ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದಾಸರ ಗಣನಾಥ

Last Updated 1 ಸೆಪ್ಟೆಂಬರ್ 2019, 11:56 IST
ಅಕ್ಷರ ಗಾತ್ರ

ಗಣಪತಿಯೆಂದರೆ, ದಾಸಸಾಹಿತ್ಯಾಸಕ್ತರಿಗೂ ಸಂಗೀತಾಭ್ಯಾಸಿಗಳಿಗೂ ನೆನಪಾಗುವ ಹಾಡು, ಪಿಳ್ಳಾರಿಗೀತೆಯೆಂದೇ ಪ್ರಖ್ಯಾತವಾದ, ಪುರಂದರದಾಸರ ಗೀತೆ - ‘ಲಂಬೋದರ ಲಕುಮಿಕರಾ’. ಸಾಮಾನ್ಯವಾಗಿ ವಿಘ್ನವಿನಾಶಕನೆಂದು, ವಿದ್ಯಾಭಿಮಾನಿದೇವತೆಯೆಂದು ಕೊಂಡಾಡಲ್ಪಡುವ ಗಣಪತಿಯನ್ನಿಲ್ಲಿ ’ಲಕುಮಿಕರ’ ಎಂದು ಕರೆದಿರುವುದೊಂದು ವಿಶೇಷ - ಆ ’ಲಕುಮಿ’ - ಧನಲಕ್ಷ್ಮಿಯೋ ಗುಣಲಕ್ಷ್ಮಿಯೋ ವಿದ್ಯಾಲಕ್ಷ್ಮಿಯೋ - ಒಟ್ಟಿನಲ್ಲಿ ಸಂಪತ್ಕರೆ - ಏನು ಸಂಪತ್ತು ಎಂಬುದನ್ನು ಮಾತ್ರ ಪೂಜಕನ ಭಾವಕ್ಕೇ ಬಿಟ್ಟುಬಿಡುತ್ತಾರೆ, ದಾಸರು.

ಗಣೇಶನನ್ನು ಪೊಗಳದ ದಾಸರಿಲ್ಲ, ಆದರೆ ಗಣಪತಿಯನ್ನು ಕುರಿತ ದಾಸರಪದಗಳೆಲ್ಲ ಸಾಮಾನ್ಯವಾಗಿ ಒಂದೇ ದಾರಿಯನ್ನು ತುಳಿಯುವಂಥವು - ಗೌರೀಸುತ, ಶೂರ್ಪಕರ್ಣ, ವಕ್ರತುಂಡ, ವಿಘ್ನನಾಶಕ, ಮೂಷಕವಾಹನ, ಗರಿಕೆ, ಲಡ್ಡು, ಮೋದಕ - ಜೊತೆಗೆ ಗಣಪತಿಯ ಕುರಿತ ಪೌರಾಣಿಕ ಘಟನೆಗಳು. ಮಾಧ್ವಮತಾನು ಯಾಯಿಗಳಾದ ದಾಸರಲ್ಲಿ ಸಾಮಾನ್ಯವಾಗಿ ಕಾಣಬರುವ ಮತ್ತೊಂದು ಅಂಶವೆಂದರೆ ಹರಿಪಾರಮ್ಯ - ಗಣಪನು ಬುದ್ಧಿಪ್ರಚೋದಕ, ಹರಿಸ್ಮರಣೆಯನ್ನೊದಗಿಸಿ ಕೊಡುವವನು ಇತ್ಯಾದಿ.

ಆದರೆ ಹಲಕೆಲವು ವೈಶಿಷ್ಟ್ಯಗಳೂ ಇಲ್ಲದಿಲ್ಲ. ಉದಾಹರಣೆಗೆ, ಹರಿಸರ್ವೋತ್ತಮನೆನ್ನುವವರು ಗಣಪನಿಗೆ ಆದಿಪೂಜೆ ಸಲ್ಲಿಸಬಹುದೇ ಎಂಬ ಪ್ರಶ್ನೆಗೆ ‘ಸಂದೇಹ ಸಲ್ಲ ಶ್ರೀಹರಿಯಾಜ್ಞೆಯಿದಕುಂಟು’ ಎಂದು ಉತ್ತರಿಸುವ ಪುರಂದರದಾಸರು, ಹಿಂದೆ ರಾವಣನು ಗಣಪನನ್ನೇ ಮರೆತು ತಪಗೈದು, ಆತ್ಮಲಿಂಗವನ್ನು ಸಂಪಾದಿಸಿ ಕೊಂಡೊಯ್ಯುತ್ತಿರುವಾಗ ಗಣಪತಿ ‘ಒಂದು ನಿಮಿಷದಿ ಬಂದು ವಿಘ್ನಗಳನಾಚರಿಸಿ, ತಂದ ವರಗಳನೆಲ್ಲ ಧರೆಗೆ ಇಳಿಸಿದ’ ಕಥೆಯನ್ನು ಸ್ವತಃ ಶ್ರೀಕೃಷ್ಣನೇ ಧರ್ಮಜನಿಗರುಹಿ, ಮೊದಲು ಗಣಪತಿಯನ್ನು ಪೂಜಿಸಹೇಳಿದ್ದನ್ನು ತಿಳಿಸುತ್ತಾರೆ (ವಂದಿಸುವುದಾದಿಯಲಿ).

ಹಾಗೆಯೇ, ಡೊಂಕುಮೈಯ ಗಣಪನು ‘ತಟಿ(ಲ್)ಲತಾಂಕಿತ ಕೋಮಲಾಂಗ’ನಾಗುತ್ತಾನೆ - ಮಿಂಚುಬಳ್ಳಿಯಂತಹ ಮೈಯುಳ್ಳವನು - ಮಿಂಚುಬಳ್ಳಿಯಂತೆ ಡೊಂಕಷ್ಟೇ ಅಲ್ಲ, ಕಣ್ಣುಕೋರೈಸುವ ಪ್ರಕಾಶವುಳ್ಳವನು. ಹಾಗೆಯೇ ಲತೆಯಂತೆ ’ಬಳುಕ’ದಿದ್ದರೂ, ಲತೆಯಂತೆ ಕೋಮಲಾಂಗ, ನಮ್ಮ ಬೊಜ್ಜುಮೈ ಗಣಪ. ಇದು ಗಾಂಭೀರ್ಯದೊಳಗಣ ಹಾಸ್ಯ.

ಇನ್ನು ಜಗನ್ನಾಥದಾಸರದ್ದು ವಿದ್ವದೃಷ್ಟಿ. ಇವರ ಗಣಪನು ಭೂತಾಂಬರಾಧಿಪ (ಆಕಾಶಾಭಿಮಾನಿ ದೇವತೆ), ಕಕುಭೀಶ (ದಿಗ್ದೇವತೆ), ಶಬ್ದಗುಣಗ್ರಹಕ (ವೇದಗಳ ಸಾರವನ್ನರಿತವನು), ಭುಜಗಕಟಿಸೂತ್ರ (ಹಾವನ್ನು ಉಡುದಾರವಾಗಿ ಕಟ್ಟಿಕೊಂಡವನು) - ಅಷ್ಟೇ ಅಲ್ಲ, ಈ ಮಾತಂಗಮುಖ (ಆನೆಮೊಗದವನು), ಮಾತಂಗವರದನಾದ (ಗಜೇಂದ್ರವರದನಾದ) ಜಗನ್ನಾಥವಿಟ್ಠಲನೊಡನೆ ಸಾರೂಪ್ಯವನ್ನು ಸಾಧಿಸಿದವನು.

ಇಷ್ಟಾಗಿಯೂ ದಾಸರ ಪದಗಳಲ್ಲಿ ಗಣೇಶನ ಬಗೆಗೆ ಸಾಮಾನ್ಯವಾಗಿ ಕಾಣಬರುವುದು ಭಕ್ತಿಯ, ಆರಾಧನೆಯ ಭಾವವೇ ಹೊರತು, ಕೃಷ್ಣನಲ್ಲಿ ಕಾಣುವ ಕೊಂಡಾಟವಲ್ಲ. ವಿಘ್ನನಾಶಕನಿಗೆ ಸಲ್ಲುವ ಪ್ರಥಮಪೂಜೆಯ ನಿಷ್ಠೆಯನ್ನೇನೋ ದಾಸರೆಲ್ಲರೂ ಪಾಲಿಸಿಕೊಂಡು ಬಂದಿದ್ದಾರೆ. ಆದರೂ ಜನಪ್ರಿಯ ಸಂಸ್ಕೃತಿಯಲ್ಲಿ ಎಷ್ಟೆಲ್ಲಾ ನಗೆ ಸಲುಗೆ ಮುದ್ದು ಪ್ರೀತಿಗಳನ್ನುಕ್ಕಿಸುವ - ಡೊಳ್ಳುಹೊಟ್ಟೆಗೆ ಹಾವುಸುತ್ತಿಕೊಂಡ, ಆನೆಮೊಗದ ಸ್ಥೂಲದೇಹಿ ಗಣಪ ಅದೇಕೋ ದಾಸರ ಕಲ್ಪನಾವಿಲಾಸವನ್ನು ಕೆದರಿದಂತಿಲ್ಲ. ‘ಹೆಂಡ್ರಿಲ್ಲ ಮಕ್ಳಿಲ್ಲ ಗಣನಾಯ್ಕಾ ನೀ ಎದ್ದು ಬಾರಯ್ಯ ಸಿದ್ಧಿಗಣನಾಯ್ಕಾ’ ಎಂದು ಜಗ್ಗಿಸಿ ಬರಸೆಳೆದಪ್ಪುವ ಸಲುಗೆ, ಕೊಂಡಾಟ ಜನಪದದ್ದು. ಆದರೇಕೋ ದಾಸರಲ್ಲಿ ಈತನ ಪೂಜೆ ಬಹುತೇಕ ಗಂಭೀರ. ಇಲ್ಲಿ ಗಣಪನದ್ದು ಕೇವಲ ಔಪಚಾರಿಕಸ್ಥಾನ, ನಿಜವಾಗಿಯೂ ‘ದೇವರಂತೆ ಬಂದು ಠಾವಲಿ ಕೂರುವ’ ಪಾತ್ರವೇ.

ಆದರೆ ಇದಕ್ಕೆ ದೊಡ್ಡ ಅಪವಾದವೆಂದರೆ ಕನಕದಾಸರು. ಅವರು ತಮ್ಮ ವಿಶಿಷ್ಟಶೈಲಿಯಲ್ಲಿ ನಮ್ಮ ಹೊಟ್ಟೆಗಣಪನ್ನು ಕೊಂಡಾಡುವ, ಸಲುಗೆದುಂಬಿದ ತಮಾಷೆಯ, ಪ್ರೀತಿಯ ಶೈಲಿಯಲ್ಲಿ ಬಣ್ಣಿಸುವ ಪರಿ ಆಸ್ವಾದನೀಯ. ಕನಕದಾಸರ ಗಣಪ ಕಮ್ಮಗೋಲನ ವೈರಿಸುತನಾದ (ಮನ್ಮಥವೈರಿ, ಶಿವಸುತನಾದ) ಸೊಂಡಿಲಗಣನಾಥ, ಪಟ್ಟದ ರಾಣಿ ಪಾರ್ವತಿಯ ಕುಮಾರನಾದ ಹೊಟ್ಟೆಯ ಗಣನಾಥ, ಉಟ್ಟದಟ್ಟಿಯ, ಬಿಗಿದುಟ್ಟ ಚೆಲ್ಲಣದ ಈ ದಿಟ್ಟನದ್ದು ‘ಮೋರೆಗಪ್ಪಿನ ಭಾವ, ಮೊರದಗಲದ ಕಿವಿ, ಕೋರೆದಾಡೆ’. ಈ ಮೂರುಕಣ್ಣನ ಸುತ, ಚಂದ್ರನನ್ನೇ ಮುರಿದಿಟ್ಟ ಧೀರ. ಅಷ್ಟೇ ಅಲ್ಲ, ಈ 'ಭಾಷಿಗ'ನು ‘ರಾಶಿವಿದ್ಯೆಯ ಬಲ್ಲ’ (ವಿದ್ಯಾಧಿದೇವತೆ), ‘ರಮಣಿ ಹಂಬಲನೊಲ್ಲ’ (ಬ್ರಹ್ಮಚಾರಿ). ವಾಕ್ಸಿದ್ಧಿಪ್ರದಾಯಕನ ಸ್ಥೂಲಶರೀರವನ್ನು ‘ಭಾಷಿಗ’ ಎಂಬ ಮೂರಕ್ಷರದಲ್ಲಿ ಹುದುಗಿಸಿಡುವ ಕೌಶಲಕ್ಕೆ ಕನಕದಾಸರೇ ಸಾಟಿ.

ಒಟ್ಟಿನಲ್ಲಿ ಗಣಪನು ನಗೆಸೊಗವನ್ನೂ, ಹೊಟ್ಟೆತುಂಬಿದಾನಂದ ವನ್ನೂ, ಸಿದ್ಧಿಬುದ್ಧಿಗಳನ್ನೂ, ಮೋಕ್ಷಮಾರ್ಗವನ್ನೂ ದಯಪಾಲಿಸಲಿ ಎಂಬುದೇ ದಾಸವರೇಣ್ಯರೆಲ್ಲರ ಒಕ್ಕೊರಲಿನ ಹಾರೈಕೆ - ಅದು ನಮ್ಮೆಲ್ಲರ ಮೇಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT