ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದಾಹ: ಖರೀದಿಯ ಓಟಕ್ಕೂ ಇಲ್ಲ ಬ್ರೇಕ್‌!

Last Updated 18 ಜುಲೈ 2020, 19:30 IST
ಅಕ್ಷರ ಗಾತ್ರ

ಈ ಲೋಹದ ಗುಣವೇ ಹಾಗೆ, ಎಂತಹವರನ್ನೂ ಸೆಳೆದು ತನ್ನ ಪರಿಧಿಯೊಳಗೆ ಕೂರಿಸುವ ಚಿನ್ನದ ಗುಣ; ಇದರ ಸೌಂದರ್ಯವಂತೂ ಎಂತಹ ಅರಸಿಕರನ್ನೂ ಮೋಡಿ ಮಾಡುವ ಸುವರ್ಣ ಸೌಂದರ್ಯ; ಇನ್ನು ಇದರ ಮೌಲ್ಯವನ್ನು ಕೇಳುವುದೇ ಬೇಡ, ಅಂಗೈಯಲ್ಲಿದ್ದರೆ ಅರಮನೆ ತೋರಿಸುವ ಬಂಗಾರದ ಮೌಲ್ಯ.. ಈ ಅಪರಂಜಿಯನ್ನು ಎಷ್ಟೆಲ್ಲ ಹೆಸರಿನಿಂದ ಕರೆದರೂ, ಎಷ್ಟು ಬಗೆಯಲ್ಲಿ ಹೊಗಳಿದರೂ ತಲೆಗೇರಿಸಿಕೊಳ್ಳದೇ ಬೀರುವುದು ಅದೇ ಸ್ನಿಗ್ಧ ಅಗ್ನಿಯ ಹೊಳಪು.

ಹೌದು, ಅಗ್ನಿಯಿಂದ ಹುಟ್ಟಿದ್ದು ಎಂಬ ನಂಬಿಕೆಯಿದೆ ಈ ಲೋಹಗಳ ರಾಜನ ಬಗ್ಗೆ. ರೂಪಾಂತರ ಹೊಂದಿದ ಅಗ್ನಿಶಿಲೆಯಲ್ಲಿ ಬೆಣಚು ಕಲ್ಲಿನ ರೂಪದಲ್ಲಿರುತ್ತದೆ ಈ ‘ಆರಂ’. ಲ್ಯಾಟಿನ್‌ ಶಬ್ದದಿಂದ ಬಂದಿರುವ ಈ ರಾಸಾಯನಿಕ ಹೆಸರಿನ ಅರ್ಥ ಮುಂಜಾವಿನ ಹೊಳಪು. ಎಳೆದಷ್ಟೂ ಸಪೂರ ತಂತಿಯಾಗಿ ಬಳುಕುವ (ತನ್ಯತೆ), ತಟ್ಟಿದಷ್ಟೂ ತೆಳು ತಗಡಾಗಿ ಮಿಂಚುವ ಕಾಂಚನ ಪುರಾಣದ ನೂರಾರು ಕಥೆಗಳಿಗೆ, ಇತಿಹಾಸದ ಸಾವಿರಾರು ಐತಿಹ್ಯಗಳಿಗೆ ಮೂಲ. ಪ್ರಪಂಚದ ಮೂಲೆ ಮೂಲೆಗಳನ್ನು ಹುಡುಕಿದರೂ ಇದರ ಮೋಹಕ ಸೌಂದರ್ಯಕ್ಕೆ ಮರುಳಾಗದವರು ಸಿಗಲಿಕ್ಕಿಲ್ಲ. ಸಪ್ತ ಸಮುದ್ರಗಳಾಚೆ ಹೋದರೂ ಹೊನ್ನಿನ ಹಳದಿ ಮಿಂಚು ಲಕ್ಷಾಂತರ ಮಂದಿಯ ಕಣ್ಣುಗಳಲ್ಲಿ ಸೆಳಕು ಮೂಡಿಸದಿರದು.

ಭಾರತದ ಇತಿಹಾಸದಲ್ಲಂತೂ ಇದರ ಬೇರು ಭದ್ರವಾಗಿದೆ. ಈ ಹಳದಿ ರಂಗಿನ ಸುಂದರಿಯ ಮೇಲೆ ಭಾರತೀಯರ ವ್ಯಾಮೋಹ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಜಾಗತಿಕವಾಗಿ ಚಿನ್ನದ ಖರೀದಿಯಲ್ಲಿ ಚೀನಾಕ್ಕೆ ಸಡ್ಡು ಹೊಡೆಯುತ್ತಿದ್ದಾರೆ ನಮ್ಮವರು. ಜಾಗತಿಕವಾಗಿ ಮಾರಾಟವಾಗುವ ಒಟ್ಟು ಚಿನ್ನದಲ್ಲಿ ಶೇಕಡ 33ರಷ್ಟು ಭಾರತೀಯರ ಪಾಲಾಗುತ್ತಿದೆ. ಇದರ ಮೇಲಿನ ಹೂಡಿಕೆಯನ್ನು ಒಂದು ಪಕ್ಕಕ್ಕಿಟ್ಟರೆ, ಸಾಂಸ್ಕೃತಿಕವಾಗಿ ಭಾರತೀಯರ ಮನೆ– ಮನಗಳಲ್ಲಿ ಒಂದು ಅಮೂಲ್ಯ ಸ್ಥಾನವಿದೆ ಈ ಅಪರೂಪದ ಲೋಹಕ್ಕೆ.

ವೇದಗಳಲ್ಲಿ, ಬೈಬಲ್‌ನಲ್ಲಿ ಪ್ರಸ್ತಾಪಿಸಲ್ಪಟ್ಟ ಕನಕದ ಬಳಕೆ ಹುಟ್ಟಿನಿಂದ ಸಾವಿನವರೆಗೆ ಎಂಬುದು ಅತಿಶಯೋಕ್ತಿಯೇನಲ್ಲ. ಪ್ರಾಚೀನ ಈಜಿಪ್ಟ್‌ನಲ್ಲಿ (ಕ್ರಿ.ಪೂ. 5000) ‘ದೇವರ ಚರ್ಮ’ (ನ್ಯೂಬ್‌)ವೆಂದೇ ಕರೆಯಲಾಗುತ್ತಿದ್ದ ಚಿನ್ನದ ಕವಚವನ್ನು ಅಲ್ಲಿನ ಫರೋವಾ (ರಾಜ) ಶವಕ್ಕೆ ಹೊದಿಸಲಾಗುತ್ತಿತ್ತು. ಅಲ್ಲಿನ ನೂರಾರು ಸಮಾಧಿಗಳಲ್ಲಿದ್ದ ಟನ್‌ಗಟ್ಟಲೆ ಚಿನ್ನ (ಹೆಚ್ಚಿನ ಚಿನ್ನವನ್ನು ಲೂಟಿ ಹೊಡೆಯಲಾಗಿದೆ) ಆಗಿನ ಕಾಲದಲ್ಲಿ ಚಿನ್ನದ ಅಗಾಧ ಬಳಕೆಗೆ ಸಾಕ್ಷಿ. ಕ್ರಿ.ಪೂ. 40,000ದಷ್ಟು ಹಳೆಯದಾದ, ಆದಿ ಮಾನವ ಬಳಸಿದ ಸ್ಪೇನ್‌ನ ಪ್ರಾಚೀನ ಗುಹೆಯಲ್ಲಿ ಕಂಡು ಬಂದ ನೈಸರ್ಗಿಕ ಚಿನ್ನ ಅತ್ಯಂತ ಹಳೆಯದು ಎಂಬ ದಾಖಲೆಗೆ ಪಾತ್ರವಾಗಿದೆ.

ಭಾರತದಲ್ಲೂ ಅಷ್ಟೇ, ಇಲ್ಲಿ ಚಿನ್ನದ ಗಣಿಗಳ ಸಂಖ್ಯೆ ಕಡಿಮೆ. ಆದರೆ ರೋಮನ್‌ ವ್ಯಾಪಾರಿಗಳು ಚಿನ್ನದ ನಾಣ್ಯಗಳನ್ನು ಮೊದಲು ಪರಿಚಯಿಸಿದ್ದು ಎನ್ನುತ್ತದೆ ದಾಖಲೆ. ನಂತರ ವಿವಿಧ ಕಾಲಘಟ್ಟದಲ್ಲಿ ಆಳಿದ ಅರಸರು ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದರು. ಹಲವಾರು ದೇವಸ್ಥಾನಗಳಲ್ಲಿ ಭಕ್ತರು ಚಿನ್ನದ ರೂಪದಲ್ಲಿ ನೀಡುವ ಕಾಣಿಕೆಯೇ ಬೇಕಾದಷ್ಟಿದೆ.

ಸಂಸ್ಕೃತಿಯಲ್ಲಿ...

ಈಗ ಭಾರತದಲ್ಲಿ ಇದಕ್ಕಿರುವ ಸಾಂಸ್ಕೃತಿಕ ಮಹತ್ವವೇನು ಎಂದು ಕೆದಕುತ್ತ ಹೋದರೆ ಮತ್ತದೇ ಉತ್ತರ– ಹುಟ್ಟಿನಿಂದ ಸಾವಿನವರೆಗೆ. ಮನೆಯಲ್ಲಿ ಮಗು ಹುಟ್ಟಿದ ಸಂಭ್ರಮಕ್ಕೆ ಬೆಸುಗೆ ಹಾಕುವುದು ಚಿನ್ನದ ಆಭರಣ. ಬಹುತೇಕ ಸಮುದಾಯಗಳಲ್ಲಿ ಹೆಣ್ಣು ಮಗು (ಕೆಲವು ಸಮುದಾಯಗಳಲ್ಲಿ ಗಂಡು ಮಕ್ಕಳಿಗೂ ಕೂಡ) ವಿಗೆ ಕಿವಿ ಚುಚ್ಚುವ ಸಂಭ್ರಮ ಹುಟ್ಟಿದ 11ನೇ ದಿನಕ್ಕೆ ನಡೆಯುತ್ತದೆ. ಅದು ಚಿನ್ನದೇ ಆಗಿರಬೇಕು ಎಂಬ ಸಂಪ್ರದಾಯದ ಚೌಕಟ್ಟು ಬೇರೆ. ಹೆಣ್ಣು ಮಗುವಿನ ಮದುವೆಗೆಂದು ಚಿನ್ನವನ್ನು ಕೂಡಿಡುವ ಮುಂದಾಲೋಚನೆ ಬಹುತೇಕ ಪೋಷಕರದ್ದು.

ಮದುವೆಯ ಸಂದರ್ಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬಂಗಾರದೊಡವೆ ನೀಡುವುದನ್ನು ಇಂದಿಗೂ ಕೂಡ ಸಂಪ್ರದಾಯವೆಂಬಂತೆ ನಡೆಸಿಕೊಂಡು ಬರಲಾಗುತ್ತಿದೆ. ದಿನಕ್ಕೆರಡು ಹೊತ್ತಿನ ತುತ್ತಿನ ಚೀಲವನ್ನು ತುಂಬಿಸುವ ಕಾಯಕದಲ್ಲಿ ತೊಡಗಿರುವವರಲ್ಲೂ ಕೂಡ ಮಾಂಗಲ್ಯಸೂತ್ರಕ್ಕೆ ಚಿನ್ನದ ತಾಳಿಯನ್ನಾದರೂ ಕೊಡಬೇಕು ಎಂಬ ಭಾವನಾತ್ಮಕತೆಯನ್ನು ಹೊಂದಿರುವವರು ಬಹಳಷ್ಟು ಮಂದಿ. ಚಿನ್ನದ ದರ ಏರುವುದಕ್ಕೆ ಜಾಗತಿಕ ಕಾರಣಗಳನ್ನು ಬಿಟ್ಟರೆ ಭಾರತದಲ್ಲಿ ಸ್ಥಳೀಯ ಕಾರಣವೆಂದರೆ ಮದುವೆ. ದರ ಎಷ್ಟೇ ಏರಿಕೆಯಾದರೂ ಅವರವರ ಯೋಗ್ಯತೆಗೆ ತಕ್ಕಂತೆ ಖರೀದಿ ನಡೆಯುವುದು ಸಾಮಾನ್ಯ. ಇನ್ನುಳಿದಂತೆ ಖರೀದಿಗೆ ಕೆಲವು ದಿನಗಳು ಶುಭದಾಯಕ ಎಂದೇ ನಂಬಿಕೊಂಡಿರುವ ಭಾರತೀಯರು ಅಕ್ಷಯ ತೃತೀಯ, ವಿಜಯ ದಶಮಿ, ಧನ ತ್ರಯೋದಶಿ (ಧನ್‌ ತೇರಾಸ್‌)ಯಂದು ಕೆಲವು ಗ್ರಾಂ ಆದರೂ ಚಿನ್ನ ಖರೀದಿಸುವ ರೂಢಿ ಇಟ್ಟುಕೊಂಡಿರುವುದು ಸಂಸ್ಕೃತಿಯ ಒಂದು ಭಾಗವೇ ಆಗಿಬಿಟ್ಟಿದೆ.

ಕುಲಧನ

ಇದು ಬಹಳಷ್ಟ ಭಾರತೀಯ ಕುಟುಂಬಗಳಲ್ಲಿ ಚರಾಸ್ತಿ ಅಂದರೆ ಕುಲಧನ ಕೂಡ. ಚಿನ್ನದ ಆಭರಣಗಳನ್ನು ಪಿತ್ರಾರ್ಜಿತ ಆಸ್ತಿಯಾಗಿ ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತ ಬರುವ ಸಂಪ್ರದಾಯ ಈಗಲೂ ಇದೆ. ಬಹಳಷ್ಟು ಕಡೆ ತಾಯಿಯ ಆಭರಣ ಮಗಳಿಗೆ, ಸೊಸೆಗೆ ಹೀಗೆ ಹಸ್ತಾಂತರವಾಗುತ್ತ ಸಾಗುತ್ತದೆ.

ಉಡುಗೊರೆ ನೀಡುವ ಪದ್ಧತಿ

ಹಾಗೆಯೇ ಉಡುಗೊರೆ ನೀಡುವ ಸಂಪ್ರದಾಯವೂ ಭಾರತದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ಎನ್ನಬಹುದು. ಅದು ಮದುವೆ ಇರಲಿ ಅಥವಾ ಇನ್ನಾವುದೇ ಶುಭಕಾರ್ಯವಿರಲಿ, ಸಮೀಪದ ಬಂಧುಗಳು ಚಿನ್ನದೊಡವೆಯನ್ನು ಉಡುಗೊರೆಯಾಗಿ ನೀಡುವುದು ಲಾಗಾಯ್ತಿನಿಂದ ಬಂದಿರುವ ರೂಢಿ. ಪೋಷಕರು ಮಕ್ಕಳಿಗೆ, ಮೊಮ್ಮಕ್ಕಳಿಗೆ ಈ ರೀತಿ ಉಡುಗೊರೆ ನೀಡುವುದರ ಹಿಂದೆ ಆರ್ಥಿಕ ನೀತಿಯೂ ಅಡಗಿದೆ ಎನ್ನಬಹುದು. ಹಿಂದೆ ಬಹುತೇಕ ಮಹಿಳೆಯರು ಮನೆಗೆಲಸ, ಕುಟುಂಬವನ್ನು ನೋಡಿಕೊಂಡಿರುತ್ತಿದ್ದರು. ತವರು ಮನೆಯಿಂದ ಬಂದ ಚಿನ್ನ ಅವರಿಗೆ ಆಪದ್ಧನವಾಗಿತ್ತು. ಕಷ್ಟ ಬಂದಾಗ ಅಡವಿಟ್ಟೋ ಅಥವಾ ನಗದೀಕರಿಸಿಕೊಂಡೋ ಜೀವನ ಕಟ್ಟಿಕೊಳ್ಳುತ್ತಿದ್ದರು. ಈಗಲೂ ಅಷ್ಟೆ, ಚಿನ್ನ ಮಾರಿ ಹಣ ಹೊಂದಿಸುವ ಸರಳ ಹಣಕಾಸು ಸೂತ್ರದ ಗುಟ್ಟು ಈ ಉಡುಗೊರೆಯ ಹಿಂದಿದೆ. ಹೆಣ್ಣುಮಗಳು ಮದುವೆಯ ನಂತರ ಗಂಡನ ಮನೆಗೆ ಕಾಲಿಡುವಾಗ ಒಯ್ಯುವ ಬಂಗಾರದ ಒಡವೆಗಳನ್ನು ಶುಭಕರ ಎಂದೇ ಭಾವಿಸುವುದು ಈ ಕಾರಣಕ್ಕೇ. ಈ ಉಡುಗೊರೆ ಕೊಡುವ ಸಂಪ್ರದಾಯ ಆಕೆಗೆ ಮಗು ಜನಿಸಿದಾಗಲೂ ಮುಂದುವರಿಯುತ್ತದೆ.

ಪ್ರತಿಷ್ಠೆಯ ಸಂಕೇತ

ಬಹುಶಃ ಭಾರತದಲ್ಲಿ ಚಿನ್ನವನ್ನು ಪ್ರತಿಷ್ಠೆಯ ಸಂಕೇತ ಎಂದು ಭಾವಿಸುವುದರಿಂದಲೇ ಈ ಚಿನ್ನದ ಸಂಗ್ರಹಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸುವುದಕ್ಕೆ ಕಾರಣ. ನೂರಾರು ಜನರ ಮಧ್ಯೆ ಮಿಂಚಲು, ಅಸ್ತಿತ್ವವನ್ನು ತೋರಿಸಲು ಚಿನ್ನ ಒಂದು ನೆಪ. ಮಧ್ಯಮ ವರ್ಗದವರ ಮದುವೆಗೆ ಹೋಗಿ ನೋಡಿದರೂ ಸಾಕು, ವಧು– ವರರಲ್ಲದೇ ನೆರೆದ ಬಂಧುಗಳು ಹಾಕಿಕೊಂಡ ಚಿನ್ನವನ್ನು ಅಳೆದರೆ ಕೆಜಿಗಟ್ಟಲೆ ಆದೀತು! ಪಾಶ್ಚಿಮಾತ್ಯರ ಒಂದು ವಜ್ರ ಕೂರಿಸಿದ ಚಿನ್ನದ ಉಂಗುರ, ಪ್ಲಾಟಿನಂ ಚೈನ್‌ ಸೆಲೆಬ್ರಿಟಿಗಳಲ್ಲಷ್ಟೇ ಕಾಣಬಹುದೇ ವಿನಾ ಹೆಚ್ಚಿನವರು ಸೇರುಗಟ್ಟಲೆ ಬಂಗಾರದ ಆಭರಣ ಧರಿಸಲು ಹಿಂಜರಿಯುವವರು ಕಡಿಮೆ. ಸೆಲೆಬ್ರಿಟಿಗಳೂ ಅಷ್ಟೆ, ತಮ್ಮ ಮದುವೆ, ಆರತಕ್ಷತೆ ಸಮಾರಂಭಗಳಲ್ಲಿ ಕೆಜಿಗಟ್ಟಲೆ ತೂಕದ ಒಡವೆ ಪ್ರದರ್ಶನ ನಡೆಸುವುದು ಅಷ್ಟೇನೂ ಅಚ್ಚರಿಯುಂಟು ಮಾಡಲಾರದು. ರಾಜಕಾರಣಿಗಳು, ನಟ– ನಟಿಯರು, ಉದ್ಯಮಿಗಳು, ಅಧಿಕಾರಿಗಳು.. ಹೀಗೇ ಪ್ರತಿಯೊಬ್ಬರೂ ಈ ಚಿನ್ನದ ಮೋಹಕ್ಕೆ ಮರುಳಾಗಿ ಪ್ರದರ್ಶನ ನಡೆಸುವವರೇ. ಬಹುಶಃ ರಾಜರ ಕಾಲದಿಂದ ಆರಂಭವಾದ ಈ ಚಿನ್ನದ ದಾಹ ಬ್ರಿಟಿಷರ ಆಳ್ವಿಕೆ, ಈಗಿನ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಒಂದು ಕೈ ಹೆಚ್ಚೇ ಆಗಿದೆಯೇ ಹೊರತು ಕಡಿಮೆಯಾಗುವ ಮಾತೇ ಇಲ್ಲ. ಚಿನ್ನ ಹೆಚ್ಚಿದ್ದಷ್ಟೂ ಪ್ರತಿಷ್ಠೆ, ಅಂತಸ್ತು ಹೆಚ್ಚು ಎಂಬ ಭಾವನೆ ಬಂಗಾರದ ದರ 10 ಗ್ರಾಂಗೆ ₹ 50 ಸಾವಿರ ದಾಟಿದರೂ ಖರೀದಿಸುವ ಹುಮ್ಮಸ್ಸು ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದೆ.

ಇದೀಗ ಹಣ ಇದ್ದವರು ಹೂಡಿಕೆಗೆ ಮುನ್ನುಗ್ಗುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಕೈ ಕೊಟ್ಟಾಗ ಸುಲಭವಾಗಿ ನಗದೀಕರಿಸುವ ಚರಾಸ್ತಿಯೆಂದರೆ ಬಂಗಾರ. ಹೀಗಾಗಿ ಬಂಗಾರದ ಮೇಲೆ ಹೂಡಿಕೆ ಮಾಡುವುದು, ಅದರಲ್ಲೂ ಬಂಗಾರದ ಬಿಸ್ಕತ್‌, ನಾಣ್ಯ (ಪವನ್‌)ಗಳನ್ನು ಖರೀದಿಸುವುದು ಅತ್ಯಂತ ಜಾಣತನವೆಂಬುದು ಭಾರತೀಯರ ನಂಬಿಕೆ. ಚಿನ್ನದ ದರದ ಓಟ ತಡೆಯಿಲ್ಲದೇ ಸಾಗುತ್ತಿರುವ ಈ ಸಂದರ್ಭದಲ್ಲಂತೂ ಸುರಕ್ಷಿತ ಭವಿಷ್ಯದ ದೃಷ್ಟಿಯಿಂದ ಖರೀದಿ ಭರಾಟೆಯಿಂದಲೇ ಸಾಗಿದೆ, ಈ ಮೋಹಕ್ಕೆ ಕೊರೊನಾ ಸಂಕಷ್ಟದ ಅರಿವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT