ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಕಾಯ್ದೆ: ಮೂಡಿದ ಅಪನಂಬಿಕೆ

Last Updated 7 ಫೆಬ್ರುವರಿ 2021, 1:53 IST
ಅಕ್ಷರ ಗಾತ್ರ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಇತ್ತೀಚೆಗೆ ನೀಡಿರುವ ಎರಡು ತೀರ್ಪುಗಳು ವಿವಾದ ಎಬ್ಬಿಸಿವೆ. ಇಷ್ಟೊಂದು ಅಸೂಕ್ಷ್ಮವಾಗಿ ತೀರ್ಪುಗಳು ಹೊರಬಿದ್ದರೆ ಪೋಕ್ಸೊ ಕಾಯ್ದೆಯೇ ನಿರರ್ಥಕವಾಗಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಆ ತೀರ್ಪುಗಳ ಕುರಿತು ಇಬ್ಬರು ತಜ್ಞರ ವಿಶ್ಲೇಷಣೆಗಳು ಇಲ್ಲಿವೆ...

ಹೈಕೋರ್ಟ್‌ನ ನ್ಯಾಯಮೂರ್ತಿಪಿ.ವಿ.ಗನೇಡಿವಾಲಾ ಅವರು ಪೋಕ್ಸೊ ಕಾಯ್ದೆಗೆ ಸಂಬಂಧಿಸಿದಂತೆ ಮಾಡಿದ ವ್ಯಾಖ್ಯಾನವು, ನ್ಯಾಯಾಂಗದ ಮೇಲೆ ಅಪನಂಬಿಕೆ ಮೂಡುವಂತಹ ವಾತಾವರಣವನ್ನು ಸೃಷ್ಟಿಸಿದೆ. ಅವರು ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡುವ ಮೂಲಕ ಸುಪ್ರೀಂ ಕೋರ್ಟ್‌ ಸರಿಯಾದ ಕೆಲಸವನ್ನೇ ಮಾಡಿದೆ.

ಇಂತಹ ವಿವಾದಾತ್ಮಕ ತೀರ್ಪು ನೀಡಿದ ಬೆನ್ನಲ್ಲೇ ಹೆಚ್ಚುವರಿ ನ್ಯಾಯಮೂರ್ತಿಯಾಗಿದ್ದ ಪಿ.ವಿ.ಗನೇಡಿವಾಲಾ ಅವರನ್ನು ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ನೀಡಿದ್ದ ಒಪ್ಪಿಗೆಯನ್ನೂ ಸುಪ್ರೀಂ ಕೋರ್ಟ್‌ನ ಮಂಡಳಿಯು ಹಿಂಪಡೆದಿದೆ.

ಜನರು ನ್ಯಾಯಾಲಯಗಳ ಮೇಲೆ ಗಾಢವಾದ ನಂಬಿಕೆ ಇರಿಸಿದ್ದಾರೆ. ಎಲ್ಲಿಯೇ ಅನ್ಯಾಯ ಆದರೂ, ಅವರು ಮೊರೆ ಹೋಗುವುದು ನ್ಯಾಯಾಲಯಕ್ಕೆ. ಹೀಗಾಗಿ ನ್ಯಾಯದೇವಸ್ಥಾನವು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಲ್ಲಿ ಈ ರೀತಿ ಆದೇಶ ನೀಡಿದರೆ ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಯೇ ಕಳೆದುಹೋಗುತ್ತದೆ. ಇದು ಸಮಾಜದ ಮೇಲೆ ಭಾರಿ ಪರಿಣಾಮವನ್ನೂ ಬೀರುತ್ತದೆ. ಒಂದು ರೀತಿಯ ಅಪಾಯಕಾರಿ ಉದಾಹರಣೆಯನ್ನು ಇಂತಹ ಆದೇಶ ಸೃಷ್ಟಿಸುತ್ತದೆ.

ದೇಶದೆಲ್ಲೆಡೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ, ಇವುಗಳನ್ನು ತಡೆಯುವ ಉದ್ದೇಶದಿಂದ ಸಂವಿಧಾನದ 15ನೇ ವಿಧಿಯಡಿ ನೀಡಲಾಗಿರುವ ಅಧಿಕಾರವನ್ನು ಬಳಸಿಕೊಂಡು ಶಾಸಕಾಂಗವು ಪೋಕ್ಸೊ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆ ಕಾಯ್ದೆಯನ್ನು ವಿಶ್ಲೇಷಿಸುವಾಗ ತುಂಬಾ ಸೂಕ್ಷ್ಮವಾಗಿ ವರ್ತಿಸಬೇಕು.

‘ಚರ್ಮಕ್ಕೆ ಚರ್ಮ ತಾಗಲಿಲ್ಲ’ ಎನ್ನುವ ಕಾರಣವನ್ನು ನೀಡಿ 12 ವರ್ಷದ ಬಾಲಕಿಯೊಬ್ಬಳ ಸ್ತನವನ್ನು ಬಟ್ಟೆಯ ಮೇಲಿಂದ ಮುಟ್ಟಿದ್ದ ವ್ಯಕ್ತಿಯೊಬ್ಬರನ್ನು ಅವರು ‘ಪೋಕ್ಸೊ’ ಕಾಯ್ದೆಯಿಂದ ಖುಲಾಸೆಗೊಳಿಸಿದರು. ಮತ್ತೊಂದು ಪ್ರಕರಣದಲ್ಲಿ ಬಾಲಕಿಯ ಕೈ ಹಿಡಿಯುವುದು, ಪ್ಯಾಂಟ್‌ ಜಿಪ್‌ ಬಿಚ್ಚುವುದು ಪೋಕ್ಸೊ ಕಾಯ್ದೆಯಡಿ ‘ಲೈಂಗಿಕ ದಾಳಿ’ ಆಗುವುದಿಲ್ಲ ಎಂದು ಆದೇಶಿಸಿ ಆ ಪ್ರಕರಣದ ಅಪರಾಧಿಯನ್ನೂ ಖುಲಾಸೆಗೊಳಿಸಿದರು. ಇಂತಹ ಆದೇಶಗಳು ಮುಂದೆ ಇತರೆ ಪ್ರಕರಣಗಳಲ್ಲಿ ಅಪಾಯಕಾರಿ ಉದಾಹರಣೆಗಳಾಗುತ್ತವೆ.

‘ಲೈಂಗಿಕ ದಾಳಿ’ಯ ಕುರಿತ ಗನೇಡಿವಾಲಾ ಅವರ ವ್ಯಾಖ್ಯಾನವು ಮೇಲ್ನೋಟಕ್ಕೆ ಕಾಯ್ದೆಯಲ್ಲಿನ ಸೆಕ್ಷನ್‌ 7ರ ವಿರುದ್ಧವಾಗಿದೆ.ಒಬ್ಬ ಹೆಣ್ಣು ಮಗಳಾಗಿ ನ್ಯಾಯಮೂರ್ತಿಯೊಬ್ಬರು ಈ ರೀತಿ ವ್ಯಾಖ್ಯಾನ ಮಾಡಿರುವುದು ಆಶ್ಚರ್ಯ ಮೂಡಿಸುತ್ತದೆ. ಆದೇಶದ ಭಾಷೆಯೂ ಬಹಳ ಕೆಟ್ಟದಾಗಿದೆ. ಈ ರೀತಿಯ ಆದೇಶಗಳನ್ನು ನೀಡಿದರೆ, ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಎಲ್ಲ ಪ್ರಕರಣಗಳಲ್ಲಿ ಅಪರಾಧಿಗಳು ಖುಲಾಸೆ ಆಗಲಿದ್ದಾರೆ. ಈ ಸಂದರ್ಭದಲ್ಲಿ ಕಾಯ್ದೆಮಾಡಿದ ಹಿಂದಿನ ಉದ್ದೇಶ, ಕಾಯ್ದೆಯ ಗಂಭೀರತೆಯೇ ತಿಳಿಯಾಗುತ್ತದೆ. ಇದರಿಂದ ಅಪರಾಧ ಕೃತ್ಯಗಳೂ ಹೆಚ್ಚುವ ಸಾಧ್ಯತೆ ಇದ್ದು, ಒಟ್ಟಾರೆ ಶಾಸಕಾಂಗದ ಧ್ಯೇಯ, ಉದ್ದೇಶ ವಿಫಲವಾಗಲಿವೆ.

ಮೌಲ್ಯಗಳ ಜಾಗೃತಿ ಅಗತ್ಯ
ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವರದಿ ಇತ್ತೀಚೆಗೆ ಬಂದಿದೆ. ಶಾಲೆಯ ಮಕ್ಕಳು ಅವರ ಮಕ್ಕಳ ರೀತಿ ಅಲ್ಲವೇ? ಅವರನ್ನು ಚೆನ್ನಾಗಿ ನೋಡಿಕೊಂಡು, ರಕ್ಷಣೆ ನೀಡಬೇಕಾದವರೇ ಈ ರೀತಿ ಮಾಡಿದರೆ ಹೇಗೆ? ಕಾಯ್ದೆಯ ಜೊತೆಗೆ ಜನರಿಗೆ ಮೌಲ್ಯಗಳನ್ನು ತಿಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ಜನರನ್ನು ಸಂವೇದನಾಶೀಲಗೊಳಿಸಬೇಕು.

ನ್ಯಾಯಾಂಗ ಅಕಾಡೆಮಿಗಳಲ್ಲಿ ಕಾನೂನಿನ ಪರಿಣತಿ ನೀಡುವ ಸಂದರ್ಭದಲ್ಲಿ ಹಾಗೂ ಕಾನೂನಿನ ಶಿಕ್ಷಣದಲ್ಲೂ ಈ ರೀತಿ ವಿಷಯಗಳ ಕುರಿತು ಸೂಕ್ಷ್ಮತೆಯನ್ನು ಮೂಡಿಸಬೇಕು.

ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ
ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT