ಸೋಮವಾರ, ಜುಲೈ 26, 2021
21 °C

ನಿರಂಜನರ 'ಚಿರಸ್ಮರಣೆ' | ಕಯ್ಯೂರಿಗೆ ಕೈ ಮುಗಿದು...

ರಾಧಾಕೃಷ್ಣ ಬೆಳ್ಳೂರು Updated:

ಅಕ್ಷರ ಗಾತ್ರ : | |

ಕುಳಕುಂದ ಶಿವರಾಯ, ಸಾಹಿತ್ಯ ಕ್ಷೇತ್ರದಲ್ಲಿ ನಿರಂಜನ ಎಂದೇ ಸುಪ್ರಸಿದ್ಧ. 25 ಕಾದಂಬರಿ, 12 ಕಥಾಸಂಕಲನ, 6 ನಾಟಕ, 8 ಅಂಕಣ ಬರಹ ಸಂಕಲನಗಳ ಸಹಿತ 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ನಿರಂಜನ ಅವರು, 25 ಸಂಪುಟಗಳ ‘ವಿಶ್ವಕಥಾಕೋಶ’ ಮತ್ತು 7 ಸಂಪುಟಗಳ ‘ಜ್ಞಾನಗಂಗೋತ್ರಿ’ಗಳ ಮೂಲಕ ಕನ್ನಡ ನಾಡಿನ ಮನೆಮಾತಾದವರು. 1955ರಲ್ಲಿ ಪ್ರಕಟವಾದ ಅವರ ‘ಚಿರಸ್ಮರಣೆ’ ಕಾದಂಬರಿ, ಕಯ್ಯೂರಿನ ಸ್ವಾತಂತ್ರ್ಯ ಹೋರಾಟಗಾರರ ಅಪ್ಪಟ ಸ್ಮರಣೆ. ನಿರಂಜನರ ಹುಟ್ಟುಹಬ್ಬದ (ಜೂನ್‌ 15) ಸಂದರ್ಭದಲ್ಲಿ ಕಯ್ಯೂರಿಗೊಂದು ಮರುಪಯಣ ಇಲ್ಲಿದೆ.

---

ನೀಲೇಶ್ವರಕ್ಕೆ ತಲುಪಿದೊಡನೆ ನಿರಂಜನರ ನೆನಪಾಗುತ್ತದೆ, ಅಲ್ಲಿ ನಿರಂಜನರು ಓದಿದ ರಾಜಾಸ್ ಹೈಸ್ಕೂಲು ರೈಲು ಹಳಿಗೆ ಮುಖಹಾಕಿ ತಣ್ಣಗೆ ಕುಳಿತಿದೆ. ಅದರ ಮುಂಭಾಗದ ರಸ್ತೆಯಲ್ಲಿ ಬಲಕ್ಕೂ ಎಡಕ್ಕೂ ತಿರುಗುತ್ತಾ ತುಸು ಮುಂದೆ ಹೋಗಿ ಗುಡ್ಡಹತ್ತಿದ ಮೇಲೆ ‘ಚಿರಸ್ಮರಣೆ’ ಕಾಡತೊಡಗುತ್ತದೆ. ಎಂಬತ್ತು ವರ್ಷಗಳ ಹಿಂದಿನ ನೀಲೇಶ್ವರದ ಪರಿಸರವನ್ನು ಕಣ್ಣಮುಂದೆ ಕಲ್ಪಿಸುತ್ತ ಐದಾರು ಮೈಲಿ ಸಾಗಿದರೆ ಗುಡ್ಡದ ಬಲಬದಿಯ ಇಳುಕಲಿನ ಆಳದಲ್ಲಿ ಮೈತುಂಬಿ ಹರಿಯುವ ತೇಜಸ್ವಿನಿ ನದಿ. ಕೈಯೂರಿನ ಹೆಸರು ಹೊತ್ತ ಹೊಳೆದಾಟುವ ರಸ್ತೆ, ಹೊಳೆ ದಾಟಿದರೆ ಕೈಯೂರು! ಕೈಯೂರಿನ ಸಮೃದ್ಧ ತೋಟಗಳು, ಬೆತ್ತಲೆ ಮಲಗಿದ ಕೆಂಪು ಮಣ್ಣಿನ ಹುಲುಸಾದ ಹೊಲ. ಅದರಾಚೆ ಎತ್ತರದ ಗುಡ್ಡ; ಗುಡ್ಡದ ಮೇಲೆ ಒಂದು ಸಣ್ಣ ಪೇಟೆ! ಪೇಟೆ ಎಂದರೆ ನಾಲ್ಕಾರು ಅಂಗಡಿಗಳು, ಒಂದು ಆಸ್ಪತ್ರೆ, ಪಾರ್ಟಿ ಆಫೀಸು, ಶಾಲೆ ಇತ್ಯಾದಿ.

ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಈ ಹಳ್ಳಿಗೆ ಕಾಸರಗೋಡಿನಿಂದ ಕೇವಲ 45 ಕಿಮೀ ದೂರ. ಪೂರ್ವದಿಂದ ಪಶ್ಚಿಮಕ್ಕೆ, ನದಿಗೆ ಸಮಾಂತರವಾಗಿ, ಉದ್ದ ಲೆಕ್ಕ ಹಾಕಿದರೆ ಎರಡು ಮೈಲಿ, ಅಗಲ ನೋಡಿದರೆ ಅದರ ಅರ್ಧಕ್ಕಿಂತ ಕಡಿಮೆ. ಮೊದಲ ರೈತ ಹೋರಾಟದ ಜ್ವಾಲಾಮುಖಿ ಸಿಡಿದ ಯಾವ ಕುರುಹುಗಳೂ ಮೇಲ್ನೋಟಕ್ಕೆ ಕಾಣದಂತೆ ಹಾಯಾಗಿ ಮಲಗಿದ ಹಸಿರು. ಹತ್ತಿರಕ್ಕೆ ಹೋದರೆ ಕ್ರಾಂತಿಯ ಕೆಂಪು ಬಣ್ಣವನ್ನು ಬಚ್ಚಿಟ್ಟುಕೊಂಡ ಕೈಯೂರಿನ ಹೃದಯ, ಇಡೀ ಊರೇ ಒಂದು ಸ್ಮಾರಕವಾಗಿ ನಿಂತ ಭಾವ.


ನಿರಂಜನರು ಓದಿದ ನೀಲೇಶ್ವರದ ರಾಜಾಸ್ ಹೈಸ್ಕೂಲು

ಇಂತಹ ಕೈಯೂರಿಗೆ ಮಾಸಿ ಹೋಗದ ಬಣ್ಣ ಬಳಿದು ಕನ್ನಡಿಗರಿಗೆ ಕೊಟ್ಟವರು ನಿರಂಜನ. ‘ಚಿರಸ್ಮರಣೆ’ ಕಾದಂಬರಿಯಲ್ಲಿ ಕಲ್ಪನೆಗಿಂತ ಹೆಚ್ಚು ವಾಸ್ತವವೇ ಹುದುಗಿದ್ದರೆ ಅದಕ್ಕೆ ನಿರಂಜನರು ಕಾರಣರಲ್ಲ. ವಾಸ್ತವವನ್ನು ಬಿಟ್ಟು ಈ ಊರು ಅತ್ತಿತ್ತ ಚಲಿಸುವುದಿಲ್ಲ. ಇಡೀ ಕೈಯೂರಿಗೆ ಅಂತಹ ಕರ್ತೃತ್ವ ಶಕ್ತಿಯಿದೆ. ಭಾರತದ ಎಲ್ಲ ಹಳ್ಳಿಗಳಂತೆಯೇ ಬಂದದ್ದನ್ನು ಅನುಭವಿಸುತ್ತ ಆತ್ಮಾಭಿಮಾನವನ್ನು ತಿದ್ದುವ ಬದಲು ಆತ್ಮಾಭಿಮಾನದ ಸಂರಕ್ಷಣೆಗಾಗಿ ಸಮಾಜವನ್ನೇ ತಿದ್ದುವ ಕಾಯಕದ ನಡುವೆ ಚಿರ–ಸ್ಮರಣೆಗೆ ಸಂದ ನಾಲ್ಕು ಮಂದಿ ಯುವಕರು ಇದೇ ಕೆಂಪು ಮಣ್ಣಿನಿಂದ ಕುಡಿಯೊಡೆದವರು. ಹಾಗಾಗಿ ಇಲ್ಲಿ ಕೆಂಪು ಪತಾಕೆಗಳೇ ಹಾರಾಡುತ್ತವೆ, ಊರಿಡೀ ಕೆಂಪಾಗಿ ಕಂಗೊಳಿಸುತ್ತದೆ.

ಸಮಾನತೆಗಾಗಿ, ಸೋದರತೆಗಾಗಿ ಹೋರಾಡಿದ ಇಲ್ಲಿನ ಮಂದಿಗೆ ಆಸ್ತಿ ತಗಾದೆಗಳಿಲ್ಲ, ಕೋರ್ಟು ದಾವೆಗಳಿಲ್ಲ, ಭೇದ ಭಾವಗಳಿಲ್ಲ. ರಾಜಕೀಯ ಇದ್ದರೂ ಬೇಕೆಂದಾಗ ಎಲ್ಲ ಒಂದೇ ಕೊಡೆಯಡಿಗೆ ಬಂದು ನಿಲ್ಲುತ್ತಾರೆ. ಇವತ್ತಿಗೂ ಜಮೀನುಗಳ ನಡುವೆ ಬೇಲಿಗಳಿಲ್ಲದ, ಕಾಂಪೌಂಡುಗಳಿಲ್ಲದ ಕೈಯೂರನ್ನು ಕಂಡಾಗ ಬೆರಗಾಗುತ್ತದೆ. ಯಾರ ತೋಟ ಯಾವುದು ಎಂದು ತಿಳಿಯದೆ ದಂಗಾಗಿಬಿಡುತ್ತೇವೆ.

ಕಯ್ಯೂರಿನ ಗುಡ್ಡದ ಮೇಲಿನಿಂದ ಒಂದು ರಸ್ತೆ ಹಾದು ಹೋಗುತ್ತದೆ, ಅದು ಆಧುನಿಕ ಬದುಕಿಗೆ ತೆರೆಯುವ ರಸ್ತೆ. ಅದನ್ನು ಆಧರಿಸಿ ಒಂದು ಸಹಕಾರಿ ಬ್ಯಾಂಕು, ಒಂದು ರಾಷ್ಟ್ರೀಕೃತ ಬ್ಯಾಂಕು, ಒಂದು ಹೈಯರ್ ಸೆಕೆಂಡರಿ ಶಾಲೆ, ಒಂದು ಅಂಚೆ ಕಚೇರಿ, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಐಟಿಐ ಇತ್ಯಾದಿಗಳಿವೆ. ಕೆಳಗೆ ತೋಟಗಳ ನಡುವೆ ಇನ್ನೊಂದು ಕಡಿದಾದ ರಸ್ತೆ. ಅದಕ್ಕೆ ಅಂಟಿಕೊಂಡು ಒಂದಷ್ಟು ಮನೆಗಳು. ಊರನ್ನು ಕ್ರಾಂತಿಗಾಗಿ ಸಿದ್ಧಗೊಳಿಸಿದ ಮಾಸ್ತರರಿದ್ದ ಹಳೆಯ ಎಲ್. ಪಿ. ಶಾಲೆ, ಕಯ್ಯೂರು ವೀರರ ಮನೆಗಳು ಮತ್ತು ಸ್ಮಾರಕಗಳಿವೆ. ಇದೇ ಬಯಲಿನಲ್ಲಿ ರೈತ ಸಂಘದ ಪ್ರಭಾತ ಫೇರಿಗಳು ನಡೆದುವು, ಮೆರವಣಿಗೆಗಳು ಸಾಗಿದುವು. ಅಂತಹ ಒಂದು ಮೆರವಣಿಗೆಯನ್ನು ಏಕಾಏಕಿ ಅಡ್ಡಗಟ್ಟಿದ ಪೊಲೀಸ್ ಸುಬ್ರಾಯ ಅನಿರೀಕ್ಷಿತವಾಗಿ ಏಟು ತಿಂದು, ಓಡಿ ಹೋಗಿ, ಬಯಲ ಬದಿಯ ನದಿಗೆ ಹಾರಿ, ಸಾಧ್ಯವಿದ್ದಷ್ಟೂ ಈಜಿ, ಕೊನೆಗೆ ಈಜು ಸೋತು ಮುಳುಗಿಹೋದ ಕತೆ ಇಡೀ ಊರನ್ನು ಇದ್ದಕ್ಕಿದ್ದಂತೆ ಕ್ರಾಂತಿಗೆ ಎಬ್ಬಿಸಿದ್ದು ಸುಳ್ಳಲ್ಲ.


ಪೊಲೀಸ್ ಸುಬ್ರಾಯ ತೇಜಸ್ವಿನಿ ನದಿಗೆ ಹಾರಿದ ಜಾಗ

1935ರ ಹೊತ್ತಿಗೆ ಈ ಊರಲ್ಲಿ ಇದ್ದುದು ಇಬ್ಬರು ಜಮೀನ್ದಾರರು– ಒಬ್ಬ ನಂಬೂದಿರಿ, ಒಬ್ಬ ನಂಬಿಯಾರ್. ನಂಬೂದಿರಿ ಯಾವ ಕೈಗೂ ಸಿಕ್ಕದ ಮನುಷ್ಯ, ಹಾಗಾಗಿ ಆತನ ಚಿತ್ರ ತುಂಬ ಮಸುಕು. ನಂಬಿಯಾರ್ ಶೋಷಣೆಯ ಪ್ರತಿರೂಪ. ಊರಿಗೆ ಶಾಲೆ ತಂದು ತಪ್ಪುಮಾಡಿದೆ ಅಂತ ಆತನಿಗೆ ಅರಿವಾದದ್ದು ತುಂಬ ತಡವಾಗಿ. ಆ ಶಾಲೆ ಮತ್ತು ಅಲ್ಲಿನ ಒಬ್ಬ ಮಾಸ್ತರ ಇಲ್ಲದಿರುತ್ತಿದ್ದರೆ ಕಯ್ಯೂರಿನ ಕ್ರಾಂತಿ ನಡೆಯುತ್ತಿರಲಿಲ್ಲ. ಮಾಸ್ತರರು ಸಂಜೆ ಹೊತ್ತಿಗೆ ಪತ್ರಿಕೆ ಓದುವ ಮೂಲಕ ಅಲ್ಲಿ ಸೇರುತ್ತಿದ್ದ ಹದಿಹರೆಯದ ಯುವಕರಿಗೆ ಸ್ವಾತಂತ್ರ್ಯದ ಪಾಠ ಹೇಳಿದರು. ಸಮಾನತೆಯ ಅಗತ್ಯವನ್ನು ಬೋಧಿಸಿದರು. 1937ರಲ್ಲಿ ಮಲೆಯಾರತ್ತ್ ಚಿರುಕಂಡನ ಮನೆಯಲ್ಲಿ ರೈತ ಸಂಘದ ಮೊದಲ ಸಭೆ ನಡೆಯಿತು. ಜಮೀನ್ದಾರರು ಮತ್ತು ಅವರ ಸೇವಕರನ್ನು ಹೊರತುಪಡಿಸಿ ಊರಿನ ಎಲ್ಲ ರೈತರೂ ಸಂಘದ ಸದಸ್ಯರಾದರು.

‘ಚಿರಸ್ಮರಣೆ’ಯಲ್ಲಿ ಎಲ್ಲೂ ಮಾಸ್ತರರ ಹೆಸರಿಲ್ಲ! ಅವರು ಊರಿಗೇ ಶಿಕ್ಷಣ ನೀಡಿ ಎಚ್ಚರಿಸಲು ಬಂದ ಒಬ್ಬ ವ್ಯಕ್ತಿ ಅಷ್ಟೆ. ನಿರಂಜನರ ಸೃಜನಶೀಲತೆಗೆ ಇಂತಹ ಮಾಸ್ತರರ ಕಲ್ಪನೆ ಗರಿಯೊಡೆದದ್ದು ಕೆ. ಮಾಧವನ್ ಎಂಬ ವ್ಯಕ್ತಿತ್ವದ ಮೂಲಕ. ಆತ ಊರನ್ನು ಎಚ್ಚರಿಸಿದ, ಊರು ರೈತ ಸಮೂಹವನ್ನೇ ಎಚ್ಚರಿಸಿತು. ಕೊನೆಗೆ ಹೋರಾಟವು ಜಮೀನ್ದಾರೀ ಪದ್ಧತಿ ನೆಲಕಚ್ಚುವ ತನಕ ಬಂದು ಮುಟ್ಟಿತು.


ರಕ್ತಸಾಕ್ಷಿಗಳ ವೀರಸ್ತಂಭ

ಮಾಸ್ತರರ ಪ್ರೇರಣೆಯಿಂದ ಊರಿನ ಬಡ ರೈತ ಯುವಕರು ಸೇರಿ ರೈತಸಂಘ ಸ್ಥಾಪಿಸಿದ್ದು, ತಳಿಪರಂಬ ಜಾತ್ರೆಯ ಸಂದರ್ಭದಲ್ಲಿ ನಡೆದ ರೈತ ಸಮ್ಮೇಳನಕ್ಕೆ ಒಂದಷ್ಟು ಮಂದಿ ಹೋಗಿ ಬಂದದ್ದು ರೈತ ಕ್ರಾಂತಿಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟಿತು. ಅಲ್ಲಿಂದ ಮುಂದೆ ಇಟ್ಟ ಒಂದೊಂದು ಹೆಜ್ಜೆಗೂ ಕ್ರಾಂತಿಯ ಕಡೆ ಮುಖಹಾಕಿ ಹರಿಯುವ ಉತ್ಸಾಹವಿತ್ತು. ‘ಗಾಂಧಿಯನ್ ಕಮ್ಯೂನಿಸಂ’ನ ಛಾಯೆ ಇತ್ತು. ಜಮೀನ್ದಾರಿಕೆಯನ್ನೂ ವಸಾಹತುಶಾಹಿಯನ್ನು ಒಟ್ಟಿಗೇ ಎದುರಿಸುವ ಉದ್ದೇಶವಿತ್ತು. ಆಡಳಿತ ಮತ್ತು ಜಮೀನ್ದಾರರು ಪರಸ್ಪರ ಕೈಜೋಡಿಸಿ ಪೊಲೀಸರನ್ನು ಕರೆಸುವ, ರೈತರನ್ನು ಬೆದರಿಸುವ ಪರಿಪಾಟ ಬೆಳೆಯಿತು. ಅಂತಹ ಉದ್ದೇಶಕ್ಕಾಗಿ ನಂಬಿಯಾರರ ಮನೆಗೆ ಬಂದಿಳಿದ ಪೊಲೀಸ್ ಸುಬ್ರಾಯ ನದಿಯಲ್ಲಿ ಕೊಚ್ಚಿಹೋದ ರೂಪಕ ಕಾಲ್ಪನಿಕವಲ್ಲ.

ಆಗ ಕಯ್ಯೂರಿನ ಜನಸಂಖ್ಯೆ ಐನೂರಕ್ಕೂ ಕಡಿಮೆ, ಈಗ ಅಬ್ಬಬ್ಬಾ ಎಂದರೆ ಆರು ಸಾವಿರ. ಇಂತಹ ಹಳ್ಳಿ ರೈತ ಕ್ರಾಂತಿಯ ಕಾರಣಕ್ಕೆ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳಬಹುದೆಂಬ ಕಲ್ಪನೆಯನ್ನು ಯಾರೂ ಕಟ್ಟಿಕೊಳ್ಳದ ಕಾಲದಲ್ಲಿ ಊರ ಯುವಕರಾದ ಮಠತ್ತಿಲ್ ಅಪ್ಪು, ಕೋಯಿತ್ತಟ್ಟಿಲ್ ಚಿರುಕಂಡ, ಪೊಡವರ ಕುಞ್ಞಂಬು ಮತ್ತು ಅಬೂಬಕ್ಕರ್ ರೈತ ಹೋರಾಟದ ನೆವದಲ್ಲಿ ನೇಣುಗಂಬವೇರಿದ್ದೊಂದು ಅನಿರೀಕ್ಷಿತ ಘಟನೆ. ಪೊಲೀಸ್ ಸುಬ್ರಾಯ ಜಲಸಮಾಧಿಯಾದ ಕಾರಣಕ್ಕೆ ಪೊಲೀಸರೂ, ಮದರಾಸು ಸಶಸ್ತ್ರ ಪಡೆಯ ಜವಾನರೂ ಸೇರಿ ಬಂಧಿಸಿದ 60 ಮಂದಿಯಲ್ಲಿ ಪ್ರಾಯ ಪೂರ್ತಿಯಾಗದ ಕುಟ್ಟಿಕೃಷ್ಣನ್ ಅಥವಾ ಚೂರಿಕ್ಕಾಡನ್ ಕೃಷ್ಣನ್ ನಾಯರೂ ಇದ್ದರು. ಮಂಗಳೂರಿನ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆಯ ನಾಟಕ ನಡೆದು ಈ ಪೈಕಿ ನಾಲ್ಕು ಮಂದಿಗೆ ಮರಣದಂಡನೆಯೂ, ಇನ್ನು ಕೆಲವರಿಗೆ ಜೀವನಪರ್ಯಂತ ಕಾರಾಗೃಹವೂ, ಉಳಿದವರಿಗೆ ಬಿಡುಗಡೆಯೂ ಸಿಕ್ಕಿತು. 1943 ಮಾರ್ಚ್ 29ರಂದು ಬೆಳಿಗ್ಗೆ ಅಪ್ಪು, ಚಿರುಕಂಡ, ಕುಞ್ಞಂಬು ಮತ್ತು ಅಬೂಬಕ್ಕರ್ ಅವರ ಶರೀರ ರೈತಕ್ರಾಂತಿಯ ಬಾವುಟವಾಗಿ ಮಂಗಳೂರಿನ ನೇಣುಗಂಬದಲ್ಲಿ ಹಾರಾಡಿದ್ದು ಸೋಜಿಗದ ಸುದ್ದಿಯಾಯಿತು.


ಈವರೆಗೆ ಮೂವರು ಪ್ರಕಾಶಕರಿಂದ ಕನ್ನಡದಲ್ಲಿ ಒಟ್ಟು 14 ಮುದ್ರಣಗಳನ್ನು ಕಂಡಿರುವ 'ಚಿರಸ್ಮರಣೆ' ಕೃತಿ

ನದಿ ದಾಟಿದ ಕೂಡಲೇ ಬಲಬದಿಗೆ ಹಬ್ಬಿದ ವಿಶಾಲವಾದ ಹೊಲಕ್ಕೆ ಪೂಕಂಡಂ ಮೈದಾನ ಎಂದು ಹೆಸರು. ಪೊಲೀಸ್ ಸುಬ್ರಾಯ ನದಿಗೆ ಹಾರದಿರುತ್ತಿದ್ದರೆ ಬಯಲಿನ ಮೂಡು ಗಡಿಯಿಂದ ಹೊರಟ ರೈತ ಸಂಘದ ಮೆರವಣಿಗೆ ಇಡೀ ಬಯಲನ್ನು ಹಾದು ಪೂಕಂಡಂ ಮೈದಾನಕ್ಕೆ ಬಂದು ತಲುಪುತ್ತಿತ್ತು. ಅಲ್ಲಿ ಒಂದು ಕಾರ್ಯಕ್ರಮವನ್ನೂ ನಡೆಸಲು ಉದ್ದೇಶಿಸಲಾಗಿತ್ತು. ಕೈಯೂರು ಕ್ರಾಂತಿಯ ಸ್ಮಾರಕ ಕಾರ್ಯಕ್ರಮಗಳು ಈಗಲೂ ಇಲ್ಲಿ ನಡೆಯುವುದುಂಟು, ಜನಸಂದಣಿ ಸೇರುವುದುಂಟು.

ತೇಜಸ್ವಿನಿ ನದಿ ತೀರದ ಕಯ್ಯೂರು ವೀರರ ಸ್ಮಾರಕ ಮಂದಿರದಲ್ಲಿ ಊರಿನ ಹೋರಟಗಾರರೆಲ್ಲರ ಭಾವಚಿತ್ರಗಳನ್ನೂ, ಹೋರಾಟದ ಇತಿಹಾಸವನ್ನೂ ದಾಖಲಿಸಲಾಗಿದೆ. ವೀರರ ಮನೆಗಳ ಮುಂದೆ ಅವರ ವೈಯಕ್ತಿಕ ನೆಲೆಯ ಸ್ಮಾರಕಗಳನ್ನು ನಿರ್ಮಿಸಿ ಹೋರಾಟದ ನೆನಪನ್ನು ಹಸಿರಾಗಿ ಉಳಿಸಿದ್ದಾರೆ. ಅಂಕು ಡೊಂಕಾಗಿ ಹರಿಯುವ ರಸ್ತೆಯೊಂದು ಈ ಎಲ್ಲವನ್ನೂ ಮುಖ್ಯ ರಸ್ತೆಯೊಂದಿಗೆ ಜೋಡಿಸುತ್ತದೆ.

ನಿರಂಜನರು ಪ್ರೌಢಶಾಲಾ ಶಿಕ್ಷಣಕ್ಕಾಗಿ ನೀಲೇಶ್ವರದ ರಾಜಾಸ್ ಹೈಸ್ಕೂಲ್ ಸೇರಿದ್ದು 1938ರಲ್ಲಿ. ಆಗ ಕಯ್ಯೂರಿನ ರೈತ ಸಂಘಕ್ಕೆ ಒಂದು ವರ್ಷ ಪ್ರಾಯ. ನಿರಂಜನರು ಪ್ರೌಢಶಾಲಾ ಶಿಕ್ಷಣ ಮುಗಿಸಿದ್ದು 1941ರಲ್ಲಿ. ಅದು ರೈತ ಹೋರಾಟ ತನ್ನ ಬಿರುಸನ್ನು ಹೆಚ್ಚಿಸುತ್ತಿದ್ದ ಕಾಲ. ಪರಕೀಯರ ಆಡಳಿತದ ವಿರುದ್ಧ ಪ್ರತಿಭಟನೆಗಾಗಿ ನಿರಂಜನರು ತಮ್ಮ ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟನ್ನೂ ಪಡೆಯಲಿಲ್ಲ. ನೀಲೇಶ್ವರದಲ್ಲೇ ಇದ್ದು, ಪರಿಸರದಲ್ಲೆಲ್ಲ ಸುತ್ತಾಡಿ ಎಲ್ಲವನ್ನೂ ಕಂಡ ನಿರಂಜನರಿಗೆ ರೈತ ಕ್ರಾಂತಿಯ ನಿಕಟ ಪರಿಚಯವಿತ್ತು. ಅದನ್ನು ಹತ್ತಿರದಿಂದ ಕಂಡು, ಅನುಭವವಾಗಿ ಅರಗಿಸಿ ಸೃಜನಶೀಲವಾಗಿ ಕಟ್ಟಬಲ್ಲ ಶಕ್ತಿಯಿತ್ತು. ಆದ್ದರಿಂದಲೇ ಕನ್ನಡದ ಚಿರಸ್ಮರಣೆ ಮಲಯಾಳಿಗಳ ಮನೆಮಾತಾಗಿಬಿಟ್ಟಿತು.


ಕಯ್ಯೂರು ಪೇಟೆ (ಚಿತ್ರ: ಸಂಜು ಕಾಸರಗೋಡು)

ಮಲಯಾಳೀ ನೆಲದಲ್ಲಿ ನಡೆದ ಕ್ರಾಂತಿಯ ಕತೆ ಮೊದಲು ಕನ್ನಡದಲ್ಲಿ ಕಾದಂಬರಿಯಾಗಿ, ಆಮೇಲೆ ಮಲಯಾಳಕ್ಕೆ ಅನುವಾದವಾಗಿ, ಕನ್ನಡಕ್ಕಿಂತ ಹೆಚ್ಚು ಮಲಯಾಳಿಗಳಿಗೆ ಹತ್ತಿರವಾಯಿತು. ನಿರಂಜನರು ಮಲಯಾಳದ ಲೇಖಕರು ಎನ್ನುವಷ್ಟರ ಮಟ್ಟಿಗೆ ಕೇರಳದಾದ್ಯಂತ ಜನಪ್ರಿಯರಾದರು. ಆ ಹೊಳೆಗೆ ಎರಡು ಹೆಸರುಗಳಿದ್ದವು. ಪಯ್ಯನೂರು ಬದಿಯವರು ಕವ್ವಾಯಿ ಹೊಳೆ ಎನ್ನುತ್ತಿದ್ದರು. ಇನ್ನೊಂದು ಹೆಸರು ಕರಯಂಕೊಡೆ ನದಿ. ಆದರೆ ಹೋರಾಟದ ತೇಜಸ್ಸನ್ನೂ ಒಳಗೊಂಡು ನಿರಂಜನರೇ ಇಟ್ಟ ತೇಜಸ್ವಿನಿ ಎಂಬ ಹೆಸರು ಈಗ ಅತ್ಯಂತ ಜನಪ್ರಿಯ. ನಿರಂಜನರ ಹಿರಿಯ ಮಗಳೂ ತೇಜಸ್ವಿನಿಯೇ.

ಈ ಹೊತ್ತಿಗೂ ಕಯ್ಯೂರಿನ ನೆಲ ಕಯ್ಯೂರು ವೀರರ ಜತೆ ನಿರಂಜನರನ್ನೂ ನೆನಪಿಸುತ್ತದೆ. ಅವರು ಕಯ್ಯೂರಿನವರೇ ಆಗಿಬಿಟ್ಟಿದ್ದಾರೆ.


ನಿರಂಜನ

ಎಲ್ಲ ಭಾಷೆಗಳಲ್ಲೂ..

ನಿರಂಜನರ ಅತ್ಯಂತ ಜನಪ್ರಿಯ ಕಾದಂಬರಿ ‘ಚಿರಸ್ಮರಣೆ’(1955) ಕನ್ನಡದಲ್ಲಿ ಪ್ರಕಟವಾದ 20 ವರ್ಷಗಳ ಬಳಿಕ ಮಲಯಾಳಂಗೆ ಅನುವಾದಗೊಂಡಿತು. ಇವತ್ತು ಮಲಯಾಳಂನಲ್ಲಿ ಕನ್ನಡಕ್ಕಿಂತ ಹೆಚ್ಚು ಮುದ್ರಣಗಳನ್ನು ಕಂಡಿದೆ. ತಮಿಳು, ತೆಲುಗು, ಮರಾಠಿ, ಬಂಗಾಳಿ, ತುಳು ಮತ್ತು ಇಂಗ್ಲಿಷ್‌ ಭಾಷೆಗೂ ಈ ಕಾದಂಬರಿ ಅನುವಾದಗೊಂಡಿದೆ.

‘ಪ್ರಜಾವಾಣಿ’ ಅಂಕಣ

ನಿರಂಜನರದ್ದು ಅಂಕಣ ಸಾಹಿತ್ಯದಲ್ಲೂ ಎತ್ತಿದ ಕೈ. 10ಕ್ಕೂ ಹೆಚ್ಚು ಪತ್ರಿಕೆಗಳಿಗೆ ಅವರು ಅಂಕಣಗಳನ್ನು ಬರೆದಿದ್ದಾರೆ. ಅವರ ಅಂಕಣ ಬರಹಗಳದ್ದೇ ಎಂಟು ಕೃತಿಗಳು ಹೊರಬಂದಿವೆ. 1962ರಿಂದ 1966ರವರೆಗೆ ನಾಲ್ಕು ವರ್ಷ ಕಾಲ ಅವರು ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯಲ್ಲಿ ‘ಬೇವು ಬೆಲ್ಲ’ ಎನ್ನುವ ಅಂಕಣ ಬರೆದಿದ್ದರು. ಈ ಬರಹಗಳು ಪುಸ್ತಕ ರೂಪದಲ್ಲಿ ‘ಅಂಕಣ’ ಎನ್ನುವ ಹೆಸರಲ್ಲಿ ಪ್ರಕಟವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು