ ಬಗ್ಗೆ ಒಲವು ಹೊಂದಿದ್ದ ಅವರು, ಜಿ.ಯು.ಪೋಪ್‍ ಅವರ ‘ತಮಿಳ್ ಕೈಯೇಡು’ ಕೃತಿಯಿಂದ ಆಕರ್ಷಿತರಾಗಿದ್ದರು. 1937ರಲ್ಲಿ ಮದ್ರಾಸ್‍ನಲ್ಲಿ ನಡೆದ ‘ತಮಿಳು ಸಾಹಿತ್ಯ ಸಮ್ಮೇಳನ’ದಲ್ಲಿ ಭಾಗವಹಿಸಿದ್ದ ಗಾಂಧೀಜಿ, ಉ.ವೇ.ಸ್ವಾಮಿನಾಥನ್ ಅವರ ಭಾಷಣವನ್ನು ಕೇಳಿ ಪ್ರಭಾವಿತರಾಗಿ, ‘ಈ ಹಿರಿಯ ವಿದ್ವಾಂಸರ ಮಾರ್ಗದರ್ಶನದಲ್ಲಿ ತಮಿಳು ಭಾಷೆಯನ್ನು ಕಲಿಯುವ ಇಚ್ಛೆ ನನಗಿದೆ’ ಎಂದಿದ್ದರು. 1916ರಲ್ಲಿ ಮದ್ರಾಸ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಮಾತೃಭಾಷಾ ಶಿಕ್ಷಣ ವ್ಯವಸ್ಥೆ ಜಾರಿಯಾಗದಿದ್ದರೆ, ಭಾರತ ಅಭಿವೃದ್ಧಿ ಹೊಂದುವುದಿಲ್ಲ. ನಾವು ಸ್ವಯಂ ಆಡಳಿತ ನಡೆಸಲು ಕಷ್ಟವಾಗುತ್ತದೆ’ ಎಂದಿದ್ದರು. ತಮಿಳುನಾಡಿನಲ್ಲಿ ತಮಿಳು ಮಾತೃಭಾಷಾ ಶಿಕ್ಷಣ ವ್ಯವಸ್ಥೆ ಹೆಚ್ಚು ಗಟ್ಟಿಯಾಗಲು ಅವರ ಈ ಮಾತೇ ಪ್ರೇರಣೆಯಾಯಿತು.

1919ರಲ್ಲಿ ಬ್ರಿಟಿಷ್ ಸರ್ಕಾರ ಜಾರಿ ಮಾಡಿದ ‘ರೌಲತ್ ಚಳವಳಿ’ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಲು ಮದ್ರಾಸ್‍ಗೆ ಬಂದಿದ್ದಾಗ ರಾಜಾಜಿ ಅವರ ಮನೆಯಲ್ಲಿ ಸಮಾಲೋಚನಾ ಸಭೆ ನಡೆದಿತ್ತು. ಹಲವು ವಿದ್ವಾಂಸರು, ಅಭಿಮಾನಿಗಳು ಭಾಗವಹಿಸಿದ್ದರು. ‘ಮಾನ್ಯ ಗಾಂಧೀಜಿಯವರೇ, ಈ ಸಂಜೆ ಒಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ನೀವು ಅದರ ಅಧ್ಯಕ್ಷತೆ ವಹಿಸಿಕೊಳ್ಳಲು ಸಾಧ್ಯವೇ?’ ಎಂದು ವ್ಯಕ್ತಿಯೊಬ್ಬರು ಕೇಳಿಕೊಂಡಿದ್ದರು. ‘ನಿಗದಿತ ಕೆಲಸವಿದೆ. ನಾಳೆ ನಿಮ್ಮ ಸಭೆಯನ್ನು ಇಟ್ಟುಕೊಳ್ಳಬಹುದೇ?’ ಎಂದು ಗಾಂಧೀಜಿ ಕೇಳಿದಾಗ, ‘ಅದು ಸಾಧ್ಯವಿಲ್ಲ. ಯೋಜಿಸಿದಂತೆ ಸಭೆ ನಡೆಯಬೇಕಿದೆ. ತಾವು ಪ್ರಾರಂಭಿಸಿರುವ ಚಳವಳಿಯನ್ನು ನಾನು ಅಭಿನಂದಿಸುತ್ತೇನೆ’ ಎಂದು ಹೇಳಿ ಹೊರಟು ಹೋಗಿದ್ದರು. ಅವರು ಹೋದ ನಂತರ ಕುತೂಹಲದಿಂದ ಗಾಂಧೀಜಿ, ‘ಅವರು ಯಾರು’ ಎಂದು ರಾಜಾಜಿ ಅವರನ್ನು ಕೇಳಿದಾಗ, ‘ಅವರು ತಮಿಳುನಾಡಿನ ಕ್ರಾಂತಿಕಾರಿ ಕವಿ ಸುಬ್ರಹ್ಮಣ್ಯ ಭಾರತೀಯಾರ್’ ಎಂದು ರಾಜಾಜಿ ಹೇಳಿದರು. ‘ಹೌದಾ... ಇವರನ್ನು ತುಂಬ ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು’ ಎಂದು ಗಾಂಧೀಜಿ ಹೇಳಿದ್ದರು. ಇದು ಭಿನ್ನಾಭಿಪ್ರಾಯಗಳ ನಡುವೆ ಕೂಡ ಮನುಷ್ಯಪರ ನಿಲುವಿನ ಬಗ್ಗೆ ಅವರಿಗಿದ್ದ ಕಾಳಜಿಗೆ ದ್ಯೋತಕ.

1921ರಲ್ಲಿ ಗಾಂಧೀಜಿ ಅವರು ತಮಿಳುನಾಡಿಗೆ ಬಂದಿದ್ದಾಗ, ಮದುರೆಗೆ ರೈಲಿನಲ್ಲಿ ಪ್ರಯಾಣಿಸಿದ್ದರು. ದಾರಿಯಲ್ಲಿ ಬಹುಪಾಲು ಜನಸಾಮಾನ್ಯರು ಸೊಂಟದಲ್ಲಿ ಒಂದು ತುಂಡು ಬಟ್ಟೆಯನ್ನು ಮಾತ್ರ ಧರಿಸಿ ದುಡಿಯುತ್ತಿದ್ದ ದೃಶ್ಯವನ್ನು ಕಂಡಿದ್ದರು. ಈ ಮುಂಚೆ ಉದ್ದವಾದ ಪಂಚೆ, ಮೇಲಂಗಿ, ತಲೆಗೆ ದೊಡ್ಡಪೇಟವನ್ನು ಧರಿಸುತ್ತಿದ್ದ ಗಾಂಧೀಜಿ, ನನ್ನ ದೇಶದ ಬಹುಸಂಖ್ಯಾತ ಜನಸಾಮಾನ್ಯರಿಗಿಲ್ಲದ ತುಂಬು ಬಟ್ಟೆ ನನಗೂ ಬೇಡ ಎಂದು ಅದನ್ನು ಕಳಚಿ, ಸೊಂಟಕ್ಕೆ ಒಂದು ಕಚ್ಚೆಪಂಚೆ, ಮೇಲೊಂದು ದುಪ್ಪಟಿಯನ್ನು ಹೊದ್ದುಕೊಳ್ಳುವ ಬಹುದೊಡ್ಡ ಚಾರಿತ್ರಿಕ ನಿರ್ಧಾರವನ್ನು ಮಾಡಿದರು. ಇಂದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಗಾಂಧೀಜಿಯವರ ಈ ಸರಳ ಉಡುಪಿಗೆ ತಮಿಳುನಾಡಿನ ಜನಸಾಮಾನ್ಯರ ಬದುಕು ಪ್ರೇರಣೆ.

ವಿಶ್ವಪ್ರಸಿದ್ಧ ಮದುರೆ ಮೀನಾಕ್ಷಿಯಮ್ಮನವರ ದೇವಾಲಯಕ್ಕೆ ಬರಲು ಅಭಿಮಾನಿಗಳು ಗಾಂಧೀಜಿಯನ್ನು ಕೋರಿದ್ದರು. ತಮಿಳುನಾಡಿನ ಪ್ರಸಿದ್ಧ ಕುಟ್ರಾಲ ಜಲಪಾತದಲ್ಲಿ ಮಿಂದು, ಅದರ ಪಕ್ಕ ಇರುವ ದೇವಸ್ಥಾನದಲ್ಲಿ ಪೂಜೆ ಮಾಡಲು ಅಭಿಮಾನಿಗಳು ಒತ್ತಾಯಿಸಿದ್ದರು. ಹರಿಜನ ಬಾಂಧವರಿಗೆ ಅಲ್ಲಿ ಪ್ರವೇಶವಿಲ್ಲವೆಂದು ಗೊತ್ತಾದಾಗ, ಅಲ್ಲಿಗೆ ಹೋಗಲು ನಿರಾಕರಿಸಿದ್ದರು. ಆದರೆ, ಸಾವಿರಾರು ಅಭಿಮಾನಿಗಳು ಹೋರಾಟ ಮಾಡಿ, ಗಾಂಧೀಜಿಯವರ ಇಚ್ಛೆಯಂತೆ ದೇವಾಲಯ ಪ್ರವೇಶಕ್ಕೆ ಹರಿಜನರಿಗೆ ಅವಕಾಶ ಕಲ್ಪಿಸಿದರು. ಆಗ ಗಾಂಧೀಜಿ ಹರಿಜನರೊಂದಿಗೆ ದೇವಾಲಯ ಪ್ರವೇಶಿಸಿ, ತಮಿಳುನಾಡಿನ ಜನರ ಹೋರಾಟದ ಮನೋಭಾವವನ್ನು ಪ್ರಶಂಸಿಸಿದ್ದರು.

ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮೈಸೂರು ಪ್ರಾಂತ್ಯ ಸೇರಿದಂತೆ ಕರ್ನಾಟಕದಲ್ಲಿ ಗಾಂಧೀಜಿ 1915ರಿಂದ 1937ರವರೆಗೆ ಹದಿನಾರು ಸಲ ಪ್ರವಾಸ ಮಾಡಿದ್ದರು. ಇನ್ನೂರಕ್ಕೂ ಹೆಚ್ಚು ಪ್ರದೇಶಗಳಿಗೆ ಭೇಟಿ ನೀಡಿದ್ದರು. 1915ರಲ್ಲಿ ಗೋಖಲೆಯವರ ಭಾವಚಿತ್ರವನ್ನು ಅನಾವರಣ ಮಾಡುವುದಕ್ಕಾಗಿ ಬೆಂಗಳೂರಿಗೆ ಬಂದಿದ್ದರು. 1927ರಲ್ಲಿ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ತಗಡೂರು, ಬದನವಾಳು ಖಾದಿ ನೂಲು ತಯಾರಿಕಾ ಕೇಂದ್ರಗಳನ್ನು ಸಂದರ್ಶಿಸಿದ್ದರು. ಅಲ್ಲಿ ಖಾದಿ ನೂಲುತ್ತಿದ್ದವರಲ್ಲಿ ಹರಿಜನ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದುದನ್ನು ಕಂಡು ಹಿಗ್ಗಿದ್ದರು.

ದಣಿವರಿಯದೆ ದೇಶವನ್ನು ಸುತ್ತುತ್ತಿದ್ದ ಗಾಂಧೀಜಿ, 1927ರಲ್ಲಿ ದಕ್ಷಿಣ ಭಾರತದ ಪ್ರವಾಸದಲ್ಲಿದ್ದಾಗ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಗಾಂಧೀಜಿಯನ್ನು ಪರೀಕ್ಷಿಸಿದ ವೈದ್ಯರು ಪ್ರಶಾಂತ ಸ್ಥಳದಲ್ಲಿ ವಿಶ್ರಾಂತಿ ಪಡೆಯುವ ಅಗತ್ಯವಿದೆ ಎಂದು ತಿಳಿಸಿದ್ದರು. ರಾಜಾಜಿ ಹಾಗೂ ಗಂಗಾಧರರಾವ್ ದೇಶಪಾಂಡೆ ಅವರು ಕರ್ನಾಟಕದ ನಂದಿ ಗಿರಿಧಾಮವೇ ಸೂಕ್ತವೆಂದು ಸೂಚಿಸಿದ್ದರು. ಗಾಂಧೀಜಿ ಒಪ್ಪಿ 1927ರಲ್ಲಿ ನಲವತ್ತೈದು ದಿನ ನಂದಿಬೆಟ್ಟದಲ್ಲಿ ತಂಗಿದ್ದರು. ನಂತರ ಬೆಂಗಳೂರಿನ ಕುಮಾರ ಕೃಪಾದಲ್ಲಿ ಎಂಬತ್ತೇಳು ದಿನ, 1936ರಲ್ಲಿ ಎರಡನೆಯ ಬಾರಿ ನಂದಿ ಗಿರಿಧಾಮದಲ್ಲಿ ಇಪ್ಪತ್ತು ದಿನ ವಿಶ್ರಾಂತಿ ಪಡೆದಿದ್ದರು. ಮೈಸೂರು ಮಹಾರಾಜರ ಆಡಳಿತವು ಗಾಂಧೀಜಿ ಆತಿಥ್ಯವನ್ನು ತಮ್ಮ ಪುಣ್ಯದ ಕೆಲಸ ಎಂದು ಭಾವಿಸಿತ್ತು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ತುಂಬು ಆಸಕ್ತಿ ವಹಿಸಿದ್ದರು. ಆ ಅವಧಿಯಲ್ಲಿ ಗಾಂಧೀಜಿ ಪ್ರಭಾವಕ್ಕೆ ಒಳಗಾಗಿದ್ದ ಕರ್ನಾಟಕದ ಎಲ್ಲ ವರ್ಗದ, ಎಲ್ಲ ವಯೋಮಾನದ ಹಲವು ಸ್ತ್ರೀ ಪುರುಷರು ಇದೊಂದು ಸುವರ್ಣ ಅವಕಾಶ ಎಂದು ಭಾವಿಸಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು. ಈ ಅಭಿಮಾನಿಗಳಲ್ಲಿ ಕೆಲವರಾದರೂ ತಮ್ಮ ವಿಲಾಸಿ ಜೀವನ ವ್ಯರ್ಥ ಎಂಬುದನ್ನು ಅರಿತು, ಸರಳ ಜೀವನಕ್ಕೆ ಪರಿವರ್ತಿತರಾದದ್ದು ಗಮನಾರ್ಹವಾದ ಸಂಗತಿ.

ಕರ್ನಾಟಕದ ಕೆಲವರು ಸಾಬರಮತಿ ಆಶ್ರಮ ಸೇರಲು ಬಯಸಿದ್ದರು. ‘ನಾನು ನಿಮ್ಮೂರಿಗೆ ಬಂದು ಹರಿಜನ ಕೇರಿಯನ್ನು ಸ್ವಚ್ಛ ಮಾಡಿದ ಕೆಲಸಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿದವರು ಮಾತ್ರ ನಮ್ಮ ಆಶ್ರಮಕ್ಕೆ ಬರಬಹುದು’ ಎಂದು ಗಾಂಧೀಜಿ ಹೇಳಿದ್ದರು. ಕರ್ನಾಟಕದ ವೀರಮ್ಮ ಯರೇಸೀಮೆ, ಕರಿಯಪ್ಪ ಯರೇಸೀಮೆ ದಲಿತ ದಂಪತಿ ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಯವರ ಪ್ರೀತಿಪಾತ್ರರಾಗಿದ್ದರು. ‘1936ರಿಂದ 1941ನೇ ಇಸವಿಯವರೆಗೆ ಅವರ ಮಗಳಂತೆ ಇದ್ದೆನು. ಆಗ ನನ್ನ ಕೂಡ ಎಷ್ಟು ಪ್ರೇಮದಿಂದ ಇರುತ್ತಿದ್ದರೊ ದೇವರೇ ಬಲ್ಲ. ದಿನಾಲು ನನ್ನನ್ನು ನೋಡದ ವಿನಾ ಅವರಿಗೆ ಸಮಾಧಾನವಾಗುತ್ತಿದ್ದಿಲ್ಲ. ನನಗೆ ಹಿಂದಿ ಬರುತ್ತಿದ್ದಿಲ್ಲ. ತಾವೇ ರಾತ್ರಿ 9 ಗಂಟೆಗೆ ಹಿಂದಿ ಹೇಳಿಕೊಡುತ್ತಿದ್ದರು. ನನ್ನಿಂದ ಅವರು ಕನ್ನಡ ಕಲಿಯುತ್ತಿದ್ದರು’ ಎಂಬ ವೀರಮ್ಮ ಅವರ ಮಾತುಗಳು ಗಾಂಧೀಜಿಯವರ ಅಂತಃಕರಣಕ್ಕೆ ಸಾಕ್ಷಿ.

ವೀರಮ್ಮ ಅವರಿಂದ ಅಲ್ಪಸ್ವಲ್ಪ ಕನ್ನಡ ಕಲಿತ ಗಾಂಧೀಜಿ ತಮ್ಮ ಆಪ್ತರಾಗಿದ್ದ ಗಂಗಾಧರರಾವ್ ಅವರಿಂದ ಇನ್ನಷ್ಟು ಕನ್ನಡ ಕಲಿತು ‘ಮೋ.ಕ.ಗಾಂಧಿ’ ಎಂಬ ಚಂದದ ಅಕ್ಷರದ ಕನ್ನಡ ಸಹಿಯನ್ನು ಕಲಿತಿದ್ದು, ಕನ್ನಡಿಗರ ಮೇಲೆ ಅವರಿಗೆ ಇದ್ದ ಪ್ರೀತಿಗೆ ಸಾಕ್ಷಿಯಂತಿದೆ.

ರಾಜಾಜಿಯವರ ಮಗಳು ಲಕ್ಷ್ಮಿಯು ನಂದಿಬೆಟ್ಟದಲ್ಲಿ ಗಾಂಧೀಜಿಯವರ ಸೇವೆ ಮಾಡುತ್ತಿದ್ದಾಗ, ಅಲ್ಲೇ ಇದ್ದ ಗಾಂಧೀಜಿಯವರ ಮಗ ದೇವದಾಸ್ ಗಾಂಧಿಯನ್ನು ಪ್ರೀತಿಸಿದ್ದರು. ಗಾಂಧೀಜಿಯವರಿಗೆ ವಿಷಯ ಗೊತ್ತಾಗಿ ರಾಜಾಜಿಯವರೊಂದಿಗೆ ಮಾತನಾಡಿ 1933ರಲ್ಲಿ ಸರಳವಾಗಿ ಮದುವೆ ಮಾಡಿಸಿದ್ದರು.

ಅಸ್ಪೃಶ್ಯತೆ ನಿವಾರಣೆಯ ಕೆಲಸಗಳು ದೇಶದಾದ್ಯಂತ ಎಲ್ಲಿ ನಡೆದಿದ್ದರೂ ಗಾಂಧೀಜಿ ಅಲ್ಲಿಗೆ ಧಾವಿಸಿ ಪ್ರೇರೇಪಿತರಾಗುತ್ತಿದ್ದರು. ಕುದ್ಮುಲ್‍ ರಂಗರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಸ್ಪೃಶ್ಯತೆಯ ಪಿಡುಗಿನ ವಿರುದ್ಧ ಹೋರಾಡಿ, ದಲಿತರ ಪಾಲಿಗೆ ಆಶಾಕಿರಣವಾಗಿದ್ದವರು. ತಮಗಿಂತ ಹತ್ತು ವರ್ಷ ದೊಡ್ಡವರಾಗಿದ್ದ ರಂಗರಾವ್ ಅವರ ಈ ಕೆಲಸಗಳಿಂದ ಪ್ರಭಾವಿತರಾಗಿದ್ದ ಗಾಂಧೀಜಿ, 1934ರ ಫೆಬ್ರುವರಿಯಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದರು. ರಂಗರಾವ್ ಅವರ ಡಿಸಿಎಂ ಸಂಸ್ಥೆ ಹಾಗೂ ಅವರ ಸಮಾಧಿಗೆ ಭೇಟಿ ನೀಡಿದ್ದರು. ‘ರಂಗರಾವ್ ಅವರ ರಚನಾತ್ಮಕ ಮಾನವೀಯ ಸೇವಾ ಕಾರ್ಯಗಳಿಂದ ನಾನು ಕೆಲವು ವಿಚಾರಗಳನ್ನು ಅರಿತುಕೊಂಡೆ. ಅಸ್ಪೃಶ್ಯತಾ ನಿವಾರಣೆ ಕಾರ್ಯದಲ್ಲಿ ಅವರು ನಿಜವಾಗಿಯೂ ನನ್ನ ಗುರುಗಳು’ ಎಂದು ಅಂದಿನ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದ್ದರು.

ರಾಷ್ಟ್ರಕವಿ ಎಂ.ಗೋವಿಂದ ಪೈ ಅವರು ತಮ್ಮ ಹಿರಿಯರು ಉಪಯೋಗಿಸುತ್ತಿದ್ದ ಊರುಗೋಲನ್ನು ಸ್ವಾತಂತ್ರ್ಯ ಚಳವಳಿಯಲ್ಲಿದ್ದ ಕಾಲೇಲ್ಕರ್ ಅವರಿಗೆ ಕಾಣಿಕೆಯಾಗಿ ನೀಡಿದ್ದರು. ಕಾಲೇಲ್ಕರ್ ಅವರು ಗಾಂಧೀಜಿ ನಡೆಸಿದ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾಗ, ಈ ಊರುಗೋಲನ್ನು ಗಾಂಧೀಜಿಗೆ ನೀಡಿದ್ದರು. ಐತಿಹಾಸಿಕ ದಂಡಿ ಸತ್ಯಾಗ್ರಹದಲ್ಲಿ ಗಾಂಧೀಜಿ ಹಿಡಿದು ಊರಿಕೊಂಡು ಹೋದ ಊರುಗೋಲು ಕನ್ನಡನಾಡಿನ ಗೋವಿಂದ ಪೈ ಅವರ ಮನೆತನದ ಪರಂಪರೆಯದು ಎಂಬುದು ದಕ್ಷಿಣ ಭಾರತದ ಕನ್ನಡಿಗರಿಗೆ ಬಹುಹೆಮ್ಮೆಯ ಸಂಗತಿ.

ಹೀಗೆ ತಮ್ಮ ಬಹು ತಿಳಿವಳಿಕೆ, ಗಾಢವಾದ ಅನುಭವ, ಅಗಾಧವಾದ ಮಾನವ ಪ್ರೀತಿ, ತೀಕ್ಷ್ಣವಾದ ಚಿಂತನೆಗಳಿಂದ ನೈತಿಕ ಮೌಲ್ಯಗಳ ಬೀಜವನ್ನು ಬಿತ್ತುತ್ತ ಅಹಿಂಸೆ-ಸತ್ಯಾಗ್ರಹದಂತಹ ಮಹತ್ವದ ಶಕ್ತಿಗಳನ್ನು ಪ್ರಪಂಚಕ್ಕೆ ತೋರಿಸಿದ ಮಹಾನ್ ಶಕ್ತಿ ಗಾಂಧೀಜಿ. ಇಂತಹ ಶಕ್ತಿಯು ದಕ್ಷಿಣ ಭಾರತದ ಮೇಲೆ ತನ್ನ ಗಾಢವಾದ ಪ್ರಭಾವವನ್ನು ಬೀರಿರುವುದು ಅವಿನಾಭಾವ ಸಂಬಂಧದ ದ್ಯೋತಕವೇ ಆಗಿದೆ.

ಕೇರಳ, ಆಂಧ್ರ ಪ್ರದೇಶದಲ್ಲಿ ಹೆಜ್ಜೆಗುರುತು...

ಶ್ರೇಣೀಕೃತ ಜಾತಿವ್ಯವಸ್ಥೆಯ ಭೀಕರ ಸ್ಥಿತಿಯಲ್ಲಿದ್ದ ಕೇರಳ ರಾಜ್ಯಕ್ಕೆ ಗಾಂಧೀಜಿ ಐದು ಸಲ ಪ್ರವಾಸ ಮಾಡಿದ್ದರು. ಅಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಕ್ರಾಂತಿಯನ್ನೇ ಮಾಡಿದ ನಾರಾಯಣಗುರುಗಳ ಸಮಾಜ ಸುಧಾರಣೆಯ ಅರಿವು ಗಾಂಧೀಜಿ ಅವರಿಗಿತ್ತು. ತಮಗಿಂತ ಸುಮಾರು ಹದಿನೈದು ವರ್ಷ ಹಿರಿಯರಾಗಿದ್ದ ನಾರಾಯಣ ಗುರುಗಳಿಂದ ಪ್ರಭಾವಿತರಾಗಿದ್ದ ಗಾಂಧೀಜಿ, 1925ರ ಮಾರ್ಚ್‌ನಲ್ಲಿ ತಿರುವನಂತಪುರದ ವರ್ಕೆಲದ ಬ್ರಹ್ಮಗಿರಿಮಠಕ್ಕೆ ಬಂದು ನಾರಾಯಣ ಗುರುಗಳ ದರ್ಶನ ಪಡೆದಿದ್ದರು. ಹೀಗೆ ದಕ್ಷಿಣ ಭಾರತದ ಮಾನವೀಯ ಶಕ್ತಿಗಳಿಂದಲೂ ಗಾಂಧೀಜಿ ಪ್ರಭಾವಿತರಾಗಿದ್ದುದು ವಿಶೇಷ. ಕೇರಳದ ಗಾಂಧಿ ಎಂದೇ ಹೆಸರಾಗಿರುವ ಕೆ.ಕೇಳಪ್ಪನ್ ಅವರ ನೇತೃತ್ವದಲ್ಲಿ ಗುರುವಾಯೂರು ಶ್ರೀಕೃಷ್ಣ ದೇವಾಲಯಕ್ಕೆ ಕೆಳವರ್ಗದವರ ಪ್ರವೇಶಕ್ಕಾಗಿ ನಡೆಯುತ್ತಿದ್ದ ಹೋರಾಟವನ್ನು ಗಾಂಧೀಜಿ ಬೆಂಬಲಿಸಿದ್ದರು.

ಅವಿಭಜಿತ ಆಂಧ್ರಪ್ರದೇಶಕ್ಕೆ ಗಾಂಧೀಜಿ ಹತ್ತಕ್ಕೂ ಹೆಚ್ಚು ಸಲ ಪ್ರವಾಸ ಮಾಡಿದ್ದರು. 1920ರಲ್ಲಿ ತಿರುಪತಿಗೆ ಭೇಟಿ ನೀಡಿದ್ದ ಗಾಂಧೀಜಿ ತಮ್ಮನ್ನು ಒಯ್ಯಲು ತಂದಿದ್ದ ಡೋಲಿಯನ್ನು ನಿರಾಕರಿಸಿದ್ದರು. ಹರಿಜನ ಬಂಧುಗಳೊಟ್ಟಿಗೆ ಸಾಗುವುದು ನನಗೆ ಸಂತಸದ ಕೆಲಸ ಎಂದು ಹೇಳಿ ತಮ್ಮ ಸಹಜ ನಡವಳಿಕೆಯಿಂದ ಸವರ್ಣೀಯರ ಮನಃ ಪರಿವರ್ತನೆಯ ಕೆಲಸ ಮಾಡಿದ್ದರು. ಇಷ್ಟಾಗಿಯೂ ಗಾಂಧೀಜಿಯವರ ಜೊತೆಗಿದ್ದ ಹರಿಜನರಿಗೆ ತಿರುಪತಿಯ ತಿರುಮಲ ವೆಂಕಟೇಶ್ವರಸ್ವಾಮಿ ದೇವಸ್ಥಾನಕ್ಕೆ ಪ್ರವೇಶ ನೀಡಲು ಅಲ್ಲಿನ ವ್ಯವಸ್ಥೆ ನಿರಾಕರಿಸಿತ್ತು. ಆಗ ಗಾಂಧೀಜಿ ಅಹಿಂಸಾತ್ಮಕ ಹೋರಾಟದ ಮೂಲಕ ಅಲ್ಲಿನ ವ್ಯವಸ್ಥೆಯ ಮನಃಪರಿವರ್ತಿಸುವಲ್ಲಿ ಯಶಸ್ವಿಯಾದರು. ಹೀಗೆ ಅಸ್ಪೃಶ್ಯರಾಗಿದ್ದವರಿಗೆ ತಿರುಪತಿ ದೇವಸ್ಥಾನದ ಪ್ರವೇಶ ದೊರಕಿದ್ದು ಭಾರತದಲ್ಲಿಯೇ ಚಾರಿತ್ರಿಕವಾದ ಸಂಗತಿಯಾಗಿದೆ.

ನಿಜಾಮರ ಆಡಳಿತದ ಅಂಕುಶದಲ್ಲಿದ್ದ ಹೈದರಾಬಾದ್ ಜನತೆಯು, ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯ ಪ್ರಭಾವಕ್ಕೆ ಒಳಗಾಗಿ ಧೈರ್ಯದಿಂದ ಸಂಘಟಿತವಾಗಲು ಮುಂದಾಯಿತು. ನಿಜಾಮರ ಆಡಳಿತದಲ್ಲಿ ಉರ್ದುಮಯವಾಗಿದ್ದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯರು ಮಾತೃಭಾಷೆಯ ಶಿಕ್ಷಣದಿಂದ ವಂಚಿತರಾಗಬೇಕಾದ ಸ್ಥಿತಿ ಇತ್ತು. ಗಾಂಧೀಜಿಯವರ ಚಳವಳಿಯಿಂದ ಪ್ರೇರಣೆಗೊಂಡ ವಾಮನ್‍ ನಾಯಕ, ಮಾಡಪಾಟಿ ಹನುಮಂತರಾವ್, ಮುಂದಮುಲ ನರಸಿಂಗರಾವ್ ಮುಂತಾದವರು ಸೇರಿ ‘ವಿವೇಕವರ್ಧಿನಿ ಶಿಕ್ಷಣ ಸಂಸ್ಥೆ’ಯನ್ನು ತೆರೆದರು. ಈ ಸಂಸ್ಥೆಯು ಹಲವು ಬಗೆಯ ಬದಲಾವಣೆಗಳಿಗೆ ದಾರಿ ಮಾಡಿಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT