ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಪೂಜೆಯ ಶ್ರಾವಣ ಪಂಚಮಿ

Last Updated 2 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಗರುಡ ಪುರಾಣದಲ್ಲಿ ಒಂದು ಕತೆಯಿದೆ: ಕೃಷಿಕನೊಬ್ಬನಿಗೆ ಮೂವರು ಮಕ್ಕಳಿದ್ದರು. ಇಬ್ಬರು ಗಂಡು ಮತ್ತು ಒಬ್ಬಳು ಮಗಳು. ಹೊಲದಲ್ಲಿ ನೇಗಿಲಿನಿಂದ ಊಳುತ್ತಿರುವಾಗ ನೇಗಿಲ ಅಡಿಗೆ ಸಿಕ್ಕು ಹಾವಿನ ಮೂರು ಮರಿಗಳು ಮರಣ ಹೊಂದಿದವು. ಇದರಿಂದ ನಾಗಿನಿ (ನಾಗಿಣಿ) ದುಃಖಿತಳಾದಳು. ದುಃಖದ ತೀವ್ರತೆಯಿಂದ ಅವಳು ಕೃಷಿಕ ದಂಪತಿಗಳನ್ನೂ ಅವರ ಗಂಡುಮಕ್ಕಳನ್ನೂ ಕಚ್ಚಿ ಸಾಯಿಸಿದಳು. ಆಶ್ಚರ್ಯಕರವಾಗಿ ಪಾರಾದ ಕನ್ಯೆಯು ಸರ್ಪಶಾಪವನ್ನು ಊಹಿಸಿ, ನಾಗಿಣಿಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದಳು.

ಅಂದು ಶ್ರಾವಣ ಪಂಚಮಿಯಾಗಿತ್ತು. ಹರಿವಾಣದ ತುಂಬಾ ಹಾಲನ್ನು ಹಾಕಿ ಆ ಹೆಣ್ಣುಹಾವಿಗೆ ನಿಯಮಪೂರ್ವಕವಾಗಿ ನಿವೇದಿಸಿದಳು. ಕೈಮುಗಿದು ಅಪರಾಧವನ್ನು ಕ್ಷಮಿಸುವಂತೆ ಪ್ರಾರ್ಥಿಸಿದಳು. ಅವಳ ಸರಳವಾದ ಪ್ರಾರ್ಥನೆ ಫಲಿಸಿತು. ಸುಪ್ರಸನ್ನವಾದ ನಾಗಿಣಿಯು ಸತ್ತವರನ್ನು ಹೇಗೋ ಬದುಕಿಸಿದಳು. ಅಲ್ಲದೆ, ಶ್ರಾವಣ ಪಂಚಮಿಯ ದಿನ ಮಹಿಳೆಯು ನಾಗಪೂಜೆ ಮಾಡಿದರೆ, ಏಳು ತಲೆಮಾರಿನ ವರೆಗೂ ಆ ಕುಲದಲ್ಲಿ ನಾಗಪೀಡೆಯಾಗುವುದಿಲ್ಲ ಎಂದು ಆಶ್ವಾಸನೆ ನೀಡಿದಳು. ಅಂದಿನಿಂದ ನಾಗರ ಪಂಚಮಿಯ ಆಚರಣೆ ರೂಢಿಯಲ್ಲಿ ಬಂದಿತು. ಹಾವಿಗೆ ಹೆದರದವರಾರು ? ಪ್ರತ್ಯಕ್ಷವಾಗಿಯೇ ಅಲ್ಲ, ಪರೋಕ್ಷವಾಗಿಯೂ ಅವು ಕಾಡಬಲ್ಲವು.

ಮನೆಯನ್ನು ಪ್ರವೇಶಿಸುವ ಬಾಗಿಲಿನಲ್ಲಿ ಗೋಡೆಗೆ ನಾಗರ ಚಿತ್ರವನ್ನು ಬರೆದು ಪೂಜಿಸಿ ಇಷ್ಟಮಿತ್ರರೊಂದಿಗೆ ಮೃಷ್ಟಾನ್ನ ಭೋಜನ ಮಾಡಿದರೆ ನಾಗರ ಪಂಚಮಿಯನ್ನು ಆಚರಿಸಿದಂತಾಗುತ್ತದೆ. ಹೆಂಗಸರಷ್ಟೇ ಅಲ್ಲ, ಗಂಡಸರೂ ಇದನ್ನು ಆಚರಿಸುತ್ತಾರೆ.

ಭವಿಷ್ಯ ಪುರಾಣ ಬೇರೊಂದು ಬಗೆಯಲ್ಲಿ ನಾಗ ಪಂಚಮಿಯ ಕತೆಯನ್ನು ಹೇಳುತ್ತದೆ: ಕಶ್ಯಪರಿಗೆ ಅನೇಕ ಹೆಂಡತಿಯರು. ಅವರಲ್ಲಿ ಕದ್ರೂ ವಿನತೆಯರು ಒಮ್ಮೆ ಒಂದು ವಿಷಯಕ್ಕಾಗಿ ಬಾಜಿ(ಬೆಟ್ಟು) ಕಟ್ಟಿದರು. ಉಚ್ಚೈಃಶ್ರವಸ್ ಎಂಬ ದೇವಲೋಕದ ಕುದುರೆಯ ಬಾಲ ಬಿಳಿದಾಗಿದೆ ಎಂದು ವಿನತೆ ಹೇಳಿದರೆ, ಅದು ಕಪ್ಪಾಗಿದೆ ಎಂದು ಕದ್ರೂ ಅಸಹನೆಯಂದ ಹೇಳಿದಳು. ಈಗ ಪರೀಕ್ಷೆ ಮಾಡಬೇಕಾಗಿ ಬಂದಿತು. ಅದರಲ್ಲಿ ಸೋತವರು ಇನ್ನೊಬ್ಬರ ದಾಸಿಯಾಗಬೇಕೆಂದು ನಿಶ್ಚಯವಾಯಿತು. ಅದು ಬಿಳಿದಾಗಿಯೇ ಇದೆಯೆಂಬುದು ಕದ್ರೂವಿಗೆ ಗೊತ್ತಿತ್ತು. ವಿನತೆಯು ಗೆಲ್ಲುವುದು ಶತಃಸಿದ್ಧವಾಗಿತ್ತು. ಈಗ ಪಂದ್ಯದಲ್ಲಿ ಗೆಲ್ಲಲು ಅವಳು ಒಂದು ಉಪಾಯ ಮಾಡಿದಳು. ತನ್ನ ಮಕ್ಕಳಾದ ಕರಿನಾಗಗಳನ್ನು ಕರೆದು, ಕುದುರೆಯ ಬಾಲಕ್ಕೆ ಅಂಟಿಕೊಳ್ಳಲು ಆಜ್ಞಾಪಿಸಿದಳು. ಆದರೆ ವಿಷಯವನ್ನು ಅರಿತಿರುವ ಅವರು ಒಪ್ಪಲಿಲ್ಲ. ಇದರಿಂದ ಕದ್ರೂ ಕೃದ್ಧಳಾಗಿ, ಜನಮೇಜಯನು ಮುಂದೆ ಮಾಡಲಿರುವ ಸರ್ಪಯಾಗದಲ್ಲಿ ಸಾಯುವಂತೆ ಶಾಪವನ್ನಿತ್ತಳು. ಇದರಿಂದ ಹೆದರಿದ ಕೆಲವರು ತಾಯಿಗೆ ಸಹಾಯ ಮಾಡಿ ವಿಶ್ವಾಸವನ್ನು ಉಳಿಸಿಕೊಂಡರು.

ಶಾಪಗ್ರಸ್ತರಾದ ಕೆಲವರು ಬ್ರಹ್ಮನ ಬಳಿಗೆ ಹೋಗಿ ಶಾಪ ವಿಮೋಚನೆಯ ಉಪಾಯವನ್ನು ಚಿಂತಿಸಿದರು. ಜರತ್ಕಾರುವಿನ ಮಗನಾದ ಆಸ್ತಿಕ ಮುನಿಯಿಂದ ರಕ್ಷಣೆ ದೊರೆಯುವುದು ಎಂದು ಬ್ರಹ್ಮನು ಹೇಳಿದ ಮೇಲೆ ಎಲ್ಲರಿಗೂ ಸಮಾಧಾನವಾಯಿತು. ಈ ಘಟನೆ ನಡೆದುದು ಶ್ರಾವಣ ಪಂಚಮಿಯಂದು. ಸರ್ಪಗಳ ಮಾರಣಹೋಮ ನಿಂತ ದಿನವೂ ಅದೇ. ಇದರಿಂದಾಗಿ ಈ ದಿನ ನಾಗಗಳಿಗೆ ಅತ್ಯಂತ ಪ್ರಿಯವಾಗಿದೆ. ಪೂಜೆಯಿಂದ ಪ್ರಸನ್ನಗೊಂಡ ನಾಗಗಳು ಭಕ್ತರನ್ನು ಪೊರೆಯುತ್ತವೆ. ಮಹಾಭಾರತದಲ್ಲೂ ಈ ಘಟನೆಯನ್ನು ವಿಸ್ತಾರವಾಗಿ ಬಣ್ಣಿಸಲಾಗಿದೆ.

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್ |

ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ನುಮಃ ||

ಏತಾನಿ ನವ ನಾಮಾನಿ ನಾಗಾನಾಂ ಯಃ ಪಠೇನ್ನರಃ |

ತಸ್ಯ ನಾಗಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ ||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT