ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೇಕೆ ಕೊಡಬೇಕು ಕಪ್ಪ? ಕಿತ್ತೂರು ಉತ್ಸವದ ನೆಪದಲ್ಲಿ ಹೀಗೊಂದು ವಿಶ್ಲೇಷಣೆ...

Last Updated 24 ಅಕ್ಟೋಬರ್ 2021, 1:32 IST
ಅಕ್ಷರ ಗಾತ್ರ

ಕೇಂದ್ರ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ಹೋದ ತಿಂಗಳು ದಿಲ್ಲಿಗೆ ಹೋಗಿದ್ದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಎರಡನೆಯ ದಿನ ಹಿಂದಿಯ ಸುಪ್ರಸಿದ್ಧ ಲೇಖಕ ನರೇಂದ್ರ ಪ್ರಸಾದ, ತಮಿಳಿನ ಲೇಖಕ ನಟರಾಜನ್ ಹಾಗೂ ನಾನು ಹಾಗೆಯೇ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತಿದ್ದೆವು. ಮಾತು ಸ್ವಾತಂತ್ರ್ಯ ಆಂದೋಲನದೆಡೆಗೆ ತಿರುಗಿತು. ಈ ವರ್ಷ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವುದರಿಂದ ಮತ್ತು ಕೇಂದ್ರ ಸರ್ಕಾರದ ಎಲ್ಲ ಕಾರ್ಯಕ್ರಮಗಳೂ ಆಜಾದಿ ಕಾ ಅಮೃತ ಮಹೋತ್ಸವ ಎಂಬ ಟ್ಯಾಗ್‍ಲೈನಿನಲ್ಲಿ ಸಂಭ್ರಮಿಸುತ್ತಿರುವುದರಿಂದ ಸಹಜವಾಗಿ ಮಾತು 1857ರ ಪ್ರಥಮ ಸ್ವಾತಂತ್ರ್ಯಾಂದೋಲನವೆಂದು ಹೆಸರಾಗಿರುವ 'ಸಿಪಾಯಿ ದಂಗೆ' ಅಥವಾ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಹೋರಾಟದೆಡೆ ತಿರುಗಿತು.

ಈ 1857ರ ಸ್ವಾತಂತ್ರ್ಯ ಹೋರಾಟಕ್ಕಿಂತ ಮೊದಲು ಅಂದರೆ ಲಕ್ಷ್ಮೀಬಾಯಿಯ ಬಂಡಾಯಕ್ಕಿಂತ 33 ವರ್ಷ ಮೊದಲು ಬ್ರಿಟಿಷರ ವಿರುದ್ಧ ಖಡ್ಗ ಹಿರಿದವಳು ಕಿತ್ತೂರಿನ ರಾಣಿ ಚನ್ನಮ್ಮ. 1824ರಲ್ಲಿಯೇ ಆಕೆ ಬ್ರಿಟಿಷರ ವಿರುದ್ಧ ಯುದ್ಧ ಸಾರಿ ತನ್ನ ಸ್ವಾಭಿಮಾನವನ್ನು ಮೆರೆದವಳು. ಬ್ರಿಟಿಷರು ಹಾಕಿದ ಕರಾರುಗಳನ್ನು ಒಪ್ಪಿಕೊಂಡಿದ್ದರೆ ಆಕೆ ಕಿತ್ತೂರಿನ ರಾಣಿಯಾಗಿ ಸುಖದಿಂದ ಜೀವಿಸಬಹುದಿತ್ತು. ಆಕೆಯ ನಂತರ ಅವಳ ವಂಶಸ್ಥರು ಭಾರತದ ಉಳಿದ ಸಂಸ್ಥಾನಿಕರು ಬದುಕುತ್ತಿರುವ ಸುಖದ, ವಿಲಾಸದ ಜೀವನವನ್ನು ಬದುಕಬಹುದಿತ್ತು. ಆದರೆ ಸ್ವಾಭಿಮಾನಿಯಾಗಿದ್ದ ಚನ್ನಮ್ಮ ಗುಲಾಮಗಿರಿಯನ್ನು ಒಪ್ಪಿಕೊಳ್ಳಲು ಸಿದ್ಧವಾಗಲಿಲ್ಲ. ಇದರ ಪರಿಣಾಮವೇನಾಯಿತೆಂದರೆ ಕಿತ್ತೂರಿಗೂ ಬ್ರಿಟಿಷರಿಗೂ ಯುದ್ಧ ಏರ್ಪಟ್ಟು ಅದರಲ್ಲಿ ಚನ್ನಮ್ಮ ಸೋಲಬೇಕಾಯಿತು. ಆದರೆ ಅವಳು ತೋರಿಸಿದ ಧೈರ್ಯ, ಸಾಹಸಗಳು ಇತಿಹಾಸದಲ್ಲಿ ದಾಖಲಿಸಲ್ಪಟ್ಟವು.

‘ಲಕ್ಷ್ಮೀಬಾಯಿಗಿಂತ ಮೊದಲು 1824ರಲ್ಲಿಯೇ ಲಕ್ಷ್ಮೀಬಾಯಿಯಂತಹದ್ದೇ ಹೋರಾಟವನ್ನು ಕರ್ನಾಟಕದ ಒಂದು ಸಣ್ಣ ಸಂಸ್ಥಾನದ ರಾಣಿಯಾಗಿದ್ದ ಚನ್ನಮ್ಮ ನಡೆಸಿದ್ದಳು. ನನ್ನ ಅಭಿಪ್ರಾಯದಲ್ಲಿ ಚನ್ನಮ್ಮ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟವೇ ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ’ ಎಂದು ನಾನು ಹೇಳಿದೆ. ಅದಕ್ಕೆ ನಟರಾಜನ್‍ರವರು ‘ಚನ್ನಮ್ಮ ಹೋರಾಡಿದ ಇಸ್ವಿ ಯಾವುದು?’ ಎಂದು ಕೇಳಿದರು.

‘1824’ ಎಂದೆ ನಾನು.

‘1824ಗಿಂತ ಮೊದಲು ತಮಿಳುನಾಡಿನಲ್ಲಿ ವೀರಪಾಂಡ್ಯ ಕಟ್ಟಿಬೊಮ್ಮನ್ ಎಂಬ ರಾಜ ಬ್ರಿಟಿಷರ ವಿರುದ್ಧ ಖಡ್ಗ ಹಿರಿದಿದ್ದ. ಈ ಯುದ್ಧದಲ್ಲಿ ಆತ ಸೋತ. ಬ್ರಿಟಿಷರು ಅವನನ್ನು ಬಹಿರಂಗವಾಗಿ ಗಲ್ಲಿಗೇರಿಸಿದರು’ ಎಂದರು ನಟರಾಜನ್.

‘ವೀರಪಾಂಡ್ಯ ಕಟ್ಟಿಬೊಮ್ಮನ್‍ನ ಇಸ್ವಿ ಯಾವುದು?’ ನಾನು ಕೇಳಿದೆ.

‘ಅದು 1799 ರಲ್ಲಿ. ಆತನಿಗೆ 16 ಅಕ್ಟೋಬರ್ 1799ರಲ್ಲಿ ಕಾಯಥರ್ ಎಂಬ ಊರಿನಲ್ಲಿ ಗಲ್ಲಿಗೆ ಹಾಕಲಾಯಿತು’ ಎಂದರು ನಟರಾಜನ್.

‘ಆತನ ವಿಶೇಷತೆ ಏನು?’ ನಾನು ಕೇಳಿದೆ.

‘ವೀರಪಾಂಡ್ಯ ಕಟ್ಟಿಬೊಮ್ಮನ್’ ಪಾಂಚಾಲಕುರುಚ್ಚಿ ಎಂಬ ಸಣ್ಣ ರಾಜ್ಯದ ಅಧಿಪತಿ. ಈಗದು ತಮಿಳುನಾಡಿನ ತುತುಕುಡಿ ಎಂಬ ಜಿಲ್ಲೆಯಲ್ಲಿದೆ. ಆತ ಹುಟ್ಟಿದ್ದು ಜನವರಿ 3, 1760ರಲ್ಲಿ. ಪಾಂಚಾಲಕುರುಚ್ಚಿ ಆಗ ಮಧುರೈ ಸಾಮ್ರಾಜ್ಯದ ಅಂಗವಾಗಿತ್ತು. ಮಧುರೈಯನ್ನು ಗೆದ್ದ ನಂತರ ಬ್ರಿಟಿಷರು ಇವನ ರಾಜ್ಯವನ್ನು ಕಬಳಿಸಲು ಹವಣಿಸಿದರು. ಇವನು ಅದನ್ನು ವಿರೋಧಿಸಿದ. ಆಗ ಬ್ರಿಟಿಷರು ಪ್ರತಿವರ್ಷ ಬ್ರಿಟಿಷ್ ಸಾಮ್ರಾಜ್ಯಕ್ಕೆ ಇಂತಿಷ್ಟು ಕಪ್ಪ ನೀಡಬೇಕೆಂದು ಕರಾರು ಹಾಕಿ ಆಜ್ಞಾಪಿಸಿದರು’ ನಟರಾಜನ್ ಹೇಳಿದರು.

‘ಕಪ್ಪ ಅಂದ್ರೆ?’ ನಾನು ಕೇಳಿದೆ.

‘ಕಪ್ಪ ಅಂದ್ರೆ ಕರ ಅಥವಾ ಇಂತಿಷ್ಟು ಟ್ಯಾಕ್ಸ್ ಕೊಡುವುದು. ಭಾರತದಲ್ಲಿಯ ತಾವು ಗೆದ್ದ ರಾಜ್ಯಗಳ ರಾಜದಿಂದ ಬ್ರಿಟಿಷರು ಈ ರೀತಿಯ ಕಪ್ಪವನ್ನು ವಸೂಲಿ ಮಾಡುತ್ತಿದ್ದರು. ಅದೊಂದು ರೀತಿ ಗುಲಾಮನಾದವನು ತನ್ನ ಒಡೆಯನಿಗೆ ಸಲ್ಲಿಸುವ ಗೌರವದ ಧನವಾಗಿತ್ತು. ಕಪ್ಪ ನೀಡದ ರಾಜ್ಯವನ್ನು ಬ್ರಿಟಿಷರು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ದೇಶಿ ರಾಜರು ಬ್ರಿಟಿಷರಿಗೆ ಹೆದರಿ ಅವರಿಗೆ ನೀಡಬೇಕಾಗಿರುವ ಕಪ್ಪನ್ನು ಬಲವಂತವಾಗಿ ತಮ್ಮ ಪ್ರಜೆಗಳಿಂದ ವಸೂಲಿ ಮಾಡುತ್ತಿದ್ದರು’ ಎಂದರು ನಟರಾಜನ್.

‘ಮುಂದೆ?’ ನಾನು ಕೇಳಿದೆ.

‘ವೀರಪಾಂಡ್ಯನ ಅರಮನೆಗೆ ಜಾಕ್ಸನ್ ಎಂಬ ಆಗಿನ ಕಲೆಕ್ಟರ್ ಕಪ್ಪ ವಸೂಲಾತಿಗೆ ಹೋಗಿದ್ದ. ಆಗ ವೀರಪಾಂಡ್ಯ ಅವನನ್ನುದ್ದೇಶಿಸಿ ‘ಕಪ್ಪ ಕೊಡಬೇಕೆ ಕಪ್ಪ? ನಿಮಗೇಕೆ ಕೊಡಬೇಕು ಕಪ್ಪ? ನೀವೇನು ನಮ್ಮ ಒಡಹುಟ್ಟಿದವರಾ? ಅಣ್ಣ ತಮ್ಮಂದಿರಾ? ನೆಂಟರೇ? ಇಷ್ಟರೇ? ದಾಯಾದಿಗಳೇ?’ ಎಂದು ಹೇಳುತ್ತಿರುವಂತೆಯೇ ನನಗೊಂದು ಕ್ಷಣ ಶಾಕ್ ಹೊಡೆದಂತಾಯಿತು. ‘ಅರೆ! ಈ ಮಾತುಗಳು ನಮ್ಮ ಕಿತ್ತೂರಿನ ರಾಣಿ ಚನ್ನಮ್ಮಳು ತನ್ನ ರಾಜ್ಯಕ್ಕೆ ಕಪ್ಪ ವಸೂಲಾತಿಗೆ ಬಂದ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಗೆ ಹೇಳಿದ ಮಾತುಗಳು’ ಎಂದು ನೆನಪಾಗುತ್ತಿರುವಂತೆಯೇ ನಾನು ನಟರಾಜನ್‍ರ ಮಾತುಗಳನ್ನು ಅರ್ಧಕ್ಕೆ ತುಂಡರಿಸಿ, ‘ನಟರಾಜನ್, ಒಂದ್ನಿಮಿಷ! ಇದೇ ಮಾತುಗಳನ್ನು, ಶಬ್ದಶಃ ಇದೇ ಮಾತುಗಳನ್ನು ನಮ್ಮ ಚನ್ನಮ್ಮ ಆಗಿನ ಧಾರವಾಡದ ಕಲೆಕ್ಟರನಿಗೆ ಹೇಳಿ ಅವನ ನೀರನ್ನು ಇಳಿಸಿದ್ದಳು. ಚನ್ನಮ್ಮನ ಈ ಮಾತುಗಳು ಕರ್ನಾಟಕದ ಪ್ರತಿಯೊಬ್ಬರಿಗೆ ಬಾಯಿಪಾಠವಾಗಿವೆ’ ಎಂದೆ.

ನನ್ನ ಮಾತುಗಳಿಂದ ನಟರಾಜನ್‍ರಿಗೂ ಆಶ್ಚರ್ಯವಾಯಿತು.

‘ಚನ್ನಮ್ಮನ ಬಾಯಿಯಿಂದ ಬಂದ ಮಾತುಗಳಾವವು?’ ಎಂದು ಕೇಳಿದರು.

ಚನ್ನಮ್ಮ ಥ್ಯಾಕರೆಯ ನಡುವೆ ನಡೆದ ಸಂಭಾಷಣೆಯು ಬೇರೆ ಕನ್ನಡಿಗರಂತೆ ನನಗೂ ಬೈಪಾಠಾಗಿದ್ದಿತು. ಶಾಲೆಯ ಗ್ಯಾದರಿಂಗ್‍ಗಳಲ್ಲಿ ಈ ಸಂಭಾಷಣೆಯು ಪ್ರತಿಸಲವೂ ಪುನರಾವರ್ತಿತವಾಗುತ್ತಿತ್ತು. ಕನ್ನಡ ಶಾಲೆಯಿಂದ ಹೊರಬಿದ್ದು ಅರ್ಧ ಶತಕವಾಗಿದ್ದರೂ ಆ ಸಂಭಾಷಣೆಯು ನನ್ನ ನಾಲಿಗೆಯ ಮೇಲೆ ಇನ್ನೂ ಕುಣಿಯುತ್ತಿತ್ತು.

‘ಕಪ್ಪ ಕೊಡಬೇಕಂತೆ ಕಪ್ಪ? ನಿಮಗೇಕೆ ಕೊಡಬೇಕು

ಕಪ್ಪ? ನೀವೇನು ನಮ್ಮ ಒಡಹುಟ್ಟಿದವರಾ? ಅಣ್ಣ-

ತಮ್ಮಂದಿರಾ? ನೆಂಟರೇ? ಇಷ್ಟರೇ? ದಾಯಾದಿಗಳೇ?

ನೀವೇನು ಇಲ್ಲಿ ಉತ್ತೀರಾ? ಬಿತ್ತೀರಾ? ಮೋಡ

ರೈತ ಬಿತ್ತಾನೆ, ಉತ್ತಾನೆ, ಕಬ್ಬು ತಿನ್ನಲು

ಬಿಟ್ಟ ತಪ್ಪಿಗೆ ಕೂಲೀ ಕೊಡ್ಬೇಕಾ?

ಕಿತ್ತೂರು ನಿಮ್ಮಪ್ಪ ಕಟ್ಟಿ ಬೆಳೆಸಿದ

ಆಸ್ತಿಯೇನು? ನಿಮಗೇನಿದೆ ಹಕ್ಕು ಕಪ್ಪ ಕೇಳಲು?

ನಾವೇಕೆ ಕೊಡಬೇಕು ಕಪ್ಪ ನಿಮಗೆ? ನೆನಪಿರಲಿ

ಕಿತ್ತೂರಿನಿಂದ ಕಪ್ಪ ಕೇಳುವ ನಿಮ್ಮ ನಾಲಿಗೆ

ಕತ್ತರಿಸಿ ನಾಯಿಗೆ ಹಾಕುತ್ತಾರೆ ಈ ನೆಲದ ಮಕ್ಕಳು.

ಹೋಗಿ ಹೋಗಿ ಇಲ್ಲಿಂದ ಹೊರಟು ಹೋಗಿ’ ...

ಈ ಸಂಭಾಷಣೆಯನ್ನು ನಾನು ಹೇಳುವಾಗ ನಟರಾಜನ್ ಬಲು ಅಚ್ಚರಿಯಿಂದ ನನ್ನನ್ನೇ ನೋಡುತ್ತಿದ್ದರು. ಅವರಿಗೆ ಕನ್ನಡ ಬರುವುದಿಲ್ಲ. ಆದರೆ ನನ್ನ ಮಾತುಗಳು ಅವರಿಗೆ ಅರ್ಥವಾದವು. ಅವರು ನನ್ನನ್ನು ತಡೆದು ‘ಅರೆ, ನಮ್ಮ ವೀರಪಾಂಡ್ಯನ್ ಇದೇ ಮಾತುಗಳನ್ನು ಬ್ರಿಟಿಷರಿಗೆ ಹೇಳಿದ್ದ. ಸೇಮ್ ಟು ಸೇಮ್! ಇದೇ ಧಾಟಿ. ಇದೇ ಲಯ. ಇವೇ ಶಬ್ದಗಳು. ಒಂದೆರೆಡು ಕಡೆ ಶಬ್ದಗಳ ಬದಲಾವಣೆಗಳು ಇರಬಹುದು’ ಎಂದು ಅನ್ನುತ್ತ ವೀರಪಾಂಡ್ಯನ್ ಜಾಕ್ಸನ್‍ಗೆ ಹೇಳಿದ ಸಂಭಾಷಣೆಗಳ ಪೂರ್ತಿ ಪಾಠವನ್ನು ಒಪ್ಪಿಸಿದರು. ನನಗೂ ತುಂಬ ಅಚ್ಚರಿಯಾಯಿತು. ಭಾಷೆಗಳು, ಕಾಲ, ವ್ಯಕ್ತಿಗಳು ಬೇರೆ ಬೇರೆಯಾಗಿದ್ದರೂ ಅವುಗಳಲ್ಲಿ ಹರಿಯುವ ರೇತಸ್ಸು ಒಂದೆಯಾಗಿದ್ದಿತು. ವೀರಪಾಂಡ್ಯನ್‍ನ ಈ ಸಂಭಾಷಣೆಗಳು ತಮಿಳಿನ ಪ್ರತಿಯೊಬ್ಬ ಪೋರನ ನಾಲಿಗೆಯ ಮೇಲೆ ಕುಣಿದಾಡುತ್ತದೆಂದು ನಟರಾಜನ್ ಹೇಳಿದರು.

ನಮ್ಮಿಬ್ಬರ ಮಾತುಗಳನ್ನು ಶಾಂತವಾಗಿ ಕೇಳುತ್ತ ಕುಳಿತಿದ್ದ ನರೇಂದ್ರ ಪ್ರಸಾದ ಈಗ ಬಾಯಿ ಹಾಕಿದರು. ‘ನಿಮ್ಮಿಬ್ಬರ ಮಾತುಗಳನ್ನು ಕೇಳಿದೆ. ನಮಗೆ ಹಿಂದಿ ಭಾಷೆಯವರಿಗೆ ಕಿತ್ತೂರು ಚನ್ನಮ್ಮನಾಗಲಿ ಅಥವಾ ವೀರಪಾಂಡ್ಯನ್‌ ಆಗಲಿ ಗೊತ್ತೇ ಇರಲಿಲ್ಲ. ಆದರೆ ಇತ್ತೀಚಿಗೆ ಒಂದೈದು ಆರು ವರ್ಷಗಳಿಂದ ಛತ್ತೀಸಗಡದ ಮತ್ತು ಉತ್ತರ ಪ್ರದೇಶದ ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ಈ ವೀರಪಾಂಡ್ಯನ್‌ ಮತ್ತು ಚನ್ನಮ್ಮಳ ಇತಿಹಾಸವನ್ನು ಒಂದು ಪಾಠವನ್ನಾಗಿ ಕಲಿಸಲಾಗುತ್ತಿದೆ. ಅದರಲ್ಲಿ ನೀವು ಹೇಳಿದ ಮಾತುಗಳೂ ಇವೆ. ಅಚ್ಚರಿಯ ವಿಷಯವೆಂದರೆ ಒಂದೇ ಪಾಠದಲ್ಲಿ ಈ ಇಬ್ಬರೂ ಮಹಾನ್‌ ಕ್ರಾಂತಿಕಾರರನ್ನು ಅವರ ಇತಿಹಾಸದ ಜೊತೆಗೆ ಪರಿಚಯಿಸಲಾಗಿದೆ’ ಎಂದರು. ಅವರು ಹೇಳಿದ್ದು ಕೇಳಿ ನಾನು ಮತ್ತು ನಟರಾಜನ್ ಇಬ್ಬರೂ ‘ಆ’ ಎಂದು ಬಾಯಿ ತೆರೆದೆವು. ಇದು ನಮಗೆ ಹೊಸ ವಿಷಯವಾಗಿತ್ತು.

ನರೇಂದ್ರ ಪ್ರಸಾದ ಯಾರಿಗೋ ಫೋನ್ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ಪಠ್ಯದ ಪುಟಗಳನ್ನು ತರಿಸಿದರು. ಈ ಪಾಠದಲ್ಲಿ ವೀರಪಾಂಡ್ಯನ್ ಬಗೆಗೆ ಹಾಗೂ ಚನ್ನಮ್ಮನ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಚನ್ನಮ್ಮನ ಇತಿಹಾಸದ ಬಗ್ಗೆ ಅಭಿನಯಿಸಿದ ಒಂದು ಸ್ಕಿಟ್ ಫೋಟೊವನ್ನು ಇದರಲ್ಲಿ ಸೇರಿಸಲಾಗಿದೆ. ಚನ್ನಮ್ಮನ ಹೋರಾಟದ ಕಥೆಯನ್ನು ಹಿಂದಿ ಪ್ರಭಾವವಿರುವ ರಾಜ್ಯದ ವಿದ್ಯಾರ್ಥಿಗಳು ಓದುತ್ತಿರುವುದನ್ನು ನೋಡಿ ಮೈ ರೋಮಾಂಚನಗೊಂಡಿತು.

ವೀರಪಾಂಡ್ಯನ್‌ ಮತ್ತು ಕಿತ್ತೂರು ಚನ್ನಮ್ಮ ಈ ಇಬ್ಬರ ಕಥೆಗಳಲ್ಲಿ ಬರುವ ಸಂಭಾಷಣೆಯು ಅದ್ಹೇಗೆ ಒಂದೇ ರೀತಿಯಲ್ಲಿದೆಂದು ಮನಸ್ಸು ಬುದ್ಧಿಗೆ ಪ್ರಶ್ನಿಸುತ್ತಿತ್ತು. ಆಗ ತಕ್ಷಣ ಹೊಳೆದಿದ್ದೇನೆಂದರೆ - ಚನ್ನಮ್ಮನ ಈ ಸಂಭಾಷಣೆ ಇದ್ದದ್ದು ‘ಕಿತ್ತೂರು ಚನ್ನಮ್ಮ’ ಚಿತ್ರದಲ್ಲಿ. ಕಿತ್ತೂರಿನ ರಾಣಿಯಾಗಿ ಅಭಿನಯಿಸಿದ ಬಿ. ಸರೋಜಾದೇವಿ ಈ ಸಂಭಾಷಣೆಯನ್ನು ಅತ್ಯಂತ ಪ್ರಭಾವಿಯಾಗಿ ಚಿತ್ರದಲ್ಲಿ ಸಾದರಪಡಿಸಿದ್ದರು. ಈ ಚಿತ್ರವನ್ನು ಬಿ. ಆರ್. ಪಂತುಲುರವರು ನಿರ್ಮಿಸಿ ಅವರೇ ನಿರ್ದೇಶಿಸಿದ್ದರು. ಸಂಭಾಷಣೆಯನ್ನು ಜಿ.ವಿ. ಅಯ್ಯರ್ ಬರೆದಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯನ್ನು ಸೂರು ಹೊಡೆದಿತ್ತು.

ತಮಿಳಿನಲ್ಲಿ ಇದೇ ಬಿ. ಆರ್. ಪಂತುಲು ‘ವೀರಪಾಂಡ್ಯನ್‌ ಕಟ್ಟಿಬೊಮ್ಮನ್’ ಚಿತ್ರ ತೆಗೆದಿದ್ದರು. ವೀರಪಾಂಡ್ಯನಾಗಿ ಶಿವಾಜಿ ಗಣೇಶನ್ ಅಭಿನಯಿಸಿದ್ದರು. ಈ ಚಿತ್ರವೂ ಪ್ರಚಂಡ ಯಶಸ್ವಿಯಾಗಿ ಬಾಕ್ಸ್ ಆಫೀಸನ್ನು ಲೂಟಿ ಮಾಡಿದ್ದಿತು. ಈ ಚಿತ್ರಕ್ಕೆ ಸಂಭಾಷಣೆ ಬರೆದವರು ಶಕ್ತಿ ಡಿ.ಕೆ. ಕೃಷ್ಣಸ್ವಾಮಿ ಮತ್ತು ಕೆ.ಎಂ. ಬಾಲಸುಬ್ರಹ್ಮಣ್ಯಂ ಅವರುಗಳು. ಕಿತ್ತೂರು ಚನ್ನಮ್ಮ ಚಿತ್ರದಲ್ಲಿರುವ ‘ಕಪ್ಪ ಕೊಡಬೇಕಾ ಕಪ್ಪ?’ ಸಂಭಾಷಣೆಯನ್ನು ಯಥಾವತ್ತಾಗಿ ಈ ಚಿತ್ರದಲ್ಲಿ ಹೈಜಾಕ್ ಮಾಡಲಾಗಿದ್ದಿತು. ಕನ್ನಡದಲ್ಲಿಯ ‘ಕಿತ್ತೂರು ಚನ್ನಮ್ಮ’ದಲ್ಲಿ ಬಿ. ಸರೋಜಾದೇವಿ ಈ ಸಂಭಾಷಣೆ ಹೇಳಿದ್ದರೆ, ತಮಿಳಿನ ‘ವೀರಪಾಂಡ್ಯನ್ ಕಟ್ಟಬೊಮ್ಮನ್’ದಲ್ಲಿ ಶಿವಾಜಿ ಗಣೇಶನ್ ಈ ಸಂಭಾಷಣೆ ಹೇಳಿದ್ದರು. ಎರಡೂ ಭಾಷೆಗಳ ಚಿತ್ರಗಳ ಈ ಸಂಭಾಷಣೆ ಜನರ ನಾಲಿಗೆಯ ಮೇಲೆ ಈಗಲೂ ಕುಣಿದಾಡುತ್ತದೆ.

ಚನ್ನಮ್ಮ ಬ್ರಿಟಿಷರ ಜೊತೆಗೆ ಯುದ್ಧ ಮಾಡಿ 197 ವರ್ಷಗಳಾಗಿವೆ. ವೀರಪಾಂಡ್ಯನ್‌ ಯುದ್ಧ ಮಾಡಿ 222 ವರ್ಷಗಳಾಗಿವೆ. ವೀರಪಾಂಡ್ಯನ್‌ನನ್ನು ಗಲ್ಲಿಗೆ ಹಾಕಲಾಗಿದ್ದರೆ ಚನ್ನಮ್ಮ ಜೈಲಿನಲ್ಲಿ ಬಂಧಿಯಾಗಿ ಅಲ್ಲಿಯೇ ಸಾಯಬೇಕಾಯಿತು. ಆದರೆ ಇವರಿಬ್ಬರ ನಡುವೆ ಹರಿಯುವ ಸ್ವಾಭಿಮಾನದ ಅಸ್ಮಿತೆಯ ರಕ್ತ ಒಂದೇ ತೆರನಾಗಿತ್ತು. ಅದಕ್ಕಾಗಿಯೇ ವೀರಪಾಂಡ್ಯನ್ ‘ನಿಮಗೇಕೆ ಕೊಡಬೇಕು ಕಪ್ಪ?’ ಎಂದು ಕೇಳಿದ್ದ. ಇದೇ ಮಾತುಗಳನ್ನು ಚನ್ನಮ್ಮಳೂ ‘ನೀವೇನು ನಮ್ಮ ಒಡಹುಟ್ಟಿದವರಾ? ಅಣ್ಣ ತಮ್ಮಂದಿರಾ? ನೆಂಟರೇ? ಇಷ್ಟರೇ? ದಾಯಾದಿಗಳೇ? ನಿಮಗೇಕೆ ಕೊಡಬೇಕು ಕಪ್ಪ?’ ಎಂದು ಗರ್ಜಿಸಿ ಬ್ರಿಟಿಷರ ನೀರು ಇಳಿಸಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT