ಗುರುವಾರ , ಫೆಬ್ರವರಿ 20, 2020
29 °C

ಕರುಣಾಳು ಬಾ ಬೆಳಕೆ | ಆಧ್ಯಾತ್ಮದ ಬೆಳಕು ತೋರುತ್ತಿರುವ ಧರ್ಮ ಪಾರ್ಸಿ

ಬಿ.ಎಂ.ಹನೀಫ್ Updated:

ಅಕ್ಷರ ಗಾತ್ರ : | |

Prajavani

ಬೆಳಕು ಮತ್ತು ಬೆಂಕಿ ಪಾರ್ಸಿಗಳ ಶ್ರದ್ಧಾಭಕ್ತಿಯ ಕೇಂದ್ರಬಿಂದು. ಅವರು ಆರಾಧಿಸುವ ಅಗ್ನಿಯಲ್ಲೂ 16 ವಿಧಗಳಿವೆ.

ಧರ್ಮ ಮತ್ತು ರಾಜಕೀಯದ ಬೆರಕೆ ಅತಿಯಾಗುತ್ತಿದೆ ಎನ್ನುವ ಚರ್ಚೆಯೊಂದು ಶುರುವಾಗಿದೆ. ‘ಧರ್ಮಾಧಿಪತಿಗಳು ಜನರಿಗೆ ಧರ್ಮ ಭೋದಿಸಿದರೆ ಸಾಕು, ರಾಜಕೀಯದಲ್ಲಿ ಮೂಗು ತೂರಿಸಬಾರದು’ ಎನ್ನುವ ಗಟ್ಟಿಮಾತು ಕೇಳಿಬರುತ್ತಿದೆ. ಧರ್ಮದೊಳಗೂ ರಾಜಕೀಯ ನುಸುಳಿರುವ, ರಾಜಕೀಯದ ಮೇಲೆ ಧರ್ಮ ಸವಾರಿ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಒಂದು ಧರ್ಮ ಹೀಗೆ, ತನ್ನೊಳಗೆ ತಾನಾಗಿ, ಯಾವ ರಾಜಕೀಯದ ಗೊಡವೆಯೂ ಇಲ್ಲದೆ, ತನ್ನ ಅರಿವನ್ನೇ ನಂಬಿ ಸಮಾಜಕ್ಕೆ ಆಧ್ಯಾತ್ಮಿಕ ಬೆಳಕು ತೋರುವುದು ಸಾಧ್ಯವೇ?

‘ಸಾಧ್ಯ’ ಎನ್ನುತ್ತಿದೆ ಪಾರ್ಸಿ ಧರ್ಮ. ಭಾರತದಲ್ಲಿರುವ ಬೇರೆಲ್ಲ ಧರ್ಮಗಳಿಗಿಂತ ವಿಭಿನ್ನ ಪಾರ್ಸಿ. ಭಾರತದಲ್ಲಿ ಪಾರ್ಸಿಗಳ ಸಂಖ್ಯೆ ಅಂದಾಜು ಒಂದು ಲಕ್ಷ ಅಷ್ಟೇ. ಮುಂಬೈ, ದೆಹಲಿ, ಸೂರತ್, ಪುಣೆಯಲ್ಲಿ ಸಂಖ್ಯೆ ಹೆಚ್ಚು. ಕರ್ನಾಟಕದಲ್ಲಿ ಅಂದಾಜು 800 ಜನ ಇದ್ದಾರೆ. ಅದರಲ್ಲೂ ಬೆಂಗಳೂರಿನಲ್ಲೇ 700- 750 ಜನ. ಬೆಳಗಾವಿಯಲ್ಲಿ ಒಂದೈವತ್ತು. ಹಿಂದೆ ಹುಬ್ಬಳ್ಳಿಯಲ್ಲಿದ್ದ ಅಗ್ಯಾಸಿ (ಪಾರ್ಸಿ ಟೆಂಪಲ್) ಈಗ ಕಣ್ಮರೆಯಾಗಿದೆ.

ಬೆಂಗಳೂರಿನಲ್ಲಿರುವ ಪಾರ್ಸಿ ದೇವಾಲಯ

ಬೆಳಕು ಮತ್ತು ಬೆಂಕಿ, ಪಾರ್ಸಿಗಳ ಧರ್ಮಶ್ರದ್ಧೆಯ ಕೇಂದ್ರಬಿಂದು. ಬೆಂಗಳೂರಿನ ಕ್ವೀನ್ಸ್ ಸರ್ಕಲ್‌ನ  ಮೂಲೆಯಲ್ಲಿರುವ ಅಗ್ಯಾಸಿಯಲ್ಲಿ ದಿನದ 24 ಗಂಟೆಯೂ ಅಗ್ನಿಯೊಂದು ಉರಿಯುತ್ತಿದೆ. ಎತ್ತರದ ಕಾಂಪೌಂಡ್‍ನಿಂದಾಗಿ ಆ ಕಟ್ಟಡ ಜನರ ಗಮನ ಸೆಳೆಯುವುದಿಲ್ಲ. ಜನರ ಗಮನ ಸೆಳೆಯಲೆಂದೇ ಅಲ್ಲಿ ಗಂಟೆ, ಜಾಗಟೆ, ಆಜಾನ್‍ಗಳು ಮೊಳಗುವುದೂ ಇಲ್ಲ. ಪ್ರತಿದಿನವೂ ಭಕ್ತರು ಬರುತ್ತಾರೆ. ವಾರಕ್ಕೊಂದು ವಿಶೇಷ ಪ್ರಾರ್ಥನೆಯ ಕ್ರಮವೇನೂ ಇಲ್ಲ. ಈ ಪಾರ್ಸಿ ಟೆಂಪಲ್‌ಗೆ ಮೊನ್ನೆ (ಜನವರಿ 16ರಂದು) 94 ವರ್ಷ ತುಂಬಿತು. 1926ರ ಫೆಬ್ರುವರಿ 5ರಂದು ಅಗ್ಯಾಸಿ ನಿರ್ಮಾಣವಾದದ್ದು. ಅರೆ... ಲೆಕ್ಕ ತಪ್ಪಿದೆಯಲ್ಲ.. ಅನ್ನಿಸುತ್ತಿದೆಯೆ? ಪಾರ್ಸಿಗಳ ವರ್ಷದ ಲೆಕ್ಕಾಚಾರವೇ ಬೇರೆ. ಅವರದ್ದು ಶೆಂಶೈ ಕ್ಯಾಲೆಂಡರ್. ಅಲ್ಲಿ ಪ್ರತಿ ತಿಂಗಳೂ 30 ದಿನ. ಕ್ವೀನ್ಸ್ ರಸ್ತೆಯ ಶ್ವೇತವರ್ಣದ ಅಗ್ಯಾಸಿಯ ಮೇಲ್ತುದಿಯಲ್ಲಿ ತಣ್ಣಗೆ ಕುಳಿತಿರುವ ರಕ್ಷಕ ದೇವತೆ ಫರೋಹಾ ಒಂದು ಸಲವೂ ಪತ್ರಿಕೆಗಳಲ್ಲಿ ಸುದ್ದಿಯಾಗಿಲ್ಲ. ಟಿ.ವಿ.ಯಲ್ಲೂ ಮುಖ ತೋರಿಸಿಲ್ಲ. ಧರ್ಮದ ಬಹಿರಂಗ ಆಚರಣೆಗಳ ಬಗ್ಗೆ ಪಾರ್ಸಿಗಳಿಗೆ ಒಲವಿಲ್ಲ. ಅವರ ದೇವಾಲಯದ ಒಳಗೆ ಇತರ ಧರ್ಮದವರಿಗೆ ಪ್ರವೇಶವಿಲ್ಲ. ಪ್ರವೇಶ ಸಿಗಬೇಕೆಂದರೆ ನೀವು ಪಾರ್ಸಿ ಆಗಿರಬೇಕು. ಆದರೆ, ಪಾರ್ಸಿಯಲ್ಲಿ ಮತಾಂತರ ನಿಷಿದ್ಧ. ಯಾರೂ ಆ ಧರ್ಮದ ಒಳಗೆ ಹೋಗುವಂತಿಲ್ಲ. ಮನೆಯಲ್ಲಿ ಪವಿತ್ರ ಅಗ್ನಿ ಉರಿಯುತ್ತಿದೆಯೆಂದರೆ, ಅಲ್ಲೂ ಅನ್ಯಧರ್ಮೀಯರಿಗೆ ಪ್ರವೇಶವಿಲ್ಲ. ಮಾತುಕತೆ ಏನಿದ್ದರೂ ಹೊರಗೇ. ನಾನು ಮುಂಬೈ ಮತ್ತು ಬೆಂಗಳೂರಿನಲ್ಲಿ ಹತ್ತಾರು ಪಾರ್ಸಿಗಳ ಮನೆಗೆ ಹೋಗಿದ್ದೇನೆ. ಪಾರ್ಸಿ ಟೆಂಪಲ್‍ಗಳಿಗೆ ಭೇಟಿ ನೀಡಿದ್ದೇನೆ. ಧಾರ್ಮಿಕ ವಿದ್ಯಾಭ್ಯಾಸ ನಡೆಸುವ ಅಥರ್ವಣ ಮದ್ರಸಾಗಳಿಗೂ ಹೋಗಿದ್ದೇನೆ. ಆದರೆ, ಒಮ್ಮೆಯೂ ಅವರು ಒಳಗೆ ಕರೆದಿಲ್ಲ. ಒಳಗಿನ ಕುರಿತ ಮಾತುಕತೆಯೂ ಅಂಗಳದಲ್ಲೇ!

ಬೆಂಗಳೂರಿನಲ್ಲಿರುವ ಪಾರ್ಸಿ ಪಂದಕಿ (ಹೆಡ್‍ಪ್ರೀಸ್ಟ್) ಎರ್ವಾಡ್ ಫರ್ದೂನ್ ಕರ್ಕರಿಯ ಮೃದುಭಾಷಿ. ಎರ್ವಾಡ್ ಎಂದರೆ ಡಾಕ್ಟರ್ ಅಥವಾ ಫಾದರ್ ಎನ್ನುತ್ತೀವಲ್ಲ.. ಹಾಗೆ. ಕಳೆದ 11 ವರ್ಷಗಳಿಂದ ಅವರು ಇಲ್ಲಿದ್ದಾರೆ. ‘1926ರಲ್ಲಿ ಈ ಪಾರ್ಸಿ ಟೆಂಪಲ್ ನಿರ್ಮಾಣವಾದಾಗ ಬೆಂಗಳೂರಿನಲ್ಲಿ ಸುಮಾರು 300 ಪಾರ್ಸಿಗಳಿದ್ದರು. ಈಗಿನ ಜನಸಂಖ್ಯೆ ಸುಮಾರು 800. ನನಗೆ ಗೊತ್ತಿದ್ದ ಹಾಗೆ 200ರಷ್ಟು ಜನರು ಇಲ್ಲಿಂದ ವಲಸೆ ಹೋಗಿದ್ದಾರೆ’ ಎನ್ನುತ್ತಾರೆ ಎ. ಫರ್ದೂನ್ ಕರ್ಕರಿಯಾ. (ಅವರ ಪೂರ್ವಜರು ಸಿಹಿತಿಂಡಿ ಮಾರುತ್ತಿದ್ದರಂತೆ. ಕಕ್ಕರ್ ಎನ್ನುವುದು ಒಂದು ಸಿಹಿಯ ಹೆಸರು.)

ಒಂದು ಪಾರ್ಸಿ ಕುಟುಂಬ

ಬೆಳಕು ಮತ್ತು ಬೆಂಕಿ, ಪಾರ್ಸಿ ಧರ್ಮಶ್ರದ್ಧೆಯ ಕೇಂದ್ರಬಿಂದು ಎಂದೆನಲ್ಲ.. ಆ ಬೆಂಕಿಯಲ್ಲೂ 16 ವಿಧಗಳಿವೆ! ಅದರಲ್ಲಿ ಅತ್ಯಧಿಕ ಪವಿತ್ರವೆಂದರೆ ಮಿಂಚಿನ ಬೆಳಕು. ಅದು ಪಾರ್ಸಿಯೊಬ್ಬನ ದೇಹವನ್ನು ಬೆಳಗಿತೆಂದರೆ ಅತ್ಯುನ್ನತ ಆಶೀರ್ವಾದ ನೀಡಿದಂತೆ. ಪಾರ್ಸಿ ಟೆಂಪಲ್‍ಗಳಲ್ಲಿ ದಿನದ 24 ಗಂಟೆ ಉರಿಯುವ ಬೆಂಕಿಯಲ್ಲೂ ಮೂರು ದರ್ಜೆಗಳಿವೆ. ಆ ಬೆಂಕಿಯ ಆಧಾರದಲ್ಲೇ ದೇವಾಲಯಗಳಿಗೆ  ಮೂರು ದರ್ಜೆಗಳಿವೆ. ಅತಾಶ್ ಬೆಹ್ರಾಮ್  ಮೊದಲ ದರ್ಜೆ. ಇದು ಅತ್ಯುನ್ನತ ದರ್ಜೆಯ ಫೈರ್ ಟೆಂಪಲ್. ನಿರ್ದಿಷ್ಟ ಧರ್ಮಗುರುಗಳಷ್ಟೇ ಇಲ್ಲಿ ಪ್ರಾರ್ಥನೆ ನಡೆಸಬೇಕು. ಮುಂಬೈ ಮತ್ತು ಗುಜರಾತ್‍ನಲ್ಲಿ ಇಂತಹ ತಲಾ ನಾಲ್ಕು ಅಗ್ನಿ ದೇವಾಲಯಗಳಿವೆ. ಈ ಟೆಂಪಲ್‍ಗಳಲ್ಲಿ ದಿನದ ಐದು ಹೊತ್ತೂ ಪ್ರಾರ್ಥನೆ ನಡೆಯುತ್ತದೆ.

ಹೌದು, ಮುಸ್ಲಿಮರಂತೆಯೇ ಐದು ಹೊತ್ತಿನ ಪ್ರಾರ್ಥನೆ. ಆದರೆ ಹೊತ್ತಿನ ಲೆಕ್ಕಾಚಾರ ವಿಭಿನ್ನ. ಸೂರ್ಯೋದಯದ ಬಳಿಕ ಮೊದಲ ಪ್ರಾರ್ಥನೆ. ಸರಿಯಾಗಿ 12.40ಕ್ಕೆ ಎರಡನೆಯದ್ದು, ಸಂಜೆ 3.45ಕ್ಕೆ ಮೂರನೇ ಪ್ರಾರ್ಥನೆ. ಸೂರ್ಯಾಸ್ತದ ಬಳಿಕ ನಾಲ್ಕನೆಯದ್ದು ಮತ್ತು ರಾತ್ರಿ 12.40ಕ್ಕೆ ಕೊನೆಯ ಪ್ರಾರ್ಥನೆ.

ಅತಾಶ್ ಅದರನ್ ಎನ್ನುವುದು ಎರಡನೇ ಹಂತದ ಅಗ್ನಿ ದೇವಾಲಯ. ಇಲ್ಲಿ ದಿನಕ್ಕೆ ನಾಲ್ಕು ಹೊತ್ತಿನ ಪ್ರಾರ್ಥನೆ.  ಈ ದೇವಾಲಯದೊಳಕ್ಕೆ ಯಾವುದೇ ಪಾರ್ಸಿ ಧರ್ಮಗುರು ಪ್ರಾರ್ಥನೆಯನ್ನು ನಡೆಸಬಹುದು.

ಮೂರನೇ ದರ್ಜೆಯದ್ದು ಅತಾಶ್ ದಾದ್ಗಾಹ್. ಇಲ್ಲಿ ಉರಿಯುತ್ತಿರುವುದು ಸಾಮಾನ್ಯ ಅಗ್ನಿ. ಬೆಂಗಳೂರಿನದ್ದು ಈ ದರ್ಜೆಯದ್ದು. ದಿನದ 24 ಗಂಟೆಯೂ ಅಗ್ನಿ ಉರಿಸಲು ಇಲ್ಲಿ ಬಳಸುತ್ತಿರುವುದು ಬಳ್ಳಾರಿ ಜಾಲಿ! ‘ಜಾಲಿಯ ಮರವೂ ನೆರಳಲ್ಲ..’ ಎಂದು ಜನಪದ ಕವಿ ಹಾಡಿರಬಹುದು. ಆದರೆ ‘ಜಾಲಿಯ ಕೊರಡಿನಿಂದ ಅಗ್ನಿ ನಿಧಾನಕ್ಕೆ ಹೆಚ್ಚು ಹೊತ್ತು ಉರಿಯುತ್ತದೆ. ಬೇರೆ ಮರಗಳ ತರಹ ಎಣ್ಣೆ ಬಿಡುವುದಿಲ್ಲ. ಅಗ್ನಿ ಉರಿಸಲು ಯಥೇಚ್ಛವಾಗಿ ಜಾಲಿಮರ ಸಿಗುತ್ತದೆ’ ಎನ್ನುತ್ತಾರೆ ಎ. ಫರ್ದೂನ್ ಕರ್ಕರಿಯ.

ಫಾರ್ಸಿಗಳ ಜನಸಂಖ್ಯೆ ಇತ್ತೀಚೆಗೆ ತೀರಾ ಕಡಿಮೆ ಆಗುತ್ತಿದೆ ಎನ್ನುವವರಿದ್ದಾರೆ. ಕರ್ಕರಿಯರ ಪ್ರಕಾರ, ಇದು ಸರಿಯಲ್ಲ. ‘1900 ವರ್ಷಗಳ ಹಿಂದೆ ಇರಾನ್‍ನಿಂದ ಶಿಯಾ ದೊರೆಯ ಕಿರುಕುಳ ತಾಳಲಾಗದೆ ಐದಾರು ನೌಕೆಗಳಲ್ಲಿ ಗುಜರಾತ್‍ನ ಬಂದರಿಗೆ ಬಂದಿಳಿದವರು ಪಾರ್ಸಿಗಳು. ಆಗ ಬಂದವರ ಸಂಖ್ಯೆ 500-600 ಅಷ್ಟೆ. ಗುಜರಾತ್‍ನಲ್ಲಿ ಹೊರವಲಯದ ಗುಡ್ಡಗಳಲ್ಲಿ ವಾಸವಿದ್ದರು. ಅಲ್ಲಿಯ ಆಗಿನ ದೊರೆ ಇವರಿಗೆ ಆಶ್ರಯ ನೀಡಲು ಮೊದಲು ಒಪ್ಪಲಿಲ್ಲ. ಕೊನೆಗೆ ತಮ್ಮ ಪರ್ಷಿಯನ್ ಭಾಷೆಯನ್ನು ಬಿಟ್ಟು ಗುಜರಾತಿ ಮಾತನಾಡಬೇಕು ಮತ್ತಿತರ ಐದಾರು ಷರತ್ತುಗಳ ಮೇಲೆ ಆಶ್ರಯ ನೀಡಿದರು.

ಅಂದಿನಿಂದ ಭಾರತೀಯ ಪಾರ್ಸಿಗಳಿಗೆ ಗುಜರಾತಿಯೇ ಮಾತೃಭಾಷೆ. ಪಂದಕಿಗಳು ಮಾತ್ರ ಮೂಲಭಾಷೆ ದರಿ (ಅವಸ್ತಾ)ಯಲ್ಲಿ ಪ್ರಾರ್ಥನೆ ಮಾಡುತ್ತಾರೆ. ಪರ್ಷಿಯನ್ ಲಿಪಿಯನ್ನು ಓದುತ್ತಾರೆ.’

ಪಾರ್ಸಿಗಳಲ್ಲಿ ಪ್ರೇಮವಿವಾಹ ಹೆಚ್ಚು. ಯುವಕರು ಬದುಕಿನಲ್ಲಿ ‘ಸೆಟ್ಲ್’ ಆಗದೆ ಮದುವೆಯಾಗುವುದಿಲ್ಲ. ಹಾಗೆಂದೇ 35ರ ಬಳಿಕ ಮದುವೆಯಾಗುವವರೇ ಹೆಚ್ಚು. ಸೂಕ್ತ ವಧು ಸಿಗದೆ ಅವಿವಾಹಿತರಾಗಿ ಉಳಿದವರೂ ಹೆಚ್ಚೇ. ಹೆಣ್ಣುಮಕ್ಕಳು ಉದ್ಯೋಗಕ್ಕೆ ಹೋಗುವುದು ಹೆಚ್ಚಾದ ಬಳಿಕ ಅಂತರ್‌ಧರ್ಮೀಯ ವಿವಾಹಗಳೂ ನಡೆಯುತ್ತಿವೆ. ಯಾವುದೇ ಪಾರ್ಸಿ ಹೆಣ್ಣು, ಬೇರೆ ಧರ್ಮದವರನ್ನು ಮದುವೆಯಾದರೆ ಆಕೆ ಪಾರ್ಸಿಯಿಂದ ಹೊರಬಿದ್ದಂತೆಯೇ. ಬಳಿಕ ಪಾರ್ಸಿ ಟೆಂಪಲ್‍ಗೆ ಪ್ರವೇಶವಿಲ್ಲ. ಯಾವುದೇ ಪಾರ್ಸಿ ಗಂಡು ಬೇರೆ ಧರ್ಮದ ಹುಡುಗಿಯನ್ನು ಮದುವೆಯಾದರೆ, ಆಕೆ ಪಾರ್ಸಿ ಆಗುವುದಿಲ್ಲ; ಗಂಡು ಮಾತ್ರ ಧರ್ಮದಲ್ಲೇ ಉಳಿಯಬಹುದು. ವಿಧವಾ ವಿವಾಹ ನಡೆಯುತ್ತದೆ. 

ಹೊಸ ವರ್ಷದ ಆಚರಣೆಯೊಂದೇ ಪಾರ್ಸಿಗಳ ಹಬ್ಬ. ವರ್ಷಕ್ಕೆ 360 ದಿನಗಳಾದ್ದರಿಂದ ಹೊಸವರ್ಷದ ದಿನಾಂಕವೂ ಪ್ರತಿವರ್ಷ ಬದಲಾಗುತ್ತದೆ. ಧರ್ಮಗುರು ಮದುವೆ ಆಗಬಹುದು. ಮುಂಬೈಯಲ್ಲಿ ಕೆಲವು ಧರ್ಮಗುರುಗಳು ಜನಸಾಮಾನ್ಯರಂತೆ ಬೇರೆ ಕಚೇರಿಗಳಲ್ಲಿ ಕೆಲಸ ಮಾಡುವುದಿದೆ.

ಪಾರ್ಸಿಗಳಲ್ಲಿ ಸೂರ್ಯನ ಬೆಳಕಲ್ಲಿ ಶವವನ್ನು ಇಟ್ಟುಬಿಟ್ಟರೆ ಹದ್ದುಗಳು ತಿನ್ನುವುದು ಪವಿತ್ರ ಆಚರಣೆ. ಈಗ ಹದ್ದುಗಳ ಸಂಖ್ಯೆ ಕಡಿಮೆ. ಮುಂಬೈಯಲ್ಲಿ ಶಾಖ ಉತ್ಪಾದಿಸುವ ಮೆಷಿನ್‍ಗಳ ಬಳಕೆ ಆಗುತ್ತಿದೆ. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಪಾರ್ಸಿ ಸ್ಮಶಾನವಿದೆ. ಅಲ್ಲಿ ಎತ್ತರಿಸಿದ ಬಾವಿಯಾಕಾರದ ರಚನೆಯಿದ್ದು, ಅದರೊಳಗೆ ಜೂಲಿಯಾಕಾರದ ಅಲ್ಯುಮಿನಿಯಂ ಹಾಳೆಯಿದೆ. ಹಾಳೆಯ ಕೆಳತುದಿಯಲ್ಲಿ ಆಳವಾದ ಹೊಂಡ. ಶವವನ್ನು ಮಾರ್ಬಲ್ ಸ್ಟೋನ್ ಮೇಲೆ ಮಲಗಿಸಿ ಸ್ನಾನ ಮಾಡಿಸಿ, ಪ್ರಾರ್ಥನೆ ನಡೆಸಿ ಅದರೊಳಕ್ಕೆ ಇಳಿಸಿಬಿಡುತ್ತಾರೆ. ಬೆಂಗಳೂರಿನಲ್ಲಿ ಕಳೆದ ವರ್ಷ ಮೃತಪಟ್ಟು ಪಾರ್ಸಿಗಳ ಸಂಖ್ಯೆ ಐದಾರು ಮಾತ್ರ.

ಪಾರ್ಸಿಗಳು ನಮ್ಮ ನಡುವೆ, ಇದ್ದೂ ಇಲ್ಲದಂತಿದ್ದಾರೆ. ಅವರ ಧರ್ಮಶ್ರದ್ಧೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ. ಕರುಣೆಯೇ ಅವರ ಧರ್ಮದ ತಿರುಳು. ಅವರಾಯಿತು, ಅವರ ಧರ್ಮವಾಯಿತು. ಸರ್ವಧರ್ಮ ಸಮಾವೇಶಗಳಿಗೂ ಅವರನ್ನು ಯಾರೂ ಕರೆಯುವುದಿಲ್ಲ!

ಧನ್‍ಷಕ್, ಫಾರ್ಜಾ

ಮುಂಬೈಯ ಮಾಟುಂಗಾದಲ್ಲಿ ಕಳೆದ ತಿಂಗಳು ಮಾತಿಗೆ ಸಿಕ್ಕಿದ ಪಾರ್ಸಿ ಗೆಳೆಯ ದಾದಿ ಊಟಕ್ಕೆ ಮನೆಗೆ ಕರೆಯಲಿಲ್ಲ. ಅವರ ಮನೆಯಲ್ಲಿ ಧನ್‍ಷಕ್ ತಿನ್ನುವ ಆಸೆಯನ್ನು ವ್ಯಕ್ತಪಡಿಸಿದೆ. ‘ನಮ್ಮ ಹೋಟೆಲ್‍ಗಳಿವೆ, ಅಲ್ಲಿಗೆ ಕರೆದೊಯ್ಯುತ್ತೇನೆ’ ಎಂದು ನಕ್ಕ! (ಧನ್‍ಷಕ್ ಅಂದರೆ, ಸಕ್ಕರೆ ಬೆರೆಸಿ ಮಾಡಿದ ಅನ್ನ ಮತ್ತು ಸಿಹಿಕುಂಬಳ, ಟೊಮ್ಯಾಟೊ, ಮೇಥಿ, ಕೊತ್ತಂಬರಿ, ಕುರಿಮಾಂಸವನ್ನೆಲ್ಲ ಮಿಶ್ರಣ ಮಾಡಿ ಕುದಿಸಿದ ಸಾರು!) ಕೋಳಿಮಾಂಸಕ್ಕೆ ಮೊಟ್ಟೆಯನ್ನು ಲೇಪಿಸಿ ಫ್ರೈ ಮಾಡಿದರೆ ಅದುವೇ ಫಾರ್ಚಾ. ಪಾಂಫ್ರೆಟ್ (ಮಾಂಜಿ) ಪಾರ್ಸಿಗಳಿಗೆ ಅತ್ಯಂತ ಪ್ರಿಯ ಮೀನು. ಬಾಳೆಎಲೆಯಲ್ಲಿ ಮಸಾಲಾ ತುಂಬಿ ಹಬೆಯಲ್ಲಿ ಬೇಯಿಸುವ ‘ಪಾತ್ರಾನಿ ಮಚ್ಚಿ’ಯೆಂದರೆ ಅಚ್ಚುಮೆಚ್ಚು. ಬೀಫ್ ಬಿಟ್ಟು ಬೇರೆಲ್ಲ ಮಾಂಸವನ್ನೂ  ತಿನ್ನುತ್ತಾರೆ. ಶ್ರಾವಣ ಮಾಸದಲ್ಲಿ ಮಾತ್ರ ಶುದ್ಧ ಸಸ್ಯಾಹಾರಿಗಳು.

ಪವಿತ್ರ ಹೋರಿ!

‘ನಿರಂಗ್‍ದಿನ್’ ಎನ್ನುವುದು ಪಾರ್ಸಿಗಳ ಅತ್ಯುನ್ನತ ಪ್ರಾರ್ಥನೆ. ಈ ಪ್ರಾರ್ಥನೆಗೆ ಮೈಯಲ್ಲಿ ಒಂದೇ ಒಂದು ಬಿಳಿಕೂದಲೂ ಇಲ್ಲದ ಹೋರಿಯ ಗಂಜಳ ಬಹುಮುಖ್ಯ. ಹೋರಿಯ ಮೈಯಲ್ಲಿ ಗಾಯದ ಒಂದು ಗೀರುಕಲೆಯೂ ಇರುವಂತಿಲ್ಲ. ಟೆಂಪಲ್ ಒಳಗೆ ಒಬ್ಬರೇ ಉಳಿದು 15 ದಿನಗಳ ಕಾಲ ನಿರಂತರ ದೇವರ ಸ್ತೋತ್ರ ಹೇಳುವ ಪಂದಕಿ, ಗಂಜಳಕ್ಕೆ ನೀರು, ದಾಳಿಂಬೆಯ ನೀರು ಮತ್ತು ಹೋಮ್‍ಸಲಿ ಎಂಬ ಗಿಡವೊಂದರ ಕಾಂಡಗಳನ್ನು ಮಿಶ್ರಣ ಮಾಡಿ ಪವಿತ್ರ ನೀರನ್ನು ತಯಾರಿಸುತ್ತಾರೆ. (ಈ ಗಿಡ ಇರಾನ್‍ನಲ್ಲಿ ಮಾತ್ರ ಬೆಳೆಯುತ್ತದಂತೆ.) ಈ ತೀರ್ಥವನ್ನು ಬಾಟಲಿಗಳಲ್ಲಿ ಸಂಗ್ರಹಿಸಲಾಗುತ್ತದೆ.

ಏಳರ ವಯಸ್ಸಿನಲ್ಲಿ ಮಕ್ಕಳಿಗೆ ಧರ್ಮದೀಕ್ಷೆ ಕೊಡುವಾಗ ಮತ್ತು ಪೂಜೆಯ ವೇಳೆ ಟೆಂಪಲ್‌ಗಳಲ್ಲಿ ಈ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ.  ಧರ್ಮದೀಕ್ಷೆಯ ಬಳಿಕ ಕುರಿತುಪ್ಪಳದಿಂದ ತಯಾರಿಸಿದ ಉಡುದಾರ ಧಾರಣೆಯಾಗುತ್ತದೆ. ಉಡುದಾರವನ್ನೂ ವಿಶೇಷ ಪ್ರಾರ್ಥನೆ ಮಾಡಿ ಪಾರ್ಸಿಗಳೇ ತಯಾರಿಸಬೇಕು. ಬೆಂಗಳೂರಿನಲ್ಲಿ ಉಡುದಾರವನ್ನು ತಯಾರಿಸುತ್ತಿದ್ದ ಏಕೈಕ ವೃದ್ಧಮಹಿಳೆ ಇತ್ತೀಚೆಗೆ ನಿಧನರಾಗಿದ್ದಾರೆ. ಸದ್ಯಕ್ಕೆ ಮುಂಬೈಯಿಂದ ತರಿಸುತ್ತಿದ್ದಾರೆ.

ಇದನ್ನೂ ಓದಿ: ಧರ್ಮ ಸಂಕಟ ಸೃಷ್ಟಿಸಿರುವ ಮಾದಕ ಸೋಮ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು