ಬುಧವಾರ, ಸೆಪ್ಟೆಂಬರ್ 22, 2021
29 °C

ಕಡಲ ತಡಿಯ ‘ಕನ್ನಡ ಮಿತ್ರರು’!

ಪ್ರೊ.ಎ.ವಿ. ನಾವಡ Updated:

ಅಕ್ಷರ ಗಾತ್ರ : | |

ಹೆಚ್ಚು–ಕಡಿಮೆ ಶತಮಾನದ ಹಿಂದೆ ಸ್ಥಾಪನೆಗೊಂಡ ಮಂಗಳೂರಿನ ಮಿತ್ರ ಮಂಡಳಿಯು ಕರಾವಳಿ ಭಾಗದಲ್ಲಿ ಕನ್ನಡ ಬೆಳೆಸಲು ನೀಡಿದ ಕೊಡುಗೆ ಅನನ್ಯವಾದುದು.

**
ಧಾರವಾಡದ ‘ಗೆಳೆಯರ ಗುಂಪು’, ಹಲಸಂಗಿಯ ‘ಹಲಸಂಗಿ ಗೆಳೆಯರು’, ಮೈಸೂರು - ಬೆಂಗಳೂರಿನ ‘ಶ್ರೀಯವರ ಬಳಗ’, ಮಂಗಳೂರಿನ ‘ಮಿತ್ರ ಮಂಡಳಿ’ ಹೆಚ್ಚು ಕಡಿಮೆ ಒಂದೇ ಕಾಲದಲ್ಲಿ (1920-40) ಕ್ರಿಯಾಶೀಲವಾಗಿದ್ದ ಕನ್ನಡ ಸಾಹಿತ್ಯಪರ ಸಂಘಟನೆಗಳು. ನವೋದಯ ಕಾಲದ ಕನ್ನಡ ಸಾಹಿತ್ಯದ ಹರಿವು ಹಾಗೂ ತಿರುವುಗಳಿಗೆ ಇಂತಹ ಸಂಘಟನೆಗಳ ಪಾತ್ರ ಮಹತ್ವದ್ದು. ಅನೇಕ ನೂತನ ಪ್ರಯೋಗಗಳಿಗೆ, ವಿಚಾರಪಲ್ಲಟಗಳಿಗೆ ಇವು ಕಾರಣವಾದವು.

ಧಾರವಾಡದಲ್ಲಿ ‘ಗೆಳೆಯರ ಗುಂಪು’ವಿನ ಮುಂಚೂಣಿಯಲ್ಲಿದ್ದವರು ಬೇಂದ್ರೆ, ಶಂಬಾ, ಬೆಟಗೇರಿ ಕೃಷ್ಣಶರ್ಮ, ಶ್ರೀಧರ ಖಾನೋಳ್ಕರ್ ಮತ್ತಿತರರು. ಹಲಸಂಗಿಯ ಗೆಳೆಯರ ನಡುವೆ ಇದ್ದವರು ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ, ಧೂಲಾ ಸಾಹೇಬ್ ಇನ್ನಿತರರು. `ಶ್ರೀ’ಯವರ ಬಳಗದಲ್ಲಿದ್ದವರಲ್ಲಿ ಮಾಸ್ತಿ, ಡಿ.ವಿ.ಜಿ., ರಾಜರತ್ನಂ ಪ್ರಮುಖರು.

ಮಂಗಳೂರಿನ ಮಿತ್ರಮಂಡಳಿ ಆರಂಭವಾದುದು 1928ರಲ್ಲಿ. ಕಾವ್ಯ ಕುತೂಹಲಿ ಪ್ರೌಢಶಾಲಾ ವಿದ್ಯಾರ್ಥಿಗಳಾಗಿದ್ದ ಕಣ್ಣಂದೂರು ರಾಘವಾಚಾರ್, ಕಣ್ಣಂದೂರು ತಿಮ್ಮಯ್ಯಾಚಾರ್, ಬಾಳ ರಾಘವೇಂದ್ರ ರಾವ್, ಪೇಜಾವರ ಸದಾಶಿವರಾವ್ ಅವರಿಂದ. ಇವರಲ್ಲಿ ಕೆಲವರು ಮಂಗಳೂರಿನ ಕೆನರಾ ಹೈಸ್ಕೂಲಿನ ವಿದ್ಯಾರ್ಥಿಗಳು, ಇನ್ನು ಕೆಲವರು ಮಂಗಳೂರಿನ ಸಂತ ಅಲೋಷಿಯಸ್ ಹೈಸ್ಕೂಲಿನ ವಿದ್ಯಾರ್ಥಿಗಳು. ಇವರ ಬಾಲಬರಹಗಳನ್ನು (ವಾಸ್ತವವಾಗಿ ಪ್ರೌಢ ಕವಿತೆಗಳು) ಓದಿ, ತಿದ್ದಿ ತೀಡಿ ಬೆಂಬಲ ಸೂಚಿಸಿ ಮಿತ್ರಮಂಡಳಿ `ಅಳಿಲ ಸೇವಾ ಗ್ರಂಥಮಾಲೆ’ಯ ಮೂಲಕ ಪ್ರಕಟಿಸುವ ಸಾಹಸಕ್ಕಿಳಿದವರು ಸೇಡಿಯಾಪು ಕೃಷ್ಣ ಭಟ್ಟರು, ಕೆನರಾ ಹೈಸ್ಕೂಲಿನ ಎಂ.ಎನ್. ಕಾಮತ್ ಹಾಗೂ ಕನ್ನಡ ಪಂಡಿತರಾಗಿದ್ದ ಜೋಡುಮಠ ವಾಮನ ಭಟ್ಟರು.

ಅಳಿಲಸೇವೆ ಖಂಡ-1, ಅಳಿಲಸೇವೆ ಖಂಡ-2, ತಾಯ್ನಾಡು, ಅಲರು – ಈ ನಾಲ್ಕು ಕಾವ್ಯಸಂಚಯಗಳ (anthology) ಬರಹಗಾರರೆಲ್ಲರೂ ಅಂದಿನ ವಿದ್ಯಾರ್ಥಿಗಳು. ಆದರೆ ಕವಿತೆಗಳು ಸಮಕಾಲದ ಪ್ರೌಢಕವಿಗಳಿಗೆ ಕಡಿಮೆಯದೇನೂ ಆಗಿರಲಿಲ್ಲ. ನವೋದಯದ ಮುಂಗುರುಹುಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಸಂಕಲನಗಳಲ್ಲಿ ಸಂಪಾದಕರ ಹೆಸರಿಲ್ಲ. ತಿದ್ದಿ ಅಚ್ಚಿಗೆ ಅಣಿಮಾಡಿದ ಸೇಡಿಯಾಪು, ಕಾಮತ್, ವಾಮನ ಭಟ್ಟರ ಹೆಸರುಗಳು ಪುಸ್ತಕದ ಒಳಗೆ ದಾಖಲಾಗಿವೆ. ಹೀಗೆ ವಿದ್ಯಾರ್ಥಿಗಳಿಗೆ ಬೆಂಬಲ, ಪ್ರೋತ್ಸಾಹ ನೀಡುತ್ತಾ ಅವರನ್ನು ಮುಂದಿನ ದಿನಗಳಿಗೆ ಅಣಿಗೊಳಿಸಿದ ಹಿರಿಯರೆಂದರೆ ಪಂಜೆ, ಮುಳಿಯ, ಕಡೆಂಗೋಡ್ಲು, ಸೇಡಿಯಾಪು, ಕಾರಂತ, ಪಡುಕೋಣೆ, ವಾಮನಭಟ್ಟ, ಕಯ್ಯಾರ ಮತ್ತಿತರರು. ಈ ಸಂಘಟನೆಯ ಅಧ್ಯಕ್ಷ, ಉಪಾಧ್ಯಕ್ಷರು ಹಿರಿಯರು. ಕಾರ್ಯದರ್ಶಿಗಳಾಗಿ ದುಡಿದವರು ಮಂಗಳೂರಲ್ಲಿ ಅಂದಿನ ವಿದ್ಯಾರ್ಥಿಗಳಾಗಿದ್ದ ಕೆ.ಕೆ. ಪೈ, ಡಾ.ಎಸ್.ಪಿ. ಭಟ್, ಪೇಜಾವರ ಸದಾಶಿವ ರಾವ್, ಕಕ್ಕುಂಜೆ ಸೂರ್ಯನಾರಾಯಣ ಅಡಿಗ, ಪಾಂಗಾಳ ಸದಾನಂದ ನಾಯಕ್ ಮತ್ತಿತರರು.


ಎಂ.ಎನ್‌. ಕಾಮತ್‌ –ಕಲೆ: ಗುರು ನಾವಳ್ಳಿ

ಮಿತ್ರಮಂಡಳಿಯ ಸಾಪ್ತಾಹಿಕ ಕಾರ್ಯಕ್ರಮಗಳು ಕೆನರಾ ಹೈಸ್ಕೂಲಿನ ಬಯಲಿನ ಮಾವಿನ ಮರದ ಬುಡದಲ್ಲಿ ಜರುಗುತ್ತಿದ್ದವಂತೆ. ಇದರಲ್ಲಿ ಭಾಗವಹಿಸುತ್ತಿದ್ದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ತಿಂಗಳಿಗೊಮ್ಮೆ ನಡೆಯುತ್ತಿದ್ದ ಕಾರ್ಯಕ್ರಮಗಳು ಕೊಡಿಯಾಲಬೈಲ್‍ನ ಥಿಯೊಸಾಫಿಕಲ್ ಸಭಾಂಗಣದಲ್ಲಿ ನಡೆಯುತ್ತಿದ್ದವು. ವರ್ಷಕ್ಕೊಮ್ಮೆ ನಾಡಹಬ್ಬ ಅದ್ಧೂರಿಯಾಗಿ ಜರುಗುತ್ತಿದ್ದುದಾಗಿ 1940ರ ಸುಮಾರಿನಲ್ಲಿ ಕಾರ್ಯದರ್ಶಿಯಾಗಿದ್ದ ಕೆ.ಕೆ. ಪೈ (ಸಿಂಡಿಕೇಟ್ ಬ್ಯಾಂಕ್‍ನ ಮಾಜಿ ಅಧ್ಯಕ್ಷರು) ಒಂದೆಡೆ ದಾಖಲಿಸಿದ್ದಾರೆ. ಈ ಸಮಾರಂಭದಲ್ಲಿ ಮಾಸ್ತಿ, ಡಿ.ವಿ.ಜಿ., ತಿರುಮಲೆ ತಾತಾಚಾರ್ಯ ಶರ್ಮ ಮುಂತಾದವರು ಭಾಗಿಯಾಗುತ್ತಿದ್ದರೆಂದು ಕೆ.ಕೆ. ಪೈ ತಮ್ಮ ಆತ್ಮಕಥನದಲ್ಲಿ (ಅಪ್ರಕಟಿತ) ಹೇಳಿಕೊಂಡಿದ್ದಾರೆ.

1920ರ ಹಿಂಚುಮುಂಚಿನಲ್ಲಿ ರಾಷ್ಟ್ರವು ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ತೊಡಗಿದ್ದ ಕಾಲ. ಕರಾವಳಿ ಕರ್ನಾಟಕವೂ ಇದಕ್ಕೆ ಹೊರತಾಗಿರಲಿಲ್ಲ. ಹೀಗಾಗಿ ರಾಷ್ಟ್ರೀಯತೆ ಸಾಹಿತ್ಯದ ಮುಖ್ಯ ತಿರುಳಾಗಿ ಹೊಮ್ಮಿತು. ಇಂಗ್ಲಿಷ್ ಓದು ಇಲ್ಲಿನ ಪಂಡಿತ ಕವಿಗಳನ್ನು ಪ್ರಭಾವಿಸಿತ್ತು. ಸಂಸ್ಕೃತ ಓದಿಕೊಂಡಿದ್ದ ಕರಾವಳಿಯ ಪಂಡಿತರು ವರ್ಡ್ಸ್‌ವರ್ತ್‌, ಶೆಲ್ಲಿ ಅವರಿಂದಲೂ ಪ್ರಭಾವಿತರಾಗಿದ್ದರು. ಕನ್ನಡವನ್ನು ಆ ಹಾದಿಯಲ್ಲಿ ಮುನ್ನಡೆಸಲು ಅವರು ತವಕಿಸುತ್ತಿದ್ದರು. ಮುಳಿಯ, ಸೇಡಿಯಾಪು, ಕಡೆಂಗೋಡ್ಲು ಸಂಸ್ಕೃತಾನುಸರಣ ದಾರಿಯನ್ನು ತ್ಯಜಿಸಿ ದೇಸಿ ಕಾವ್ಯಶೈಲಿಗೆ ಮಾರುಹೋಗಿದ್ದರು. ಪಂಡಿತ ಕಡೆಂಗೋಡ್ಲು ಅವರ ‘ಪಂಡಿತನ ಪಯಣ’ ಕವನ ಹೊಸತನದತ್ತ ಸಾಗುತ್ತಿದ್ದುದರ ರೂಪಕ. ಪೈಯವರು ಭಾಷೆಯಲ್ಲಿ, ಛಂದೋಬಂಧಗಳಲ್ಲಿ ಪ್ರಯೋಗ ನಡೆಸಲು ಮುಂದಾದರು. ಇಂತಹ ಪ್ರಯೋಗಗಳಿಗೆ ‘ಮಿತ್ರಮಂಡಳಿ’ ಗರಡಿಮನೆ, ಹೀಗೆ ಹಳೆಯ ಜಾಡನ್ನು ಮುರಿದು ಅಂದಿನ ಕವಿತೆ ಹೊಸ ಭಾಷೆಯನ್ನು, ಲಯಗಾರಿಕೆಯನ್ನು ರೂಪಿಸಿಕೊಂಡಿತು.

‘ಮಿತ್ರಮಂಡಳಿ’ಯ ನಾಲ್ಕನೇ ಕಾವ್ಯಸಂಗ್ರಹ ‘ಅಲರು’ವಿನ (1931) ಸಂಪಾದಕ ಪೇಜಾವರ ಸದಾಶಿವ ರಾವ್ ಅವರು ಆಗಿನ್ನೂ ಮಂಗಳೂರು ಸಂತ ಅಲೋಷಿಿಯಸ್ ಕಾಲೇಜು ವಿದ್ಯಾರ್ಥಿ. ಇದರೊಳಗೆ ಕಣ್ಣಂದೂರು ಸಹೋದರರ, ಎಸ್. ವೆಂಕಟರಾಜ, ಜೋಡುಮಠ ಕಕ್ಕಿಲ್ಲಾಯ, ಕೆಮ್ಮಿಂಜೆ ಮುಂತಾದವರ 26 ಕವನಗಳಿವೆ. ಈ ಕಾವ್ಯ ಸಂಚಯಕ್ಕೆ ಅವರು ಬರೆದ ಪ್ರಸ್ತಾವನೆಯಲ್ಲಿ ‘ಕವಿ ಪ್ರಳಯಾತೀತ’ ಎನ್ನಿಸಿಕೊಳ್ಳಲು ಸಾಧ್ಯವಿದೆಯೋ ಎನ್ನುವುದು ಕವಿಗಳು ತನ್ನೊಳಗನ್ನು ಶೋಧಿಸಿ ಕವಿತೆ ಬರೆಯಬೇಕು’ ಎನ್ನುತ್ತಾರೆ. ತಾನು ಸಂಪಾದಿಸಿದ ‘ಅಲರು’ ಸಂಕಲನದ 200 (ಬೆಲೆ ನಾಲ್ಕಾಣೆ) ಪ್ರತಿಗಳನ್ನು ಮನೆಮನೆಗೆ ಕೊಂಡೊಯ್ದು ಮಾರಿ ಮೊತ್ತವನ್ನು ವಾಮನಭಟ್ಟರಿಗೆ ತಂದೊಪ್ಪಿಸಿದರು.


-ಸೇಡಿಯಾಪು ಕೃಷ್ಣಭಟ್ಟ

‘ನಮ್ಮ ಕತೆಗಳು’, ‘ವಿನೋದ ಚಿತ್ರಗಳು’, ‘ಸಂಸಾರ’, ‘ತರಂಗ’, ‘ನಮ್ಮ ಕವಿತೆಗಳು’, ‘ಅಂದಿನ ಆವೂರು’, ‘ಮರದೆದುರಲ್ಲಿ’– ಇಂತಹ ಸಂಕಲನಗಳ (anthology) ಸಂಪಾದನೆಯ ಹಿಂದೆ ಇಂಗ್ಲಿಷ್ ಓದಿನಿಂದ ಕನ್ನಡದೊಳಗೆ ಬಂದ ಕವಿತೆ, ಸಣ್ಣಕತೆ, ಏಕಾಂಕ ನಾಟಕ, ಹರಟೆ, ಲಲಿತ ಪ್ರಬಂಧ ಮುಂತಾದ ಪ್ರಕಾರಗಳ ಸ್ವರೂಪ ನಿರ್ಣಯದ ಆಸ್ಥೆ ಇದ್ದಂತಿದೆ. ಈ ವಿಚಾರಗಳನ್ನು ಆಯಾ ಸಂಕಲನಗಳ ಸಂಕ್ಷಿಪ್ತ ಪ್ರಸ್ತಾವನೆಯಲ್ಲಿ ಸಂಪಾದಕರು ಬರೆಯುತ್ತಾರೆ. ‘ಕನ್ನಡದೊಳಿನ್ನೇನು’ ಎಂದು ಹೇಳದೆ ‘ಕನ್ನಡದೊಳಿಲ್ಲದುದೇನು’ ಎಂದು ಹೇಳುವ ಕಾಲ ಬರಬೇಕಾಗಿದೆ - ಇದು ಧ್ಯೇಯವಾಕ್ಯ, ‘ಮಿತ್ರಮಂಡಳಿ’ ಕರಾವಳಿಯ ನವೋದಯ ಸಾಹಿತ್ಯದ ಗತಿನಿರ್ಧಾರ ಮಾಡಿದ ಚುಕ್ಕಾಣಿ. ‘ಮಿತ್ರಮಂಡಳಿ ಮಂಗಳೂರು’ ಪ್ರಕಟಿಸಿದ ಎಲ್ಲಾ ಕೃತಿಗಳು ಮುದ್ರಣಕ್ಕೆ ಅಣಿಯಾಗಿವೆ.

ಮಿತ್ರಮಂಡಳಿ ಸ್ಥಾಪಕ ರಾಘವಾಚಾರ್

`ಮಿತ್ರಮಂಡಳಿ ಮಂಗಳೂರು’ (1928-1944) ಸಾಹಿತ್ಯ ಸಂಘಟನೆಯ ಸ್ಥಾಪಕ ಕವಿ ಕಣ್ಣಂದೂರು ರಾಘವಾಚಾರ್. ಆಗ ಅವರು ಮಂಗಳೂರಿನ ಕೆನರಾ ಹೈಸ್ಕೂಲಿನ ವಿದ್ಯಾರ್ಥಿ. ಅವರ ಅಣ್ಣ ಕ. ತಿಮ್ಮಯ್ಯಾಚಾರ್. ಇಬ್ಬರು ಸಹೋದರರು `ಮಿತ್ರಮಂಡಳಿ’ಯ ಅಶ್ವಿನಿ ದೇವತೆಗಳಂತಿದ್ದರು. ಇವರ ಸಾಹಿತ್ಯಾಸಕ್ತಿಯನ್ನು ಕಂಡು ಪೋಷಿಸಿದವರು ಪಂಡಿತ ಸೇಡಿಯಾಪು ಕೃಷ್ಣ ಭಟ್ಟರು. ಮಿತ್ರಮಂಡಳಿ ಅಳಿಲ ಸೇವಾ ಗ್ರಂಥಮಾಲೆಯ ಮೊದಲ ಮೂರು ಸಂಕಲನ - ಅಳಿಲ ಸೇವೆ ಖಂಡ 1 , ಖಂಡ 2 ಹಾಗೂ ತಾಯ್ನಾಡು - ಈ ಮೂರು ಸಂಕಲನಗಳಲ್ಲೂ ಈ ಸಹೋದರರ ಕವನಗಳು ಅಚ್ಚಾಗಿವೆ.


ಜೆ. ವಾಮನ ಭಟ್ಟ

ರಾಘವಾಚಾರ್ ಹೈಸ್ಕೂಲ್ ಶಿಕ್ಷಣವನ್ನು ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಮುಗಿಸಿ ಮುಂದೆ ಮದರಾಸಿನ ಹಿಂದಿ ಮಹಾವಿದ್ಯಾಲಯದಲ್ಲಿ ಓದಲು ತೆರಳಿದರು. ಅಲ್ಲಿ ನಾಲ್ಕು ವರ್ಷಗಳ ಕಾಲ ಹಿಂದಿ ಭಾಷಾಭ್ಯಾಸ ನಡೆಸಿ `ರಾಷ್ಟ್ರಭಾಷಾ ವಿಶಾರದ’ ಪದವಿ ಪಡೆದು ಮಂಗಳೂರಿಗೆ ಮರಳಿದರು. ಮಂಗಳೂರಿನ `ಹಿಂದಿ ಪ್ರಚಾರಸಭಾ’ದ ಕಾರ್ಯಕರ್ತನಾಗಿ ಹಿಂದಿ ಪ್ರಚಾರಕಾರ್ಯಗಳಲ್ಲಿ ನಿರತರಾದರು. ಜೊತೆಗೆ ಮಂಗಳೂರಿನಲ್ಲಿ ಕಾರ್ನಾಡ ಸದಾಶಿವರಾಯರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮಂಗಳೂರಿಗೆ ಬಂದ ರಾಷ್ಟ್ರೀಯ ನಾಯಕರ ಹಿಂದಿ ಭಾಷಣಗಳನ್ನು ಕನ್ನಡಕ್ಕೆ ಆಶುತರ್ಜುಮೆ ಮಾಡುತ್ತಿದ್ದವರು ಯುವಕ ಕಣ್ಣಂದೂರು ರಾಘವಾಚಾರ್ಯರು.

ರಾಘವಾಚಾರ್ ತನ್ನ 32ನೆಯ ವಯಸ್ಸಿನಲ್ಲಿ ಅಕಾಲಿಕವಾಗಿ ತೀರಿಕೊಂಡರು. ಅವರ ಹುಟ್ಟೂರು ಮಂಗಳೂರಿಗೆ ಸಮೀಪದ ಕಣ್ಣಂದೂರು (ಬಂಟ್ವಾಳ ತಾಲ್ಲೂಕು) ಎನ್ನುವ ಚಿಕ್ಕ ಗ್ರಾಮ. ಅಲ್ಲಿನ ಪ್ರಸಿದ್ಧ ವೈದ್ಯನಾಥ ದೈವಾಲಯದ ಚಾಕರಿಯ ಕುಟುಂಬ ಇವರದು. ದೇವಾಲಯದ ಬೆಳ್ಳಿ, ಬಂಗಾರದ ಆಭರಣಗಳ ನಿರ್ಮಾಣ, ಶುಚೀಕರಣದ ಚಿನಿವಾರಿಕೆ ಈ ಕುಟುಂಬದ್ದಾಗಿದೆ. ಇಂದಿಗೂ ಅವರ ಕುಟುಂಬಸ್ಥರು ಆ ವೃತ್ತಿಯಲ್ಲೇ ತೊಡಗಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು