ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive – ಗಾನಕಥನ: ಸಂಜೆಯಿಂದೇಕೋ ಕಂಗಳಲ್ಲಿ..

ಕಣ್ಣೀರೊರೆಸಲು ಮರಿಜಿಂಕೆಯ ಕಣ್ಣಿನಂಥ ಗಝಲ್
Last Updated 24 ಡಿಸೆಂಬರ್ 2020, 10:41 IST
ಅಕ್ಷರ ಗಾತ್ರ
ADVERTISEMENT
""
""

‘ಶಾಮ್‌ ಸೆ ಆಂಖ್‌ ಮೆ ನಮಿ ಸಿ ಹೈ

ಆಜ್‌ ಫಿರ್‌ ಆಪ್‌ ಕಿ ಕಮಿ ಸಿ ಹೈ...’

ಗುಲ್ಜಾರ್‌ ಕವಿತೆಯನ್ನು ಜಗಜಿತ್‌ ಸಿಂಗ್‌ ಗುನುಗುತ್ತಿದ್ದರು. ಇಯರ್‌ ಫೋನಿನಲ್ಲಿ ಕೇಳುತ್ತಿದ್ದರೆ, ತೀರ ನಿನಗಷ್ಟೆ ಈ ಹಾಡು ಎಂಬಂತೆ ಭಾಸವಾಗತ್ತಿತ್ತು. ಅದೇ... ಅದೇ ತಪ್ಪಾಗಿದ್ದು... ನನ್ನೆದೆಯ ತಳಮಳ, ತಹತಹ ಎಲ್ಲವೂ ಜಗಜಿತ್‌ ಸಿಂಗ್‌ನ ನೋವು ತುಂಬಿದ ಮಧುರ ಕಂಠದಲ್ಲಿ ಅರಗಿಸಿ, ಕರಗಿಸಿ ಕಿವಿಯೊಳಗೆ ಬಿಸಿ ಎರಕ ಹೊಯ್ದಂತೆ. ಕೇಳುತ್ತಿರುವಾಗಲೇ ಬಿಸಿಯುಸಿರು.

ಸಂಜೆಯಿಂದೇಕೋ ಕಂಗಳಲ್ಲಿ ಪಸೆಯೊಂದಿದೆ,

ಮತ್ತೆ ಇಂದೇಕೊ ನಿನ್ನ ಕೊರತೆ ಕಾಡುತಿದೆಎಂಬರ್ಥ ಬರುವ ಹಾಡದು.

ಮೊದಲ ಸಾಲು ಕಿವಿಯೊಳಗೆ ಬೀಳುತ್ತಲೇ ಎದೆ ಸಮುದ್ರದೊಳು ನೆನಪಿನಲೆಗಳ ದಾಳಿ. ಅದೆಷ್ಟು ಸದ್ದು, ಅದೆಷ್ಟು ಧಾವಂತ.ಬಂದು ಎದೆಗಪ್ಪಳಿಸಿದಂತೆಲ್ಲ, ನೀರ ಹನಿಗಳು ಕಂಗಳಿಂದಾಚೆ ಬರುವ ತವಕದಲ್ಲಿರುತ್ತವೆ. ಆದರೆ ಬಂದಷ್ಟೇ ವೇಗವಾಗಿ ಹಿನ್ನಡೆಯುವ ಶಿಸ್ತಿನ ಸಿಪಾಯಿಯಂಥ ಅಲೆಗಳು... ಪಾಪ... ಆ ಕಂಬನಿಯನ್ನೂ ತಡೆ ಹಿಡಿಯುತ್ತವೆ.
ಹಟಮಾರಿ ಹನಿಯೊಂದು ಮಾತ್ರ ಮರಳ ಮೇಲೆ ಸಿಡಿದು ಹಿಂಗಿ ಹೋಗುವಂತೆ ಕೆನ್ನೆಗುಂಟ ಇಳಿಯುತ್ತಲೇ ಹೋಗುತ್ತದೆ.

ಗಝಲ್‌ ಗಾಯಕ ಜಗಜಿತ್‌ ಸಿಂಗ್‌

ಆಗಲೇ ಹಾಡಿನ ಎರಡನೆಯ ಸಾಲು,

‘ದಫನ್‌ ಕರ್‌ ದೊ ಹಮೆ,ಕಿ ಸಾಂಸ್‌ ಮಿಲೆ..

ನಬ್ಜ್‌ ಕುಛ್‌ ದೇರ್‌ ಸೆ ಥಮಿ ಸಿ ಹೈ...’

ಒಮ್ಮೆ ಹೂಳಿಬಿಡು ನನ್ನನ್ನು, ಚೂರು ಉಸಿರಾಡುವೆ..

ಎದೆಮಿಡಿತ ಸ್ವಲ್ಪ ಹೊತ್ತಿನಿಂದ ನಿಂತಂತಿದೆ...

ನೆನಪುಗಳಿಗೆ ಸಂಗೀತವೇ ಸಾಂತ್ವನ

ಎನ್ನುವಾಗ ಎದೆಬಿರಿಯೆ ಅಳಬೇಕೆನ್ನುವ ಭಾವವೂ ಆ ಕಣ್ಣೀರಿನೊಂದಿಗೆ ಕೆನ್ನೆಯಿಂದ ತುಟಿಯಂಚಿಗೆ ಒಂದಷ್ಟು, ದಿಂಬಿನ ಮೇಲೆ ಹೊರಳುಮಗ್ಗುಲಾಗಿ ಅತ್ತಿದ್ದರೆ, ಮೂಗಿನ ತುದಿಯಿಂದ ತುಟಿಗೆ ಜಂಪ್‌ ಮಾಡುವ ಹನಿ.. ತೀರ ಆಗಲೇ ಜಂಪ್‌ ಮಾಡಲ ಕಲಿತ ಮಗು, ಸೋಫಾದಿಂದ ಕೆಳಗೆ ಕುಣಿಯುವಂತೆ ಧುಮುಕಿರುತ್ತದೆ.

ಆ ದುಃಖದಲ್ಲೂ ಆ ಹನಿ ತುಟಿಗೆ ತಾಕಿದಾಗ, ಸಮುದ್ರದ ನೀರೂ ಉಪ್ಪು, ಮನದೊಳು ಅಲೆಯೆಬ್ಬಿಸುವ ನೀರೂ ಉಪ್ಪುಪ್ಪು ಅಂತ ಗೊತ್ತಾಗುವುದೇ ಆಗ.ಅದ್ಹೆಂಗೊ, ಜಗಜಿತ್‌ ಸಿಂಗ್‌ ಧ್ವನಿ, ಈ ಹೊತ್ತಿಗಾಗಲೇ ಒಂದು ಹದಕ್ಕೆ ತಂದಿರುತ್ತದೆ. ಮನ ಸ್ಥಿಮಿತಗೊಳಿಸುವ ಸಾಲುಗಳು ಮನಸನ್ನು ಸಮಾಧಾನಗೊಳಿಸುತ್ತವೆ.

‘ವಕ್ತ್‌ ರೆಹತಾ ನಹಿ ಹೈ ಟಿಕ್‌ ಕರ್‌

ಇಸ್ಕಿ ಆದತ್‌ ಭಿ ಆದಮಿ ಸಾ ಹೈ’

ಆಯ್ತಲ್ಲ.. ಅಲ್ಲಿಗೆ ಕಾಲ ಮತ್ತು ಪುರುಷ ಎರಡೂ ಒಂದೆಡೆ ಕಾಲೂರಲಾರರು. ಇದವರ ಆದತ್‌... ಅಭ್ಯಾಸ ಬಲ. ಇಂದಿಲ್ಲಿ.. ನಾಳೆ ಇನ್ನೆಲ್ಲಿಯೋ.. ಯಾವುದೂ ನಮ್ಮದಲ್ಲ. ನಮಗಾಗಿ ಇಲ್ಲ. ಸುದೀರ್ಘ ನಿಟ್ಟುಸಿರು ಒಂದಾಚೆ ಬಂದಿರುತ್ತದೆ. ಅದು ಸಮಾಧಾನದ್ದೋ, ಮನವೆಂಬ ಸಮುದ್ರ ತಹಬದಿಗೆ ಬಂದದ್ದೋ (ಬರುತ್ತದಾ?) ಒಟ್ನಲ್ಲಿ ಒಂದು ಹದಕ್ಕೆ ಬಂದಿರ್ತೀವಿ.
ಆಗ ಮುಂದಿನ ಸಾಲು ಸಮಾಧಾನಿಸುತ್ತದೆ.
ಕೋಯಿ ರಿಶ್ತಾ ನಹಿ ರಹಾ ಫಿರ್‌ಭಿ

ಏಕ್‌ ತಸ್ವೀರ್‌ ಲಾಜ್ಮಿ ಸಿ ಹೈ..
ಯಾವ ಬಾಂಧವ್ಯಗಳೂ ಉಳಿಯಲಿಲ್ಲವಾದರೂ... ಚಿತ್ರವೊಂದನ್ನು ದಿಟ್ಟಿಸುವುದು, ಉಳಿಸಿಕೊಳ್ಳುವುದು ಲಾಜ್ಮಿ ಇದೆ...


ಮತ್ತದೇ ಫೋಟೊ, ಅವೇ ಕಂಗಳು.. ಆ ಕಂಗಳಲ್ಲಿ ನಾನಿದ್ದೆನಾ? ನನ್ನ ಬಿಂಬ ಕಾಣುತ್ತದೆಯೇ? ಒಂದು ಕಾಲದಲ್ಲಿ, ಆ ಕಣ್ತುಂಬಾ ನನ್ನೊಲವಿತ್ತು. ನನಗಾಗಿಯೇ ಇತ್ತು... ಈಗಲೂ ಇದೆಯಾ..? ಇರಬಹುದೇನೋ.. ಹಂಗಾಗಿಯೇ ಮೆಮರಿಕಾರ್ಡಿನಿಂದ ಕಿತ್ತೆಸೆದರೂ ಮನದ ಭಿತ್ತಿಯೊಳು ಒಂದು ಚಿತ್ರವಂತೂ ಸ್ಥಾಯಿ ಇದ್ದೇ ಇರುತ್ತದೆ. ಕಣ್ಮುಚ್ಚಿದಾಗಲೆಲ್ಲ, ಸ್ಮೃತಿ ಪಟಲದಿಂದ ಕಣ್ರೆಪ್ಪೆಯ ಪರದೆಯ ಮೇಲೆ ಕಣ್ಮುಚ್ಚಿದಾಗಲೆಲ್ಲ ಕಂಡು ಕಾಡುತ್ತದೆ. ಮತ್ತದೆ ನಿಟ್ಟುಸಿರು, ಶರಧಿಯ ಮರಳಲಿ ಬರೆದ ಹೆಸರನ್ನು, ಅಲೆಗಳು ಅಳಕಿಸಿಕೊಂಡು ಹೋದಂತೆ, ಈ ಚಿತ್ರವನ್ನೂ ಮತ್ಮತ್ತೆ ಕಂಬನಿಯ ಪರದೆ ಮಾಸಲಾಗಿಸುತ್ತ ಹೋಗುತ್ತದೆ. ಆದರೆ...

ಈ ಆದರೆ ಮುಗಿಯುವ ಮುನ್ನ ಇನ್ನೊಂದು ಹಾಡು, ಕಿವಿಯೊಳಗೆ ಅನುರಣಿಸುತ್ತಿರುತ್ತದೆ...
‘ಅಗರ್‌ ಹಮ್‌ ಕಹೆ... ಔರ್‌..'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT