ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು ಉಗಿದ ಹುಳು

Last Updated 27 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಒಮ್ಮೆ ಮಳೆ ಬಂದರೆ ಸಾಕಪ್ಪ ಎಂದು ಅದೆಷ್ಟೋ ಜೀವಿಗಳು ಕೈಮುಗಿದು ಬೇಡಿದ್ದವು. ಮಳೆಯೂ ಬಂದಿತ್ತು. ಹೀಗೆ ಬಂದ ಮಳೆ, ದೊಡ್ಡ ಲೋಕವೊಂದರ ಬಾಗಿಲನ್ನೇ ತೆರೆದಿತ್ತು (ಆದರೆ ಮನೆಯ ಬಾಗಿಲುಗಳು ಮಾತ್ರ ಬಿಗಿದುಕೊಂಡಿದ್ದವು). ಹೇಳದೆ ಕೇಳದೆ ಚೋರಟೆ, ಬಸವನ ಹುಳು, ಗಂಗೆಹುಳು, ಕಪ್ಪೆಗಳೆಲ್ಲವೂ ಹೊಸ್ತಿಲು ದಾಟಿ ಮನೆಯೊಳಗೆ ನುಗ್ಗುತ್ತಿದ್ದವು.

‘ನನ್ನ ಹಾಸಿಗೆಯಲ್ಲಿ ಈ ಚೋರಟೆಗೇನು ಕೆಲಸ’ ಎಂದು ಅಜ್ಜಿ ಕೂಗಾಡುತ್ತಿದ್ದಳು. ಕಪ್ಪೆಗಳ ಗೋಷ್ಠಿಯಿಂದಾಗಿ ನನ್ನ ನೆಮ್ಮದಿಯ ನಿದ್ದೆಯೂ ಹಾಳಾಗಿತ್ತು. ಆದರೆ ಇದೇ ಮಳೆಯಲ್ಲಿ ಅವತರಿಸಿದ, ಯಾರಿಗೂ ಉಪದ್ರವ ಕೊಡದ-ಪುಟ್ಟ ಅತಿಥಿಯೊಬ್ಬನನ್ನು ನಾನು ನೋಡಿದೆ.

ಎಲೆ-ಅಡಿಕೆ ತಿನ್ನುವವರು ಪ್ರತಿ ಮನೆಯಲ್ಲಿಯೂ ಇದ್ದೇ ಇರುತ್ತಾರೆ. ನನ್ನಜ್ಜಿಗೆ ಅದಿಲ್ಲದಿದ್ದರೆ ಅಳುವೇ ಬಂದುಬಿಡುತ್ತದೆ. ಅವಳು ಎಲೆ-ಅಡಿಕೆ ತಿಂದು ಉಗಿದ ತೆಂಗಿನ ಹೊಂಡವೇ ಕೆಂಪಾಗಿ ಹೋಗಿದೆ(ಮಳೆಗೆ ಹೊರಗೆ ಹೋಗಲು ಉದಾಸೀನ ಮಾಡಿದ್ದರಿಂದ ಕಿಟಕಿಯ ಕೆಲವು ದಳಿಗಳೂ ಕೆಂಪಗಾಗತೊಡಗಿವೆ). ದೇವರು ಮೇಲೆ, ಆಕಾಶದ ಆಚೆಬದಿಯಲ್ಲಿ ಕೂತು ಹೀಗೆಯೇ ಪುಚುಕ್ ಅಂತ ಉಗಿಯುತ್ತಾನಂತೆ. ಆ ತುಣುಕುಗಳೆಲ್ಲ ನೆಲಕ್ಕೆ ಬೀಳುತ್ತಿದ್ದ ಹಾಗೆ ಕೆಂಪು ಬಣ್ಣದ ಪುಟ್ಟ ಪುಟ್ಟ ಹುಳುಗಳಾಗಿಬಿಟ್ಟಿರುತ್ತವಂತೆ. ಸಣ್ಣವನಿದ್ದಾಗ ನಾನು ಎಲ್ಲವನ್ನೂ ನಂಬುತ್ತಿದ್ದೆ. ಪ್ರತಿವರ್ಷವೂ ಈ ಹುಳು ಕಣ್ಣಿಗೆ ಬಿದ್ದಾಗ ನಾನೊಮ್ಮೆ ಮೇಲೆ ನೋಡದೆ ಮುಂದೆ ಹೋಗುತ್ತಿರಲಿಲ್ಲ.

ಹುಳುವೊಂದನ್ನು ಮೆಲ್ಲಗೆ ಎತ್ತಿ ನನ್ನ ಕೈಯೊಳಗಿಟ್ಟೆ. ಅದು ಹೆದರಿ ತನ್ನ ಕೈ-ಕಾಲುಗಳನ್ನು ಒಳಗೆ ಮಡಚಿಕೊಂಡಾಗ ಕೆಂಪು ಉಂಡೆಯಂತೆಯೇ ಹೊಳೆಯುತ್ತಿತ್ತು. ನಾಲ್ಕು ಮೂಲೆಯಲ್ಲಿ ಎರಡೆರಡು ಜೊತೆಗಳ ಎಂಟು ಕಾಲುಗಳು, ಕಣ್ಣೆರಡು, ಉಳಿದದ್ದು ಏನೇನು? ನನ್ನ ಬರಿಗಣ್ಣಿಗೆ ಕಾಣಿಸಿದರೆ ತಾನೇ, ಅಲುಗಾಡದಿದ್ದಾಗ ಮೆಲ್ಲಗೆ ನನ್ನ ಕೈ ಬೆರಳುಗಳಲ್ಲಿ ನಡೆಯಿತು. ಮೀನಿನ ಮುತ್ತಿನ ಹಾಗೆಯೇ ಅದೊಂದು ಕಚಗುಳಿಯಿಡುವ ಅಪರೂಪದ ಅನುಭವ. ಆದರೆ, ಈ ಮಳೆಯ ದೆಸೆಯಿಂದ ಸೊಳ್ಳೆಗಳ ಸೇನೆಯೂ ಹುಟ್ಟಿಕೊಂಡಿದ್ದರಿಂದ ನಾನಲ್ಲಿಂದ ಓಡಿ ಹೋಗಬೇಕಾಯಿತು. ಆ ಹುಳು ನೆಲದಲ್ಲಿ ಏನೋ ಕಳೆದುಹೋದದ್ದನ್ನು ಹುಡುಕುವಂತೆ ಸುತ್ತು ಸುತ್ತು ಬರುತ್ತಿದ್ದುದನ್ನು ನೋಡುತ್ತ ನಾನು ಹೊರಟು ಹೋದೆ.

ಇದಕ್ಕೆ ಮಳೆ ಹುಳು(ರೈನ್ ಬಗ್) ಎಂದು ಇಂಗ್ಲಿಷ್‌ನಲ್ಲಿ ಕರೆಯುತ್ತಾರೆ. ಸಣ್ಣಪ್ರಾಯದಲ್ಲಿ ಇತರ ಹುಳುಗಳ ಮೇಲೆ ಹೇನಿನಂತೆ ಬದುಕುತ್ತದೆ; ಚಿಟ್ಟೆಯಂತೆ ಕೋಶಾವಸ್ಥೆಯೊಳಗಿಂದ ಹೊರಬರುತ್ತದೆ. ಮಳೆ ಬಂದೊಡನೆ ಆದಷ್ಟು ಬೇಗ ಪ್ರಣಯ ವಹಿವಾಟು ನಡೆಸಿ ಕಣ್ಮರೆಯಾಗುತ್ತದೆ. ಹುಡುಗಿಗಾಗಿ ಏನೇನೆಲ್ಲ ಸರ್ಕಸ್‌ ಮಾಡಬೇಕಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ತನ್ನದೇ ನೂಲಿನಲ್ಲಿ ದಾರಿಯೊಂದನ್ನು ಗುರುತು ಹಾಕುತ್ತಾ, ಆ ನೂಲಿನ ಕೊನೆಯಲ್ಲಿ ತನ್ನ ಬೀಜಗಳಿರುವ ಚೀಲವನ್ನಿಡಬೇಕಾಗುತ್ತದೆ. ನೂಲಿನ ಜಾಡು ಬೇರೆ ಹುಡುಗನಿಗೆ ಸಿಕ್ಕರೆ ಅದು ತನ್ನ ಚೀಲವನ್ನಲ್ಲಿಟ್ಟುಬಿಡುವುದಂತೆ!

ಆ ಹುಳುವನ್ನು ಮತ್ತೊಮ್ಮೆ ನೋಡುವ ಆಸೆಯಾಯಿತು. ಅಲ್ಲಿ ಹೋಗಿ ನೋಡಿದರೆ ಯಾರಿದ್ದಾರೆ? ನಾನು ಅರ್ಧ ಗಂಟೆ ಸುತ್ತು ಬಂದೆ. ಉಂಗುರವೇನಾದರೂ ಬಿತ್ತೇನೋ ಎಂದು ಅಪ್ಪಯ್ಯ ಕೇಳಿದರು. ಕೆಂಪು ಬಣ್ಣದ ಮಳೆಹುಳು ಹುಡುಕುತ್ತಿದ್ದೇನೆ ಎಂದೇನಾದರೂ ಸತ್ಯ ಹೇಳಿದ್ದಿದ್ದರೆ ಅವರು ನನಗೇ ಉಗಿದು ಬಿಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT